ಸೋಮವಾರ, ಏಪ್ರಿಲ್ 13, 2009

ಸಾಹಸ ಕ್ರೀಡೆಗಳೋ.. ಸಾಯಿಸೊ ಕ್ರೀಡೆಗಳೋ??

ಸ್ವಲ್ಪ ದಿನದ ಹಿಂದೆ ಈ "ಬಂಗೀ ಜಂಪಿಂಗ್" ನ್ನು ಬೆಂಗಳೂರಿನಲ್ಲಿ ಯಾವುದೋ ಒಂದು ಸಂಸ್ಥೆ ಆಯೋಜಿಸುತ್ತಿರುವ ಸುದ್ದಿ ಓದಿ ಪುಳಕಿತಗೊಂಡೆ. ಗೆಳೆಯರನ್ನು ಕೂಡಿಸಿ ಒಮ್ಮೆ ಹೋಗಿ ಬರಬೇಕೆಂದು ಮನಸ್ಸು ಮಾಡಿದ್ದೆ.

ನಾನು ಹಿಂದೆ ಹಲವಾರು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ, ಚಂಡೀಗಢದ ಬಿಯಾಸ್ ನದಿಯಲ್ಲಿ ’ರಾಫ್ಟಿಂಗ್’, ಲಕ್ಷದ್ವೀಪದಲ್ಲಿ ’ಸ್ಕೂಬ ಡೈವಿಂಗ್’, ಗೋವಾ ದಲ್ಲಿ ’ಪ್ಯಾರ ಸೈಲಿಂಗ’, ಬನಾನ ರೈಡ್’, ಕುರುಂಗಡ್ ನಲ್ಲಿ ’ಕಯಾಕಿಂಗ್’,’ವಾಟರ್ ಸರ್ಫಿಂಗ್’ ಇತ್ಯಾದಿ. ಇವುಗಳಲ್ಲಿ ಭಾಗವಹಿಸುವ ಮುಂಚೆ, ಯಾವೊತ್ತೂ ಈ ಸಾಹಸ ಕ್ರೀಡೆಗಳನ್ನು ಆಯೋಜಿಸುವವರು ಯಾರು? ಅವರ ಅನುಭವವೇನು? ಇಂತಹ ವಿಷಯಗಳನ್ನು ವಿವೇಚನೆಯಿಂದ ಯೋಚಿಸಿದ್ದೇ ಇಲ್ಲ. ಎಲ್ಲ ಮಾಡ್ತಾರೆ, ಏನೂ ಆಗೋಲ್ಲ ಎಂಬ ಭಂಢ ದೈರ್ಯ.

ಇಂತಹ ಭಂಢ ಧೈರ್ಯಕ್ಕೆ, ನಡುಕ ಹುಟ್ಟಿಸಿದ್ದು ನೆನ್ನೆಯ ಸುದ್ದಿ. ೨೫ ವರ್ಷದ ಬಾರ್ಘವ ಎಂಬ ಅಭಿಯಂತರ ’ರಿವರ್ಸ್ ಬಂಗೀ ಜಂಪಿಂಗ್’ ಮಾಡಲು ಹೋಗಿ ಮೃತ ಪಟ್ಟ ಸುದ್ದಿ ಓದಿದ ಮೇಲೆ! ಸಚಿನ್ ವೆಂಕಟೇಶಯ್ಯ ಎಂಬುವರು ನಡೆಸುತ್ತಿರುವ ’ಹೆಡ್ ರಶ್’ ಎಂಬ ಸಂಸ್ಥೆ ಇದನ್ನು ಆಯೋಜಿಸಿತ್ತು. ಇದಕ್ಕೆ ಪೋಲೀಸ್ ಅನುಮತಿ ಸಿಕ್ಕಿರಲಿಲ್ಲ ಎಂಬುದು ಇತ್ತೀಚೆಗೆ ಬಯಲಾದ ಸತ್ಯ!

ಆಯೋಜಕರ ಬೇಜವಬ್ದಾರಿತನ ಎಷ್ಟೆಂದರೆ, ಅಲ್ಲಿ ಆ ಸಾಹಸ ಕ್ರೀಡೆಯ ಅನುಭವಕ್ಕಾಕಿ ಬಂದವರಿಗೆ ಆಯೋಜಕರು "ಎಮ್ ಜಿ ರಸ್ತೆ ದಾಟುವುದು, ಬಂಗೀ ಜಂಪಿಂಗ್ ಮಾಡುವುದಕ್ಕಿಂತಲೂ ಅಪಾಯಕರ’ ಎಂಬ ಉಡಾಫೆ ಮಾತುಗಳನ್ನಾಡಿದ್ದಾರೆ. ’ರಿವರ್ಸ್ ಬಂಗೀ ಜಂಪಿಂಗ್’ ಮಾಡಿದಾಗ, ಸೊಂಟಕ್ಕೆ ಕಟ್ಟಿದ್ದ ಪಟ್ಟಿ ಬಿಚ್ಚಿ ಹೋಗಿದೆ. ಬಿದ್ದ ಮೇಲೆ ತುರ್ತು ಆಸ್ಪತ್ರೆಗೆ ಕರೆದೊಯ್ಯಲು, ಒಂದು ’ಆಂಬ್ಯುಲೆಂನ್ಸ್’ ಕೂಡ ಇಲ್ಲ. ಇದಲ್ಲದೆ ತಮಗೆ ಈ ಸಾಹಸಕ್ರೀಡೆಯನ್ನು ೫ ವರ್ಷಗಳು ನಡೆಸಿದ ಅನುಭವವಿದೆ ಎಂದು ಸುಳ್ಳು ಹೇಳಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ಗೆಳೆಯರನ್ನೊದಗೂಡಿ ’ವಂಡರ್ ಲಾ’ ಹೋಗಿದ್ದೆ. ಆಕಾಶದಲ್ಲಿ ಹುಚ್ಚಾಪಟ್ಟೆ ಸುರಳಿ ಸುತ್ತುವ (ಜೈಂಟ್ ವೀಲ್ ಅಲ್ಲ) ಒಂದು ಕ್ರೀಡೆಯಲ್ಲಿ ಭಾಗವಹಿಸಿದ್ದೆ. ಅದರಲ್ಲಿ ಒಮ್ಮೆ ಮೇಲೆ ಕರೆದುಕೊಂಡು ಹೋಗಿ, ನಮ್ಮನ್ನು ಬೀಳುವಂತೆ ನಿಲ್ಲಿಸುತ್ತಾರೆ. ನಾವು ಕುಳಿತ ಕುರ್ಚಿಗೆ ಹಾಕಿದ ಒಂದು ಪಟ್ಟಿಯಲ್ಲಿ ನೇತಾಡುತ್ತಿರುತ್ತೇವೆ. ಪಕ್ಕದಲ್ಲಿ ಕುಳಿತ ತರಲೆ ಗೆಳೆಯ, ಮಗಾ ಯಾಕೋ "ನಿನ್ನ ಬೆಲ್ಟ್ ಸರಿಯಾಗಿ ಲಾಕ್ ಆಗಿಲ್ಲ ನೋಡ್ಕೋಳ್ಳೋ ಅಂದ!" ಆ ಒಂದು ಮಾತಿನಿಂದಲೇ ಪ್ರಾಣ ಹಾರಿಹೋಗುವಷ್ಟು ಭಯ ಆಗಿತ್ತು!

ಯಾಕೋ ಇನ್ನು ಮುಂದೆ ಇಂತಹ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ದಿಗಿಲಾಗುತ್ತದೆ. ಅವರಿವರ ಅನುಭವವನ್ನು ಓದಿಯೇ ಸಂತಸ ಪಡುವುದು ಮೇಲೆನ್ನಿಸುತ್ತದೆ. ಅಥವಾ ಸ್ವಲ್ಪ ದಿನದ ನಂತರ ಈ ಕಹಿ ನೆನಪುಗಳು ಸ್ಮೃತಿ ಪಟಲದಿಂದ ಕಾಣೆಯಾಗಬಹುದು, ಮತ್ತದೇ ಭಂಢ ದೈರ್ಯ, ಬೇಜವಬ್ದಾರಿತನ ಮರುಕಳಿಸಬಹುದು!

ಆದರೂ, ನೀವುಗಳು ಇನ್ನೊಮ್ಮೆ ಯಾವುದೇ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕಾದಾಗ, ನಿಮ್ಮ ಕುಟುಂಬ ವರ್ಗದ ಬಗ್ಗೆ ಒಮ್ಮೆ ಯೋಚಿಸಿ. ಆಯೋಜಕರ ಬಗ್ಗೆ ಧೀರ್ಘವಾಗಿ ವಿಚಾರಿಸಿ. ಗೆಳೆಯರ ಊಡಾಫೆ ಮಾತುಗಳಿಗೆ ಮರುಳಾಗಬೇಡಿ. ಗೆಳೆಯರು ಪುಕ್ಕಲ ಎಂದು ಹಾಸ್ಯ ಮಾಡುವರೆಂದು ಧೈರ್ಯ ತಂದುಕೊಳ್ಳಬೇಡಿ. ವಿವೇಚನೆಯಿಂದ ಹೆಜ್ಜೆ ಇಡಿ. ನಿಮ್ಮ ಜೀವನದಲ್ಲಿ ಆ ’ಥ್ರಿಲ್’ ಬೇಕೇ ಬೇಕೆ? ಎಂಬುದನ್ನೆ ಒಮ್ಮೆ ಯೋಚಿಸಿ.

ಸಾಹಸ ಕ್ರೀಡೆಗಳು ಸಾಯಿಸೊ ಕ್ರೀಡೆಗಳಾಗಬಾರದಲ್ಲ?

6 ಕಾಮೆಂಟ್‌ಗಳು:

 1. ಗುರುಪ್ರಸಾದ್,

  ನೀವು ಹೇಳುವುದು ನೂರು ಪ್ರತಿಶತ ನಿಜ. ಇವರ ಜಾಹೀರಾತು ನೋಡಿ, ತ೦ದೆಗೆ ನಾವೂ ಹೋಗೋಣ ಅ೦ದಿದ್ದೆ. ಮಾಡೋಕೆ ಬೇರೆ ಕೆಲಸ ಇಲ್ವಾ ಅಂತ ಬೈದು ಸುಮ್ನಾಗಿಸಿದ್ರು. ಮೊನ್ನೆ ಪೇಪರ್ ನಲ್ಲಿ ಅವ್ರೆ ನ್ಯೂಸ್ ತೋರಿಸಿ, ಹೋಗ್ಬೇಕು ಅಮ್ತಿದ್ಯಲ್ಲ, ನೋಡು ಕಥೆ ಅಂತ ತೋರಿಸಿದರು. ಮಾತೇ ಹೊರಡಲಿಲ್ಲ ನನಗೆ. ಆ ಕ್ಷಣದಲ್ಲಿ ಅವ್ರ ಹತ್ರ 'ಹೋಗೋರು, ಲೈಸೆನ್ಸ್ ಎಲ್ಲ ಇದ್ಯಾ, ಸೇಫ್ಟಿ ತ೦ತ್ರಗು ಇವೆಯಾ ಅ೦ಥ ನೋಡ್ಕೊಂಡು ಹೋಗ್ಬೇಕು' ಅ೦ಥೆಲ್ಲ ವಾದ ಮಾಡಿದ್ರೂ, ಇನ್ನ ಆ ದಿಗಿಲು ಹೋಗಿಲ್ಲ.

  ಪ್ರತ್ಯುತ್ತರಅಳಿಸಿ
 2. ವಿನುತಾ,

  ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ನನಗೂ ಸುದ್ದಿ ಓದಿದ ಕ್ಷಣ ಶಾಕ್ ಆಯಿತು.

  ಪ್ರತ್ಯುತ್ತರಅಳಿಸಿ
 3. ನೀವು ಎಚ್ಚರಿಸಿರುವುದು ಸಮಯೋಚಿತವಾಗಿದೆ. ಬೇಸಿಗೆ ರಜಾ ಮಜಾ ಉಡಾಯಿಸುವಾಗ ಎಚ್ಚರಿಕೆ ಅತ್ಯಗತ್ಯ.

  ಪ್ರತ್ಯುತ್ತರಅಳಿಸಿ
 4. ಗುರುಪ್ರಸಾದ್,

  ನಿಮ್ಮ ಮಾತು ಸರಿಯಾಗಿದೆ....ನನಗೂ ಇದರಲ್ಲಿ ಭಾಗವಹಿಸುವ ಆಸೆಯಿತ್ತು...ಸದ್ಯ....ವಂಡರ್ ಲಾದಲ್ಲಿ ನೀವು ಹೇಳಿದರಲ್ಲಿ ಕುಳಿತಿದ್ದೇನೆ...ಮೇಲೆ ಹೋದಾಗ ಕೇವಲ ಬೆಲ್ಟ್ ಆದಾರ ಆಗ ನನಗೂ ಹೀಗೆ ಅನ್ನಿಸಿತ್ತು....
  ಇನ್ನು ಮುಂದೆ ಇಂಥ ಆಟಗಳಲ್ಲಿ ಭಾಗವಹಿಸಬೇಕಾದಾಗ ಯೋಚಿಸುವುದು ಅಗತ್ಯ...

  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 5. ಗುರುಪ್ರಸಾದ್...

  ಏರ್ ಪೋರ್‍ಟ್ ರೋಡಿನಲ್ಲಿ "ಸಾಮೀಸ್ ಡ್ರೀಮ್ ಲ್ಯಾಂಡ್ " ಅನ್ನುವದೊಂದು ಇಇತು..
  ನಾವು ಹೋದ ಮರುದಿನವೇ ಅಪಘಾತವಾಗಿ ಹಲವಾರು ಜನ ಆಸ್ಪತ್ರೆ ಸೇರಿದ್ದರು..
  ಅಂದಿನಿಂದ..
  ಇಂಥಹ ಕ್ರೀಡೆಗಳೆಂದರೆ ಸ್ವಲ್ಪ ದೂರವೇ ಉಳಿದಿದ್ದೇವೆ...

  ನೀವು ಎಚ್ಚರಿಸಿದ್ದು ಸಮಯೋಚಿತ...

  ಜೀವಕ್ಕಿಂತ ಮೋಜು ದೊಡ್ಡದಲ್ಲ ಬಿಡಿ...

  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 6. ಮಲ್ಲಿಕಾರ್ಜುನ್, ಶಿವು, ಪ್ರಕಾಶ್,

  ಪ್ರತಿಕ್ರಿಸಿದ್ದಕ್ಕೆ ಮತ್ತು ನಿಮ್ಮ ಅನುಭವದ, ಎಚ್ಚರಿಕೆಯ ಮಾತುಗಳಿಗೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