ಗುರುವಾರ, ಜುಲೈ 23, 2009

ಕನ್ನಡದಲ್ಲಿ ಬರೆಯುವಾಗ ಆಂಗ್ಲ ಪದಗಳ ಮಿಶ್ರಣ ಎಷ್ಟು ಪರಿಣಾಮಕಾರಿ?

ಸಮರಸ ವಿಶೇಷ ಅಂಕಣ ವಸ್ತುನಿಷ್ಠದಲ್ಲಿ....

ಇತ್ತೀಚೆಗೆ ಬಹಳಷ್ಟು ಕನ್ನಡ ಲೇಖನಗಳನ್ನು (ಸಾಮಾನ್ಯವಾಗಿ ಪತ್ರಿಕೆಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ, ಕೆಲವು ಪುಸ್ತಕರೂಪದಲ್ಲಿ ಪ್ರಕಟವಾದ ಕಥೆ ಕಾದಂಬರಿಗಳಲ್ಲಿ ಕೂಡ) ಆಂಗ್ಲ ಪದಗಳ ಮಿಶ್ರಣ ಕಂಡು ಬರುತ್ತಿದೆ ಅಲ್ಲವೇ? ಇದು ಸಮಸ್ಯೆಯೇ? ಅಥವಾ ಉತ್ತಮ ರೂಡಿಯೇ/ಬಳಕೆಯೇ? ಈ ರೂಢಿ, ಆ ಲೇಖನಕ್ಕೆ ಮೆರುಗು ಕೊಡುತ್ತದೆಯೇ? ಅಥವಾ ಓದುವ ಪ್ರಕ್ರಿಯೆಯನ್ನು ಜಟಿಲಗೊಳಿಸುತ್ತಾ? ಅಥವಾ ಕನ್ನಡ ಭಾಷೆಯನ್ನು ನಿಸ್ಸಾರಗೊಳಿಸುತ್ತಾ? (dilute ಮಾಡುತ್ತಾ). ಇದಕ್ಕೆ ಕಾರಣಗಳೇನು - ನಾವು ಇತ್ತೀಚೆಗೆ ಮಾತನಾಡುವಾಗ ಹೆಚ್ಚಿನ ಆಂಗ್ಲ ಪದಗಳನ್ನು ಬಳಸುವುದರಿಂದ ಬರವಣಿಗೆಯಲ್ಲಿಯೂ ಅದೇ ಚಲಾವಣೆಗೆ ಬರುತ್ತದೆಯೇ? ಅಥವಾ ಇದು ಒಂದು ಆಕರ್ಷಕ ಶೈಲಿಯೇ? ಅಥವಾ ಬಹಳಷ್ಟು ಆಂಗ್ಲ ಪದಗಳಿಗೆ ಸಮರ್ಪಕ ಕನ್ನಡ ಸಮಾನಾರ್ಥಕ ಪದಗಳಿಲ್ಲವೇ? ಹೀಗೊಂದು ಚಿಂತನೆ. ಮುಂದೆ ಓದಿ

ಶ್ರೇಷ್ಠ ಕಲಿಸಿಕೊಟ್ಟ ಹೊಸ, ಕನ್ನಡ ಚುಟುಕು ಪದ್ಯ

ಶ್ರೇಷ್ಠ ಗೊತ್ತಲ್ಲವೇ? ಹಿಂದೆ ಎರಡು ಬಾರಿ ನಿಮಗೆ ಪರಿಚಯ ಮಾಡಿಕೊಟ್ಟಿದ್ದೆ, ಹಾಳು ಮರೆವು ಎನ್ನುತ್ತೀರ, ಕೆಳಗಿನ ಕೊಂಡಿಗಳನ್ನು ಒತ್ತಿ ಒಮ್ಮೆ ಕಣ್ಣಾಡಿಸಿ.
ಆಂಗ್ಲ ಭಾಷೆಯ ಒಂದಕ್ಷರದ ’ಹೆಸರು’
ಶ್ರೇಷ್ಠ ಹನುಮಂತನಾಗಿದ್ದು!

