ಸೋಮವಾರ, ಮಾರ್ಚ್ 16, 2009

ಧೀಮಂತ ಸಾಹಿತಿಯ ಜಯಂತಿ


"ಮೇಲೆ ನೋಡೆ ಕಣ್ಣ ತಣಿಪ
ನೀಲ ಪಟದಿ ವಿವಿಧ ರೂಪ
ಜಾಲಗಳನು ಬಣ್ಣಿಸಿರ್ಪ
ಚಿತ್ರ ಚತುರನಾರ್!
ಕಾಲದಿಂದ ಮಾಸದಾ ವಿ
ಚಿತ್ರವೆಸಪನಾರ್?"
(ನಿವೇದನ - ನಿವೇದನ ಕವನ ಸಂಕಲನ)


ಎಂದು ಪ್ರಕೃತಿ ಸೊಬಗಿಗೆ ಬೆರಗಾಗಿ ದೇವರನ್ನು ನಿವೇದಿಸಿದ ಕವಿ,


"ಶಿಲ್ಪಿ ವರ ಕುವರಿಯರೆ ಸೌಂದರ್ಯ ಮುದ್ರಿಕೆಯರೆ |
ದೇವದೇವನ ಸೇವೆಗೈತರ್ಪ ಸಾಧುಕುಲಮಂ |
ಭಾವ ವಿನ್ಯಾಸ ವೈಕೃತಿಗಳಿಂ ಬೆರಗುವಡಿಸಿ |
ಚಂಚಲತೆಗೆಡೆಯೆನೆಸಿ ನೀವಿಂತು ನಿಲುವುದೇಕೆ"
(ಬೇಲೂರಿನ ಶಿಲಾ ಬಾಲಿಕೆಯರು -ನಿವೇದನ ಕವನ ಸಂಕಲನ)


ಎಂದು ಬೇಲೂರು ಶಿಲಾಬಾಲಿಕೆಯರ ಸೌಂದರ್ಯ ಕಂಡು ಮೆಚ್ಚಿದ ಕವಿ,



"ವನಕುಸುಮದೊಳೆನ್ನ ಜೀ |
ವನವು ವಿಕಸಿಸುವಂತೆ |
ಮನವನನುಗೊಳಿಸು ಗುರುವೇ - ಹೇ ದೇವ

ಜನಕೆ ಸಂತಸವೀವ |
ಘನನು ನಾನೆಂದು |
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ ||"
(ವನಸುಮ - ನಿವೇದನ ಕವನ ಸಂಕಲನ)


ಎಂದು ತನ್ನ ದೊಡ್ಡತನವನ್ನು ಮರೆಮಾಡುವಂತೆ ದೇವರನ್ನು ಬೇಡಿದ ದಾರ್ಶನಿಕ,



"ಮಗುಗಳಾಟದೆ ಮನಸು ಬೇಸರುವ ಮುನ್ನ
ನಗುವಾತಿನಿಂದಲೆ ವಿಕಸಿಸದ ಮುನ್ನ
ಜಗದಿ ನಾನೊಬ್ಬಂಟಿಯೆಂದೆನಿಮ ಮುನ್ನ
ಮುಗಿಯಲೀ ಬಾಳು
ಮಿಗುವೊಡದು ಗೋಳು"
(ಬಾಳೊಂದು ಗೋಳು - ಕೇತಕೀ ವನ ಕವನ ಸಂಕಲನ)


ಬದುಕಿನ ಗೋಳನ್ನು ಬರೆದ ಸಾಹಿತಿ

"ಆ ಹೊತ್ತಿನ ಊಟ, ಆ ರಾತ್ರಿಯ ನಿದ್ದೆ, ಅಂದಂದಿನ ಚಾಕರಿ, ಅಂದಂದಿನ ಪೇಚಾಟ, ಮಾರನೆ ದಿನ ಬಂದಾಗ ಅದರ ಯೋಚನೆ - ಹೀಗಿರುವುದು ಸರಿಯೇ? ಅಥವಾ ಹೊಟ್ಟೆಯ ಪಾಡಿನ ಯೋಚನೆಗಿಂತ ಮೇಲ್ಪಟ್ಟ ವಿಚಾರ ಏನಾದರೂ ಮನುಷ್ಯನ ಪಾಲಿಗೆ ಉಂಟೋ?"
(ಬದುಕು ಏಕೆ - ಬಾಳಿಗೊಂದು ನಂಬಿಕೆ
)

ಎಂಬ ಪ್ರಶ್ನೆಯನ್ನೆತ್ತಿದ ವಿಚಾರವಾದಿ. ಇದಕ್ಕೆ ಉತ್ತರವನ್ನು ತಿಳಿಸಿ ಸಾಮಾನ್ಯರಲ್ಲಿ ಬಾಳಿಗೊಂದು ನಂಬಿಕೆಯನ್ನು ತುಂಬಿದ ವಿದ್ವಾಂಸ.

"ಹಾ ! ಪ್ರಿಯಳೆ, ಬಾ; ಇಂದಿನಿಂ ಹಿಂದಿನಳಲುಗಳ
ಮುಂದಿನಳುಕುಗಳ ತೊಲಗಿಸುವ ಬಟ್ಟಲನು
ತುಂಬಿ ನೀಡೆನಗೀಗ; ’ನಾಳೆ’ಯೆಂಬೆಯೊ? -ನಾಳೆ
ಸೇರುವೆನು ನೂರ್ಕೋಟಿ ನಿನ್ನೆಗಳ ಜೊತೆಗೆ"
(ಉಮರನ ಒಸಗೆ)


ಎಂದು ಒಮರ್ ಖಯ್ಯಾಮನ ಲೋಕೋಪದೇಶವನ್ನು ಉಮರನ ಒಸಗೆಯಾಗಿ ಭಾವಾನುವಾದವನ್ನು ಕನ್ನಡಕ್ಕೆ ತಂದ ಕವಿ.

"ಜಲಡಿಯಲ್ಲಿ ಪಯಣಿಸಿ ನಾನತ್ತ ಆರುವೆನ್ ;
ಬಾಲವಿಲ್ಲದಿಲಿಯ ರೂಪವನ್ನು ತಾಳುವೆನ್;
ಮಾಡುವೆನ್, ಮಾಡುವೆನ್, ಮತ್ತೆ ಮಾಡುವೆನ್. "
(ಕನ್ನಡ ಮ್ಯಾಕ್ ಬೆತ್
)

ಶೇಕ್ಸ್ ಪಿಯರ್ಸ್ ನ ನಾಟಕವನ್ನು ಕನ್ನಡಕ್ಕೆ ತಂದ ನಾಟಕ ರಚನಕಾರ.

"ಎತ್ತಿರಣ್ಣ ಕತ್ತೆಲದ್ದಿಯ -ಸ-
ಮಸ್ತಜನರೆ - ಎತ್ತಿರಣ್ಣ ಕತ್ತೆಲದ್ದಿಯಾ ||
ಎತ್ತಿರಣ್ಣ ಕತ್ತೆಲದ್ದಿ
ಕತ್ತೆ ಬುದ್ಧಿಗೆ ಪ್ರಸಿದ್ಧಿ
ಬುದ್ಧಿಯ ರ್ಸಸಾರ ಲದ್ಧಿ
ಲದ್ದಿಯಿಂದ ಸರ್ವ ಸಿದ್ಧಿ"
(ಗರ್ದಭ ವಿಜಯ - ಪ್ರಹಸನತ್ರಯೀ
)

ಹಾಸ್ಯ ನಾಟಕಗಳನ್ನು ಕೊಟ್ಟ ವಿಕಟ ಕವಿ

ಹೋರಾಡು ಬೀಳ್ವನ್ನಮೊಬ್ಬೊಂಟಿಯಾದಡಂ |
ಧೀರಪಥವನೆ ಬೆದಕು ಸಕಲಸಮಯದೊಳಂ ||
ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ? |
ಹೋರಿ ಸತ್ವವ ಮೆರಸು ಮಂಕುತಿಮ್ಮ ||
(ಮಂಕು ತಿಮ್ಮನ ಕಗ್ಗ
)

ಎಂದು ಮಂಕುತಿಮ್ಮನಾಗಿ,
(ಸ್ವಾಮಿ ಬ್ರಹ್ಮಾನಂದರ ಮಂಕು ತಿಮ್ಮನ ಕಗ್ಗ ದ ಪ್ರವಚನ ಕೇಳಲು ಇಲ್ಲಿ ಒತ್ತಿ)

ಬಿಸಿ ಬಿಸಿಯ ನೀರಿಂಗೆ ಹಿಮಗಿರಿಯ ತಣ್ಣೀರ|
ಹಸಿರು ತಣ್ಣೀರಿಂಗೆ ಬಿಸಿಯ ಸೇರಿಸುತೆ||
ಹಸನು ಶೀತೋಷ್ಣದಿಂದೊಡಲ ಮಜ್ಜನಗೈವ|
ಕುಶಲತೆ ಸಮನ್ವಯವೊ - ಮರುಳ ಮುನಿಯ
(ಮರುಳ ಮುನಿಯನ ಕಗ್ಗ
)

ಎಂದು ಮರುಳ ಮುನಿಯನಾಗಿ

ನನ್ನಂತ ಸಾವಿರಾರು ಮಂಕು ತಿಮ್ಮರಿಗೆ, ಮರುಳ ಮುನಿಯರಿಗೆ ಬುದ್ಧಿವಾದ ಹೇಳಿದ ಹಿರಿಯ ಸಾಹಿತಿ.

"ಯದುವಂಶತಿಲಕನ - ವೇಷವಿದೇನೆ|
ಮದಿರಾಕ್ಷಿ ಮುರಳೀ - ನಾದವಿದೇನೇ||

ಮುರಳೀಗಾನವಿದೇನೆ - ತರಲಾಪಾಂಗವದೇನೆ|
ಸ್ಮರಸಂಭ್ರಮಾನಂದ-ಸ್ಮರಣೆಯಿದೇನೆ||"
(ಮುರಳೀಧರೆ - ಅನ್ತ:ಪುರಗೀತೆ
)


ಎಂದು ಬೇಲೂರಿನ ಚೆನ್ನಕೇಶವ ಗುಡಿಯ ಶಿಲ್ಪಕಲೆಗೆ ಮಾರು ಹೋಗಿ, ಅಲ್ಲಿನ ಕೆತ್ತನೆಯ ಬಹುತೇಕ ಎಲ್ಲಾ ವಿಗ್ರಹ ಗಳ ಮೇಲೂ ಕವಿತೆ ರಚಿಸಿದ ಮಹಾ ಕವಿ

ಮೇಲೆ ಪರಿಚಯಿಸಿದ್ದದ್ದಲ್ಲದೆ, ನಾಸ್ತಿಕರಿಗೆ, ಸಂದೇಹಕರ್ತ ರಿಗೆ (Agnostics) ಸೆಡ್ಡು ಹೊಡೆದು ಆಸ್ತಿಕವಾದ ವನ್ನು ತರ್ಕ ಬದ್ಧವಾಗಿ ಚರ್ಚಿಸಿ ’ದೇವರು’ ಎಂಬ ಪ್ರಬಂಧವನ್ನು, ಮಾಧ್ಯಮದ ಚರಿತ್ರೆ, ಕರ್ತವ್ಯ ಮತ್ತು ಸ್ವಾತಂತ್ರ್ಯವನ್ನು ಚರ್ಚಿಸಿ ’ವೃತ್ತಪತ್ರಿಕೆಯನ್ನು’, ಸಾಮಾನ್ಯತಿಗೆ ಸಾಹಿತ್ಯ ಪ್ರಚಾರಕ್ಕಾಗಿ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ’ಸಾಹಿತ್ಯ ಶಕ್ತಿ’ ಯನ್ನು, ಸತ್ಯ ಧರ್ಮ ಪ್ರಗತಿ ಸಂಸ್ಕೃತಿ ವಿಷಯಗಳ ಚರ್ಚೆಯನ್ನೊಳಗೊಂಡ ’ಸಂಸ್ಕೃತಿ’ ಯನ್ನು, ’ಈಷೋಪನಿಷತ್ತು’, ’ಭಗವದ್ಗೀತಾ ಸಾರ ಅಥವಾ ಜೀವನ ಧರ್ಮ ಯೋಗ’, ’ಪುರುಷ ಸೂಕ್ತ’ ಗಳನ್ನು ಸಂಸ್ಕೃತದಿಂದ ಸರಳ ಕನ್ನಡಕ್ಕೆ, ರಾಜ್ಯಾಂಗ, ರಾಷ್ಟ್ರ - ರಾಷ್ಟ್ರಕ ನ ಸಂಬಂಧವನ್ನು, ಕರ್ತವ್ಯವನ್ನು ಚರ್ಚಿಸಿದ ’ರಾಜ್ಯಶಾಸ್ತ್ರ’ ವನ್ನು, ಮಕ್ಕಳಿಗಾಗಿ ’ಇಂದ್ರವಜ’ ’ಚಿಕ್ಕೋಜಿ’ ಕಥೆಗಳನ್ನು, ’ದಿವಾನ್ ರಂಗಾಚಾರ್ಲು’ ಮತ್ತು ’ಗೋಪಾಲಕೃಷ್ಣ ಗೋಖಲೆ’ ವಿಚಾರಗಳನ್ನು ಒಳಗೊಂಡ ಆತ್ಮ ಚರಿತ್ರೆಗಳನ್ನು, ’ಗೀತಾ ಶಾಂಕುತಲಂ’ , ’ಶೃಂಗಾರಮಂಗಳಂ’, ’ಶ್ರೀಕೃಷ್ಣಪರೀಕ್ಷಣಂ’ ಎಂಬ ಮಹಾ ಕಾವ್ಯಗಳನ್ನು, ’ವಸಂತ ಕುಸುಮಾಂಜಲಿ’ ಕವನ ಸಂಕಲನವನ್ನು, ತಮಗೆ ತಿಳಿದ ಹಿರಿಯ, ಕಿರಿಯ ಮಹಾನುಭಾವರ ೮ ಸಂಪುಟದ ’ಙ್ನಾಪಕ ಚಿತ್ರ ಶಾಲೆ’ ಯನ್ನು ( ೧) ಸಾಹಿತಿ ಸಜ್ಜನ ಸಾರ್ವ ಜನಿಕರು ೨) ಕಲೋಪಾಸಕರು ೩) ಸಾಹಿತ್ಯೋಪಾಸಕರು ೪) ಮೈಸೂರಿನ ದಿವಾನರುಗಳು ೫) ವೈದಿಕ ಧರ್ಮ ಸಮ್ಪ್ರದಾಯಸ್ಥರು ೬)ಹಲವು ಸಾರ್ವಜನಿಕರು ೭) ಹೃದಯ ಸಂಪನ್ನರು ೮) ಸ್ಮೃತಿ ಚಿತ್ರಗಳು ) ರಚಿಸಿ ಕನ್ನಡ ಸಾಹಿತ್ಯ ವನ್ನು ಶ್ರೀಮಂತಗೊಳಿಸಿದ, ಸಾರ್ವಜನಿಕ ಸೇವೆಯನ್ನು ಮಾಡಿದ ಮಹಾ ಧೀಮಂತ ಸಾಹಿತಿ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (ಡಿವಿಜಿ) ನವರ ಜನ್ಮದಿನ ನಾಳೆ. (ಮಾರ್ಚ್ -೧೭). ಈ ಸಂದರ್ಭದಲ್ಲಿ ಡಿ ವಿ ಜಿ ಯವರ ಕೃತಿಗಳ ಪರಿಚಯದ ಜೊತೆ ಅವರ ಸಾಹಿತ್ಯದ ಕೆಲವು ತುಣುಕುಗಳನ್ನು ಕೂಡ ಸಂಗ್ರಹಿಸಿ ಒದಗಿಸಿದ್ದೇನೆ. ಓದುಗರು ಡಿ ವಿ ಜಿ ಯವರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಪ್ರತಿಕ್ರಿಯಿಸುವ ಮೂಲಕ ಹಂಚಿಕೊಳ್ಳಲು ವಿನಂತಿ .

ಸಮಾಜ ಸೇವಕ ಸಮಿತಿಯ ವತಿಯಿಂದ ನಾಳೆ ಅರ್ಥಪೂರ್ಣ ಆಚರಣೆ A D A ರಂಗಮಂದಿರದಲ್ಲಿ. ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ಒತ್ತಿ. ನಾನು ಹಿಂದೆ ಎರಡು ಬಾರಿ ಈ ಸಮಿತಿ ನಡೆಸುವ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ಹಿಂದಿನ ಕಾರ್ಯಕ್ರಮಗಳ ಸಿಹಿ ನೆನಪುಗಳು ಮನಸ್ಸಿನಿಂದ ಇನ್ನೂ ಮಾಸಿಲ್ಲ. ಬನ್ನಿ ಭೇಟಿಯಾಗೋಣ.

ಸೋಮವಾರ, ಮಾರ್ಚ್ 09, 2009

ಕನ್ನಡ ಪುಸ್ತಕ ಮತ್ತು ಕನಿಷ್ಠ ೨೫% ರಿಯಾಯಿತಿ ಮಾರಾಟ


ಪುಸ್ತಕ ಪ್ರೇಮಿಗಳಿಗೊಂದು ಸುವರ್ಣಾವಕಾಶ. ನಿಮ್ಮ ಗ್ರಂಥಾಲಯದಲ್ಲಿ ಪುಸ್ತಕ ಭಂಢಾರವನ್ನು ಹೆಚ್ಚಿಸಿಕೊಳ್ಳಿ, ನಿಮ್ಮ ಙ್ನಾನ ಭಂಢಾರವನ್ನೂ ವೃದ್ಧಿಸಿಕೊಳ್ಳಿ, ಬಹಳ ಕಡಿಮೆ ಖರ್ಚಿನಲ್ಲಿ. ಇಗೋ ನಡೆಯುತ್ತಿದೆ, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪ್ರತಿಷ್ಟಿತ ಮುದ್ರಕರ ಪುಸ್ತಕ ಮೇಳ. ಕನಿಷ್ಟ ಶೇಕಡ ೨೫ ರಿಂದ ಶೇಕಡ ೬೦ ರ ವರೆಗೆ ರಿಯಾಯಿತಿ. ಕೊಂಡಿರುವ ಪುಸ್ತಕಗಳನ್ನೆ ಇನ್ನೂ ಓದಿ ಮುಗಿಸಿಲ್ಲವೆ? ನಿಮ್ಮ ದು:ಖಕ್ಕೆ ರಿಯಾಯಿತಿ ಕೊಡಿ. ಮುಂದೊಂದು ದಿನ ಓದುವೆನೆಂಬ ಆಶಾವಾದದೊಂದಿಗೆ ಪುಸ್ತಕಗಳನ್ನು ಸಂಗ್ರಹಿಸಿ.

ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಮುಖ್ಯಾಂಶಗಳು,

* ಮಾರ್ಚ್ ೧೦ ರ ವರೆಗೆ ಈ ಮೇಳ ನಡೆಯುತ್ತದೆ. ಸಮಯ ಬೆಳಗ್ಗೆ ೧೦:೩೦ ರಿಂದ ರಾತ್ರಿ ೮ ರ ವರೆಗೆ. ಇನ್ನೆರಡೇ ದಿನ ಉಳಿದಿರುವುದು ನೆನಪಿರಲಿ!
* ಮಳಿಗೆಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಮಳಿಗೆಗಳ ಮೇಲಿನ ಮರಗಳ ನೆರಳು, ಪುಸ್ತಕಾಭಿಮಾನಿಗಳ ದಣಿವನ್ನು ಕಡಿಮೆ ಮಾಡಿವೆ.
ಮತ್ತು ನೂಕು ನುಗ್ಗಲು ಕಡಿಮೆ. (ಇದು ಒಂದು ರೀತಿ ದು:ಖದ ಸಮಾಚಾರವೂ ಹೌದು!)
* ತ ರಾ ಸು ಮತ್ತು ಅ ನ ಕೃ ರವರ ಎಲ್ಲಾ ಪುಸ್ತಕಗಳೂ ೨೫% ರಿಯಾಯಿತಿಯಲ್ಲಿ ಎರಡು ಪ್ರತ್ಯೇಕ ಮಳಿಗೆಗಳಲ್ಲಿ ದೊರೆಯುತ್ತಿವೆ.
* ಮೈಸೂರು ಪ್ರಸಾರಾಂಗದ ಪುಸ್ತಕ ಮಳಿಗೆಯಲ್ಲಿ, ಉತ್ತಮ ಪುಸ್ತಕಗಳಿವೆ. ಉದಾ: ಬಿ ಎಂ ಶ್ರೀ ಯವರ ಸಮಗ್ರ ಸಾಹಿತ್ಯ, ಸಾಮಾನ್ಯವಾಗಿ ಇವುಗಳ
ದರ ಹೆಚ್ಚಿದ್ದರೂ ೩೫% ರಿಯಾಯಿತಿಯಲ್ಲಿ ಕೊಳ್ಳಲು ಬಹಳಷ್ಟು ಅನುಕೂಲ.
* ಸಪ್ನಾ ಕೂಡ ತಮ್ಮ ಪ್ರಕಾಶನದ ಪುಸ್ತಕಗಳನ್ನು ೨೫% ರಿಯಾಯಿತಿ ದರದಲ್ಲಿ ಮಾರುತ್ತಿದೆ.
* ಹಂಪಿ ವಿಶ್ವವಿದ್ಯಾಲಯದ ಮಳಿಗೆಯಲ್ಲಿ ಒಳ್ಳೆಯ ಪುಸ್ತಕಗಳಿವೆ. ೫೦% ರಿಯಾಯಿತಿ.
* ಸರ್ಕಾರಕ್ಕೆ ಸಂಬಂಧಿಸಿದ ಮುದ್ರಕರು ಸಾಮಾನ್ಯ ವಾಗಿ ೫೦% ರಿಂದ ೬೦% ರಿಯಾಯಿತಿ. ನವಕರ್ನಾಟಕ ಕೂಡ ೫೦% ರಿಯಾಯಿತಿ ದರದಲ್ಲಿ
ಪುಸ್ತಕಗಳನ್ನು ಮಾರುತ್ತಿವೆ. ಗೀತ ಪ್ರಕಾಶನ ಮೈಸೂರು:೨೫%
* ಸಂಗೀತ ಪ್ರೇಮಿಗಳಿಗಂತೂ (ಕರ್ನಾಟಕ ಮತ್ತು ಹಿಂದೂಸ್ತಾನಿ) ರಸದೌತಣ. ಸಂಗೀತಕ್ಕೆ ಸಂಬಂಧಿಸಿದ ಬಹಳಷ್ಟು ಪುಸ್ತಕಗಳು ಪ್ರದರ್ಶನದಲ್ಲಿವೆ.
ಮತ್ತೂ ಲಹರಿ ಸಂಸ್ಥೆ ಕೂಡ ಮಳಿಗೆಯನ್ನು ತೆರೆದು ೧೦% ರಿಯಾಯಿತಿ ದರದಲ್ಲಿ ಸಿ ಡಿ ಗಳನ್ನು ಮಾರುತ್ತಿದೆ.
* ತುಳು ನಾಡಿನವರಿಗೆ ಸಂತಸವನ್ನು ತರಬಲ್ಲ, ಗೋವಿಂದ ಪೈ ಸಂಶೋಧನಾ ಸಂಸ್ಥೆಯವರ ಮಳಿಗೆ ಮಳಿಗೆ ಮತ್ತು ದ್ರಾವಿಡ ವಿಶ್ವವಿದ್ಯಾನಿಲಯದ
ಮಳಿಗೆಗಳು, ತುಳು ಮತ್ತು ಯಕ್ಷಗಾನ ಸಂಬಂಧಿಸಿದ ಬಹಳಷ್ಟು ಉತ್ತಮ ಪುಸ್ತಕಗಳನ್ನು ೨೫% ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.
* ಆಧ್ಯಾತ್ಮಿಕ ಪುಸ್ತಕ ಮಳಿಗೆಗಳೂ ಕೂಡ ಇವೆ.
* ರವಿ ಬೆಳಗೆರೆ ಅಭಿಮಾನಿಗಳಿಗೆ, ಭಾವನ ಪ್ರಕಾಶನ ಕೂಡ ಮಳಿಗೆಯನ್ನು ತೆರೆದಿದೆ.
* ಅಂಕಿತ, ಲಂಕೇಶ್ ಮತ್ತು ಅಭಿನವ ಪ್ರಕಾಶಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
* ಆಂಗ್ಲ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇಲ್ಲ. ತಿಂಡಿ ತಿನಿಸುಗಳ ಮಳಿಗೆಗಳಿಲ್ಲ! :)

ಕೊನೆಗೆ,
ಫೋಟೊ ಒದಗಿಸಿಕೊಟ್ಟ ರವೀಶನಿಗೆ ಧನ್ಯವಾದಗಳು.

ಶುಕ್ರವಾರ, ಮಾರ್ಚ್ 06, 2009

ಮಿದ್ದಿಟ್ಟು

ಹಲವು ವರ್ಷಗಳ ಹಿಂದಿನ ಮಾತು. ಬಾಲ್ಯದ ನೆನಪುಗಳು. ನಾನು ಬೆಂಗಳೂರಿಗೆ ಪ್ರೌಢ ಶಿಕ್ಷಣಕ್ಕೆಂದು ಬಂದ ಹೊಸತು. ಊಟ ಆಯಿತೇ ಎಂದು ಕೇಳುವ ವಾಡಿಕೆಯನ್ನು ನಾನು ಬಹಳವಾಗಿ ಗೆಳೆಯರ ಮೇಲೆ ಪ್ರಯೋಗಿಸುತ್ತಿದ್ದೆ. ಈ ಪ್ರಶ್ನೆಗೆ ಸಮಯದ ಮಹತ್ವವಿವೆ ಎಂಬುದರ ಬಗ್ಗೆ ನನಗೆ ಅರಿವಿಲ್ಲ. ಒಂದು ದಿನ ನನ್ನಗೆ ಗೆಳಯನನ್ನು ಬೆಳಗ್ಗೆಯೇ ಊಟ ಆಯಿತೇ ಎಂದು ಕೇಳಿದ ಕ್ಷಣ, ಅವ ನಕ್ಕು ಬೆಳಗ್ಗೆ ತಿನ್ನುವುದು ತಿಂಡಿ, ಊಟವಲ್ಲ ಎಂಬ ಙ್ನಾನವನ್ನು ನನ್ನ ತಲೆಗೆ ತುಂಬಿದ. ಆದರೂ ಈ ವಿಷಯವನ್ನು ಕರಗತ ಮಾಡಿಕೊಳ್ಳಲು ಮತ್ತು ಈ ಪ್ರಶ್ನೆ ಕೇಳುವಾಗ ತಪ್ಪಾಗದಂತೆ ಎಚ್ಚರ ವಹಿಸಲು ಬಹಳ ಸಮಯ ಹಿಡಿಯಿತು. ನಾನು ನಮ್ಮ ಊರಿನಲ್ಲಿರಬೇಕಾದರೆ, ನಮಗೆ ತಿಂಡಿ ಊಟದ ವ್ಯತ್ಯಾಸವೇ ಗೊತ್ತಿರಲಿಲ್ಲ. ನಮ್ಮ ಬೆಳಗಿನ (ಉಪಹಾರ)ಊಟ ಮುದ್ದೆ, ಅನ್ನ ಸಾರು. ಮಧ್ಯಾಹ್ನ ಕೂಡ ಅದೆ. ಎಂದೋ ತಪ್ಪಿದರೆ ಅಪರಾಹ್ನ ರೊಟ್ಟಿಯಿರುತ್ತಿತ್ತು. ರಾತ್ರಿ ಕೂಡ ಅದೇ ಪಾಕಗಳು. ಇಂತಹ ವಾತಾವರಣದಲ್ಲಿ ನನಗೆ ಊಟ ಮತ್ತು ಬೆಳಗಿನ ಲಘು ಉಪಹಾರದ ವ್ಯತ್ಯಾಸ ಹೇಗೆ ತಿಳಿಯಬೇಕು? ಅದೇನೆ ಇರಲಿ ವಿಷಯಕ್ಕೆ ಬರುತ್ತೇನೆ.

ಇಂದು ನಾನು ಬರೆಯುವುದು ಒಂದು ಸರಳ ಮತ್ತು ವಿಶಿಷ್ಟ ಪಾಕದ ಬಗ್ಗೆ. ಇದನ್ನು ಸಾಮಾನ್ಯವಾಗಿ ರಾಗಿ ಬೆಳೆಯುವ ಪ್ರದೇಶದಲ್ಲಿ ತಯಾರಿಸುತ್ತಾರೆ ಎಂಬುದು ನನ್ನ ನಂಬಿಕೆ. ಈ ಪಾಕವನ್ನು ಸಾಮಾನ್ಯವಾಗಿ ಅಪರಾಹ್ನದ ಹೊತ್ತಿನಲ್ಲಿ, ಸಮಯದ ಅಭಾವವಿರುವಾಗ, ಅಡುಗೆ ಮಾಡಲು ಆಲಸ್ಯವಿರುವಾಗ ಅಥವಾ ಅಡುಗೆ ಮಾಡುವ ಶಕ್ತಿಗುಂದಿರುವಾಗ (ಅಂದರೆ ಮೈಯಲ್ಲಿ ಹುಷಾರಿಲ್ಲದೆ ಇರುವಾಗ) ಸಿದ್ಧಪಡಿಸುತ್ತಾರೆ. ಹೇಗೆ?

ಈ ಪಾಕಕ್ಕೆ ಪ್ರಾಥಮಿಕವಾಗಿ/ಮುಖ್ಯವಾಗಿ ಬೇಕಾಗಿರಿವುದು ತಂಗಳು ಹಿಟ್ಟು. ಇಲ್ಲಿ ಹಿಟ್ಟು ಅಂದರೆ ರಾಗಿ ಮುದ್ದೆ ಎಂದು ತಿಳಿಯಬೇಕು. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ರಾಗಿ ಮುದ್ದೆಯನ್ನು ಹಿಟ್ಟು ಅಥವಾ ಇಟ್ಟು ಎಂದೇ ಕರೆಯುವುದು.ಇಲ್ಲಿ ಗಮನದಲ್ಲಿಡಬೇಕಾದ ಅಂಶ ಎಂದರೆ ಹಿಟ್ಟು ತಂಗಳಾಗಿರಬೇಕು, ಬಿಸಿ ಮುದ್ದೆಯಿಂದ ಈ ಪಾಕವನ್ನು ಸಿದ್ಧಪಡಿಸಲಾಗುವುದಿಲ್ಲ! ಇನ್ನುಳಿದ ಪದಾರ್ಥಗಳು, ಹಸಿ ಮೆಣಸಿನ ಕಾಯಿ, ಕಲ್ಲುಪ್ಪು ಅಥವಾ ಪುಡಿ ಉಪ್ಪು, ಹಸಿ ಬೆಳ್ಳುಳ್ಳಿ. ಈ ಮೂರೂ ಪದಾರ್ಥಗಳನ್ನು ಒಟ್ಟಾಗಿ ಅರೆದುಕೊಳ್ಳಬೇಕು. ಒಳಕಲ್ಲು ಮತ್ತು ರುಬ್ಬಿನ ಗುಂಡಿ/ಕಲ್ಲಿನಿಂದ ಅರೆದರೆ ರುಚಿ ಹೆಚ್ಚಾಗುತ್ತದೆ. ನಂತರ ತಂಗಳಿಟ್ಟನ್ನು, ಅರೆದುಕೊಂಡ ಈ ಖಾರಕ್ಕೆ ಚೆನ್ನಾಗಿ ಮಿದ್ದಬೇಕು. ಅಷ್ಟೆ ಮಿದ್ದಿಟ್ಟು ಸಿದ್ಧ!

ಸಾಮಾನ್ಯವಾಗಿ ಮುದ್ದೆಯನ್ನು ಸಾರಿನಲ್ಲಿ ಅದ್ದಿ ಗುಳುಂ ಮಾಡುತ್ತೇವೆ. ಆದರೆ ಈ ಮಿದ್ದಿಟ್ಟನ್ನು ಅಗೆದು ತಿನ್ನುವುದರಿಂದ ಬಹಳ ವಿಶಿಷ್ಟ ಮತ್ತು ತುಂಬಾ ರುಚಿಕರವಾಗಿರುತ್ತದೆ. ನೆಂಚಿಗೆಕೆ ಈರುಳ್ಳಿಯಿದ್ದರಂತೂ ರುಚಿ ದ್ವಿಗುಣವಾಗುತ್ತದೆ. ನೀವು ಎಂದಾದರು ಇದನ್ನು ಸವಿದಿದ್ದೀರ? ನೀವು ರಾಗಿ ಮುದ್ದೆ, ಹುರಿಟ್ಟು (ಬೆಲ್ಲದ ಸಿಹಿ ತಿಂಡಿ), ರಾಗಿ ಉಪ್ಪಿಟ್ಟು ಮುಂತಾದುವುಗಳನ್ನು ತಿಂದು ಮೆಚ್ಚಿದ್ದರೆ ಇದನ್ನೂ ಒಮ್ಮೆ ಪ್ರಯತ್ನಿಸಿ.

