Raajakeeya ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Raajakeeya ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ನವೆಂಬರ್ 20, 2008

ಕುಮಾರನ ದುರಹಂಕಾರದ ಪರ್ವ!



ಏನೀಗ?? ಇಷ್ಟೋಂದ್ ಯಾಕೆ ಗೊಣಗಾಡ್ತಾ ಇದ್ದೀರ?? ಇದು ಸೋಮವಾರ "ಜಾತ್ಯಾತೀತ ಜನತಾದಳ ಸಮಾವೇಶ ಸೃಷ್ಟಿಸಿದ" ವಾಹನ ದಟ್ಟಣೆಯಿಂದ ಉಂಟಾದ ಜನಜೀವನ ಅಸ್ಥವ್ಯಸ್ಥೆಗೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು (ಈಗಿನ ಜೆ ಡಿ ಎಸ್ ಪಕ್ಷದ ರಾಜ್ಯಾಧ್ಯಕ್ಷ) ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದು ಹೀಗೆ. ಕನಿಷ್ಟ ಕ್ಷಮೆ ಕೂಡ ಕೇಳದೆ ತಮ್ಮ ಮಾತಿನ ವರಸೆ ಮುಂದುವರೆಸಿ ಬೆಂಗಳೂರಿನ ನಗರವಾಸಿಗಳಿಗೆ (sophisticated ನಗರ ವಾಸಿಗಳಂತೆ) ಗ್ರಾಮೀಣ ಜನರ ಕಷ್ಟ ಗೊತ್ತಾಗಬೇಕಂತೆ!! ಹಳ್ಳಿಗಳಲ್ಲಿ ಎಷ್ಟೋ ಮಂದಿ ದಿನಾಲು ಶಾಲೆಗ ನಾಲ್ಕೈದು ಮೈಲಿ ನಡೆದು ಹೋಗುತ್ತಾರಂತೆ!! ವಾಹನ ದಟ್ಟಣೆಯಲ್ಲಿ ೩-೭ ಗಂಟೆ ನಿಂತರೆ ಏನೀಗ? ಐ-ಟಿ/ಬಿ-ಟಿ ಮಂದಿಯೇ ಅಂತೆ, ಆದ ತೊಂದರೆಗೆ ದೂರುತ್ತಿರುವುದು!!

