ಈ ಬ್ಳಾಗ್ ನಲ್ಲಿದ್ದ ಕೆಲವು ಅಕ್ಷ್ರರ ದೋಷಗಳನ್ನು ತಿದ್ದಿ, ಕೆಲವು ಹೊಸ ಸಾಲುಗಳನ್ನು ಸೇರಿಸಿ (ದಪ್ಪ ಅಕ್ಷರಗಳಲ್ಲಿ ಬಿಂಬಿಸಲಾಗಿದೆ), ಮರು ಮುದ್ರಿಸಿದ್ದೇನೆ.
ಗಾಳಿಪಟ...
ಬಹಳ ದಿನಗಳಿಂದ ಬಹಳಷ್ಟು ವಿಮರ್ಶೆ, ಟೀಕೆ, ಹೊಗಳಿಕೆಗಳಿಗೊಳಪಟ್ಟ (ಮಿಶ್ರ ಅಭಿಪ್ರಾಯಗಳನ್ನೊಳಗೊಂಡ) ಈ ಚಲನಚಿತ್ರವನ್ನು, ಪಿ ವಿ ಆರ್, ಐನಾಕ್ಸ್ ಚಿತ್ರಮಂದಿರಗಳಲ್ಲಿ ಎರಡು ವಾರಗಳಿಂದ ಟಿಕೆಟ್ ಮುಂಗಡ ಕಾಯ್ದಿರಿಸಲಾಗದೆ, ಬೇರೆ ಚಿತ್ರಮಂದಿರಗಳಲ್ಲಿ ಉದ್ದನೆಯ ಸಾಲುಗಳಲ್ಲಿ ನಿಂತರೂ ಟಿಕೆಟ್ ಸಿಗದೆ, ಬ್ಳಾಕ್ ನಲ್ಲಿ ನೋಡುವ ಚಪಲವಿಲ್ಲದೆ, ತೊಳಲಾಟದಲ್ಲಿದ್ದಾಗ ಗೆಳೆಯನ ಸಲಹೆ ಮೇರೆಗೆ "ಫನ್ ಸಿನೆಮಾಸ್" ನಲ್ಲಿ ಸುಲಭಾವಗಿ ಟಿಕೆಟ್ ಕಾಯ್ದಿರಿಸಿ ನಿನ್ನೆ ಗಾಳಿಪಟವನ್ನು ನೋಡಿಯೇಬಿಟ್ಟೆ.
ಈ ಚಲನಚಿತ್ರದಲ್ಲಿ ಕಥೆಯಿಲ್ಲ ಎನ್ನುವ ಕೊರಗು ಮೊದಲನೆಯೆ ದಿನದಿಂದಲೂ ಕೇಳಿ ಬರುತ್ತಿದೆ. ಈ ವಿಷಯಕ್ಕೆ ನಂತರ ಬರುತ್ತೇನೆ. ಆದರೆ ಈ ಚಲನಚಿತ್ರ ಪ್ರೇಕ್ಷಕರ ಮನರಂಜನೆಗೆ ಯಾವುದೇ ಮೋಸ ಮಾಡಿಲ್ಲ. ಆ ನವಿರಾದ ಹಾಸ್ಯ ಸಂಭಾಷಣೆ ಪ್ರೇಕ್ಷಕರನ್ನು ಕೊನೆಯವರೆಗೂ ಎಲ್ಲೂ ಬೇಜಾರು ಆಗದಂತೆ ಹಿಡಿದಿಡುತ್ತದೆ. ಬರೀ ಹಿಡಿದಿಡುವುದಲ್ಲ, ಪ್ರೇಕ್ಷಕರನ್ನು ನಕ್ಕಿ ನಲಿಸುತ್ತದೆ. (ಇದಕ್ಕೆ ಬಹುಷ: ನಿರೀಕ್ಷೆಗಳಿಲ್ಲದೆ ಹೋಗುವುದು ಸೂಕ್ತ. ಮನಸ್ಸು ಪೂರ್ತಿ ಆನಂದಿಸಬಹುದು). ಗಣೇಶ್ ರವರ ಅಭಿನಯ ತಮ್ಮ ಹಿಂದಿನ ಚಲನಚಿತ್ರಗಳಿಗೆ ಹೋಲಿಸಿದರೆ ಪಕ್ವವಾಗಿದೆ. ಉತ್ಕ್ರುಷ್ಟ ಎಂದರೂ ತಪ್ಪಾಗಲಾರದು. ಹಾಸ್ಯವಲ್ಲದ ಸಂಭಾಷಣೆ ಕೂಡ ಬಹಳ ಚುರುಕಾಗಿದೆ. ಭಾವಾವೇಷದ ಸನ್ನಿವೇಶಗಳು ಕೂಡ ಬಹಳ ನೈಜವಾಗಿವೆ. ಎಲ್ಲೂ ಅತಿರೇಕ ಕಂಡು ಬಂದಿಲ್ಲ. ( ಈ ಎಲ್ಲಾ ವಿಮರ್ಶೆ, ನಾನು ಸಮಾನ್ಯವಾಗಿ ಬರೆದಿದ್ದರೂ, ಬಹಳಷ್ಟು ಮುಂಗಾರು ಮಳೆ ಚಿತ್ರದ ಜೊತೆ ಹೋಲಿಸಿ ಬರೆದಿರುವುದೇ.....). ಭಟ್ಟರ ನಿರ್ದೇಶನ ತಮ್ಮ ಹಿಂದಿನ ಚಿತ್ರ ಮುಂಗಾರು ಮಳೆಗಿಂತ ಪ್ರಬುದ್ಧತೆಯನ್ನು ಕಂಡುಕೊಂಡಿದೆ. ನೃತ್ಯ ಸಂಯೋಜನೆ ಬಹಳ ಚೆನ್ನಾಗಿದೆ. ಬಿದಿರು ಬೊಂಬೆ, ಆ ಯಕ್ಷಗಾನದ ಹಾಡುಗಳು ನನಗೆ ಮೊದಲು ಕೇಳಿದಾಗ ಅಷ್ಟು ಇಷ್ಟವಾಗದೆ ಇದ್ದರೂ ನೃತ್ಯದ ಜೊತೆ ನೋಡಿ, ಕೇಳಿದಾಗ ಹಾಡುಗಳು ಸೊಗಸಾಗಿವೆ.ಇನ್ನು ಚಿತ್ರೀಕರಣದ ಜಾಗ/ಛಾಯಾಗ್ರಹಣ ಗಳ ಬಗ್ಗೆ ಚಕಾರ ಎತ್ತುವ ಹಾಗಿಲ್ಲ.ಗಾಳಿಪಟ ಶೀರ್ಷಿಕೆ ಹಾಡು ಮತ್ತು ಮಿಂಚಾಗಿ ನೀನು ಬರಲು ಹಾಡುಗಳಂತೂ ಚಿತ್ರ ಬಿಡುಗಡೆಯಾಗುವ ಮುಂಚಿನಿಂದಲೂ "ಸೂಪರ್ ಹಿಟ್" ಹಾಡುಗಳು.
ಉಳಿದ ಕಲಾವಿದರು (ರಾಜೇಶ್ ಕೃಷ್ಣ, ದಿಗಂತ್ , ಡೈಸಿ ಬೋಪಣ್ಣ , ನೀತು, ಭಾವನಾ, ಅನಂತ್ ನಾಗ್, ರಂಗಾಯಣ ರಘು) ತಮ್ಮ ಸಾಮರ್ಥ್ಯಕ್ಕೆ ಮೀರಿ ಅಭಿನಯಿಸಿದ್ದಾರೆ ಎಂದರೆ ತಪ್ಪಾಗಲಾರದು. ರಂಗಾಯಣ ರಘು ಎಂದಿನಂತೆ ಕಡಿಮೆ ಸಮಯದಲ್ಲೂ ತಮ್ಮ ಛಾಪನ್ನು ಮೆರೆದಿದ್ದಾರೆ. ಹೊಸ ಹುಡುಗಿ ಭಾವನ ತಮ್ಮ ಅಭಿನಯದಿಂದ ಉಳಿದವರಿಗಿಂತ ಗಮನ ಸೆಳೆಯುತ್ತಾರೆ.
ಚಿತ್ರ ನೋಡಿದ ಮೇಲೆ, ಚಲಚಿತ್ರದ ಎಲ್ಲಾ ವಿಭಾಗಗಳ್ಲೂ ಬಹಳ ಶ್ರಮ ಪಟ್ಟು ದುಡಿದಿದ್ದಾರೆ ಎಂದೆನಿಸದೆ ಇರಲಾರದು!! ಕೆಲವು ಋಣಾತ್ಮಕ ಅಂಶಗಳೂ ಇವೆಯೆನ್ನಿಸುತ್ತದೆ. ಯಾವ ಹಂದಿಯಿಂದ ಅನಂತ್ ನಾಗ್ ರವರು ಕಾಲು ಕಳೆದುಕೊಂಡಿರುತ್ತಾರೋ ಅದರಲ್ಲೇ ವರಾಹ ಅವತಾರವನ್ನು ಕಾಣುವುದು ಹಾಸ್ಯವೆನ್ನಿಸದೆ ಹಾಸ್ಯಾಸ್ಪದವಾಯಿತೇನೋ?? ಕ್ಲ್ಲೈಮಾಕ್ಸ್ ಸ್ವಲ್ಪ ಜಾಸ್ತಿನೇ ಎಳೆದರೇನೋ?? ೨ ಗಂಟೆ ೩೦ ನಿಮಿಷದ ಚಿತ್ರದಲ್ಲಿ ೧೦ ನಿಮಿಷದ ಬೇಜಾರು, ಪ್ರೇಕ್ಷಕರಿಗೆ ಗೊತ್ತಾಗದೆ ಹೋಗಿ ಇದು ಬಹಳ ಅದ್ಭುತ ಚಲನಚಿತ್ರ ಎಂದರೆ ಆಶ್ಚರ್ಯವೇನಿಲ್ಲ. ಇದೇ ಅಭಿಪ್ರಾಯ ಪ್ರೇಕ್ಷಕರಿಂದ ಬರುತ್ತಿದೆ ಅನ್ನಿಸುವುದಕ್ಕೆ ಗಾಳಿಪಟ ಹಾರಿಸುತ್ತಿರುವ ಚಿತ್ರಮಂದಿರಗಳು ತುಂಬಿ ತುಳುಕುತ್ತಿರುವುದೇ ಸಾಕ್ಷಿ.
ಬಹಳಷ್ಟು ಪ್ರೇಕ್ಷಕರಿಗೆ ಮತ್ತೊಂದು ಸಂತೋಷಕರ ಸಂಗತಿ ಎಂದರೆ ಈ ಚಿತ್ರದಲ್ಲಿ "ದೇವದಾಸ್" ಇಲ್ಲದೆ ಇರುವುದು. ಚಿತ್ರದಲ್ಲಿ ಒಮ್ಮೆ ಗಣೇಶ್ ಒಂದು ಸಣ್ಣ ಊರ ಹಂದಿ ಹಿಡಿದಾಗ, ಎಲ್ಲಿ ಮತ್ತೊಂದು "ದೇವದಾಸ್" ಪಾತ್ರ ಸೃಷ್ಟಿಯಾಯ್ತೋ ಎಂಬ ಆತಂಕ ಪ್ರೇಕ್ಷಕರಲ್ಲಿ ಹುಟ್ಟಿ, ಮರೆಯಾಗುತ್ತದೆ. ನಿರ್ದೇಶಕರು ಆ ಊರ ಹಂದಿ ಪಾತ್ರವನ್ನು ಅಲ್ಲೇ ಕೊನೆಗಾಣಿಸುವ ಜಾಣ್ಮೆ ತೋರಿದ್ದಾರೆ!
