ನೆನ್ನೆ ಆಲ್ವಾಸ್ ನುಡಿಸಿರಿಯ ಪುಸ್ತಕ ಮೇಳದಲ್ಲಿ ಭಾಗವಹಿಸಲು ಹೊರಟಾಗ ಎಷ್ಟು ಉತ್ಸಾಹ ಇತ್ತೋ, ಅದರ ದುಪ್ಪಟ್ಟು ನಿರಾಸೆ ಇಂದು. ಹಿನ್ನಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿಬಿಡುತ್ತೇನೆ. ೨೦೦೦/- ರೂಗಳ ಡಿಡಿ ಯನ್ನು ಕಳುಹಿಸಿ ಆಲ್ವಾಸ್ ನುಡಿಸಿರಿಯ ಪುಸ್ತಕ ಮೇಳಕ್ಕೆ ಮಳಿಗೆಯನ್ನು ಕಾದಿರಿಸಿದ್ದೆ. ಇಂದಿನವರೆಗೂ ರಶೀದಿ ನನಗೆ ದೊರೆತಿಲ್ಲ. ಅದು ಅಷ್ಟು ಪ್ರಮುಖ ಅಲ್ಲ ಬಿಡಿ. ಇಲ್ಲಿಗೆ ಬರುವುದಕ್ಕೆ ಮೊದಲು ಯಾವಾಗ ಕರೆ ಮಾಡಿದರೂ ಒಂದು ಮಾತು ಆಡಿದ ಕ್ಷಣ ಕರೆಯನ್ನು ಸ್ಥಗಿತಗೊಳಿಸುತ್ತಿದ್ದರು.
ಹೀಗಿರುತ್ತಿತ್ತು ಸಂಭಾಷಣೆ,
ನಾನು: ಸಾರ್, ನಾನು ಆಕೃತಿಯಿಂದ ಕರೆ ಮಾಡುತ್ತಿದ್ದೇನೆ, ಡಿ.ಡಿ ಕಳುಹಿಸಿದ್ದೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ಕರೆ ಸ್ವೀಕರಿಸಿದವರು: ಸರಿ, ಅಂದು ಬನ್ನಿ.
ನಾನು: ಸಾರ್, ಅಲ್ಲಿನ ವ್ಯವಸ್ಥೆ ಏನು?
ಫೋನ್ ಕಟ್!
ಸರಿ ಇದಕ್ಕೆಲ್ಲಾ ಹೆಚ್ಚಿನ ಪ್ರಾಮುಖ್ಯತೆ ಕೊಡಬಾರದೆಂದು ನಾನು ಉತ್ಸಾಹದಿಂದ ನೆನ್ನೆ ಬಸ್ ಹತ್ತಿ, ಪುಸ್ತಕಗಳನ್ನು ಸುಗಮ ಟ್ರಾನ್ಸ್‌ಪೋರ್ಟ್ ನಲ್ಲಿ ಸಾಗಿಸಿ ಬಂದಿಳಿದೆ. ನಮ್ಮಲ್ಲಿ ೩೨ ಕಾರ್ಟನ್ ಬಾಕ್ಸನ ಪುಸ್ತಕಗಳು. ಎಲ್ಲವೂ ಸುಮಾರು ೪೦ ಕೆ ಜಿ ತೂಗುತ್ತವೆ ಎಂದು ಅಂದಾಜಿಸಬಹುದು.
ಇಂದು ಬೆಳಗ್ಗೆ ಅಲ್ಲಿಗೆ ಹೋದಾಗ ದೊಡ್ಡ ಶಾಕ್ ಕಾದಿತ್ತು.
೧) ಮಳಿಗೆಗಳನ್ನು ಅಲಾಟ್ ಮಾಡುವುದರಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಪುಸ್ತಕೋದ್ಯಮದಲ್ಲಿ ಹಿಂದಿನಿಂದ ಚಾಲ್ತಿಯಲ್ಲಿರುವ ಕೆಲವು ಪ್ರಮುಖ ಮಾರಾಟಗಾರರಿಗೆ ಮೊದಲು ೨ ನೇ ಮಹಡಿಯಲ್ಲಿ ಮಳಿಗೆ ಅಲಾಟ್ ಆಗಿ ನಂತರ ಕೆಳ ಮಹಡಿಗೆ ಸ್ಥಳಾಂತರಿಸಿರುವುದು ಮಳಿಗೆಗಳ ಕಾರ್ಯವನ್ನು ನಿರ್ವಹಿಸುತ್ತಿರುವ ಹರೀಶ್ ಎಂಬುವವರ ದಾಖಲೆಯೇ ತೋರಿಸಿತ್ತು! ನಮಗೂ ಕೆಳಗಿನ ಮಳಿಗೆಯ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಾಗ, ಅದು ಛೇರ್ಮನ್ ಅವರಿಂದ ಹೇಳಿಸಿದವರಿಗೆ ಮಾತ್ರ ಎಂಬ ಪ್ರಾಮಾಣಿಕ ಉತ್ತರ!
೨) ಹರೀಶ್ ಎಂಬುವವರಿಗೆ ಮತ್ತೆ ಮನವಿ ಮಾಡಿಕೊಂಡೆವು, ಸಾರ್ ನಮ್ಮಲ್ಲಿ ೩೨ ಕಾರ್ಟನ್ ಬಾಕ್ಸ್ ಗಳಿವೆ. ಎರಡನೇ ಮಹಡಿಗೆ ಕೊಂಡೊಯ್ಯಲು ಕಷ್ಟ. ಸಣ್ಣ ಸಣ್ಣ ಮಳಿಗೆಯವರಿಗೆ ಮೇಲೆ ಅಲಾಟ್ ಮಾಡಿ. ೨೦೦೦/ ರೂ ಪಾವತಿಸಿ ಪೂರ್ಣ ಕೋಣೆ ಕಾಯ್ದಿರಿಸಿದ್ದವರಿಗೆ ಕೆಳಗೆ ಕೊಡಿ ಎಂದು. (ಕೆಳಗಿನ ಕೆಲವು ಕೋಣೆಗಳಲ್ಲಿ ನಾಲ್ಕು ಪ್ರತ್ಯೇಕ ಪುಸ್ತಕ ಮಾರಾಟಗಾರರಿಗೆ ಒಂದೇ ಮಳಿಗೆಯಲ್ಲಿ ವ್ಯವಸ್ಥೆ ಮಾಡಿದ್ದಾರೆ). ಅದಕ್ಕೆ ಹರೀಶ್ ಅಂದದ್ದು. ನೀವೇನೂ ಚಿಂತಿಸಬೇಡಿ. ಲಿಫ್ಟ್ ಇದೆ. ನಿಮ್ಮ ಸಹಾಯಕ್ಕೆ ಕೆಲವು ಹುಡುಗರನ್ನೂ ಕಳುಹಿಸುತ್ತೇನೆ. ೨ ನೇ ಮಹಡಿಯ ನಿಮ್ಮ ಮಳಿಗೆಗೆ ಸಾಗಿಸುವುದಕ್ಕಾಗಲೀ, ಮತ್ತೆ ವಾಪಸ್ ಸಾಗಿಸುವುದಕ್ಕಾಗಲೀ ಯಾವುದೇ ತೊಂದರೆಯಿಲ್ಲ. ನೀವು ಅಲ್ಲಿ ಲಿಫ್ಟ್ ಸೆಕ್ಯುರಿಟಿಗೆ ೨೦/- ರೂ ಕೊಟ್ಟಿಬಿಡಿ ಎಂದರು. ಒಪ್ಪಿಕೊಂಡೆವು.
೩) ಸರಿ ಪುಸ್ತಕಗಳನ್ನು ಸುಗಮ ಟ್ರಾನ್ಸ್ ಪೋರ್ಟ್ ನಿಂದ ತರಲು ಹೋದಾಗ ಮತ್ತೊಂದು ದೊಡ್ಡ ಶಾಕ್ ಕಾದಿತ್ತು. ಅದರಲ್ಲಿ ನಾಲ್ಕು ಬಾಕ್ಸ್ ಗಳು ಒಡೆದು, ನೆನೆದು ಕೆಲ ಪುಸ್ತಕಗಳು ಹೊರಗೆ ಬಿದ್ದಿದ್ದವು. ಕೇಳಿದ್ದಕ್ಕೆ, ಪುಸ್ತಕದ ಡಬ್ಬಗಳು ಹಾಗೇ ಸಾರ್ ಅಂದ!
೪) ಪುಸ್ತಕಗಳನ್ನು ಸಾಗಿಸಿ ತಂದು, ಲಿಫ್ಟ್ ನಲ್ಲಿ ಹಾಕಲು ಹೋದಾಗ, ಸೆಕ್ಯುರಿಟಿ ನಿರಾಕರಿಸಿದ. ಕೊನೆಗೂ ಮನವೊಲಿಸಿ ಇನ್ನೇನು ಲಿಫ್ಟ್ ಮೇಲರಬೇಕು ಎನ್ನುವಷ್ಟರಲ್ಲಿ, ಎಲ್ಲಿಂದಲೋ ಶ್ರೀವತ್ಸನೋ, ಶ್ರೀವಾತ್ಸವನೋ ಎಂಬ ಹೆಸರಿನ ಮನುಶ್ಯ (ಇವರು ಆ ಕಟ್ಟಡದ ಮೇಲ್ವಿಚಾರಕರಂತೆ!) ಬಂದು ಇಲ್ಲಾ, ಸಾರ್ ಪುಸ್ತಕಗಳನ್ನು ಮೇಲೆ ಸಾಗಿಸುವುದಕ್ಕೆ ಲಿಫ್ಟ್ ಉಪಯೋಗಿಸುವ ಹಾಗಿಲ್ಲ ಎಂದ. ಕಳಕಳಿಯಿಂದ ಮನವಿ ಮಾಡಿ ನಮ್ಮ ತೊಂದರೆಯನ್ನು ಮನವರಿಗೆ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ, ಮಾತೇ ಆಡಲು ನಿರಾಕರಿಸಿ ನಡೆದೇಬಿಟ್ಟ.
೫) ಈಗ ಹರೀಶ್ ವರಿಗೆ ಕರೆ ಮಾಡಿ ಬೇಡಿಕೊಂಡರೆ, (ಇಷ್ಟರಲ್ಲಿ ಹರೀಶ್ ಅವರು ಮನೆಗೆ ಹೋಗಿಬಿಟ್ಟಿದ್ದರು) ಅವರಿಂದ ಒಂದೇ ವಾಕ್ಯದ ಉತ್ತರ. ನಿಮ್ಮ ೨೦೦೦/- ವಾಪಸ್ ಕೊಡ್ತೀವಿ, ನೀವು ವಾಪಸ್ ಹೋಗಿಬಿಡಿ! ಲಿಫ್ಟ್ ಆನ್ ಮಾಡೋ ಹಾಗಿಲ್ಲ ಎಂದು ಛೇರ್ಮನ್ ಹೇಳಿದ ಮೇಲೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ!
೬) ಕೊನೆಗೆ ಅಲ್ಲಿಯ ಇಬ್ಬರು ವಿದ್ಯಾರ್ಥಿಗಳ ಸಹಾಯದೊಂದಿಗೆ, ೩೨ ಬಾಕ್ಸ್ ಗಳನ್ನೂ ಮೇಲೆ ಸಾಗಿಸಿದ್ದಾಯಿತು!
ನನಗೆ ಕೊನೆಗೆ ಉಳಿದ ಪ್ರಶ್ನೆ ಒಂದೇ! ನಿಮ್ಮಲ್ಲಿ ಪಾರದರ್ಶಕತೆ ಇಲ್ಲ. ಎರಡನೇ ಮಹಡಿಯಲ್ಲಿ ಪುಸ್ತಕ ಮೇಳಕ್ಕೆ ಕೊಠಡಿ ಕೊಟ್ಟಿದ್ದೀರಿ! ಅಲ್ಲಿಗೆ ಪುಸ್ತಕಗಳ ಡಬ್ಬಗಳನ್ನು ಸಾಗಿಸಲು ಲಿಫ್ಟ್ ನ ಸೌಕರ್ಯವನ್ನು ನಿರಾಕರಿಸಿದ್ದೀರಿ! ಲಿಫ್ಟ್ ಬರೀ ಛೇರ್ಮನ್ ಸಾಹೇಬರಿಗೆ ಮಾತ್ರವೇ?