ಏನಾಗಿದೆ ಈ ಮನುಷ್ಯನಿಗೆ? ಇವರ ಮಗ ಐಶಾರಾಮಿ ಕಾರಿನಲ್ಲಿ ಓಡಾಡಿಕೊಂಡು, ಕುಡಿದು ಬಾರಿನಲ್ಲಿ ಗಲಾಟೆ ಮಾಡಿ, ಆಸ್ತಿ ಪಾಸ್ತಿಗೆ ಹಾನಿ ಮಾಡುತ್ತಾನೆ. (ಕಷ್ಟ ಪಟ್ಟು ನ್ಯಾಯಯುತವಾಗಿ ದುಡಿದ ದುಡ್ಡಿನಲ್ಲಿ ಮೋಜು ಮಾಡುವುದು, ಕುಡಿಯುವುದು ಅವರವರ ವ್ಯಯಕ್ತಿಕ ವಿಷಯ. ಇದರ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ ಕುಡಿದು ಗಲಾಟೆ ಮಾಡಿ, ಇತರರ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವ ಸಂಸ್ಕೃತಿಗೆ ಪೇಟೆಯದೂ ಅಲ್ಲ, ಹಳ್ಳಿಯದೂ ಅಲ್ಲ್ಲ, ಪದ್ಮನಾಭನಗರ/ಹೊಳೆನರಸೀಪುರ ಸಂಸ್ಕೃತಿ ಎನ್ನಬೇಕಷ್ಟೆ! ಪದ್ಮನಾಭನಗರ ಮತ್ತು ಹೊಳೆನರಸೀಪುರದಲ್ಲಿರುವ ಸಜ್ಜನರು ನನ್ನನ್ನು ಕ್ಷಮಿಸಬೇಕು). ಇಂತಹ ಮಕ್ಕಳನ್ನು ಬೆಳೆಸಿರುವ ಕುಮಾರನಿಗೆ ಗ್ರಾಮೀಣ ಮಕ್ಕಳ ಕಷ್ಟ ಗೊತ್ತಾಗಿಬಿಡುತ್ತದೆ! ಆ ವಾಹನ ದಟ್ಟಣೆಯಲ್ಲಿ ಎಷ್ಟೋ ಪುಟ್ಟ ಮಕ್ಕಳು (ಪಾಪ ಇವರು ಯಾರೂ ಇನ್ನೂ ಐ ಟಿ / ಬಿ ಟಿ ನೌಕರರಾಗಿಲ್ಲ) ನರಕ ಯಾತನೆ ಅನುಭವಿಸಿದರೆ, ಅದು ಕಷ್ಟ ಅಲ್ಲ. (ಮುಂದಿನ ದಿನ ಮಂಗಳವಾರ ಬಹುತೇಕ ಮಕ್ಕಳು ಭಯಭೀತರಾಗಿ ಶಾಲೆ ಹೋಗಲು ನಿರಾಕರಿಸಿದ ವರದಿಯಿದೆ!). ಕುಮಾರರು ಈ ಮುಗ್ದ ಮಕ್ಕಳಿಗೂ ಜೆ ಡಿ ಎಸ್ ವಿರೋಧಿ ಪಟ್ಟ ಕಟ್ಟಿಬಿಡುತ್ತಾರೆ. ಇವರ ವಂಶದ ನರ ನಾಡಿಗಳಲ್ಲಿ ಹರಿಯುತ್ತಿರುವುದು ಹೊಲಸು ರಾಜಕಾರಣ ತಾನೆ! ಹಳ್ಳಿ ಮಕ್ಕಳು ಕಷ್ಟ ಪಟ್ಟರೆ, ನಗರ ವಾಸಿಗಳೂ ಕಷ್ಟ ಪಡಬೇಕು ಎಂಬುದು ಯಾವ ನ್ಯಾಯವೋ? (ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಯೆ?).ಹಳ್ಳಿ ಮಕ್ಕಳ ಏಳಿಗೆಗೆ ದುಡಿಯಲಿ, ಅವರು ನಡೆದು ಹೋಗಬೇಕಾದ ಕಡೆ ಬಸ್ಸುಗಳ ವ್ಯವಸ್ಥೆ ಮಾಡಲಿ! ಯಾವ ಪುರುಷಾರ್ಥಕ್ಕಾಗಿ ಈ ಸಮಾವೇಶ ಮಾಡಿದ್ದೊ? (’ಪುರುಷಾರ್ಥ’ ಕುಮಾರನ ಪ್ರಿಯವಾದ ಶಬ್ದ, ಕುಮಾರನು ಈ ಶಬ್ದವನ್ನು ಮಾಧ್ಯಮಗಳಲ್ಲಿ ಲೀಲಾಜಾಲವಾಗಿ ಬಳಸುತ್ತಾರೆ!).ಇದಕ್ಕೆ ವ್ಯಯಿಸಿದ ದುಡ್ಡಿನಲ್ಲಿ ಕನಿಷ್ಟ ೨೦ ಬಸ್ಸುಗಳನ್ನು ಕೊಂಡು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಡುಗೊರೆಯಾಗಿ ಕೊಡಬಹುದಿತ್ತು!(ಕಷ್ಟ ಪಟ್ಟು ನ್ಯಾಯಯುತವಾಗಿ ದುಡಿದ ದುಡ್ಡಾಗಿದ್ದರೆ ಮಾತ್ರ!).

ಇನ್ನು ಐ ಟಿ/ಬಿ ಟಿ ಮಂದಿಯನ್ನು ದೂರುವುದು! ಕೆಲಸ ಮಾಡಿ ದುಡಿದು ತಿಂದಿದ್ದರೆ ಗೊತ್ತಾಗುತ್ತಿತ್ತು, ಐ ಟಿ/ಬಿ ಟಿ ಯವರ ದುಡಿಮೆ, ಹೊಲಸು ರಾಜಕಾರಣ ಮಾಡಿ ಬೇನಾಮಿ ಆಸ್ತಿ ಮಾಡಿದೊಷ್ಟು ಸುಲಭ ಅಲ್ಲಾ ಅಂತ. ಒಂದು ಎದೆ ನೋವು ಬಂದರೆ, ವಾರಾನುಗಟ್ಟಲೆ ವೊಕ್ ಹಾರ್ಟ್ ಎಂಬ ಐಶಾರಮಿ ಆಸ್ಪತ್ರೆ ಸೇರುತ್ತಾರೆ! ಗ್ರಾಮೀಣ ಜನರ ಕಷ್ಟ ಕಾರ್ಪಣ್ಯಗಳನ್ನು ಅರಿಯುವ ನಿಜವಾದ ಕಾಳಜಿಯಿದ್ದರೆ ಯಾವುದಾದರೂ ಗ್ರಾಮೀಣ ಆಸ್ಪತ್ರೆ ಸೇರಲಿ? ಗ್ರಾಮ ವಾಸ್ತವ್ಯ ಹೆಸರಿನಲ್ಲಿ ಕಂಡ ಕಂಡವರ ಮನೆಯಲ್ಲಿ ಚನ್ನಾಗಿ ಕೋಳಿ ಮಾಂಸ ಉಂಡು ಮಲಗುವಷ್ಟು ಸುಲಭವಲ್ಲ ಅದು ಎಂದು ಗೊತ್ತಾಗುತ್ತದೆ! ಗ್ರಾಮೀಣ ಜನರ ಬಗ್ಗೆ ನಕಲಿ ಕಾಳಜಿ ತೋರಿಸುವುದು, ಆಶಾಢಭೂತಿ (hypocrite) ಮಾತುಗಳನ್ನಾಡುವುದು, ಹೊಲಸು ರಾಜಕಾರಣ ಮಾಡುವುದು , ಇಂತಹವುಗಳನ್ನು ಕಡಿಮೆ ಮಾಡಿ, ಇನ್ನಾದರೂ ಸನ್ಮಾರ್ಗದಲ್ಲಿ ನಡೆಯಲಿ ಕುಮಾರರು!

ನೀವೇನನ್ನುತ್ತೀರಾ?

ಮಂಗಳವಾರ, ನವೆಂಬರ್ 18, 2008

ನಿನ್ನೆಯ ಪ್ರಮುಖ ಸುದ್ದಿಗೆ ಕನ್ನಡ ದಿನಪತ್ರಿಕೆಗಳು ಸ್ಪಂದಿಸಿದ ಪರಿ...





ಕನ್ನಡದ ಪ್ರಮುಖ ೩ ಪತ್ರಿಕೆಗಳು ಎನ್ನಬಹುದಾದ ಮೇಲಿನ ಪತ್ರಿಕೆಗಳ, ಮೊದಲ ಪುಟದ, ಪ್ರಮುಖ ಸುದ್ದಿಯನ್ನು ( ಮೊದಲನೆ ಪುಟದಲ್ಲಿ ,ಮೇಲ್ಭಾಗದಲ್ಲಿ ಬರುವ ಸುದ್ದಿ ಯಾವಾಗಲೂ ಪ್ರಮುಖ/ವಿಶೇಷ ವಾಗಿರುತ್ತದೆ ಎಂದರೆ ತಪ್ಪಾಗಲಾರದು)ಒಮ್ಮೆ ವಿಶ್ಲೇಷಿಸಿ. ಪತ್ರಿಕೆಗಳು ಜನರಿಗೆ ಸುದ್ದಿ ತಲುಪಿಸುವದರ ಜೊತೆಗೆ, ಜನರ ನೋವು ನಲಿವಿಗೆ ಸ್ಪಂದಿಸಬೇಕಲ್ಲವೆ? ಜನರ ನೋವಿಗೆ ಸ್ಪಂದಿಸುವ ಸುದ್ದಿ ಪತ್ರಿಕೆಯ ಮುಖ್ಯ ಭೂಮಿಕೆಯಲ್ಲಿ ಪ್ರಕಟವಾಗಬೇಕು ಎಂದೆನಿಸುದಿಲ್ಲವೆ ನಿಮಗೆ? ನೆನ್ನೆ ನಡೆದ ಜೆ. ಡಿ . ಎಸ್ ಸಮಾವೇಶದಿಂದ ನಗರದ ಬಹುತೇಕ ಮಂದಿ ತೊಂದರೆ/ಯಾತನೆಗಳನ್ನು ಅನುಭವಿಸಿದ್ದಾರೆ. ಶಿಶುವಿಹಾರ/ಪ್ರಾಥಮಿಕಾ ಶಾಲ ಮಕ್ಕಳು, ಜೆ ಡಿ ಎಸ್ ಸೃಷ್ಟಿಸಿದ ವಾಹನ ದಟ್ಟಣೆಯಿಂದ ಶಾಲ ವಾಹನಗಳಲ್ಲಿ ೩-೭ ಗಂಟೆಗಳ ಕಾಲ ಹಿಂಸೆ ಅನುಭವಿಸಿದ್ದಾರೆ. ಕೆಲವು ಮಕ್ಕಳಂತೂ ವಾಹನದಲ್ಲಿ ಅಳುತ್ತಾ ಕೂತಿದ್ದರು ಎಂಬ ವರದಿಗಳಿವೆ! ಪಾಲಕರ, ಪೋಷಕರ ಆತಂಕ ಒಮ್ಮೆ ನೆನೆಸಿಕೊಳ್ಳಿ. ಇವುಗಳನ್ನು ಖಂಡಿಸುವ ಸುದ್ದಿ ಪತ್ರಿಕೆಯ ಮುಖ್ಯಾಂಶವಾಗಬೇಕಲ್ಲವೆ??

ವಿಜಯ ಕರ್ನಾಟಕ ಪತ್ರಿಕೆ ನೋಡಿ, " ಜೆ ಡಿ ಎಸ್ ರಣಕಹಳೆ" ಎಂಬುದು ಇವರ ಮುಖ್ಯ ಸುದ್ದಿ! ಈ ಸಮಾವೇಶದಿಂದ ಆದ ತೊಂದರೆ ಎರಡನೇ ಪುಟಕ್ಕೆ ತಳ್ಳಲ್ಪಟ್ಟಿದೆ!! ಸ್ವಲ್ಪ ದಿನದ ಹಿಂದೆ ಭೀಮ್ ಸೇನ್ ಜೋಶಿ ಯವರಿಗೆ ಭಾರತ ರತ್ನ ಲಭಿಸಿದ ಸಂದರ್ಭದಲ್ಲಿ, ಕನ್ನಡಿಗರ ನಲಿವಿಗೆ ಸ್ಪಂದಿಸಿ ಮುಖ್ಯ ಭೂಮಿಕೆಯಲ್ಲಿ ಪ್ರಕಟಿಸಿ, ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದ ಈ ಪತ್ರಿಕೆಯ ಸಂಪಾದಕರಿಗೆ ನೆನ್ನೆ ಮಂಕು ಬಡಿದಿತ್ತೆ? ಇದೇ ಮೊದಲಲ್ಲ, ದೇವೇಗೌಡರ ಸಂದರ್ಶನ ಮುಖ ಪುಟದ ಸುದ್ದಿಯೇ? ಸಂಪಾದಕೀಯದಲ್ಲಿ ಪ್ರಕಟಗೊಳ್ಳಬೇಕಾದ ಮತಾಂತರ ಕುರಿತ ಭೈರಪ್ಪನವರ ಲೇಖನ ಮೊದಲ ಪುಟದ ಮೇಲ್ಭಾಗದಲ್ಲಿ ಪ್ರಕಟವಾಗಬೇಕೆ? ಇವೆರಡೂ ಪ್ರಮುಖ ಸುದ್ದಿಗಳಾದರೂ ಮುಖ ಪುಟದಲ್ಲಿ ಪ್ರಕಟವಾಗಬೇಕಾಗಿರುವವಲ್ಲ ಎಂದೆನಿಸುವುದಿಲ್ಲವೆ?

ಮೇಲಿನ ಪತ್ರಿಕೆಗಿಂತ ಅನುಭವೀ ಪತ್ರಿಕೆ ಪ್ರಜಾವಾಣಿಯ ಮುಖ್ಯ ಸುದ್ದಿ ಪ್ರಬುದ್ದವಾಗಿದೆ . ಈ ಪತ್ರಿಕೆಯ ಮುಖ್ಯಾಂಶ ಗಮನಿಸಿ. "ಸಮಾವೇಶದ ಅಬ್ಬರ, ನಗರ ಜೀವನ ತತ್ತರ", "ಟ್ರಾಫಿಕ್ ಜಾಮ್ ನಿಂದ ನರಕವಾದ ನಗರ", "ಶಾಲ ಮಕ್ಕಳಿಗೆ ರಸ್ತೆ ಬಂಧನ", "ರಾಜಕೀಯ ನಾಯಕರಿಗೆ ಜನರ ಹಿಡಿ ಶಾಪ" . ಇಬ್ಬರು ಜನ ಸಾಮಾನ್ಯರ ಹೇಳಿಕೆಗಳನ್ನೂ, "ಜನರ ಆಕ್ರೋಶ" ಎಂಬ ಶೀರ್ಷಿಕೆಯಡಿ, ಮುಖ್ಯಸುದ್ದಿಯಲ್ಲಿ ಪ್ರಕಟಿಸಿದ್ದಾರೆ. ಜನ ಸಾಮಾನ್ಯರ ಮಿಡಿತಕ್ಕೆ ಸ್ಪಂದಿಸಿರುವ ಪ್ರಜಾವಾಣಿ ಅಭಿನಂದನಾರ್ಹವಲ್ಲವೇ?

ಕನ್ನಡ ಪ್ರಭ ಕೂಡ ವಿಜಯ ಕರ್ನಾಟಕಕ್ಕೆ ಹೋಲಿಸಿದರೆ ಪರವಾಗಿಲ್ಲ. ಮುಖ್ಯ ಸುದ್ದಿಗೆ "ಕುಮಾರನ ಹೊಸ ಪರ್ವ ಎಂಬ ಶೀರ್ಷಿಕೆಯಿದ್ದರೂ, ಉಪ ಶೀರ್ಷಿಕೆಯಡಿ "ಜೆ ಡಿ ಎಸ್ ಜಾಮ್ ಗೆ ನಗರ ತತ್ತರ" ಎಂಬ ಸುದ್ದಿ ಮುದ್ರಣಗೊಂಡಿದೆ.

ತನ್ನ ಸಂಪಾದಕೀಯ ಲೇಖನಗಳಿಂದ ಹೆಸರು ಗಳಿಸಿರುವ ವಿಜಯ ಕರ್ನಾಟಕ, ಸುದ್ದಿ ಸಂಪಾದನೆ ಮತ್ತು ಪ್ರಕಟಣೆಯಲ್ಲಿ ಇನ್ನೂ ಪಕ್ವವಾಗಬೇಕಿದೆ. ಇನ್ನು ಮುಂದೆ ಸ್ವಲ್ಪ ಶ್ರಮ ವಹಿಸಿ, ತನ್ನ ತಪ್ಪುಗಳನ್ನು ತಿದ್ದಿಕೊಂಡು, ಸುದ್ದಿ ಪ್ರಕಟನೆಗೆ ಗಮನ ಹರಿಸಿ ಪತ್ರಿಕೆ ಇನ್ನೂ ಬೆಳೆಯಲಿ ಎಂದು ಆಶಿಸುವೆ.

ನಿಮ್ಮ ಅಭಿಪ್ರಾಯವೇನು? ಕೆಳಗೆ ಬರೆಯಿರಿ.