ಶನಿವಾರ, ಜನವರಿ 31, 2009

ಬೇಂದ್ರೆ ಜಯಂತಿಇಂದು (ಜನವರಿ ೩೧) ಕರ್ನಾಟಕದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮ ದಿನ. ಹಿಂದೊಮ್ಮೆ ಇವರ ಕಿರು ಪರಿಚರ ಮಾಡಿಕೊಟ್ಟಿದ್ದೆ.
http://guruve.blogspot.com/2006/10/blog-post_30.html

ಹೋದ ವರ್ಷ ಸಾಧನಕೇರಿ - ದಾರಾವಾಢದಲ್ಲಿರುವ ಬೇಂದ್ರೆಯವರ ಮನೆ, ಬೇಂದ್ರೆ ನೆನಪಿನ ಸಂಗ್ರಹಾಲಯ, ಮತ್ತು ಬೇಂದ್ರೆಯವರ ಕಾವ್ಯಗಳಿಗೆ ಸ್ಫೂರ್ಥಿಯನ್ನು ಕೊಟ್ಟ ಮನೆಯ ಮುಂದಿನ ಕೆರೆಗಳನ್ನು ನೋಡುವ ಸುವರ್ಣಾವಕಾಶ ಒದಗಿ ಬಂದಿತ್ತು. ಅಲ್ಲಿ ಸೆರೆ ಹಿಡಿದ ಕೆಲವು ಭಾವಚಿತ್ರಗಳನ್ನು ನಿಮ್ಮೊಂದಿಗೆ ಈ ದಿನ ಹಂಚಿಕೊಳ್ಳುತ್ತಿದ್ದೇನೆ.

ಬೇಂದ್ರೆಯವರ ಅದ್ಭುತ ಕವನಗಳಿಗೆ ನಾನು ಮಾರು ಹೋಗಿದ್ದೇನೆ. ಬೇಂದ್ರೆಯವರ ಕೆಲೊವೊದು ಕವನಗಳಂತೂ ನನಗೆ ಜೀವನದಲ್ಲಿ ಬಹಳ ಪಾಠಗಳನ್ನು ಕಲಿಸಿಕೊಟ್ಟಿವೆ. ಬೇಂದ್ರೆಯವರ ಕವನಗಳ ಕೆಲೊವೊಂದು ಸಾಲುಗಳಂತೂ ಬೇರೆ ಯಾರ ಕಲ್ಪನೆಗೆ ಸಿಗಲು ಸಾಧ್ಯವೇ ಎಂದೆನೆಸುತ್ತವೆ!
ಕೆಲವೊಂದನ್ನು ಇಲ್ಲಿ ನೆನೆದರೆ,

"ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಯಾಕೆ ಬಾರದೊ?"
"ಒಂದೆ ಒಂದು ಜನ್ಮದಲ್ಲಿ .. ಒಂದೆ ಬಾಲ್ಯ ಒಂದೆ ಹರೆಯ.. ನಮಗದಷ್ಟೆ ಏತಕೊ?
"ವಿಶ್ವಮಾತೆಯ ಗರ್ಭಕಮಲಜಾತ-ಪರಾಗ-ಪರಮಾಣು ಕೀರ್ತಿ ನಾನು"
"ತುಳುಕ್ಯಾಡತಾವ ತೂಕಡಕಿ,, ಎವಿ ಅಪ್ಪತಾವ ಕಣ್ಣ ದುಡುಕಿ,, ಕನಸು ತೇಲಿ ಬರತಾವ ಹುಡುಕಿ!! ನೀವು ಹೊರಟಿದ್ದೀಗ ಎಲ್ಲಿಗೆ?"
"ನಂದ ನನಗ ಎಚ್ಚರರಿಲ್ಲ.. ಮಂದಿಗೊಡವಿ ಏನs ನನಗs.. ಒಂದೇ ಅಳತಿ ನಡದ ಚಿತ್ತ|| ಹಿಂದ ನೋಡದ ಗೆಳತಿ..."
"ಬಾರೋ ಸಾಧನಕೇರಿಗೆ.. ಮರಳಿ ನಿನ್ನೀ ಊರಿಗೆ"
"ಹರನ ಜಡೆಯಿಂದ.. ಹರಿಯ ಅಡಿಯಿಂದ.. ಋಷಿಯ ತೊಡೆಯಿಂದ ನುಸುಳಿ ಬಾ"
"ನಲ್ಲ! ನಿನ್ನ ಲಲ್ಲೆವಾತು.. ಮೀಸೆಕುಡಿಯಲಲ್ಲೆ ಹೂತು"
"ನಲ್ಲೆ! ನಿನ್ನ ಲಲ್ಲೆವಾತು.. ಮುಗುಳು ನಗೆಯಲಲ್ಲೆ ಹೂತು"
"ಉತ್ತರಧ್ರುವದಿಂ ದಕ್ಷಿಣಧೃವಕೂ.. ಚುಂಬಕ ಗಾಳಿಯು ಬೀಸುತಿದೆ"
"ಸಂಸಾರ ಸಾಗರಾದಾಗ, ಲೆಕ್ಕವಿರದಷ್ಟು ದು:ಖದ ಬಂಡಿ"
"ಅತ್ತಾರೆ ಅತ್ತುಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡೀಯದಿರು ಬಿಕ್ಕ"
"ಕುರುಡು ಕಾಂಚಾಣ ಕುಣಿಯುತಲಿತ್ತು! ಕಾಲಿಗೆ ಬಿದ್ದವರ ತುಳಿಯುತಲಿತ್ತೋ!"
"ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ.. ತಿರುಗಿ ಮನೀಗ ಸಾಗಿತ್ತ;"
"ಇದ್ದದ್ದು ಮರೆಯೋಣ.. ಇಲ್ಲದ್ದು ತೆರೆಯೋಣ.. ಹಾಲ್ಜೇನು ಸುರಿಯೋನ.. ಕುಣಿಯೋಣು ಬಾ"
"ನಾರಿ ನಿನ್ನ ಮಾರೀಮ್ಯಾಗ .. ನಗೀ ನವಿಲು ಆಡತಿತ್ತ"
"ಕಣ್ಣಿನ್ಯಾಗ ಬಣ್ಣದ ನೋಟ.. ತಕ ತಕ ಕುಣಿದಾಡತಿತ್ತ"
"ಕೆನ್ನನ ಹೊನ್ನನ ಬಣ್ಣ - ಬಣ್ಣಗಳ.. ರೆಕ್ಕೆಗಳೆರಡೂ ಪಕ್ಕದಲುಂಟು"
"ಶಾಂತಿರಸವೇ ಪ್ರೀತಿಯಿಂದಾ.. ಮೈದೋರಿತಣ್ಣಾ.. ಇದು ಬರಿ-ಬೆಳಗಲ್ಲೋ ಅಣ್ಣಾ."

ವಿ. ಸೂ : ಸಮಯದ ಅಭಾವದಿಂದ ತುರಾತುರಿಯಲ್ಲಿ ಬರೆದ ಈ ನೆನಪಿನ ಚಿತ್ರದ ಭಾವಚಿತ್ರಗಳಿಗೆ ಶೀರ್ಷಿಕೆಯನ್ನು ಬರೆಲಾಗಿಲ್ಲ. ಕ್ಷಮಿಸಿ.

ಶುಕ್ರವಾರ, ಜನವರಿ 30, 2009

ಸಮ್ಮೇಳನ ಮುಂದೂಡುವುದು ಶೋಕಾಚರಣೆಯೆ?