ಬುಧವಾರ, ಮಾರ್ಚ್ 04, 2009

ಗುಲಾಬಿ ಟಾಕೀಸ್

ಮೊದಲ ಬಾರಿ ಕೇಳಿದಾಗ ಈ ಚಿತ್ರದ ಹೆಸರು ನನಗೆ ಅಷ್ಟು ಹಿಡಿಸಿರಲಿಲ್ಲ. ಯಾವುದೋ ತೊಂದರೆಯಿಂದ ಪಿ ವಿ ಆರ್ ಚಿತ್ರಮಂದಿರದಲ್ಲಿ ಈ ಚಲನ ಚಿತ್ರ ಬಿಡುಗಡೆಯಾದಗ ನೋಡುವ ಸೌಭಾಗ್ಯ ಸಿಕ್ಕಿರಲಿಲ್ಲ. ಹೋದ ಭಾನುವಾರ ಅವಿರತ ತಂಡದವರು ಮಲ್ಲೇಶ್ವರಂ ೧೮ ನೇ ತಿರುವಿನಲ್ಲಿರುವ ಶ್ರೀಗಂಧ ಎಂಬ ಸಣ್ಣ ಚಿತ್ರಮಂದಿರದಲ್ಲಿ ಈ ಚಲನ ಚಿತ್ರ ಪ್ರದರ್ಶನ ಮತ್ತು ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರ ಜೊತೆ ಸಂವಾದವನ್ನು ಏರ್ಪಡಿಸಿದ್ದರು. ಗೆಳೆಯ ರವೀಶನ ಸಹಾಯದಿಂದ ನನಗೆ ಆ ಚಲನಚಿತ್ರ ನೋಡುವ ಅವಕಾಶ ದೊರೆಯಿತು.

ಕುಂದಾಪುರದ ಸನಿಹ ಕೆಲವೊಂದದು ದ್ವೀಪಗಳಲ್ಲಿ ಚಿತ್ರೀಕರಿಸಿರುವ ಈ ಚಲನಚಿತ್ರ, ದಕ್ಷಿಣ ಕನ್ನಡದ ಮೀನು ಮಾರುಕಟ್ಟೆಯಲ್ಲಿ ಚಿತ್ರದ ನಾಯಕಿ ಉಮಾಶ್ರೀ ಮೀನು ಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ಕುಂದಾಪುರದ ಆಡು ಮಾತಿನ ಸಂಭಾಷಣೆಯ ಸೊಡಗಿನಿಂದ ಕೂಡಿ, ದಕ್ಷಿಣ ಕನ್ನಡದ ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಕೋನದಲ್ಲಿ ಚಿತ್ರ ಮುಂದುವರೆಯುತ್ತಾ ಹೋಗುತ್ತದೆ. ಹಲವು ಕೋಮುಗಳಿಗೆ ಸೂಕ್ಷ್ಮವೆನಿಸಬಲ್ಲ ಸಂಗತಿಯನ್ನು ಕಾಸರವಳ್ಳಿಯವರು, ಯಾರಿಗೂ ನೋವಾಗದಂತೆ, ಪ್ರೇಕ್ಷಕರಿಗೆ ಕೊಡಬೇಕಾದ ಸಂದೇಶವನ್ನು ಪರಿಣಾಮಕಾರಿಯಾಗಿ ಕೊಟ್ಟಿದ್ದಾರೆ. ಇಷ್ಟು ಚಲನಚಿತ್ರದ ಸಂಕ್ಷಿಪ್ತ ವಿವರ.

ಗುಲಾಬಿ ಊರಿನಲ್ಲಿ ಅಲ್ಪಸಂಖ್ಯಾತ ಕೋಮಿಗೆ ಸೇರಿದವಳು. ಹೆರಿಗೆ ಮಾಡುವುದರಲ್ಲಿ ನುರಿತ ಕೈ. ಗಂಡ ’ಮೂಸ ಕಾಕ’ ಇನ್ನೊಬ್ಬಳ ಜೊತೆ ವಾಸಿಸುತ್ತಿರುತ್ತಾನೆ. ಸಂಜೆ ೬ ಘಂಟೆಯಾದ ನಂತರ ಗುಲಾಬಿಗೆ ಪೇಟೆಯಲ್ಲಿ ಚಲನ ಚಿತ್ರ ನೋಡುವ ಹುಚ್ಚು. ಹೀಗೊಮ್ಮೆ ಗುಲಾಬಿ ಸಿನಿಮಾ ನೋಡುತ್ತಿರುವಾಗ, ಊರಿನ ಒಬ್ಬ ಸಾಹುಕಾರ ಹೆಂಗಸಿನ ಮಗಳಗಿ ಹೆರಿಗೆ ಬೇನೆಯುಂಟಾಗುತ್ತದೆ. ಗುಲಾಬಿ ತಾನು ಸಿನೆಮಾ ನೋಡುವಾಗ ಹೆರಿಗೆ ಮಾಡುವುದಿಲ್ಲವೆಂದು ನಿರಾಕರಿಸುತ್ತಾಳೆ.ಗುಲಾಬಿಯನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ, ಬಣ್ಣದ ಟಿ ವಿ ಕೊಡಿಸುವ ಆಮಿಷವೊಡ್ಡಿ ಹೆರಿಗೆಯನ್ನು ಮಾಡಿಸುತ್ತಾರೆ.ಅಂದಿನಿಂದ ಗುಲಾಬಿಗೆ ಮನೆಯಲ್ಲೇ ಚಲನಚಿತ್ರಗಳನ್ನು ನೋಡುವ ಖುಷಿ! ಆ ದ್ವೀಪದ ಜನರಿಗೆಲ್ಲಾ ಮೊದಲಿಗೆ ಗುಲಾಬಿ ಮನೆಯಲ್ಲಿ ಟಿ ವಿ ನೋಡಲು ಮುಜುಗರವಾದರೂ, ಕ್ರಮೇಣ ಮನೆಯೊಳಗೆ ಹೊಕ್ಕು ಟಿ ವಿ ನೋಡಲು ಪ್ರಾರಂಭಿಸುತ್ತಾರೆ.ಹೀಗೆ ಗುಲಾಬಿ ತನ್ನೂರಿನ ಜನರ ಜೊತೆ ಒಬ್ಬಳಾಗಿ ಸಹಬಾಳ್ವೆಯನ್ನು ನಡೆಸುತ್ತಿರುತ್ತಾಳೆ.

ಪರ ಊರಿನ ಸುಲೈಮಾನ್ ಸಾಹುಕಾರ, ದುಬೈನಿಂದ ಹರಿದು ಬರುವ ಹಣದಿಂದ, ಯಾಂತ್ರೀಕೃತ ಮೀನುಗಾರಿಕೆಯನ್ನು ನಡೆಸುತ್ತಿರುತ್ತಾನೆ. ಮೂಸಾ ಕಾಕ ಸುಲೈಮಾನ್ ಸಾಹುಕಾರನ ಭಂಟ. ಇದರಿಂದ ಮೀನುಗಾರಿಕೆಯನ್ನೇ ನಂಬಿದ ನೆರೆ ಹೊರೆಯ ಸ್ಥಳೀಯ ಜನರಿಗೆ ತೊಂದರೆ, ಅವರ ಹತ್ತಿರ ಸಾಹುಕಾರನಲ್ಲಿರುವ ಯಂತ್ರಗಳಿಲ್ಲ. ಇದರಿಂದ ಸ್ಥಳೀಯರಿಗೂ, ಸುಲೈಮಾನ್ ಕಡೆಯವರಿಗೂ ಸಣ್ಣ ಸಣ್ಣ ತಿಕ್ಕಾಟಗಳು ನಡೆಯುತ್ತಲೇ ಇರುತ್ತವೆ.

ಹೀಗಿರುವಾಗ, ಗುಲಾಬಿಯ ಮನೆಯಲ್ಲಿ ಧಾರಾವಾಹಿಯ ಪ್ರಭಾವಕ್ಕೊಳಗಾಗಿ ಊರಿನ ಸ್ಥಳೀಯ ಕೋಮಿನ ಯುವತಿಯೊಬ್ಬಳು ಕನಸುಗಳನ್ನು ಕಟ್ಟಿ ಊರಿನಿಂದ ಪರಾರಿಯಾಯಾಗುತ್ತಾಳೆ. ಅದೇ ಸಮಯದಲ್ಲಿ ಮೂಸ ಕಾಕ ಕೂಡ ಕಾಣೆಯಾಗುತ್ತಾನೆ. ಮುಂದೆ ಏನಾಗುತ್ತದೆ, ಚಲನ ಚಿತ್ರ ನೋಡಿ ಸವಿದರೇ ಚಂದ.