ಇಷ್ಟೆಲ್ಲಾ ಆಗಲ್ಲಪ್ಪ ಅಂತೀರ?, ಶ್ರೇಷ್ಠ ನನ್ನ ಸೋದರಳಿಯ .ಯು ಕೆ ಜಿ ಯಲ್ಲಿ ಓದುತ್ತಾ ಇದ್ದಾನೆ. ಹೋದ ವಾರ ಇವರ ಶಾಲೆಯಲ್ಲಿ ಅದೇನೋ ’Rhymes Day' ಅಂತ ಮಾಡಿದ್ರು. ಅದಕ್ಕೆ ಎಲ್ಲರೂ ಮನೆಯಲ್ಲಿ ಯಾವುದಾದರೂ ಒಂದು ರೈಮ್ ಕಲಿತುಕೊಂಡು ಬರಲು ಹೇಳಿದ್ದರು. ಅವರು ಹೇಳಿಕಳಿಸ್ಸಿದ್ದಷ್ಟೆ. ನಾನು ಜಾಸ್ತಿ ವಿಚಾರ ಮಾಡದೆ ಹೆಡ್ಡನಂತೆ, ಅವನ ಪಠ್ಯದಲ್ಲೇ ಇರುವ, ಅವರ ಶಾಲೆಯಲ್ಲಿ ಆಗಲೇ ಹೇಳಿಕೊಟ್ಟಿರುವ ಒಂದು ಆಂಗ್ಲ ಪದ್ಯವನ್ನು ಅವನ ಬಾಯಲ್ಲೇ ಹೇಳಿಸಿ, ಕಲಿಸಿಕೊಟ್ಟೆನೆಂದು ಸಂತೋಷಗೊಂಡು ಸುಮ್ಮನಾದೆ. ಅವ ಮುಂದಿನ ದಿನ ಬಂದು ಅಯ್ಯೋ, ಬೇರೆ ರೈಮ್ ಕಲಿತುಕೊಂಡು ಬರಬೇಕಂತೆ ಎಂದಾಗಲೇ ನನಗೆ ಗೊಂದಲ ಶುರು ಆಗಿದ್ದು. ಆಯ್ಯೋ ಬಿಡಿ ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ಬೇಡಿ.

ಅವನ ಶಾಲೆಯಲ್ಲಿ ಅವನ ಗೆಳತಿ ತನ್ವಿ, ಒಂದು ಕನ್ನಡ ರೈಮ್ (ಚುಟುಕು ಪದ್ಯವನ್ನು) ಕಲಿತು, ಎಲ್ಲಾ ಮಕ್ಕಳಿಗೂ ಕಲಿಸಿ ಕೊಟ್ಟಿದ್ದಾಳೆ. ಬಹಳ ಸುಂದರವಾಗಿದೆ, ಇನ್ನು ಮಕ್ಕಳು ಅದನ್ನು ನಾಟಕೀಯವಾಗಿ ಹಾಡಿದರಂತೂ ಹೊಗಳಲು ಪದಗಳಿಲ್ಲ. ಇಲ್ಲಿಯವರೆಗೂ ಈ ಚುಟುಕು ಪದ್ಯ ನನ್ನ ಗಮನಕ್ಕೆ ಬಂದಿರಲಿಲ್ಲ,

ಈ ರೀತಿ ಇದೆ ಆ ಪದ್ಯ,

ಪೆನ್ಸಿಲ್ ಗೊಂದು ಮೊದಲನೆ ಶತ್ರು, ಅಳಿಸೋ ರಬ್ಬರ್ರು,
ತಪ್ಪು ಬರೆದರೆ ಒಪ್ಪೋದಿಲ್ಲ, ಎಷ್ಟೇ ಹೇಳಿದ್ರೂ..

ಪೆನ್ಸಿಲ್ ಗೊಂದು ಎರಡನೆ ಶತ್ರು, ಎರೆಯೋ ಮೆಂಡರ್ರು,
ಮೆಂಡ್ ಆಗಿರದು, ಬಿಡೋದೆ ಇಲ್ಲ ಎಷ್ಟೇ ಬಡ್ಕೊಂಡ್ರು..


ಇಷ್ಟು ಶ್ರೇಷ್ಟ ಹೇಳಿದರೆ, ಈ ಮೂರನೆ ಪಂಕ್ತಿ ಹೀಗಿರಬಹುದೆಂದು ನಾನು ಊಹೆ ಮಾಡ್ತಾ ಇದ್ದೆ..

ಪೆನ್ಸಿಲ್ ಗೊಂದು ಮೂರನೆ ಶತ್ರು, ಬರೆಯೋ ಪೇಪರ್ರು
ಪೂರ್ತಿ ಬರೆಯದೆ ಬಿಡೋದೆ ಇಲ್ಲ, ಎಷ್ಟೇ ಸುಸ್ತಾದ್ರು.. ಉಫ್...


ಈ ಪದ್ಯನಾ ಮಕ್ಕಳು ಎಷ್ಟು ಖುಷಿ ಖುಷಿ ಇಂದ ಹೇಳ್ತವೇ ಅಂತೀರಾ.. ನಿಮ್ಮ ಮನೆಯ ಮಕ್ಕಳಿಗೂ ಗೊತ್ತಿಲ್ಲದಿದ್ದರೆ ಕಲಿಸಿಕೊಡಿ..

ಇನ್ನು ನಮ್ಮ ಶ್ರೇಷ್ಠ, ಅವನಿಗೂ ಒಂದು ಹೊಸ ಕನ್ನಡ ಪದ್ಯ ಕಲಿಸಿ ಕೊಡುವುದಕ್ಕೆ ನನಗೆ ದುಂಬಾಲು ಬಿದ್ದಿದಾನೆ. ಆಗಲೆ, ’ನಾಯಿ ಮರಿ ನಾಯಿ ಮರ”, ’ಒಂದು ಎರಡು ಬಾಳೆಲೆ ಹರಡ”, ಇನ್ನೂ ಕೆಲವು ಪದ್ಯಗಳನ್ನು ಆಗಲೇ ಕೆಲವು ಮಕ್ಕಳು ಹೇಳಿ ಆಗಿದೆಯಂತೆ. ಬಣ್ಣದ ತಗಡಿನ ತುತ್ತೂರಿ, ಹುಲಿ ಬೇಟೆ ಇವು ಯಾವುವೂ ಬೇಡವಂತೆ. ಏಕೆಂದರೆ ಅವನ ಷರತ್ತು, ಪದ್ಯ ಚಿಕ್ಕದಾಗಿರಬೇಕಂತೆ.

ಕೊನೆಗೆ ಜಿ ಪಿ ರಾಜರತ್ನಂ ರವರದ್ದೇ ಆದ,

ಝಣ! ಝಣ! ಝಣ!
ಜೇಬು ತುಂಬ ಹಣ!
ಮೇಲಕೆತ್ತಿ
ಬಿಡಲು ಸದ್ದು
ಠಣ್ ! ಠಣ! ಠಣ!

ನದಿಯಲೊಂದು ಬಕ
ಮುದುರಿಕೊಂಡು ಮೊಕ
ಕಾಲನೆತ್ತಿ
ಕುಣಿಯುತಿತ್ತು
ತಕಾ! ತಕ್ಕ! ತಕ!

ಸುತ್ತ ಹಸುರು ವನ!
ನಡುವೆ ಮೇವ ದನ!
ಮರದ ಬಳಿ!
ಗೊಲ್ಲನುಲಿ!
ತಾನ ! ನಾನ! ನನ!

ಪದ್ಯವನ್ನು ಹೇಳಿಕೊಡಲು ಪ್ರಯತ್ನಿಸುತ್ತಿದ್ದೇನೆ.

ನಿಮ್ಮ ಬಳಿ ಯಾವುದಾದರೂ ಇನ್ನೂ ಸರಳವಾದ, ಸಣ್ಣದಾದ, ಹೆಚ್ಚು ಆಸಕ್ತಿ ಮೂಡಿಸುವ ಪದ್ಯ ಇದ್ರೆ ಹೇಳ್ರೀ!

ಸೋಮವಾರ, ಜುಲೈ 20, 2009

ಸಮರಸದಲ್ಲಿ ಬರಹ ವಾಸುರವರ ಸಂದರ್ಶನ

ಲಿಪ್ಯಂತರ ಆಧಾರಿತ ಬರಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಮೊದಲ ಬಾರಿಗೆ ಕನ್ನಡವನ್ನು ಗಣಕತಂತ್ರಕ್ಕೆ ಸುಲಭವಾಗಿ ಹರಿಸಿದ ಹರಿಕಾರರು ಶೇಷಾದ್ರಿ ವಾಸು. ಗಣಕ ತಂತ್ರದಲ್ಲಿ ಕನ್ನಡ ಬಳಸುವ ಬಹುಷಃ ಎಲ್ಲರಿಗೂ ಬರಹದ ಅನುಭವ ಆಗಿರುತ್ತದೆ. ಈಗಿನ ತಂತ್ರಜ್ಞರಿಗೆ ಮತ್ತು ಕನ್ನಡಾಭಿಮಾನಿಗಳಿಗೆ ಬರಹ ತಂತ್ರಜ್ಞಾನ ಮತ್ತು ವಾಸುರವರು ಮಾದರಿಯಾಗಬಹುದು, ಹೆಚ್ಚಿನ ಸ್ಪೂರ್ಥಿ, ಉತ್ತೇಜನಗಳನ್ನು ನೀಡಬಹುದು ಎಂದೆನೆಸಿ ಆ ಉತ್ಪನ್ನದ ಹಿಂದಿನ ಶ್ರಮ, ಅದನ್ನು ಅಭಿವೃದ್ಧಿಪಡಿಸುವುದಕ್ಕೆ ಅವರಿಗಿದ್ದ ಪ್ರೇರಣೆ, ಇಂದಿನ ದಿನದ ಕನ್ನಡ ತಂತ್ರಜ್ಞಾನದ ಅವಶ್ಯಕತೆ ಮುಂತಾದ ವಿಷಯಗಳ ಬಗ್ಗೆ ಬರಹ ವಾಸುರವರಲ್ಲಿ ಕೇಳಬೇಕೆಂಬುದು ಸಮರಸ ಇಚ್ಛೆಯಾಗಿತ್ತು. ವಾಸುರವರ ಕರ್ಮಭೂಮಿ ಅಮೇರಿಕ ಆಗಿರುವುದರಿಂದ ನಾವು ಸಂದರ್ಶನಕ್ಕೆ ತಯಾರಿಸಿದ್ದ ಪ್ರಶ್ನೆಗಳನ್ನು ವಿ - ಅಂಚೆ ಮೂಲಕ ಕಳುಹಿಸಿ ಕೊಟ್ಟೆವು. ವಾಸುರವರು ತಮ್ಮ ಕಾರ್ಯನಿರತ ಜೀವನದ ಹೊರತಾಗಿಯೂ ನಮ್ಮ ಸಂದರ್ಶನಕ್ಕೆ ಸ್ಪಂದಿಸಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಸಂದರ್ಶನವನ್ನು ಎರಡು ಭಾಗದಲ್ಲಿ ಓದುಗರಿಗೆ ಒದಗಿಸಲಾಗುತ್ತದೆ. ವಾಸುರವರ ಬಹು ಸಣ್ಣ ಹಿನ್ನಲೆಯೊಂದಿಗೆ ಸಂದರ್ಶನದ ಮೊದಲನೆ ಸಂಚಿಕೆ ನಿಮ್ಮ ಮುಂದೆ. ಮುಂದೆ ಓದಿ

ಸೋಮವಾರ, ಜುಲೈ 13, 2009

ಸಮರಸ ಸಂಪಾದಕೀಯದಲ್ಲಿ : "ಸ್ವಹಿತಾಸಕ್ತಿಗೆ ಇತರೆ ಆಸಕ್ತಿಗಳು"

