ಶುಕ್ರವಾರ, ಮಾರ್ಚ್ 06, 2009

ಮಿದ್ದಿಟ್ಟು

ಹಲವು ವರ್ಷಗಳ ಹಿಂದಿನ ಮಾತು. ಬಾಲ್ಯದ ನೆನಪುಗಳು. ನಾನು ಬೆಂಗಳೂರಿಗೆ ಪ್ರೌಢ ಶಿಕ್ಷಣಕ್ಕೆಂದು ಬಂದ ಹೊಸತು. ಊಟ ಆಯಿತೇ ಎಂದು ಕೇಳುವ ವಾಡಿಕೆಯನ್ನು ನಾನು ಬಹಳವಾಗಿ ಗೆಳೆಯರ ಮೇಲೆ ಪ್ರಯೋಗಿಸುತ್ತಿದ್ದೆ. ಈ ಪ್ರಶ್ನೆಗೆ ಸಮಯದ ಮಹತ್ವವಿವೆ ಎಂಬುದರ ಬಗ್ಗೆ ನನಗೆ ಅರಿವಿಲ್ಲ. ಒಂದು ದಿನ ನನ್ನಗೆ ಗೆಳಯನನ್ನು ಬೆಳಗ್ಗೆಯೇ ಊಟ ಆಯಿತೇ ಎಂದು ಕೇಳಿದ ಕ್ಷಣ, ಅವ ನಕ್ಕು ಬೆಳಗ್ಗೆ ತಿನ್ನುವುದು ತಿಂಡಿ, ಊಟವಲ್ಲ ಎಂಬ ಙ್ನಾನವನ್ನು ನನ್ನ ತಲೆಗೆ ತುಂಬಿದ. ಆದರೂ ಈ ವಿಷಯವನ್ನು ಕರಗತ ಮಾಡಿಕೊಳ್ಳಲು ಮತ್ತು ಈ ಪ್ರಶ್ನೆ ಕೇಳುವಾಗ ತಪ್ಪಾಗದಂತೆ ಎಚ್ಚರ ವಹಿಸಲು ಬಹಳ ಸಮಯ ಹಿಡಿಯಿತು. ನಾನು ನಮ್ಮ ಊರಿನಲ್ಲಿರಬೇಕಾದರೆ, ನಮಗೆ ತಿಂಡಿ ಊಟದ ವ್ಯತ್ಯಾಸವೇ ಗೊತ್ತಿರಲಿಲ್ಲ. ನಮ್ಮ ಬೆಳಗಿನ (ಉಪಹಾರ)ಊಟ ಮುದ್ದೆ, ಅನ್ನ ಸಾರು. ಮಧ್ಯಾಹ್ನ ಕೂಡ ಅದೆ. ಎಂದೋ ತಪ್ಪಿದರೆ ಅಪರಾಹ್ನ ರೊಟ್ಟಿಯಿರುತ್ತಿತ್ತು. ರಾತ್ರಿ ಕೂಡ ಅದೇ ಪಾಕಗಳು. ಇಂತಹ ವಾತಾವರಣದಲ್ಲಿ ನನಗೆ ಊಟ ಮತ್ತು ಬೆಳಗಿನ ಲಘು ಉಪಹಾರದ ವ್ಯತ್ಯಾಸ ಹೇಗೆ ತಿಳಿಯಬೇಕು? ಅದೇನೆ ಇರಲಿ ವಿಷಯಕ್ಕೆ ಬರುತ್ತೇನೆ.

ಇಂದು ನಾನು ಬರೆಯುವುದು ಒಂದು ಸರಳ ಮತ್ತು ವಿಶಿಷ್ಟ ಪಾಕದ ಬಗ್ಗೆ. ಇದನ್ನು ಸಾಮಾನ್ಯವಾಗಿ ರಾಗಿ ಬೆಳೆಯುವ ಪ್ರದೇಶದಲ್ಲಿ ತಯಾರಿಸುತ್ತಾರೆ ಎಂಬುದು ನನ್ನ ನಂಬಿಕೆ. ಈ ಪಾಕವನ್ನು ಸಾಮಾನ್ಯವಾಗಿ ಅಪರಾಹ್ನದ ಹೊತ್ತಿನಲ್ಲಿ, ಸಮಯದ ಅಭಾವವಿರುವಾಗ, ಅಡುಗೆ ಮಾಡಲು ಆಲಸ್ಯವಿರುವಾಗ ಅಥವಾ ಅಡುಗೆ ಮಾಡುವ ಶಕ್ತಿಗುಂದಿರುವಾಗ (ಅಂದರೆ ಮೈಯಲ್ಲಿ ಹುಷಾರಿಲ್ಲದೆ ಇರುವಾಗ) ಸಿದ್ಧಪಡಿಸುತ್ತಾರೆ. ಹೇಗೆ?

ಈ ಪಾಕಕ್ಕೆ ಪ್ರಾಥಮಿಕವಾಗಿ/ಮುಖ್ಯವಾಗಿ ಬೇಕಾಗಿರಿವುದು ತಂಗಳು ಹಿಟ್ಟು. ಇಲ್ಲಿ ಹಿಟ್ಟು ಅಂದರೆ ರಾಗಿ ಮುದ್ದೆ ಎಂದು ತಿಳಿಯಬೇಕು. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ರಾಗಿ ಮುದ್ದೆಯನ್ನು ಹಿಟ್ಟು ಅಥವಾ ಇಟ್ಟು ಎಂದೇ ಕರೆಯುವುದು.ಇಲ್ಲಿ ಗಮನದಲ್ಲಿಡಬೇಕಾದ ಅಂಶ ಎಂದರೆ ಹಿಟ್ಟು ತಂಗಳಾಗಿರಬೇಕು, ಬಿಸಿ ಮುದ್ದೆಯಿಂದ ಈ ಪಾಕವನ್ನು ಸಿದ್ಧಪಡಿಸಲಾಗುವುದಿಲ್ಲ! ಇನ್ನುಳಿದ ಪದಾರ್ಥಗಳು, ಹಸಿ ಮೆಣಸಿನ ಕಾಯಿ, ಕಲ್ಲುಪ್ಪು ಅಥವಾ ಪುಡಿ ಉಪ್ಪು, ಹಸಿ ಬೆಳ್ಳುಳ್ಳಿ. ಈ ಮೂರೂ ಪದಾರ್ಥಗಳನ್ನು ಒಟ್ಟಾಗಿ ಅರೆದುಕೊಳ್ಳಬೇಕು. ಒಳಕಲ್ಲು ಮತ್ತು ರುಬ್ಬಿನ ಗುಂಡಿ/ಕಲ್ಲಿನಿಂದ ಅರೆದರೆ ರುಚಿ ಹೆಚ್ಚಾಗುತ್ತದೆ. ನಂತರ ತಂಗಳಿಟ್ಟನ್ನು, ಅರೆದುಕೊಂಡ ಈ ಖಾರಕ್ಕೆ ಚೆನ್ನಾಗಿ ಮಿದ್ದಬೇಕು. ಅಷ್ಟೆ ಮಿದ್ದಿಟ್ಟು ಸಿದ್ಧ!

ಸಾಮಾನ್ಯವಾಗಿ ಮುದ್ದೆಯನ್ನು ಸಾರಿನಲ್ಲಿ ಅದ್ದಿ ಗುಳುಂ ಮಾಡುತ್ತೇವೆ. ಆದರೆ ಈ ಮಿದ್ದಿಟ್ಟನ್ನು ಅಗೆದು ತಿನ್ನುವುದರಿಂದ ಬಹಳ ವಿಶಿಷ್ಟ ಮತ್ತು ತುಂಬಾ ರುಚಿಕರವಾಗಿರುತ್ತದೆ. ನೆಂಚಿಗೆಕೆ ಈರುಳ್ಳಿಯಿದ್ದರಂತೂ ರುಚಿ ದ್ವಿಗುಣವಾಗುತ್ತದೆ. ನೀವು ಎಂದಾದರು ಇದನ್ನು ಸವಿದಿದ್ದೀರ? ನೀವು ರಾಗಿ ಮುದ್ದೆ, ಹುರಿಟ್ಟು (ಬೆಲ್ಲದ ಸಿಹಿ ತಿಂಡಿ), ರಾಗಿ ಉಪ್ಪಿಟ್ಟು ಮುಂತಾದುವುಗಳನ್ನು ತಿಂದು ಮೆಚ್ಚಿದ್ದರೆ ಇದನ್ನೂ ಒಮ್ಮೆ ಪ್ರಯತ್ನಿಸಿ.

7 ಕಾಮೆಂಟ್‌ಗಳು:

 1. ಇಲ್ಲಾ, ರಾಗಿ ಮುದ್ದೆ, ರಾಗಿ ಅಂಬ್ಲಿ ಮಾತ್ರ ಸವಿದದ್ದು ನಾನು ಇದುವರೆಗೂ, ಹೊಸ ಪಾಕ ಪರಿಚಯಕ್ಕೆ ವಂದನೆ.. ಬೆಳ್ಳುಳ್ಳಿಗೂ ನಂಗೂ ಸ್ವಲ್ಪ ದೂರ, ಇಲ್ಲಾಂದಿದ್ರೆ ಇವತ್ತೆ ಟ್ರೈ ಮಾಡ್ತಿದ್ದೆ :)

  ಪ್ರತ್ಯುತ್ತರಅಳಿಸಿ
 2. ಗುರುಗಳು ಪಾಕ ಪ್ರವೀಣರಾಗಲು ಹೊರಟ ಹಾಗಿದೆ :)

  ಪ್ರತ್ಯುತ್ತರಅಳಿಸಿ
 3. ಫಾಲ ರವರೆ,
  ಧನ್ಯವಾದಗಳು. ಹ ಹ, ಬಹಳಷ್ಟು ರೋಗ ರುಜಿನಗಳನ್ನು ದೂರ ಇಡಬಲ್ಲ ಬೆಳ್ಳುಳ್ಳಿಯಿಂದ ದೂರ ಉಳಿದುಬಿಟ್ಟಿದ್ದೀರ, ಸ್ವಲ್ಪ ರಾಜಿ ಮಾಡ್ಕೋಳ್ಳೋಕ್ಕೆ ಪ್ರಯತ್ನಿಸಿ. :) ಈ ರಾಗಿ ಅಂಬಲಿ ಒಂದು ಮಾತ್ರ ಯಾಕೋ ನಮ್ಮ ಮನೆಯಲ್ಲಿ ನಮಗೆ ಕುಡಿಸಿದ್ದಿಲ್ಲ, ರಾಗಿ ಅಂಬಲಿಯನ್ನು ನಮ್ಮ ಹಸುಗಳಿಗಷ್ಟೇ ಕುಡಿಸುತ್ತಿದ್ದ ನೆನಪು ನನಗೆ!

  ರವೀಶ, ಜಾಗತಿಕ ಆರ್ಥಿಕ ಹಿಂಜರಿತ, ಎಲ್ಲದ್ದಕ್ಕೂ ಸಿದ್ಧ ಇರಬೇಕೆಲ್ಲ, ಅದಕ್ಕೆ! :)

  ಪ್ರತ್ಯುತ್ತರಅಳಿಸಿ
 4. ನಮ್ಮನೇಲಿ ಮುದ್ದೆ ಉಳಿಯಲ್ಲ. ಎಣಿಸಿ ತಲೆಗೊಂದರಂತೆ ಮಾಡ್ತರೆ. ಈ ಬಾರಿ ನೀವು ಬರೆದಿರುವ ಹೊಸ ಅಡಿಗೆ ರುಚಿ ನೋಡಲಿಕ್ಕಾದರೂ extra ಮುದ್ದೆ ಮಾಡಲು ಹೇಳಬೇಕು.
  ಪ್ರಕಾಶ್ ಹೆಗಡೆ(http://ittigecement.blogspot.com/)
  ಮುದ್ದೆ ನುಂಗಲು ಬರಲ್ಲ ಅಂತಿದ್ದರು. ಅವರಿಗೆ ಹೇಳಿ ಮಾಡಿಸಿದಂತಿದೆ ನಿಮ್ಮ ಅಡಿಗೆ. ಅವರಿಗೂ ಒಂದ್ಮಾತು ಹೇಳಿ.

  ಪ್ರತ್ಯುತ್ತರಅಳಿಸಿ
 5. ಮಲ್ಲಿಕಾರ್ಜುನ ರವರೆ,
  ಒಮ್ಮೆ ಪಾಕವನ್ನು ಸವಿದು ನಿಮ್ಮ ಅಭಿಪ್ರಾಯವನ್ನು ಹೇಳಿ. ನನಗೂ ಇದು ಹೊಳೆದಿರಲಿಲ್ಲ. ನಾನು ಬಹಳಷ್ಟು ಜನರಿಗೆ ಮುದ್ದೆ ತಿನ್ನಿಸಲು ಪ್ರಯತ್ನಿಸಿ, ಅವರು ಮುದ್ದೆಯನ್ನು ಅಗೆಯುವುದನ್ನು ನೋಡಿ ಬೇಸರಗೊಂಡು, ಪ್ರಯತ್ನವನ್ನು ಕೈ ಬಿಟ್ಟಿದ್ದೆ. ಇಂತಹವರಿಗೆ ಇದು ಒಳ್ಳೆಯ ಪಾಕ. ಪ್ರಕಾಶ್ ಹೆಗಡೆಯವರಿಗೆ ಒಮ್ಮೆ ಪ್ರಯತ್ನಿಸಲು ಹೇಳಬೇಕು.

  ಪ್ರತ್ಯುತ್ತರಅಳಿಸಿ
 6. ಗುರುವೇ

  ನಿಮ್ಮ ಮಿದ್ದಿಟ್ಟು ರೆಸಿಪಿ...ನನಗೆ ಬಾಲ್ಯದ ನೆನಪನ್ನು ತರಿಸಿತು...ಸುಮಾರು ಎರಡು-ಮೂರನೇ ತರಗತಿ ಇರಬೇಕು...ಆಗ ನಮ್ಮ ಅಜ್ಜಿ ಇದ್ದರು...ಅವರು ನೀವು ಹೇಳಿದಂತೆ ಹೀಗೆ ಮಿದ್ದಿಟ್ಟು ಮಾಡಿ ಕೊಡುತ್ತಿದ್ದರು...ಅದರ ರುಚಿಯನ್ನು ಸವಿದವನೇ ಬಲ್ಲ...ನಮ್ಮ ಅಜ್ಜಿಯ ನಂತರ ನಮಗ್ಯಾರು ಮಿದ್ದಿಟ್ಟು ಮಾಡಿಕೊಡಲೇ..ಇಲ್ಲ!! ಆದರಿಂದಾಗಿ ಮರೆತೇ ಹೋಯಿತು...
  ಬರವಣಿಗೆ ಚೆನ್ನಾಗಿದೆ....ಥ್ಯಾಂಕ್ಸ್..

  ಪ್ರತ್ಯುತ್ತರಅಳಿಸಿ
 7. ಶಿವು,
  ನಾನು ಬರೆದ ಪಾಕದ ಬಗ್ಗೆ ತಿಳಿದವರಲ್ಲಿ (ನನ್ನ ಭ್ಲಾಗ್ ಓದುಗರಲ್ಲಿ) ನೀವೆ ಮೊದಲಿಗರು. ಬಹಳ ಸಂತೋಷವಾಯಿತು. ಹೌದು ನಮ್ಮ ಮನೆಯಲ್ಲೂ ಈಗ ಇದನ್ನು ಮಾಡುವುದಿಲ್ಲ. ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