ಸೋಮವಾರ, ಆಗಸ್ಟ್ 24, 2009

ಕಂತನಹಳ್ಳಿ ಗೃಹ ವಿಶ್ರಾಂತಿಧಾಮ (ಹೋಮ್ ಸ್ಟೇ)

ನೀವು ಮಲೆನಾಡಿನ ಪ್ರಕೃತಿ ಸೊಬಗಿನಲ್ಲಿ ವಿಶ್ರಾಂತಿಯನ್ನು ಪಡೆಯಲು ಬಯಸುತ್ತಿರುವಿರಾದರೆ, ಇಲ್ಲೊಂದು ವಿಶ್ರಾಂತಿಧಾಮವಿದೆ. ನಿಮಗೆ ಮಲೆನಾಡಿನ ಮನೆಯ ವಾತಾವರಣ, ಅತ್ಮೀಯ ಆತಿಥ್ಯ, ಮಲೆನಾಡಿನ ಊಟ - ಅದೂ ಅಡಿಗೆ ಮನೆಯಲ್ಲೇ, ಇವುಗಳೆಲ್ಲಾ ನಿಮ್ಮನ್ನು ಆಕರ್ಷಿಸುವುದಾದರೆ ಶಿವಮೊಗ್ಗದ ಸೊರಬದಿಂದ ಸುಮಾರು ೧೦ ಕಿ ಮೀ ದೂರದಲ್ಲಿರುವ ಕಂತನಹಳ್ಳಿ ಗೃಹ ವಿಶ್ರಾಂತಿಧಾಮಕ್ಕೆ ಒಮ್ಮೆ ಹೋಗಿ ವಿಶ್ರಮಿಸಬಹುದು.

ಸುಮಾರು ೪೦ ಎಕರೆ ವಿಶಾಲ ಪ್ರದೇಶದಲ್ಲಿ ವ್ಯಸಾಯವನ್ನು ಮಾಡಿಕೊಂಡಿರುವ ’ಶ್ರೀನಿವಾಸ ಮೂರ್ತಿ (ಗನು)’ ಮತ್ತು ’ವಿನೂತನ’ ದಂಪತಿಗಳು ಬಂದು ನೆಲೆಸುವವರಿಗೆ ಅಚ್ಚುಕಟ್ಟಾದ ಅತಿಥಿ ಗೃಹಗಳನ್ನು ನಿರ್ಮಿಸಿದ್ದಾರೆ. ಹೊಸ ವರ್ಷದ ಆಚರಣೆಯ ಸಮಯದಲ್ಲಿ ಜನ ಹೆಚ್ಚಿದಾಗ ತಮ್ಮ ಮನೆಯ ಉಪ್ಪರಿಗೆಯ ಮೇಲೂ ಮಲಗಲು ಅವಕಾಶ ಕೊಡುತ್ತಾರಂತೆ. ಮುಂದೆ ಓದಿ

ಸೋಮವಾರ, ಆಗಸ್ಟ್ 17, 2009

ಸಮರಸ ಸಂಪಾದಕೀಯದಲ್ಲಿ, ಕನ್ನಡ ಮಾಧ್ಯಮ x ಆಂಗ್ಲ ಮಾಧ್ಯಮ -- ಒಂದು ಚಿಂತನೆ..

ಇತ್ತೀಚೆಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ನೀಡಬೇಕೆಂಬ ಕರ್ನಾಟಕ ಸರ್ಕಾರದ ಧೋರಣೆಗೆ ನ್ಯಾಯಾಲಯಗಳು ತಡೆಒಡ್ಡಿರುವ ಹಿನ್ನಲೆಯಲ್ಲಿ ಈ ಚರ್ಚೆ ಹೆಚ್ಚಿನ ಮಹತ್ವ ಮತ್ತು ತೀಕ್ಷಣತೆಯನ್ನು ಪಡೆಯುತ್ತಿದೆ. ಪರ ಮತ್ತು ವಿರೋಧದ ಎರಡು ಗುಂಪುಗಳಾಗಿ ತಮ್ಮ ನಿಲುವಿನ ಉತ್ತಮ ಅಂಶಗಳನ್ನು ಮತ್ತು ವಿರೋಧರ ನಿಲುವಿನ ತಪ್ಪು ಅಂಶಗಳನ್ನು ಎತ್ತಿ ಹಿಡಿಯುತ್ತಾ ಚರ್ಚಿಸುತ್ತಾ ಬಂದಿದ್ದಾರೆ. ಈ ವಿಷಯದ ಮೇಲೆ ಚಿಂತನೆ ನಡೆಸಲು ಸಮರಸವೂ ಒಂದು ಪ್ರಯತ್ನ ಮಾಡುತ್ತಿದೆ.

ಈ ಗೊಂದಲ ಪ್ರಾರಂಭವಾದದ್ದು ಯಾಕೆ?
ಕೆಲವು ಶಾಲೆಗಳು ಕನ್ನಡ ಮಾಧ್ಯಮವನ್ನು ಪ್ರಾರಂಭಿಸುವುದಾಗಿ, ಸರ್ಕಾರದ ಅನುಮತಿ ಪಡೆದು ಆಂಗ್ಲ ಮಾಧ್ಯಮದ ಶಾಲೆಗಳನ್ನು ನಡೆಸುತ್ತಿರುವ ಅಂಶ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಸರ್ಕಾರ ಶಾಲೆಗಳನ್ನು ಮುಚ್ಚುವುದಾಗಿ ಗುಡುಗುತ್ತದೆ. ಹೌದು, ಕಾನೂನಿಗೆ ತಪ್ಪಿ ನಡೆದುಕೊಳ್ಳುವುದು ನ್ಯಾಯ. ಯಾವ ಮಾಧ್ಯಮಕ್ಕೆ ಅನುಮತಿ ಪಡೆದಿದ್ದರೋ ಅದೇ ಮಾಧ್ಯಮದಲ್ಲಿ ಶಾಲೆ ನಡೆಸಬೇಕಿತ್ತು. ಈ ಅಂಶ ಒಂದು ಹೆಜ್ಜೆ ಮುಂದೆ ಹೋಗಿ, ಸರ್ಕಾರ ಸಂಪೂರ್ಣ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ಕಡ್ಡಾಯ ಎಂಬ ಕಾನೂನು ತರಲು ಯೋಚಿಸುತ್ತದೆ. ಇತ್ತ ಕಡೆ ತಪ್ಪು ಮಾಡಿರುವ ಈ ಖಾಸಗಿ ಶಾಲೆಗಳು ಸರ್ಕಾರವನ್ನು ನ್ಯಾಯಾಲಯಕ್ಕೆ ಎಳೆದು ತರುತ್ತವೆ. ಅನುಮತಿಗೆ ವಿರೋಧವಾಗಿ ಕಾನೂನು ಬಾಹಿರವಾಗಿ ನಡೆಸುತ್ತಿರುವ ಶಾಲೆಗಳನ್ನು ನಿಷೇಧಿಸುವ ವಿಷಯಕ್ಕೆ ಸೀಮಿತವಾಗಬೇಕಾಗಿದ್ದ ವಾದ, ಇಡೀ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಆಗಬೇಕೆ ಬೇಡವೇ ಎಂಬ ವಾದಕ್ಕೆ ತಿರುಗುತ್ತದೆ. ಮೂಲ ತೊಂದರೆ ಕಾಣೆಯಾಗಿರುತ್ತದೆ. ಮುಂದೆ ಓದಿ

ಗುರುವಾರ, ಆಗಸ್ಟ್ 13, 2009

ಅಕ್ಕ ಪಕ್ಕದವರು ಕಾಣೆಯಾಗಿಬಿಟ್ಟರುಫೋಟೋ ಕೃಪೆ : http://blogtown.portlandmercury.com


ಶ್ರೇಷ್ಠ ಗೊತ್ತಲ್ಲ? ಅವನ ಶಾಲೆಯವರು ಮುಂಜಾಗ್ರತಾ ಕ್ರಮವಾಗಿ, ಹಂದಿ ಜ್ವರ ಹರಡದಂತೆ ತಡೆಯುವ ಮುಖವಾಡವನ್ನು ಧರಿಸಿ ಬರಲು ಹೇಳಿದ್ದರು. ನಾನು ಏನೂ ಬೇಡ ಪುಟ್ಟ, ಅದು ಜ್ವರ ಬಂದಿರೋರ್ಗೆ ಹೇಳಿರ್ತಾರೆ ಅಷ್ಟೆ, ಎಲ್ಲರಿಗೂ ಅಲ್ಲ ಎಂದು ಎಷ್ಟು ಗೋಗರೆದರೂ ಬಿಡಲೇ ಇಲ್ಲ. ಕೊನೆಗೂ ಔಷಧಿ ಅಂಗಡಿಗೆ ಹೋಗಲೇ ಬೇಕಾಯಿತು. ಅಲ್ಲಿ ತುಂಡರಿಸಿದಂತೆ ಹೇಳೇಬಿಟ್ಟ, ಇಲ್ಲಾ ಸಾರ್ .. ಎಲ್ಲೂ ಸಿಕ್ತಾ ಇಲ್ಲ.. ಸಿಕ್ಕಾಪಟ್ಟೆ ಬೇಡಿಕೆ ಇದೆ. ಮುಂದಿನ ಶಾಲೆಗೆ ಹೋಗಿ ಬಂದು ಪಟ್ಟು ಹಿಡಿದೇ ಬಿಟ್ಟ, ಬೇಕೇ ಬೇಕು, ಎಲ್ಲಾ ಮಕ್ಕಳು ಅದನ್ನು ಹಾಕ್ಕೊಂಡು ಬಂದಿದ್ರು ಅಂತ. ನಾನು ಸ್ವಲ್ಪ ಕಷ್ಟ ಪಟ್ಟು ಸುತ್ತ ಮುತ್ತ ಸುತ್ತಾಡಿ ಕೊನೆಗೂ ಒಂದು ಔಷಧಾಲಯಕ್ಕೆ ಹೋಗಿ

ಗುರು "ಸ್ವೈನ್ ಫ್ಳೂ ಮಾಸ್ಕ್" ಇದ್ಯಾ ಅಂದೆ?
ಅವ ಇದೆ ಸಾರ್... ೨೫೦ ರುಪಾಯಿ ಅಂದ.. ಸದ್ಯ ದುಡ್ಡು ತೆಗೆದುಕೊಂಡು ಹೋಗಿದ್ದೆ.
ದುಡ್ಡು ಕೊಟ್ಟು ಕೊಂಡು, ಪಕ್ಕದಲ್ಲಿ ನೋಡ್ತೀನಿ,

ಪಕ್ಕದಲ್ಲಿ ನಿಂತಿದ್ದ ಇಬ್ಬರೂ ಆಸಾಮಿಗಳು ಪರಾರಿ.. ಇಬ್ಬರೂ ಹೋಗಿ ಔಷಧಾಲಯದ ಮತ್ತೊಂದು ದ್ವಾರದಲ್ಲಿ ನಿಂತುಬಿಟ್ಟಿದ್ದಾರೆ.

ನಂತರ ಅವರಿಗೆ ಕೇಳುವಂತೆ ಜೋರಾಗಿ, ನನ್ನ ಸೋದರಳಿಯನ ಶಾಲೆಯಲ್ಲಿ ಮುಖವಾಡ ಧರಿಸಿ ಬರುವಂತೆ ಹೇಳಿದ್ದಾರೆ ಎಂದು ಕೂಗಿ ಹೇಳಿ ಅಲ್ಲಿಂದ ಹೊರಟೆ.


ಆದರೂ ನನಗೆ ಸಮಾಧಾನ ಇಲ್ಲ, ಶಾಲೆಯವರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂದರೆ, ತಾತ್ಕಾಲಿಕವಾಗಿ ಶಾಲೆಗೆ ೧೫ ದಿನ ರಜ ಕೊಡಬಹುದು. ಅದನ್ನು ಬಿಟ್ಟು LKG/UKG ಮಕ್ಕಳಿಗೆ ಮುಖವಾಢ ಧರಿಸಿ ಬನ್ನಿ ಎಂದರೆ, ಅವರಿಗೆ ಮುಖವಾಡವನ್ನು ಬಳಸವು ವಿಧಾನವನ್ನು ಕಲಿಸಿಕೊಡಲು ಸುಲಭವೇ? ಕಲಿಸಿಕೊಟ್ಟರೂ ಅದನ್ನು ಅವರು ಪಾಲಿಸುತ್ತಾರೆಯೇ? ಅದೇ ಮುಖವಾಡವನ್ನು, ಪಿಸ್ತೊಲ್ ಮಾಡಿಕೊಂಡೋ, ಚೆಂಡು ಮಾಡಿಕೊಂಡೋ ಆಟವಾಡಲು ಪ್ರಾರಂಭಿಸಿದರೆ ತೊಂದರೆ ಹೆಚ್ಚಾಗುವುದಲ್ಲವೇ?

ಅಯ್ಯೋ, ಶಾಲೆಯವರು ಏನಾದ್ರು ಮಾಡ್ಕೋಳ್ಲಿ, ನೀವು ಶಾಲೆಗೆ ಕಳಿಸಬೇಡಿ ಅಂತೀರ?

ಬುಧವಾರ, ಆಗಸ್ಟ್ 05, 2009

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮರುಜೀವ ತುಂಬುವರು ಯಾರು?

ಸಮರಸದಲ್ಲಿ ರಾಜ್ ಬರೆಯುತ್ತಾರೆ!

ಕಳೆದ ಎರಡು ವಿದಾನಸಭೆ ಚುನಾವಣೆಗಳಲ್ಲಿ ಸೋಲು, ಮರುಚುನಾವಣೆಯಲ್ಲಿ ಮುಖಭಂಗ, ಲೋಕಸಭಾ ಚುನಾವಣೆಯಲ್ಲಿ ಧೂಳೀಪಟ.ಸುಮಾರು ಒಂದು ದಶಕದಿಂದ, ಕರ್ನಾಟಕದ ಕೈ ಪಕ್ಷ ಅಧಃಪತನದ ಹಾದಿ ತುಳಿಯುತ್ತಿರುವುದಕ್ಕೆ ಕಾರಣಗಳನ್ನು ಹುಡುಕುವುದು ಕಷ್ಟವೇನಲ್ಲ. ೫೦ ಕ್ಕಿಂತಲೂ ಹೆಚ್ಚು ವರ್ಷಗಳ ಇತಿಹಾಸವಿರುವ ಈ ಪಕ್ಷದಲ್ಲಿ ನಾಯಕರಿಗೆ ಕೊರತೆಯೇ? ಅಥವಾ ಅಧಿಕಾರ ಲಾಲಸೆಗಾಗಿ ಕಚ್ಚಾಟವೆ, ಎಲ್ಲರೂ ನಾಯಕರೆನಿಸುವ ಚಪಲವೇ? ನಿಷ್ಟರ ಮತ್ತು ವಲಸಿಗರ ತಿಕ್ಕಾಟವೇ? ಕಾಂಗ್ರೆಸ್ ಹಳೆಯ ಪಕ್ಷವಾಯಿತು ಎಂದು ಜನ ಬೇಸತ್ತರೆ? ಇವುಗಳ ಒಟ್ಟು ಸಮ್ಮೇಳವೇ? ಈ ಎಲ್ಲಾ ತೊಂದರೆಗಳನ್ನು ಮೆಟ್ಟಿ ಮುಂಬರುವ ವಿಧಾನಸಭಾ ಮರುಚುನಾವಣೆ ಮತ್ತು ಬಿ ಬಿ ಎಂ ಪಿ ಚುನಾವಣೆಗಳಲ್ಲಿ ಕಾಂಗ್ರೆಸ್ ಮರುಜೀವ ಪಡೆದುಕೊಳ್ಳಲು ಸಾಧ್ಯವೇ? ಅದು ಒಂದು ಪಕ್ಷ ಸಾಧ್ಯವಾದರೆ ಯಾರಿಂದ? ಎಂಬಿತ್ಯಾದಿ ಪ್ರಶ್ನೆಗಳಿಗೆ, ಬುದ್ಧಿಗೆ ಚಿಂತನೆಯನ್ನು ಒಡ್ಡಬಲ್ಲ ಚರ್ಚೆ, ಒಂದು ಅವಲೋಕನ. ಮುಂದೆ ಓದಿ

ಮಂಗಳವಾರ, ಆಗಸ್ಟ್ 04, 2009

ಭಾರತೀಯ ಶಾಸ್ತ್ರೀಯ ಕಲೆಗಳು ಜನಸಾಮಾನ್ಯರನ್ನು ತಲುಪುತ್ತಿವೆಯೇ?

ಸಮರಸ ಸಂಪಾದಕೀಯದಲ್ಲಿ,

ಇತ್ತೀಚೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕೇಳುವವರು ಕಡೆಮೆಯಾಗಿದೆ. ಭರತನಾಟ್ಯ ನೋಡುವವರ ಸಂಖ್ಯೆಗಿಂತ ಮಾಡುವವರ ಸಂಖ್ಯೆಯೇ ಹೆಚ್ಚು. ಭಾರತೀಯ ಶಾಸ್ತ್ರೀಯ ಕಲೆಗಳು ನಶಿಸಿ ಹೋಗುತ್ತಿವೆ. ಸಿನಿಮಾ, ದೂರದರ್ಶನ - ಸಣ್ಣತೆರೆಯ ಮಾಧ್ಯಮಗಳಿಗೆ ಜನ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಎಂಬತೆಲ್ಲಾ ಕೊರಗಿದೆ. ಇದಕ್ಕೆ ಸಾಮಾನ್ಯ ಶ್ರೋತೃಗಳಷ್ಟೇ ಕಾರಣವೆ? ಇದರಲ್ಲಿ ಕಲಾವಿದನ, ಕಲಾವಿಮರ್ಶಕನ ಪಾತ್ರವೇನೂ ಇಲ್ಲವೇ? ಒಂದು ಚರ್ಚೆ. ಮುಂದೆ ಓದಿ

ಸೋಮವಾರ, ಆಗಸ್ಟ್ 03, 2009

ಸೂರ್ಯನ ವರ್ಣನೆ

ಸೂರ್ಯೋದಯ - ಸೂರ್ಯಾಸ್ತಗಳನ್ನು ಅನುಭವಿಸದವನುಂಟೇ? ನಮಗೇ ಇಷ್ಟೆಲ್ಲಾ ರೋಮಾಂಚನ, ಮುದ ನೀಡಬಲ್ಲ ಈ ಸೂರ್ಯೋದಯ ಸೂರ್ಯಾಸ್ತಗಳು, ಛಾಯಾಚಿತ್ರಗಾರರಿಗೆ, ಕವಿಗಳಿಗೆ ಎಷ್ಟು ಸೊಬಗಾಗಬಲ್ಲವು?

ನೋಡಿ, ಸೂರ್ಯೋದಯದ ಈ ಛಾಯಾಚಿತ್ರಕ್ಕೆ ಪಂಜೆಮಂಗೇಶ ರಾಯರ “ಉದಯರಾಗ” ಕವನ ಎಷ್ಟು ಅದ್ಭುತವಾಗಿದೆಯಲ್ಲವೇ? “ಏರುವನು ರವಿ ಏರುವನು, ಬಾನೊಳು ಸಣ್ಣಗೆ ತೋರುವನು ’ಏರಿದವನು ಚಿಕ್ಕವನಿರಬೇಕಲೆ’ ಎಂಬಾ ಮಾತನು ಸಾರುವನು” ಎಂಬ ಸಾಲುಗಳು ಆಹಾ ರಮಣೀಯತೆಯ ಜೊತೆಗೆ ಎಷ್ಟು ಅರ್ಥಪೂರ್ಣವಲ್ಲವೇ? ಇನ್ನು ಸೂರ್ಯಾಸ್ತವನ್ನು ಕಂಡ ಜಿ ಪಿ ರಾಜರತ್ಮಂ ರವರ ಮನಸ್ಸು, ಸೂರ್ಯನೂ ಕುಡುಕನೆಂದು “ಸಮಾದಾನ” ಪಟ್ಟುಕೊಳ್ಳುವ ಈ ಕವಿತೆಯನ್ನೋದಿ, ಎಂತಹ ಹೋಲಿಕೆ, ಎಂತಹ ರೂಪಕ! ಅಯ್ಯೋ ಛಂದಸ್ಸನ್ನು ಮೀರಿ ಖುಷಿ ಕೊಡುವ ಪದ್ಯಗಳಿವು. ಛಾಯಾಚಿತ್ರದ ಜೊತೆ ಪದ್ಯಗಳನ್ನೋದಿ ಆನಂದಿಸಿ. ಮೊದಲನೆ ಪದ್ಯದಲ್ಲಿ ಸೂರ್ಯ ಹುಟ್ಟಿ ಸುತ್ತಲೂ ನೆತ್ತರು ಮಾಡಿ ಕುಣಿದರೆ, ಎರಡನೆಯದರಲ್ಲಿ ಸೂರ್ಯ ಕುಡಿದು ಸಂಜೆ ಕಣ್ಣು ಕೆಂಪಾಗಿಸಿಕೊಂಡು ತೂರಾಡ್ತಾ ಇದ್ದಾನೆ!

ಮುಂದೆ ಓದಿ/ನೋಡಿ..

ಶನಿವಾರ, ಆಗಸ್ಟ್ 01, 2009

ಮೂಕಜ್ಜಿಯ ಕನಸುಗಳನ್ನು ಮೂರನೆ ಬಾರಿ ಓದಿದಾಗ,ಡಾ. ಕೆ. ಶಿವಾರಾಮ ಕಾರಂತರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ ನಾನು ಮೊದಲನೆ ಬಾರಿಗೆ ಓದಬೇಕೆಂದುಕೊಂಡಿದ್ದು, ಇಷ್ಟು ಚಿಕ್ಕ ಪುಸ್ತಕಕ್ಕೆ ಜ್ಞಾನಪೀಠ ಪ್ರಶಸ್ತಿಯೇ ಎಂಬ ಕುತೂಹಲಕ್ಕಾಗಿ. ’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ನಾನ್ನುಡಿ ಈ ಪುಸ್ತಕಕ್ಕೇ ಹೇಳಿ ಮಾಡಿಸಿದಂತಿದೆ ಎಂದು ತಿಳಿದಿಕೊಳ್ಳಲು ಕೆಲವೇ ಪುಟಗಳ ಓದು ಸಾಕಾಗಿತ್ತು. ಇನ್ನು ಎರಡನೇ ಮತ್ತು ಮೂರನೇ ಬಾರಿ ಓದಿದ್ದು, ಏಕೆಂದು ಸಮಂಜಸವಾಗಿ ಹೇಳಲಾರೆ. ಅದೇನೋ ಎಷ್ಟು ಬಾರಿ ಓದಿದರೂ ಹೊಸ ಹೊಸ ವಿಚಾರಗಳ ಮಂಥನ ನಡೆಸುತ್ತದೆ ಮನಸ್ಸು. ಕಾದಂಬರಿಯನ್ನು ಹೊಸೆದಿರುವ ಶೈಲಿ, ಭಾಷೆ, ಬರವಣಿಗೆಯ ಸರಳತೆ ಮತ್ತೊಮ್ಮೆ, ಮಗದೊಮ್ಮೆ ಓದುವಂತೆ ಪ್ರೇರಿಪಿಸಿತು ಎನ್ನಲೆ? ಅಥವಾ ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸುವ ವಿಚಾರಧಾರೆ ಇರುವ ನನಗೆ, ಕಾದಂಬರಿಯಲ್ಲೂ ಇಂತಹ ವಿಚಾರಧಾರೆ ಇರುವುದು ಇಷ್ಟವಾಗಿ ಮತ್ತೊಮ್ಮೆ ಓದಿದೆನೇ? ನನ್ನ ಯಾವ ಹಿರಿಯರಲ್ಲೂ ’ಎಲ್ಲವನ್ನೂ ವಿಚಾರ ಮಾಡಿ’ ನೋಡುವ ಗುಣ ಕಾಣದೆ ಇದ್ದುದ್ದನ್ನು, ಈ ಮೂಕಜ್ಜಿಯಲ್ಲಿ ಕಂಡು ಈ ಪುಸ್ತಕವೇ ನನ್ನ ಅಜ್ಜಿಯಾಗಿಬಿಟ್ಟಿತೇ, ಪುಸ್ತಕವನ್ನು ಓದುವುದೇ ಅಜ್ಜಿಯೊಂದಿಗೆ ಮಾತನ್ನಾಡುತ್ತಿರುವಂತೆ ಎಂದು ಕಲ್ಪಿಸಿಕೊಂಡೆನೇ? ಈ ಪ್ರಶ್ನೆಗಳಿಗೆ ಉತ್ತರಗಳು ನನಗೆ ಬೇಕಂತಿಲ್ಲ, ಈ ಪುಸ್ತಕ ಕೊಟ್ಟ ಆ ಅದ್ಭುತ ಓದಿನ ಅನುಭವಕ್ಕೆ ಕಾರಣಗಳನ್ನು ಹುಡುಕುವ ಅವಶ್ಯಕತೆಯಿಲ್ಲ. ಹೆಚ್ಚು ಕೊರೆಯೊಲ್ಲ ನಿಮ್ಮನ್ನು. ಈ ಪುಸ್ತಕದ ಸಣ್ಣ ಪರಿಚಯ ಇಲ್ಲಿ. ಮುಂದೆ ಓದಿ.