ಬುಧವಾರ, ನವೆಂಬರ್ 19, 2008

ಶ್ರೇಷ್ಠ ಹನುಮಂತನಾಗಿದ್ದು!
ಪಠ್ಯ ಪುಸ್ತಕ ಓದು, ಓದು, ಓದು ಇಷ್ಟೇ ನನಗೆ ಗೊತ್ತಿದ್ದು ನಾನು ನನ್ನ ಪದವಿ ಪೂರ್ವ ಶಿಕ್ಷಣ ಮುಗಿಸುವವರೆಗು (ಜೀವನದ ೧೭ ವರ್ಷಗಳು)! ತಾಂತ್ರಿಕ / ವೃತ್ತಿಪರ ಶಿಕ್ಷಣಕ್ಕೆ ಬಂದ ಮೇಲೆಯೇ ನಾನು ವ್ಯಯಕ್ತಿಕವಾಗಿ ಪ್ರಬುದ್ಧವಾಗಿದ್ದು ಎನ್ನಬಹುದು. ಪ್ರಬುದ್ಧ ಎಂದರೆ, ಜೀವನದಲ್ಲಿ ಪಠ್ಯ ಪುಸ್ತಕ ಓದಿ ಅಂಕ ಗಳಿಸುವುದೊಂದೇ ಅಲ್ಲಾ, ಆಟ ಆಡಿ, ಪಠ್ಯವಲ್ಲದ ಪುಸ್ತಕಗಳನ್ನು ಓದಿ, ಚಲನ ಚಿತ್ರಗಳನ್ನು ನೋಡಿ, ವಿಭಿನ್ನ ಪ್ರಕಾರಗಳ ಸಂಗೀತಗಳನ್ನು ಆಲಿಸಿ, ಇತರೆ ಗೆಳೆಯರು/ಜನರೊಂದಿಗೆ ಬೆರೆತು, ಕಲಿಯುವುದು ಬೇಕಾದಷ್ಟಿದೆ ಎಂದು ಗೊತ್ತಾದದ್ದು. ಇವನ್ನೇ ಇಂದಿನ ದಿನಗಳಲ್ಲಿ ಶಿಶುವಿಹಾರದಿಂದಲೇ ಪಠ್ಯೇತರ ಚಟುವಟಿಕೆ(ಅಲ್ಲಾ.. ಈಗ ಎಷ್ಟೋ ಶಾಲೆಗಳಲ್ಲಿ ಪಠ್ಯ) ಎಂದು ಕರೆದು, ಮಕ್ಕಳನ್ನು ಉತ್ತೇಜಿಸುತ್ತಾರೆ. ಹೀಗೆ ನಮ್ಮ ಜೀವನದಲ್ಲಿ ನಾವು ಮಾಡಿಲ್ಲದ್ದನ್ನು (ಕಳೆದುಕೊಂಡಿರುವುದು ಎಂದರೆ ಇನ್ನೂ ಸೂಕ್ತ) ನಮ್ಮ ಮಕ್ಕಳು (ನಮ್ಮ ಮನೆಯಲ್ಲಿರುವ ಮಕ್ಕಳು) ಮಾಡಿದರೆ, ಮಕ್ಕಳಲ್ಲಿ ಈ ಚಟುವಟಿಕೆಗಳನ್ನು ಕಂಡು ಧನ್ಯವಾಗುವುದಿಲ್ಲವೇ?

ನನ್ನ ಸೋದರ ಅಳಿಯ ಶ್ರೇಷ್ಠನಿಗೆ, ಅವನು ಎಲ್. ಕೆ . ಜಿ ಯಲ್ಲಿ ಓದುತ್ತಿರುವ ವೆಂಕಟ್ ಶಾಲೆಯಲ್ಲಿ ಆಲಂಕಾರಿಕ ಉಡುಗೆ/ವೇಷ (fancy dress) ಕಾರ್ಯಕ್ರವಿದೆ ಎಂದು ಸುತ್ತೋಲೆ ಕಳಿಸಿದ್ದರು. (ವಸ್ತು: ಯಾವುದಾದರೂ ಪೌರಾಣಿಕ ಪಾತ್ರ). ಇತ್ತೀಚೆಗೆ "ಬಾಲ್ ಹನುಮಾನ್" ಎಂಬ ವ್ಯಂಗ್ಯ ಚಲನಚಿತ್ರ ಚಿತ್ರವನ್ನು (Animated/cartoon cinema, ಅನುವಾದ ಸರಿ ಎನ್ನಿಸಲಿಲ್ಲವೆ? ದಯವಿಟ್ಟು ಬೇರೆ ಪದ ಸೂಚಿಸಿ)ನೋಡಿ, ದಿನಾಲು "ಜೋಯ್ ಹನುಮೋನ್" "ಭೋಲೋ ಭೊಜರಂಗ್ ಬೊಲೀ ಕೀ ಜೋಯ್" "ಪ್ರಿಯ ಹನುಮೋನ್" "ಪುತ್ತರ್ ಹನುಮೋನ್" ಇತ್ಯಾದಿ ಘೋಷಣೆಗಳನ್ನು ಗಂಟೆಗೆ ೧೦ ಬಾರಿಯಾದರೂ ಶ್ರೇಷ್ಠನಿಂದ ಕೂಗಿಸಿಕೊಂಡಿದ್ದ ನಮಗೆ ಮೊದಲು ಹೊಳೆದದ್ದೇ "ಮಾರುತಿ". ಅವನ ಮನಸ್ಸಿನಲ್ಲಿ ಮೊದಲು ಕೃಷ್ಣನಿದ್ದರೂ ಸ್ವಲ್ಪ ಪುಸಲಾಯಿಸಿ ಮಾರುತಿ ವೇಷಕ್ಕೆ ಒಪ್ಪಿಸಿದ್ದಾಯಿತು.

ಕಾರ್ಯಕ್ರಮದ ದಿನ ಶ್ರೇಷ್ಠನಿಗೆ ಖುಷಿಯೋ ಖುಷಿ. ಶ್ರೇಷ್ಠ ಹನುಮಂತನಾದದ್ದಾಯಿತು. ಅಲ್ಲಿ ಅವನ ಇನ್ನಿಬ್ಬರು ಗೆಳತಿಯರು ಶಕುಂತಲಾ ಮತ್ತು ಸರಸ್ವತಿ ವೇಷವನ್ನು ತೊಟ್ಟು ಮುದ್ದಾಗಿ ಕಾಣಿಸುತ್ತಿದ್ದರು. ವೇಷದ ಅಂಗಡಿಯಿಂದ ಶಾಲೆಯವರೆಗಿನ ಪ್ರಯಾಣದಲ್ಲಿ, ಜನರು ಶ್ರೇಷ್ಠನ ಅವತಾರ ನೋಡಿ ಆಶ್ಚರ್ಯ ಭರಿತ ಸಂತೋಷ ಪಡುತ್ತಿದ್ದರು.ಇನ್ನು ಶಾಲೆಯಲ್ಲಿ ಆ ಸಂಭ್ರಮವನ್ನು ನೋಡಿಯೇ ಸವಿಯಬೇಕು.ಮಕ್ಕಳನ್ನು ನೋಡುವುದೇ ಚಂದ. ಇನ್ನು ಈ ವಿಶಿಷ್ಟ ವೇಷ-ಭೂಷಣಗಳನ್ನು ತೊಟ್ಟ ಮಕ್ಕಳನ್ನು ನೋಡುವುದಂತೂ ಕಣ್ಣಿಗೆ ಸುಗ್ಗಿ.ಒಂದೊಂದು ಮಗುವೂ ಮುದ್ದು ಮುದ್ದಾದ ಉಡುಗೆ ತೊಟ್ಟು ಸಂತೋಷದಿಂದ ನಲಿದಾಡುತ್ತಿದ್ದವು.(ಈಶ್ವರ, ದುರ್ಗಾ ದೇವಿ, ಶ್ರೀಕೃಷ್ಣ, ರಾಮ ಇತ್ಯಾದಿ). ಕಾರ್ಯಕ್ರಮ ಶಾಲೆ/ತರಗತಿಗೆ ಮಾತ್ರ ಸೀಮಿತವಾದದ್ದರಿಂದ, ಶಾಲೆಯ ಸಿಬ್ಬಂದಿ ಪೋಷಕರನ್ನು ಹೊರದಬ್ಬಿ ನಿರಾಸೆ ಉಂಟು ಮಾಡಿದರು.ಒಟ್ಟಿನಲ್ಲಿ ಅಂದಿನ ಮುಂಜಾನೆ ನಿತ್ಯ ಬದುಕಿನಿಂದ ಒಂದು ವಿರಾಮ ಕೊಟ್ಟು ಅತೀವ ಆನಂದ ನೀಡಿತ್ತು.ಸಂಜೆ ಮನೆಗೆ ಬಂದ ಶ್ರೇಷ್ಠನ ಮಾತುಗಳಿವು, "ಇವೊತ್ತು ಸೂಪರ್ ಮಜಾ ಇತ್ತಪ್ಪಾ... ಎಲ್ಲಾ ನನ್ನ ಬಾಲ ನೋಡಿ ನಕ್ತಾನೆ ಇದ್ರು.. ನಮ್ಮ ಮಿಸ್ಸೂ ನಕ್ಕಿದ್ರು". ಅಂದು ಅವನಿಗೆ ಶಾಲೆಯಲ್ಲಿ ಓದು, ಬರೆಯುವುದು ಇಲ್ಲದೆ ಇದ್ದದ್ದು ಖುಷಿಯನ್ನು ಇಮ್ಮಡಿಗೊಳಿಸಿತ್ತು.ಅವನ ಆತ್ಮೀಯ ಗೆಳೆಯ ಪ್ರಥಮ್ ರಾಮನ ವೇಷ ಹಾಕಿದ್ದನಂತೆ.

ವೇಷವನ್ನು ಹಿಂದಿರುಗಿಸಲು ಹೋಗುವಾಗ ಕೂಡ, ದಾರಿಯುದ್ದಕ್ಕೂ ಗಧೆಯನ್ನು ತನ್ನ ಹೆಗಲ ಮೇಲಿಟ್ಟು ಮೆರೆದಿದ್ದೇ! ದಾರಿಹೋಕರೆಲ್ಲಾ ಗಧೆ ಹೊತ್ತು ನೆಗೆದು ಕುಣಿಯುತ್ತಿದ್ದ ಆಂಜನೇಯನನ್ನು (ಈ ಹೊತ್ತಿಗೆ ವೇಷ ಕಳಚಿತ್ತು) ನೋಡಿ ನಗುತ್ತಿದ್ದರು.

ನಮ್ಮ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆದದ್ದು ನನಗೆ ನೆನಪಿಲ್ಲ, ನಾನು ಶಾಲೆಯಿಂದ ಖುಷಿಯಾಗಿ ಮನೆಗೆ ಬಂದು ಇವೊತ್ತು ಶಾಲೆ ಬಹಳ ಮಜವಾಗಿತ್ತು ಎಂದು ಮನೆಯಲ್ಲಿ ಹೇಳಿದ ಪ್ರಸಂಗಗಳಂತೂ ಇಲ್ಲವೇ ಇಲ್ಲಾ!

ಮಕ್ಕಳು ಸ್ವಚ್ಚಂದವಾಗಿ ಕುಣಿಯುವದನ್ನು ನೋಡಿದಾಗ ಆಗುವ ಖುಷಿಗೆ ಬೇರೆ ಯಾವುದಾದರು ಸಾಟಿಯುಂಟೆ?

2 ಕಾಮೆಂಟ್‌ಗಳು: