ಶನಿವಾರ, ಜನವರಿ 10, 2009

ನೃತ್ಯ

ಕುಣಿಯೋಣು ಬಾರ, ಕುಣಿಯೋಣು ಬಾ

youtube ದೃಶ್ಯಾವಳಿ ತಾಣದಲ್ಲಿ crazy4 ಎಂಬುದಕ್ಕೆ ಹುಡುಕಿದರೆ ನಿಮಗೆ ಅಪಾರ ದೃಶ್ಯಾವಳಿಗಳ ಪಟ್ಟಿ ಸಿಗುತ್ತವೆ. crazy4 ಎಂಬ ಹೃತಿಕ್ ರೋಷನ್ ರವರ ನೃತ್ಯ ಎಷ್ಟು ಪ್ರಖ್ಯಾತಿಯಾಗಿದೆ ಎಂದರೆ, ನೂರಾರು ನೃತ್ಯ ಪಟುಗಳು ಈ ನೃತ್ಯವನ್ನು ಅನುಕರಣೆ ಮಾಡಿದ ತಮ್ಮ ದೃಶ್ಯಾವಳಿಗಳ ತುಣುಕುಗಳನ್ನು ಕೂಡ ಈ ಜಾಲದಲ್ಲಿ ಸೇರಿಸಿ, ವೀಕ್ಷಕರಿಗೆ ಅಭಿಪ್ರಾಯಗಳನ್ನು ತಿಳಿಸಲು ಕೋರಿದ್ದಾರೆ. ಮನಸ್ಸಿಗೆ ಮುದ ನೀಡುವ ಈ ನೃತ್ಯಕಲೆಯ ಬಗ್ಗೆ ಸ್ವಲ್ಪ ಹರಟೋಣ ಇಂದು.

ಪುನೀತ್ ರಾಜ್ ಕುಮಾರ್ ರವರ ಎಷ್ಟೋ ಚಿತ್ರಗಳು ತಮ್ಮ ನೃತ್ಯಗಳಿಂದ ಓಡಲ್ಪಡುತ್ತವೆ ಎಂದರೆ ಅತಿಶಯವಾಗುವುದಿಲ್ಲ, ತೆಗಳಿಕೆಯೂ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ನೃತ್ಯ ಮಾಡುವ ಚಿತ್ರ ನಟ ಎನ್ನಿಸಿಕೊಂಡಿದ್ದಾರೆ. ಹಾಗೆಯೇ ತಮಿಳಿನ ಪ್ರಭುದೇವ, ತೆಲುಗಿನ ಚಿರಂಜೀವಿ, ಹಿಂದಿಯ ಹೃತಿಕ್ ರೋಶನ್, ಶಾಹೀದ್ ಕಪೂರ್, ಮಾಧುರಿ ದೀಕ್ಷಿತ್ ತಮ್ಮ ನೃತ್ಯಗಳಿಂದ ದೇಶದಲ್ಲೇ ಖ್ಯಾತಿ ಗಳಿಸಿದವರು. ಅತ್ಯುತ್ತಮ ನಟ (ನಟಸಾರ್ವಭೌಮ) ಎನಿಸಿಕೊಂಡರೂ ನೃತ್ಯ ಮಾಡದೇ ಇರುವುದು ಡಾ ರಾಜ್ ಕುಮಾರ್ ರವರ (ಡಾ ವಿಷ್ಣುವರ್ಧನ್ ಮುಂತಾದವರಿದ್ದಾರೆ) ಕೊರತೆಯಾಗಿತ್ತು.(ಹಳೆಯ ಕಾಲ ಡಾ ರಾಜ್ ಕುಮಾರ್ ರವರದು, ನೃತ್ಯವಿಲ್ಲದೇ ಇದ್ದರೂ ಅವರ ನಟನೆಯಲ್ಲಿದ್ದ ಸತ್ವ ನೃತ್ಯದ ಕೊರತೆಯನ್ನು ನೀಗಿಸಿತ್ತು, ಆದರೆ ಈಗಿನ ಕಾಲದ ನಟರಾದ ಸುದೀಪ್, ಗಣೇಶ್ ಮುಂತಾದವರು ಚಿತ್ರರಂಗದಲ್ಲಿ ತಮ್ಮ ಛಾಪನ್ನು ಉಳಿಸಿಕೊಳ್ಳಲು ನೃತ್ಯ ಕಲಿಯುವುದು ಬಹಳ ಅವಶ್ಯಕವೆನಿಸುತ್ತದೆ.) ಇವರು ಎಷ್ಟೋ ಚಲನಚಿತ್ರಗಳಲ್ಲಿ ಅಸಂಭದ್ಧವಾಗಿ ಹೆಜ್ಜೆ ಹಾಕಿದಾಗ ಅಭಾಸವಾಗಿ ಕಂಡು, ಅಪಹಾಸ್ಯಕ್ಕೂ ಗುರಿಯಾಗಿವೆ. ಇಂದು ನೃತ್ಯ ಭಾರತದ ಚಲನಚಿತ್ರಗಳ ಅತ್ಯಂತ ಪ್ರಮುಖ ಭಾಗವಾಗಿಬಿಟ್ಟಿದೆ.

