ಮಂಗಳವಾರ, ಅಕ್ಟೋಬರ್ 31, 2006

ಸುವರ್ಣ ಕನ್ನಡ ರಾಜ್ಯೋತ್ಸವ.. ಕನ್ನಡ ಕವಿಗಳಿಗೆ ನಮನ-೩

ನಮ್ಮ ಕವಿಗಳ ನೆನೆಸಿಕೊಳ್ಳುತ್ತಾ ಮುಂದುವರೆಯೋಣ!!
ದಾ ರಾ ಬೇಂದ್ರೆ.. ಮೊನ್ನೆ ಅಕ್ಟೋಬರ್ ೨೬ ನೆಯ ತಾರೀಖು ಇವರ ಪುಣ್ಯ ತಿಥಿ!!

ಅಂಬಿಕಾತನಯದತ್ತ ಎಂಬ ಕಾವ್ಯನಾಮದಲ್ಲಿ ಕವಿತೆಗಳನ್ನು ಸೃಷ್ಟಿಸಿದ ಮಹಾನ್ ಕವಿ. ಇವರು ಬಹುಶಹಃ ಕಾವ್ಯದ ಎಲ್ಲಾ ಮಗ್ಗಲುಗಳಲ್ಲೊ ಕೈ ಆಡಿಸಿಬಿಟ್ಟಿದ್ದಾರೆ.. ಪ್ರಕೃತಿ ರಮಣೀಯತೆ (ಮೂಡಲ ಮನೆಯ, ಮುಗಿಲ ಮಾರಿಗೆ, ಶ್ರಾವಣ , ಘಮ ಘಮ, ಹಕ್ಕಿ ಹಾರುತಿದೆ, ಉತ್ತರ ಧ್ರುವದಿಮ್), ರೌದ್ರತೆ (ನೀ ಹಿಂಗ ನೋಡಬ್ಯಾಡ ನನ್ನ), ಅಧ್ಯಾತ್ಮಿಕತೆ ( ಪರಮಾಣು ನಾನು, ಬದುಕು ಮಾಯೆಯ ಮಾಟ, ಕುಣಿಯೋಣ ಬಾರ, ಯುಗ ಯುಗಾದಿ), ಭಾವನಾತ್ಮಕ (ನಾರಿ ನಿನ್ನ ಮಾರೀ ಮ್ಯಾಗ, ನಾನು ಬಡವಿ), ಸಮಾಜಿಕ ಪಿಡುಗು (ಕುರುಡು ಕಾಂಚಾಣ)... ಹೀಗೆ ಪಟ್ಟಿ ಮಾಡ್ತಾ ಹೋದ್ರೆ ವರ್ಷಾನುಗಟ್ಟಲೆ ಇವರ ಕಾವ್ಯ ಗಳನ್ನು ವಿಂಗಡಣೆ ಮಾಡಬೇಕಾಗುತ್ತೆ.. ಯಾಕೆಂದರೆ ಒಂದೊಂದು ಪದ್ಯಗಳಲ್ಲೂ ಸುಮಾರು ಭಾವಗಳು ಅಡಗಿರುತ್ತವೆ...

ಈ ಪದ್ಯ ಬೇಂದ್ರೆ ಯವರಿಗೆ ಙ್ನಾನಪೀಠ ಪ್ರಶಸ್ತಿ ತಂದುಕೊಟ್ಟಂತ ನಾಕು ತಂತಿ ಕವನ ಸಂಕಲದ್ದು!!!

ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಆದಕು ಇದಕು ಎದಕು

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕತ್ತುವಂತ ಮೂರ್ತಿ
ಕಿವಿಗೆ ಮುತ್ತಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೆ ಗಳಿಗೆ ಮೈಯ ತುಮ್ಬ
ನನಗೆ ನವಿರು ಬಟ್ಟೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ
ಕೆನ್ನೆ ತುಂಬಾ ಮುತ್ತು

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು

ಬೆಳಗು!!!

ಮೂಡಲ ಮನೆಯಾ ಮುತ್ತಿನ ನೀರಿನ
ಎರಕಾವ ಹೊಯ್ದಾ,
ನುಣ್ಣ-ನ್ನೆರಕಾವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ,
ದೇವನು ಜಗವೆಲ್ಲಾ ತೋಯ್ದಾ

ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೆ - ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ- ಪಟಪತನೇ ಒಡೆದು

ಎಲೆಗಳ ಮೆಲೆ ಹೂಗಳ ಒಳಗೇ
ಅಮೃತಾದ ಬಿಂದು
ಕಂಡವು ಅಮೃತಾದ ಬಿಂದು
ಯಾರಿರಿಸಿರುವರು ಮುಗಿಲ ಮೇಲಿಂ
ದಿಲ್ಲಿಗೆ ಇದ ತಂದು
ಈಗ ಇಲ್ಲಿಗೇ ತಂದು

ತಂಗಾಳೀಯಾ ಕೈಯೊಳಗಿರಿಸೀ
ಎಸಳಿನಾ ಚವರಿ
ಹೂವಿನ ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ ಮೈಯೆಲ್ಲಾ ಸವರಿ

ಗಿಡಗಂಟಿಯಾ ಕೊರಳೊಳಗಿಂದ
ಹಕ್ಕಿಗಳಾ ಹಾಡು
ಹೊರಟಿತು ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು ಕಾಡಿನಾ ನಾಡು

ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದಿತೀ ದೇಹ
ಸ್ಪರ್ಷ ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹ
ದೇವರ - ದೀ ಮನಸಿನ ಗೇಹಾ

ಅರಿಯದು ಅಳವು ತಿಳಿಯದು ಮನವು
ಕಾಣಾದೋ ಬಣ್ಣಾ
ಕಣ್ಣಿಗೆ ಕಾಣಾದೋ ಬಣ್ಣಾ
ಶಾಂತಿರಸವೇ ಪ್ರೀತಿಯಿಂದಾ
ಮೈದೊರೀತಮ್ಮಾ
ಇದು ಬರಿ ಬೆಳಗಲ್ಲೋ ಅಣ್ಣಾ...

ಸೋಮವಾರ, ಅಕ್ಟೋಬರ್ 30, 2006

ಸುವರ್ಣ ಕನ್ನಡ ರಾಜ್ಯೋತ್ಸವ.. ಕನ್ನಡ ಕವಿಗಳಿಗೆ ನಮನ-೨

ಸುವರ್ಣ ಕನ್ನಡ ರಾಜ್ಯೋತ್ಸವ.. ಕನ್ನಡ ಕವಿಗಳಿಗೆ ನಮನ-೨
ದಿವಂಗತ, ಶ್ರೀಮಾನ್ ಜೆ ಪಿ ರಾಜರತ್ನಂ...
ಈ ಮಹಾನ್ ಕವಿ ಕನ್ನಡ ಜನತೆಗೆ ತಮ್ಮ ನಾಯಿ ಮರಿ ಕವನದಿಂದ ಚಿರ ಪರಿಚಿತ.. ಇವರ ಶಿಶು ಗೀತೆಗಳು ಬಹಳ ಪ್ರಸಿದ್ಧ.. ಉದಾಹರಣೆಗೆ ಬಣ್ಣದ ತಗಡಿನ ತುತ್ತೂರಿ, ನಮ್ಮ ಮನೆಯಲೊಂದು ಸಣ್ಣ ಪಾಪನಿರುವುದು, ರೊಟ್ಟಿ ಅಂಗಡಿ ಕಿಟ್ಟಪ್ಪ.. ನೀವು ಇವುಗಳನ್ನು ಮರೆತಿದ್ದರೆ ದಯವಿಟ್ಟು ಒಂದು ಈ ಶಿಶುಗೀತೆಗಳ ಪುಸ್ತಕವನ್ನು ಕೊಂಡು ಓದಿ.. ಮುಂದೆ ನಿಮ್ಮ ಮಕ್ಕಳಿಗೆ ಕಲಿಸಬಹುದು!!!

ಇವರು ಶಿಶು ಗೀತೆಗಳನ್ನು ಬರೆಯಲು ಸಿಕ್ಕ ಪ್ರೇರಣೆ ಒಂದು ಕುತೂಹಲಕಾರಿ ಕಥೆ. ರಾಜರತ್ನಂ ರವರು ಕನ್ನಡದಲ್ಲಿ ಎಮ್ ಎ (ಆಗಿನ ಕಾಲದಲ್ಲಿ ಕನ್ನಡ ಎಮ್ ಎ ಪದವಿ ಪಡೆಯುವವರ ಸಂಖ್ಯೆ ಬೆರಳಷ್ಟು) ಪದವಿ ಪಡೆದಿದ್ದರೂ ಕೆಲಸವಿಲ್ಲದೆ ಮನೆಯಲ್ಲಿ ಇದ್ದಾಗ, ತಂದೆಯ ಅನಾರೋಗ್ಯದ ಕಾರಣದಿಂದ ಪ್ರಾಥಮಿಕ ಶಾಲೆಯಲ್ಲಿ (೨ ನೆಯ ತರಗತಿಗೆ) ಬದಲಿ ಶಿಕ್ಷಕರಾಗಿ ನೇಮಕಗೊಂಡರಂತೆ... ಎನೂ ಪೂರ್ವೋತ್ತರ ಅಭ್ಯಾಸ ಇಲ್ಲದೆ ಪಾಠ ಮಾಡಲು ತರಗತಿಗೆ ಬಂದಾಗ ೨ ನೆ ತರಗತಿಯ ಪಠ್ಯ ದಲ್ಲಿರುವ ಕ್ಲಿಷ್ಟತೆ (ಗದ್ಯ ಮತ್ತೆ ಪದ್ಯ ಎರಡರಲ್ಲೂ...ರಾಜರತ್ನಂ ರವರಿಗೆ ಅಲ್ಲ.. ೨ ನೆ ತರಗತಿಯ ಮಕ್ಕಳಿಗೆ) ಅರ್ಥವಾಗಿ ತಾವೆ ಶಿಶು ಸಾಹಿತ್ಯಕ್ಕೆ ಕೈ ಹಾಕಿದರಂತೆ....

ಇನ್ನು ಇವರ ಅತ್ಯುತ್ತಮ ಕವನ ಸಂಕಲನಗಲೆಂದರೆ ರತ್ನನ ಪದಗಳು ಮತ್ತು ನಾಗನ ಪದಗಳು.. ಇವು ಕನ್ನಡದ ಅತ್ಯಂತ ಉತ್ತಮ ಕವನಗಳ ಸಾಲಿನಲ್ಲಿ ಸೇರಬೇಕಾದಂತವು.. ಇವುಗಳಲ್ಲಿ ಸಾಮಾನ್ಯ ಜನರ ಬದುಕಿನ ನೋವು ನಲಿವುಗಳನ್ನು ಚಿತ್ರಿಸಿ, ಕಷ್ಟಗಳನ್ನು ಹೇಗೆ ಮರೆಯೋದು, ನೆಮ್ಮದಿ ಬಾಳ್ವೆ ನಡೆಸೋದು ಹೇಗೆ ಎಂಬುದರ ಬಗ್ಗೆ ಸರಳ ಕುಡುಕನ ಮಾತುಗಳಲ್ಲಿ ರಚಿತವಾಗಿವೆ...

ಕೆಲವು ಪದ್ಯಗಳನ್ನು ನೆನೆಯೋಣವೆ??

ನಾಯಿಮರಿ ನಾಯಿಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು..

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ?
ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು

ಈಗ ತುರ್ತು ಕೆಲಸದಿಂದ ಉಳಿದ ಕವನಗಳನ್ನು ನಾಳೆ ಬರೆದು ಕಳಿಸುತ್ತೇನೆ...

ರಾಜರತ್ನಂ ಪದ್ಯಗಳನ್ನು ಮುಂದುವರೆಸಿ

ಕನ್ನಡ ಪದಗೊಳ್

ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ
ತಕ್ಕೊ! ಪದಗೊಳ್ ಬಾಣ!

ಬಗವಂತ ಏನ್ರ ಬೂಮೀಗ್ ಇಳಿದು
ನನ್ ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು
ಬಕ್ತನ್ ಮೇಲ್ ಔನ್ ಕಣ್ಣು!

ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!
ಅಂತ ಔನ್ ಎನಾರ್ ಅಂದ್ರೆ
ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ
ದೇವರ್ ಮಾತ್ಗ್ ಅಡ್ಬಂದ್ರೆ!

ಯೆಂಡ ಬುಟ್ಟೆ ಯೆಡ್ತೀನ್ ಬುಟ್ ಬುಡ್!
ಅಂತ ಔನ್ ಎನಾರ್ ಅಂದ್ರೆ
ಕಳ್ದೋಯ್ತ್ ಅಂತ ಕುಣದಾಡ್ತೀನಿ
ದೊಡ್ದ್ ಒಂದ್ ಕಾಟ! ತೊಂದ್ರೆ!

ಕನ್ನಡ್ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ
ಅಂತ ಔನ್ ಅಂದ್ರೆ- ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ- ಎಲ್ಲ!
ಕನ್ನಡ್ ಸುದ್ದೀಗ್ ಎನ್ರ ಬಂದ್ರೆ
ಮಾನ ಉಳಸಾಕಿಲ್ಲ!

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ್ ಪದವಾಡ್ತೀನಿ
ನನ ಮನಸನ್ನ್ ನೀ ಕಾಣೆ

ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ
ಕನ್ನದ್ ಪದಗೊಳ್ ನುಗ್ಲಿ!

ರತ್ನನ್ ಪರ್ಪಂಚ


ಯೇಳ್ಕೊಳ್ಳಾಕ್ ಒಂದ್ ಊರು
ತಲೇಮೇಗ್ ಒಂದ್ ಸೂರು
ಮಲಗಾಕೆ ಭೂಮ್ತಾಯಿ ಮಂಚ
ಕೈ ಯಿಡದೋಳ್ ಪುಟ್ನಂಜಿ
ನೆಗನೆಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ

ಅಗಲೆಲ್ಲ ಬೆವರ್ ಅರ್ಸಿ
ತಂದಿದ್ರಲ್ ಒಸಿ ಮುರ್ಸಿ
ಸಂಜೇಲಿ ವುಳಿ ಯೆಂಡ ಕೊಂಚ
ಯೀರ್‍ತ ಮೈ ಝುಂ ಅಂದ್ರೆ
ವಾಸ್ನೆ ಘಂ ಘಂ ಅಂದ್ರೆ
ತುಂಭೋಯ್ತು ರತ್ನನ್ ಪ್ರಪಂಚ

ಎನೋ ಕುಸಿಯಾದಾಗ
ಮತ್ತ್ ಎಚ್ಚಿ ಓದಾಗ
ಅಂಗೇನೆ ಪರ್ಪಂಚದ್ ಅಂಚ
ದಾಟ್ಕಂಡಿ ಆರಾಡ್ತಾ
ಕನ್ನಡದಲ್ ಪದವಾಡ್ತ
ಇಗ್ಗೋದು ರ್‍ಅತ್ನನ್ ಪರ್ಪಂಚ