ನಾವು ಮಾಡುವ ಕೆಲಸಗಳು ಬಹಳಷ್ಟು ವಿಧ. ಹೆಚ್ಚಿನ ಸಮಯದಲ್ಲಿ ನಾವು ಮಾಡುವ ಕೆಲಸ ನಮ್ಮ ಆಸಕ್ತಿಗೆ ತದ್ವಿರುದ್ಧವಾಗಿರುತ್ತದೆ. ಆಗ ನಾವು ಮಾಡುವ ಕೆಲಸದ ಬಗ್ಗೆ ಕೊರಗುವುದು ಸಾಮಾನ್ಯ. ನಮ್ಮ ಯೋಗ್ಯತೆಗೆ ಇನ್ನೂ ಒಳ್ಳೆಯ ಕೆಲಸ ಮಾಡಬೇಕೆಂಬುದು, ನಾವು ನಮ್ಮ ವೃತ್ತಿಜೀವನದಲ್ಲಿ ಎಷ್ಟೇ ಬೆಳೆದರೂ ನಮ್ಮ ಜೊತೆಯಲ್ಲೇ ಉಳಿದುಕೊಳ್ಳುವಂತಹ ಕೊರಗು. ಈ ಕೊರಗು ಮನುಷ್ಯ ವೃತ್ತಿಜೀವನದಲ್ಲಿ ವೃದ್ಧಿ ಹೊಂದುವುದಕ್ಕೆ ಕೆಲವೊಮ್ಮೆ ಸಹಕರಿಸಿದರೂ, ಸಾಮಾನ್ಯವಾಗಿ ಕೊರಗುವುದು ಮಾನಸಿಕ ಯಾತನೆಗೆ ಎಡೆ ಮಾಡಿಕೊಡುತ್ತದೆ.ಒಂದು ಕಾಲವಿತ್ತು, ಹೆಚ್ಚು ಹಣ ಸಂಪಾದನೆ ಮಾಡುವೆ ಕೆಲಸವನ್ನು ಎಲ್ಲರೂ ಎದುರು ನೋಡುತ್ತಿದ್ದರು. ಕಾಲ ಬದಲಾದಂತೆ ಹಣದ ಮಹತ್ವ ಎಷ್ಟೇ ಹೆಚ್ಚಾದರೂ, ಮನುಷ್ಯನ ಸಂತೋಷಕ್ಕೆ ಅದು ಎಷ್ಟೇ ಸವಲತ್ತುಗಳನ್ನು, ಭೋಗ ವಸ್ತುಗಳನ್ನು ಕೊಂಡು ಕೊಟ್ಟರೂ, ತಾನು ಮಾಡುತ್ತಿರುವ ಕೆಲಸದ ಮಹತ್ವ ಹಣಕ್ಕಿಂತಾ ಹೆಚ್ಚಾಗುತ್ತಾ ಹೋಯಿತು. ಮುಂದೆ ಓದಿ

ಸೋಮವಾರ, ಜುಲೈ 06, 2009

ರಸ್ತೆ, ವಾಹನಗಳ ರಣರಂಗವೇ?

ನೀವು ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸುತ್ತೀರಾ? ಅಥವಾ ಸುಮ್ಮನೆ ವಾಹನ ದಟ್ಟನೆಯನ್ನು ಶಪಿಸುತ್ತೀರಾ? ಮಧುರ್ ರಾಜ್ ಬೆಂಗಳೂರಿನಲ್ಲಿ ಸಂಚಾರದ ಅನುಭವದ ಮೇಲೆ ’ಸಮರಸ ವಿಶೇಷ ಅಂಕಣ - ಭಾವತರಂಗದಲ್ಲಿ’ ಬೆಳಕು ಚೆಲ್ಲುತಾರೆ.

ಜನ ಸಂಖ್ಯಾಸ್ಫೋಟದಿಂದ, ವಾಹನಾ ಸಂಖ್ಯಾಸ್ಪೋಟ ಉಂಟಾಗುವುದು ಸಹಜ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ, ವಾಹನದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡಾಡುವುದು ಒಂದು ಸಾಹಸವೇ ಸರಿ. ನಾವು ಸ್ವತಃ ಚಾಲಕರಾಗಿದ್ದರೆ, ನಮ್ಮ ಗುರಿಯನ್ನು ತಲುಪಿದ ನಂತರ, ಈ ಸಾಹಸದ ಅನುಭವ ಹೆಚ್ಚಿನ ರೀತಿಯಲ್ಲಿ ವ್ಯಕ್ತವಾಗುವುದು. ವಾಹನ ಚಾಲನೆ ಒಂದು ಅಹ್ಲಾದಕರವಾದ ಅನುಭವವಾಗಿರಬೇಕು. ಪಯಣ ಸಾಹಸವಾದಲ್ಲಿ, ಈ ಅನುಭವ ಕುಂದಿ ಹೋಗುವುದು. ಇಂತಹ ಅಹಿತಕ್ಕೆ ರಸ್ತೆ ನಿಯಮ ಉಲ್ಲಂಘನೆ, ರಸ್ತೆ ದುರಸ್ತೆ, ಅಸಹನೆ, ಅವ್ಯವಸ್ತಿತ ವಾಹನ ಚಾಲನೆ, ಅಜ್ಞಾನ ಹೀಗೆ ಕಾರಣ ಹಲವು. ಈ ಅಂಕಣವನ್ನು ಓದಿದ ನಂತರ ನಿಮ್ಮ ಚಾಲನೆ, ಆಹ್ಲಾದಕರ ಹಾಗು ಅಪಾಯಕಾರಿಯಾಗದಿರುವಂತೆ ಪ್ರಯತ್ನಿಸುವೆ. ಮುಂದೆ ಓದಿ

ಶುಕ್ರವಾರ, ಜುಲೈ 03, 2009

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮೋತ್ಸವ

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮೋತ್ಸವ

ಹಿರಿಯ ಪ್ರಾಥಮಿಕ ಶಾಲೆಯ ಒಂದು ತರಗತಿಯಲ್ಲಿ ಒಂದು ಪಾಠ ನನಗೆ ಬಹಳ ಇಷ್ಟವಾಗಿತ್ತು. ತಿಳಿ ಹಾಸ್ಯದಿಂದ ಕೂಡಿದ ಆ ಪಾಠ, ಬಹಳ ಆಸಕ್ತಿ ಮೂಡಿಸಿದ್ದ ಕೆಲವೇ ಪಾಠಗಳಲ್ಲಿ ಒಂದು. ಅದನ್ನು ಬರೆದಿದ್ದವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರು. ಆ ಪಾಠವನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರರು ಬರೆದಿರುವ ಅಪೂರ್ವ ಪ್ರವಾಸ ಕೃತಿ “ಅಮೇರಿಕಾದಲ್ಲಿ ಗೊರೂರು” ನಿಂದ ಆರಿಸಿದ್ದು. ಮುಂದೆ ಓದಿ


ವಿಚಾರಧಾರೆ, ವ್ಯಕ್ತಿಪೂಜೆ ಮತ್ತು ಹೋಲಿಕೆ

ಒಮ್ಮೆ ಕನ್ನಡದ ಒಂದು ಪ್ರಖ್ಯಾತ ಅಂತರ್ಜಾಲ ತಾಣದಲ್ಲಿ ಒಬ್ಬರು ಬರೆದಿದ್ದರು. ಆ ಬರವಣಿಗೆ ಈ ರೀತಿ ಇತ್ತು. ಅವರು ಆವರಣ ಓದಿದ್ದಾರೆ. ತಮ್ಮ ವಿಚಾರಧಾರೆಗೆ ಬಹಳ ಹೋಲಿಕೆಯಿದ್ದ ಕೃತಿಯನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಭೈರಪ್ಪನವರ ಇತರ ಕೃತಿಗಳನ್ನು ಬಹಳವಾಗಿ ಮೆಚ್ಚಿದ್ದಾರೆ. ಹೀಗೆ ಕುತೂಹಲದಿಂದ ಕನ್ನಡ ನಾಡಿನ ಇತರ ಸಾಹಿತಿಗಳ, ಆವರಣದ ಬಗೆಗಿನ ಅಭಿಪ್ರಾಯಗಳನ್ನು ತಿಳಿದಿಕೊಳ್ಳುವ ತವಕ. ಇವರಿಗೆ ಮೊದಲು ಪೂರ್ಣಚಂದ್ರ ತೇಜಸ್ವಿ ಕೂಡ ನೆಚ್ಚಿನ ಕೃತಿಕಾರರೆಂದು ಕರೆದುಕೊಳ್ಳುತ್ತಾರೆ. ಆದರೆ ತೇಜಸ್ವಿ ಆವರಣದ ಬಗ್ಗೆ ಕೊಟ್ಟ ಒಂದು ಹೇಳಿಕೆ “undigestible stuff” (ಜೀರ್ಣವಾಗದ ಸಂಗತಿಗಳು) ಇವರಿಗೆ ಇಷ್ಟವಾಗುವುದಿಲ್ಲ. ಇದು ಸಹಜ. ಆದರೆ ಇವರು ಒಂದು ಹೆಜ್ಜೆ ಮುಂದೆ ಹೋಗಿ, ಭೈರಪ್ಪ ಮತ್ತು ತೇಜಸ್ವಿಯವರ ಕೃತಿಗಳ ಸಮಗ್ರ ಅವಲೋಕನ ಮಾಡಿ ಭೈರಪ್ಪನವರೇ ಉತ್ತಮ ಎಂಬ ತೀರ್ಪು ಕೊಟ್ಟುಬಿಡುತ್ತಾರೆ. ಇದಕ್ಕೆ ಇವರು ಹೇಳುವುದು ಹೀಗೆ.. ತೇಜಸ್ವಿ ಬರೆದಿದ್ದೇನು? ಕೆಲವು ಅನುವಾದ, ಇನ್ನು ಕೆಲವು ಪಕ್ಷಿ ಪುಕ್ಕದ ಕಥೆ, ಒಂದು ಪ್ರವಾಸ ಕಥನ ಅಷ್ಟೆ. ಆದರೆ ಭೈರಪ್ಪನವರು ಇತಿಹಾಸಕಾರ, ತತ್ವಜ್ಞಾನಿ. ಬಹಳ ಸಂಶೋಧನೆ ಮಾಡಿ ಬರೆಯುತ್ತಾರೆ. ಅದಕ್ಕೆ ಭೈರಪ್ಪ ತೇಜಸ್ವಿಗಿಂತ ಉತ್ತಮ ಎನ್ನುತ್ತಾರೆ. ಎಷ್ಟು ಎಳಸು ವಾದ ಅನ್ನಿಸುವುದಿಲ್ಲವೇ? ಭೈರಪ್ಪ ಮತ್ತು ತೇಜಸ್ವಿ ಇಬ್ಬರ ಕ್ಷೇತ್ರ ಸಂಪೂರ್ಣ ಬೇರೆ ಬೇರೆ. ತಮ್ಮ ಕ್ಷೇತ್ರಗಳಲ್ಲಿ ಇಬ್ಬರೂ ಅಭೂತಪೂರ್ವ ಕೃತಿಗಳನ್ನು ಬರೆದಿದ್ದಾರೆ. ಭೈರಪ್ಪ ಕೆಲವು ಕೃತಿಗಳನ್ನು ಬರೆಯಬೇಕಾದರೆ ಎಷ್ಟೋ ವರ್ಷಗಳ ಕಾಲ ಹಿಮಾಲಯದಲ್ಲಿದ್ದು ಸಂಶೋಧನೆ ಮಾಡಿ ಬರೆದಿದ್ದಾರೆ. ತೇಜಸ್ವಿ ಪಕ್ಷಿಗಳ ಬಗ್ಗೆ ಬರೆಯಬೇಕಾದರೆ ಕಾಡು ಮೇಡುಗಳನ್ನು ಸುತ್ತಿ, ಪಕ್ಷಿಗಳನ್ನು ಬಹಳ ಹತ್ತಿರದಿಂದ ಅಧ್ಯಯನ ಮಾಡಿ ಬರೆಯುತ್ತಾರೆ. ಯಾವುದೋ ಹಳ್ಳಿಯಲ್ಲಿ ಮನೆ ಕಟ್ಟಿಕೊಂಡು ಸುತ್ತ ಕಾಡು ಬೆಳಸಿ, ಕೆರೆ ಕಟ್ಟಿ ಪಕ್ಷಿಗಳನ್ನು ಆಕರ್ಷಿಸಿ ಅವುಗಳ ಅಧ್ಯಯನಕ್ಕೆ ಬಹಳ ಶ್ರಮ ಪಡುತ್ತಾರೆ. ಹೀಗೆ ಇಬ್ಬರದೂ ಶ್ರಮದ ಹಾದಿಯೇ. ನನಗೆ ಒಬ್ಬರು ವಿಭೂತಿಪುರುಷರಾದರು ಎಂಬ ಮಾತ್ರಕ್ಕೆ ಇಬ್ಬರನ್ನೂ ಒಂದು ವಾಕ್ಯದಲ್ಲಿ ವಿಮರ್ಶೆ ಮಾಡಿ ತೀರ್ಪು ಕೊಡುವುದು ಎಷ್ಟು ತಪ್ಪಲ್ಲವೇ? ಆಷ್ಟಕ್ಕೂ ಆ ಬರಹಗಾರರು ಬರೆಯಬೇಕಾಗಿದ್ದುದು ತೇಜಸ್ವಿ ಆವರಣದ ಬಗ್ಗೆ ಕೊಟ್ಟ ಹೇಳಿಕೆ ತಪ್ಪು ಎಂದು. ಅದರ ಬಗ್ಗೆ ವಸ್ತುನಿಷ್ಠವಾಗಿ ವಿಮರ್ಶಿಸಿದ್ದರೆ ಎಲ್ಲರೂ ಒಪ್ಪಿಕೊಳ್ಳಬಹುದಿತ್ತು! ಮುಂದೆ ಓದಿ