ರಾಷ್ಟ್ರಪತಿಯೇ ಆಗಲಿ ಅಥವಾ ಯಾವ ಒಬ್ಬ ಸಾಮಾನ್ಯನೇ ಆಗಿರಲಿ, ಹುಟ್ಟಿದ ಮೇಲೆ ಸಾಯುವುದು ಸಹಜ ಧರ್ಮ. ಅಂದರೆ ಎಲ್ಲಾ ಸಜೀವ ವಸ್ತುಗಳಿಗೂ ಸಾವು ನಿಶ್ಚಿತ. ಸಾವು ಕೆಲವೊಮ್ಮೆ ಸಹಜ ಮತ್ತು ಕೆಲವೊಮ್ಮೆ ಅಸಹಜ. ಹಲವಾರು ಸಂಶೋಧನೆಗಳು ಈ ತಲೆಮಾರಿನಲ್ಲಿ ಮನುಷ್ಯನ ಸರಾಸರಿ ಆಯುಷ್ಯ ೭೫-೮೦ ಎನ್ನುತ್ತವೆ. ಅಂದರೆ ಮನುಷ್ಯ ಸುಮಾರು ೭೫ ರ ನಂತರ ಕಾಲವಾದರೆ (ಅನಾರೋಗ್ಯದಿಂದಾರೂ ಕೂಡ) ಅದನ್ನು ಸಹಜ ಸಾವೆಂದೇ ಪರಿಗಣಿಸಬಹುದು. ಕಾಲವಾದ ಮನುಷ್ಯನ ಪರಮ ಆಪ್ತರಿಗೆ (ಹತ್ತಿರದ ಕುಟುಂಬ ಸದಸ್ಯರು, ಗೆಳೆಯರು) ಸಾವಿನಿಂದಾಗುವ ನೋವೂ ಕೂಡ ಸಹಜ. ಆದರೆ ಪ್ರಕೃತಿ ನಿಯಮಕ್ಕೆ ಸವಾಲೆಸೆಯುವುದು ಸಾಧ್ಯವಿಲ್ಲ! ಪ್ರಕೃತಿ ನಿಯಮಕ್ಕೆ ವ್ಯತಿರಿಕ್ತವಾಗಿ ಸತ್ತಾಗ ಸಾವು ಅಸಹಜವಾಗುತ್ತದೆ. (ಉದಾ., ಕೊಲೆ, ವಾಹನ ಅಪಘಾತ ಮುಂತಾದ ದುರ್ಘಠನೆಗಳಿಂದೊದಗುವ ಸಾವು). ಇಂತಹ ಸಂದರ್ಭಗಳಲ್ಲಿ ನೋವಿನ ತೀವ್ರತೆ ಹೆಚ್ಚಾಗಿರುತ್ತದೆ. ಇಂತಹ ಅಕಾಲ ಮರಣಗಳಿಂದ, ಮರಣ ಹೊಂದಿದ ವ್ಯಕ್ತಿಯ ಜೀವನದ ಆಸೆಗಳು ಮಣ್ಣಾಗಿರುತ್ತವೆ. ಇಂತಹ ಸಂದರ್ಭದಲ್ಲಿ ನೋವಿನ ತೀವ್ರತೆ ಹೆಚ್ಚಾಗುವುದು ಕೂಡ ಸಹಜವೆ. ಈ ಎರಡೂ ಸನ್ನಿವೇಶಗಳಲ್ಲಿ, ಮರಣಹೊಂದದ ವ್ಯಕ್ತಿಗೆ, ವ್ಯಕ್ತಿಗತವಾಗಿ ತೀರ ಹತ್ತಿರವಲ್ಲದ ಮನುಷ್ಯರಲ್ಲಿ ಸತ್ತ ವ್ಯಕ್ತಿಯ ಬಗ್ಗೆ ಅನುಕಂಪದ ಭಾವನೆ ಮೂಡುತ್ತದೆ. ಕೆಲವೊಮ್ಮೆ ಮರಣ ಹೊಂದಿದ ವ್ಯಕ್ತಿ ದೇಶಕ್ಕೋಸ್ಕರ ತನ್ನನ್ನು ಸಮರ್ಪಿಸಿದ್ದರೆ ದೇಶದ ಜನತೆ, ಸತ್ತ ವ್ಯಕ್ತಿಯನ್ನು ನೆನೆಯುವುದು ವಾಡಿಕೆ. ಇದನ್ನೇ ಶೋಕಾಚರಣೆಯೆಂದು ಕರೆದಿರಬಹುದು. ಆದರೆ ಶೋಕಾಚರಣೆ ಹೆಸರಿನಲ್ಲಿ ರಜೆ ಘೋಶಿಸುವುದು, ನಡೆಯಬೇಕಾದ ಮಂಗಳ ಕಾರ್ಯಗಳನ್ನು ಮುಂದೂಡುವುದು ಅಸಹಜ ಅತಿರೇಕದ ಮೂರ್ಖತನದ ಆಚರಣೆಗಳು.

ಮೊನ್ನೆ ಆದದ್ದೂ ಇದೆ. ಮಾಜಿ ರಾಷ್ಟ್ರಪತಿ ವೆಂಕಟರಾಮನ್ ತಮ್ಮ ೯೮ ನೆಯ ವಯಸ್ಸಿನಲ್ಲಿ ನಿಧನ ಹೊಂದಿದರು. ರಾಷ್ಟ್ರಪತಿ ಹುದ್ದೆಗಿರುವ (ಅ)ಗೌರವ ಎಲ್ಲರಿಗೂ ತಿಳಿದದ್ದೆ. ಅದೇನೆ ಇರಲಿ ಸತ್ತ ವ್ಯಕ್ತಿಗೆ ಸಂತಾಪ ಸೂಚಿಸಲು ಸರ್ಕಾರದ ಹಲವಾರು ವಿಧಿ ವಿಧಾನಗಳಿವೆ. ಉದಾಹರಣೆಗೆ ಧ್ವಜವನ್ನು ಅರ್ಧ ಕೆಳಗಿಳಿಸುವುದು.(ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಾರಿ ರಜೆ ಘೋಷಿಸದೆ ಇದ್ದದ್ದು ಶ್ಲಾಘನೀಯ. ದೇಶದ ಪ್ರಗತಿಗೆ ಪೂರಕವಲ್ಲದ ಶೋಕ ಸಂತಾಪ ವಿಧಿ ವಿಧಾನ ಇದು). ನಮ್ಮ ರಾಜ್ಯ ಸರ್ಕಾರ ೭ ದಿನಗಳ ಶೋಕಾಚರಣೆಯೆಂದಿತು.

ಶೋಕಾಚರಣೆಯಯೆಂದರೇನು? ಶಾಲೆಗಳಲ್ಲಿ, ಕಚೇರಿಗಳಲ್ಲಿ, ಸಮಾರಂಭಗಳಲ್ಲಿ ವೆಂಕಟರಾಮನ್ ರವರ ಭಾವಚಿತ್ರವಿಟ್ಟು, ಅವರ ಸಾಧನೆಗಳನ್ನು ನೆನೆಯಬಹುದು. ಬೇಕಾದರೆ ಅವರ ಒಳ್ಳೆಯ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬಹುದು. ಚಿತ್ರದುರ್ಗದಲ್ಲಿ ನಡೆಯಬೇಕಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೊ ಇದನ್ನೆ ಮಾಡಬಹುದಿತ್ತು! ಅದನ್ನು ಬಿಟ್ಟು ಸಮ್ಮೇಳನವನ್ನು ಮುಂದೂಡಿದ್ದು ಉಚಿತವಲ್ಲ. ಏಷ್ಟೋ ಜನ ತಮ್ಮ ವ್ಯಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಸಾಹಿತ್ಯ ಸಮ್ಮೇಳನಕ್ಕೆ ಹೊರಟು ಸಿದ್ದತೆಗಳನ್ನು ಮಾಡಿಕೊಂಡವರಿಗೆ ನಿರಾಶೆ, ನಷ್ಟ! ಕೆಲವರ ಮನೆಯ ಮಟ್ಟಿಗಿದ್ದ ಈ ಸೂತಕದ ಮೂಢನಂಬಿಕೆಗಳು, ರಾಜ್ಯ ಮಟ್ಟಕ್ಕೆ ಬೆಳೆದು ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳು ಮುಂದೂಡಲ್ಪಡುತ್ತಿರುವುದು ವಿಷಾದಕರ/ದುರುದೃಷ್ಟಕರ ಸಂಗತಿ. ಕನ್ನಡ ಸಾಹಿತ್ಯ ಪರಿಷತ್ತಿನವರು ಇನ್ನು ಮುಂದೆಯಾದರೂ ಇಂತಹ ಮೂರ್ಖ ಆಚರಣೆಗಳಿಗೆ ಮೊರೆ ಹೋಗದೆ ಅರ್ಥಪೂರ್ಣ ನಿರ್ಣಯಗಳನ್ನು ತೆಗೆದುಕೊಳ್ಳಲಿ.

ಜೈ ಕರ್ನಾಟಕ ಮಾತೆ!

ಶುಕ್ರವಾರ, ಜನವರಿ 23, 2009

ಎಲ್ಲರು ಮಾಡುವುದು ಹೊಟ್ಟೆಗಾಗಿ?

two tyred? too tired?

ನಿಮ್ಮ ಗೆಳೆಯ ನಿಮ್ಮನ್ನು ಎದುರಾದಾಗ ನಿಮ್ಮ ಹೊಟ್ಟೆಯ ಮೇಲೆ ಪ್ರೀತಿಪೂರ್ವಕವಾಗಿ ಹೊಡೆದು ಮಾತಾನಾಡಿಸುತ್ತಿದ್ದಾನೆಯೆ? (ಬೆನ್ನಿನ ಮೇಲೆ ಬೀಳಬೇಕಾದ ಆ ಗುದ್ದು ಹೊಟ್ಟೆಯ ಕಡೆಗೆ ಜಾರಿದೆಯೆ?) ಸ್ವಲ್ಪ ದೂರ ನಡೆದರೆ ’ಉಸ್ಸಪ್ಪ’ ಎನ್ನುವಂತಾಗಿದೆಯೆ? ಬಗ್ಗುವುದು, ವ್ಯಾಮಮಗಳು ಇವುಗಳನ್ನೆಲ್ಲಾ ಜಗತ್ತಿನಿಂದ ಬಹಿಷ್ಕರಿಸಬೇಕೆನ್ನಿಸುತಿದೆಯೆ? ನಿಮ್ಮ ಕೆಳ ಉಡುಪುಗಳು ಬಿಗಿಯಾದವೆ? ಸೊಂಟ ಪಟ್ಟಿಯ ಅವಶ್ಯಕತೆ ಇಲ್ಲದಾಯಿತೆ? ನೆಲದ ಮೇಲೆ ಸರಳ ಪದ್ಮಾಸನ ಹಾಕಿ ಕೂತು ಊಟ ಮಾಡುವುದ್ದಕ್ಕಾಗುತ್ತಿಲ್ಲವೆ?

ಎಚ್ಚರಿಕೆಯೆ ಘಂಟೆ/ತೂಗುಕತ್ತಿ ನಿಮ್ಮ ನೆತ್ತಿಯ ಮೇಲೆ ನೇತಾಡುತ್ತಿದೆ!

ಒಂದು ಕಾಲವಿತ್ತು, ಹೊಟ್ಟೆ ಮುಂದೆ ಇರುವವರು ಅತೀವ ಗೌರವವನ್ನು ಸಂಪಾದಿಸುತ್ತಿದರು. (ಅದು ಸದೃಢ ಆರ್ಥಿಕತೆಯ ಸಂಕೇತವಾಗಿತ್ತು.) ಕಾಲ ಬದಲಾದಂತೆ, ಜಾಗತೀಕರಣದ ತಂಪು ಪಸರಿಸಿದಂತೆ ಬಹುತೇಕ ಜನರ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತಾ ಬಂದತೆ, ಹೊಟ್ಟೆ ಸಂಪಾದಿಸುತ್ತಿದ್ದ ಗೌರವ ಕಡಿಮೆಯಾಗುತ್ತಾ ಹೋಗಿ, ಇಂದು ಹೊಟ್ಟೆ ಬೆಳೆಸಿಕೊಂಡವರು ಒಂದು ರೀತಿಯ ಅಸಹನೀಯ (ಅಸಹನೀಯ ಎಂದರೆ ಸ್ವಲ್ಪ ಅತಿರೇಕವಾಗಬಹುದು, ಹಾಸ್ಯಸ್ಪದ ಎನ್ನಬಹುದು) ರೀತಿಯಲ್ಲಿ ನೋಡಲ್ಪಡುತ್ತಿದ್ದಾರೆ.

ಹೊಟ್ಟೆ ಬೆಳೆಸಿಕೊಳ್ಳಲು ಹಲವಾರು ಕಾರಣಗಳಿವೆ. ಆಲಸ್ಯತನ, ಆರೋಗ್ಯದ ಬಗೆಗಿನ ಉದಾಸೀನತೆ, ಹೊಟ್ಟೆಬಾಕತನ, ಜೀವನದಲ್ಲಿನ ಉಡಾಫೆತನ (ಇರುವಷ್ಟು ದಿನ ಚೆನ್ನಾಗಿ ತಿಂದು ಉಂಡು ಮಲಗಿ ಹಾಯಾಗಿ ಕಾಲ ಕಳೆಯಬೇಕೆನ್ನುವ ಮಾನಸಿಕ ಅವಸ್ಥೆ!) ಇತ್ಯಾದಿಗಳು. ಹಿಂದೆ ಆರೋಗ್ಯದ ಬಗ್ಗೆ ಬಹಳ ಕಾಳಜಿ ಇರಲಿಲ್ಲ. ಕಾಳಜಿ ಇದ್ದದ್ದಿಲ್ಲ ಎನ್ನುವದಕ್ಕಾಗದಿದ್ದರೂ, ಆಗಿನ ಬಡತನದಲ್ಲಿ ದುಡ್ಡು, ಹೆಸರು ಗಳನ್ನು ಸಂಪಾದಿಸುವುದೇ ಮೇಲಾಗಿತ್ತು. (ಇಂದು ಹೇರಳವಾಗಿ ದುಡ್ಡಿದ್ದವರಿಗೆ, ಇದು ಇಲ್ಲ ಎಂದೇನಿಲ್ಲ). ಇದಕ್ಕೆ ಅವಶ್ಯಕವಾದ ಕಷ್ಟ ಪಡಬೇಕಾಗಿದ್ದದರಿಂದ (ಬಹಳಷ್ಟು ಸಮಯ ದೈಹಿಕವಾಗಿಯೇ ಕಷ್ಟ ಪಡಬೇಕಾಗಿತ್ತು), ದೈಹಿಕವಾಗಿ ಸಂಬಂಧಿಸಿದ ಅನಾರೋಗ್ಯ (ನಿರ್ಧಿಷ್ಟವಾಗಿ ಹೇಳಬೇಕಾದರೆ ಬೊಜ್ಜಿಗೆ ಸಂಭಂದಿಸಿದ ತೊಂದರೆಗಳು) ಕಡಿಮೆಯಿದ್ದವು. ಈಗ ಕಾಲ ಚಕ್ರ ವೈಙ್ನಾನಿಕ ಪ್ರಗತಿಯತ್ತ ತಿರುಗಿದೆ. ಓಡಾಡಲು ಮೋಟಾರು ವಾಹನಗಳಿವೆ. ದೈಹಿಕವಾಗಿ ಮಾಡುತ್ತಿದ್ದ ಬಹುತೇಕ ಕೆಲಸಗಳನ್ನು ಯಂತ್ರಗಳು ಕಸಿದುಕೊಂಡಿವೆ. ಆದುದರಿಂದು ಇಂದು ಹಣ ಹೆಸರು ಇತ್ಯಾದಿಗಳನ್ನು ಗಳಿಸಲು ದೈಹಿಕ ಶ್ರಮಕ್ಕಿಂತ ಹೆಚ್ಚಾಗಿ ಬೇಕಾಗಿರುವುದು ಮಾನಸಿಕ ಶ್ರಮ ಮತ್ತು ಸಮಯ ಉಳಿತಾಯ! ಇದಕ್ಕೆ ಪೂರಕವಾಗಿ ಬಹಳಷ್ಟು ಜನ ಈ ಬೊಜ್ಜಿಗೆ ದಾಸರಾಗಿ, ಬೊಜ್ಜಿಗೆ ಸಂಭಂದಿಸಿದ ಹೃದಯ, ಮೂತ್ರಪಿಂಡ, ಸಕ್ಕರೆ ಖಾಯಿಲೆ, ರಕ್ತದೊತ್ತಡ ಮುಂತಾದವುಗಳಿಗೆ ಬಲಿಯಾಗುತ್ತಿರುವು ದುರದೃಷ್ಟಕರ!

ಸ್ವಲ್ಪ ಮಾಸಿಕ ಜಾಗೃತಿ, ದೈಹಿಕ ವ್ಯಾಮಗಳಿಂದ ಈ ಖಾಯಿಲೆಗಳನ್ನು ತಡೆಗಟ್ಟಬಹುದು, ಇಲ್ಲವೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು? ಕೇಳಿ ಓದಿ ತಿಳಿದು ಆಚರಿಸಿದ ಕೆಲವೊಂದು ಸಲಹೆಗಳು!

೧) ಮೊದಲನೆಯ ಸಲಹೆ ಹೆತ್ತವರಿಗೆ! ಮಕ್ಕಳು ಓದಿ ಓದಿ ಬೆಳೆದು ನಿಮ್ಮ ನಂಟರು ಮತ್ತು ನೆರೆ ಹೊರೆಯ ಮಕ್ಕಳಿಗಿಂತ ಜಾಸ್ತಿ ಅಂಕ ತೆಗೆದರೆ ಕೋಡೇನೂ ಮೂಡುವುದಿಲ್ಲ. ಅಂದರೆ ಚೆನ್ನಾಗಿ ಓದಬಾರದೆಂದಲ್ಲ!, ತಂದೆ ತಾಯಿಗಳ ಮೌಢ್ಯಕ್ಕೆ ಮಕ್ಕಳು ಬಲಿಯಾಗುವುದು ಬೇಡ! ಸುಮ್ಮನೆ ನೆರೆಯವರಿಗೆ ಹೋಲಿಕೆ ಮಾಡಿ ಮಕ್ಕಳ ಮೇಲೆ ಅನಾವಶ್ಯಕ ಒತ್ತಡವನ್ನು ಎಂದೂ ತರಬಾರದು. ಯಾರೇ ಆದರೂ ನೆನಪಿನಲ್ಲಿಡಿ, ಮಕ್ಕಳು ಮೊದಲು ಚೆನ್ನಾಗಿ ಆಟವಾಡಬೇಕು. ಮಕ್ಕಳಿಗೆ ಆಟಕ್ಕಿಂತ ಒಳ್ಳೆಯ ವ್ಯಾಯಾಮವಿಲ್ಲ! ಚೆನ್ನಾಗಿ ಆಟವಾಡಿದ ಮೇಲೆ ಎರಡನೆಯ ಪ್ರಾಮುಖ್ಯತೆ ಓದುವುದು!
೨)೨೫ - ೩೦ ವರ್ಷಗಳಾದ ನಂತರ ನಿಯತವಾಗಿ ವ್ಯಾಯಾಮ ಅವಶ್ಯಕ! ೨೦ - ೨೫ ವಯೋಮಿತಿಯವರೂ ಕೂಡ ವ್ಯಾಯಾಮ ಮಾಡಲೇಬೇಕು ಇಂದಿನ ದಿನಗಳಲ್ಲಿ!
೩)೧/೨ ದಿಂದ ೧ ಘಂಟೆ ವ್ಯಾಮಕ್ಕಾಗಿ ಮೀಸಲಿಡುವುದು ಒಳ್ಳೆಯದು. ಓಡುವುದು, ವೇಗವಾಗಿ ನಡೆಯುವುದು ಸರಳ ಮತ್ತು ಪರಿಣಾಮಕಾರಿ ವ್ಯಾಯಾಮಗಳು. ಯೋಗಾಸನ, ವ್ಯಾಯಾಮ ಶಾಲೆಗಳೂ ಕೂಡ ಒಳ್ಳೆಯವೆ. ಇವಲ್ಲದೆ ಬಹಳ ಹೊತ್ತು ಕುಣಿಯುವುದು, ಆಟವಾಡುವುದು (ಕಾಲ್ಚೆಂಡು - Foot Ball, ಚೀಲಚೆಂಡು - Basket ball, - ಕನ್ನಡ ಅನುವಾದಗಳು ಅಸಮರ್ಪಕ ಎನ್ನಿಸಬಹುದು ಕ್ಷಮಿಸಿ) ಕೂಡ ದೈಹಿಕ ವ್ಯಾಯಾಮಗಳೇ.

ಜಾಗೃತರಾಗೋಣ!
ನಮ್ಮ ಕಾರ್ಯನಿರತ ಒತ್ತಡದ ಜೀವನದಲ್ಲಿ ಬೊಜ್ಜಿಗೆ ಬಲಿಯಾಗಿ, ಅನಾರೋಗ್ಯಕ್ಕೆ ಗುರಿಯಾಗಿ ಮುಂದಿನ ಪೀಳಿಗೆಗೆ ಹೊರೆಯಾಗುವುದು ಒಳಿತಲ್ಲ. ಆರೋಗ್ಯ ಉಳಿದೆಲ್ಲಕ್ಕಿಂತಾ ಮಹತ್ವವಾದದ್ದು ಎಂಬುದನ್ನು ಮನದಟ್ಟು ಮಾಡಿಕೊಳ್ಳೋಣ! ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗೋಣ. ಆರೋಗ್ಯವೇ ಭಾಗ್ಯ ಎಂಬ ಗಾದೆಯನ್ನು ಆಚರಿಸೋಣ.

ದಾಸರು ಅಂದು ಹೇಳಿದ್ದು "ಎಲ್ಲರು ಮಾಡುವದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ" ಇಂದು ಅಪ್ರಸ್ತುತವಾಯಿತೇನೋ, "ಎಲ್ಲರು ಮಾಡಬೇಕಾಗಿರುವುದು ಹೊಟ್ಟೆ ಕರಗಿಸುವುದಕ್ಕಾಗಿ (ಆರೋಗ್ಯಕ್ಕಾಗಿ)!" ಎಂದೆನಿಸುತ್ತಿದೆ!

ನೀವೇನೆನ್ನುತ್ತೀರಾ?

ಶನಿವಾರ, ಜನವರಿ 10, 2009

ನೃತ್ಯ

ಕುಣಿಯೋಣು ಬಾರ, ಕುಣಿಯೋಣು ಬಾ

youtube ದೃಶ್ಯಾವಳಿ ತಾಣದಲ್ಲಿ crazy4 ಎಂಬುದಕ್ಕೆ ಹುಡುಕಿದರೆ ನಿಮಗೆ ಅಪಾರ ದೃಶ್ಯಾವಳಿಗಳ ಪಟ್ಟಿ ಸಿಗುತ್ತವೆ. crazy4 ಎಂಬ ಹೃತಿಕ್ ರೋಷನ್ ರವರ ನೃತ್ಯ ಎಷ್ಟು ಪ್ರಖ್ಯಾತಿಯಾಗಿದೆ ಎಂದರೆ, ನೂರಾರು ನೃತ್ಯ ಪಟುಗಳು ಈ ನೃತ್ಯವನ್ನು ಅನುಕರಣೆ ಮಾಡಿದ ತಮ್ಮ ದೃಶ್ಯಾವಳಿಗಳ ತುಣುಕುಗಳನ್ನು ಕೂಡ ಈ ಜಾಲದಲ್ಲಿ ಸೇರಿಸಿ, ವೀಕ್ಷಕರಿಗೆ ಅಭಿಪ್ರಾಯಗಳನ್ನು ತಿಳಿಸಲು ಕೋರಿದ್ದಾರೆ. ಮನಸ್ಸಿಗೆ ಮುದ ನೀಡುವ ಈ ನೃತ್ಯಕಲೆಯ ಬಗ್ಗೆ ಸ್ವಲ್ಪ ಹರಟೋಣ ಇಂದು.

ಪುನೀತ್ ರಾಜ್ ಕುಮಾರ್ ರವರ ಎಷ್ಟೋ ಚಿತ್ರಗಳು ತಮ್ಮ ನೃತ್ಯಗಳಿಂದ ಓಡಲ್ಪಡುತ್ತವೆ ಎಂದರೆ ಅತಿಶಯವಾಗುವುದಿಲ್ಲ, ತೆಗಳಿಕೆಯೂ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ನೃತ್ಯ ಮಾಡುವ ಚಿತ್ರ ನಟ ಎನ್ನಿಸಿಕೊಂಡಿದ್ದಾರೆ. ಹಾಗೆಯೇ ತಮಿಳಿನ ಪ್ರಭುದೇವ, ತೆಲುಗಿನ ಚಿರಂಜೀವಿ, ಹಿಂದಿಯ ಹೃತಿಕ್ ರೋಶನ್, ಶಾಹೀದ್ ಕಪೂರ್, ಮಾಧುರಿ ದೀಕ್ಷಿತ್ ತಮ್ಮ ನೃತ್ಯಗಳಿಂದ ದೇಶದಲ್ಲೇ ಖ್ಯಾತಿ ಗಳಿಸಿದವರು. ಅತ್ಯುತ್ತಮ ನಟ (ನಟಸಾರ್ವಭೌಮ) ಎನಿಸಿಕೊಂಡರೂ ನೃತ್ಯ ಮಾಡದೇ ಇರುವುದು ಡಾ ರಾಜ್ ಕುಮಾರ್ ರವರ (ಡಾ ವಿಷ್ಣುವರ್ಧನ್ ಮುಂತಾದವರಿದ್ದಾರೆ) ಕೊರತೆಯಾಗಿತ್ತು.(ಹಳೆಯ ಕಾಲ ಡಾ ರಾಜ್ ಕುಮಾರ್ ರವರದು, ನೃತ್ಯವಿಲ್ಲದೇ ಇದ್ದರೂ ಅವರ ನಟನೆಯಲ್ಲಿದ್ದ ಸತ್ವ ನೃತ್ಯದ ಕೊರತೆಯನ್ನು ನೀಗಿಸಿತ್ತು, ಆದರೆ ಈಗಿನ ಕಾಲದ ನಟರಾದ ಸುದೀಪ್, ಗಣೇಶ್ ಮುಂತಾದವರು ಚಿತ್ರರಂಗದಲ್ಲಿ ತಮ್ಮ ಛಾಪನ್ನು ಉಳಿಸಿಕೊಳ್ಳಲು ನೃತ್ಯ ಕಲಿಯುವುದು ಬಹಳ ಅವಶ್ಯಕವೆನಿಸುತ್ತದೆ.) ಇವರು ಎಷ್ಟೋ ಚಲನಚಿತ್ರಗಳಲ್ಲಿ ಅಸಂಭದ್ಧವಾಗಿ ಹೆಜ್ಜೆ ಹಾಕಿದಾಗ ಅಭಾಸವಾಗಿ ಕಂಡು, ಅಪಹಾಸ್ಯಕ್ಕೂ ಗುರಿಯಾಗಿವೆ. ಇಂದು ನೃತ್ಯ ಭಾರತದ ಚಲನಚಿತ್ರಗಳ ಅತ್ಯಂತ ಪ್ರಮುಖ ಭಾಗವಾಗಿಬಿಟ್ಟಿದೆ.

ಹಿಂದೆ ಒಂದು ಕಾಲವಿತ್ತು. ಹಿರಿಯರು ನೃತ್ಯ ಎಂದರೆ ಉರಿದು ಬೀಳುತ್ತಿದ್ದರು. ಏನದು ಎಲ್ಲ ಬಿಚ್ಚಿ ಕುಣಿಯುವುದು ಎಂದು ಹರಿ ಹಾಯ್ದು, ನೃತ್ಯ ಕಲಿಯುವ ಆಸಕ್ತಿಯೇನಾದರೂ ಕಿರಿಯರಿಗೆ ತಳೆದರೆ ಚಿಗುರಿನಲ್ಲೇ ಚಿವುಟಿ ಹಾಕುತ್ತಿದ್ದರು. ಕಾಲ ಕಳೆದಂತೆ, ಜನರ ವ್ಯಕ್ತಿತ್ವ ಬೆಳೆದಂತೆ/ವಿಕಸಿತವಾದಂತೆ ನೃತ್ಯದ ಬಗ್ಗೆ ಇರುವ ತಪ್ಪು ಗ್ರಹಿಕೆ ಕಡಿಮೆಯಾಗುತ್ತಾ ಇದೆ. ನೃತ್ಯದ ಜೊತೆ ಲೈಂಗಿಕ ಆಕರ್ಷಣೆ (ಅಶ್ಲೀಲವೆನ್ನುತ್ತಾರೆ ಕೆಲವರು) ಮೊದಲಿನಿಂದಲೂ ಜೊತೆಯಾಗಿದೆ. ಈ ಅಂಶ ಹಿರಿಯರು ಉರಿದು ಬೀಳುವುದಕ್ಕೆ ಪೂರಕವಾಗಿರಬಹುದು. ಆದರೆ ಲೈಂಗಿಕ ಆಕರ್ಷಣೆ ಮನುಷ್ಯನ ತಲೆಯಲ್ಲಿ, ರಕ್ತದಲ್ಲಿ, ನರ ನಾಡಿಗಳಲ್ಲಿರಬೇಕಾದರೆ, ನಾಟ್ಯವನ್ನು ದೂಷಿಸುವುದು ಸರಿಯಲ್ಲವೆಂಬುದು ನನ್ನ ಅನಿಸಿಕೆ. ಲೈಂಗಿಕ ಆಕರ್ಷಣೆಯಿಲ್ಲದ ನೃತ್ಯವೂ ಕೂಡ ಚಾಲ್ತಿಯಲ್ಲಿದೆ.

ನೃತ್ಯದಲ್ಲಿ ಬಹಳಷ್ಟು ಬಗೆಗಳು. ತಮಟೆಯ ನಾದ, ಲಯ, ತಾಳಗಳಿಗೆ ಹೆಜ್ಜೆ ಹಾಕಿ ಕುಣಿಯುವುದು ಕರ್ನಾಟಕದಲ್ಲಿ "ಅಣ್ಣಮ್ಮನ ನೃತ್ಯ" ಎಂದೇ ಪ್ರಖ್ಯಾತವಾಗಿದೆ.ನಮ್ಮೂರಿನಲ್ಲಿ ನಡೆಯುವ ಮಾರಮ್ಮನ ಜಾತ್ರೆಯಲ್ಲಿಯೂ ಕೂಡ ಮಾಡುವುದು ಇದೇ ನೃತ್ಯವಾದರೂ, ಈ ನೃತ್ಯಕ್ಕೆ ಬೆಂಗಳೂರಿನ ಅಣ್ಣಮ್ಮ ದೇವಿಯ ಹೆಸರು ಬಂದಿರುವುದು ಏಕೆ ಎಂದು ತರ್ಕ ಮಾಡಲು ಸ್ವಲ್ಪ ಕಷ್ಟ! ಈ ನೃತ್ಯದಿಂದ ಸಿಕ್ಕುವ ಆನಂದ ಅಪಾರ, ಅದರಲ್ಲೂ ಬೇರೆ ನೃತ್ಯಗಳ ಅಭ್ಯಾಸವಿಲ್ಲದವರಿಗೆ ಇದು ವರ. ಇತ್ತೀಚೆಗೆ ಸಾಲ್ಸಾ ಎಂಬ ಇಟಾಲಿಯನ್ ನೃತ್ಯ ಬಹಳ ಚಾಲ್ತಿಯಲ್ಲಿರುವದನ್ನು ಕೇಳಿದ್ದೀನಿ. ಹಿಂದೆ ಬ್ರೇಕ್ ನೃತ್ಯ, ಡಿಸ್ಕೋ ನೃತ್ಯ ಎಂಬಿತ್ಯಾದಿ ಪದಗಳನ್ನು ಕೇಳಿದ್ದೆ, ಆದರೆ ಇವುಗಳ ಬಗ್ಗೆ ನನಗೆ ಅರಿವಿಲ್ಲ. ಡೊಳ್ಳು ಕುಣಿತ, ನಂದಿ ಕುಣಿತ ಇತ್ಯಾದಿಗಳು ನಮ್ಮಲ್ಲಿ ಜಾನಪದ ನೃತ್ಯಗಳೆಂದು ಪ್ರಸಿದ್ಧಿ ಪಡೆದಿವೆ.

ಇನ್ನು ನೃತ್ಯ ಮಾಡಲು ಬಹಳಷ್ಟು ಜನಕ್ಕೆ ನಾಚಿಕೆ, ಸಂಕೋಚ. ಅದು ತಾವು ನುರಿತ ನೃತ್ಯಪಟುಗಳಲ್ಲವೆಂಬ ಕೀಳರಮೆ, ದೇಹದ ಭಾರ - ಡೊಳ್ಳು ಹೊಟ್ಟೆ, ಇನ್ನಿತರ ಬಿಗುಮಾನಗಳು ಇದಕ್ಕೆ ಕಾರಣವಾಗುತ್ತವೆ. ಇಂತಹ ಮಾನಸಿಕ ಅಡೆತಡೆಗಳಿಂದ ಹೊರಬಂದು ಕುಣಿದಾಗಲೇ, ಕುಣಿತದ ಮಹತ್ವ, ಅದು ಕೊಡುವ ಖುಷಿ ಗೊತ್ತಾಗುವುದು. ಆರೋಗ್ಯದ ದೃಷ್ಟಿಯಿಂದಲೂ ನೃತ್ಯ ಬಹಳ ಒಳ್ಳೆಯ ವ್ಯಾಯಾಮ. ನಿಯತ ಅಭ್ಯಯಿಸುವುದರಿಂದ ಹೊಟ್ಟೆ ಮತ್ತು ಇನ್ನಿತರ ಜಾಗದಲ್ಲಿ ಶೇಖರವಾಗುವ ಅನಗತ್ಯ ಕೊಬ್ಬನ್ನು/ಬೊಜ್ಜನ್ನು ಕರಗಿಸಲು ಉಪಯುಕ್ತ ಮತ್ತು ನಮ್ಮ ಮನಸ್ಸಿನ ಋಣಾತ್ಮಕ ಶಕ್ತಿ ಯನ್ನು ಹೊರದಬ್ಬುತ್ತದೆಂದು ಹಲವಾರು ಸಂಶೋಧನೆಗಳು ತಿಳಿಸುತ್ತವೆ. ಅಂದರೆ ಆಧ್ಯಾತ್ಮಿಕತೆಯೆಡೆಗೆ ನಮ್ಮನ್ನು ಕರೆದೊಯ್ಯುವ ಒಂದು ರೀತಿಯ ಯೋಗಾಸನ ಎಂದರೂ ತಪ್ಪಾಗಲಾರದು! ಎನಾಗುತ್ತದೋ ಬಿಡುತ್ತದೋ, ಮುಂದೆ ಎಲ್ಲಾದರೂ ಸಮಾರಂಭದಲ್ಲಿ ಜನರು ಕುಣಿಯಲು ಪ್ರಾರಂಭಿಸಿದರೆ, ಹೆಜ್ಜೆ ಹಾಕಿ ನಾವೂ ಆನಂದಿಸಲಂತೂ ಅನುವಾಗುತ್ತದೆ.

ಇವೆಲ್ಲಾ ಯಾಕೆ ನಮ್ಮ ವರಕವಿ ಬೇಂದ್ರೆ ಮಾಸ್ತರರು ಬರೆದಿಲ್ಲವೆ? (ಲೇಖನಕ್ಕೆ ಪೂರಕವಾದ ಪದ್ಯದ ಕೆಲವೇ ಚರಣಗಳನ್ನು ಆಯ್ದು ಮುದ್ರಿಸಿದ್ದೇನೆ)

ಕುಣಿಯೋಣು ಬಾರs
ಕುಣಿಯೋಣು ಬಾ ||

ತೀರದ
ತೋರದ
ಹಾಳು ಸಂಸಾರ್ ಅದ
ಮೀರಿದ ಭಾರ್ ಅದ | ಕುಣಿ....
ಬಿಸಿ ದು:ಖದರಿವ್ಯಾಕ
ಹುಸಿ ಸುಖದ ಪರಿವ್ಯಾಕ
ನಕ್ಕsಸುನೂ ಬೇಕ! ಕುಣಿ...

ನಾನಲ್ಲ
ನೀನಲ್ಲ
ನನ್ನಲ್ಲಿ ನೀನಿಲ್ಲ
ಸಾವಿನ ನೋವಿಲ್ಲ! ಕುಣಿ...
ಇದ್ದದ್ದು ಮರೆಯೋಣ
ಇಲ್ಲದ್ದು ತೆರೆಯೋಣ
ಹಾಲ್ಜೇನು ಸುರಿಯೋಣ! ಕುಣಿ...

ಕೋಲ್ಯಾಕ
ಸಾಲ್ಯಾಕ
ಕಲಿಕಿಯ ಕಾಲ್ಯಾಕ
ಹಿಗ್ಗಿಲೆ ನಡಿ ಸಾಕ! ಕುಣಿ...
ಘಾಳೇನು ತೀಡ್ಯಾವು
ನಂಹಾಂಗ ಆಡ್ಯಾವು
ಆ ಕುಣಿತ ಬೇಡ್ಯಾವು! ಕುಣಿ...

ತಾಳ್ಯಾಕ
ತಂತ್ಯಾಕ
ರಾಗದ ಚಿಂತ್ಯಾಕ
ಹೆಜ್ಜ್ಯಾಕ ಗೆಜ್ಜ್ಯಾಕ! ಕುಣಿ...
ಕುಲಿಕಿಸಿ ಕೈ ಕೈ
ಮಲಕಿಸಿ ಮೈ ಮೈ
ಥಕ ಥಕ ಥೈ ಥೈ! ಕುಣಿ...

ಕುಡಿಗಣ್ಣು
ನಗೆಗಣ್ಣು
ಚುಚ್ಚೋಣು ಬಿಚ್ಚೋಣು
ತೇಲ್ಗಣ್ಣು ಮುಚ್ಚೋಣು! ಕುಣಿ...
ಕಣಕಣ್ಣ ಹೆಣಿಯೋಣು
ಸೆಳೆದತ್ತ ಮಣಿಯೋಣು
ಮೈಮರಿಯೆ ದಣಿಯೋಣು! ಕುಣಿ...

ನೀವೂ ಕುಣಿತದ ಆನಂದವನ್ನು ಪಡೆದಿದ್ದೀರಾ? ಅಥವಾ ಕುಣಿತದಿಂದ ಯಾವುದಾದರೂ ತೊಂದರೆಯನ್ನು ಅನುಭವಿಸಿದ್ದೀರಾ? ನೃತ್ಯದ ಬಗ್ಗೆ ನಿಮ್ಮ ಅನಿಸಿಕೆಗಳೇನು ? ಕೆಳಗೆ ಬರೆಯಿರಿ!

ಗುರುವಾರ, ಜನವರಿ 01, 2009

೨೦೦೮ ರಲ್ಲಿ ನಾನು ಓದಿದ ಪುಸ್ತಕಗಳು

ಪುಸ್ತಕಗಳು ನಮ್ಮ ಜೀವನವನ್ನು ರೂಪಿಸಿಕೊಳ್ಳಲು, ರೂಪಿಸಿಕೊಂಡ ಜೀವನವನ್ನು ಉತ್ತಮಪಡಿಸಿಕೊಳ್ಳಲು ಬಹಳ ಉಪಯುಕ್ತ. ಇಂದು ಇದು ಬಹಳಷ್ಟು ಮಂದಿಗೆ ತಿಳಿದ ಸತ್ಯ! ಜೀವನೋದ್ಧಾರಕ್ಕಷ್ಟೇ ಅಲ್ಲ, ಓದು ಮನರಂಜನೆಗೂ ಕೂಡ ಆಗಬಹುದು.ಬಹಳಷ್ಟು ಜನ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಂಡಿರುತ್ತೇವೆ. ನಾನೂ ನನ್ನ ಜೀವನದಲ್ಲಿ ಹೆಚ್ಚಿನ ಉಪಯುಕ್ತವಾದ ಗುಣಗಳನ್ನು ಬೆಳೆಸಿಕೊಳ್ಳುವ ಸಲುವಾಗಿ, ಅನುಪಯುಕ್ತ ಗುಣಗಳನ್ನು ತೊಡೆದು ಹಾಕುಲು ನಾನು ಕಂಡು ಕೇಳಿ ಅರಿದ ಕೆಲವು ಪ್ರಮುಖ ವ್ಯಕ್ತಿಗಳ ಪುಸ್ತಕಗಳನ್ನು ಓದುತ್ತಾ ಬಂದಿದ್ದೇನೆ. ಕೆಲವನ್ನು ಮನರಂಜನೆಗಾಗಿ ಕೂಡ ಓದಿದ್ದೀನಿ. ನಾನು ೨೦೦೮ ರಲ್ಲಿ ಓದಿದ ಕೆಲವು ಪುಸ್ತಕಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ. ಆ ಪುಸ್ತಕಗಳ ಬಗ್ಗೆ ವ್ಯಯಕ್ತಿಕ ಅಭಿಪ್ರಾಯವಾಗಿ ಒಂದೆರಡು ಸಾಲುಗಳನ್ನು ಕೂಡ ಬರೆದಿದ್ದೀನಿ. ಓದುಗರು ಇದನ್ನು ವಿಮರ್ಶೆ ಎಂದು ತಿಳಿಯಬಾರದಾಗಿ ವಿನಂತಿ.

ಮರಳಿ ಮಣ್ಣಿಗೆ, ಮೈ ಮನಗಳ ಸುಳಿಯಲ್ಲಿ - ಡಾ ಶಿವರಾಮ ಕಾರಂತ
ಎರಡು ಪುಸ್ತಕಗಳೂ ಉತ್ತಮ ಪುಸ್ತಕಗಳು. ಬರವಣಿಗೆ ಶೈಲಿ ಓದುಗರನ್ನು ಮುದಗೊಳಿಸುತ್ತದೆ. ಎರಡೂ ಸುಮಾರು ೨ ದಶಕಗಳ ಹಿಂದಿನ ಕಥೆಗಳು ಎನ್ನಬಹುದಾದರೂ ಮರಳಿ ಮಣ್ಣಿಗೆ ಇವತ್ತಿಗೂ ಪ್ರಸ್ತುತವಾಗಬಹುದಾದಂತ ಕಾದಂಬರಿ. ಮೈ ಮನಗಳ ಸುಳಿಯಲ್ಲಿ ದೇವದಾಸಿಯರ ಬಗ್ಗೆ ಬರೆದ ಕಾದಂಬರಿ. ಹಿಂದೆ ನಾನು ಓದಿದ ಕಾರಂತರ ಪುಸ್ತಕಗಳಾದ ಮೂಕಜ್ಜಿಯ ಕನಸುಗಳು (ಕಾರಂತರಿಗೆ ಙ್ನಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ) ಮತ್ತು ಸರಸಮ್ಮನ ಸಮಾಧಿ ಪುಸ್ತಕಗಳಿಗೆ ಹೋಲಿಸಿದರೆ ನನಗೆ ಈ ಪುಸ್ತಗಳು ಅಷ್ಟು ಇಷ್ಟವಾಗಲಿಲ್ಲ. ಕಾರಂತರ ಕನ್ನಡಿಯಲ್ಲಿ ಕಂಡಾತ, ಆತ್ಮ ಕಥೆಗೆ ಹತ್ತಿರವಾಗಬಲ್ಲ ಹುಚ್ಚು ಮನಸ್ಸಿನ ಹತ್ತು ಮುಖಗಳು ಮತ್ತು ಬಾಳ್ವೆಯೇ ಬೆಳಕು ಪುಸ್ತಕಗಳನ್ನು ಕೂಡ ಹಿಂದೆ ಓದಿದ್ದೀನಿ.

ನನ್ನ ಭಯಾಗ್ರಫಿ - ಬೀಚಿ
ಹೋರಾಟದ ಹಾದಿ - ಡಾ ಹೆಚ್ ನರಸಿಂಹಯ್ಯ

ಕನ್ನಡದ ಆತ್ಮ ಕಥೆಗಳಲ್ಲಿ ಅತ್ಯುತ್ತಮವಾದವು ಮತ್ತು ಉತ್ತೇಜನಕಾರಿಯಾದವುವು ಎನ್ನಬಹುದು. ಮತ್ತೂ ಬಹಳಷ್ಟು ವಿಷಯಗಳಲ್ಲಿ ಆದರ್ಶಪ್ರಾಯವಾಗಬಲ್ಲವು.

ನೆನಪಿನ ದೋಣಿಯಲ್ಲಿ - ಕುವೆಂಪು
ಎರಡು ಭಾಗಗಳಲ್ಲಿರುವ ಈ ಬೃಹತ್ ಆತ್ಮಕಥೆಯನ್ನು ಸ್ವಲ್ಪ ಕಷ್ಟ ಪಟ್ಟೇ ಓದಿ ಮುಗಿಸಿದೆ. ಕುವೆಂಪುರವರ ಅತ್ಯುತ್ತಮ ಕೃತಿಗಳಾದ ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡತಿ ಪುಸ್ತಕಗಳ ಮಟ್ಟಕ್ಕೆ ಅವರ ಆತ್ಮಕಥೆ ಏರಿಲ್ಲ. ಆತ್ಮಕಥೆಗೂ, ಕಾದಂಬರಿಗಳಿಗೂ ವ್ಯತ್ಯಾಸವಿರುತ್ತದೆ ಹೋಲಿಕೆ ಸಲ್ಲ ಎಂದರೆ, ನಾನು ಓದಿರುವ ಇನ್ನಿತರ ಆತ್ಮಕಥೆಗಳಿಗೆ ಹೋಲಿಸಿ ನೋಡಿದರೆ ಕೂಡ ಅಷ್ಟೇನು ಉತ್ತಮವಾದದ್ದಲ್ಲ ಎಂದೇ ಹೇಳಬಹುದಾಗಿದೆ.

ಅಲೆಮಾರಿನ ಅಂಡಮಾನ್ ಮತ್ತು ಮಹಾನದಿ ನೈಲ್, ಚಿದಂಬರ ರಹಸ್ಯ, ಕನ್ನಡ ನಾಡಿನ ಹಕ್ಕಿಗಳು ಭಾಗ -೧ - ಪೂರ್ಣಚಂದ್ರ ತೇಜಸ್ವಿ
ಅಲೆಮಾರಿನ ಅಂಡಮಾನ್ ಕನ್ನಡದಲ್ಲಿರುವ ಅತ್ಯುತ್ತಮ ಪ್ರವಾಸ ಕಥನ. ಕನ್ನಡ ನಾಡಿನ ಹಕ್ಕಿಗಳು ಭಾಗ-೧ ಇದು ಬರೀ ಪಕ್ಷಿಗಳ ಬಗ್ಗೆಯ ವೈಙ್ನಾನಿಕ ಪರಿಚಯವಾಗದೆ, ತಮ್ಮ ಜೀವನದಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ಕೂಡ (ಪಕ್ಷಿಗಳಿಗೆ ಸಂಬಂಧಿಸಿದ) ಒಳಗೊಂಡಿದೆ. ಕೆಲವು ಕಡೆ ತಿಳಿ ಹಾಸ್ಯದಿಂದ ಕೂಡ ಕೂಡಿದೆ. ಪಕ್ಷಿ ವೀಕ್ಷಕರಿಗಂತೂ ರಸದೌತಣ. ಪಕ್ಷಿ ವೀಕ್ಷಕರಲ್ಲದವರಿಗೂ ಇಷ್ಟವಾಗಬಲ್ಲುದು! ಇನ್ನು ಚಿದಂಬರ ರಹಸ್ಯ ಚಿಕ್ಕಮಗಳೂರಿನಲ್ಲಿ ಕಾಫಿ ತೋಟಗಳ ನಡುವೆ ನಡೆಯುವ ಕಥೆ. ಬರೆದ ಶೈಲಿ ಚೆನ್ನಾಗಿದ್ದರೂ ನನಗೆ ಅಷ್ಟು ಇಷ್ಟವಾಗಲಿಲ್ಲ! (ಇವರ ಇತರ ಪುಸ್ತಕಗಳಿಗೆ ಹೋಲಿಸಿದ್ದಕ್ಕೆ, ಮತ್ತು ಅವರ ತಂದೆ ಕುವೆಂಪುರವರ ಸಾಮಾಜಿಕ ಕಾದಂಬರಿಗಳ ಜೊತೆ ಹೋಲಿಸಿ ಓದಿದ್ದರ ಪರಿಣಾಮವೂ ಇರಬಹುದು). ಹಿಂದೆ ತೇಜಸ್ವಿಯವರ "ಅಣ್ಣನ ನೆನಪುಗಳು" ಪುಸ್ತಕ ಓದಿದ್ದೆ.

ಆವರಣ - ಭೈರಪ್ಪ
ಐತಿಹಾಸಿಕ ಕಾದಂಬರಿ. ಉತ್ತಮ ಬರವಣಿಗೆ ಶೈಲಿ, ಸಂಶೋಧನೆಗಳಿಂದ ಕೂಡಿದ ಕಾದಂಬರಿ. ಸುಮಾರು ೧೦ ಕ್ಕಿಂತ ಹೆಚ್ಚು ಮುದ್ರಣಗಳನನ್ನು ಕಂಡಿದೆಯೆನ್ನಿಸುತ್ತದೆ! ಭೈರಪ್ಪನವರ ಗೃಹಭಂಗ ಕಾದಂಬರಿಯನ್ನು ಹಿಂದೆ ಓದಿದ್ದೆ.

we the living - Ayn Rand
ಆಯನ್ ರಾಂಡ್ ರವರ fountainhead, atlas shrugged, anthem ಪುಸ್ತಕಗಳನ್ನು ಹಿಂದೆ ಓದಿ ಮುಗಿಸಿದ್ದ ನನಗೆ ಈ ಪುಸ್ತಕವನ್ನು ಓದದೆ ಇರಲಾಗಲಿಲ್ಲ. ಆಯನ್ ರಾಂಡ್ ರವರ ಬರವಣಿಗೆಯ ಶಕ್ತಿ ಅದು! ಈ ಪುಸ್ತಕದಲ್ಲಿ ಆಯನ್ ರಾಂಡ್ ರವರ ವಸ್ತುನಿಷ್ಟತೆ (objectivism) ಕಥೆಯ ವಸ್ತುವಾಗಿದ್ದರೂ,ತಮ್ಮ ಇತರ ಪುಸ್ತಕಗಳೊಷ್ಟು ಹರಿತವಾಗಿಲ್ಲ. ರಷ್ಯಾದ ಎಡಪಂಥೀಯರ ದುರಾಡಳಿತದಲ್ಲಿ ಸಮಾನತೆಯ ಹೆಸರಿನಲ್ಲಿ ಹೇಗೆ ಕಷ್ಟ ಪಟ್ಟು ಮೇಲೆ ಬರುವ ಜನರು ತುಳಿಯಲ್ಪಟ್ಟರು ಎಂಬುದು ಕಥೆ. ಆಯನ್ ರಾಂಡ್ ರವರ ಕೃತಿಗಳನ್ನು ನನಗೆ ಬಹಳ ಇಷ್ಟವಾದ ಕಾದಂಬರಿಯಿಂದ ಹಿಡಿದು, ಕಡಿಮೆ ಇಷ್ಟವಾದ ಕಾದಂಬರಿಗಳ ಪಟ್ಟಿ ಮಾಡಿದರೆ ಸರದಿ ಹೀಗಿರುತ್ತದೆ. atlas shrugged,fountainhead,anthem,we the living. ಇವರ ಕಾದಂಬರಿಯ ಮುಖ್ಯ ವಸ್ತುವಾದ ನಾಯಕನ (/ನಾಯಕಿಯ) ವಸ್ತುನಿಷ್ಟತೆಯ ಜೀವನ ಇಷ್ಟವಾದರೂ, ಇದು ನಮ್ಮಂತ ಮಧ್ಯಮ ವರ್ಗದವರ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆ ಮೂಡುತ್ತದೆ!

The white tiger - Arvind Adiga
೨೦೦೮ ರ ಬೂಕರ್ ಪ್ರಶಸ್ತಿ ತಂದ ಕಾದಂಬರಿಯೆಣಿಸಿ, ಮತ್ತು ನಾನು ಓದಿದ ಮೊದಲ ಬೂಕರ್ ಪ್ರಶಸ್ತಿ ವಿಜೇತ ಕಾದಂಬರಿ. ನನಗೆ ನಿರಾಸೆಯನ್ನುಂಟು ಮಾಡಿತು. ಇದರ ಧೀರ್ಘ ವಿಮರ್ಶೆ ಆಂಗ್ಲ ಭಾಷೆಯಲ್ಲಿ ಇಲ್ಲಿದೆ!
http://guruve.blogspot.com/2008/11/white-tiger-aravind-adiga.html

MidNight's children - Salman Rushdie
ಅರವಿಂದ ಅಡಿಗ ರವರ ಪುಸ್ತಕದಿಂದ ನಿರಾಸೆಗೊಂಡು ಇತರ ಬೂಕರ್ ಪ್ರಶಸ್ತಿ ವಿಜೇತ ಕೃತಿಗಳನ್ನು ಓದಬೇಕೆಂದೆನಿಸಿ ಓದಿದ ಪುಸ್ತಕ. ಕೆಲವೊಂದು ಪುಟಗಳಲ್ಲಿನ ವಿವರಣೆಗಳ ಉತ್ತಮ ಬರವಣಿಗೆ ಶೈಲಿಯನ್ನು ಬಿಟ್ಟರೆ, ಅಷ್ಟೇನೂ ಇಷ್ಟವಾಗಲಿಲ್ಲ. ಇನ್ನು ಮುಂದೆ ಬೂಕರ್ ಪ್ರಶಸ್ತಿ ವಿಜೇತ ಅಥವಾ ಬೂಕರ್ ಪ್ರಶಸ್ತಿ ಸ್ಪರ್ಧೆಗೆ ನೇಮಕಗೊಳ್ಳುವ ಯಾವುದೇ ಪುಸ್ತಕವನ್ನು ಓದಬಾರದೆಂಬ ನಿಶ್ಚಯಕ್ಕೆ ಬಂದಿದ್ದೇನೆ. (ಪುಸ್ತಕದ ಭಾಷೆ ನನ್ನ ಸಾಮರ್ಥ್ಯಕ್ಕೆ ಸ್ವಲ್ಪ ಕ್ಲಿಷ್ಠ ವಾಗಿದ್ದುದೂ ಕೂಡ ಈ ಪುಸ್ತಕದ ಬಗ್ಗೆ ಈ ನನ್ನ ಋಣಾತ್ಮಕ ಧೋರಣೆಗೆ ಒಂದು ಕಾರಣ ಎನ್ನಬಹುದು)

Not a penny more Not a penny less - Jeffery Archer
ಮನರಂಜನೆಗಾಗಿ ಓದಿದ ಪುಸ್ತಕ.ಇಷ್ಟವಾಯಿತು ಎನ್ನಬುದಷ್ಟೆ, ಜೆಫ್ರಿ ಆರ್ಚರ್ ರವರ ಅಭಿಮಾನಿ ಆಗಲಿಲ್ಲ!

Netaji in germany - N G Ganpuley
ಸುಭಾಷ್ ಚಂದ್ರ ಬೋಸ್ ರವರು ಜರ್ಮನಿಯಲ್ಲಿ ಹೇಗೆ ಸೈನ್ಯ ಕಟ್ಟಿದರು, ಹೇಗೆ ಭಾರತದ ಸ್ವಾತಂತ್ರದ ಕನಸು ಕಂಡರು, ಅವರು ಎದುರಿಸಿದ ಕಷ್ಟ ಕಾರ್ಪಣ್ಯಗಳ ಚಿತ್ರಣ ಮೂಡೀ ಬಂದಿದೆ. ಲೇಖಕರು ನೇತಾಜಿಯವರ ಜೊತೆ ಜರ್ಮನಿಯಲ್ಲಿ ಇದ್ದವರು. ಉತ್ತಮ ಪುಸ್ತಕ.

ಇನ್ನೂ ಹಲವಾರು ಪುಸ್ತಕಗಳ(ತೀನಂಶ್ರೀ ಸಮಗ್ರ ಸಾಹಿತ್ಯ, ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗ, ಜಿ ಪಿ ರಾಜರತ್ನಂ ರವರ ಭ್ರಮರ, ಕುವೆಂಪುರವರ ಕೆಲವು ಕವನ ಸಂಕಲನಗಳು ಇತ್ಯಾದಿ) ಬಿಡಿ ಲೇಖನ, ಕವನಗಳನ್ನು ಬಹಳಷ್ಟು ಓದಿದ್ದರೂ ಅವುಗಳನ್ನು ಇಲ್ಲಿ ಉಲ್ಲೇಖಲಿಸಲಾಗಲಿಲ್ಲ.

ಮುಂದೆ ಓದಲು ವಿನಾಯಕ ಕೃಷ್ಣ ಗೋಕಾಕ್ ರವರ ಕೃತಿ ಸಮರಸವೇ ಜೀವ (ಭಾಗ ೧ -ಇಜ್ಜೋಡು, ಭಾಗ ೨ - ಏರಿಳಿತ) ನನ್ನ ಮೇಜಿನ ಮೇಲಿದೆ!

ಈ ಪುಸ್ತಕಗಳನ್ನು ನೀವು ಓದಿದ್ದೀರಾ? ನಿಮ್ಮ ಅಭಿಪ್ರಾಯಗಳನ್ನು ಕೆಳಗೆ ಪ್ರತಿಕ್ರಿಯಿಸಿ!