ವ್ಯವಹಾರಿಕ/ಮನರಂಜನಾ ಚಲನಚಿತ್ರಗಳಲ್ಲಿ ಇದಕ್ಕಿಂತಾ ಉತ್ತಮ ಕಥೆಯನ್ನು ನಿರೀಕ್ಷಿಸುವುದು ಪ್ರೇಕ್ಷಕರ/ವಿಮರ್ಶಕರ ಕಡೆಯಿಂದ ತಪ್ಪು ನಿರೀಕ್ಷೆ ಎನ್ನಿಸುತ್ತದೆ. ಮತ್ತು ಈ ಚಿತ್ರದ ಕಥೆ ಮುಂಗಾರು ಮಳೆ ಕಥೆಗಿಂತ ದುರ್ಬಲ ಎನ್ನುವದರಲ್ಲೂ ಹುರುಳಿಲ್ಲ. ಸಮಾನ್ಯವಾಗಿ ಕಲಾತ್ಮಕ ಚಿತ್ರಗಳು ಎನಿಸಿಕೊಳ್ಳುವ ಕಥೆಗಳು ಒಂದು ಸಮಸ್ಯೆಯ ಸುತ್ತ ಹೆಣೆದಿರಲ್ಪಡುತ್ತವೆ. ಅವುಗಳ ಮುಖ್ಯ ಉದ್ದೇಶ ಮನರಂಜನೆ ಅಲ್ಲ. ಬದಲಾಗಿ ಜನಕ್ಕೆ ಒಂದು ಸಂದೇಶ ಕೊಡುವುದಾಗಿರುತ್ತದೆ. ಒಂದು ಉದಾಹರಣೆಯಾಗಿ ನಮ್ಮ ಗಿರೀಶ್ ಕಾಸರವಳ್ಳಿ ಯವರಿಂದ ನಿರ್ದೇಶಿಸಲ್ಪಡುವ ಚಿತ್ರಗಳು. ಇಂತಹ ಕಲಾತ್ಮಕ ಚಿತ್ರಗಳು ಕೂಡ ಕೆಲವೊಮ್ಮೆ ಮನರಂಜಿಸುವುದರಲ್ಲೂ ಸಫಲವಾಗಿರುತ್ತವೆ. ಇವಕ್ಕೆ ಪೂರಕವಾಗಿ ಕೆಲವೇ ಕೆಲವು ಚಿತ್ರಗಳೆಂದರೆ ಪುಟ್ಟಣ್ಣ ಕಣಾಗಲ್ ನಿರ್ದೇಶನದ ಚಿತ್ರಗಳು, ಇತ್ತೀಚಿಗೆ ಎಂದರೆ ಅಮೀರ್ ಖಾನ್ ನಟಿಸಿ ನಿರ್ದೇಶಿಸಿರುವ "ತಾರೆ ಝಮೀನ್ ಪರ್" ಚಿತ್ರವನ್ನೂ ಈ ಪಟ್ಟಿಗೆ ಸೇರಿಸಬಹುದಾಗಿದೆ.(ಕೆಲವು ಅಣ್ಣಾವ್ರ ಚಿತ್ರಗಳು.. ಇನ್ನೂ ಹಲವು ಹತ್ತು ಇರಬಹುದು).ಆದರೆ ಮನರಂಜನೆಗೆಂದೇ ನಿರ್ಮಿಸಿವ, ಅತ್ಯುತ್ತಮ ವ್ಯಾವಹಾರಿಕ ಚಿತ್ರ ಎನ್ನಿಸಿಕೊಳ್ಳುವ ಚಿತ್ರಗಳಲ್ಲಿ, ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿರುವಂತ ಸಾಮಾನ್ಯ ಕಥೆ (ಅಸಾಮಾನ್ಯ ಕಥೆಯಾಗಿದ್ದು, ಒಂದು ಸಂದೇಶವನ್ನೂ ಕೊಟ್ಟರೆ ಒಳ್ಳೆಯದು, ಅಂತಹ ಚಿತ್ರಗಳು ಅತಿ ವಿರಳ ಎನ್ನಬಹುದು), ಇದಕ್ಕೆ ಬೆಂಬಲವಾಗಿ (ಸಾಥ್ ಕೊಡಲು) ಉತ್ತಮ ಸಂಭಾಷಣೆ, ಸ್ವಲ್ಪ ಭಾವಾವೇಷದ ದೃಶ್ಯಾವಳಿಗಳು, ಉತ್ತಮ ಸಂಗೀತ, ಉತ್ತಮ ಹಾಡುಗಳು, ನೃತ್ಯಗಳು, ಅತ್ತ್ಯುತ್ತಮ ಹಾಸ್ಯ, ಪ್ರಬುದ್ಧ ನಟನೆ, ಇರುತ್ತದೆ. ಇವೆಲ್ಲಾ ಗಾಳಿಟದಲ್ಲಿ ಇರುವುದರಿಂದಲೇ ಅದೊಂದು ಅತ್ತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿರುವುದು. ( ಜ್ಙಾಪಕವಿರಲಿ ಇದು ವ್ಯಾವಾಹಾರಿಕ ಚಲನಚಿತ್ರ). ಮುಂಗಾರು ಮಳೆಯಲ್ಲೂ ಇದಕ್ಕಿಂತ ಜಾಸ್ತಿ ಏನೂ ಇರಲಿಲ್ಲ. ಸ್ವಲ್ಪ ಕಡಿಮೇನೆ ಇತ್ತು ಎನ್ನಬಹುದೇನೊ?
ಕೊನೆಯ ಸೂತ್ರ: ಗಾಳಿಪಟದ ಸೂತ್ರ ಹರಿದಿಲ್ಲ. ಗಾಳಿಪಟ ಧೂಳಿಪಟ ಆಗಿಲ್ಲ. ಬೇರೆ ಚಿತ್ರಗಳು ಗಾಳಿಪಟ ಹಾರುತ್ತಿರುವ ವೇಗದಲ್ಲಿ ಧೂಳಿಪಟ ಆಗಬಹುದೇನೋ? ಇದೊಂದು ಒಳ್ಳೆಯ ಚಲನಚಿತ್ರ. ಜೀವನದಲ್ಲಿ ಹಾಸ್ಯ/ಮನರಂಜನೆ ಬೇಡೆನ್ನುವವರಿಲ್ಲ. ತಾವು ಹೀಗೆ ಅಂದುಕೊಂಡಿದ್ದರೆ ಹೋಗಿ ಗಾಳಿಪಟ ನೋಡಿ. ಚಿತ್ರ ಗೆದ್ದಿದೆ. ಇದಕ್ಕೆ ಅಭೂತಪೂರ್ವ ಯಶಸ್ಸು ಬರಲೆಂದು ಹಾರೈಸಿ ಮತ್ತೊಮ್ಮೆ ನೋಡಿ. ಮುಖ್ಯವಾಗಿ ಉತ್ತಮ ಚಿತ್ರವನ್ನು ಕೊಟ್ಟ ಯೋಗ್ ರಾಜ್ ಭಟ್ ಮತ್ತೆ ಗಣೇಶ್ ಗೆ (ಪೂರ್ತಿ ಚಿತ್ರ ತಂಡಕ್ಕೆ) ಧನ್ಯಾವದಗಳು. ನಿಮ್ಮ ಮುಂಬರುವ ಎಲ್ಲಾ ಯೋಜನೆಗಳೂ ಯಶಸ್ವಿಯಾಗಲಿ.
ಗುರು
ಗುರುವಾರ, ಜನವರಿ 31, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)