ಸೋಮವಾರ, ಸೆಪ್ಟೆಂಬರ್ 21, 2009

ದನದ ದೊಡ್ಡಿಯಲ್ಲ.. ಕುರಿ ಮಂದೆ!

dana_kuri


ಕಾಂಗ್ರೆಸ್‌ ಸಂಸದರು ಋಷಿಮುನಿಗಳ ಜೀವನವನ್ನು ಅಳವಡಿಸಿಕೊಳ್ಳುವಂತೆ(ಕೇಸರಿ ಬಟ್ಟೆಯನ್ನು ಧರಿಸುವುದನ್ನು ಹೊರತುಪಡಿಸಿ!) ಕೇಂದ್ರ ಸರ್ಕಾರ ಕೊಟ್ಟ ಆದೇಶಕ್ಕೆ, ಮೊದಲ ಬಲಿ"ಪಶು"ವಾದ ’ಶಶಿ ತರೂರ್’ ರವರು ಟ್ವೀಟ್ ಮಾಡಿದಂತೆ, ವಿಮಾನದ ಅಗ್ಗದ ವಿಭಾಗದ(ಎಕಾನಮಿ ಕ್ಲಾಸ್) ದನದ ದೊಡ್ಡಿಯಲ್ಲಿ ದನಗಳ ಜೊತೆ ಇನ್ನು ಮುಂದೆ ಪ್ರಯಾಣಿಸುತ್ತೇನೆಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಭಾರಿ ತಳಮಳ ಸೃಷ್ಟಿಸಿದೆ. ಇತ್ತೀಚೆಗಷ್ಟೇ ಸೋನಿಯಾ ಗಾಂಧಿಯವರು ಅಗ್ಗದ (ಎಕಾನಮಿ ಕ್ಲಾಸ್‌) ವಿಭಾಗದಲ್ಲಿ ಪ್ರಯಾಣಿಸಿದ್ದು, ಅವರನ್ನೇ ಗುರಿಯಾಗಿಟ್ಟುಕೊಂಡು ಕೊಟ್ಟ ಹೇಳಿಕೆಯೇ (ಬರೆದ ಟ್ವೀಟೆ!) ಎಂಬ ಸಂಶಯ, ಕಾಂಗ್ರೆಸ್ ಅಂಬಾ ಅಂಬಾ ಎಂದು ಅರಚಲು ಕಾರಣವೇ? ಬಲ್ಲ ಮೂಲಗಳ ಪ್ರಕಾರ, ಕಾರಣ ಅದಲ್ಲ. ಶಶಿ ತರೂರ್ ಕೇರಳದ ಸಂಸದ. ಕೇರಳ ದನಗಳ ಕಸಾಯಿಖಾನೆಗೆ ಬಹಳ ಪ್ರಸಿದ್ಧಿ. ಮೊದಲಿನಿಂದಲೂ ಕಾಂಗ್ರೆಸ್‌ ಪಕ್ಷಕ್ಕೂ ದನಗಳಿಗೂ ಅಷ್ಟಕ್ಕಷ್ಟೇ! ಇನ್ನು ದನಗಳು ವಿಮಾನದಲ್ಲಿ ಪ್ರಯಾಣ ಮಾಡುವ ಕಲ್ಪನೆಯೇ ಕಾಂಗ್ರೆಸ್ ಪಕ್ಷಕ್ಕೆ ಆಗಿ ಬರುವುದಿಲ್ಲ! ಇನ್ನು ಕೇರಳದಲ್ಲಿ ಅಲ್ಪಸಂಖ್ಯಾತರ ಮತಗಳಿಗೆ ಪೆಟ್ಟು ಬೀಳಬಹುದೆಂಬ ದೂ(ದು)ರಾಲೋಚನೆ ಶಶಿ ತರೂರ್ ರವರ ಮೇಲೆ ಕಾಂಗ್ರೆಸ್ ಗುರ್ ಗುರ್ ಅನ್ನಲು ಕಾರಣವಂತೆ. ಪಾಪ ಶಶಿ ತರೂರ್ ಎಂಬ ದನ ಕಾಂಗ್ರೆಸ್ ಎಂಬ ಹಳೆ ಹುಲಿಗೆ ಹೆದರಿ, ಬರೆದ ಟ್ವೀಟಿಗೆ ತಪ್ಪಲಾರೆನು, ಬರೆದ ಟ್ವೀಟನು ಅಳಿಸಲಾರೆನು, ಟ್ವೀಟಿನಲ್ಲಿ ಕಟ್ಟಕಡೆಗೆ ಕ್ಷಮೆಯ ಕೇಳ್ವೆನು ಎಂದು ಗೋವಿನ ಹಾಡಿನಲ್ಲಿ ಬಿನ್ನವಿಸಿಕೊಂಡಿದ್ದಾರಂತೆ!

ಮುಂದೆ ಓದಿ

1 ಕಾಮೆಂಟ್‌: