ಸೋಮವಾರ, ಅಕ್ಟೋಬರ್ 30, 2006

ಸುವರ್ಣ ಕನ್ನಡ ರಾಜ್ಯೋತ್ಸವ.. ಕನ್ನಡ ಕವಿಗಳಿಗೆ ನಮನ-೨

ಸುವರ್ಣ ಕನ್ನಡ ರಾಜ್ಯೋತ್ಸವ.. ಕನ್ನಡ ಕವಿಗಳಿಗೆ ನಮನ-೨
ದಿವಂಗತ, ಶ್ರೀಮಾನ್ ಜೆ ಪಿ ರಾಜರತ್ನಂ...
ಈ ಮಹಾನ್ ಕವಿ ಕನ್ನಡ ಜನತೆಗೆ ತಮ್ಮ ನಾಯಿ ಮರಿ ಕವನದಿಂದ ಚಿರ ಪರಿಚಿತ.. ಇವರ ಶಿಶು ಗೀತೆಗಳು ಬಹಳ ಪ್ರಸಿದ್ಧ.. ಉದಾಹರಣೆಗೆ ಬಣ್ಣದ ತಗಡಿನ ತುತ್ತೂರಿ, ನಮ್ಮ ಮನೆಯಲೊಂದು ಸಣ್ಣ ಪಾಪನಿರುವುದು, ರೊಟ್ಟಿ ಅಂಗಡಿ ಕಿಟ್ಟಪ್ಪ.. ನೀವು ಇವುಗಳನ್ನು ಮರೆತಿದ್ದರೆ ದಯವಿಟ್ಟು ಒಂದು ಈ ಶಿಶುಗೀತೆಗಳ ಪುಸ್ತಕವನ್ನು ಕೊಂಡು ಓದಿ.. ಮುಂದೆ ನಿಮ್ಮ ಮಕ್ಕಳಿಗೆ ಕಲಿಸಬಹುದು!!!

ಇವರು ಶಿಶು ಗೀತೆಗಳನ್ನು ಬರೆಯಲು ಸಿಕ್ಕ ಪ್ರೇರಣೆ ಒಂದು ಕುತೂಹಲಕಾರಿ ಕಥೆ. ರಾಜರತ್ನಂ ರವರು ಕನ್ನಡದಲ್ಲಿ ಎಮ್ ಎ (ಆಗಿನ ಕಾಲದಲ್ಲಿ ಕನ್ನಡ ಎಮ್ ಎ ಪದವಿ ಪಡೆಯುವವರ ಸಂಖ್ಯೆ ಬೆರಳಷ್ಟು) ಪದವಿ ಪಡೆದಿದ್ದರೂ ಕೆಲಸವಿಲ್ಲದೆ ಮನೆಯಲ್ಲಿ ಇದ್ದಾಗ, ತಂದೆಯ ಅನಾರೋಗ್ಯದ ಕಾರಣದಿಂದ ಪ್ರಾಥಮಿಕ ಶಾಲೆಯಲ್ಲಿ (೨ ನೆಯ ತರಗತಿಗೆ) ಬದಲಿ ಶಿಕ್ಷಕರಾಗಿ ನೇಮಕಗೊಂಡರಂತೆ... ಎನೂ ಪೂರ್ವೋತ್ತರ ಅಭ್ಯಾಸ ಇಲ್ಲದೆ ಪಾಠ ಮಾಡಲು ತರಗತಿಗೆ ಬಂದಾಗ ೨ ನೆ ತರಗತಿಯ ಪಠ್ಯ ದಲ್ಲಿರುವ ಕ್ಲಿಷ್ಟತೆ (ಗದ್ಯ ಮತ್ತೆ ಪದ್ಯ ಎರಡರಲ್ಲೂ...ರಾಜರತ್ನಂ ರವರಿಗೆ ಅಲ್ಲ.. ೨ ನೆ ತರಗತಿಯ ಮಕ್ಕಳಿಗೆ) ಅರ್ಥವಾಗಿ ತಾವೆ ಶಿಶು ಸಾಹಿತ್ಯಕ್ಕೆ ಕೈ ಹಾಕಿದರಂತೆ....

ಇನ್ನು ಇವರ ಅತ್ಯುತ್ತಮ ಕವನ ಸಂಕಲನಗಲೆಂದರೆ ರತ್ನನ ಪದಗಳು ಮತ್ತು ನಾಗನ ಪದಗಳು.. ಇವು ಕನ್ನಡದ ಅತ್ಯಂತ ಉತ್ತಮ ಕವನಗಳ ಸಾಲಿನಲ್ಲಿ ಸೇರಬೇಕಾದಂತವು.. ಇವುಗಳಲ್ಲಿ ಸಾಮಾನ್ಯ ಜನರ ಬದುಕಿನ ನೋವು ನಲಿವುಗಳನ್ನು ಚಿತ್ರಿಸಿ, ಕಷ್ಟಗಳನ್ನು ಹೇಗೆ ಮರೆಯೋದು, ನೆಮ್ಮದಿ ಬಾಳ್ವೆ ನಡೆಸೋದು ಹೇಗೆ ಎಂಬುದರ ಬಗ್ಗೆ ಸರಳ ಕುಡುಕನ ಮಾತುಗಳಲ್ಲಿ ರಚಿತವಾಗಿವೆ...

ಕೆಲವು ಪದ್ಯಗಳನ್ನು ನೆನೆಯೋಣವೆ??

ನಾಯಿಮರಿ ನಾಯಿಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು..

