ಮಂಗಳವಾರ, ಏಪ್ರಿಲ್ 19, 2011

ಬೆಂಗಳೂರು ಕರಗ ೨೦೧೧ ನೋಡಿದ್ದು


ಹಿನ್ನಲೆ!

ಬೆಂಗಳೂರು ಕರಗ ನೋಡಬೇಕೆನ್ನಿಸಿದ ಆಸೆಯ ಹಿಂದಿನ ಹಿನ್ನಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿ ವಿಷಯಕ್ಕೆ ಬಂದುಬಿಡುತ್ತೇನೆ. ಒಮ್ಮೆ ಎಸ್ ಪಿ ರೋಡಿನಲ್ಲಿರುವ ಒಬ್ಬ ಸಿ ಡಿ ವಿತರಕನ ವಿಳಾಸ ಕೇಳಿದಾಗ ಅವ ಒಂದೇ ಮಾತಿನಲ್ಲಿ, ಧರ್ಮರಾಯನ ದೇವಸ್ಥಾನದ ಹಿಂಭಾಗ ಎಂದಿದ್ದ! ನಾನು ಆಶ್ಚರ್ಯದಿಂದ ಕೇಳಿದ್ದೆ, ಏನು ಸ್ವಾಮಿ ನಮ್ಮಲ್ಲಿ ಧರ್ಮರಾಯನಿಗೂ ದೇವಸ್ಥಾನವುಂಟೇ? ಅವ ತಿರುಗಿ ಪ್ರಶ್ನಿಸಿದ್ದ, ಎಷ್ಟು ವರ್ಷದಿಂದ ಬೆಂಗಳೂರಿನಲ್ಲಿದ್ದೀರೀ? ಯಾಕ್ರಿ.. ಬೇಕಾದಷ್ಟು ವರ್ಷದಿಂದ ಇಲ್ಲೇ ಇದ್ದೀನಿ.. ಬೆಂಗಳೂರು ಕರಗ ಅಂತ ಒಂದು ನಡೆಯುತ್ತೇ ಗೊತ್ತಾ ಅಂದ.. ಓ ಗೊತ್ತು ಅಂದಿದ್ದೆ. ಕರಗ ಶುರು ಆಗೋದೇ, ಧರ್ಮರಾಯನ ದೇವಸ್ಥಾನದಿಂದ ಗುರು.. ಕರಗ ಅಂತ ಹೊತ್ತುಕೊಳ್ಳೋದು ದ್ರೌಪದಿಯನ್ನೇ ಅಂದಿದ್ದ! ಓ! ಎಂದು ಉದ್ಗಾರ ತೆಗೆದು.. ಈ ಬಾರಿ ಹೇಗಾದರೂ ಕರಗವನ್ನು, ನಡೆಯುವ ಸ್ಥಳದಲ್ಲೇ ಕಣ್ಣಾರೆ ನೋಡೇ ಬಿಡಬೇಕು ಎಂದುಕೊಂಡಿದ್ದವನಿಗೆ ಇಂದು ದಿನಪತ್ರಿಕೆಯಲ್ಲಿ ಕರಗ ನಡೆಯುವ ಸುದ್ದಿ ತಿಳಿದು ಗೆಳೆಯನ್ನು ಬಲವಂತಿಸಿ ಎಳೆದೊಯ್ದೆ!ಯಡ್ಡಿ ಬೆದರಿದ್ದು!

ಕರಗ ಪ್ರಾರಂಭವಾಗುವ ಸಮಯ ತಿಳಿಯದ ನಾವು ೧೦: ೩೦ ಕ್ಕೇ ಧರ್ಮರಾಯನ ದೇವಸ್ಥಾನದ ಹತ್ತಿರ ತಲುಪಿದಾಗ ಒಡೆಯರ್ ವಂಶಸ್ಥದ ಶ್ರೀಕಂಠದತ್ತ ಒಡೆಯರ್ ದೊಡ್ಡದಾದ ಒಂದು ಕಾರಿನಲ್ಲಿ ಹಿಂತಿರುತ್ತಿದ್ದರು. ಕರಗ ನೋಡಲು ಹೋಗಬೇಕೆಂಬುದರ ಹಿನ್ನಲೆಯಲ್ಲಿ ಇನ್ನೊಂದು ಗುಪ್ತ ಆಸೆಯೂ ಇತ್ತು. ಅದು ಇಂದು ಕರಗಕ್ಕೆ ಯಡೆಯೂರಪ್ಪನವರು ಚಾಲನೆ ನೀಡುತ್ತಾರೆಂಬ ಸುದ್ದಿ. ಕರಗ ಹೊರುವವನ ಮೈಮೇಲೆ ದೇವರು ಬರುವುದೆಂದು ಕೇಳಿದ್ದೇನೆ. ಕರಗ ಹೊರುವವನು ಇದನ್ನು ರಾಜ್ಯದ ಅನುಕೂಲಕ್ಕೆ ಬಳಸಿ ಯಡ್ಡಿಯವರಿಗೆ ಒಮ್ಮೆ ಗುಮ್ಮಿ, ಎಲ್ಲಾ ಜಮೀನು ವಾಪಸು ಕೊಡು, ರಾಜಿನಾಮೆ ಕೊಡು, ಇಲ್ಲಾ ಅಂದ್ರೆ ನಾನು ಸುಮ್ನೆ ಇರಲ್ಲಾ! ಎಂಬ ದೇವಿಯ ಸುವಾರ್ತೆಯನ್ನು ಹೇಳುವವನೋ ಎಂಬ ಒಂದು ಸಣ್ಣ ಆಸೆ ಕೂಡ! ಹಾಗೇನೂ ಆಗಲಿಲ್ಲ. ಕನಿಷ್ಟ ರಥಕ್ಕೆ ಎಸೆಯುವ ಬಾಳೆಯ ಹಣ್ಣಗಳು ಯಡ್ಡಿಯವರ ಕಡೆ ತಿರುಗುವವೋ ಏನೋ ಎಂಬ ಒಂದು ಸಣ್ಣ ಸಂಶಯ ಕೂಡ ಇತ್ತು! ಇಂತಹ ಕೆಲವು ಪ್ರಯತ್ನಗಳು ನಡೆದವಾದರೂ ರಥಕ್ಕೆ ಬಿದ್ದ ಬಾಳೆಹಣ್ಣುಗಳ ಸಂಖ್ಯೆಗೆ ಹೋಲಿಸಿದರೆ, ಯಡ್ಡಿ ಕಡೆ ತಿರುಗಿದ ಬಾಳೆಹಣ್ಣುಗಳು ಕಡಿಮೆಯೇ. ಯಡ್ಡಿ ದೇವಸ್ಥಾನಕ್ಕೆ ಬಂದಾಗ ಪ್ರಸನ್ನಚಿತ್ತರಾಗಿ ಕಂಡರಾದರೂ, ಕರಗದ ಸುತ್ತಾ ಖಡ್ಗ ಹಿಡಿಯುವ ಯುವಕರನ್ನು ನೋಡಿ ಸ್ವಲ್ಪ ಬೆದರಿದಂತೆ ಕಂಡು ಬಂದರು. (ಎಲ್ಲಿ ಬಂದರೂ ನನ್ನ ವಿರುದ್ಧ ಕತ್ತಿ ಮಸೆಯುವವರೇ ಎನ್ನಿಸಿರಬೇಕು!)
ಅವರವರ ಭಕುತಿಗೆ! ಅವರವರ ಭಾವಕ್ಕೆ!

ಏನು ಜನ ಅಂತೀರಾ? ಅಬ್ಬಬ್ಬಾ.. ಆದರೂ ಟೀ ಮಾಡುವವ ಈ ಸಾರ್ತಿ ಜನಾನೆ ಇಲ್ಲಾ ಸಾರ್. ಇನ್ನೂ ಇನ್ನೂರೇ ಟೀ ಖರ್ಚಾಗಿರೋದು ಅನ್ನೋದೆ! ಇರಲಿ. ನನಗಂತೂ ಕರಗವನ್ನು ಆದಷ್ಟೂ ಹತ್ತಿರದಿಂದಲೇ ನೋಡಬೇಕೆಂದು ಹೋದವನಿಗೆ, ಇಕ್ಕಟ್ಟಿನಲ್ಲಿ ಜಜ್ಜಿ ಹೋಗಿದ್ದೆ. ಬೆರೆತ ಬೆವರಿನ ವಾಸನೆ, ಕೆಲವರ ವ್ಯಯಕ್ತಿಕ ಪರಮಾತ್ಮನ ವಾಸನೆಯಲ್ಲಿ ತೇರಿನ ಮೇಲೆ, ಕರಗದ ಮೇಲೆ ಎಸೆಯುತ್ತಿದ್ದ ಮಲ್ಲಿಗೆ ವಾಸನೆ ಎಲ್ಲಿ ಬೀರಬೇಕು? ಯಾರೋ ಒಬ್ಬ.. "maccha we go upstairs Daa.. we should not miss the part when god resists come out of the temple Daa.." ಎಂದದ್ದು ನನಗೆ ಕೇಳಿಸಿ, ಹೀಗೂ ಉಂಟೆ ಎನ್ನಿಸಿತು! ಧರ್ಮದೇವರಯನ ದೇವಸ್ಥಾನದ ಎದುರಿಗಿದ್ದ ಅಂಗಡಿಯವನಿಗೆ ವ್ಯವಹಾರವೇ ದೇವರು, ಅದೇ ಪೂಜೆ. ರಾತ್ರಿಯೆಲ್ಲಾ ಅಂಗಡಿಯಲ್ಲಿ ಭರ್ಜರಿ ವ್ಯಾಪಾರ. ಅಂಗಡಿಯಲ್ಲಿ ವ್ಯಾಪಾರ ಮಾಡುವಾಗ, ಅಂಗಡಿ ಮುಂದೆ ಬಂದು ಯಾರಾದರೂ ನಿಂತರೆ, ಅವರಿಗೆ ನಿರಂತರ ಮಂತ್ರಗಳ ಸುರಿಮಳೆ. ಯಾರೋ ಭಲಿಷ್ಟ ಭಕ್ತಾದಿಗಳು ಬಂದು ಅಂಗಡಿ ಮುಂದೆ ನಿಂತಾಗ, ಮಂತ್ರಗಳು ಅಪ್ಪ, ಅಣ್ಣ, ಜಾತಿ ಎಲ್ಲವನ್ನೂ ಆರಾಧಿಸುವಂತಹವು! ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿ, ಅದು ಹೇಗೋ ನಿಂತು ಹೋಯಿತು! ಯಾರೋ ಒಬ್ಬ, ಒಬ್ಬಳು ಹೆಂಗಸನ್ನು ದೂಡಿ ಹೋದಾಗ, ಆ ಹೆಂಗಸಿಂದ ’ಲೋಫರ್ ಕಚಡ ನಿನಗೆ ಅಕ್ಕ ತಂಗಿ ಯಾರೂ ಇಲ್ಲವೇನೋ’ ಎಂಬ ಬೈಗುಳ! ಯಾರೋ ಒಬ್ಬ, ಕತ್ತಿ ಹಿಡಿದ ಅರೆಬೆತ್ತಲೆ ಭಕ್ತಾದಿಯನ್ನು ದೂಡಿದ ಎಂದು, ಅವ ಇನ್ಯಾರೋ ಒಬ್ಬನಿಗೆ ಪಟ ಪಟ ಭಾರಿಸಿಯೇಬಿಟ್ಟ. ಇದೇ ಅವಕಾಶವನ್ನು ಬಳಸಿಕೊಂಡ ಕತ್ತಿ ಹಿಡಿದ ಇತರೆ ಅರೆಬೆತ್ತಲೆ ಯುವಕರು, ಸಾಮಾನ್ಯ ಧಿರಿಸಿನಲ್ಲಿದ್ದ ಬೇರೆ ಭಕ್ತಾದಿಗಳನ್ನೆಲ್ಲಾ ಭಲಿಷ್ಟವಾಗಿ ಅತ್ತಿತ್ತ ದೂಡಿ ಹಾಕಿ ತಮ್ಮ ತಾಕತ್ತನ್ನು, ದರ್ಪವನ್ನೂ ತೋರಿಸಿದ್ದೂ ಕೂಡ ವಿಷೇಷ. ಬಹುಷಃ, ಕರಗ ಹೊತ್ತವನ ಹಿಂದೆ ಇಂತಹ ಭಲಿಷ್ಟ, ಧಾಂಡಿಗ ಭಕ್ತಾದಿಗಳೇ ಬೇಕೇನೋ! ಇನ್ನೂ ಅಲ್ಲೇ ಪಕ್ಕದಲ್ಲಿದ್ದ ಪಡ್ಡೆ ಹುಡುಗರ ಗುಂಪೊಂದು, ಯಡ್ಡಿ, ಶೋಭಕ್ಕನಿಗೂ ಜೈಕಾರ ಹಾಕಿದ್ದೇ! ಅಲ್ಲೇ ಇದ್ದ ಪೋಲೀಸ್ ಹೆಂಗಸಿನ ಧಿರಿಸಿನ ಮೇಲೂ ಕಮೆಂಟಗಳ ಸುರಿಮಳೆ! ಕರಗ ದೇವಾಲಯದಿಂದ ಹೊರಬಿದ್ದಾಗ ಪಟಾಕಿಗಳೂ ಸುಟ್ಟವು. ಒಂದೆರಡು ಪಾರಿವಳಗಳು ಘಂಟೆಯ ಶಬ್ದಕ್ಕೇನೋ, ಬೆಳಗಾಯಿತೇನೋ ಎಂದು ಬೆದರಿ ಮೇಲೆ ಹಾರಿ ಹೋದವು. ಅವಗಳೂ ಪ್ರಸಾದ ಉದುರಿಸಿದವೇನೋ! ಕರಗ ಹೊತ್ತ ಮನುಷ್ಯ ಮಲ್ಲಿಗೆ ಹೂವಿನ ಅಲಂಕಾರದ ಮುಡಿಯಲ್ಲಿ ನೃತ್ಯ ಮಾಡುತ್ತಾ ಅತ್ತಿತ್ತ ಸುಳಿದಾಡುತ್ತಿದ್ದ! ಕೆಲವರು ಗೋವಿಂದಾ ಗೋವಿಂದಾ ಎನ್ನುತ್ತಿದ್ದರು. ಒಬ್ಬಾತ ತನ್ನ ಮೊಬೈಲ್ ಫೋನ್ ಬೀಳಿಸಿ, ಲೇ ಯಾರ್ಗಾದ್ರು ಮೊಬೈಲ್ ಫೋನ್ ಸಿಕ್ಕಿದ್ರೆ ಕೊಡ್ರೋ! ಸಾಕು ನೀವು ಕಿರಚಾಡಿದ್ದು ಎನ್ನುತ್ತಿದ್ದ. ಒಬ್ಬ ತನಗೆ ೧೧ ಘಂಟೆಯಿಂದ ನಿಂತು ನಿಂತು ಸಾಕಾಯಿತು. ತಲೆ ಸುತ್ತುತ್ತಿದೆ ಎಂದು ಕೂತ! ಇದಕ್ಕೂ ಮುನ್ನ ಹೆಚ್ಚು ಮನರಂಜನೆ ಕೊಟ್ಟಿದ್ದು, ರಥ ಹೊರಟಾಗ ಬಾಳೆಹಣ್ಣು ಎಸೆಯುವ ಆಟ. ಒಂದು ಬಾಲ್ಕನಿಯಿಂದ ಮತ್ತೊಂದು ಬಾಲ್ಕನಿಗೆ ಎಸೆದಾಡಿ, ಕೊನೆಗೂ ಬೇಸತ್ತು ರಥಕ್ಕೆ ಎಸೆಯುವುದು. ರಥದಲ್ಲಿ ಕುಳಿತ ಮಕ್ಕಳು ಬಾಳೆ ಹಣ್ಣಿನ ಎಸೆತವನ್ನು ತಪ್ಪಿಸಿಕೊಳ್ಳುವುದು. ನಾವು ಇವಗಳನ್ನು ತಪ್ಪಿಸಿಕೊಳ್ಳಲೇಬಾರದು! ಮತ್ತೊಬ್ಬ ಹೆಂಗಸು ಅಲ್ಲಿ ಆರ್ಭಟಿಸುತ್ತಿದ್ದಳು. ಕಮಿಟಿ ಅಂತ ಮಾಡಿದ ಮೇಲೇ ನಮ್ಮ ಜನಕ್ಕಾದರೂ ಕರಗ ನೋಡಲು ಒಳ್ಳೇ ಸೌಕರ್ಯ ಕೊಡಬೇಕೆ. ಎಲ್ಲಾ ಜನಾನು ಒಂದೇ ತರ ಆಗ್ಬಿಟ್ರೆ! ಅಬ್ಬಾ ಫೋನಗಳಲ್ಲಿ ಕ್ಯಾಮರಾ ಯಾಕೆ ಎನ್ನುವವರು, ಅದರ ಉಪಯುಕ್ತತೆ ಕಾಣಲು ಕರಗಕ್ಕೆ ಬರಲೇಬೇಕು! ಏನೋ ನನಗೆ ಕಂಡದ್ದಿಷ್ಟು. ಆದರೆ ಲಯ ವಾದ್ಯಗಳು ಇಲ್ಲದೇ ಇದ್ದದ್ದು ಸ್ವಲ್ಪ ಬೇಸರವಾಯಿತು! ತಮಟೆಯ ಶಬ್ದಕ್ಕೆ ಮಾರುಹೋಗುವುದರಿಂದಲೇ ನಾನು ಈ ಜಾತ್ರೆಗಳನ್ನು ಹೆಚ್ಚು ಇಷ್ಟಪಡುವುದು! ನಾವು ಯಾತಕ್ಕಾಗಿ ಹೋಗುತ್ತೇವೋ ಅಷ್ಟೇ ನಮಗೆ ದಕ್ಕುವುದೇನೋ! ಆದರೂ ಬಹಳಷ್ಟು ಮನರಂಜನೆ ಇತ್ತು. ಸಾಕಷ್ಟು ಖುಷಿ ಪಟ್ಟೆ. ನನಗೂ ತುಸು ಹೆಚ್ಚು ಭಕ್ತಿಯಿದ್ದರೆ, ಅಲ್ಲೆಲ್ಲಾದರೂ ಒಂಚೂರು ಭಕ್ತಿ ಕಾಣಿಸುತ್ತಿತ್ತೇನೋ!