ಗುರುವಾರ, ಫೆಬ್ರವರಿ 19, 2009

ವಸುಧೇಂದ್ರ- ಪರಿಚಯ, ಸಂವಾದ, ಹಂಪಿ ಎಕ್ಸ್ ಪ್ರೆಸ್

ಪರಿಚಯ
ನನಗೆ ಇತ್ತೀಚಿನ ಕನ್ನಡ ಲೇಖಕರ ಪರಿಚಯವೇ ಇರಲಿಲ್ಲ, ಇದ್ದರೂ ಒಂದಿಬ್ಬರದು ಮಾತ್ರ ಮತ್ತು ಓದುತ್ತಿದ್ದುದು ಅವರು ವಿಜಯ ಕರ್ನಾಟಕದಲ್ಲಿ ಬರೆಯುವ ಲೇಖನಗಳು ಮಾತ್ರ.ಕಡಲತೀರ ಬ್ಳಾಗ್ ನಿಂದ ವಸುಧೇಂದ್ರ ರವರ ಪರಿಚಯ ಆಯ್ತು. ಅದರಲ್ಲಿ ಅವರ ಬಗ್ಗೆ ಮತ್ತು ಅವರ ಪುಸ್ತಗಳ ಬಗ್ಗೆ (ಹೆಚ್ಚಾಗಿ ಹಂಪಿ ಎಕ್ಸ್ ಪ್ರೆಸ್ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯ ಮೂಡಿತ್ತು) ಮೆಚ್ಚುಗೆ ವ್ಯಕ್ತವಾಗಿತ್ತು. ಅವರ ಹಂಪಿ ಎಕ್ಸ್ ಪ್ರೆಸ್ ನನಗೆ ಸಪ್ನಾದಲ್ಲಿ ಸಿಗಲಿಲ್ಲ. ಬದಲಾಗಿ ’ಯುಗಾದಿ’ ಎಂಬ ಕಥಾಸಂಕಲನವನ್ನು ತಂದು ಮನೆಯಲ್ಲಿಟ್ಟೆ ಅಷ್ಟೆ! ನಂತರ ಒಂದು ದಿನ ವಸುಧೇಂದ್ರ ರವರ ಜಾಡು ಹಿಡಿದು ಅಂತರ್ಜಾಲದಲ್ಲಿ ಜಾಲಾಡಿದಾಗ ವಿಕ್ರಾಂತ ಕರ್ನಾಟಕ ತಾಣದಲ್ಲಿ ’ಬಾಗಿಲಿನಿಂದಾಚೆ ಪೋಗದಿರಲ, ರಂಗ’ ಕಥೆ ಓದಿದೆ. ಬಹಳ ಇಷ್ಟ ಆಯ್ತು! (ಸರಳ ಬರವಣಿಗೆ ಶೈಲಿಯಂತೂ ಮನಸ್ಸಿಗೆ ಬಹಳ ಹಿಡಿಸಿತು). ಹೀಗೆ, ಅವಧಿ/ಮೆ ಫ್ಲವರ್ ನವರು ಫಿಷ್ ಮಾರ್ಕೆಟ್ ನಲ್ಲಿ ನಡೆಸುತ್ತಿದ್ದ "ವಸುಧೇಂದ್ರ ಅಂದ್ರೆ ನಮಗಿಷ್ಟ" ಎಂಬ ಸಂವಾದ ಕಾರ್ಯಕ್ರಮದ ಬಗ್ಗೆ ತಿಳಿಯಿತು.ನಾನೂ ಕಾರ್ಯಕ್ರಮಕ್ಕೆ ಹೋದೆ. ಹೀಗೆ ನನಗೆ ಆದದ್ದು ವಸುಧೇಂದ್ರ ರವರ ಮೊದಲ ಪರಿಚಯ!

ಛಂದದ ಸಂಜೆಯ ಸಂವಾದ
ಅಂದಿನ ವಸುಧೇಂದ್ರ ರವರ ಭಾಷಣ ಮತ್ತು ನಂತರ ನಡೆದ ಸಂವಾದ ನಿಜಕ್ಕೂ ಬಹಳ ಚೆನ್ನಾಗಿತ್ತು. ಅಲ್ಲಿ ನಡೆದ ಮಾತುಕಥೆಯನ್ನು ನನ್ನ ಹೆಂಡತಿಯ ಮುಂದೆ ಬಿಚ್ಚಿಡುವವರೆಗೂ ಸಮಾಧಾನವೇ ಇಲ್ಲ. ನನ್ನ ಮನಸ್ಸಿಗೆ ನಾಟಿದ, ನೆನಪಿರುವ ಕೆಲವು ತುಣುಕುಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಟಿಪ್ಪಣಿ ಮಾಡುತ್ತೇನೆ!


ಚಿತ್ರ ಕೃಪೆ: ಅವಧಿ (ಫಿಷ್ ಮಾರ್ಕೆಟ್ ನಲ್ಲಿ ವಸುಧೇಂದ್ರರ ಹಸ್ತಾಕ್ಷರಕ್ಕೆ ಸರದಿಯಲ್ಲಿ ಕಾಯುತ್ತಿರುವ ನಾನು)

ನನಗೆ ಅಷ್ಟು ಚೆನ್ನಾಗಿ ಮಾತನಾಡುವುದಕ್ಕೆ ಬರುವುದಿಲ್ಲ ಎಂದೇ ಭಾಷಣಕ್ಕಿಳಿದ ವಸುಧೇಂದ್ರ ರವರು, ನಾನೇನು ಸಾಹಿತ್ಯಿಕ ವಾತಾವರಣದಲ್ಲಿ ಬೆಳೆದು ಬಂದದ್ದಿಲ್ಲ, ಕಥೆ ಬರೆಯುವುದಕ್ಕೆ ಆ ರೀತಿಯ ವಾತಾವರಣ ಅವಶ್ಯಕವೇನಿಲ್ಲ ಎಂದರು. ವಸುಧೇಂದ್ರ ರವರ ಅಮ್ಮ, ನಡೆದ/ನಡೆಯದ ಘಟನೆಗಳನ್ನು ತಮಗೆ ವೈಭವೀಕರಿಸಿ ವಿವರಿಸುತ್ತದ್ದ ರೀತಿ ತಾವು ಬರೆಯುವ ಕಥೆಯ ಶೈಲಿಗೆ ಒಂದು ಪ್ರೇರೇಪಣೆಯೆಂದರು. ತಾವು ಇಂಗ್ಲೇಂಡಿನಲ್ಲಿ ಕೆಲಸ ಮಾಡುತ್ತಿದ್ದಾಗ ’ಬ್ರಿಟಿಷ್ ಲೈಬ್ರರಿ’ ಸಹಾಯದಿಂದ ನೋಡಿದ ಬಹಳಷ್ಟು ಭಾಷೆಯ ಅಂತರಾಷ್ಟ್ರೀಯ ಚಲನಚಿತ್ರಗಳು ಕೂಡ ತಾವು ಕಥೆಗಳನ್ನೇಳುವ ರೀತಿಗೆ ಸ್ಪೂರ್ಥಿಯೆಂದರು.

ಟಿ ಸಿ ಎಸ್ ಸಂಸ್ಥೆಯಲ್ಲಿ ಅಭಿಯಂತರರಾಗಿ ಕೆಲಸ ಮಾಡುವಾಗ, ಕೆಲಸ ಏಕತಾನತೆಗೆ ಬೇಸತ್ತು ಲೇಖನಿ ಹಿಡಿದರಂತೆ.

ಕನ್ನಡ ಮಾಧ್ಯಮದಲ್ಲಿ ಓದಿದವರು ಕನ್ನಡ ಕಥೆಗಳನ್ನು ಸುಲಲಿತವಾಗಿ ಬರೆಯಬಹುದು. ಈಗಿನ ಕಾಲದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವವರು ಕ್ಷೀಣಿಸುತ್ತಿರುವುದರಿಂದ ಕನ್ನಡ ಲೇಖಕರೂ ಕಡಿಮೆಯಾಗಬಹುದೇನೋ ಎಂಬ ಸಂಶಯವನ್ನು ವ್ಯಕ್ತಪಡಿಸಿದರು.

ಕಥೆಗಳನ್ನು ಬರೆಯುವಾಗ ಸೂಕ್ಷ್ಮತೆ ಬಹಳ ಮುಖ್ಯ ಎಂಬುದು ವಸುಧೇಂದ್ರರ ಅನಿಸಿಕೆ. ಬಡತನದ ಕಥೆಗಳನ್ನು ಬರೆಯಲು ಬಡತನದಲ್ಲಿ ಬದುಕಿ ಬಂದವರಿಗೇ ಸಾಧ್ಯವೆಂದೇನಿಲ್ಲ, ಶ್ರೀಮಂತರಾದರೂ ಬಡತನದ ಕಥೆಗಳನ್ನು ಬರೆಯಬಹುದು. ಆದರೆ ಆ ಸೂಕ್ಷ್ಮತೆ ಕಥೆಗಳಲ್ಲಿದ್ದರೆ, ಅದು ಒಳ್ಳೆಯ ಕಥೆಯೆನ್ನಿಸುತ್ತದೆಯೆಂದರು.

ವಸುಧೇಂದ್ರರು ಹೇಳಿದ ಮತ್ತೊಂದು ಸೂಕ್ಷ್ಮ ಅಂಶವೆಂದರೆ, ಯಾವುದೇ ಕಥೆಗಾರನಿಗೆ ಅಪಾರ ಓದುಗ ವೃಂದ ಸೃಷ್ಟಿಯಾಗಬೇಕಾದರೆ ತನ್ನದೇ ಆದ ಕಾಲ ಹಿಡಿಯುತ್ತದೆ. ಅವರಿಗೂ ೧೦ ವರ್ಷ ಬೇಕಾಯುತಂತೆ. ನಿಮ್ಮ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಕಡಿಮೆ ಎಂಬ ಸಂಶಯವನ್ನು ಒಬ್ಬ ಓದುಗ ವ್ಯಕ್ತಪಡಿಸಿದಾಗ ವಸುಧೇಂದ್ರರು ಅದನ್ನು ಒಪ್ಪದೆ, ತಮ್ಮ ಕಥೆಗಳನ್ನು ಪ್ರಕಟಿಸಿದ ಕನ್ನಡ ಪ್ರಭ ದಿನ ಪತ್ರಿಕೆ, ಮತ್ತು ಕನ್ನಡ ಪುಸ್ತಕ ಮಾರಾಟಕ್ಕೆ ತೆರಿಗೆ ವಿನಾಯಿತಿಯನ್ನು ಕೊಟ್ಟಿರುವ ರಾಜ್ಯ ಸರ್ಕಾರವನ್ನು ನೆನೆದರು. ಶ್ಲಾಘಿಸಿದರು.

ಕಥೆ ಬರೆಯುವ ಪ್ರಾರಂಭದಲ್ಲಿ, ಯಾವುದೋ ಪುಸ್ತಕ ಮಳಿಗೆಯಲ್ಲಿ ಮಾರಾಟಕಿಟ್ಟ ತಮ್ಮ ೫ ಪುಸ್ತಕಗಳಲ್ಲಿ, ೬ ತಿಂಗಳು ಕಳೆದರೂ ಒಂದೇ ಪುಸ್ತಕ ಮಾರಾಟವಾದದ್ದರಿಂದ ಕೊನೆಗೆ ತಾವೇ ಇನ್ನುಳಿದ ನಾಲ್ಕು ಪುಸ್ತಕಗಳನ್ನು ಕೊಂಡಿದ್ದರಂತೆ!

ಯಾವುದೇ ಒಬ್ಬ ಲೇಖಕನ ಮೊದಲನೆಯ ಪುಸ್ತಕವೇ ಒಂದು ವಿವಾದದಿಂದ ಪ್ರಖ್ಯಾತಿಯಾದರೆ, ಆ ಪ್ರಖ್ಯಾತಿಯನ್ನು ಉಳಿಸಿಕೊಳ್ಳುವುದು ಕಷ್ಟ ಎಂದರು. ಇದಕ್ಕೆ ಒಬ್ಬ ವಾಚಕ ಮುಂದಿನ ಪುಸ್ತಕಕ್ಕೂ ಒಂದು ವಿವಾದ ಸೃಷ್ಟಿಸಿದರಾಯಿತು ಎಂದು ನಗೆ ಚಟಾಕಿಯನ್ನು ಹಾರಿಸಿದರು. ವಸುಧೇಂದ್ರರು ತಮ್ಮ ವಾದಕ್ಕೆ ಬಾಲ ನಟರ ಉದಾಹರಣೆಯನ್ನು ಕೊಟ್ಟು ಸಮರ್ಥಿಸಿದರು.

ಪ್ರಸಕ್ತ ೨೦೦೯ ರ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಉಡುಪಿಯಲ್ಲಿ ನಡೆದ ಹಿಂದಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ತಾವೇ ಪುಸ್ತಕ ಮಳಿಗೆಗಳನ್ನು ತೆರೆದು,ಕೊನೆಗೆ ಹೇಗೆ ನಾಚಿಕೆಯಿಂದ ಹೊರಬಂದು, ತಮ್ಮ ಪುಸ್ತಕಗಳನ್ನು ಹೊಗಳಿ ಮಾರಾಟ ಮಾಡಿದರು ಎಂಬುದನ್ನು ವಿವರಿಸಿದರು. ಮಾರಾಟ ಮಾಡುವಾಗ ನಡೆದ ಕೆಲವು ಹಾಸ್ಯ ಸನ್ನಿವೇಶಗಳನ್ನು ಹೇಳಿ ವಾಚಕರನ್ನು ನಗೆಯ ಕಡಲಲ್ಲಿ ತೇಲಿಸಿದರು. (ಒಮ್ಮೆ ಇಬ್ಬರು ಮಹಿಳೆಯರು ಮಳಿಗೆಗೆ ಬಂದು, ತಮ್ಮ ಯಾವುದೋ ಪುಸ್ತಕದ ಬಗ್ಗೆ ಅಭಿಪ್ರಾವನ್ನು ಕೇಳಿದರಂತೆ. ಅದಕ್ಕೆ ವಸುಧೇಂದ್ರರು ತಮ್ಮ ಪುಸ್ತಕವನ್ನು ಮನಸಾರೆ ಹೊಗಳಿದಾಗ, ಜೊತೆಯಲ್ಲಿ ಬಂದಿದ್ದ ಇನ್ನೊಬ್ಬ ಮಹಿಳೆ, ಆ ಪುಸ್ತಕವನ್ನು ಮಾತ್ರ ಕೊಳ್ಳಬೇಡ, ಲೇಖಕನಿಗೆ ಮಡಿ ಮೈಲಿಗೆ ಯಾವುದೂ ಇಲ್ಲ ಎಂದಳಂತೆ. ಅದಕ್ಕೆ ಪುಸ್ತಕದ ಬಗ್ಗೆ ವಿಚಾರಿಸಿದ ಮಹಿಳೆ ವಸುಧೇಂದ್ರರು ತನಗೆ ಮೋಸ ಮಾಡಿದರೆಂಬ ರೀತಿಯಲ್ಲಿ ನೋಟ ಬೀರಿ ಮುನ್ನಡೆದಳಂತೆ.)

ತಮ್ಮ ಒಂದು ಪುಸ್ತಕವನ್ನು ಬ್ರೈಲ್ ಲಿಪಿಗೆ (ಕಣ್ಣಿದ ದೋಷವಿರುವವರು ಓದಲು ಸಹಾಯವಾಗುವ ಲಿಪಿ) ತರಲು ಪಟ್ಟ ಪಾಡನ್ನು ವಿವರಿಸಿದರು. ಇದಕ್ಕೆ ಸಹಾಯ ಮಾಡಿ ಬರಹ ಖ್ಯಾತಿಯ ಶೇಷಾದ್ರಿ ವಾಸುವನ್ನು ಕೂಡ ನೆನೆದರು. ಇವರಿಬ್ಬರೂ ಭಾರತೀಯ ವಿಙ್ನಾನ ಸಂಸ್ಥೆಯಲ್ಲಿ ಓದುತ್ತಿದ್ದಾಗ ಸಹಪಾಠಿಗಳಂತೆ. ವಾಸು ಬರಹ ತಂತ್ರಙ್ನಾವನ್ನು ಸಿದ್ಧಪಡಿಸಿದಾಗ, ವಸುಧೇಂದ್ರರು ಅದರಲ್ಲಿ ಕಥೆ ಬರೆದು ತಂತ್ರಙ್ನಾವನ್ನು ಪರೀಕ್ಷಿಸಿದ್ದ್ರಂತೆ! ಈ ಬ್ರೈಲ್ ಲಿಪಿಗೆ ಪುಸ್ತಕವನ್ನು ತರಲು, ಅವರು ನೋಡಿನ ಒಂದು ಇರಾನ್ ಚಲನಚಿತ್ರ (The color of paradise) ಕಾರಣವಂತೆ. ಈ ಕಥೆಯಲ್ಲಿ ನಾಯಕನಿಗೆ (೭ ನೇ ತರಗತಿಯ ವಿದ್ಯಾರ್ಥಿ) ದೃಷ್ಟಿ ದೋಷ. ಅಂಧರ ಶಾಲೆಯಲ್ಲಿ ಕಲಿಯುತ್ತಿರುತ್ತಾನೆ. ಇವನು ಒಮ್ಮೆ ಸಮುದ್ರಕ್ಕೆ ಹೋದಾಗ, ತಳದಲ್ಲಿರುವ ಮರಳಿನಲ್ಲಿ ಕೈಯಾಡಿಸಿದಾಗ ಅವನಿಗೆ ಅಲ್ಲೂ ಅಕ್ಷರಗಳ ಸ್ಪರ್ಷ! ಮೆಕ್ಕೆ ಜೋಳದ ಮೇಲೆ ಕೈಯಾಡಿಸಿದಿಗಾಲೂ ಅಕ್ಷರಗಳ ಅನುಭವ. ಈ ವಿದ್ಯಾರ್ಥಿ ಇತರ ಸಾಮಾನ್ಯ (ಅಂಧರಲ್ಲದ) ವಿಧ್ಯಾರ್ಥಿಗಳನ್ನೂ ಹಿಂದಿಕ್ಕಿ ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸುತ್ತಾನಂತೆ.
ವಸುಧೇಂದ್ರರು ದೃಷ್ಟಿ ದೋಷವುಳ್ಳವರನ್ನು ಬ್ರೈಲ್ ಲಿಪಿಯ ಪುಸ್ತಕಗಳ ಬಗ್ಗೆ ವಿಚಾರಿಸಿದಾಗ, ಅವರಿಗೆ ಪುಸ್ತಕಗಳನ್ನು ಒಂದೇ ಸಮನೆ ಓದಲು ಕಷ್ಟವಾಗುತ್ತದಂತೆ. ಬೆರಳಿನ ಚರ್ಮದ ಸಂವೇದನೆ ಇಲ್ಲವಾಗುತ್ತದಂತೆ. ಅದಕ್ಕೆ ಪುಸ್ತಕಗಳನ್ನು ವಾಚನ (Audio) C D ಗಳ ಮೂಲಕ ಹೊರತಂದರೆ ಬಹಳ ಸಹಾಯಬಾಗುತ್ತದೆ ಎಂಬ ಸಲಹೆಯಿತ್ತರಂತೆ. ಈ ನಿಟ್ಟಿನಲ್ಲಿ ಯಾರಾದರೂ ಮುಂದಾಳತ್ವ ವಹಿಸಿ ಕೆಲಸ ಮಾಡಬೇಕಾಗಿದೆ ಎಂಬ ಕರೆಕೊಟ್ಟರು!

ಇನ್ನೊಂದು ಸೋಜಿಗದ ಸಂಗತಿಯೆಂದರೆ ವಸುಧೇಂದ್ರರವರು ಬಹಳ ಬರೆಯುವುದು ವಾಹನದಟ್ಟಣೆಯಲ್ಲೇ ಅಂತೆ! ಅದಕ್ಕೆ ಒಬ್ಬ ಓದುಗರು, ಬೆಂಗಳೂರಿನ ಮೂಲಸೌಕರ್ಯಗಳು ಅಭಿವೃದ್ಧಿಯಾಗಿ ವಾಹನ ದಟ್ಟಣೆ ಮಾಯವಾದರೆ ನಿಮ್ಮ ಬರವಣಿಗೆಯ ಗತಿಯೇನು ಎಂದಾಗ, ಇನ್ನೊಬ್ಬ ಸಹೃದಯ ಓದುಗನಿಂದ, ನಾವು ಚಳುವಳಿ, ಪ್ರತಿಭಟನೆಗಳನ್ನು ಮಾಡಿ ರಸ್ತೆ ತಡೆ ಮಾಡಿ ವಾಹನ ದಟ್ಟನೆಯನ್ನು ಸೃಷ್ಟಿಸಿ ವಸುಧೇಂದ್ರರವರಿಗೆ ಬರೆಯಲು ಅನುಕೂಲ ಮಾಡಿಕೊಡುತ್ತೇವೆ ಎಂದಾಗ ಎಲ್ಲರೂ ಒಮ್ಮೆ ನಕ್ಕರು!

ತಾವು ತಮ್ಮ ಗೆಳೆಯೊರೊಂದಿಗೆ ಪ್ರಾರಂಭಿಸಿದ ಪ್ರಕಾಶನ ಸಂಸ್ಥೆಯ ’ಛಂದ ಪುಸ್ತಕ’ ಬಗ್ಗೆ ಕೂಡ ಮಾತನಾಡಿದರು. ಛಂದ ಎಂಬ ಛಂದಸ್ಸಿನ ಛಂದ ಏಕೆ ಹೆಸರಿನಲ್ಲಿ, ಇದು ಅಕ್ಷರ ದೋಷವಲ್ಲವೆ ಎಂದು ಬಹಳಷ್ಟು ಮಂದಿ ಕೇಳಿದ್ದಾರಂತೆ. ಉತ್ತರ ಕರ್ನಾಟಕ ಸೊಗಡಿರಲೆಂದು ಈ ಛಂದ ಪದವನ್ನು ಆಯ್ಕೆ ಮಾಡಿರುವುದಾಗಿ ಹೇಳಿದರು.

ಕೇಳುಗರ ಓಂದು ಪ್ರಶ್ನೆಗೆ, ತಾವಿನ್ನೂ ಬರೆಯುತ್ತಿರುವುದು ಕೇಳಿ ಕಂಡ ಅನುಭವದ ಕಥೆಗಳೆಂದೂ, ಅಮೂರ್ತ (Abstract) ಕಥೆಗಳನ್ನು ಬರೆಯಲು ಇನ್ನೂ ಸಮಯ ಬೇಕೆಂದರು. ಕವನಗಳನ್ನೂ ಮುಂದೊಮ್ಮೆ ಬರೆಯುವೆನೆಂದರು.

ಹಿಂದೊಮ್ಮೆ ’ಜೋಗಿ’ ಯವರು (ಇವರು ಕೂಡ ಇತ್ತೀಚಿನ ಕನ್ನಡ ಲೇಖಕರು) ಕೆಟ್ಟವನಾದರೂ ಬುದ್ಧಿವಂತನ ಜೊತೆ ವ್ಯವಹರಿಸಬಹುದು, ಆದರೆ ಒಳ್ಳೆಯವನಾದರೂ ದಡ್ಡನ ಜೊತೆ ವ್ಯವಹರಿಸುವುದು ಕಷ್ಟ ಎಂದಿದ್ದರಂತೆ. ಇದಕ್ಕೆ ವಿರುದ್ಧವಾದ ನಿಲುವಂತೆ ವಸುಧೇಂದ್ರರವರದು. ಯಾವುದೇ ಮನುಷ್ಯನ ಜೊತೆ ವ್ಯವಹರಿಸಬೇಕಾದರೆ ಆ ವ್ಯಕ್ತಿ ಮೊದಲು ಒಳ್ಳೆಯವನಾಗಿರಬೇಕು. ಮನುಷ್ಯ ಕಥೆಗಾರನಾಗುವದಕ್ಕಿಂತಲೂ ಮೊದಲು ಒಳ್ಳೆಯ ವ್ಯಕ್ತಿಯಾಗಬೇಕೆಂಬ ಮಾತನ್ನು ಹೇಳಿದರು.

ಇದೇ ರೀತಿ ಎಲ್ಲದಕ್ಕೂ ಸಂಭದವನ್ನು ಬೆಸೆದು ಒಂದೂ ವರೆ ಘಂಟೆ ತಮ್ಮ ಮಾತಿನಲ್ಲಿ ವಾಚಕರನ್ನು ಮೋಡಿ ಮಾಡಿದರು. ಸೂಕ್ಷ್ಮತೆ ಕಥೆಯಲ್ಲಿ, ಕಥೆಯ ಪಾತ್ರಗಳಲ್ಲಷ್ಟೇ ಅಲ್ಲ ಬೇಕಾಗಿರುವುದು, ಎಲ್ಲ ಮನುಷ್ಯರಲ್ಲಿರಬೇಕು ಎಂಬುದನ್ನು ಸಾರಿ ಹೇಳುವಂತಿತ್ತು ಅವರ ಮಾತುಗಳು. ವಸುಧೇಂದ್ರರೂ ಸೂಕ್ಷ್ಮಜೀವಿ ಎಂದು ನೆರೆದವರಿಗೆಲ್ಲಾ ಗೊತ್ತಾಗಿತ್ತು!

ಹಂಪಿ ಎಕ್ಸ್ ಪ್ರೆಸ್

ಸಂವಾದ ಮುಕ್ತಾಯವಾದ ಮೇಲೆ, ವಸುಧೇಂದ್ರರಿಗೆ ನನ್ನ ಪರಿಚಯವನ್ನು ಹೇಳಿ ಅವರ ಹಸ್ತಾಕ್ಷರ ಪಡೆದ ಹಂಪಿ ಎಕ್ಸ್ ಪ್ರೆಸ್ ಪುಸ್ತಕವನ್ನು ಕೊಂಡೆ.ಮನೆಗೆ ಬಂದ ಮೇಲೆ ಪ್ರಸಕ್ತವಾಗಿ ಓದುತ್ತಿದ್ದ ’ವಿ ಎಸ್ ನಾಯ್ಪಾಲ್’ ರವರ ’INDIA - A Million Mutinies Now' ಪುಸ್ತಕದ ಓದನ್ನು ಸದ್ಯಕ್ಕೆ ತಡೆ ಹಿಡಿದು ಹಂಪಿ ಎಕ್ಸ್ ಪ್ರೆಸ್ ಪ್ರಾರಂಭಿಸಿದೆ. ’ಸೀಳು ಲೋಟ’ ಓದಿದೆ. ಬಹಳ ಇಷ್ಟವಾಯಿತು. ನಂತರ ’ಕೆಂಪು ಗಿಣಿ’ಯನ್ನು ಓದಿದೆ. ನಿಜಕ್ಕೂ ಈ ಕಥೆಯನ್ನು ಹೊಗಳಲು ನನಗೆ ಪದಗಳ ಕೊರತೆ ಇದೆ. ಇದು ಅತಿಶಯೋಕ್ತಿಯಲ್ಲ. ಆ ಶೀರ್ಷಿಕೆ, ಕಥೆಯನ್ನು ಕೊಂಡೊಯ್ಯುವಿಕೆ, ಒಂದೊಕ್ಕೊಂದರ ಸಂಬಂಧ, ಮುಕ್ತಾಯ ಎಲ್ಲವೂ ವರ್ಣನಾತೀತ. ನಾನು ಸಾಮಾನ್ಯವಾಗಿ ಕಾದಂಬರಿಗಳನ್ನು ಓದುತ್ತಿದ್ದೆ. ಸಣ್ಣ ಕಥೆಗಳನ್ನು ಓದುತ್ತಿದ್ದುದೆ ಕಡಿಮೆ. ವಸುಧೇಂದ್ರರ ಬರವಣಿಗೆ ನನ್ನನ್ನು ಈ ಸಣ್ಣ ಕಥಾಲೋಕಕ್ಕೆ ಎಳೆದು ತಂದಿದೆ. ಮುಂದೆ ’ಕ್ಷಮೆಯಿಲ್ಲದೂರಿನಲಿ’ ಓದಿದೆ. ವಸುಧೇಂದ್ರರು ಅಂದು ಸಂವಾದದಲ್ಲಿ ಮಾತನಾಡಿದ ಸೂಕ್ಷ್ಮತೆ ನನಗೆ ಈ ಕಥೆಯಲ್ಲಿ ಕಾಣಿಸಿತು.ವ್ಯಯಕ್ತಿಕ ಅಭಿಪ್ರಾಯವಾಗಿ ಈ ಕಥೆಯ ಮುಕ್ತಾಯ ನನಗೆ ಅಷ್ಟೇನು ಇಷ್ಟವಾಗಲಿಲ್ಲ.ಆದರೂ ಬರವಣಿಗೆ ಖುಷಿ ಕೊಟ್ಟಿತು. ಕೆಂಪು ಗಿಣಿಯನ್ನು ಓದಲು ಪುಸ್ತಕವನ್ನು ನನ್ನ ಮಡದಿಗೆ ಒಪ್ಪಿಸಿದ್ದೇನೆ. ಅಷ್ಟರಲ್ಲಿ ಈ ಟಿಪ್ಪಣಿಯನ್ನು ಬರೆಯಬೇಕೆಂದು ಮನಸ್ಸು ಹವಣಿಸುತ್ತಿತ್ತು.ಯುಗಾದಿ ಕಥಾಸಂಕಲನವನ್ನೂ ತಂದು ಮೇಜಿನ ಮೇಲಿಟ್ಟಿದ್ದೇನೆ!

ನೆನ್ನೆ ಇದನ್ನು ಬರೆದ ನಂತರ, ಕೆಂಧೂಳಿ, ಹೊಸ ಹರೆಯ, ಎರಡು ರೂಪಾಯಿ ಮತ್ತು ನವಿರು ಗರಿ ಕಥೆಗಳನ್ನೂ ಓದಿ ಮುಗಿಸಿದೆ. ಕೆಂಧೂಳಿಯನ್ನು ಹೊರತು ಪಡಿಸಿ ಎಲ್ಲಾ ಕಥೆಗಳೂ ಬಹಳ ಹಿಡಿಸಿದವು ಮನಸ್ಸಿಗೆ.

6 ಕಾಮೆಂಟ್‌ಗಳು:

  1. savivaravaada lekhana. sookshmavaagi gamanisida ella amshagaLu illive. munduvariyali intha sookshma anchegaLa saraNi!

    ಪ್ರತ್ಯುತ್ತರಅಳಿಸಿ
  2. ಅನಾಮಧೇಯ9:34 ಅಪರಾಹ್ನ

    ನಮಸ್ಕಾರ ಗುರುಪ್ರಸಾದ್,

    ಸಂವಾದ ಕಾರ್ಯಕ್ರಮದ ವಿವರಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು. ಓದಿದಾಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನುಭವವಾಯಿತು.

    -ಶೇಷಾದ್ರಿವಾಸು

    ಪ್ರತ್ಯುತ್ತರಅಳಿಸಿ
  3. ಶೇಷಾದ್ರಿವಾಸುರವರೆ,
    ನಮಸ್ಕಾರ.

    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