ದುಕ್ಕಿಲ್ಲ ದಾಲಿಲ್ಲ
ನಮಗ್ ಅದರಾಗ್ ಪಾಲಿಲ್ಲ..
ನಾವ್ ಕಂಡಿಲ್ಲ ಆ ತಂಚ ವಂಚ
ನಮ್ಮಸ್ಟಕ್ ನಾವಾಗಿ
ಇದ್ದಿದ್ರಲ್ ಆಯಾಗಿ
ಬಾಳೋದು ರತ್ನನ್ ಪರ್ಪಂಚ

ಬಡತನ ಗಿಡತನ
ಎನಿದ್ರೆನು? ನಡತೇನ
ಚೆಂದಾಗ್ ಇಟ್ಕೊಳ್ಳದೆ ಅಚ್ಛ
ಅಂದ್ಕೊಂಡಿ ಸುಖವಾಗಿ
ಕಸ್ಟಕ್ ನೆಗಮೊಕವಾಗಿ
ನೆಗೆಯೋದೆ ರತ್ನನ್ ಪರ್ಪಂಚ

ದೇವ್ರ್ ಏನ್ರ ಕೊಡಲಣ್ಣ
ಕೊಡದಿದ್ರೆ ಬುಡಲಣ್ಣ
ನಾವೆಲ್ಲ ಔನೀಗೆ ಬಚ್ಛ
ಔನ್ ಆಕಿದ್ ತಾಳ್ದಂಗೆ
ಕಣ್ ಮುಚ್ಕೊಂಡ್ ಯೇಳ್ದಂಗೆ
ಕುಣಿಯಾದೆ ರ್‍ಅತ್ನನ್ ಪರ್ಪಂಚ


ಜೈ ಭುವನೇಶ್ವರಿ...

"ಕನ್ನದದಲ್ಲಿಯೆ ಬಿನ್ನಹಗೈದೊಡೆ ಹರಿ ವರಗಳ ಮಳೆ ಕರೆಯುವನು" --- ಕುವೆಂಪು

ಭಾನುವಾರ, ಅಕ್ಟೋಬರ್ 29, 2006

ಎದೆ ತುಂಬಿ ನೋಡಿದೆವು.....

ಎದೆ ತುಂಬಿ ನೋಡಿದೆವು.....

ಈ ಶೀರ್ಶಿಕೆ ನೋಡಿದಾಕ್ಷಣ ನಿಮಗೆ ಹೊಳೆದಿರಬಹುದು ಈ ಬರವಣಿಗೆಯ ವಿಷಯ.. ಸುಮಾರು ತಿಂಗಳು,ವರ್ಷಗಳಿಂದ ಪ್ರತಿ ಭಾನುವಾರ ರಾತಿ ೯-೦೦ ಕ್ಕೆ ಈ-ಟಿವಿ ಕನ್ನಡ ವಾಹಿನಿಯವರು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಒಂದು ನಮನ ಸಲ್ಲಿಸೋಣವೆ??? ಟಿವಿ ಅಂದ್ರೆ ಒಂದು ಮಹಾ ಬೇಜಾರಿನ ಪೆಟ್ಟಿಗೆ ( ಮೂರ್ಖರ ಪೆಟ್ಟಿಗೆ ಅನ್ನೋದ್ಕಿಂತ ಸೂಕ್ತವಾದ ಹೆಸರು ಅನ್ಸುತ್ತೆ!!!. ಬೇಜಾರ್ ಪೆಟ್ಟಿಗೆ ಅಂದ್ರೆ ಬೇಜಾರ್ ಕಳ್ಯೋದು ಅಂತಲ್ಲ ನೆನಪಿರಲಿ..) ಆಗಿರೋ ಸಂದರ್ಭದಲ್ಲಿ,ಕನ್ನಡ ಜನರನ್ನು ಹಿಡಿದು ಟಿವಿ ಮುಂದೆ ಒಂದೂ ವರೆ ಘಂಟೆ ಕೂರಿಸುವಲ್ಲಿ ಸಫಲರಾಗಿದ್ದಾರೆ ಎಂದರೆ ಅತಿಶಯವಾಗಲಾರದು!!!!

ಅದ್ರಲ್ಲೂ ಕೆಲವು ತಿಂಗಳುಗಳಿಂದ ಪ್ರಸಾರವಾಗುತ್ತಿರುವ ಮಕ್ಕಳ ವಿಶೇಷ ಕಾರ್ಯಕ್ರಮಾನ ಹೊಗಳಲು ಮಾತುಗಳೆ ಇಲ್ಲ.. ಎಲ್ಲ ಪುಟಾಣಿ ಮಕ್ಕಳು.. ಅವ್ರ ಪ್ರತಿಭೆ ನೋಡಿದ್ರೆ ನಂಗೆ ಕೆಲವು ಅಸೂಯೆ ಆಗ್ತಾ ಇತ್ತು.. ನಾನು ಇದ್ದೀನಿ ಕೆಲ್ಸಕ್ಕೆ ಬಾರದವನು/ಅನಾವಶ್ಯಕ ಅನ್ನಿಸ್ತಾ ಇತ್ತು... ಈ ಚಿಕ್ಕ ವಯಸ್ಸಿಗೆ ಎಷ್ಟು ಚೆನ್ನಾಗಿ ಹಾಡ್ತಾರೆ.. ನಿಜ್ವಾಗ್ಲೂ ಎದೆ ತುಂಬಿ ಬಂತು!!!

ಈ ಸಂದರ್ಭದಲ್ಲಿ ಕೊನೆಯ ಹಂತಕ್ಕೆ ತಲುಪಿರುವ ಒಬ್ಬ ಸ್ಪರ್ಧಿಯನ್ನು ನೆನೆಸಿಕೊಳ್ಳಬೇಕು ಅನ್ನಿಸ್ತಾ ಇದೆ.. ಇವಳು ಪ್ರಾರ್ಥನಾ ಶಾಲೆಯಲ್ಲಿ ೩ ನೆ ತರಗತಿಯಲ್ಲಿ ಒದ್ತಾ ಇರೋ ಚಿಕ್ಕ ಹುಡುಗಿ.. ಚಿಕ್ಕ ಹುಡುಗಿ ಅನ್ನೋದ್ಕಿಂತ ಪಾಪು ಅನ್ನಬಹುದು.. ಪ್ರಾಯಶಃ ಎಲ್ಲಾ ಸ್ಪರ್ಧಿಗಳಲ್ಲೂ ಚಿಕ್ಕವಳು ಎನ್ನಬಹುದು. ಆದ್ರೆ ವಯಸ್ಸಿಗೆ ಮೀರಿದ ಪ್ರತಿಭೆ!!!! ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಇವಳಿಗೆ ಹೇಳಿ ಮಾಡಿಸಿದ ಹಾಗಿದೆ!!!! ಎಲ್ಲಾ ಸುತ್ತುಗಳಲ್ಲೂ ಒಳ್ಳೊಳ್ಳೆ ಗೀತೆಗಳನ್ನು ಆಯ್ಕೆ ಮಾಡಿ ಅವುಗಳನ್ನು ಅದ್ಭುತವಾಗಿ ಹಾಡಿ ತೀರ್ಪುಗಾರರ, ವೀಕ್ಷಕರ , ಕಾರ್ಯಕ್ರಮ ಸಂಚಾಲಕ/ನಿರೂಪಕ ಬಾಲ ಸುಬ್ರಮಣ್ಯ ರವರ ಮನ ಸೂರೆಗೊಂಡಿದ್ದಾಳೆ ಎಂದರೆ ತಪ್ಪಾಗಲಾರದು...

ಈ ಪಾಪು ನಂಗೆ ಇಷ್ಟ ಆದ್ದರಿಂದ ವಿಶೆಷವಾಗಿ ಒಂದೆರಡು ಮಾತುಗಳನ್ನು ಬರೆದೆ!! ಆದರೆ ಒಟ್ಟಾಗಿ ಎಲ್ಲಾ ಮಕ್ಕಳೂ ಅದ್ಭುತ... ಒಂದೂ ವರೆ ಘಂಟೆ ನನ್ನಂತೂ ಟಿ ವಿ ಮುಂದೆ ಬೇರೆ ಏನೂ ಕೆಲ್ಸಾನ ಸಮಾನಾಂತರವಾಗಿ (paralelly ಅನ್ನೋದ್ನ ಯಥಾವತ್ತಾಗಿ ಕನ್ನಡಕ್ಕೆ ತಂದಿದ್ದೀನಿ.. ಎಷ್ಟು ಸಮಂಜಸವೋ ಗೊತ್ತಿಲ್ಲ.. ನೀವೆ ವಿಚಾರ ಮಾಡಿ) ಮಾಡೋಕ್ ಬಿಡದೆ ಗಮನ ಇಟ್ಟು ನೋಡೊ ಹಾಗೆ ಮಾಡಿದ ಕಾರ್ಯಕ್ರಮ!!!

ಒಂದೆರಡು ಬಾರಿ ಎಸ್ ಪಿ ಬಿ ಮಕ್ಕಳನ್ನು ಅನುಕರಿಸಲು ಪ್ರಯತ್ನಿಸಿದಾಗ, ಕನ್ನಡವನ್ನು ಅನರ್ಥಗೊಳಿಸಿ ಮಾತಾಡಿದಾಗ ( ಅವರು ಇಷ್ಟು ಕನ್ನಡ ಕಲ್ತಿರೋದ್ಕೆ ನನ್ನ ಪ್ರಣಾಮ.. ನಿಜವಾಗ್ಲೂ ಹೆಮ್ಮೆ ಆಗುತ್ತೆ),ಕೆಲವು ಬೇಡವಾದ ಹಿತವಚನಗಳನ್ನು ಕೊಟ್ಟಾಗ, ಹಂಸಲೇಖ ರವರ ಸಾಹಿತ್ಯವನ್ನು ಅತಿಶಯವಾಗಿ ಹೊಗಳಿದಾಗ ( ವಿಶೇಷವಾಗಿ ಆ ಕಾರಂಜಿ ಕೆರೆ ಹಾಡು ಬಂದಾಗ... ) ಮನಸ್ಸಿನಲ್ಲಿ ಬೇಜಾರು ಸುಳೀತಾ ಇತ್ತು.. ಆದ್ರೆ ಅದು ಕ್ಷಣಿಕ!!! ಮತ್ತೆ ಮಕ್ಕಳು ಹಾಡೋಕ್ಕೆ ಶುರು ಮಾಡ್ಬಿಡ್ತಿದ್ರು!!!!

ಈ ವಾರದ ಕೊನೆ ಹಂತದ ಕಾರ್ಯಕ್ರಮ ಕೂಡ ಬಹಳ ಚೆನ್ನಾಗಿತ್ತು!!! ಈ ಕೊನೆ ಹಂತ ಮುಂದಿನ ವಾರ ಮುಂದುವರೆಯುತ್ತದೆ ಅಂದಾಗ, ಮುಂದಿನ ವಾರವೂ ಸಿಗುವ ರಸದೌತಣವನ್ನು ನೆನೆದು ಅತೀವ ಆನಂದವಾಯ್ತು!!!

ಕನ್ನಡ ಇ-ಟಿವಿ ವಾಹಿನಿಗೂ, ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಿರುವ ಕೆನರಾ ಬ್ಯಾಂಕಿಗೂ, ನಡೆಸಿಕೊಡುತ್ತಿರುವ ಎಸ್ ಪಿ ಬಿ ರವರಿಗೂ, ಕಾರ್ಯಕ್ರಮದ ಸ್ಪರ್ಧಿಗಳಿಗೂ, ವಾದ್ಯ ವೃಂದದವರಿಗೂ, ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡಿರುವ ವೀಕ್ಷಕ ವರ್ಗಕ್ಕೂ ಜಾಹೀರಾತುದಾರರಿಗೂ, ತೀರ್ಪುಗಾರರಾಗಿ ಆಗಮಿಸುತ್ತಿರುವ ಖ್ಯಾತ ಸಂಗೀತಗಾರರಿಗೂ, ಮತ್ತು ತೆರೆಯ ಮರೆಯಲ್ಲಿ ದುಡಿದ ಇತರ ಕಲಾವಿದ/ಜನರಿಗೂ ನನ್ನ ತುಂಬು ಎದೆಯ ಧನ್ಯವಾದಗಳು... ವಂದನೆಗಳು...

ನಿಮ್ಮ ಕಾರ್ಯಕ್ರಮವನ್ನು ಎದೆ ತುಂಬಿ ನೋಡಿದೆನು!!!!!

ಶನಿವಾರ, ಅಕ್ಟೋಬರ್ 28, 2006

ಬೆಂಗಳೂರು ಯಾರಿಗೆ ಸೇರ್‍ಬೇಕು ???

ಬೆಂಗಳೂರು ಯಾರಿಗೆ ಸೇರ್‍ಬೇಕು ???
ಈ ಸ್ವಲ್ಪ ದಿನದ ಹಿಂದೆ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಬಹಳ ವಿಜೃಂಭಣೆಯಿಂದ ನಡೆಯಿತು. ಅದರ ಜೊತೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಒಂದು ಬೃಹತ್ ಸಮಾವೇಶ ಕೂಡ ಜರುಗಿ ಅದರಲ್ಲಿ ಮಹಾರಾಷ್ಟ್ರದ ಸದರಿ ಉಪಮುಖ್ಯಮಂತ್ರಿ ಭಾಗವಹಿಸಿ ಅಸಂಭದ್ಧ ಭಾಷಣ ಕೂಡ ಬಿಗಿದ್ರು.. ಬಿಗ್ದ ಅನ್ನೋದ್ ಸೂಕ್ತ ಅನ್ಸುತ್ತೆ. ಬೆಳಗಾವಿಯಲ್ಲಿ ಮರಾಠಿಗಳು ಇರೋದ್ರಿಂದ ಅದ್ನ ಮಹಾರಾಷ್ಟ್ರಕ್ಕೆ ಸೇರಿಸ್ಬೇಕಂತೆ.. ಎಂತಹ ದುರುದೃಷ್ಟಕರ ಉದ್ದೇಶ!!! ಹಾಗಾದ್ರೆ ನಾವು ಊಟಿ (ಇದರ ಮೂಲ ಹೆಸರು ಉದಕ ಮಂಡಲ.. ಕನ್ನಡದ್ದು) , ಸೊಲ್ಲಾಪುರ, ಕಾಸರಗೋಡು ಇವೆಲ್ಲಾ ಕಡೆಗಳಲ್ಲೂ ಜಗಳ ತೆಗಿಬೋದಲ್ವ!! ಆದರೆ ಕನ್ನಡಿಗರು ಉದಾರರು.. ಸೌಜನ್ಯರು.. ಆದ್ದರಿಂದಲೇ ನಮ್ಮ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಬರೀ ಶೇಕಡ ೨೮!! ಆಶ್ಚರ್ಯ ಆಗ್ಬೋದು.. ಆದ್ರೆ ಕನ್ನಡಿಗರಿಗೆ ದುಖಃ ಆಗೋಲ್ಲಾ.. ನಮ್ಮವರು ಪರೋಪಕಾರಿಗಳು.. ಪರರ ಉಪಕಾರಕ್ಕಾಗಿ ತಮ್ಮ ಭಾಷೇನೆ ಮರೆತು ಇತರ ಭಾಷೆಗಳನ್ನು ಕಲಿಯೊವಷ್ಟು ಉದಾರ ಮನೋಭಾವನೆ.. ಎಷ್ಟೇ ಆಗ್ಲಿ ಉದಾರೀಕರಣ ಯುಗ ಅಲ್ವೇ.. ನಮ್ಮ ಕನ್ನಡಿಗರ ನರ ನಾಡಿಗಳಲ್ಲೂ ಹರೀತಾ ಇದೆ ಉದಾರೀಕರಣ ರಕ್ತ.. ಸರಿ ವಿಷಯದಿಂದ ಪಲ್ಲಟ ಆಗೋದು ಬ್ಯಾಡ..

ನಾ ಹೇಳ್ಬೇಕು ಅಂತಾ ಇದ್ದಿದ್ದು ಇಷ್ಟು.. ಹೀಗೇ ಬೆಳಗಾವಿ ಅಧಿವೇಶನ ನಡಿತಾ ಇರೋ ಸಂಧರ್ಭದಲ್ಲಿ ನಾವು (ನಾನು, ನಿತಿನ, ರವೀಶ, ಶ್ರೀಹರ್ಷ) ಎಂದಿನಂತೆ ಮಧ್ಯಾಹ್ನದ ಭೋಜನ ಮುಗಿಸಿ ರಾಜ್ಯದ ವಿದ್ಯಾಮಾನಗಳ ಬಗ್ಗೆ ಚರ್ಚೆ ಮಾಡ್ತಾ ಕೂತೊ. ಹೀಗೆ ಮಹಾರಾಷ್ಟ್ರ ಬೆಳಗಾವೀನ ನುಂಗೋಕ್ಕೆ ಹೂಡ್ತಾ ಇರೋ ಸಂಚು, ಶಿವರಾಜ್ ಪಾಟೀಲ್ ಒತ್ತಡಕ್ಕೆ ಮಣಿದು ಸರ್ವೋಚ್ಚ ನ್ಯಾಯಾಲಯದಲ್ಲಿ ಮಹಾಜನ್ ವರದಿ ಅನುಷ್ಟಾನಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದ್ದು ಎಲ್ಲಾ ಚರ್ಚೆ ಆಗ್ತಾ ಇತ್ತು.

ಆಗ ಒಂದು ಯೋಚ್ನೆ ಬಂತು ನಿತಿನನ ತಲೇಗೆ.. ಹೀಗೆ ಆಯಾ ಪ್ರದೇಶದ ಭಾಷಾ ಜನಸಾಂದ್ರತೆ (ಒಂದು ಪ್ರದೇಶದಲ್ಲಿ ಒಂದು ಭಾಷೆಯನ್ನು ಬಳ್ಸೋ ಮಂದಿ (ಭಾಷಿಕರು) ಜಾಸ್ತಿ ಇರೋ ಆಧಾರದ ಮೇರೆಗೆ) ಪ್ರಕಾರ ಹೀಗೆ ಕಿತ್ತಾಡ್ತಾ ಹೋದ್ರೆ
ಬೆಂಗ್ಳೂರ್‍ನ ಯಾವ ರಾಜ್ಯಕ್ಕೆ ಸೇರಿಸ್ಬೇಕು??? ಬಸವನಗರದಲ್ಲಿ ಬಹು ಮಂದಿ ಕೇರಳಾದ ಜನ ಇದಾರೆ.. ಅವರಿಗೆ ಬಹು ಮಂದಿಗೆ ಕನ್ನಡ ಬರೋದೆ ಇಲ್ಲ.. ಇದ್ನ ಕೇರಳಕ್ಕೆ ಕೊಟ್ಬಿಡೋಣ?? ಇನು ಶ್ರೀರಾಮಪುರ, ಚಾಮರಾಜ ಪೇಟೆ ಹೀಗೆ ಇಲ್ಲೆಲ್ಲಾ ಬರೀ ತಮಿಳರೇ ಇರೋದು.. ಅದ್ನ ತಮಿಳ್ನಾಡಿಗೆ ಕೊಟ್ಬಿಡೋಣ??

ಒಂದು ಕೈ ಮುಂದೆ ಹೋಗಿ ನಮ್ಮ ನಮ್ಮ ದುಷ್ಟ ರಾಜಕಾರಣಿಗಳು ಶಿವಾಜಿನಗರದಲ್ಲಿ ಬಹುಮಂದಿ ಉರ್ದು ಭಾಷಿಕರೇ ಇರೋದು ಇದ್ನ ಕಾಶ್ಮೀರಕ್ಕೆ ಸೇರ್ಸಿ ಅಂದ್ರೆ??? ಒಂದು ಹೆಜ್ಜೆ ಇನ್ನೂ ಮುಂದೆ ಹೋಗಿ ಪಾಕೀಸ್ತಾನಕ್ಕೆ ಸೇರ್ಸಿ ಅಂದ್ಬಿಟ್ರೆ, ಇಲ್ಲೂ ಒಂದು ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿ ಮಾಡೋ ಅಂತ ನೀಚತನಕ್ಕೆ ನಮ್ಮ ರಾಜಕಾರಣಿಗಳು ಇಳಿಯೋಲ್ಲ ಅನ್ನೋಕ್ಕೆ ಆಗೊಲ್ಲ!!! (ಮೊನ್ನೆ ಉಗ್ರಗಾಮಿಗೆ ಗಲ್ಲು ಶಿಕ್ಷೆ ಕೊಡಬೇಡಿ... ಕ್ಷಮಾದಾನ ಕೊಡಿ.. ಅಂತ ದೇಶಾದಾದ್ಯಂತ ಒಡಕು ಸೃಷ್ಟಿಸಿದ ನೀಚರು ಈ ಹೇಸಿಗೆ ಕೆಲ್ಸಕ್ಕೂ ಕೈ ಹಾಕಲಾರರೆ??).. ಆಮೇಲೆ ಮಹಾತ್ಮ ಗಾಂಧಿ ರಸ್ತೆ ಸುತ್ತ ಮುತ್ತಲ ಪ್ರದೇಶಗಳನ್ನು ಇಂಗ್ಲೆಂಡಿಗೆ ಕೊಟ್ಟು ನಾವು ಕನ್ನಡಿಗರು ಎಲ್ಲಿ ಹೋಗುವ???

ಬೆಳಗಾವಿಯಲ್ಲಿ ಮರಾಠಿಗರಿಗೇನು ಮರಾಠಿ ಶಾಲೇಗಳ ಕೊರತೆ ಇಲ್ಲ.. ಜನ ಸಾಮಾನ್ಯರಿಗೆ ಅಲ್ಲಿ ಕನ್ನಡ ಮರಾಠಿ ಎರಡೂ ಒಂದೆ.. ಬೇರೆ ಬೇರೆ ಅಲ್ಲ.. ಎಲ್ಲರಿಗೂ ಸಾಮಾನ್ಯವಾಗಿ ಎರಡೂ ಭಾಷೆಗಳಲ್ಲಿ ಪ್ರಾವೀಣ್ಯತೆ ಇರುತ್ತೆ.. ಕರ್ನಾಟಕದಲ್ಲಿ ಅವರಿಗೆ ಎನೂ ಕೊರತೆ ಇಲ್ಲ... ಇನ್ನು ಕೊರತೆ ಯಾರೀಗ್ ಇರೋದು?? ಮಹಾರಾಷ್ಟ್ರದ ರಾಜಕಾರಣಿಗಳಿಗೆ!! ಮಹಾರಾಷ್ಟ್ರ ಏಕೀಕರಣ ಸಮಿತಿ ಅಂತ ಮಾಡ್ಕೋಂಡು ಧಾಂಧಲೆ ಎಬ್ಬಿಸ್ತಾ ಇರೋ ತಲೆ ಹಿಡುಕರಿಗೆ!!

ಇದಕ್ಕೆ ಪರಿಹಾರ ಏನು??? ಒಂದು ಬಾರಿ ಭಾಷಾವಾರು ಪ್ರಾಂತ್ಯ ರಚನೆ ಆದಮೇಲೆ ಅದನ್ನ ಎಲ್ಲಾರು ಒಪ್ಪಿಕೊಳ್ಳಬೇಕು.. ಅದನ್ನ ರಾಜಾಕೀಯ ದುರುದ್ದೇಶಕ್ಕೆ ಬಳಸೋದು ಸಲ್ಲ... ಯಾರು ಎಷ್ಟೆ ಅರಚಿ ಕಿರುಚಿದರೂ ಬೆಳಗಾವಿ ನಮ್ಮದು ಎಂಬ ಪ್ರತ್ಯುತ್ತರವನ್ನು ಸಮರ್ಪಕವಾಗಿ ಕೊಡ್ಬೇಕು!!! ಯಾವ ಏನ್ ತಿಪ್ಪೂರ್ ಲಾಗ ಹೊಡೆದ್ರೂ ಮಹಾಜನ್ ವರದಿಯೇ ಅಂತಿಮ (ಈ ಆಯೋಗ ಎರಡೂ ರಾಜ್ಯಗಳ ಒಪ್ಪಿಗೆಯಿಂದ ರಚಿಸಲ್ಪಟ್ಟಿದ್ದು ಎಂಬುದು ಪ್ರಮುಖ ಅಂಶ) ಅನ್ನೋ ನಿಳುವಳಿ ಯನ್ನು ತಾಳಿ ಬೆಳಗಾವಿಯಲ್ಲಿರೋ ದುಷ್ಟ ಶಕ್ತಿಗಳನ್ನು ಬಗ್ಗು ಬಡಿಯಲು ಶ್ರಮ ಪಡಬೇಕು.. ಕನ್ನಡಿಗರೆಲ್ಲಾ ಒಂದಾಗಿ ಭಾಷಾಭಿಮಾನ ಪ್ರದರ್ಶಿಸಬೇಕು.. ಈ ನಿಟ್ಟಿನಲ್ಲಿ ಇತ್ತೀಚಿಗೆ ನಡೆದ ಯಶಸ್ವಿ ಬಂದ್ ಒಂದು ಉದಾಹರಣೆ. ಅದರಿಂದ ಸ್ವಲ್ಪ ನಷ್ಟ ಆಗಿರ್‍ಬೋದು.. ಆದರೆ ಭಾಷೆ, ರಾಜ್ಯ ಬೆಳವಣಿಗೆ ಆ ನಷ್ಟ ತೃಣ ಸಮಾನ!!! ನಾವೆಲ್ಲ ಒಗ್ಗಟ್ಟಾಗಿ ನಿಲ್ಲಬಲ್ಲೆವು ಅಂತ ಸ್ಪಷ್ಟ ಸಂದೇಶ ಕೊಟ್ಟಿದ್ದೀವಿ ಇಡೀ ದೇಶಕ್ಕೆ....

ಜೈ ಕರ್ನಾಟಕ ಮಾತೆ!!!!

ಶುಕ್ರವಾರ, ಅಕ್ಟೋಬರ್ 27, 2006

ಸುವರ್ಣ ಕನ್ನಡ ರಾಜ್ಯೋತ್ಸವ

ಗೆಳೆಯರೆ,

ಸುವರ್ಣ ಕನ್ನಡ ರಾಜ್ಯೋತ್ಸವ ಸನ್ನಿಹಿತವಾಗ್ತಾ ಇರೋ ಅಂತ ಸಂದರ್ಭದಲ್ಲಿ ನಮ್ಮ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ಕೊಟ್ಟ ನಮ್ಮ ಸಾಹಿತಿಗಳನ್ನು ನೆನೆಯಲು ಒಂದು ಸುವರ್ಣಾವಕಾಶ.

ಈ ನಿಟ್ಟಿನಲ್ಲಿ ದಿನವೂ ಒಬ್ಬ ಕವಿಯ ಬಗ್ಗೆ ನೆನೆಯೋಣ.. ಅವರ ಕೆಲವು ಕಾವ್ಯಗಳನ್ನು ಮೆಲುಕು ಹಾಕೋಣ..

ಕುವೆಂಪು : ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

ಇವರ ಅತ್ಯುತ್ತಮ ಕೃತಿಗಳು ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡತಿ. ಒಂದು ಬಾರಿ ಇವುಗಳನ್ನು ಓದಿ. ನೀವು ಕುವೆಂಪೂರವರ ಅಭಿಮಾನಿಗಳಾಗುವುದರಲ್ಲಿ ಸಂಶಯವೇ ಇಲ್ಲ.ಈ ಕೃತಿಗಳು ನಿಮ್ಮನ್ನು ಎಲ್ಲಾ ಭಾವಗಳಿಗೂ ಕೊಂಡೊಯ್ಯುವುದಲ್ಲದೆ ಸಮಾಜದ ಮೌಢ್ಯಗಳನ್ನು ಎತ್ತಿ ತೋರಿಸುತ್ತವೆ.

ಇವರ ಕೃತಿಗಳ ಬಗ್ಗೆ ಹೇಳಲು ನಮ್ಮಂತ ಸಾಮಾನ್ಯರಿಂದ ಸಾಧ್ಯವಾಗದ ಮಾತು. ಆದರೂ ಅವರನ್ನು ನೆನೆಸಿಕೊಳ್ಳಲು ಈ ಎರಡು ಅತ್ಯುತ್ತಮ ಕಾವ್ಯಗಳನ್ನು ನೋಡುವ..

ಅನಿಕೇತನ

ಓ ನನ್ನ ಚೇತನ
ಆಗು ನೀ ಅನಿಕೇತನ

ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ

ಓ ನನ್ನ ಚೇತನ....

ಎಲ್ಲಿಯು ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ಅನಂತವಾಗಿರು

ಓ ನನ್ನ ಚೆತನ....

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯ ಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು

ಓ ನನ್ನ ಚೇತನ
ಆಗು ನೀ ಅನಿಕೇತನ

ನಾಡಗೀತೆ
ಜಯ ಹೇ ಕರ್ನಾಟಕ ಮಾತೆ!

ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ್ ಸುಂದರ ನದಿವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ ,
ಜಯ ಹೇ ಕರ್ನಾಟಕ ಮಾತೆ!

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ.
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ.
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರರಿಹ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ!
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ;
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗ.
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ.
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ!
ಕನ್ನಡ ನುಡಿ ಕುಣಿದಾಡುವ ಗೇಹ!
ಕನ್ನಡ ತಾಯಿಯ ಮಕ್ಕಳ ದೇಹ!
ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ್ ಸುಂದರ ನದಿವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!

ಈಗ ಕನ್ನಡ ಕರಣನ ಸರದಿ

ನನ್ನ ಈ ಬ್ಲಾಗು ಸ್ವಲ್ಪ ಚಟುವಟಿಕೆಯಿಂದ ಇರಲಿ ಅಂತ ಈ ಹಿಂದೆ ಬರೆದಿದ್ದನ್ನೆಲ್ಲಾ ಈಗ ಪ್ರಕಟಿಸ್ತಾ ಇದ್ದೀನಿ...

ಈಗ ಕನ್ನಡ ಕರಣನ ಸರದಿ

ಈ ಶೀರ್ಷಿಕೆ ಸ್ವಲ್ಪ ವಿಚಿತ್ರವಾಗಿ ಕಾಣಬಹುದು!!! ಆದರೆ ನೀವು ಇತ್ತೀಚಿಗೆ ಬಿಡುಗಡೆಯಾದ ಕನ್ನಡ ಚಲನಚಿತ್ರ ಐಶ್ವರ್ಯ ನೋಡಿದ್ದರೆ ನಿಮಗೆ ಸುಳಿವು ಸಿಕ್ಕಿರುತ್ತೆ. ಹೌದು ಇದು ನಮ್ಮ ಕನ್ನಡದ ಕರಣ್ ಜೋಹರ್ ಎಂದೇ ಕರೆಯಬಹುದಾದ ಇಂದ್ರಜಿತ್ ಲಂಕೇಶರ(ನಿರ್ದೇಶನದ) ಮೂರನೆ ಸಾಹಸ 'ಐಶ್ವರ್ಯ' ಚಿತ್ರದ ವಿಮರ್ಶೆ!!!

ಈ ಚಿತ್ರದಲ್ಲಿ ಬಹಳ ಕಡೆ Itch gaurd ಜಾಹೀರಾತಿನ ಬಳಕೆ ಆಗಿದೆ. ಬಹುಶಃ ನಿರ್ದೇಶಕರು ಮೊದಲೇ ಊಹೆ ಮಾಡಿದ ಹಾಗಿದೆ!! ಈ ಚಿತ್ರ ನೋಡಿ ಜನ ಮೈ ಕೈ ಪರಚಿಕೊಳ್ಳೋದ್ ಅಂತು ನಿಜಾ.. ಯಾಕೆ ಇದಕ್ಕೆ ಪೂರಕವಾದ ಒಂದು ಉತ್ಪನ್ನಕ್ಕೆ ಜಾಹೀರಾತು ಪ್ರಚಾರಕ ಆಗ್ಬಾರ್‍ದು ಅಂತಾ?? ಬಹಳ ನಿಜ ನಿರ್ದೇಶಕರೇ.. ನಿಮ್ಮ ಊಹೆ ಸಂಪೂರ್ಣ ನಿಜ.. ನಾವೆಲ್ಲಾ ಮೈ ಕೈ ಪರ್ಚ್ಕೊಂಡಿದ್ದಂತೂ ಸತ್ಯ!! ನಮ್ಗೆ ಮುಂಚಿತವಾಗಿ ಗೊತ್ತಿರ್‍ಲಿಲ್ಲ..Itch gaurd ತಗೊಂಡ್ ಹೋಗ್ಬೇಕು ಅಂತ.. ಇನ್ನು ಮುಂದೆ ಹೋಗೋರ್‍ಗೆ ಸಹಾಯ ಆಗ್ಲಿ ಅನ್ನೊ ಉದ್ದೇಶವೇ ಈ ವಿಮರ್ಶೆ.

ಇನ್ನು ಸಂಭಾಶಣೆಯಂತೂ ಬಹಳ ಹಳಸು ಮತ್ತೆ ಎಳಸು.. ಹಳಸು ಯಾಕಂದ್ರೆ ಬಹಳ ಚಿತ್ರ ವಿಮರ್ಶೆಗಳಲ್ಲಿ ಬರ್‍ದಿದಾರೆ.. (ಉದಾ: ಪ್ರಜಾವಾಣಿ) ಬಹುಶಃ ಎಲ್ಲ ಹಾಸ್ಯ ದೃಶ್ಯಗಳೂ/ಸಂಭಾಷಣೆ ತಮಿಳು ತೆಲುಗು ಚಿತ್ರಗಳಿಂದ(ಉದಾ: ಗಝನಿ.. ಇದೂ ಕೂಡ ಆಂಗ್ಲ ಚಲನಚಿತ್ರ memento ದ ನಕಲು ಅನ್ನೋದ್ನ ಮರೀಬಾರ್‍ದು) ಯಥಾವತ್ತಾಗಿ ಎತ್ತಿರೋದಂತೆ!!! ಇನ್ನು ಎಳಸು ಯಾಕಂದ್ರೆ ಯಾವ ಸಂಭಾಷಣೆಯೂ ಮನಸ್ಸಿಗೆ ಮುದ ಕೊಡೊಲ್ಲಾ.. ಬದಲಿಗೆ ಬರೀ ಹಿಂಸೆ(ಮನಸ್ಸಿಗೆ ಹಿಂಸೆ)!!! ಉಪೇಂದ್ರನ ನಟನೆ ಮತ್ತೆ ಸಂಭಾಷಣೆ ಎಣ್ಣೆ ಸೀಗೆಕಾಯಿ...

ಇನ್ನು ಬಹಳ ಹೊಲಸು ಎಂದರೆ ಓಮ್ ಪ್ರಕಾಶ್ ರಾವ್ ರವರ ನಟನೆ.. ಕೆರ್‍ಕೊಂಡಿದ್ದೆಲ್ಲಾ ಗಾಯ ಆಗೋದು ಈ ಮಹಾಶಯ ಚಿತ್ರದಲ್ಲಿ ಬರೋ ೧೫ ನಿಮಿಷಗಳ ಸಮಯದಲ್ಲಿ.. ಬಹಳ ಅತಿರೇಕದ ನಟನೆ.. ಯಾವಾಗ ಕಣ್ಮರೆ(ಚಿತ್ರದಿಂದ) ಆಗ್ತಾನೋ ಅಂತ ಜನ ಕಾಯ್ತಾ ಇರ್‍ತಾರೆ.. ಓಮ್ ಪ್ರಕಾಶ್ ರಾವ್ ರವರೆ ಎಲ್ಲಾ ನಿರ್ದೆಶಕನೂ ನಟ ಆಗೋಕ್ ಆಗೊಲ್ಲಾ... ಎಲ್ಲರೂ ಉಪ್ಪಿ ಆಗೋಕ್ ಆಗೊಲ್ಲಾ...

ಶರಣ್ ಬರ್‍ತಾರೆ.. ಹೊಗ್ತಾರೆ... ಯಾರೂ ನಗೋಲ್ಲಾ.. ಅಂತಾ ಉತ್ತಮ ಹಾಸ್ಯನಟನನ್ನು ಇಷ್ಟು ಕೆಟ್ಟದಾಗಿ ಬಳಸಿಕೊಂಡಿರೋದೆ ಹಾಸ್ಯಾಸ್ಪದ..

ಇನ್ನು ದೊಡ್ಡಣ್ಣ ಮತ್ತೆ ಕೋಮಲ್ ಕೂಡ ಇದಕ್ಕೆ ಹೊರತಲ್ಲ.. ಆದರೆ ತಕ್ಕ ಮಟ್ಟಿಗೆ ಪರವಾಗಿಲ್ಲ ಎನ್ನಬಹುದು..

ಡೈಸಿ ಬೊಪಣ್ಣಂದೂ ಅದೇ ಕಥೆ... ಹಿಂಸೆ!!!

ಮೊದಲೆ ಹೇಳ್ದೆ ಉಪ್ಪಿ ಬಗ್ಗೆ.. ಆದ್ದರಿಂದ ಉಪ್ಪಿ ಸಾಧಾರಣ ಅನ್ನಬಹುದು...

ಇನ್ನು ಸಾಧುಕೋಕಿಲ ಒಂದತ್ತು ನಿಮಿಷ ಕಚಗುಳಿ ಕೊಡುತ್ತಾರೆ ಎನ್ನುವುದು ಸಮಾಧಾನದ ವಿಷಯ..

ನಾವು ಹೊಗಿದ್ದ್ ಬೇರೆ ಆ ಕಿತ್ತೋದ್ ಚಿತ್ರ ಮಂದಿರ ಸಾಗರ್!!!! ಅಲ್ಲಿ ಕಾಲು ಅಲ್ಲಾಡಿಸ್ದ್ರೆ ಸಾಕು ಎದ್ರೂಗ್ ಕೂತ ಮಹರಾಯ ಚಿತ್ರ ನೊಡೋದ್ ಬಿಟ್ಟು ನನ್ನ ಕಾಲೇ ನೋಡ್ಕೋಂಡ್ ಕೂತ್ ಬಿಡ್ತಿದ್ದ.. ನಂಗೆ ಕೆರ್‍ಕೊಳ್ಳೊಕ್ಕೂ ಆಗ್ದು ಬಿಡೊಕ್ಕೂ ಆಗ್ದು!!! ಸರಿ ಸರಿ ಇದು ಚಿತ್ರ ಮಂದಿರದ ವಿಮರ್ಶೆ ಆಗೋದು ಬೇಡ.. ಇದ್ನ ಇಷ್ಟೊಂದು ದುಖದಿಂದ ಯಾಕ್ ಹೆಳ್ತಾ ಇದ್ದೀನಿ ಅಂದ್ರೆ ಈ ಮಹಾ ನಿರ್ದೇಶಕನ ಎಲ್ಲ ಕೆಟ್ಟ ಚಿತ್ರಗಳನ್ನೂ (ತುಂಟಾಟ, ಮೊನಾಲೀಸಾ, ಐಶ್ವರ್ಯ) ಈ ಕೆಟ್ಟ ಚಿತ್ರ ಮಂದಿರದಲ್ಲೇ ದುಡ್ಡು ಕೊಟ್ಟು ನೋಡಿದ್ದು.. :-( ಆ ದುಖಃ ತಡ್ಕೋಳ್ಳಾಕ್ ಆಗ್ದೆ ಹೇಳ್ಬಿಟ್ಟೆ..

ಇನ್ನು ಮನಸ್ಸಿಗೆ ಮುದ ಕೊಡುವ ಸಂಗತಿ ಚಿತ್ರದಲ್ಲಿ ಅಂದ್ರೆ ೩ ಹಾಡುಗಳು.. ಕಣ್ ಮನಗಳನ್ನು ತಣಿಸುತ್ತವೆ.. ಇವು ಇಲ್ಲಿ ಸ್ವಾಭಾವಿಕ Itch gaurd ಎಂದೇ ಹೇಳಬಹುದು.. ಚಲನಚಿತ್ರದ ಆಕರ್ಷಣೆ ಈ ಮೂರು ಹಾಡುಗಳು ಮತ್ತು ದೀಪಿಕಾ ಪಡುಕೋಣೆ ಎಂಬ ಬೆಡಗಿಯ ಅದ್ಭುತ ಸೌಂದರ್ಯ!!
ಕುನಾಲ್ ಗಾಂಜಾವಾಲ್ ರವರ ಗಾಯನ ಬಹಳ ಚೆನ್ನಾಗಿದೆ.
ಹಾಡುಗಳೆಂದರೆ ಹುಡುಗಿ ಹುಡುಗಿ.. ಇದು ದೀಪಿಕಾಳ ಮುಖ ಸೌಂದರ್ಯಕ್ಕೆ ಮೀಸಲಾದರೆ ಇನ್ನೆರಡು ಹಾಡುಗಳು (ಮನ್ಮಥಾ,ಐಶ್ವರ್ಯ ಐಶ್ವರ್ಯ) ಅಂಗ ಸೌಂದರ್ಯವನ್ನು ಮೆರೆಯುತ್ತವೆ.. ಇವುಗಳನ್ನು ವಿವರಿಸೋಕ್ಕೆ ಪುಟಗಳೆ ಬೇಕು.. ನೀವೆ ಕಣ್ಣಾರೆ ಸವಿಯುವುದು ವಾಸಿ.. :D

ಈ 'ಪದ ಜೋಡನೆ' (ಈಗಿನ ಹಾಡುಗಳಿಗೆ ಇನ್ನೊಂದು ಹೆಸರು) ಬಹಳ ಕೆಟ್ಟದಾಗಿದೆ.. 'ಪ್ರೀತೀನ ಪ್ರೀತಿಯಿಂದ ಪ್ರೀತ್ಸೆ'.. ಪ್ರೀತಿ ನಾಮಪದ/ಗುಣಾತ್ಮಕ/ಕ್ರಿಯಾಪದಗಳಾಗಿ ಬಳಕೆಯಾಗಿದೆ.. ಇದನ್ನ ಬರೆದವ ಇದ್ನೆ ಸೃಜನಶೀಲತೆ ಅಂದ್ಕೊಂಡ್ ಬಿಟ್ಟಿದಾನೇನೊ?? ಇದು ಬಹಳ ವಿಷಾದಕರ ಸಂಗತಿ.. ಈ ರೀತಿ ಕನ್ನಡವನ್ನು ಕನ್ನಡ ಚಿತ್ರಗಳಲ್ಲೆ ಕೊಲ್ತಾ ಇರೋದು :-(

ಪಡುಕೋಣೆಯ ನಟನೆ ಪರವಾಗಿಲ್ಲ.. ಮೊದಲನೆ ಚಿತ್ರವಾದರೂ ಅಬ್ಬರದ ನಟನೆ ಇಲ್ಲಾ.. ಇನ್ನೂ ಸುಧಾರಿಸಿಕೊಳ್ಳಬಹುದಿತ್ತು.. ಆದರೆ ಜನರಿಗೆ ಬೇಕಾದ್ದನ್ನು ಅವರು ಕೊಟ್ಟಿದ್ದಾರೆ.. ಅವರು ತಮ್ಮ ಕಾರ್ಯದಲ್ಲಿ ಸಫಲಗೊಂಡಿದ್ದಾರೆ ಎನ್ನಬಹುದು..

ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ಮೂಡಿಸಿದ್ದ ಛಾಪನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಇದ್ದಾರೆ ಅನ್ನೋದಕ್ಕೆ ಈ ಚಿತ್ರ ಇನ್ನೊಂದು ನಿದರ್ಶನ...

ಜೇಬಲ್ಲಿ ಜಾಸ್ತಿ ದುಡ್ಡು ಕಡೀತಾ ಇದ್ರ್‍ಎ... ಇಂದ್ರಜಿತ್ ಕೈಲೇ ಕೆರ್‍ಸ್ಕೋಬೇಕು ಅನ್ನೋ ಮನಸ್ಸಿದ್ದರೆ ನೋಡಬಹಿದಾದ ಚಿತ್ರ...

ನನ್ನ ದುಖಃ ನಾ ತೋಡ್ಕೊಂಡೆ.. ನೋಡೋದು ಬಿಡೋದು ನಿಮಗೆ ಬಿಟ್ಟಿದ್ದು...

ಕಿರು ಸೂಚನೆ: ಈ ಮೇಲಿನದ್ದೆಲ್ಲಾ ನನ್ನ ವ್ಯಯಕ್ತಿಕ ಅಭಿಪ್ರಾಯಗಳಾಗಿರುತ್ತವೆ. ನೀವು ಕರಣ್, ಇಂದ್ರಜಿತ್, ಉಪ್ಪಿಯವರ ಅಭಿಮಾನಿಗಳಾಗಿದ್ದು ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ..

ಗುರುಪ್ರಸಾದ್ ಡಿ ಎನ್