೩೨ ನೇ ವಿಜ್ಞಾನೋತ್ಸವ ನಡೆಯುತ್ತಿದೆ — ನೆನಪಿರಲಿ

ದಿವಂಗತ ಪದ್ಮಭೂಷಣ ಡಾ ಹೆಚ್ ನರಸಿಂಹಯ್ಯನವರಿಂದ ಸ್ಥಾಪಿತವಾದ ಬೆಂಗಳೂರು ವಿಜ್ಞಾನ ವೇದಿಕೆಯ ವತಿಯಿಂದ ವಿಜ್ಞಾನೋತ್ಸವ ನಡೆಯುತ್ತಿದೆ. ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮದಲ್ಲಿ ದೇಶ ವಿದೇಶದ ಖ್ಯಾತ ವಿಜ್ಞಾನಿಗಳ ಉಪನ್ಯಾಸಗಳಿರುತ್ತವೆ.

ಸ್ಥಳ: ಡಾ ಹೆಚ್ ಎನ್ ಸಭಾಂಗಣ
ನ್ಯಾಶನಲ್ ಕಾಲೇಜು
ಬಸವನಗುಡಿ
ದಿನಾಂಕ: ೦೧- ೦೭- ೨೦೦೯ ರಿಂದ ೩೧-೦೭-೨೦೦೯ ಪ್ರತಿದಿನ
ಸಮಯ: ಸಂಜೆ ೬ ಘಂಟೆಗೆ

ಬಹಳಷ್ಟು ಕಾರ್ಯಕ್ರಮಗಳ ಭಾಷಾ ಮಾಧ್ಯಮ ಆಂಗ್ಲವೇ ಆದರೂ ಕನ್ನಡಕ್ಕೆ ಕೊರತೆಯಿಲ್ಲ. ಸ್ವಾಗತ ಭಾಷಣ ವಾಗುವುದು ಆಪ್ತ ಕನ್ನಡದಲ್ಲೇ. ಬಹಳಷ್ಟು ಉಪನ್ಯಾಸಗಳು ಕನ್ನಡದಲ್ಲೂ ಇವೆ. ಕನ್ನಡದ ಕಂಪು ಇದ್ದೇ ಇರುತ್ತದೆ.

ಬೇರೆ ಆಯೋಜಕರು ಈ ಕಾರ್ಯಕ್ರಮ ಆಯೋಜಿಸಿದ್ದರೆ ಸಾವಿರಾರು ರೂಗಳನ್ನೂ ದಂಡ ತೆತ್ತಿದ್ದರೂ ಇಂತಹ ಬಹಳಷ್ಟು ಉಪನ್ಯಾಸಗಳನ್ನು ಕೇಳಲು ಸಿಗುವುದಿಲ್ಲ. ಇಂತಹ ಸದವಕಾಶವನ್ನು ವಿಜ್ಞಾನ ಆಸಕ್ತರು ತಪ್ಪಿಸಿಕೊಳ್ಳಬಾರದೆಂದು ಸಮರಸದ ಆಶಯ. ಕಾರ್ಯಕ್ರಮ ಪಟ್ಟಿ

ನೆನ್ನೆ ವಿಜ್ಞಾನೋತ್ಸವದಲ್ಲಿ

ಡಾ ಎಸ್ ಸಿತಾರಾಮ ಅಯ್ಯಂಗಾರ್ ರವರ ವಿಜ್ಞಾನ ಮತ್ತು ಅಂತರ್ಜಾಲ ಸಲಕರಣೆಗಳು (Science and Cybertools) ಎಂಬ ವಿಷಯದ ಮೇಲೆ ಉಪನ್ಯಾಸವಿತ್ತು. (ಇದು ವಿಜ್ಞಾನೋತ್ಸವದ ೨೨೫೧ ನೇ ವಿಜ್ಞಾನ ಉಪನ್ಯಾಸ).ಮುಂದೆ ಓದಿ