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ?
ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು

ಈಗ ತುರ್ತು ಕೆಲಸದಿಂದ ಉಳಿದ ಕವನಗಳನ್ನು ನಾಳೆ ಬರೆದು ಕಳಿಸುತ್ತೇನೆ...

ರಾಜರತ್ನಂ ಪದ್ಯಗಳನ್ನು ಮುಂದುವರೆಸಿ

ಕನ್ನಡ ಪದಗೊಳ್

ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ
ತಕ್ಕೊ! ಪದಗೊಳ್ ಬಾಣ!

ಬಗವಂತ ಏನ್ರ ಬೂಮೀಗ್ ಇಳಿದು
ನನ್ ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು
ಬಕ್ತನ್ ಮೇಲ್ ಔನ್ ಕಣ್ಣು!

ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!
ಅಂತ ಔನ್ ಎನಾರ್ ಅಂದ್ರೆ
ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ
ದೇವರ್ ಮಾತ್ಗ್ ಅಡ್ಬಂದ್ರೆ!

ಯೆಂಡ ಬುಟ್ಟೆ ಯೆಡ್ತೀನ್ ಬುಟ್ ಬುಡ್!
ಅಂತ ಔನ್ ಎನಾರ್ ಅಂದ್ರೆ
ಕಳ್ದೋಯ್ತ್ ಅಂತ ಕುಣದಾಡ್ತೀನಿ
ದೊಡ್ದ್ ಒಂದ್ ಕಾಟ! ತೊಂದ್ರೆ!

ಕನ್ನಡ್ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ
ಅಂತ ಔನ್ ಅಂದ್ರೆ- ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ- ಎಲ್ಲ!
ಕನ್ನಡ್ ಸುದ್ದೀಗ್ ಎನ್ರ ಬಂದ್ರೆ
ಮಾನ ಉಳಸಾಕಿಲ್ಲ!

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ್ ಪದವಾಡ್ತೀನಿ
ನನ ಮನಸನ್ನ್ ನೀ ಕಾಣೆ

ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ
ಕನ್ನದ್ ಪದಗೊಳ್ ನುಗ್ಲಿ!

ರತ್ನನ್ ಪರ್ಪಂಚ


ಯೇಳ್ಕೊಳ್ಳಾಕ್ ಒಂದ್ ಊರು
ತಲೇಮೇಗ್ ಒಂದ್ ಸೂರು
ಮಲಗಾಕೆ ಭೂಮ್ತಾಯಿ ಮಂಚ
ಕೈ ಯಿಡದೋಳ್ ಪುಟ್ನಂಜಿ
ನೆಗನೆಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ

ಅಗಲೆಲ್ಲ ಬೆವರ್ ಅರ್ಸಿ
ತಂದಿದ್ರಲ್ ಒಸಿ ಮುರ್ಸಿ
ಸಂಜೇಲಿ ವುಳಿ ಯೆಂಡ ಕೊಂಚ
ಯೀರ್‍ತ ಮೈ ಝುಂ ಅಂದ್ರೆ
ವಾಸ್ನೆ ಘಂ ಘಂ ಅಂದ್ರೆ
ತುಂಭೋಯ್ತು ರತ್ನನ್ ಪ್ರಪಂಚ

ಎನೋ ಕುಸಿಯಾದಾಗ
ಮತ್ತ್ ಎಚ್ಚಿ ಓದಾಗ
ಅಂಗೇನೆ ಪರ್ಪಂಚದ್ ಅಂಚ
ದಾಟ್ಕಂಡಿ ಆರಾಡ್ತಾ
ಕನ್ನಡದಲ್ ಪದವಾಡ್ತ
ಇಗ್ಗೋದು ರ್‍ಅತ್ನನ್ ಪರ್ಪಂಚ

ದುಕ್ಕಿಲ್ಲ ದಾಲಿಲ್ಲ
ನಮಗ್ ಅದರಾಗ್ ಪಾಲಿಲ್ಲ..
ನಾವ್ ಕಂಡಿಲ್ಲ ಆ ತಂಚ ವಂಚ
ನಮ್ಮಸ್ಟಕ್ ನಾವಾಗಿ
ಇದ್ದಿದ್ರಲ್ ಆಯಾಗಿ
ಬಾಳೋದು ರತ್ನನ್ ಪರ್ಪಂಚ

ಬಡತನ ಗಿಡತನ
ಎನಿದ್ರೆನು? ನಡತೇನ
ಚೆಂದಾಗ್ ಇಟ್ಕೊಳ್ಳದೆ ಅಚ್ಛ
ಅಂದ್ಕೊಂಡಿ ಸುಖವಾಗಿ
ಕಸ್ಟಕ್ ನೆಗಮೊಕವಾಗಿ
ನೆಗೆಯೋದೆ ರತ್ನನ್ ಪರ್ಪಂಚ

ದೇವ್ರ್ ಏನ್ರ ಕೊಡಲಣ್ಣ
ಕೊಡದಿದ್ರೆ ಬುಡಲಣ್ಣ
ನಾವೆಲ್ಲ ಔನೀಗೆ ಬಚ್ಛ
ಔನ್ ಆಕಿದ್ ತಾಳ್ದಂಗೆ
ಕಣ್ ಮುಚ್ಕೊಂಡ್ ಯೇಳ್ದಂಗೆ
ಕುಣಿಯಾದೆ ರ್‍ಅತ್ನನ್ ಪರ್ಪಂಚ


ಜೈ ಭುವನೇಶ್ವರಿ...

"ಕನ್ನದದಲ್ಲಿಯೆ ಬಿನ್ನಹಗೈದೊಡೆ ಹರಿ ವರಗಳ ಮಳೆ ಕರೆಯುವನು" --- ಕುವೆಂಪು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