ಸೋಮವಾರ, ಸೆಪ್ಟೆಂಬರ್ 28, 2009

ಸಿಂಗರಿಸಿಕೊಂಡ ಬೆಂಗಳೂರು ಗೋಡೆಗಳು..

ಸಮರಸ ಸಂಪಾದಕೀಯದಲ್ಲಿ..

ಬಿ ಬಿ ಎಂ ಪಿ ಪ್ರಾರಂಭಿಸಿರುವ, ಗೋಡೆಗಳ ಸ್ವಚ್ಚತೆ ಆಂದೋಲನಕ್ಕೆ ತುಂಬು ಹೃದಯದ ಅಭಿನಂದನೆಗಳನ್ನು ಹೇಳಬೇಕು. ಆಂಟಿಸಿದ ಚಲನಚಿತ್ರದ ಜಾಹೀರಾತಿನ, ಧರಣಿಗಳ ಭಿತ್ತಿಪತ್ರಗಳು, ಕೆಲವೆಡೆ ಅವುಗಳು ಹರಿದು ಕುಲಗೆಟ್ಟ ಗೋಡೆಗಳನ್ನು ನೋಡಿ ಅಸಹ್ಯವೆನಿಸುತ್ತಿದ್ದಾಗ, ಆ ಗೋಡೆಗಳಲ್ಲಿ ಕರ್ನಾಟಕದ ಪ್ರವಾಸಿ ಸ್ಥಳಗಳನ್ನು, ಕಲೆಗಳನ್ನು ಹಾಗೂ ಇತರೆ ಸಾಮಾನ್ಯ ಕಲಾಕೃತಿಗಲನ್ನು ಗೋಡೆಗಳ ಮೇಲೆ ಸುಂದರವಾಗಿ ಚಿತ್ರಿಸಲಾಗುತ್ತಿದೆ. ಇದರಿಂದ ಗೋಡೆ ಮತ್ತು ಬೆಂಗಳೂರು ನಗರದ ಅಂದ ಹೆಚ್ಚುವುದಲ್ಲದೆ, ಸಾಕಷ್ಟು ಜನಕ್ಕೆ ಗೊತ್ತಿಲ್ಲದ ಪ್ರವಾಸಿ ಸ್ಥಾನಗಳ ಒಂದು ಸಣ್ಣ ಚಿತ್ರಣ ಕೂಡ ದೊರಕುತ್ತಿದೆ. ಬಿ ಬಿ ಎಂ ಪಿ ಯಷ್ಟೇ ಅಲ್ಲದೇ ಗೋಡೆಗಳ ಮೇಲೆ ಅತ್ಯುತ್ತಮವಾಗಿ ಚಿತ್ರ ಬಿಡಿಸುತ್ತಿರುವ ಕಲಾವಿದರಿಗೂ ನಮನ.


bird


ದಾರಿ ತಪ್ಪಿದ ಲೇಖನ


ಪ್ರಕಾಶ್ ಬೆಳವಾಡಿಯವರು ಡಿ ಎನ್ ಎ ದೈನಿಕ ಪತ್ರಿಕೆಯ ೨೨/ಸೆಪ್ಟಂಬರ್/೨೦೦೯ ರ ಸಂಪಾದಕೀಯದಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ಗೋಡೆಗಳನ್ನು ಅಂದಗೊಳಿಸುವ ಇಡೀ ಪ್ರಕ್ರಿಯೆಯನ್ನು ಟೀಕಿಸಿದ್ದಾರೆ. ಕಲೆಯ ಕೊಲೆ ಎಂದಿದ್ದಾರೆ(Art attack). ಆದರೆ ಈ ಲೇಖನವನ್ನು ಓದಿದ ಮೇಲೆ ಅನ್ನಿಸುವುದು, ಯಾವುದೋ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ, ಬಿ ಬಿ ಎಂ ಪಿ ಮೇಲಿನ ಅಸಹನೆಯಿಂದಲೋ(ಬೇರೆ ಯಾವುದೋ ಕಾರಣಕ್ಕೆ), ಅಥವಾ ಕಲಾವಿದಯ ಆಯ್ಕೆಯ ಪ್ರಕ್ರಿಯೆ ತಮಗೆ ಇಷ್ಟವಾಗಿಲ್ಲವೆಂದೋ, ಅಥವಾ ಕಲಾವಿದರ ನಡುವಿನ ಮತ್ಸರವೋ, ಅಥವಾ ಗೋಡೆ ಮೇಲೆ ಬರೆಯುವ ಕಲಾವಿದರೆಂಬ ಅಸಡ್ಡೆಯೋ ಬರೆದಿರುವ ಚಿತ್ರಗಳು ಕಳಪೆಯೆಂದು ಸಾರಾಸಗಟಾಗಿ ಟೀಕಿಸಿದ್ದಾರೆ. ಬಿ ಬಿ ಎಂ ಪಿ, ಗೋಡೆಗಳನ್ನು ಅಂದಗೊಳಿಸುವ ಕ್ರಿಯೆಯಲ್ಲಿ ದಾರಿ ತಪ್ಪಿದೆ ಎಂದಿದ್ದಾರೆ. ಆದರೆ ಇವರ ಆಧಾರರಹಿತ ಟೀಕೆಗಳನ್ನು ಓದಿದಾಗ ದಾರಿ ತಪ್ಪಿರುವುದು ಬೆಳವಾಡಿಯವರ ಲೇಖನವೆಂದೆನಿಸುತ್ತದೆ.

ಮುಂದೆ ಓದಿ

ಭಾನುವಾರ, ಸೆಪ್ಟೆಂಬರ್ 27, 2009

ಮೊದ ಮೊದಲ್ ಓದಿದ ಗಣೇಶಯ್ಯ ಪುಸ್ತಕ

ಸಮರಸದ "ಪುಸ್ತಕ ಪ್ರೀತಿ" ವಿಭಾಗದಲ್ಲಿ ರವೀಶ, ಗಣೇಶಯ್ಯನವರ ಹೊಸ ಕಾದಂಬರಿ "ಕರಿಸಿರಿಯಾನ" ದ ಪರಿಚಯ ಮಾಡಿಕೊಡುತ್ತಾರೆ.

ಕರಿಸಿರಿಯಾನ - ಒ೦ದು ರೋಮಾ೦ಚಕ ಓದು


>karisiriyaana_k_n_ganeshayya_bookcover

ಗೆಳೆಯ ಗುರುಪ್ರಸಾದ್ ನನಗೆ ಕೆ.ಎನ್.ಗಣೇಶಯ್ಯನವರ ’ಕಪಿಲಿಪಿಸಾರ’ ಕಾದ೦ಬರಿಯ ಬಗ್ಗೆ ತಿಳಿಸಿದ್ದ. ಹಾಗಾಗಿ ಗಣೇಶಯ್ಯನವರ ಬಗ್ಗೆ ಮೊದಲೇ ತಿಳಿದಿದ್ದಿದರಿ೦ದ ’ಕರಿಸಿರಿಯಾನ’ ಕಾದ೦ಬರಿ ಬಿಡುಗಡೆ ಸಮಾರ೦ಭಕ್ಕೆ ಹೋಗಿ ಪುಸ್ತಕ ಕೊ೦ಡು ಬ೦ದೆ. ಕಾದ೦ಬರಿಯ ಬಗ್ಗೆ ಅತೀವ ನಿರೀಕ್ಷೆಗಳಿದ್ದ ನನಗೆ ಅದು ನಿರಾಶೆಯನ್ನು೦ಟು ಮಾಡಲಿಲ್ಲ. ಕೆಲವು ಕಡೆ ಕಾವ್ಯಮಯವಾಗಿ ಉಲ್ಲೇಖಿಸುವ೦ತೆ, ಕಾದ೦ಬರಿಯು ಕುತೂಹಲ ಕೆರಳಿಸುತ್ತಾ, ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ, ಓದಿಸಿಕೊ೦ಡು ಹೋಗುತ್ತದೆ.

ಈ ಕಾದ೦ಬರಿಯು ಒ೦ದು ಕಾಲ್ಪನಿಕ ಕತೆ. ಆದರೆ ಇದರಲ್ಲಿ ಬರುವ ಎಲ್ಲಾ ವಿವರಗಳು ಕಾಲ್ಪನಿಕವಲ್ಲ. ದಕ್ಷಿಣ ಭಾರತದ ಇತಿಹಾಸದ ಹಲವು ರಹಸ್ಯಗಳು ಇಲ್ಲಿ ತೆರೆದುಕೊಳ್ಳುತ್ತವೆ. ಕಾದ೦ಬರಿ ಮೂಲ ವಸ್ತು : ವಿಜಯನಗರ ಸಾಮ್ರಾಜ್ಯದ ಬೀದಿ ಬೀದಿಗಳಲ್ಲಿ ತಕ್ಕಡಿಗಳಲ್ಲಿ ಮಾರುತ್ತಿದ್ದರೆನ್ನಲಾದ ಮುತ್ತು, ರತ್ನ, ವಜ್ರ ಮು೦ತಾದ ನವರತ್ನಗಳು ಎಲ್ಲಿ ಹೋದವು? ವಿಜಯನಗರದ ಅಗಾಧ ನಿಧಿಯು ಎಲ್ಲಿ ಕಳೆದು ಹೋಯಿತು? ಮುಂದೆ ಓದಿ..

ಶುಕ್ರವಾರ, ಸೆಪ್ಟೆಂಬರ್ 25, 2009

ರವೀಶ ಕಂಡ "ಮನಸಾರೆ"

ಸಮರಸದಲ್ಲಿ ಮನಸಾರೆ ಚಲನಚಿತ್ರ ವಿಮರ್ಶೆ ಓದಿ..

ಕನ್ನಡದ ಬಹುನಿರೀಕ್ಷಿತ ಚಿತ್ರ ’ಮನಸಾರೆ’ ಇ೦ದು ತೆರೆ ಕ೦ಡಿದೆ. ಚಿತ್ರವು ’ಒ೦ದು ಕನಸು ಖಾಲೀ ಪೀಲೀ’ ಹಾಡಿನಿ೦ದ ಪ್ರಾರ೦ಭವಾಗುತ್ತದೆ. ’ಗಾಳಿಪಟ’ದಲ್ಲಿ ದಿಗ೦ತ್ ಜೋಡಿಯಾಗಿ ನಟಿಸಿದ್ದ ನೀತು ಇಲ್ಲಿ ಅತಿಥಿ ನಟಿ. ’ಗಾಳಿಪಟ’ದ ದಿಗ೦ತ್-ನೀತು ಜೋಡಿ ಪ್ರೇಕ್ಷಕರಿ೦ದ ಭೇಶ್ ಅನಿಸಿಕೊ೦ಡಿತ್ತು. ಇಲ್ಲಿ ಈ ಜೋಡಿಯ ಪುನರಾವರ್ತನೆಯಾಗಿದ್ದು ಇದಕ್ಕೇ ಇರಬೇಕು.

ಚಿತ್ರದ ಮೊದಲ 15-20 ನಿಮಿಷಗಳು ಹಾಸ್ಯದ ರಸದೌತಣವನ್ನು ಬಡಿಸುತ್ತವೆ - ಸ೦ಭಾಷಣೆಗಳಿ೦ದ, ಸನ್ನಿವೇಶಗಳಿ೦ದ. ಆದರೆ ನ೦ತರ ಚಿತ್ರ ಗ೦ಭೀರ ತಿರುವನ್ನು ಪಡೆಯುತ್ತದೆ. ಇದು ಚಿತ್ರದ ಕೊನೆಯವರೆಗೆ ಮು೦ದುವರಿಯುತ್ತದೆ. ಆದರೆ ಹಾಸ್ಯದ ಹೊನಲು ಚಿತ್ರದ ಉಳಿದ ಭಾಗದಲ್ಲಿ ಅಲ್ಲಲ್ಲಿ ಹರಿಯುತ್ತದೆ.. ಮುಂದೆ ಓದಿ

ಮಂಗಳವಾರ, ಸೆಪ್ಟೆಂಬರ್ 22, 2009

ಕಲಾತ್ಮಕ ಪರ್ಯಾಯ ಚಲನಚಿತ್ರಗಳಲ್ಲಿ ಮನರಂಜನೆಯ ಕೊರತೆಯೇ?

ಸಮರಸ ಸಂಪಾದಕೀಯದಲ್ಲಿ,

art_films


ಇತ್ತೀಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯ ಹಿನ್ನಲೆಯಲ್ಲಿ ಮತ್ತೆ ಪರ್ಯಾಯ/ಕಲಾತ್ಮಕ ಚಲನಚಿತ್ರಗಳ ಚರ್ಚೆ ಪ್ರಾರಂಭವಾಗಿದೆ. ಕಲಾತ್ಮಕ ಚಲನಚಿತ್ರ ನಟರ, ನಿರ್ದೇಶಕರ, ನಿರ್ಮಾಪಕರ ಮತ್ತು ಇತರೆ ತಂತ್ರಜ್ಞರ ಪ್ರಶಂಸೆ ಕೂಡ ಈ ಸಮಯದಲ್ಲಿ ಹೆಚ್ಚಾಗುತ್ತದೆ. ಆದರೆ ಆ ಚಲನಚಿತ್ರಗಳ ನಿರ್ಮಾಪಕರ, ನಿರ್ದೇಶಕರ, ನಟರ ಕೊರಗು ಹಲವು. ನಮ್ಮ ಚಲನಚಿತ್ರಗಳನ್ನು ಜನ ಸ್ವೀಕರಿಸುವುದಿಲ್ಲ. ನಮ್ಮ ಚಲನಚಿತ್ರಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವುದಿಲ್ಲ. ಹಣಗಳಿಕೆಯಲ್ಲಿ ಮುಂದಿಲ್ಲ. ಹೀಗೆ ಪಟ್ಟಿಗೆ ಕೊನೆಯಿಲ್ಲ.


ಈ ಪರ್ಯಾಯ ಚಲನಚಿತ್ರಗಳು, ವ್ಯವಹಾರಿಕ ಚಲನಚಿತ್ರಗಳಿಗಿಂತ ಹೇಗೆ ವಿಭಿನ್ನ ಎಂದು ಚಿಂತಿಸುತ್ತಾ ಹೋದರೆ, ಸಾಮಾನ್ಯವಾಗಿ ಈ ಕಲಾತ್ಮಕ ಚಲನಚಿತ್ರಗಳು ಒಂದು ಕಾದಂಬರಿಯನ್ನೋ,ಅಥವಾ ಒಬ್ಬ ಸಾಹಿತಿಯ ಕಥೆಯನ್ನೋ ಆಧರಿಸಿದ್ದಾಗಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿ ವ್ಯವಹಾರಿಕ ಚಲನಚಿತ್ರಗಳಿಗೆ ಕಥೆಗೆ ಹೆಚ್ಚಿನ ಪ್ರಾಧ್ಯಾನವೇನೂ ಇಲ್ಲ. ಪ್ರಾಧ್ಯಾನತೆ ಕೊಟ್ಟರೆ ಜನರ ಪುಣ್ಯ! ಪರ್ಯಾಯ ಚಲನಚಿತ್ರಗಳ ಇಡೀ ಕಥೆ, ನಿರೂಪಣೆ ಒಂದು ಸಮಸ್ಯೆಯ ಸುತ್ತಲೋ, ಒಂದು ವಸ್ತುವಿನ ಸುತ್ತಲೋ ಹೆಣೆದಿರುತ್ತವೆ.ಆ ಚಲನಚಿತ್ರಗಳು ಒಂದು ಸಂದೇಶವನ್ನು ಕೊಡಲು ಬದ್ಧವಾಗಿರುತ್ತವೆ. ಆದರೆ ವ್ಯವಹಾರಿಕ ಚಿತ್ರಗಳು ಚಿತ್ರಾನ್ನವೆನ್ನಬಹುದು. ಚಿತ್ರ ಗೆಲ್ಲಲು, ಹಣ ಗಳಿಸಲು ಏನು ಬೇಕೋ ಅಷ್ಟೆ! ಸಾಮಾನ್ಯವಾಗಿ ಪರ್ಯಾಯ ಚಲನಚಿತ್ರಗಳಲ್ಲಿ ನಟನೆ ಗಂಭೀರ. ಹಾಸ್ಯ ಅಥವಾ ಸಂಗೀತಕ್ಕೆ ಕಡಿಮೆ ಆದ್ಯತೆ. ಅವುಗಳು ಚಲನಚಿತ್ರಗಳಲ್ಲಿ ಸ್ಥಾನ ಪಡೆದರೂ ಚಲನಚಿತ್ರ ಕೊಡುವ ಸಂದೇಶಕ್ಕೆ ಪೂರಕವಾಗಿರುತ್ತವೆ. ಈ ನಿಯಮಬದ್ಧ ಚೌಕಟ್ಟಿನ ಅವಶ್ಯಕತೆ ವ್ಯವಹಾರಿಕ ಚಲನಚಿತ್ರಗಳಿಗಿಲ್ಲ. ಚಲನಚಿತ್ರಕ್ಕೆ ಸಂಬಂಧವಿಲ್ಲದ ಹಾಸ್ಯ, ನೃತ್ಯ ದೄಶ್ಯಗಳು ಕಂಡುಬರುವುದು ಸಾಮಾನ್ಯ.


ಈ ಭಿನ್ನತೆಯನ್ನು ಗಮನಿಸಿದಾಗ, ಒಂದು ಕಲಾತ್ಮಕ ಚಲನಚಿತ್ರವನ್ನು ನೋಡಲು ಒಂದು ಚಂದದ ಮನಸ್ಥಿತಿಯ ಅವಶ್ಯಕತೆ ಇರುತ್ತದೆ. ಚಲನಚಿತ್ರ ಕೊಡುವ ಸಂದೇಶವನ್ನು ಅರಿಯಲು, ಚಲನಚಿತ್ರವನ್ನು ಗಂಭೀರವಾಗಿ ವೀಕ್ಷಿಸಬೇಕಾದ, ಕೆಲವೊಮ್ಮೆ ಚಲನಚಿತ್ರದ ಬಗ್ಗೆ ಚರ್ಚಿಸಬೇಕಾದ ಅವಶ್ಯಕತೆ ಇರುತ್ತದೆ. ಕಲಾತ್ಮಕ ಚಲನಚಿತ್ರಗಳು ಮನರಂಜನೆ ಒದಗಿಸಬಲ್ಲವಾದರೂ, ಆ ಮನರಂಜನೆಯನ್ನು ಅನುಭವಿಸಬೇಕಾದರೆ, ಆ ಚಲನಚಿತ್ರ ಕೊಡುವ ಸಂದೇಶವನ್ನು ಅನುಭವಿಸಬೇಕಾಗುತ್ತದೆ. ಆ ಚಲನಚಿತ್ರ ತನ್ನ ಸಂದೇಶ ಜನರಿಗೆ ತಲುಪಿಸುವಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ (ನಟನೆ, ನಿರೂಪಣೆ ಮುಂತಾದ ಚಲನಚಿತ್ರದ ಅಂಗಗಳು ಇದರಲ್ಲಿ ಸೇರಿಸಬಹುದಾದರೂ), ಮತ್ತು ಅದನ್ನು ಪ್ರೇಕ್ಷಕ ಪ್ರಂಶಸಿಸಬಲ್ಲನೇ ಎಂಬುದರ ಮೇಲೆ ಆ ಚಲಚಿತ್ರ ಒದಗಿಸಬಲ್ಲ ಮನರಂಜನೆ ಅವಲಂಬಿತವಾಗಿದೆ. ಆದರೆ ಎಷ್ಟೋ ಬಾರಿ ಸಾಮಾನ್ಯ ಪ್ರೇಕ್ಷಕನಿಗೆ ಗಂಭೀರವಾಗಿ ಚಲನಚಿತ್ರಗಳನ್ನು ನೋಡುವ ವ್ಯವಧಾನ ಕಡಿಮೆ. ಇದಕ್ಕೆ ಸಾಕಷ್ಟು ಆರ್ಥಿಕ, ಸಾಮಾಜಿಕ ಕಾರಣಗಳಿವೆ. ಆದುದರಿಂದ ಒಂದು ವ್ಯಾವಾಹಾರಿಕ ಚಲನಚಿತ್ರದಲ್ಲಿ ಕಂಡುಬರುವ ಒಂದು ಉತ್ತಮ ಹಾಡು ಮತ್ತು ನೃತ್ಯವೋ, ಒಂದು ಹಾಸ್ಯ ದೃಶ್ಯಾವಳಿಯೋ, ಒಂದು ಭಾವಾತಿರೇಕದ ದೃಶ್ಯಾವಳಿಯೋ ಜನರಿಗೆ ಸುಲಭವಾಗಿ ಮುದ ನೀಡಬಲ್ಲುದು. ಈ ಕಾರಣದಿಂದ ಹಣ ಮಾಡುವುದನ್ನೇ ಮಾನದಂಡವಾಗಿಟ್ಟುಕೊಂಡರೆ, ಈ ರೀತಿಯ ಚಿತ್ರಾನ್ನದ ಚಲನಚಿತ್ರಗಳು ಸುಲಭವಾಗಿ ಗೆಲ್ಲುತ್ತವೆ.

ಮುಂದೆ ಓದಿ

ಸೋಮವಾರ, ಸೆಪ್ಟೆಂಬರ್ 21, 2009

ದನದ ದೊಡ್ಡಿಯಲ್ಲ.. ಕುರಿ ಮಂದೆ!

dana_kuri


ಕಾಂಗ್ರೆಸ್‌ ಸಂಸದರು ಋಷಿಮುನಿಗಳ ಜೀವನವನ್ನು ಅಳವಡಿಸಿಕೊಳ್ಳುವಂತೆ(ಕೇಸರಿ ಬಟ್ಟೆಯನ್ನು ಧರಿಸುವುದನ್ನು ಹೊರತುಪಡಿಸಿ!) ಕೇಂದ್ರ ಸರ್ಕಾರ ಕೊಟ್ಟ ಆದೇಶಕ್ಕೆ, ಮೊದಲ ಬಲಿ"ಪಶು"ವಾದ ’ಶಶಿ ತರೂರ್’ ರವರು ಟ್ವೀಟ್ ಮಾಡಿದಂತೆ, ವಿಮಾನದ ಅಗ್ಗದ ವಿಭಾಗದ(ಎಕಾನಮಿ ಕ್ಲಾಸ್) ದನದ ದೊಡ್ಡಿಯಲ್ಲಿ ದನಗಳ ಜೊತೆ ಇನ್ನು ಮುಂದೆ ಪ್ರಯಾಣಿಸುತ್ತೇನೆಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಭಾರಿ ತಳಮಳ ಸೃಷ್ಟಿಸಿದೆ. ಇತ್ತೀಚೆಗಷ್ಟೇ ಸೋನಿಯಾ ಗಾಂಧಿಯವರು ಅಗ್ಗದ (ಎಕಾನಮಿ ಕ್ಲಾಸ್‌) ವಿಭಾಗದಲ್ಲಿ ಪ್ರಯಾಣಿಸಿದ್ದು, ಅವರನ್ನೇ ಗುರಿಯಾಗಿಟ್ಟುಕೊಂಡು ಕೊಟ್ಟ ಹೇಳಿಕೆಯೇ (ಬರೆದ ಟ್ವೀಟೆ!) ಎಂಬ ಸಂಶಯ, ಕಾಂಗ್ರೆಸ್ ಅಂಬಾ ಅಂಬಾ ಎಂದು ಅರಚಲು ಕಾರಣವೇ? ಬಲ್ಲ ಮೂಲಗಳ ಪ್ರಕಾರ, ಕಾರಣ ಅದಲ್ಲ. ಶಶಿ ತರೂರ್ ಕೇರಳದ ಸಂಸದ. ಕೇರಳ ದನಗಳ ಕಸಾಯಿಖಾನೆಗೆ ಬಹಳ ಪ್ರಸಿದ್ಧಿ. ಮೊದಲಿನಿಂದಲೂ ಕಾಂಗ್ರೆಸ್‌ ಪಕ್ಷಕ್ಕೂ ದನಗಳಿಗೂ ಅಷ್ಟಕ್ಕಷ್ಟೇ! ಇನ್ನು ದನಗಳು ವಿಮಾನದಲ್ಲಿ ಪ್ರಯಾಣ ಮಾಡುವ ಕಲ್ಪನೆಯೇ ಕಾಂಗ್ರೆಸ್ ಪಕ್ಷಕ್ಕೆ ಆಗಿ ಬರುವುದಿಲ್ಲ! ಇನ್ನು ಕೇರಳದಲ್ಲಿ ಅಲ್ಪಸಂಖ್ಯಾತರ ಮತಗಳಿಗೆ ಪೆಟ್ಟು ಬೀಳಬಹುದೆಂಬ ದೂ(ದು)ರಾಲೋಚನೆ ಶಶಿ ತರೂರ್ ರವರ ಮೇಲೆ ಕಾಂಗ್ರೆಸ್ ಗುರ್ ಗುರ್ ಅನ್ನಲು ಕಾರಣವಂತೆ. ಪಾಪ ಶಶಿ ತರೂರ್ ಎಂಬ ದನ ಕಾಂಗ್ರೆಸ್ ಎಂಬ ಹಳೆ ಹುಲಿಗೆ ಹೆದರಿ, ಬರೆದ ಟ್ವೀಟಿಗೆ ತಪ್ಪಲಾರೆನು, ಬರೆದ ಟ್ವೀಟನು ಅಳಿಸಲಾರೆನು, ಟ್ವೀಟಿನಲ್ಲಿ ಕಟ್ಟಕಡೆಗೆ ಕ್ಷಮೆಯ ಕೇಳ್ವೆನು ಎಂದು ಗೋವಿನ ಹಾಡಿನಲ್ಲಿ ಬಿನ್ನವಿಸಿಕೊಂಡಿದ್ದಾರಂತೆ!

ಮುಂದೆ ಓದಿ

ಸೋಮವಾರ, ಸೆಪ್ಟೆಂಬರ್ 07, 2009

ಪುಸ್ತಕಗಳನ್ನು ನಿಷೇಧಿಸುವುದು ಸರಿಯೇ?

banned_books


ಇತ್ತೀಚೆಗೆ ಜಸ್ವಂತ್ ಸಿಂಗ್ರವರು ಬರೆದ "ಇಂಡಿಯಾ - ಪಾರ್ಟಿಷನ್ ಇಂಡಿಪೆಂಡೆನ್ಸ್" ಪುಸ್ತಕವನ್ನು ಗುಜರಾತ್ ಸರ್ಕಾರ ನಿಷೇಧಿಸಿದ ಹಿನ್ನಲೆಯಲ್ಲಿ, ಭಾರತದ ಸರ್ವೋಚ್ಚ ನ್ಯಾಯಾಲಯ ಗುಜರಾತ್ ಸರ್ಕಾರಕ್ಕೆ ನಿಷೇದಿಸಲು ಕಾರಣದ ವಿವರಣೆಯನ್ನು ಕೇಳಿ ನೋಟೀಸ್ ಜಾರಿ ಮಾಡಿದ ಈ ಹಿನ್ನಲೆಯಲ್ಲಿ ಈ ಲೇಖನ ಬರುತ್ತಿದ್ದರೂ, ಹಿಂದೆ ಬಹಳಷ್ಟು ಪುಸ್ತಕಗಳು ಭಾರತದಲ್ಲೂ, ಹಲವು ಪುಸ್ತಕಗಳು ವಿದೇಶಗಳಲ್ಲೂ ನಿಷೇಧಿಸಿರುವ ಉದಾಹರಣೆಗಳಿವೆ. ಇದು ಎಷ್ಟು ಸರಿ? ಎಷ್ಟು ತಪ್ಪು ? ಒಂದು ಚಿಂತನೆ!


ಪುಸ್ತಕಗಳು ಧರ್ಮನಿಂದನೆ/ದೈವನಿಂದನೆ ಆಧಾರದ ಮೇಲೆ ದೂರಿಸಿಕೊಂಡು ನಿಷೇಧಗೊಳ್ಳುವುದು ಸಾಮಾನ್ಯ. ಇದಕ್ಕೆ ಪ್ರಖ್ಯಾತ ಉದಾಹರಣೆಗಳೆಂದರೆ, ಸಲ್ಮಾನ್ ರಶ್ದಿ ಯವರ "ದ ಸಟಾನಿಕ್ ವರ್ಸಸ್" ಪುಸ್ತಕವನ್ನು ಇಸ್ಲಾಮ್ ಧರ್ಮದ ನಿಂದನೆ ಆಧಾರದ ಮೇಲೆ ಭಾರತದಲ್ಲಿ ನಿಷೇಧಿಸಿರುವುದು. ಅಲ್ಲದೆ ಅವರ ವಿರುದ್ಧ ಇರಾನ್ ದೇಶದ ಅಧ್ಯಕ್ಷರೊಬ್ಬರು ಸಲ್ಮಾನ್ ರಶ್ದಿಯ ವಿರುದ್ಧ ಫತ್ವಾ ಹೊರಡಿಸಿದ್ದು, ಸಲ್ಮಾನ್ ರಶ್ದಿ ಭೂಗತಕ್ಕೆ ಹೋದದ್ದು, ಆ ಪುಸ್ತಕದ ಜಪಾನಿನ ಅನುವಾದಕನನ್ನು ಕೊಂದದ್ದು ಈಗ ದಂತಕಥೆ. ಮತ್ತೊಂದು ಉದಾಹರಣೆಯೆಂದರೆ ಬಾಂಗ್ಲಾ ದೇಶದ ಲೇಖಕಿ ತಸ್ಲೀಮಾ ನಸ್ರೀನ್ ರವರ ಲಜ್ಜಾ ಕಾದಂಬರಿಯನ್ನು ಬಾಂಗ್ಲಾ ದೇಶದಲ್ಲಿ ನಿಷೇಧಿಸಿ ಅವರನ್ನು ಗಡಿಪಾರು ಮಾಡಿದ್ದು, ಅವರು ಬಂದು ಭಾರತದಲ್ಲಿ ನೆಲೆಯೂರಿದ್ದು, ನಂತರ ಒಂದು ಸರ್ಕಾರದ ಧೋರಣೆಯಿಂದಾಗಿ, ಅವರಿಗೆ ಭಾರತದಲ್ಲಿ ತಂಗಲು ಅವಕಾಶ ನಿರಾಕರಿಸಿದ್ದು! ಡ್ಯಾನ್ ಬ್ರೌನ್ ರವರ ’ಡಾ ವಿನ್ಚಿ ಕೋಡ್’ ಪುಸ್ತಕವನ್ನು ಭಾರತದ ಒಂದು ರಾಜ್ಯದಲ್ಲಿ ನಿಷೇಧಿಸುವ ಚಿಂತನೆ ನಡೆದು ಕೊನೆಗೆ ನಿಷೇಧದ ವಿರುದ್ಧವಾದ ನಿಲುವನ್ನು ತೆಗೆದುಕೊಳ್ಳಲಾಯಿತು. ಈಗಲೂ ಈ ಪುಸ್ತಕ ಲೆಬನಾನ್ ದೇಶದಲ್ಲಿ ಕ್ಯಾಥೋಲಿಕ್ ಕ್ರಿಸ್ಚಿಯನ್ನರ ವಿರೋಧಿಯೆಂದು ನಿಷೇಧಿಸಲಾಗಿದೆಯಂತೆ.

ಮುಂದೆ ಓದಿ