ಜಟ್ಟಯುವ ನಿರ್ದೇಶಕ ಗಿರಿರಾಜ್ ಅವರ ನಿರ್ದೇಶನ "ಜಟ್ಟ" ಚಲನಚಿತ್ರದಲ್ಲಿ, ನಿರ್ದೇಶಕರು ಹಲವು ರಾಜಕೀಯ ವಾದಗಳ-ಇಸಮ್ ಗಳ ಬಗೆಗೆ ಬೌದ್ಧಿಕ ಕಸರತ್ತು ನಡೆಸಿ, ಎಲ್ಲದಕ್ಕೂ ಮೀರಿದ್ದು ಪ್ರೀತಿ ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಸಮಾಜದಲ್ಲಿ ಒಪ್ಪಿತ ಮತ್ತು ಬಹಿಷ್ಕೃತ ಸಂಸ್ಕೃತಿ-ಮೌಲ್ಯಗಳ ಘರ್ಷಣೆಯನ್ನೂ ಹಿಡಿಯಲು ಪ್ರಯತ್ನಿಸಿದ್ದಾರೆ.
ಜಟ್ಟ (ಕಿಶೋರ್) ಅರಣ್ಯ ಸಂರಕ್ಷಕ - ಗಾರ್ಡ್. ಕಾಡಿನ ಬಗ್ಗೆ ಅಪಾರ ಜ್ಞಾನ ಉಳ್ಳವನು. ಬುಡಕಟ್ಟಿನವನು. ಒರಟ. ಇವನ ಹೆಂಡತಿ ಕಾಡು ಸುತ್ತಲು ಬಂದಿದ್ದ ಬೆಂಗಳೂರು ಯುವಕನ ಜೊತೆಗೆ ಓಡಿ ಹೋಗಿರುತ್ತಾಳೆ. ಹಿಂದೂ ಸಂಸ್ಕೃತಿಯ ಸಂರಕ್ಷಕ ಎಂದು ಹೇಳಿಕೊಳ್ಳುವ ಒಬ್ಬ ಗುರುವಿನ (ಬಿ ಸುರೇಶ್) ಮೊರೆ ಹೋಗಿ - ಅವನ ಭೋಧನೆಗಳಿಗೆ ಬಲಿಯಾಗಿ ಜಟ್ಟ ಪಾಶ್ಚ್ಯಾತ್ಯ ಉಡುಗೆ ತೊಡುಗೆಗಳ ಬಗ್ಗೆ ಅಸಹ್ಯ ಬೆಳೆಸಿಕೊಳ್ಳುತ್ತಾನೆ. ಈ ಸಮಯದಲ್ಲೇ ಫೆಮಿನಿಶ್ಟ್ - ಅಂಬೇಡ್ಕರ್ ಅವರನ್ನು ಅಪಾರವಾಗಿ ಓದಿಕೊಂಡಿರುವ ಹುಡುಗಿ ಸಾಗರಿಕ (ಸುಕೃತ ವಾಗ್ಲೆ) ಕುಡಿದು- ಡ್ರಗ್ ಸೇವನೆ ಮಾಡಿ ಗಾಡಿ ಚಾಲನೆ ಮಾಡುವಾಗ ಆಕ್ಸಿಡೆಂಟ್ ಮಾಡಿಕೊಳ್ಳುತ್ತಾಳೆ. ಜಟ್ಟ ಅವಳನ್ನು ತನ್ನ ಸೆಕ್ಲೂಡೆಡ್ ಮನೆಯಲ್ಲಿ ಕಬ್ಬಿಣದ ಸರಪಳಿಯಿಂದ ಬಂಧಿಸಿ ಇಡುತ್ತಾನೆ. ಭೀಮ್ ಕುಮಾರ್ (ಪ್ರೇಮ್ ಕುಮಾರ್) ಅರಣ್ಯಾಧಿಕಾರಿ. ದಕ್ಷ. ಕಾಡಿನ ಬಗ್ಗೆ ಅಪಾರ ಪ್ರೀತಿ ಉಳ್ಳವನು. ಇನ್ನೊಬ್ಬ ಪೋಲೀಸ್ ಅಧಿಕಾರಿ ಹೇಳುವಂತೆ ಕಮ್ಯುನಿಸ್ಟ್. ಅವರೇ ಹೇಳಿಕೊಳ್ಳುವಂತೆ ಸಂವಿಧಾನವನ್ನು ಧರ್ಮಗ್ರಂಥವೆಂದು ನಂಬಿರುವವನು. ಕಾಡು ವಿನಾಶ ಅದಕ್ಕೆ ಜಟ್ಟ ಮತ್ತು ಅವನ ಅರಣ್ಯಾಧಿಕಾರಿಯ ಹೋರಾಟ, ಸಾಗರಿಕ ಮತ್ತು ಜಟ್ಟನ ಮಧ್ಯೆ ಘರ್ಷಣೆ, ಸಾಗರಿಕಳ ನಾಪತ್ತೆಯು ಪಾರೆಶ್ಟ್ ಅಧಿಕಾರಿಯ ಕೆಲಸಕ್ಕೆ ಕುತ್ತು ತರುವುದು, ಭೀಮ್ ಕುಮಾರ್ ಜಟ್ಟನ ಕೆಲವನ್ನು ಪರ್ಮನೆಂಟ್ ಮಾಡಲು ಶ್ರಮಿಸುವುದು- ಆದರೆ ಜಟ್ಟ ತನ್ನ ಒರಟುತನದಿಂದ ಅದನ್ನು ಹಾಳು ಮಾಡಿಕೊಳ್ಳುವುದು, ಅದಕ್ಕೆ ಅವನ ಜಾತಿ ಅಡ್ಡಬರುವುದು, ಜಟ್ಟನ ಹೆಂಡತಿ ಹಿಂದಿರುಗಿ ಓಡಿ ಬರುವುದು ಹೀಗೆ ವಿಭಿನ್ನ ಸ್ತರಗಳಲ್ಲಿ ಚಲನಚಿತ್ರ ಹಲವು ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ.
ಚಲಚಿತ್ರದ ಹಲವು ಹಂತಗಳಲ್ಲಿ ಪ್ರಮುಖವಾಗಿ ಏಳುವ ಪ್ರಶ್ನೆ ಒಪ್ಪಿತ ಸಮಾಜದ "ಗಂಡಸ್ತನ"ದ್ದು. ಜಟ್ಟನ ಹೆಂಡತಿ ಓಡಿಹೋಗುವದಕ್ಕೆ ಜಟ್ಟ ಗಂಡಸೇ ಅಲ್ಲ ಎಂದು ಸಾಗರಿಕ ದೂರುವುದು. ಜಟ್ಟನ ಹೆಂಡತಿ ವಾಪಸ್ ಓಡಿ ಬಂದಾಗ, ಅವಳನ್ನು ಓಡಿಸಿಕೊಂಡು ಹೋದವನು ಗಂಡಸೇ ಅಲ್ಲ ಎನ್ನುವ ಪ್ರಶ್ನೆ. - ಗಂಡಸ್ತನಕ್ಕೂ, ಲೈಂಗಿಕತೆಗೂ, ಪ್ರೀತಿಗೂ ಅತಿಯಾದ ಸಂಬಂಧವಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಜಟ್ಟ ಮತ್ತು ಅರಣ್ಯಾಧಿಕಾರಿ ಭೀಮ್ ಕುಮಾರ್ ಅವರ ನಡುವಿನ ಅವ್ಯಕ್ತ ಪ್ರೇಮವನ್ನು ಹಿಡಿದಿಡುವ ಮೂಲಕ ನಿರ್ದೇಶಕರು ತೋರಿಸುತ್ತಾರೆ. ಭೀಮ್ ಕುಮಾರ್ ಅವರ ಹೆಂಡತಿ ಅವರನ್ನು ಬಿಟ್ಟು ಓಡಿ ಹೋಗಿರುವುದನ್ನು ಜಟ್ಟ ಅವರ ಫೋನ್ ಸಂಭಾಷಣೆಗಳಲ್ಲಿ ಗುರುತಿಸಿ ಇನ್ನೊಬ್ಬ ಅರಣ್ಯಾಧಿಕಾರಿಯಿಂದ ಆಗಾಗ ತಿಳಿದುಕೊಳ್ಳುತ್ತಿರುತ್ತಾನೆ. ಜಟ್ಟ ತನ್ನ ಅರಣ್ಯಾದಿಕಾರಿಗೋಸ್ಕರ ತನ್ನ ಒರಟುತನವನ್ನು ತ್ಯಜಿಸಲು, ಅರಣ್ಯಾಧಿಕಾರಿಕಾರಿ ಜಟ್ಟನ ಕೆಲಸ ಪರ್ಮನೆಂಟ್ ಮಾಡಲು ತನ್ನ ಪ್ರಮೊಷನ್ ತ್ಯಜಿಸಲು ಮುಂದಾಗುತ್ತಾರೆ. ಸಿನೆಮಾ ತಾನು ಹೇಳಲು ಬಯಸಿರುವ ವಿಷಯಕ್ಕೆ ಇಷ್ಟವಾದರೂ ಅದನ್ನು ಹೇಳುವ ರೀತಿಗೆ ವ್ಯತಿರಿಕ್ತವಾಗುತ್ತದೆ. ಅರಣ್ಯಾಧಿಕಾರಿ ಮತ್ತು ಜಟ್ಟನ ನಡುವಿನ ಪ್ರೇಮವನ್ನು ಅಷ್ಟು ಸಟಲ್ ಆಗಿ ಸೂಕ್ಷ್ಮವಾಗಿ ತೋರಿಸುವ ನಿರ್ದೇಶಕರು ಉಳಿದಲ್ಲಿ ಸಿಕ್ಕಾಪಟ್ಟೆ ಲೌಡ್ ಎನ್ನಿಸಿಬಿಡುತ್ತಾರೆ. ನಿರ್ದೇಶಕರು ಅನಗತ್ಯವಾಗಿ ಹತ್ತು ಹಲವು ವಿಷಯಗಳನ್ನು ತುರುಕಿ ಯಾವುದನ್ನೂ ತಾತ್ತ್ವಿಕವಾಗಿ ಗಹನ ಚರ್ಚೆಗೆ ಒಳಪಡಿಸದೆ Name-dropping ಮಾಡುತ್ತಾ ಹೋಗುತ್ತಾರೆ. ಎಲ್ಲ ರಾಜಕೀಯ ವಾದ-ನಿಲುವು-ಇಸಮ್ಗಳಿಗಿಂತ ಪ್ರೀತಿ ಮುಖ್ಯ ಎಂಬ ಆಷಯವೇನೋ ಒಳ್ಳೆಯದು,ಆದರೆ ಯಾವುದೆ ಒಂದು ರಾಜಕೀಯ ನಿಲುವು-ವಾದವನ್ನು ಸೋಲಿಸಬೇಕಾದರೆ, ಆ ವಾದವನ್ನೂ ಮತ್ತು ಅದರ ವಿರುದ್ಧ ವಾದವನ್ನೂ ಒಂದೇ Intellectual ಸ್ತರದಲ್ಲಿ ಕಟ್ಟಿಕೊಡಬೇಕೆ.(Judgment at Nuremberg ಸಿನೆಮಾವನ್ನು ನಾವು ಗಮನಿಸಬಹುದು. ಅಲ್ಲಿ ಪ್ಯಾಸಿಸಮ್ ಅನ್ನು ಪೋಷಿಸಿದ ಜಡ್ಗ್ಜಳಿಗೆ ಶಿಕ್ಷೆಯಾದರೂ ಅವರ ಪರವಾಗಿ ಕಟ್ಟಿಕೊಡುವ ವಾದವೂ ಅಷ್ಟೇ ಪ್ರಮುಖ). ಅರಣ್ಯಾಧಿಕಾರಿ ಬೆಂಗಳೂರು ಹುಡುಗನನ್ನು capitalist pig ಎಂದಾಕ್ಷಣವಾಗಲೀ, ಒಬ್ಬ ಪೋಲೀಸ್ ಅಧಿಕಾರಿ ಅರಣ್ಯಾಧಿಕಾರಿಗೆ ಕಮ್ಮ್ಯುನಿಸ್ಟ್ ಎಂದಾಕ್ಷಣ ಅವುಗಳ (ಅ)ಯೋಗ್ಯತೆ ಎಲ್ಲರಿಗೂ ತಿಳಿಯಬೇಕಿಲ್ಲ. ಪೆಮಿನಿಸ್ಟ್ ಪಾತ್ರವನ್ನೂ ಅಷ್ಟೇ ಕೆಟ್ಟ ರೀತಿಯಲ್ಲಿ ಚರ್ಚಿಸಿದ್ದಾರೆ. ಪೆಮಿನಿಸ್ಟ್ ಪಾತ್ರದಲ್ಲಿ ಅವಳು ಹೇಳುವ ಅಂಬೇಡ್ಕರ್ ಪಾಠ ಕೂಡ ಮುಸುಕಾಗಿದೆ. ಎಲ್ಲ ಕಾಡುಪ್ರಾಣಿಗಳಲ್ಲೂ ಹೆಣ್ಣು ಪ್ರಾಣಿಗಳಷ್ಟೇ ಭೇಟೆಯಾಡುವುದು ಎಂದು ಅವಳು ಕೊಡುವ ಬೋಧನೆ ಪ್ಯಾಕ್ಚುಯಲ್ ಆಗಿ ಎಷ್ಟು ತಪ್ಪಿದೆಯೋ, ಎಲ್ಲವನ್ನೂ ಒಂದೇ ಸಿನೆಮಾದಲ್ಲಿ ಚರ್ಚಿಸಬೇಕು ಎಂಬ ನಿರ್ದೇಶಕನ ಆತುರತೆಯನ್ನು ಕೂಡ ಎತ್ತಿ ತೋರಿಸುತ್ತದೆ. ಸಂಭಾಷಣೆಯನ್ನು ಅತಿಯಾಗಿಸುವುದು, ಕ್ರೌಯ್ರವನ್ನು ವೈಭವೀಕರಿಸುವುದು ಮತ್ತು ಆತುರವಾಗಿ, ಗಹನತೆಯಿಲ್ಲದ ವಿಷಯಗಳನ್ನು ತೋರಿಸುವ ಅಪಾಯವೆಂದರೆ ಜನರಿಗೆ ದಕ್ಕುವುದು ಬರೀ ಆ ಕ್ರೌರ್ಯ- ಆ ಭಾಷೆ - ಆ ಕಿರುಚಾಟ ಅಷ್ಟೇ ಹೊರತು ವಿಷಯವಲ್ಲ. ವಿಷಯಗಳನ್ನು ಒಡೆದು ಚರ್ಚಿಸಿ ಇನ್ನೂ ಸಿಂಪಲ್ ಮಾಡಿ (ಸಿಂಪಲ್ ಅಂದರೆ ದಡ್ಡತನ ಎಂದಲ್ಲ) ಒಂದೆರಡು issue ಗಳನ್ನು ಸಂಭಾಳಿಸಿ ಕ್ಲಾಸಿಕ್ ಎನ್ನಿಸಿಕೊಳ್ಳುವ ಸಿನಿಮಾ ಕೃತಿಯಾಗಬಲ್ಲದ್ದನ್ನು ಹಾಳು ಮಾಡಿರುವುದು ಆ ಆತುರತೆ ಮತ್ತು ಎಲ್ಲವನ್ನು ಚರ್ಚಿಸಿಬಿಡುತ್ತೇನೆಂಬ ತೀವ್ರತೆ. ತೀವ್ರ ಹಿಂದೂ ಮತೀಯವಾದಿ ಪಾತ್ರದಲ್ಲಿ ಬಿ ಸುರೇಶ್ ಸೋತಿದ್ದಾರೆ. ತಾವು ಸಶಕ್ತವಾಗಿ ಮಾಡಬೇಕಾಗಿದ್ದ ಪಾತ್ರವನ್ನೇ ಅವರು ಲೇವಡಿ ಮಾಡಿರುವಂತಿದೆ. ಅರಣ್ಯಾಧಿಕಾರಿಯ ಪಾತ್ರದಲ್ಲಿ ಪ್ರೇಮ್ ಕುಮಾರ್ ಮತ್ತು ಜಟ್ಟನ ಪಾತ್ರದಲ್ಲಿ ಕಿಶೋರ್ ಹೊರತುಪಡಿಸಿದರೆ, ಉಳಿದವರ ನಟನೆ ಅಷ್ಟಕ್ಕಷ್ಟೆ.. ಅತ್ಯುತ್ತಮ ಸಿನೆಮಾ ತಂತ್ರಜ್ಞ ಗಿರಿರಾಜ್, ಕಿರಣ್ ಅವರಿಂದ ಚಿತ್ರೀಕರಣವನ್ನಾಗಲೀ, ಆಶ್ಲೆ-ಅಭಿಲಾಷ್ ಅವರಿಂದ ಸಂಗೀತವನ್ನಾಗಲೀ ದುಡಿಸಿಕೊಂಡಿರುವ ರೀತಿ ಅನನ್ಯ. ಚಲನ ಚಿತ್ರದ ಕಥೆಗೆ ಪ್ರೇರಕವಾಗಿರುವ ಮಾದಿ ತಾಯಿಯ ಕಥೆಯನ್ನು, ಯಕ್ಷಗಾನ ರೂಪಕದ ಮೂಲಕವೋ-ಬಯಲಾಟದ ಮೂಲಕವೋ- ಹಾಡಿನ ಮೂಲಕವೋ ಹೇಳಿದ್ದರೆ ಪರಿಣಾಮಕಾರಿಯಾಗಿರುತ್ತಿತ್ತು.
ಇನ್ನುಳಿದಂತೆ, ಗಿರಿರಾಜ್ ಅವರ ಇತ್ತೀಚಿನ ಸಂದರ್ಶನಗಳನ್ನು ಗಮನಿಸಿದರೆ, ಅವರ ಮೇಲೆ ಶಿವರಾಮ ಕಾರಂತರ ಪ್ರಭಾವ ಬಹಳಷ್ಟಿದೆ. ಕಾರಂತರೂ ಕೂಡ ಯವುದೇ ಇಸಮ್ ಗೆ ಜೋತು ಬಿದ್ದವರಲ್ಲ. ತಾವು ಕಟ್ಟಾ ನಾಸ್ತಿಕರಾದರೂ, ನಾಸ್ತಿಕತೆ ಆಸ್ತಿಕತೆಗಿಂತ ಒಬ್ಬ ಹೇಗೆ ಉತ್ತಮ ರೀತಿಯಲ್ಲಿ ಬದುಕು ಕಟ್ಟಿಕೊಳ್ಳುತ್ತಾನೆ ಎಂಬುದು ಮುಖ್ಯ ಎನ್ನುತ್ತಿದ್ದವರು. ಇದರ ಪ್ರಭಾವ ಗಿರಿರಾಜರ ಈ ಸಿನೆಮಾದಲ್ಲಿ ಕಾಣಬಹುದು. ಹಾಗೆಯೇ ಮೂಕಜ್ಜಿಯ ಕನಸುಗಳು ಕಾದಂಬರಿ ಎಷ್ಟೇ ಪ್ರೋಗ್ರೆಸ್ಸಿವ್ ಆಗಿದ್ದರೂ, ಕೊನೆಗೆ ಸಲಿಂಗಕಾಮದ ವಿಷಯಕ್ಕೆ ಬಂದಾಗ ಕಾರಂತರ ಕಾದಂಬರಿ ಸಂಪ್ರದಾಯವನ್ನು ಮೀರುವುದಿಲ್ಲ. ಈ ಚಲನಚಿತ್ರದಲ್ಲೂ ಕೂಡ ಗಿರಿರಾಜರು ಕೂಡ ಈ ವಿಷಯದಲ್ಲಿ ಸಂಪ್ರದಾಯವನ್ನು ಮುರಿಯಲು ಹಿಂಜರಿದಿದ್ದಾರೆ. ಅರಣ್ಯಾಧಿಕಾರಿ ಭೀಮ್ ಕುಮಾರ್ ಮತ್ತು ಜಟ್ಟರ ನಡುವಿನ ಪ್ರೇಮವನ್ನು ಅವ್ಯಕ್ತವಾಗಿಯೇ ಉಳಿಸುತ್ತಾರೆ. ಅರಣ್ಯಾಧಿಕಾರಿಯ ಕುಟುಂಬವನ್ನು forcefully ಒಂದು ಮಾಡುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