ಹಿಂದೆ ಒಂದು ಕಾಲವಿತ್ತು. ಹಿರಿಯರು ನೃತ್ಯ ಎಂದರೆ ಉರಿದು ಬೀಳುತ್ತಿದ್ದರು. ಏನದು ಎಲ್ಲ ಬಿಚ್ಚಿ ಕುಣಿಯುವುದು ಎಂದು ಹರಿ ಹಾಯ್ದು, ನೃತ್ಯ ಕಲಿಯುವ ಆಸಕ್ತಿಯೇನಾದರೂ ಕಿರಿಯರಿಗೆ ತಳೆದರೆ ಚಿಗುರಿನಲ್ಲೇ ಚಿವುಟಿ ಹಾಕುತ್ತಿದ್ದರು. ಕಾಲ ಕಳೆದಂತೆ, ಜನರ ವ್ಯಕ್ತಿತ್ವ ಬೆಳೆದಂತೆ/ವಿಕಸಿತವಾದಂತೆ ನೃತ್ಯದ ಬಗ್ಗೆ ಇರುವ ತಪ್ಪು ಗ್ರಹಿಕೆ ಕಡಿಮೆಯಾಗುತ್ತಾ ಇದೆ. ನೃತ್ಯದ ಜೊತೆ ಲೈಂಗಿಕ ಆಕರ್ಷಣೆ (ಅಶ್ಲೀಲವೆನ್ನುತ್ತಾರೆ ಕೆಲವರು) ಮೊದಲಿನಿಂದಲೂ ಜೊತೆಯಾಗಿದೆ. ಈ ಅಂಶ ಹಿರಿಯರು ಉರಿದು ಬೀಳುವುದಕ್ಕೆ ಪೂರಕವಾಗಿರಬಹುದು. ಆದರೆ ಲೈಂಗಿಕ ಆಕರ್ಷಣೆ ಮನುಷ್ಯನ ತಲೆಯಲ್ಲಿ, ರಕ್ತದಲ್ಲಿ, ನರ ನಾಡಿಗಳಲ್ಲಿರಬೇಕಾದರೆ, ನಾಟ್ಯವನ್ನು ದೂಷಿಸುವುದು ಸರಿಯಲ್ಲವೆಂಬುದು ನನ್ನ ಅನಿಸಿಕೆ. ಲೈಂಗಿಕ ಆಕರ್ಷಣೆಯಿಲ್ಲದ ನೃತ್ಯವೂ ಕೂಡ ಚಾಲ್ತಿಯಲ್ಲಿದೆ.

