ಮಂಗಳವಾರ, ನವೆಂಬರ್ 18, 2008

ನಿನ್ನೆಯ ಪ್ರಮುಖ ಸುದ್ದಿಗೆ ಕನ್ನಡ ದಿನಪತ್ರಿಕೆಗಳು ಸ್ಪಂದಿಸಿದ ಪರಿ...

ಕನ್ನಡದ ಪ್ರಮುಖ ೩ ಪತ್ರಿಕೆಗಳು ಎನ್ನಬಹುದಾದ ಮೇಲಿನ ಪತ್ರಿಕೆಗಳ, ಮೊದಲ ಪುಟದ, ಪ್ರಮುಖ ಸುದ್ದಿಯನ್ನು ( ಮೊದಲನೆ ಪುಟದಲ್ಲಿ ,ಮೇಲ್ಭಾಗದಲ್ಲಿ ಬರುವ ಸುದ್ದಿ ಯಾವಾಗಲೂ ಪ್ರಮುಖ/ವಿಶೇಷ ವಾಗಿರುತ್ತದೆ ಎಂದರೆ ತಪ್ಪಾಗಲಾರದು)ಒಮ್ಮೆ ವಿಶ್ಲೇಷಿಸಿ. ಪತ್ರಿಕೆಗಳು ಜನರಿಗೆ ಸುದ್ದಿ ತಲುಪಿಸುವದರ ಜೊತೆಗೆ, ಜನರ ನೋವು ನಲಿವಿಗೆ ಸ್ಪಂದಿಸಬೇಕಲ್ಲವೆ? ಜನರ ನೋವಿಗೆ ಸ್ಪಂದಿಸುವ ಸುದ್ದಿ ಪತ್ರಿಕೆಯ ಮುಖ್ಯ ಭೂಮಿಕೆಯಲ್ಲಿ ಪ್ರಕಟವಾಗಬೇಕು ಎಂದೆನಿಸುದಿಲ್ಲವೆ ನಿಮಗೆ? ನೆನ್ನೆ ನಡೆದ ಜೆ. ಡಿ . ಎಸ್ ಸಮಾವೇಶದಿಂದ ನಗರದ ಬಹುತೇಕ ಮಂದಿ ತೊಂದರೆ/ಯಾತನೆಗಳನ್ನು ಅನುಭವಿಸಿದ್ದಾರೆ. ಶಿಶುವಿಹಾರ/ಪ್ರಾಥಮಿಕಾ ಶಾಲ ಮಕ್ಕಳು, ಜೆ ಡಿ ಎಸ್ ಸೃಷ್ಟಿಸಿದ ವಾಹನ ದಟ್ಟಣೆಯಿಂದ ಶಾಲ ವಾಹನಗಳಲ್ಲಿ ೩-೭ ಗಂಟೆಗಳ ಕಾಲ ಹಿಂಸೆ ಅನುಭವಿಸಿದ್ದಾರೆ. ಕೆಲವು ಮಕ್ಕಳಂತೂ ವಾಹನದಲ್ಲಿ ಅಳುತ್ತಾ ಕೂತಿದ್ದರು ಎಂಬ ವರದಿಗಳಿವೆ! ಪಾಲಕರ, ಪೋಷಕರ ಆತಂಕ ಒಮ್ಮೆ ನೆನೆಸಿಕೊಳ್ಳಿ. ಇವುಗಳನ್ನು ಖಂಡಿಸುವ ಸುದ್ದಿ ಪತ್ರಿಕೆಯ ಮುಖ್ಯಾಂಶವಾಗಬೇಕಲ್ಲವೆ??

ವಿಜಯ ಕರ್ನಾಟಕ ಪತ್ರಿಕೆ ನೋಡಿ, " ಜೆ ಡಿ ಎಸ್ ರಣಕಹಳೆ" ಎಂಬುದು ಇವರ ಮುಖ್ಯ ಸುದ್ದಿ! ಈ ಸಮಾವೇಶದಿಂದ ಆದ ತೊಂದರೆ ಎರಡನೇ ಪುಟಕ್ಕೆ ತಳ್ಳಲ್ಪಟ್ಟಿದೆ!! ಸ್ವಲ್ಪ ದಿನದ ಹಿಂದೆ ಭೀಮ್ ಸೇನ್ ಜೋಶಿ ಯವರಿಗೆ ಭಾರತ ರತ್ನ ಲಭಿಸಿದ ಸಂದರ್ಭದಲ್ಲಿ, ಕನ್ನಡಿಗರ ನಲಿವಿಗೆ ಸ್ಪಂದಿಸಿ ಮುಖ್ಯ ಭೂಮಿಕೆಯಲ್ಲಿ ಪ್ರಕಟಿಸಿ, ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದ ಈ ಪತ್ರಿಕೆಯ ಸಂಪಾದಕರಿಗೆ ನೆನ್ನೆ ಮಂಕು ಬಡಿದಿತ್ತೆ? ಇದೇ ಮೊದಲಲ್ಲ, ದೇವೇಗೌಡರ ಸಂದರ್ಶನ ಮುಖ ಪುಟದ ಸುದ್ದಿಯೇ? ಸಂಪಾದಕೀಯದಲ್ಲಿ ಪ್ರಕಟಗೊಳ್ಳಬೇಕಾದ ಮತಾಂತರ ಕುರಿತ ಭೈರಪ್ಪನವರ ಲೇಖನ ಮೊದಲ ಪುಟದ ಮೇಲ್ಭಾಗದಲ್ಲಿ ಪ್ರಕಟವಾಗಬೇಕೆ? ಇವೆರಡೂ ಪ್ರಮುಖ ಸುದ್ದಿಗಳಾದರೂ ಮುಖ ಪುಟದಲ್ಲಿ ಪ್ರಕಟವಾಗಬೇಕಾಗಿರುವವಲ್ಲ ಎಂದೆನಿಸುವುದಿಲ್ಲವೆ?

ಮೇಲಿನ ಪತ್ರಿಕೆಗಿಂತ ಅನುಭವೀ ಪತ್ರಿಕೆ ಪ್ರಜಾವಾಣಿಯ ಮುಖ್ಯ ಸುದ್ದಿ ಪ್ರಬುದ್ದವಾಗಿದೆ . ಈ ಪತ್ರಿಕೆಯ ಮುಖ್ಯಾಂಶ ಗಮನಿಸಿ. "ಸಮಾವೇಶದ ಅಬ್ಬರ, ನಗರ ಜೀವನ ತತ್ತರ", "ಟ್ರಾಫಿಕ್ ಜಾಮ್ ನಿಂದ ನರಕವಾದ ನಗರ", "ಶಾಲ ಮಕ್ಕಳಿಗೆ ರಸ್ತೆ ಬಂಧನ", "ರಾಜಕೀಯ ನಾಯಕರಿಗೆ ಜನರ ಹಿಡಿ ಶಾಪ" . ಇಬ್ಬರು ಜನ ಸಾಮಾನ್ಯರ ಹೇಳಿಕೆಗಳನ್ನೂ, "ಜನರ ಆಕ್ರೋಶ" ಎಂಬ ಶೀರ್ಷಿಕೆಯಡಿ, ಮುಖ್ಯಸುದ್ದಿಯಲ್ಲಿ ಪ್ರಕಟಿಸಿದ್ದಾರೆ. ಜನ ಸಾಮಾನ್ಯರ ಮಿಡಿತಕ್ಕೆ ಸ್ಪಂದಿಸಿರುವ ಪ್ರಜಾವಾಣಿ ಅಭಿನಂದನಾರ್ಹವಲ್ಲವೇ?

ಕನ್ನಡ ಪ್ರಭ ಕೂಡ ವಿಜಯ ಕರ್ನಾಟಕಕ್ಕೆ ಹೋಲಿಸಿದರೆ ಪರವಾಗಿಲ್ಲ. ಮುಖ್ಯ ಸುದ್ದಿಗೆ "ಕುಮಾರನ ಹೊಸ ಪರ್ವ ಎಂಬ ಶೀರ್ಷಿಕೆಯಿದ್ದರೂ, ಉಪ ಶೀರ್ಷಿಕೆಯಡಿ "ಜೆ ಡಿ ಎಸ್ ಜಾಮ್ ಗೆ ನಗರ ತತ್ತರ" ಎಂಬ ಸುದ್ದಿ ಮುದ್ರಣಗೊಂಡಿದೆ.

ತನ್ನ ಸಂಪಾದಕೀಯ ಲೇಖನಗಳಿಂದ ಹೆಸರು ಗಳಿಸಿರುವ ವಿಜಯ ಕರ್ನಾಟಕ, ಸುದ್ದಿ ಸಂಪಾದನೆ ಮತ್ತು ಪ್ರಕಟಣೆಯಲ್ಲಿ ಇನ್ನೂ ಪಕ್ವವಾಗಬೇಕಿದೆ. ಇನ್ನು ಮುಂದೆ ಸ್ವಲ್ಪ ಶ್ರಮ ವಹಿಸಿ, ತನ್ನ ತಪ್ಪುಗಳನ್ನು ತಿದ್ದಿಕೊಂಡು, ಸುದ್ದಿ ಪ್ರಕಟನೆಗೆ ಗಮನ ಹರಿಸಿ ಪತ್ರಿಕೆ ಇನ್ನೂ ಬೆಳೆಯಲಿ ಎಂದು ಆಶಿಸುವೆ.

ನಿಮ್ಮ ಅಭಿಪ್ರಾಯವೇನು? ಕೆಳಗೆ ಬರೆಯಿರಿ.

3 ಕಾಮೆಂಟ್‌ಗಳು:

  1. @ರವೀಶ : ಮಂಗಳೂರಿನವರು ಉದಯವಾಣಿ , ತರಂಗ ಗಳನ್ನ ಯಾವೊತ್ತೂ ಬಿಟ್ಟುಕೊಡೋಲ್ಲಾ! ಹ ಹ. ಉದಯವಾಣಿಯ ಅಂತರ್ಜಾಲದಲ್ಲಿ, ಸುದ್ದಿಗಳಿವೆ! ಆದರೆ ದಿನಪತ್ರಿಕೆಯ ತದ್ರೂಪ ಸಿಗಲಿಲ್ಲ, ಆದ್ದರಿಂದ ನನಗೆ ಮುಖಪುಟದ ವಿನ್ಯಾಸ/ಪ್ರಕಟಣೆ ಸರಿಯಾಗಿ ಗೊತ್ತಾಗಲಿಲ್ಲ!

    ಪ್ರತ್ಯುತ್ತರಅಳಿಸಿ