ಭಾನುವಾರ, ನವೆಂಬರ್ 23, 2008

ಸ್ಲಂಬಾಲ,

’ರಾಜಕಾರಣಿಗಳ, ಪೋಲೀಸರ, ಭೂಗತ ಲೋಕದ ರೌಡಿಗಳ’ ವಿಕೃತ ಮನಸ್ಸುಗಳ ಉತ್ತಮ ಚಿತ್ರಣ!

ಅಗ್ನಿ ಶ್ರೀಧರ್ ರವರ ’ದಾದಾಗಿರಿಯ ದಿನಗಳು’ ಪುಸ್ತಕ ಆಧಾರಿತ,ಈ ಚಲನಚಿತ್ರದ ಅತಿ ದೊಡ್ಡ ಆಕರ್ಷಣೆ/ಧನಾತ್ಮಕ ಅಂಶ "ನಟನೆ"! ಮತ್ತು ನಟನೆಯೇ ಚಲನ ಚಿತ್ರದ ಜೀವಾಳ.ಒಬ್ಬೊಬ್ಬರೂ ಇನ್ನೊಬ್ಬರ ಜೊತೆಗೆ ಜಿದ್ದಿಗೆ ಬಿದ್ದಿರುವಂತೆ ನಟಿಸಿದ್ದಾರೆ! ದುನಿಯ ವಿಜಯ್ ಸ್ಲಂಬಾಲನ, ಸತ್ಯ? ಸ್ಲಂಬಾಲ ಗೆಳೆಯನಾಗಿ(ರಜ್ಜು),ಶುಭ ಪೂಂಜ ಸ್ಲಂಬಾಲನ ಪ್ರೇಯಸಿಯ(ಮಲ್ಲಿಗೆ), ಉಮಾಶ್ರೀ ಸ್ಲಂಬಾಲನ ಸಾಕು ಅವ್ವನ(ಪಾರ್ವತವ್ವ), ಶಶಿಕುಮಾರ್ ಹಿರಿಯ ಪೋಲೀಸ್ ಅಧಿಕಾರಿಯ(ಶಾಂತಾರಾಮ್), ಬ ಲ ಸುರೇಶ್ ರಾಜಕಾರಣಿಯ(ಪ್ರಸಾದಿ), ಅಚ್ಯುತರಾವ್ ಪ್ರಸಾದಿಯ ಆಪ್ತ ಕಾರ್ಯದರ್ಶಿಯ/ಬಲಗೈಯಾಗಿ (ಪ್ರೀತಿ ಇಲ್ಲದ ಮೇಲೆ ಧಾರಾವಾಹಿ ನೆನಪಿದೆಯಲ್ಲವೆ? ಅನಂತ್ ನಾಗ್ ರವರ ದೊಡ್ಡ ಮಗನಾಗಿ ಅದ್ಭುಟ ನಟನೆ ಕೊಟ್ಟಿದ್ದರಲ್ಲಾ ರಂಗಣ್ಣ) ಪಾತ್ರಗಳನ್ನು ಅಚ್ಚುಕಟ್ಟಾಗಿ, ಅತ್ಯುತ್ತಮವಾಗಿ ನಟಿಸಿದ್ದಾರೆ.

ಕಥೆ ಹೀಗೆ ಸಾಗುತ್ತದೆ, ಸ್ಲಂಬಾಲ ಬೆಳೆಯುತ್ತಿರುವ ರೌಡಿ. ಚುನಾವಣಾ ಸಮಯದಲ್ಲಿ ಶಾಂತಿ ಸ್ಥಾಪನೆಗಾಗಿ ಚಿಗುರುತ್ತಿರುವ ರೌಡಿಗಳೆಲ್ಲಾ ಗಡಿಪಾರಾಗುತ್ತಾರೆ! ಹೀಗೆ ಗಡಿಪಾರಾದ ಸ್ಲಂಬಾಲ ಮುಂಬೈ ಸೇರುತ್ತಾನೆ. ಬಾರೊಂದರಲ್ಲಿ ಕೆಲಸಕ್ಕೆ ಸೇರುತ್ತಾನೆ. ಅಲ್ಲಿ ನಾಯಕಿಯ(ಮಲ್ಲಿಗೆ) ಭೇಟಿ. ಇತ್ತ ಬೆಂಗಳೂರಿನಲ್ಲಿ ಪ್ರಸಾದಿ, ಶಾಂತು ಮತ್ತು ಅಚ್ಯುತ ರಾವ್ (ಮರೆತು ಹೋಗಿದೆ: ಚಲನ ಚಿತ್ರದಲ್ಲಿ ಇವರ ಹೆಸರೇನು?) , ರಾಜಕೀಯ ವೈರಿ ಕೇಬಲ್ ಮಂಜನನ್ನು ಮುಗಿಸಲು ನಕ್ಷೆ ತಯಾರಿಸಿ ಒಮ್ಮೆ ವಿಫಲರಾಗುತ್ತಾರೆ. ಇನ್ ಸ್ಪೆಕ್ಟರ್ ಶಾಂತು ಸಲಹೆ ಮೇರೆಗೆ ಸ್ಲಂಬಾಲನಿಗೆ ಈ ಕೆಲಸಕ್ಕೆ ಬೆಂಗಳೂರಿಗೆ ಬರಲು ಕರೆ ಬರುತ್ತದೆ. ಜೊತೆಯಲ್ಲಿ ಮಲ್ಲಿಗೆ ಮತ್ತು ರಜ್ಜು ಕೂಡ ಬರುತ್ತಾರೆ. ಮುಂದೆ ಕೇಬಲ್ ಮಂಜನಿಗೆ ಏನು ಗತಿಯಾಗುತ್ತದೆ, ಕೇಬಲ್ ವ್ಯವಹಾರ ಸ್ಲಂಬಾಲನಿಗೆ ಸಿಗುತ್ತದೆಯೆ? ಸ್ಲಂಬಾಲನ ಗಡಿಪಾರು ಏನಾಗುತ್ತದೆ? ರಾಜಕಾರಣ/ರಾಜಕಾರಣಿಗಳು ಸ್ಲಂಬಾಲನನ್ನು ಹೇಗೆ ಬಳಸಿಕೊಳ್ಳುತ್ತದೆ? ಕೊನೆಗೆ ವ್ಯವಸ್ಥೆಯಲ್ಲಿ ಸ್ಲಂಬಾಲನ ಗತಿ ಏನಾಗುತ್ತದೆ ಎಂಬುದು ಕಥೆಯ ಕೊನೆ! ಕಥೆಯಲ್ಲಿ ಅಸಾಮಾನ್ಯವಾದುದು ಏನೂ ಇಲ್ಲದೆ ಇದ್ದರೂ ನಿರೂಪಣೆ ಅಚ್ಚುಕಟ್ಟಾಗಿ ಮೂಡಿ ಬಂದಿದೆ.ನಿರ್ದೇಶಕಿ ಸುಮನ ಕಿತ್ತೂರು ಚೊಚ್ಚಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ.ವಿಜಯ್ ಭೂಗತ ರೌಡಿಗಳ ಮನೋವಿಕೃತಿಯನ್ನು ಅದ್ಭುತವಾಗಿ ನಟಿಸಿ ತೋರಿಸಿದ್ದಾರೆ.ಕಥೆಗೆ ಪೂರಕವಲ್ಲದ ಪ್ರೀತಿ ಪ್ರೇಮದ ಸಲ್ಲಾಪಗಳನ್ನು ಮೊಟಕು ಗೊಳಿಸಿ ಬೇಕಷ್ಟೇ ತೋರಿಸುವ ಜಾಣ್ಮೆಯನ್ನು ನಿರ್ದೇಶಕಿ ತೋರಿದ್ದಾರೆ.

ಕಥೆಗೆ ಹೊಂದುವಂತ ಸಂಭಾಷಣೆ ಕೂಡ ಗಮನ ಸೆಳೆಯುತ್ತದೆ. "ಎಲಾ ನನ್ ಬ್ಯಾವರ್ಸಿ" ಎಂದು ಪಾರ್ವತವ್ವ, ಸ್ಲಂಬಾಲನಿಗೆ ಉದ್ಗರಿಸುವುದರೊಂದಿಗೆ ಸ್ಲಂಬಾಲನ ಪರಿಚಯವಾಗಿತ್ತದೆ.ಈ ರೀತಿಯ ಸಂಭಾಷಣೆ ಜನರಿಗೆ ಅಭಾಸವಾಗದಂತೆ ಎಚ್ಚರ ವಹಿಸಲಾಗಿದೆ. ಇದಕ್ಕೆ ನೈಜ್ಯ ನಟನೆ ಪೂರಕವಾಗಿದೆ ಎನ್ನಬಹುದು. ಅದರಲ್ಲೂ ಉಮಾಶ್ರೀ ತಮ್ಮ ಸಮಯೋಚಿತ dialogue delivery (ಇದಕ್ಕೆ ಸಮೀಪದ ಕನ್ನಡ ಅನುವಾದ ಸೂಚಿಸಿ) ಮತ್ತು ನಟನೆಯಿಂದ ಇಷ್ಟವಾಗುತ್ತಾರೆ.

ಚಿತ್ರದಲ್ಲಿ ಬರುವ ಎರಡು ಹಾಡುಗಳು ಪರವಾಗಿಲ್ಲ, ತೊಂದರೆ ಇಲ್ಲ ಎನ್ನಬಹುದು. ಅರ್ಜುನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.ಛಾಯಾಗ್ರಹಣ ಅಚ್ಚುಕಟ್ಟಾಗಿದೆ.

ಒಂದು ಋಣಾತ್ಮಕ ಅಂಶವೆಂದರೆ ದ್ವಿತೀಯಾರ್ಧದಲ್ಲಿ ಚಲನಚಿತ್ರ ತನ್ನ ವೇಗವನ್ನು ಕಳೆದುಕೊಂಡು, ಸ್ವಲ್ಪ ಕುಂಟುತ್ತಾ ಸಾಗುತ್ತದೆ.

ಚಿತ್ರ ನೋಡಿದ ಮೇಲೆ , ನನ್ನಲ್ಲಿ ಮೂಡಿದ ಪ್ರಶ್ನೆ ಇದು! ಜನರು ಮನರಂಜನೆಗಾಗಿ ಈ ಚಲನ ಚಿತ್ರ ನೋಡಿ ಮರೆತರೆ ಪರವಾಗಿಲ್ಲ! ಒಳ್ಳೆಯದೇನನ್ನಾದರೂ ಕಲಿತರೆ ಅದಕ್ಕಿಂತ ಉತ್ತಮ ಇನ್ನೊಂದಿಲ್ಲ.ಆದರೆ ಈ ರೌಡಿಗಳ ಮನೋವಿಕೃತಿಯನ್ನು ಅನುಕರಿಸಿದರೆ, ಸಮಾಜದ ಕೊಳಕನ್ನು ಚಿತ್ರ ಮಾಧ್ಯಮದಲ್ಲಿ ತೋರಿಸಿ ಕೊಳಕನ್ನು ಹೆಚ್ಚು ಮಾಡಿದಂತಾಗುವುದಿಲ್ಲವೇ? ಭೂಗತ ಲೋಕದ ಚಿತ್ರಗಳು ಸಮಾಜ/ಜನರ ಮೇಲೆ ಬೀರುವ ಪರಿಣಾಮದ ಬಗ್ಗೆ ನನಗೆ ಹೆಚ್ಚಿನ ಅರಿವಿಲ್ಲ! ಪ್ರಶ್ನೆಯಂತೂ ಮೂಡಿದೆ. ಮನ:ಶಾಸ್ತ್ರದ ವಿಧ್ಯಾರ್ಥಿಗಳಗಿ ಉತ್ತಮ ಅಧ್ಯಯನ ವಿಷಯವಾಗಬಹುದು.

ನೀವು ಚಿತ್ರ ನೋಡಿದ್ರಾ? ನಿಮಗೇನನ್ನಿಸ್ತು? ಪ್ರತಿಕ್ರಿಯಿಸಿ!

2 ಕಾಮೆಂಟ್‌ಗಳು: