ಶನಿವಾರ, ಜೂನ್ 25, 2011

ಭೂಮಿಗುದುರಿತೆ ಜೀವ ಮತ್ತು ಇತರ ಪ್ರಶ್ನೆಗಳು - ಲೋಕಾರ್ಪಣೆ



ಮತ್ತೊಮ್ಮೆ, ಕೊನೆಯದಾಗಿ ಪ್ರೀತಿಯ ಆಗ್ರಹ, ಆಹ್ವಾನ.. ಪುಸ್ತಕ ಬಿಡುಗಡೆಗೆ ಬನ್ನಿ...


ಭೂಮಿಯ ಮೇಲೆ ಜೀವಬೀಜ ಬಿತ್ತನೆ ಹೇಗಾಯಿತು ಎಂಬ ಕೌತುಕದ ಭೂಮಿಗುದುರಿತೇ ಜೀವ? ಪ್ರಶ್ನೆಯಿಂದ ಇಲ್ಲಿನ ಲೇಖನ ಮಾಲೆ ಆರಂಭವಾಗುತ್ತದೆ. ಬೇರಾವುದೋ ಲೋಕದಿಂದ ಸೂಕ್ಷ್ಮಜೀವಿಗಳು ಬಂದು ಸೌರವ್ಯೂಹದ ಎಲ್ಲ ಗ್ರಹಗಳಿಗೆ ಜೀವಸಿಂಚನ ಮಾಡಿದವು (ಕೆಲವು ತಜ್ಞರ ಪ್ರಕಾರ ಈಗಲೂ ಮಾಡುತ್ತಿವೆ) ಎಂಬ ವಾದವನ್ನು ಒಪ್ಪಿಕೊಂಡರೆ ನಮ್ಮ ಭೂಮಿಯನ್ನು ಬಿಟ್ಟರೆ ಬೇರೆ ಯಾವ ಗ್ರಹದಲ್ಲೂ ಅವು ಬದುಕಿ ವಿಕಾಸವಾಗುತ್ತಿಲ್ಲವೇಕೆ ಎಂಬ ಪ್ರಶ್ನೆ ನಮ್ಮಲ್ಲಿ ಏಳುತ್ತದೆ. ಅದಕ್ಕೆ ಉತ್ತರ ರೂಪವಾಗಿ ಕೊನೆಯ ಲೇಖನವಿದೆ. ಜೀವಲೋಕದ ಈ ಆದಿ-ಅಂತ್ಯಗಳ ನಡುವೆ ಅರಿವಿನ ವಿರಾಟ್ ಜಗತ್ತನ್ನು ತೋರಿಸುವ ಇತರ ೨೫ ಆಸಕ್ತಿದಾಯಕ ಲೇಖನಗಳ ಸರಮಾಲೆ ಈ ಸಂಕಲದಲ್ಲಿದೆ. ಕೊನೆಗೊಂದು ವಿಶಿಷ್ಟ ಹಿನ್ನುಡಿಯೂ ಇದೆ. ಇಲ್ಲಿಂದ ಆರಂಭಿಸಿ ಅಲ್ಲಿಯವರೆಗೂ ಕ್ರಮಿಸಿ, ಅರಿವಿನ ಹೊಸಹೊಸ ಮಜಲುಗಳನ್ನು ಮುಟ್ಟಿ ಬರುವ ಅವಕಾಶ ಕನ್ನಡ ಓದುಗರಿಗಿದೆ.
---- ನಾಗೇಶ ಹೆಗಡೆ (ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು ಪುಸ್ತಕ ಮುನ್ನುಡಿಯಿಂದ)


ಸೋಮವಾರ, ಜೂನ್ 20, 2011

"ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ




ಕೊಳ್ಳೇಗಾಲ ಶರ್ಮ ಅವರ "ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ ಮತ್ತು ಪೆನ್ ಸರ್ಕಲ್ ಗೌರವಾರ್ಪಣೆ

ಅಧ್ಯಕ್ಷತೆ : ಶ್ರೀ ನಾಗೇಶ ಹೆಗಡೆ
ಕೃತಿ- ಕರ್ತೃ ಪರಿಚಯ : ಶ್ರೀ ಸುಧೀಂದ್ರ ಹಾಲ್ದೊಡ್ಡೇರಿ
ಕೃತಿ ಲೋಕಾರ್ಪಣೆ : ಶ್ರೀ ಟಿ ಆರ್ ಅನಂತರಾಮು

ಪೆನ್ ಸರ್ಕಲ್ ಗೌರವಾರ್ಪಣೆ

ಪ್ರೊ ಜೆ ಆರ್ ಲಕ್ಷ್ಮಣರಾವ್
ಪ್ರೊ ಅಡ್ಯನಡ್ಕ ಕೃಷ್ಣಭಟ್
ಶ್ರೀ ಆರ್ ಎಸ್ ರಾಜಾರಾಮ್
(ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ ಲಿ ಪರವಾಗಿ)

ಸನ್ಮಾನಿತರ ಪರಿಚಯ
ಶ್ರೀಮತಿ ಸುಮಂಗಲ ಮುಮ್ಮಿಗಟ್ಟಿ

ಕಾರ್ಯಕ್ರಮ ನಿರ್ವಹಣೆ
ಶ್ರೀ ಟಿ ಜಿ ಶ್ರೀನಿಧಿ

ನಿಮ್ಮ ನೆಜ್ಜಿನ ವಿಜ್ಞಾನ ಲೇಖಕರನ್ನೆಲ್ಲಾ ಒಟ್ಟಿಗೆ ಕಾಣಲು ಸದವಕಾಶ..
ನಾಲ್ಕು ವರೆಗೆ ಲಘು ಉಪಾಹಾರ ಇದೆ..
ದಯವಿಟ್ಟು ಜೊತೆಗೂಡಿ..


ನಯನ ಸಭಾಂಗಣ,
ಕನ್ನಡ ಭವನ,
ಜೆ ಸಿ ರಸ್ತೆ,
ಬೆಂಗಳೂರು - ೧,
ರವೀಂದ್ರ ಕಲಾಕ್ಷೇತ್ರದ ಪಕ್ಕ
ಸಂಜೆ ೫ ಕ್ಕೆ

ಮಂಗಳವಾರ, ಏಪ್ರಿಲ್ 19, 2011

ಬೆಂಗಳೂರು ಕರಗ ೨೦೧೧ ನೋಡಿದ್ದು


ಹಿನ್ನಲೆ!

ಬೆಂಗಳೂರು ಕರಗ ನೋಡಬೇಕೆನ್ನಿಸಿದ ಆಸೆಯ ಹಿಂದಿನ ಹಿನ್ನಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿ ವಿಷಯಕ್ಕೆ ಬಂದುಬಿಡುತ್ತೇನೆ. ಒಮ್ಮೆ ಎಸ್ ಪಿ ರೋಡಿನಲ್ಲಿರುವ ಒಬ್ಬ ಸಿ ಡಿ ವಿತರಕನ ವಿಳಾಸ ಕೇಳಿದಾಗ ಅವ ಒಂದೇ ಮಾತಿನಲ್ಲಿ, ಧರ್ಮರಾಯನ ದೇವಸ್ಥಾನದ ಹಿಂಭಾಗ ಎಂದಿದ್ದ! ನಾನು ಆಶ್ಚರ್ಯದಿಂದ ಕೇಳಿದ್ದೆ, ಏನು ಸ್ವಾಮಿ ನಮ್ಮಲ್ಲಿ ಧರ್ಮರಾಯನಿಗೂ ದೇವಸ್ಥಾನವುಂಟೇ? ಅವ ತಿರುಗಿ ಪ್ರಶ್ನಿಸಿದ್ದ, ಎಷ್ಟು ವರ್ಷದಿಂದ ಬೆಂಗಳೂರಿನಲ್ಲಿದ್ದೀರೀ? ಯಾಕ್ರಿ.. ಬೇಕಾದಷ್ಟು ವರ್ಷದಿಂದ ಇಲ್ಲೇ ಇದ್ದೀನಿ.. ಬೆಂಗಳೂರು ಕರಗ ಅಂತ ಒಂದು ನಡೆಯುತ್ತೇ ಗೊತ್ತಾ ಅಂದ.. ಓ ಗೊತ್ತು ಅಂದಿದ್ದೆ. ಕರಗ ಶುರು ಆಗೋದೇ, ಧರ್ಮರಾಯನ ದೇವಸ್ಥಾನದಿಂದ ಗುರು.. ಕರಗ ಅಂತ ಹೊತ್ತುಕೊಳ್ಳೋದು ದ್ರೌಪದಿಯನ್ನೇ ಅಂದಿದ್ದ! ಓ! ಎಂದು ಉದ್ಗಾರ ತೆಗೆದು.. ಈ ಬಾರಿ ಹೇಗಾದರೂ ಕರಗವನ್ನು, ನಡೆಯುವ ಸ್ಥಳದಲ್ಲೇ ಕಣ್ಣಾರೆ ನೋಡೇ ಬಿಡಬೇಕು ಎಂದುಕೊಂಡಿದ್ದವನಿಗೆ ಇಂದು ದಿನಪತ್ರಿಕೆಯಲ್ಲಿ ಕರಗ ನಡೆಯುವ ಸುದ್ದಿ ತಿಳಿದು ಗೆಳೆಯನ್ನು ಬಲವಂತಿಸಿ ಎಳೆದೊಯ್ದೆ!



ಯಡ್ಡಿ ಬೆದರಿದ್ದು!

ಕರಗ ಪ್ರಾರಂಭವಾಗುವ ಸಮಯ ತಿಳಿಯದ ನಾವು ೧೦: ೩೦ ಕ್ಕೇ ಧರ್ಮರಾಯನ ದೇವಸ್ಥಾನದ ಹತ್ತಿರ ತಲುಪಿದಾಗ ಒಡೆಯರ್ ವಂಶಸ್ಥದ ಶ್ರೀಕಂಠದತ್ತ ಒಡೆಯರ್ ದೊಡ್ಡದಾದ ಒಂದು ಕಾರಿನಲ್ಲಿ ಹಿಂತಿರುತ್ತಿದ್ದರು. ಕರಗ ನೋಡಲು ಹೋಗಬೇಕೆಂಬುದರ ಹಿನ್ನಲೆಯಲ್ಲಿ ಇನ್ನೊಂದು ಗುಪ್ತ ಆಸೆಯೂ ಇತ್ತು. ಅದು ಇಂದು ಕರಗಕ್ಕೆ ಯಡೆಯೂರಪ್ಪನವರು ಚಾಲನೆ ನೀಡುತ್ತಾರೆಂಬ ಸುದ್ದಿ. ಕರಗ ಹೊರುವವನ ಮೈಮೇಲೆ ದೇವರು ಬರುವುದೆಂದು ಕೇಳಿದ್ದೇನೆ. ಕರಗ ಹೊರುವವನು ಇದನ್ನು ರಾಜ್ಯದ ಅನುಕೂಲಕ್ಕೆ ಬಳಸಿ ಯಡ್ಡಿಯವರಿಗೆ ಒಮ್ಮೆ ಗುಮ್ಮಿ, ಎಲ್ಲಾ ಜಮೀನು ವಾಪಸು ಕೊಡು, ರಾಜಿನಾಮೆ ಕೊಡು, ಇಲ್ಲಾ ಅಂದ್ರೆ ನಾನು ಸುಮ್ನೆ ಇರಲ್ಲಾ! ಎಂಬ ದೇವಿಯ ಸುವಾರ್ತೆಯನ್ನು ಹೇಳುವವನೋ ಎಂಬ ಒಂದು ಸಣ್ಣ ಆಸೆ ಕೂಡ! ಹಾಗೇನೂ ಆಗಲಿಲ್ಲ. ಕನಿಷ್ಟ ರಥಕ್ಕೆ ಎಸೆಯುವ ಬಾಳೆಯ ಹಣ್ಣಗಳು ಯಡ್ಡಿಯವರ ಕಡೆ ತಿರುಗುವವೋ ಏನೋ ಎಂಬ ಒಂದು ಸಣ್ಣ ಸಂಶಯ ಕೂಡ ಇತ್ತು! ಇಂತಹ ಕೆಲವು ಪ್ರಯತ್ನಗಳು ನಡೆದವಾದರೂ ರಥಕ್ಕೆ ಬಿದ್ದ ಬಾಳೆಹಣ್ಣುಗಳ ಸಂಖ್ಯೆಗೆ ಹೋಲಿಸಿದರೆ, ಯಡ್ಡಿ ಕಡೆ ತಿರುಗಿದ ಬಾಳೆಹಣ್ಣುಗಳು ಕಡಿಮೆಯೇ. ಯಡ್ಡಿ ದೇವಸ್ಥಾನಕ್ಕೆ ಬಂದಾಗ ಪ್ರಸನ್ನಚಿತ್ತರಾಗಿ ಕಂಡರಾದರೂ, ಕರಗದ ಸುತ್ತಾ ಖಡ್ಗ ಹಿಡಿಯುವ ಯುವಕರನ್ನು ನೋಡಿ ಸ್ವಲ್ಪ ಬೆದರಿದಂತೆ ಕಂಡು ಬಂದರು. (ಎಲ್ಲಿ ಬಂದರೂ ನನ್ನ ವಿರುದ್ಧ ಕತ್ತಿ ಮಸೆಯುವವರೇ ಎನ್ನಿಸಿರಬೇಕು!)




ಅವರವರ ಭಕುತಿಗೆ! ಅವರವರ ಭಾವಕ್ಕೆ!

ಏನು ಜನ ಅಂತೀರಾ? ಅಬ್ಬಬ್ಬಾ.. ಆದರೂ ಟೀ ಮಾಡುವವ ಈ ಸಾರ್ತಿ ಜನಾನೆ ಇಲ್ಲಾ ಸಾರ್. ಇನ್ನೂ ಇನ್ನೂರೇ ಟೀ ಖರ್ಚಾಗಿರೋದು ಅನ್ನೋದೆ! ಇರಲಿ. ನನಗಂತೂ ಕರಗವನ್ನು ಆದಷ್ಟೂ ಹತ್ತಿರದಿಂದಲೇ ನೋಡಬೇಕೆಂದು ಹೋದವನಿಗೆ, ಇಕ್ಕಟ್ಟಿನಲ್ಲಿ ಜಜ್ಜಿ ಹೋಗಿದ್ದೆ. ಬೆರೆತ ಬೆವರಿನ ವಾಸನೆ, ಕೆಲವರ ವ್ಯಯಕ್ತಿಕ ಪರಮಾತ್ಮನ ವಾಸನೆಯಲ್ಲಿ ತೇರಿನ ಮೇಲೆ, ಕರಗದ ಮೇಲೆ ಎಸೆಯುತ್ತಿದ್ದ ಮಲ್ಲಿಗೆ ವಾಸನೆ ಎಲ್ಲಿ ಬೀರಬೇಕು? ಯಾರೋ ಒಬ್ಬ.. "maccha we go upstairs Daa.. we should not miss the part when god resists come out of the temple Daa.." ಎಂದದ್ದು ನನಗೆ ಕೇಳಿಸಿ, ಹೀಗೂ ಉಂಟೆ ಎನ್ನಿಸಿತು! ಧರ್ಮದೇವರಯನ ದೇವಸ್ಥಾನದ ಎದುರಿಗಿದ್ದ ಅಂಗಡಿಯವನಿಗೆ ವ್ಯವಹಾರವೇ ದೇವರು, ಅದೇ ಪೂಜೆ. ರಾತ್ರಿಯೆಲ್ಲಾ ಅಂಗಡಿಯಲ್ಲಿ ಭರ್ಜರಿ ವ್ಯಾಪಾರ. ಅಂಗಡಿಯಲ್ಲಿ ವ್ಯಾಪಾರ ಮಾಡುವಾಗ, ಅಂಗಡಿ ಮುಂದೆ ಬಂದು ಯಾರಾದರೂ ನಿಂತರೆ, ಅವರಿಗೆ ನಿರಂತರ ಮಂತ್ರಗಳ ಸುರಿಮಳೆ. ಯಾರೋ ಭಲಿಷ್ಟ ಭಕ್ತಾದಿಗಳು ಬಂದು ಅಂಗಡಿ ಮುಂದೆ ನಿಂತಾಗ, ಮಂತ್ರಗಳು ಅಪ್ಪ, ಅಣ್ಣ, ಜಾತಿ ಎಲ್ಲವನ್ನೂ ಆರಾಧಿಸುವಂತಹವು! ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿ, ಅದು ಹೇಗೋ ನಿಂತು ಹೋಯಿತು! ಯಾರೋ ಒಬ್ಬ, ಒಬ್ಬಳು ಹೆಂಗಸನ್ನು ದೂಡಿ ಹೋದಾಗ, ಆ ಹೆಂಗಸಿಂದ ’ಲೋಫರ್ ಕಚಡ ನಿನಗೆ ಅಕ್ಕ ತಂಗಿ ಯಾರೂ ಇಲ್ಲವೇನೋ’ ಎಂಬ ಬೈಗುಳ! ಯಾರೋ ಒಬ್ಬ, ಕತ್ತಿ ಹಿಡಿದ ಅರೆಬೆತ್ತಲೆ ಭಕ್ತಾದಿಯನ್ನು ದೂಡಿದ ಎಂದು, ಅವ ಇನ್ಯಾರೋ ಒಬ್ಬನಿಗೆ ಪಟ ಪಟ ಭಾರಿಸಿಯೇಬಿಟ್ಟ. ಇದೇ ಅವಕಾಶವನ್ನು ಬಳಸಿಕೊಂಡ ಕತ್ತಿ ಹಿಡಿದ ಇತರೆ ಅರೆಬೆತ್ತಲೆ ಯುವಕರು, ಸಾಮಾನ್ಯ ಧಿರಿಸಿನಲ್ಲಿದ್ದ ಬೇರೆ ಭಕ್ತಾದಿಗಳನ್ನೆಲ್ಲಾ ಭಲಿಷ್ಟವಾಗಿ ಅತ್ತಿತ್ತ ದೂಡಿ ಹಾಕಿ ತಮ್ಮ ತಾಕತ್ತನ್ನು, ದರ್ಪವನ್ನೂ ತೋರಿಸಿದ್ದೂ ಕೂಡ ವಿಷೇಷ. ಬಹುಷಃ, ಕರಗ ಹೊತ್ತವನ ಹಿಂದೆ ಇಂತಹ ಭಲಿಷ್ಟ, ಧಾಂಡಿಗ ಭಕ್ತಾದಿಗಳೇ ಬೇಕೇನೋ! ಇನ್ನೂ ಅಲ್ಲೇ ಪಕ್ಕದಲ್ಲಿದ್ದ ಪಡ್ಡೆ ಹುಡುಗರ ಗುಂಪೊಂದು, ಯಡ್ಡಿ, ಶೋಭಕ್ಕನಿಗೂ ಜೈಕಾರ ಹಾಕಿದ್ದೇ! ಅಲ್ಲೇ ಇದ್ದ ಪೋಲೀಸ್ ಹೆಂಗಸಿನ ಧಿರಿಸಿನ ಮೇಲೂ ಕಮೆಂಟಗಳ ಸುರಿಮಳೆ! ಕರಗ ದೇವಾಲಯದಿಂದ ಹೊರಬಿದ್ದಾಗ ಪಟಾಕಿಗಳೂ ಸುಟ್ಟವು. ಒಂದೆರಡು ಪಾರಿವಳಗಳು ಘಂಟೆಯ ಶಬ್ದಕ್ಕೇನೋ, ಬೆಳಗಾಯಿತೇನೋ ಎಂದು ಬೆದರಿ ಮೇಲೆ ಹಾರಿ ಹೋದವು. ಅವಗಳೂ ಪ್ರಸಾದ ಉದುರಿಸಿದವೇನೋ! ಕರಗ ಹೊತ್ತ ಮನುಷ್ಯ ಮಲ್ಲಿಗೆ ಹೂವಿನ ಅಲಂಕಾರದ ಮುಡಿಯಲ್ಲಿ ನೃತ್ಯ ಮಾಡುತ್ತಾ ಅತ್ತಿತ್ತ ಸುಳಿದಾಡುತ್ತಿದ್ದ! ಕೆಲವರು ಗೋವಿಂದಾ ಗೋವಿಂದಾ ಎನ್ನುತ್ತಿದ್ದರು. ಒಬ್ಬಾತ ತನ್ನ ಮೊಬೈಲ್ ಫೋನ್ ಬೀಳಿಸಿ, ಲೇ ಯಾರ್ಗಾದ್ರು ಮೊಬೈಲ್ ಫೋನ್ ಸಿಕ್ಕಿದ್ರೆ ಕೊಡ್ರೋ! ಸಾಕು ನೀವು ಕಿರಚಾಡಿದ್ದು ಎನ್ನುತ್ತಿದ್ದ. ಒಬ್ಬ ತನಗೆ ೧೧ ಘಂಟೆಯಿಂದ ನಿಂತು ನಿಂತು ಸಾಕಾಯಿತು. ತಲೆ ಸುತ್ತುತ್ತಿದೆ ಎಂದು ಕೂತ! ಇದಕ್ಕೂ ಮುನ್ನ ಹೆಚ್ಚು ಮನರಂಜನೆ ಕೊಟ್ಟಿದ್ದು, ರಥ ಹೊರಟಾಗ ಬಾಳೆಹಣ್ಣು ಎಸೆಯುವ ಆಟ. ಒಂದು ಬಾಲ್ಕನಿಯಿಂದ ಮತ್ತೊಂದು ಬಾಲ್ಕನಿಗೆ ಎಸೆದಾಡಿ, ಕೊನೆಗೂ ಬೇಸತ್ತು ರಥಕ್ಕೆ ಎಸೆಯುವುದು. ರಥದಲ್ಲಿ ಕುಳಿತ ಮಕ್ಕಳು ಬಾಳೆ ಹಣ್ಣಿನ ಎಸೆತವನ್ನು ತಪ್ಪಿಸಿಕೊಳ್ಳುವುದು. ನಾವು ಇವಗಳನ್ನು ತಪ್ಪಿಸಿಕೊಳ್ಳಲೇಬಾರದು! ಮತ್ತೊಬ್ಬ ಹೆಂಗಸು ಅಲ್ಲಿ ಆರ್ಭಟಿಸುತ್ತಿದ್ದಳು. ಕಮಿಟಿ ಅಂತ ಮಾಡಿದ ಮೇಲೇ ನಮ್ಮ ಜನಕ್ಕಾದರೂ ಕರಗ ನೋಡಲು ಒಳ್ಳೇ ಸೌಕರ್ಯ ಕೊಡಬೇಕೆ. ಎಲ್ಲಾ ಜನಾನು ಒಂದೇ ತರ ಆಗ್ಬಿಟ್ರೆ! ಅಬ್ಬಾ ಫೋನಗಳಲ್ಲಿ ಕ್ಯಾಮರಾ ಯಾಕೆ ಎನ್ನುವವರು, ಅದರ ಉಪಯುಕ್ತತೆ ಕಾಣಲು ಕರಗಕ್ಕೆ ಬರಲೇಬೇಕು! ಏನೋ ನನಗೆ ಕಂಡದ್ದಿಷ್ಟು. ಆದರೆ ಲಯ ವಾದ್ಯಗಳು ಇಲ್ಲದೇ ಇದ್ದದ್ದು ಸ್ವಲ್ಪ ಬೇಸರವಾಯಿತು! ತಮಟೆಯ ಶಬ್ದಕ್ಕೆ ಮಾರುಹೋಗುವುದರಿಂದಲೇ ನಾನು ಈ ಜಾತ್ರೆಗಳನ್ನು ಹೆಚ್ಚು ಇಷ್ಟಪಡುವುದು! ನಾವು ಯಾತಕ್ಕಾಗಿ ಹೋಗುತ್ತೇವೋ ಅಷ್ಟೇ ನಮಗೆ ದಕ್ಕುವುದೇನೋ! ಆದರೂ ಬಹಳಷ್ಟು ಮನರಂಜನೆ ಇತ್ತು. ಸಾಕಷ್ಟು ಖುಷಿ ಪಟ್ಟೆ. ನನಗೂ ತುಸು ಹೆಚ್ಚು ಭಕ್ತಿಯಿದ್ದರೆ, ಅಲ್ಲೆಲ್ಲಾದರೂ ಒಂಚೂರು ಭಕ್ತಿ ಕಾಣಿಸುತ್ತಿತ್ತೇನೋ!

ಶನಿವಾರ, ಫೆಬ್ರವರಿ 26, 2011

ವರಕವಿ ಬೇಂದ್ರೆಯವರ ನಾಕುತಂತಿ ಕವನ - ಉಪನ್ಯಾಸ

ಗೆಳೆಯರೆ,

ಆಕೃತಿ ಪುಸ್ತಕ ಮಳಿಗೆ ರಾಜಾಜಿನಗರದಲ್ಲಿ, ಡಾ| ಜಿ. ಕೃಷ್ಣಪ್ಪ ಅವರಿಂದ
ವರಕವಿ ಬೇಂದ್ರೆಯವರ ನಾಕುತಂತಿ ಕವನದ ಮೇಲೆ ಒಂದು ಉಪನ್ಯಾಸ
ಹಾಗೂ ಬೇಂದ್ರೆಯವರ ಇತರ ಕವನಗಳ ಮೇಲೆ ಚರ್ಚೆ

ದಿನ: 27/ 02/ 2011 ಭಾನುವಾರ
ಸಮಯ: 10:30 ರಿಂದ 12:30

ವಿಳಾಸ : ಆಕೃತಿ ಪುಸ್ತಕ ಮಳಿಗೆ
ನಂ: 31/1, 12 ನೇ ಮುಖ್ಯರಸ್ತೆ,
3 ನೇ ಬ್ಲಾಕ್, ರಾಜಾಜಿನಗರ,
ಬೆಂಗಳೂರು - 560010

ಹತ್ತಿರದ ಗುರುತು: ಇ ಎಸ್ ಐ ಆಸ್ಪತ್ರೆ ಹತ್ತಿರ

ದಾರಿ ತಪ್ಪಿದರೆ ಕರೆ ಮಾಡಿ: 9886694580

ಬನ್ನಿ ಭಾಗವಹಿಸಿ..ಚರ್ಚಿಸಿ... ನಿಮ್ಮ ಗೆಳೆಯರನ್ನೂ ಕರೆತನ್ನಿ...

ಶುಕ್ರವಾರ, ಫೆಬ್ರವರಿ 04, 2011

ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ ಹಂಚಿಕೆಯಲ್ಲಿ ಅಕ್ರಮ

೨ಜಿ ತರಂಗಾಂರಗಳ ಹಂಚಿಕೆಯಲ್ಲಿ ಅಕ್ರಮ, ಕರ್ನಾಟಕದ ಮುಖ್ಯಮಂತ್ರಿ, ಮಂತ್ರಿಗಳ ಭೂಹಗರಣಗಳಷ್ಟು ಈ ಹಗರಣ ದೊಡ್ಡದಲ್ಲದಿದ್ದರೂ, ರಾಜಕಾರಣಿಗಳನ್ನು ತಿದ್ದಬೇಕಾಗಿರುವ ಈ ಅಕ್ಷರಲೋಕದ ಕೆಲವು ಗಣ್ಯರ ನೈತಿಕ ದೀವಾಳಿತನವನ್ನು ತೋರಿಸುತ್ತದೆ.,

ವಿಷಯ ಇಂತಿಷ್ಟು. ಬೆಂಗಳೂರಿನಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶನ ಮತ್ತು ಮಾರಟಕ್ಕೆ ಪುಸ್ತಕ ಮಾರಾಟಗಾರರಿಗೆ ಆಹ್ವಾನಿಸಿ ಕನ್ನಡ ಸಾಹಿತ್ಯ ಪರಿಷತ್ತು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ, ಒಬ್ಬರಿಗೇ ಒಂದೇ ಮಳಿಗೆ ಎಂದು ಪ್ರಕಟಿಸಲಾಗಿತ್ತು. ನಾನು ಮಳಿಗೆಗೆ ೨೦೦೦/- ದುಡ್ಡನ್ನು ನೀಡಿ ಹೆಚ್ಚುವರಿ ಒಂದು ಮಳಿಗೆ ಬೇಡಿಕೆಯಿತ್ತಾಗಲೂ ಅವರು ಹೊಡೆಸಿದ್ದ ನಿಯಮಗಳ ಸುತ್ತೋಲೆಯನ್ನು ನೀಡಿ ಹೆಚ್ಚುವರಿ ಮಳಿಗೆಯನ್ನು ನಿರಾಕರಿಸಿದ್ದರು.

ಇಂದು ಸಮ್ಮೇಳನದ ಜಾಗಕ್ಕೆ ತಲುಪಿದಾಗ ಅಲ್ಲಿನ ಚಿತ್ರಣವೇ ಬೇರೆ.
೧) ೨ ಮಳಿಗೆ, ಮೂರು ಮಳಿಗೆ, ಆರು ಮಳಿಗೆ ತೆರೆದಿದ್ದಾರೆ, ಕೆಲವು ಪುಸ್ತಕ ಮಾರಾಟಗಾರರು/ಪ್ರಕಾಶಕರು!
೨) ಈ ಒಂದಕ್ಕಿಂದ ಹೆಚ್ಚಿರುವ ಎಲ್ಲಾ ಮಳಿಗೆಗಳು ಮೂಲೆಯಿಂದಲೇ ಪ್ರಾರಂಭವಾಗುತ್ತವೆ!

ಸಾರ್ವಜನಿಕರು ಆಸ್ಥೆಯಿಂದ ನೋಡುತ್ತಿರುವ ಸಮ್ಮೇಳನದ ಒಂದು ಪ್ರಮುಖ ಅಂಗವಾದ ಪುಸ್ತಕ ಪ್ರದರ್ಶನವನ್ನು ಪಾರದರ್ಶಕವಾಗಿ ಅಯೋಜಿಸುವುದು ಅಷ್ಟೋಂದು ಕಷ್ಟವೇ? ದೊಡ್ಡ ಮಟ್ಟದಲ್ಲಿ ಬೆಳೆದಿರುವ ಪ್ರಕಾಶಕರ/ ಪುಸ್ತಕ ಮಾರಾಟಗಾರರ ಸ್ವತ್ತೇ ಈಗ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶನ?

ಶುಕ್ರವಾರ, ಅಕ್ಟೋಬರ್ 29, 2010

’ನುಡಿ’ದರೆ...

ಇಂದು ಬೆಳಗ್ಗೆ ಅಳ್ವಾಸ್ ’ನುಡಿಸಿರಿ’ಗ ಇಂದು ಬೆಳಗ್ಗೆ ಕರ್ನಾಟಕದ ವಿವಿಧ ಕಲಾವಿದರ ತಂಡದಿಂದ ಲಯ ವಾದ್ಯಗಳ ಮೇಳಗಳ ಪ್ರದರ್ಶನದೊಂದಿಗೆ ವಿದ್ಯುಕ್ತವಾಗಿ ಚಾಲನೆಗೊಂಡಿತು. ಲಯ ವಾದ್ಯಗಳ ಪ್ರದರ್ಶನ ಅದ್ಭುತವಾಗಿತ್ತು. ಕೇಳಲು, ನೋಡಲು ಆನಂದ. ವೈದೇಹಿಯವರನ್ನು ಪಲ್ಲಕ್ಕಿಯ ಮೇಲೆ ಕೂರಿಸಿ, ವೇದಿಕೆಗೆ ಕರೆತರುವುದನ್ನೂ ನೋಡುವುದೇ ಚಂದ. ಈ ಉನ್ಮಾದದಲ್ಲಿ ನೆನ್ನೆಯ ಕಹಿಯನ್ನು ಮರೆತಿದ್ದೆ.



ನಂತರದ ಘಟನೆಗಳು ಮತ್ತೆ ಮನಸ್ಸಿಗೆ ಬೇಸರವನ್ನು ತಂದವು. ನೆನ್ನೆಯ ಬ್ಲಾಗ್‌ನಲ್ಲಿ ಹೆಸರಿಸಿದ ವ್ಯಕ್ತಿಗೆ ವಿಷಯ ತಿಳಿದು ನಮ್ಮ ಮಳಿಗೆಗೆ ಬಂದು ಕಿರುಚಾಡಲು ಪ್ರಾರಂಬಿಸಿದ. ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದರಿಂದ ನಾನೂ ಆ ಶಬ್ದಗಳನ್ನು ಅವರಿಗೆ ತಿರುಗಿಸಬೇಕಾಯಿತು! ನೀವು ಕೃತಘ್ನರು. ಮುಂದಿನ ವರ್ಷದಿಂದ ಬರಲೇಬೇಡಿ. ಊಟ ಹಾಕ್ತೀವಿ! ನಿಮಗೆ ವಸತಿ ಕೊಡಲು ಅನುಕೂಲ ಮಾಡಿಕೊಟ್ಟಿದ್ದೇವೆ. ಆದರೂ ಬ್ಲಾಗ್‌ನಲ್ಲಿ ಬರೆದಿದ್ದೀರಿ, ___________ (ಅವಾಚ್ಯ ಶಬ್ದಗಳು)..

ಸ್ವಲ್ಪ ಸಮಯದ ನಂತರ ಕೆಲ ಸಹೃದಯ ಗೆಳೆಯರು, ಈ ತಪ್ಪಿನ ವಿರುದ್ಧ ಧ್ವನಿ ಎತ್ತಿದ್ದರಿಂದ ಕಿರುಚಾಡಿದ ವ್ಯಕ್ತಿ ಮತ್ತು ಸಂಘಟನೆಯ ಕೆಲ ಸದಸ್ಯರೂ ಬಂದು ನನ್ನ ಕ್ಷಮೆ ಕೇಳಿದರು. ಆದ್ದರಿಂದ ಈ ಸಮಸ್ಯೆಯನ್ನು ಬೆಳಸದೆ ಇತಿಶ್ರೀ ಹಾಡಲು ನಿರ್ಧರಿಸಿದ್ದೇನೆ. ಆದರೆ ಕೆಲವು ಸ್ಪಷ್ಟೀಕರಣಗಳೊಂದಿಗೆ!

ನಾನು ಅವರ ವಸತಿಯನ್ನೂ ನಿರಾಕರಿಸಿದ್ದೇನೆ. ಅವರ ಊಟವನ್ನೂ ಕೂಡ. ನಾವು ಕೊಟ್ಟ ೨೦೦೦/- ರೂಪಾಯಿ ಅವುಗಳನ್ನು ಒಳಗೊಂಡಿವೆ ಎಂದು ತಿಳಿದು ಒಪ್ಪಿಕೊಂಡಿದ್ದೆನೇ ಹೊರತು ಅವರ ಮರ್ಜಿಗೆ ಬಿದ್ದಲ್ಲ. ಅಕ್ಕ ಪಕ್ಕದ ಮಳಿಗೆಗಳ ವಾರಸುದಾರರು ಹೇಳುವಂತೆ ಅವೆಲ್ಲವೂ ನಾವು ಪಾವತಿಸಿರುವ ಹಣದಲ್ಲಿಯೇ ಕೊಡವೇಕಾದ ಅನುಕೂಲಗಳು. ಇಲ್ಲೂ ಪಾರದರ್ಶಕತೆಯಿಲ್ಲ. ನನಗೆ ಅವರ ಫೇವರ್‌ಗಳು ಅನವಶ್ಯಕ!

ಅಳ್ವಾಸ್ ನುಡಿಸಿರಿ ಕಾರ್ಯಕ್ರಮ ಸಂಘಟನೆ ಹೆಸರುವಾಸಿ. ಕೆಲವು ಸಮಸ್ಯೆಗಳನ್ನು ಎತ್ತಿ ತೋರಿಸುವ ಉದ್ದೇಶ ಸಂಘಟನೆ ತನ್ನ ನ್ಯೂನ್ಯತೆಗಳನ್ನು ತಿದ್ದಿಕೊಂಡು ಹೆಚ್ಚು ಬೆಳೆಯಲಿ ಎಂಬ ಉದ್ದೇಶದಿಂದಷ್ಟೇ! ಅಲ್ವಾಸ್ ನುಡಿಸಿರಿಯ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವುದರಿಂದ ನನಗೆ ಯಾವುದೇ ರೀತಿಯ ವ್ಯಯಕ್ತಿಕ ಲಾಭಗಳಿಲ್ಲ.

ಯಾವುದೇ ಸಾಹಿತ್ಯ ಸಮ್ಮೇಳನದ ಅತ್ಯಂತ ದೊಡ್ಡ ಆಕರ್ಷಣೆ ಮತ್ತು ಅಗತ್ಯ ಪುಸ್ತಕ ಮೇಳ. ನೀವು ಕರೆಸುವ ಸಾಹಿತಿಗಳಿಗೆ ಅತ್ಯುತ್ತಮ ಸೌಕರ್ಯಗಳನ್ನೇ ಒದಗಿಸಿ. ಅವರ ಪುಸ್ತಕಗಳನ್ನು ಮಾರಾಟ ಮಾಡುವ ಪುಸ್ತಕ ಮಾರಾಟಗಾರರಿಗೆ ಕನಿಷ್ಟ ಸೌಕರ್ಯಗಳನ್ನಾದರೂ ಒದಗಿಸಿ! ನಮಗೂ ಕನ್ನಡದ ಕಳಕಳಿಯಿದೆ.

ಇನ್ನು, ನುಡಿಸಿರಿ ಎಂಬ ಹೆಸರಿಟ್ಟಿದ್ದೀರಿ. ನಿಮ್ಮ ಕಾರ್ಯಕ್ರಮ ಸಂಘಟಕರಿಗೆ ಒಂದು ಕಿವಿಮಾತು ಅವಶ್ಯಕ! "ನುಡಿದರೆ........ " ಇದನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ. ನಿಮ್ಮಲ್ಲಿ ಬಹುತೇಕ ಜನಕ್ಕೆ ಗೊತ್ತಿರಬೇಕು.
_____________________________________________________________________________________
ನಂತರದ ಪುಸ್ತಕ ಮಾರಾಟ ಅತ್ಯಂತ ಖುಷಿ ಕೊಟ್ಟಿತು. ಸಾಮಾನ್ಯ ಸಮಯದಲ್ಲಿ ಮಾರಾಟವೇ ಕಾಣದಂತಹ ಎಷ್ಟೋ ಪುಸ್ತಕಗಳನ್ನು ಕನ್ನಡ ಸಾಹಿತ್ಯಾಸಕ್ತರು ಹುಡುಕಿ ಕೊಂಡು ಹೋದರು. ಆಕೃತಿ ಪುಸ್ತಕ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ರಾಜೇಶ್ ತೊಳ್ಪಾಡಿ, ಕೇಶವ ಕುಡ್ಲ, ನಾ ಮೊಗಸಾಲೆ ಮುಂತಾದ ಸಾಹಿತಿಗಳ ಭೇಟಿ ಸಂತಸವನ್ನುಂಟುಮಾಡಿತು.
_____________________________________________________________________________________
ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಭರಾಟೆಯಲ್ಲಿ, ಘೋಷ್ಠಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲವೆಲ್ಲ ಎಂಬುದೇ ಸಂಕಟ!

ಗುರುವಾರ, ಅಕ್ಟೋಬರ್ 28, 2010

ಅಲ್ವಾಸ್ ನುಡಿಸಿರಿಯ ಲಿಫ್ಟ್ ಗಣ್ಯರಿಗೆ ಮಾತ್ರವೇ?

ನೆನ್ನೆ ಆಲ್ವಾಸ್ ನುಡಿಸಿರಿಯ ಪುಸ್ತಕ ಮೇಳದಲ್ಲಿ ಭಾಗವಹಿಸಲು ಹೊರಟಾಗ ಎಷ್ಟು ಉತ್ಸಾಹ ಇತ್ತೋ, ಅದರ ದುಪ್ಪಟ್ಟು ನಿರಾಸೆ ಇಂದು. ಹಿನ್ನಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿಬಿಡುತ್ತೇನೆ. ೨೦೦೦/- ರೂಗಳ ಡಿಡಿ ಯನ್ನು ಕಳುಹಿಸಿ ಆಲ್ವಾಸ್ ನುಡಿಸಿರಿಯ ಪುಸ್ತಕ ಮೇಳಕ್ಕೆ ಮಳಿಗೆಯನ್ನು ಕಾದಿರಿಸಿದ್ದೆ. ಇಂದಿನವರೆಗೂ ರಶೀದಿ ನನಗೆ ದೊರೆತಿಲ್ಲ. ಅದು ಅಷ್ಟು ಪ್ರಮುಖ ಅಲ್ಲ ಬಿಡಿ. ಇಲ್ಲಿಗೆ ಬರುವುದಕ್ಕೆ ಮೊದಲು ಯಾವಾಗ ಕರೆ ಮಾಡಿದರೂ ಒಂದು ಮಾತು ಆಡಿದ ಕ್ಷಣ ಕರೆಯನ್ನು ಸ್ಥಗಿತಗೊಳಿಸುತ್ತಿದ್ದರು.

ಹೀಗಿರುತ್ತಿತ್ತು ಸಂಭಾಷಣೆ,
ನಾನು: ಸಾರ್, ನಾನು ಆಕೃತಿಯಿಂದ ಕರೆ ಮಾಡುತ್ತಿದ್ದೇನೆ, ಡಿ.ಡಿ ಕಳುಹಿಸಿದ್ದೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ಕರೆ ಸ್ವೀಕರಿಸಿದವರು: ಸರಿ, ಅಂದು ಬನ್ನಿ.
ನಾನು: ಸಾರ್, ಅಲ್ಲಿನ ವ್ಯವಸ್ಥೆ ಏನು?
ಫೋನ್ ಕಟ್!

ಸರಿ ಇದಕ್ಕೆಲ್ಲಾ ಹೆಚ್ಚಿನ ಪ್ರಾಮುಖ್ಯತೆ ಕೊಡಬಾರದೆಂದು ನಾನು ಉತ್ಸಾಹದಿಂದ ನೆನ್ನೆ ಬಸ್ ಹತ್ತಿ, ಪುಸ್ತಕಗಳನ್ನು ಸುಗಮ ಟ್ರಾನ್ಸ್‌ಪೋರ್ಟ್ ನಲ್ಲಿ ಸಾಗಿಸಿ ಬಂದಿಳಿದೆ. ನಮ್ಮಲ್ಲಿ ೩೨ ಕಾರ್ಟನ್ ಬಾಕ್ಸನ ಪುಸ್ತಕಗಳು. ಎಲ್ಲವೂ ಸುಮಾರು ೪೦ ಕೆ ಜಿ ತೂಗುತ್ತವೆ ಎಂದು ಅಂದಾಜಿಸಬಹುದು.

ಇಂದು ಬೆಳಗ್ಗೆ ಅಲ್ಲಿಗೆ ಹೋದಾಗ ದೊಡ್ಡ ಶಾಕ್ ಕಾದಿತ್ತು.
೧) ಮಳಿಗೆಗಳನ್ನು ಅಲಾಟ್ ಮಾಡುವುದರಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಪುಸ್ತಕೋದ್ಯಮದಲ್ಲಿ ಹಿಂದಿನಿಂದ ಚಾಲ್ತಿಯಲ್ಲಿರುವ ಕೆಲವು ಪ್ರಮುಖ ಮಾರಾಟಗಾರರಿಗೆ ಮೊದಲು ೨ ನೇ ಮಹಡಿಯಲ್ಲಿ ಮಳಿಗೆ ಅಲಾಟ್ ಆಗಿ ನಂತರ ಕೆಳ ಮಹಡಿಗೆ ಸ್ಥಳಾಂತರಿಸಿರುವುದು ಮಳಿಗೆಗಳ ಕಾರ್ಯವನ್ನು ನಿರ್ವಹಿಸುತ್ತಿರುವ ಹರೀಶ್ ಎಂಬುವವರ ದಾಖಲೆಯೇ ತೋರಿಸಿತ್ತು! ನಮಗೂ ಕೆಳಗಿನ ಮಳಿಗೆಯ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಾಗ, ಅದು ಛೇರ್ಮನ್ ಅವರಿಂದ ಹೇಳಿಸಿದವರಿಗೆ ಮಾತ್ರ ಎಂಬ ಪ್ರಾಮಾಣಿಕ ಉತ್ತರ!

೨) ಹರೀಶ್ ಎಂಬುವವರಿಗೆ ಮತ್ತೆ ಮನವಿ ಮಾಡಿಕೊಂಡೆವು, ಸಾರ್ ನಮ್ಮಲ್ಲಿ ೩೨ ಕಾರ್ಟನ್ ಬಾಕ್ಸ್ ಗಳಿವೆ. ಎರಡನೇ ಮಹಡಿಗೆ ಕೊಂಡೊಯ್ಯಲು ಕಷ್ಟ. ಸಣ್ಣ ಸಣ್ಣ ಮಳಿಗೆಯವರಿಗೆ ಮೇಲೆ ಅಲಾಟ್ ಮಾಡಿ. ೨೦೦೦/ ರೂ ಪಾವತಿಸಿ ಪೂರ್ಣ ಕೋಣೆ ಕಾಯ್ದಿರಿಸಿದ್ದವರಿಗೆ ಕೆಳಗೆ ಕೊಡಿ ಎಂದು. (ಕೆಳಗಿನ ಕೆಲವು ಕೋಣೆಗಳಲ್ಲಿ ನಾಲ್ಕು ಪ್ರತ್ಯೇಕ ಪುಸ್ತಕ ಮಾರಾಟಗಾರರಿಗೆ ಒಂದೇ ಮಳಿಗೆಯಲ್ಲಿ ವ್ಯವಸ್ಥೆ ಮಾಡಿದ್ದಾರೆ). ಅದಕ್ಕೆ ಹರೀಶ್ ಅಂದದ್ದು. ನೀವೇನೂ ಚಿಂತಿಸಬೇಡಿ. ಲಿಫ್ಟ್ ಇದೆ. ನಿಮ್ಮ ಸಹಾಯಕ್ಕೆ ಕೆಲವು ಹುಡುಗರನ್ನೂ ಕಳುಹಿಸುತ್ತೇನೆ. ೨ ನೇ ಮಹಡಿಯ ನಿಮ್ಮ ಮಳಿಗೆಗೆ ಸಾಗಿಸುವುದಕ್ಕಾಗಲೀ, ಮತ್ತೆ ವಾಪಸ್ ಸಾಗಿಸುವುದಕ್ಕಾಗಲೀ ಯಾವುದೇ ತೊಂದರೆಯಿಲ್ಲ. ನೀವು ಅಲ್ಲಿ ಲಿಫ್ಟ್ ಸೆಕ್ಯುರಿಟಿಗೆ ೨೦/- ರೂ ಕೊಟ್ಟಿಬಿಡಿ ಎಂದರು. ಒಪ್ಪಿಕೊಂಡೆವು.

೩) ಸರಿ ಪುಸ್ತಕಗಳನ್ನು ಸುಗಮ ಟ್ರಾನ್ಸ್ ಪೋರ್ಟ್ ನಿಂದ ತರಲು ಹೋದಾಗ ಮತ್ತೊಂದು ದೊಡ್ಡ ಶಾಕ್ ಕಾದಿತ್ತು. ಅದರಲ್ಲಿ ನಾಲ್ಕು ಬಾಕ್ಸ್ ಗಳು ಒಡೆದು, ನೆನೆದು ಕೆಲ ಪುಸ್ತಕಗಳು ಹೊರಗೆ ಬಿದ್ದಿದ್ದವು. ಕೇಳಿದ್ದಕ್ಕೆ, ಪುಸ್ತಕದ ಡಬ್ಬಗಳು ಹಾಗೇ ಸಾರ್ ಅಂದ!

೪) ಪುಸ್ತಕಗಳನ್ನು ಸಾಗಿಸಿ ತಂದು, ಲಿಫ್ಟ್ ನಲ್ಲಿ ಹಾಕಲು ಹೋದಾಗ, ಸೆಕ್ಯುರಿಟಿ ನಿರಾಕರಿಸಿದ. ಕೊನೆಗೂ ಮನವೊಲಿಸಿ ಇನ್ನೇನು ಲಿಫ್ಟ್ ಮೇಲರಬೇಕು ಎನ್ನುವಷ್ಟರಲ್ಲಿ, ಎಲ್ಲಿಂದಲೋ ಶ್ರ‍ೀವತ್ಸನೋ, ಶ್ರೀವಾತ್ಸವನೋ ಎಂಬ ಹೆಸರಿನ ಮನುಶ್ಯ (ಇವರು ಆ ಕಟ್ಟಡದ ಮೇಲ್ವಿಚಾರಕರಂತೆ!) ಬಂದು ಇಲ್ಲಾ, ಸಾರ್ ಪುಸ್ತಕಗಳನ್ನು ಮೇಲೆ ಸಾಗಿಸುವುದಕ್ಕೆ ಲಿಫ್ಟ್ ಉಪಯೋಗಿಸುವ ಹಾಗಿಲ್ಲ ಎಂದ. ಕಳಕಳಿಯಿಂದ ಮನವಿ ಮಾಡಿ ನಮ್ಮ ತೊಂದರೆಯನ್ನು ಮನವರಿಗೆ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ, ಮಾತೇ ಆಡಲು ನಿರಾಕರಿಸಿ ನಡೆದೇಬಿಟ್ಟ.

೫) ಈಗ ಹರೀಶ್ ವರಿಗೆ ಕರೆ ಮಾಡಿ ಬೇಡಿಕೊಂಡರೆ, (ಇಷ್ಟರಲ್ಲಿ ಹರೀಶ್ ಅವರು ಮನೆಗೆ ಹೋಗಿಬಿಟ್ಟಿದ್ದರು) ಅವರಿಂದ ಒಂದೇ ವಾಕ್ಯದ ಉತ್ತರ. ನಿಮ್ಮ ೨೦೦೦/- ವಾಪಸ್ ಕೊಡ್ತೀವಿ, ನೀವು ವಾಪಸ್ ಹೋಗಿಬಿಡಿ! ಲಿಫ್ಟ್ ಆನ್ ಮಾಡೋ ಹಾಗಿಲ್ಲ ಎಂದು ಛೇರ್ಮನ್ ಹೇಳಿದ ಮೇಲೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ!

೬) ಕೊನೆಗೆ ಅಲ್ಲಿಯ ಇಬ್ಬರು ವಿದ್ಯಾರ್ಥಿಗಳ ಸಹಾಯದೊಂದಿಗೆ, ೩೨ ಬಾಕ್ಸ್ ಗಳನ್ನೂ ಮೇಲೆ ಸಾಗಿಸಿದ್ದಾಯಿತು!

ನನಗೆ ಕೊನೆಗೆ ಉಳಿದ ಪ್ರಶ್ನೆ ಒಂದೇ! ನಿಮ್ಮಲ್ಲಿ ಪಾರದರ್ಶಕತೆ ಇಲ್ಲ. ಎರಡನೇ ಮಹಡಿಯಲ್ಲಿ ಪುಸ್ತಕ ಮೇಳಕ್ಕೆ ಕೊಠಡಿ ಕೊಟ್ಟಿದ್ದೀರಿ! ಅಲ್ಲಿಗೆ ಪುಸ್ತಕಗಳ ಡಬ್ಬಗಳನ್ನು ಸಾಗಿಸಲು ಲಿಫ್ಟ್ ನ ಸೌಕರ್ಯವನ್ನು ನಿರಾಕರಿಸಿದ್ದೀರಿ! ಲಿಫ್ಟ್ ಬರೀ ಛೇರ್ಮನ್ ಸಾಹೇಬರಿಗೆ ಮಾತ್ರವೇ?

ಶನಿವಾರ, ಆಗಸ್ಟ್ 21, 2010

ಸಚಿವನ ಕಾರಿಗೆ ಅಡ್ಡ ಬಂದ ಹಸುವಿಗೆ ಚಿತ್ರಹಿಂಸೆ, ಸಾವು! ’ಗೋಹತ್ಯಾ ನಿಷೇಧ ಕಾಯಿದೆ’ಗೆ ತಿದ್ದುಪಡಿ ಚಿಂತನೆ!

ನೆಲಮಂಗಲದ ಬೈಪಾಸ ರಸ್ತೆಯ ಬಳಿ ಧಾವಿಸುತ್ತಿದ್ದ ಮಾನ್ಯ ಸಚಿವ ಬಚ್ಚಾ ಗೌಡನ ಕಾರಿಗೆ ಅಡ್ಡ ಬಂದದ್ದರಿಂದ, ಚಿತ್ರ ಹಿಂಸೆ ಅನುಭವಿಸಿ ಸಾವಿಗೀಡಾದ ದನದ ದಾರುಣ ಕಥೆ, ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ನೆಲಮಂಗಲ ಬ್ಯೂರೋ ಇಂದ ಸಮರಸ ಠೀವಿಯ ಭಾತ್ಮೀದಾರ, ಹೈಬ್ರಿ ಜೆರ್ಸಿ ವರದಿ ಕೊಟ್ಟಿದ್ದಾರೆ. ಮುಂದೆ ಓದಿ.

ನಡೆದದ್ದು ಹೀಗೆ, ತುಮಕೂರು ಸಮೀಪದ ಪ್ರಸಿದ್ಧ ಮಠದಲ್ಲಿ ಗೋಹತ್ಯಾ ನಿಷೇಧದ ಬಗ್ಗೆ ಭಾಷಣ ಮಾಡಲು ತೆರಳುತ್ತಿದ್ದಾಗ, ನೆಲಮಂಗಲದ ಬೈಪಾಸ್ ಬಳಿ ಒಂದು ಸೀಮೆ ಹಸು ಮಾನ್ಯ ಸಚಿವ ಬಚ್ಚಾ ಗೌಡರ ಕಾರಿಗೆ ಅಡ್ಡ ಹಾದು ಹೋದದ್ದರಿಂದ ಕಾರು ಚಲನೆಯಲ್ಲಿ ನಿದಾನವಾಗಿ, ನಿಲ್ಲಿಸಬೇಕಾದ ಸಂದರ್ಭ ಒದಗಿತು. ತಕ್ಷಣ ಕೆಳಗಿಳಿದ ಕಾರಿನ ಚಾಲಕ, ಈ ಹಿಂದಿನಂತೆ ಕೆಟ್ಟದಾಗಿ ವರ್ತಿಸದೆ, ರಸ್ತೆ ದಾಟಿ ನಿಂತಿದ್ದ ದನಕ್ಕೆ ನಯವಾಗಿ “ಏಯ್ ದನ ಕಣ್ಣ ಕಾಣಕ್ಕಿಲ್ವ, ಮಿನಿಸ್ಟ್ರು ಕಾರ್ ಬತ್ತಾ ಐತೆ ಅಂತ” ಕೇಳಿದ್ದಾಗ್ಯೋ, ಉತ್ತರಿಸದೆ ತನ್ನ ಪಾಡಿಗೆ ತಾನು ಮೆಲುಕು ಹಾಕಿಕೊಂಡು ಶಾಂತವಾಗಿ ನಿಂತಿದ್ದ ದನದವನ್ನು ಕಂಡು ಕೆರಳಿದ ಮಾನ್ಯ ಸಚಿವ ಬಚ್ಚಾ ಗೌಡರು ಕೆರಳಿ, ದನದ ಮೂಗು ದಾರವನ್ನು ಜಗ್ಗಿಸಿದ್ದಲ್ಲದೆ, ದನದ ಬಾಲವನ್ನು ಹಿಡಿದು ಜಗ್ಗಿಸಿ, ಬಾರುಗೋಲಿನಿಂದ ಹಿಗ್ಗಾ ಮುಗ್ಗ ಥಳಿಸಿದರೆಂದು ’ಪ್ರತ್ಯಕ್ಷ-ದನಗಳಿಂದ’ ತಿಳಿದು ಬಂದಿದೆ. ಅಲ್ಲದೆ ’ದನ ಕಾಯವ್ನೆ’ ಎಂದು ಮಾನವನ ಜಾತಿಗೆ ಹೋಲಿಸಿ ಆ ದನಕ್ಕೆ ಅವಾಚ್ಯವಾಗಿ ಬೈದರೆಂದೂ ಸುದ್ದಿ ಬಂದಿದೆ. ಥಳಿತದಿಂದ ಗಾಯಗೊಂಡ ದನ ಸ್ವಲ್ಪ ಸಮಯದ ನಂತರ ಅಸು ನೀಗಿತೆಂದೂ ತಿಳಿದು ಬಂದಿದೆ.
ಮುಂದೆ ಓದಿ

ಬುಧವಾರ, ಜುಲೈ 28, 2010

ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು….

ಸಮರಸದಲ್ಲಿ ಗೋಪಾಲರು ಬರೆದಿರುವ ಈ ಹಾಸ್ಯ ಲೇಖನ ಓದಿ...
“ಕಟ್… ಕಟ್ …” ಸ್ವಲ್ಪ ಸಮಯದ ನಂತರ ಮತ್ತೆ ಅದೇ “ಕಟ್ ಕಟ್”. ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ ಪ್ರಿಯ. ಏನಂತೆ ಅವಳಿಗೆ. ಹಾಲಿನವನು ಬಂದರೆ, ನಾನು ಒಂದು ವಾರ ಮನೆಯಲ್ಲಿ ಇರಲ್ಲ ಊರಿಗೆ ಹೊರಟಿದ್ದೇನೆ ಎಂದು ಹೇಳಿ ಹೋದಳು. ಅಯ್ಯೋ ಪಾಪಿ ನಿದ್ದೆ.. ನಿದ್ದೆ.. ಎಂದು ಸಾಯುತ್ತಿ. ನೀನೆ ಹೋಗಿ ಬಾಗಿಲು ತೆಗೆದಿದ್ದರೆ? ಎಂದು ಮನದೊಳಗೆ ನನ್ನನ್ನು ಬೈದು ಕೊಂಡೆ. ನನ್ನ ಮಡದಿ ಮುಖ ತೊಳೆಯಲು ಬಾತ್ ರೂಮ್ ಹೋಗುತ್ತಿದ್ದಂತೆ ಮತ್ತೆ “ಕಟ್… ಕಟ್…. ” ಶಬ್ದ. ನಾನು ಹೋಗಿ ಬಾಗಿಲು ತೆಗೆದೆ. ಮತ್ತೆ ಅವಳೇ ಪಕ್ಕದ ಮನೆ ಪ್ರಿಯ.ನನ್ನ ಖುಷಿಗೆ ಪಾರವೇ ಇರಲಿಲ್ಲ. “ಅಂಕಲ್ ಪೇಪರ್ ನವನು ಬಂದರೆ ಒಂದು ವಾರ ಇರಲ್ಲ ಎಂದು ಹೇಳಿ”. ನಾನು ಮರೆತು ಬಿಟ್ಟೆ ಎಂದಳು. ಹೂವಿನ ಹಾಗೆ ಅರಳಿದ ನನ್ನ ಮುಖ ಅಂಕಲ್ ಶಬ್ದ ಕೇಳಿ ಬಾಡಿ ಬೆಂಡಾಗಿತ್ತು .ಆಯಿತು ಎಂದು ಹೇಳಿ ಬಾಗಿಲು ಮುಚ್ಚಿ ಕೊಂಡೆ. ಮುಂದೆ ಓದಿ