ನೃತ್ಯದಲ್ಲಿ ಬಹಳಷ್ಟು ಬಗೆಗಳು. ತಮಟೆಯ ನಾದ, ಲಯ, ತಾಳಗಳಿಗೆ ಹೆಜ್ಜೆ ಹಾಕಿ ಕುಣಿಯುವುದು ಕರ್ನಾಟಕದಲ್ಲಿ "ಅಣ್ಣಮ್ಮನ ನೃತ್ಯ" ಎಂದೇ ಪ್ರಖ್ಯಾತವಾಗಿದೆ.ನಮ್ಮೂರಿನಲ್ಲಿ ನಡೆಯುವ ಮಾರಮ್ಮನ ಜಾತ್ರೆಯಲ್ಲಿಯೂ ಕೂಡ ಮಾಡುವುದು ಇದೇ ನೃತ್ಯವಾದರೂ, ಈ ನೃತ್ಯಕ್ಕೆ ಬೆಂಗಳೂರಿನ ಅಣ್ಣಮ್ಮ ದೇವಿಯ ಹೆಸರು ಬಂದಿರುವುದು ಏಕೆ ಎಂದು ತರ್ಕ ಮಾಡಲು ಸ್ವಲ್ಪ ಕಷ್ಟ! ಈ ನೃತ್ಯದಿಂದ ಸಿಕ್ಕುವ ಆನಂದ ಅಪಾರ, ಅದರಲ್ಲೂ ಬೇರೆ ನೃತ್ಯಗಳ ಅಭ್ಯಾಸವಿಲ್ಲದವರಿಗೆ ಇದು ವರ. ಇತ್ತೀಚೆಗೆ ಸಾಲ್ಸಾ ಎಂಬ ಇಟಾಲಿಯನ್ ನೃತ್ಯ ಬಹಳ ಚಾಲ್ತಿಯಲ್ಲಿರುವದನ್ನು ಕೇಳಿದ್ದೀನಿ. ಹಿಂದೆ ಬ್ರೇಕ್ ನೃತ್ಯ, ಡಿಸ್ಕೋ ನೃತ್ಯ ಎಂಬಿತ್ಯಾದಿ ಪದಗಳನ್ನು ಕೇಳಿದ್ದೆ, ಆದರೆ ಇವುಗಳ ಬಗ್ಗೆ ನನಗೆ ಅರಿವಿಲ್ಲ. ಡೊಳ್ಳು ಕುಣಿತ, ನಂದಿ ಕುಣಿತ ಇತ್ಯಾದಿಗಳು ನಮ್ಮಲ್ಲಿ ಜಾನಪದ ನೃತ್ಯಗಳೆಂದು ಪ್ರಸಿದ್ಧಿ ಪಡೆದಿವೆ.

ಇನ್ನು ನೃತ್ಯ ಮಾಡಲು ಬಹಳಷ್ಟು ಜನಕ್ಕೆ ನಾಚಿಕೆ, ಸಂಕೋಚ. ಅದು ತಾವು ನುರಿತ ನೃತ್ಯಪಟುಗಳಲ್ಲವೆಂಬ ಕೀಳರಮೆ, ದೇಹದ ಭಾರ - ಡೊಳ್ಳು ಹೊಟ್ಟೆ, ಇನ್ನಿತರ ಬಿಗುಮಾನಗಳು ಇದಕ್ಕೆ ಕಾರಣವಾಗುತ್ತವೆ. ಇಂತಹ ಮಾನಸಿಕ ಅಡೆತಡೆಗಳಿಂದ ಹೊರಬಂದು ಕುಣಿದಾಗಲೇ, ಕುಣಿತದ ಮಹತ್ವ, ಅದು ಕೊಡುವ ಖುಷಿ ಗೊತ್ತಾಗುವುದು. ಆರೋಗ್ಯದ ದೃಷ್ಟಿಯಿಂದಲೂ ನೃತ್ಯ ಬಹಳ ಒಳ್ಳೆಯ ವ್ಯಾಯಾಮ. ನಿಯತ ಅಭ್ಯಯಿಸುವುದರಿಂದ ಹೊಟ್ಟೆ ಮತ್ತು ಇನ್ನಿತರ ಜಾಗದಲ್ಲಿ ಶೇಖರವಾಗುವ ಅನಗತ್ಯ ಕೊಬ್ಬನ್ನು/ಬೊಜ್ಜನ್ನು ಕರಗಿಸಲು ಉಪಯುಕ್ತ ಮತ್ತು ನಮ್ಮ ಮನಸ್ಸಿನ ಋಣಾತ್ಮಕ ಶಕ್ತಿ ಯನ್ನು ಹೊರದಬ್ಬುತ್ತದೆಂದು ಹಲವಾರು ಸಂಶೋಧನೆಗಳು ತಿಳಿಸುತ್ತವೆ. ಅಂದರೆ ಆಧ್ಯಾತ್ಮಿಕತೆಯೆಡೆಗೆ ನಮ್ಮನ್ನು ಕರೆದೊಯ್ಯುವ ಒಂದು ರೀತಿಯ ಯೋಗಾಸನ ಎಂದರೂ ತಪ್ಪಾಗಲಾರದು! ಎನಾಗುತ್ತದೋ ಬಿಡುತ್ತದೋ, ಮುಂದೆ ಎಲ್ಲಾದರೂ ಸಮಾರಂಭದಲ್ಲಿ ಜನರು ಕುಣಿಯಲು ಪ್ರಾರಂಭಿಸಿದರೆ, ಹೆಜ್ಜೆ ಹಾಕಿ ನಾವೂ ಆನಂದಿಸಲಂತೂ ಅನುವಾಗುತ್ತದೆ.

ಇವೆಲ್ಲಾ ಯಾಕೆ ನಮ್ಮ ವರಕವಿ ಬೇಂದ್ರೆ ಮಾಸ್ತರರು ಬರೆದಿಲ್ಲವೆ? (ಲೇಖನಕ್ಕೆ ಪೂರಕವಾದ ಪದ್ಯದ ಕೆಲವೇ ಚರಣಗಳನ್ನು ಆಯ್ದು ಮುದ್ರಿಸಿದ್ದೇನೆ)

ಕುಣಿಯೋಣು ಬಾರs
ಕುಣಿಯೋಣು ಬಾ ||

ತೀರದ
ತೋರದ
ಹಾಳು ಸಂಸಾರ್ ಅದ
ಮೀರಿದ ಭಾರ್ ಅದ | ಕುಣಿ....
ಬಿಸಿ ದು:ಖದರಿವ್ಯಾಕ
ಹುಸಿ ಸುಖದ ಪರಿವ್ಯಾಕ
ನಕ್ಕsಸುನೂ ಬೇಕ! ಕುಣಿ...

ನಾನಲ್ಲ
ನೀನಲ್ಲ
ನನ್ನಲ್ಲಿ ನೀನಿಲ್ಲ
ಸಾವಿನ ನೋವಿಲ್ಲ! ಕುಣಿ...
ಇದ್ದದ್ದು ಮರೆಯೋಣ
ಇಲ್ಲದ್ದು ತೆರೆಯೋಣ
ಹಾಲ್ಜೇನು ಸುರಿಯೋಣ! ಕುಣಿ...

ಕೋಲ್ಯಾಕ
ಸಾಲ್ಯಾಕ
ಕಲಿಕಿಯ ಕಾಲ್ಯಾಕ
ಹಿಗ್ಗಿಲೆ ನಡಿ ಸಾಕ! ಕುಣಿ...
ಘಾಳೇನು ತೀಡ್ಯಾವು
ನಂಹಾಂಗ ಆಡ್ಯಾವು
ಆ ಕುಣಿತ ಬೇಡ್ಯಾವು! ಕುಣಿ...

ತಾಳ್ಯಾಕ
ತಂತ್ಯಾಕ
ರಾಗದ ಚಿಂತ್ಯಾಕ
ಹೆಜ್ಜ್ಯಾಕ ಗೆಜ್ಜ್ಯಾಕ! ಕುಣಿ...
ಕುಲಿಕಿಸಿ ಕೈ ಕೈ
ಮಲಕಿಸಿ ಮೈ ಮೈ
ಥಕ ಥಕ ಥೈ ಥೈ! ಕುಣಿ...

ಕುಡಿಗಣ್ಣು
ನಗೆಗಣ್ಣು
ಚುಚ್ಚೋಣು ಬಿಚ್ಚೋಣು
ತೇಲ್ಗಣ್ಣು ಮುಚ್ಚೋಣು! ಕುಣಿ...
ಕಣಕಣ್ಣ ಹೆಣಿಯೋಣು
ಸೆಳೆದತ್ತ ಮಣಿಯೋಣು
ಮೈಮರಿಯೆ ದಣಿಯೋಣು! ಕುಣಿ...

ನೀವೂ ಕುಣಿತದ ಆನಂದವನ್ನು ಪಡೆದಿದ್ದೀರಾ? ಅಥವಾ ಕುಣಿತದಿಂದ ಯಾವುದಾದರೂ ತೊಂದರೆಯನ್ನು ಅನುಭವಿಸಿದ್ದೀರಾ? ನೃತ್ಯದ ಬಗ್ಗೆ ನಿಮ್ಮ ಅನಿಸಿಕೆಗಳೇನು ? ಕೆಳಗೆ ಬರೆಯಿರಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