ಹೀಗೆ ಧಾರವಾಹಿಗಳು, ಕಾರ್ಗಿಲ್ ಯುದ್ಧದ ಸುದ್ದಿಗಳು ಜನರನ್ನು ಹೇಗೆ ಪ್ರಭಾವಿಸುತ್ತವೆ? ಜನ ತಮಗೆ ಸಂಬಂಧವಿಲ್ಲದ ತೊಂದರೆಗಳಲ್ಲಿ ಹೇಗೆ ಸಿಕ್ಕಿಕೊಳ್ಳುತ್ತಾರೆ. ಇಂತಹ ಪ್ರಭಾವಗಳಿಂದ ಜನರಲ್ಲಿ ಮತ್ತೊಬ್ಬರ ಮೇಲೆ ಹೇಗೆ ಸಂಶಯ ಹುಟ್ಟುತ್ತದೆ? ಇಂತಹ ಸಂಧರ್ಭಗಳನ್ನು ಕೆಲವರು ತಮ್ಮ ಹಿತಾಸಕ್ತಿಗೆ ಹೇಗೆ ಬಳಸಿಕೊಳ್ಳುತ್ತಾರೆ? ಇವುಗಳನ್ನೆಲ್ಲಾ ಕಾಸರವಳ್ಳಿಯವರು ಅಚ್ಚುಕಟ್ಟಾಗಿ, ಮನಸ್ಸಿಗೆ ಹತ್ತಿರವಾಗಿ ತೋರಿಸಿದ್ದಾರೆ.

ವೈದೇಹಿಯವರ ಒಂದು ಕಥೆಯಿಂದ ಪ್ರಭಾವಿತಗೊಂಡು, ಕಾಸರವಳ್ಳಿಯವರು ಚಿತ್ರಕ್ಕೆ ಕಥೆಯನ್ನು ಚಲನಚಿತ್ರಕ್ಕೆ ಮಾರ್ಪಡಿಸಿದ್ದಾರೆ. ಒಬ್ಬಬ್ಬರೂ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದೆ. ಎಲ್ಲರೂ ಅನುಭವಿಸಿ ಅಭಿನಯಿಸಿದ್ದಾರೆ. ಉಮಾಶ್ರೀಯವರದಂತೂ ಜೀವನ ಶ್ರೇಷ್ಠ ಅಭಿನಯ ಎನ್ನಬಹುದು.

ಸಂಭಾಷಣೆ ಅದ್ಭುತ, ಚಿತ್ರೀಕರಣಕ್ಕೆ ಆಯ್ದುಕೊಂದ ಪ್ರದೇಶ ಚಿತ್ರಕ್ಕೆ ಬಹಳ ಪೂರಕವಾದದ್ದು. ಛಾಯಾಗ್ರಹಣ ಕೂಡ ಚೊಕ್ಕಟವಾಗಿದೆ. ಸಂವಾದದಲ್ಲಿ ಇವನ್ನೆಲ್ಲ ಹೊಗಳಿಕೆಯಂತೆ ಗಿರೀಶ್ ಕಾಸರವಳ್ಳಿಯವರಿಗೆ ಹೇಳಿದರೆ, ಅವರು ನಿರಾಕರಿಸುತ್ತಾರೆ. ಅವರ ಪ್ರಕಾರ ಈ ಅಂಶಗಳು (ಉತ್ತಮ ಸಂಭಾಷಣೆ, ಚಿತ್ರೀಕರಣ ಪ್ರದೇಶದ ಆಯ್ಕೆ ಇತ್ಯಾದಿ) ಯಾವುದೇ ಚಲನ ಚಿತ್ರದ ಮೂಲ ಅವಶ್ಯಕತೆಗಳು. ಇವೆಲ್ಲಾ ವಿಶೇಷವಾಗಿ ಹೊಗಳಿಸಿಕೊಳ್ಳುವ ಅಂಶಗಳಲ್ಲವೆನ್ನುತ್ತಾರೆ. ಚಿತ್ರದ ನಿರೂಪಣೆ, ಸಂಕಲನ, ಹಿನ್ನಲೆಯಲ್ಲಿ ಬರುವ ಸಂಗೀತ ಎಲ್ಲವೂ ಚಂದ. ಚಲನಚಿತ್ರದ ಹೆಸರೂ ಕೂಡ ಸುಂದರವಾಗಿದೆ.ಚಿತ್ರದ ಎಲ್ಲಾ ವಿಭಾಗಗಳಲ್ಲೂ ಅತ್ಯಂತ ಆಸಕ್ತಿಯಿಂದ ಮಾಡಿದ ಚಿತ್ರವಿದು.

ಗಿರೀಶ್ ಕಾಸರವಳ್ಳಿಯವರೇ ಹೇಳಿದಂತೆ, ಅಷ್ಟು ಸೌಂದರ್ಯಭರಿತ ಪ್ರದೇಶದಲ್ಲಿ ಚಿತ್ರೀಕರಿಸಿದರೂ, ಆ ಸೌಂದರ್ಯವನ್ನು ಆದೊಷ್ಟು ಮರೆ ಮಾಚಲು ಪ್ರಯತ್ನಿಸಿದ್ದಾರಂತೆ, ಕಾರಣ ತಾವು ಹೇಳಬೇಕಾದ ಸಂದೇಶಕ್ಕೆ ಆ ಸೌಂದರ್ಯ ಅಡ್ಡಿ ಬರಬಾರದೆಂದು. ಚಿತ್ರದ ಸಂದೇಶ ಮುಖ್ಯವಾಗಬೇಕು, ಸೂರ್ಯಾಸ್ತ ಅಥವಾ ಸೂರ್ಯೋದಯದಲ್ಲಿ ಪ್ರೇಕ್ಷಕ ಗಮನ ಬದಲಾಗಬಾರದಂತೆ.

ಕೊನೆಯದಾಗಿ, ಇದು ಬಹಳ ಅತ್ಯುತ್ತಮ ಚಿತ್ರ. ೫ ಕ್ಕೆ ೫ ಅಂಕ ಕೊಟ್ಟೆ ನಾನು. ಅವಕಾಶ ಸಿಕ್ಕರೆ ತಪ್ಪದೆ ನೋಡಿ. ನಿಮ್ಮ ಅಭಿಪ್ರಾಯವನ್ನು ನಿಷ್ಠುರವಾಗಿ ತಿಳಿಸಿ. ಅವಕಾಶ ಸಿಕ್ಕರೆ ನಾನು ಮತ್ತೊಮ್ಮೆ ನೋಡುತ್ತೇನೆ.

ಸೋಮವಾರ, ಮಾರ್ಚ್ 02, 2009

ಪ್ರತಾಪ್ ಸಿಂಹ ಹೇಳಿದ ದೂರಸಂಪರ್ಕ (Telecommunications) ಪಾಠ

ಭೂತದ ಬಾಯಲ್ಲಿ ಭಗವದ್ಗೀತೆ

ಪ್ರತಾಪ್ ಸಿಂಹರ ಈ ಶನಿವಾರದ ಲೇಖನ ಓದಿದ ಮೇಲೆ ನನಗೆ ಮೊದಲು ನೆನಪಿಗೆ ಬಂದಿದ್ದು, ಉಪೇಂದ್ರ ಚಲನಚಿತ್ರದಲ್ಲಿ "ಹೌದು ನಾನು ಕಚಡ, ಲೋಪರ್, ಪಾಪಿ ಏನೀಗ?" ಎಂದು ಉಪೇಂದ್ರ ಹೇಳುವುದು. ಈ ಕಥೆಯೂ ಹೀಗೆ ಆಯಿತು. ಹೋದ ವಾರ ಬರೆದಿದ್ದೇ ತಪ್ಪು ಕಣಯ್ಯ, ಬೇಕಿದ್ರೆ ಯಾರಾದ್ರು ಪರಿಣಿತರನ್ನು ಕೇಳಿ ಬರೆಯಪ್ಪ ಎಂದು ಎಷ್ಟೋ ಜನ ಹಿತೈಷಿಗಳು ಪ್ರತಾಪ್ ಸಿಂಹನಿಗೆ ತಿಳಿ ಹೇಳಿದರು. ಆದರೆ ಪ್ರತಾಪ್ ಕೇಳಲಿಲ್ಲ, ಹೌದು ನಾನು ಅಙ್ನಾನಿ, ನಾನು ಬರೆಯೋದೆಲ್ಲಾ ಅರ್ಥವಿಲ್ಲದ್ದೆ ನಿಮಗೇನು ಎಂಬಂತೆ ಈ ವಾರದ ಸಂಪಾದಕೀಯವನ್ನು ಅತಿ ಕೆಟ್ಟದಾಗಿ ಬರೆದಿದ್ದಾರೆ.

ನಾನು ಈ ೩ ನೇ ಪೀಳಿಗೆ ತಂತ್ರಙ್ನಾನವಾದ UMTS (ಪ್ರತಾಪ್ ಸಿಂಹ ಹೇಳುವ product development!) ಅಭಿವೃದ್ಧಿಯಲ್ಲಿ ಕೆಲಸ ಮಾಡಿರುವುದರಿಂದ ದೂರಸಂಪರ್ಕ ತಂತ್ರಙ್ನಾನವನ್ನು ಅಲ್ಪ ಸ್ವಲ್ಪ ಅರಿತಿರುವೆ. ಆದ್ದರಿಂದ ಪ್ರತಾಪ್ ಸಿಂಹನ ಲೇಖನ ಓದಿ ಪಕ ಪಕ ನಕ್ಕಿಬಿಟ್ಟೆ! ಇಸ್ರೋ ಅಭಿವೃದ್ಧಿಪಡಿಸಿದ ಉಪಗ್ರಹಗಳಿಂದ ತಂತಿರಹಿತ ದೂರಸಂಪರ್ಕ (mobile telecommunications) ಕ್ರಾಂತಿಯಾಗಿದೆ ಎಂದು ಪ್ರತಾಪ್ ಮಾಹಾಶಯರು ಹೇಳಿಬಿಟ್ಟಿದ್ದಾರೆ.ನಾವು ಮಾಡುವ ಮೊಬೈಲ್ ಕರೆಗಳು ಈ ಉಪಗ್ರಹಗಳ ಮೂಲಕವೇ ಹಾದು ಹೋಗುವುದಂತೆ! :))

ಸ್ವಾಮಿ ಪ್ರತಾಪ್ ಸಿಂಹ, ನಾವು ಬಳಸುವ ಮೊಬೈಲ್ ಫೋನ್ ಗಳಿಗೂ, ಉಪಗ್ರಹಗಳಿಗೂ ಯಾವುದೇ ಸಂಬಂಧವಿಲ್ಲ. ಉಪಗ್ರಹ ಚಾಲಿತ ಫೋನಗಳನ್ನು (satellite phone) ಸಾಮಾನ್ಯವಾಗಿ ಸೇನೆಯಲ್ಲಿ ಬಳಸುತ್ತಾರೆ. ಇತ್ತೀಚೆಗೆ ಉಗ್ರರು ಕೂಡ ಈ ಫೋನ್ ಗಳನ್ನು ಬಳಸುತ್ತಿರುವುದು ದುರದೃಷ್ಟಕರ.ಇನ್ನು ಬಹಳ ಸರಳ ಸಾಲುಗಳಲ್ಲಿ ಹೇಳುವುದಾದರೆ, ನಾವು ಬಳಸುವ ಮೊಬೈಲ್ ಫೋನ್ ಗಳು ಒಂದು ನಿರ್ಧಿಷ್ಟ ತರಂಗಾಂತರ ಶ್ರೇಣಿಯಲ್ಲಿ ವಿದ್ಯುತ್ ತರಂಗಗಳನ್ನು ಹಾಯಿಸಿ, (ಮೊಬೈಲ್ ಫೋನ್ ನಿಂದ base station ನ ವರೆಗೆ) ನಂತರ ಎಲ್ಲವೂ ತಂತಿಯ ಮೂಲಕ digital signal ಗಳನ್ನು ಕಳಿಸಿ ಕೆಲಸ ಮಾಡೂತ್ತವೆ. ಇದಕ್ಕೂ ಉಪಗ್ರಹಗಳಿಗೂ ಯಾವುದೇ ಸಂಬಂಧವಿಲ್ಲ. ಅಲ್ಪ ಸ್ವಲ್ಪ ಕಲಿತ ನಮಗೇ ತಂತ್ರಙ್ನಾನದ ಬಗ್ಗೆ ಬರೆಯುವಾಗ ಹೆದರಿಕೆಯಾಗುತ್ತದೆ. ಎಲ್ಲಿ ತಪ್ಪಾಗುವುದೋ ಎಂದು. ಪ್ರತಾಪ್ ನೋಡಿ, ಮೈ ಚಳಿ ಬಿಟ್ಟು ಎಲ್ಲವನ್ನೂ ಬೆತ್ತಲೆಯಾಗಿ ಬರೆದುಬಿಟ್ಟಿದ್ದಾರೆ!

ಮತ್ತದೇ ತಲೆ ಕೆಟ್ಟ ವಿತಂಡ ವಾದಕ್ಕೆ ಉತ್ತರಿಸುವುದಕ್ಕೆ ಬೇಸರ. ಆದರೂ ಕೆಲವೊಂದು ವಿಷಯಗಳನ್ನು ಸ್ಪಷ್ಟಪಡಿಸಬೇಕೆಂಬ ಬಯಕೆ.

ಪ್ರತಾಪ್ ಸಿಂಹ, ಪೇಟೆಂಟ್ ನಲ್ಲಿ ಚಿಲ್ಲರೆ ಪೇಟೆಂಟ್, ನಗದು ಪೇಟೆಂಟ್ ಗಳೆಂಬ ಎರಡು ವಿಧಗಳಿಲ್ಲಪ್ಪ. ಇನ್ಫೋಸಿಸ್ ಬಳಿ ಇರುವುದೆಲ್ಲಾ ಚಿಲ್ಲರೆ ಪೇಟೆಂಟ್ ಅಂತೆ. ಇಂತಹ ಒಂದು ಹೇಳಿಕೆ ಕೊಡುವ ಅರ್ಹತೆಯಾದರೂ ಪ್ರತಾಪ್ ಗಿದೆಯೆ? ತಾನು ಓದಿರುವುದೇನು? ತಾನು ಬರೆಯುತ್ತಿರುವುದೇನು ಎಂಬುದರ ಬಗ್ಗೆ ಸ್ವಲ್ಪ ವಿವೇಚನೆ ಇದ್ದಿದ್ದರೆ ಇಂತಹ ಪ್ರಮಾದ ಆಗುತ್ತಿರಲಿಲ್ಲವೇನೋ?

ವಿಜಯಕರ್ನಾಟದ ಆರ್ಥಿಕ ಸುದ್ದಿಯ ವಿಭಾಗದಲ್ಲಿ ಹಿಂದಿನ ದಿನದ ಎಕನಾಮಿಕ್ ಟೈಮ್ಸ್ ಸುದ್ದಿಯ ಹಳಸನ್ನು ಪ್ರಕಟಿಸುವುದಕ್ಕಿಂತ, ಬೆನ್ನೆಟ್ಟೆನ್ ಕೋಲ್ಮಾನ್ ನಿಂದ ಹೊರಬಂದು, ನವೀನ ಪತ್ರಿಕೆಯನ್ನು ಪ್ರಾರಂಭಿಸುವ ತಾಕತ್ತಿದೆಯೆ ಪ್ರತಾಪ್ ಸಿಂಹನಿಗೆ? ಇಲ್ಲಾ! ಎಲ್ಲದ್ದಕ್ಕೂ ತನ್ನದೇ ಆದ ಸಮಯ ಹಿಡಿಯುತ್ತೆ. ಮಾ. ತಂ ಕ್ಷೇತ್ರದಲ್ಲೂ ಅಷ್ಟೆ, ಒಂದೇ ದಿನದಲ್ಲಿ R&D ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಲಾಗುವುದಿಲ್ಲ. ಈ ನಿಟ್ಟಿನಲ್ಲಿ ಬಹಳಷ್ಟು ಪ್ರಯತ್ನಗಳಿ ನಡೆದಿವೆ. ಉದಾಹರಣೆಗೆ "ತೇಜಸ್ ನೆಟ್ವರ್ಕ್ಸ್" ಪಕ್ಕಾ ದೇಶೀಯ product ಸಂಸ್ಥೆ. ಈ ರೀತಿಯ ಸಂಸ್ಥೆಗಳು ನೂರಾರಿವೆ. ಆದರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಲು ಸಮಯ ಬೇಕಷ್ಟೆ. ಅಷ್ಟಕ್ಕೂ ಅಮೇರಿಕಾದಲ್ಲಿರುವಷ್ಟು ಉನ್ನತ ವ್ಯಾಸಂಗ ಮಹಾ ವಿದ್ಯಾಲಯಗಳು ಭಾರತದಲ್ಲಿ ಕಡಿಮೆ, ಮತ್ತು ಬಹಳಷ್ಟು ಸಂಶೋಧನೆ ನಡೆಯುವುದು ಉನ್ನತ ವ್ಯಾಸಂಗ ವಿದ್ಯಾಲಯಗಳಲ್ಲೇ.

ಇನ್ಫೋಸಿಸ್ ನ 'finacle' ಎಂಬ ಉತ್ಪನ್ನ (product) ಜಗತ್ಪ್ರಸಿದ್ಧ ಸ್ವಾಮಿ. ಇದನ್ನು ಬಹಳಷ್ಟು ಬ್ಯಾಂಕಗಳು ಬಳಸುತ್ತವೆ. ಮತ್ತೊಮ್ಮೆ ತಮ್ಮಲ್ಲಿ ವಿನಂತಿ, ತಮಗೆ ಗೊತ್ತಿಲ್ಲದ ಸಂಗತಿಗಳನ್ನು ಕೇಳಿ ತಿಳಿಯಿರಿ. ತಿಳಿದ ಮೇಲೆ ಅದನ್ನು ಚಿಲ್ಲರೆ ಎನ್ನುವ ದುರಹಂಕಾರ ಬೇಡ!

ಒಂದೇ ಸಾಲಿನಲ್ಲಿ ಪ್ರಾತಾಪ್ ಸಿಂಹನ ಸಂಪಾದಕೀಯದ ಬಗ್ಗೆ ಅಭಿಪ್ರಾಯ ಹೇಳುವುದಾದರೆ, "ಭೂತದ ಬಾಯಲ್ಲಿ ಭಗವದ್ಗೀತೆ"

ಬುಧವಾರ, ಫೆಬ್ರವರಿ 25, 2009

ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ,

ಪ್ರತಿದಿನದ ವಿಜಯಕರ್ನಾಟಕ ನನಗೆ ಮೊದಲ ಪುಟದಿಂದ ಶುರುವಾದರೆ, ಶನಿವಾರದ ವಿಜಯಕರ್ನಾಟಕ ಮಾತ್ರ ಸಂಪಾದಕೀಯದಿಂದ ಪ್ರಾರಂಭವಾಗುತ್ತದೆ-ಕಾರಣ: ಪ್ರತಾಪ್ ಸಿಂಹರ ಸಂಪಾದಕೀಯ. ತಾವು ಬರೆದ ಲೇಖನದ ತರ್ಕ ಭರ್ಜರಿಯಾಗಿದ್ದರೂ ಅಥವಾ ಬಾಲಿಷವಾಗಿದ್ದರೂ, ಬರೆಯುವ ಶೈಲಿ ಮತ್ತು ಉಪಯೋಗಿಸುವ ಭಾಷೆ ಮಾತ್ರ ಎಂದೂ ಹರಿತವಾಗಿರುತ್ತದೆ. ಎಷ್ಟೋ ಬಾರಿ ತಾವು "ವಿಕಿಪೀಡಿಯಾದಿಂದ" ಹೆಕ್ಕಿ ತೆಗೆದ ವಿಷಯಗಳನ್ನು ಕೂಡ ತಮ್ಮ ಬರವಣಿಗೆ ಶೈಲಿಗೆ ಬದಲಾವಣೆ ಮಾಡಿ ಲೇಖನವನ್ನು ಮೊನಚುಗೊಳಿಸುತ್ತಾರೆ. ಎಷ್ಟೋ ಬಾರಿ ತಾವು ಬರೆದ ವಿಷಯಗಳಲ್ಲಿ ತಿರುಳಿಲ್ಲದಿದ್ದರೂ, ಆ ವಿಷಯದ ಬಗ್ಗೆ ತಿಳುವಳಿಕೆ ತೀರ ಕಡಿಮೆ ಇರುವವರಿಗೆ ಆ ಲೇಖನ ಇಷ್ಟವಾಗಿ ಹೋಗುತ್ತದೆ. ಪ್ರತಾಪ್ ಸಿಂಹ ಹೋದ ಶನಿವಾರ ಬರೆದ ಸಂಪಾದಕೀಯದ ಮೇಲೆ ಕಣ್ಣಾಡಿಸಿದರೆ, ಮಾಹಿತಿ ತಂತ್ರಙ್ನಾನ, ಮಾಹಿತಿ ತಂತ್ರಙ್ನರ ಮತ್ತು ಜಾಕತಿಕ ಆರ್ಥಿಕ ಬಿಕ್ಕಟ್ಟಿನ ಬಗೆಗಿನ ತಮ್ಮ ಅಙ್ನಾನವನ್ನು ಸಂಪಾದಕೀಯದಲ್ಲಿ ಪ್ರದರ್ಶಿಸಿದ್ದಾರೆ! ಕೆಲವು ಪತ್ರಕರ್ತರು ಅರ್ಥವಿಲ್ಲದೆ ಮಾ.ತಂ ವನ್ನು ದೂಷಿಸುವ ಕೆಟ್ಟ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ. ಇದರಿಂದ ತಮ್ಮ ಮಾರುಕಟ್ಟೆ ಬೆಲೆಯನ್ನು ಹೆಚ್ಚಿಸಿಕೊಳ್ಳಬಹುದೆಂಬ ಕಲ್ಪನೆಯಲ್ಲಿ ಮುಳುಗಿರುವವರಿಗೆ ಈ ಲೇಖನ ಸ್ವಲ್ಪವಾದರು ಕಣ್ಣು ತೆರೆಸುತ್ತೇನೊ!

ಮೊದಲು ಪ್ರತಾಪ್ ಸಿಂಹ ರವರು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ಕೇವಲ ಮಾಹಿತಿ ತಂತ್ರಙ್ನಾನ ಕ್ಷೇತ್ರದಲ್ಲಿರುವ ಉದ್ಯೋಗಿಗಳಿಗೆ ಮಾತ್ರ ತಟ್ಟಿರುವುದು ಎಂಬ ತಮ್ಮ ತಪ್ಪು ವಾದವನ್ನು ತಿದ್ದಿಕೊಳ್ಳಬೇಕು. ಈ ಬಿಸಿ ತಟ್ಟಿದ್ದು ಮೊದಲು ಹಣಕಾಸು, ಬಂಡವಾಳ ಹೂಡಿಕೆ ಸಂಸ್ಥೆಗಳಿಗೆ. ಹಲವಾರು ಜನರು ಮೊದಲು ಕೆಲಸ ಕಳೆದುಕೊಂಡಿದ್ದು ಅಲ್ಲೇ! ಇದರ ಕಾರಣಗಳು ಈ ಲೇಖನದ ವ್ಯಾಪ್ತಿಗೆ ಸೇರಿಸುವುದು ಬೇಡ. ನಂತರ ರಿಯಲ್ ಎಸ್ಟೇಟ್ ಉದ್ಯಮಕ್ಕೆ. ಆಮೇಲೆ ಮಾಹಿತಿ ತಂತ್ರಙ್ನಾನ, ರೀಟೈಲ್, ಹಾಸ್ಪಿಟಾಲಿಟಿ, ಹೋಟೆಲ್, ಪ್ರವಾಸೊದ್ಯಮ, ಸಾರಿಗೆ, ಹೀಗೆ ಬಹಳಷ್ಟು ಎಲ್ಲಾ ಉದ್ಯಮಗಳಿಗೂ ಬಿಸಿ ಪಸರಿಸಿದ್ದು, ಎಲ್ಲಾ ಉದ್ಯಮಗಳಲ್ಲೂ ಜನರು ಕೆಲಸ ಕಳೆದುಕೊಂಡ ನಿದರ್ಶನಗಳಿವೆ. ಪತ್ರಕರ್ತರಿಗೆ ಸ್ವಲ್ಪ ವಿಶಾಲವಾಗಿ, ಕೂಲಂಕುಶವಾಗಿ ಅವಲೋಕಿಸುವ ಸಂಯಮ ಇರಬೇಕಿತ್ತು! ಬಹುಷ: ಈ ಬಿಕ್ಕಟ್ಟಿನ ಸುದ್ದಿಗಳನ್ನು ಮನೆಮನೆಗೆ (ಅಂತರ್ಜಾಲಕ್ಕಿಂತ ಸ್ವಲ್ಪ ನಿಧಾನವಾಗಿಯಾದರೂ) ತಲುಪಿಸುವ ಪತ್ರಿಕಾ ಮಾಧ್ಯಮಕ್ಕೆ ಇನ್ನೂ ಈ ಬಿಸಿ ತಟ್ಟಿಲ್ಲ ಎಂದೆನಿಸುತ್ತದೆ.ಅದಕ್ಕೇ ಪ್ರತಾಪ್ ಸಿಂಹರವರು ಬಹಳಷ್ಟು ಅರ್ಥವಿಲ್ಲದ ಮಾತುಗಳನ್ನು ತಮ್ಮ ಲೇಖನದಲ್ಲಿ ಪ್ರಲಾಪಿಸಿದ್ದಾರೆ! (ಆ ಲೇಖನಕ್ಕೆ ಇಲ್ಲಿ ಒತ್ತಿ).

ನಾನು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಓದುತ್ತಿದ್ದಾಗ, ದಿನ ಪತ್ರಿಕೆಗಳನ್ನು ಓದುತ್ತಿದ್ದುದು ಕಡಿಮೆ. ಯಾವಾಗಲಾದರೂ ಪತ್ರಿಕೆ ತೆಗೆದರೆ, "ನಿರುದ್ಯೋಗದ" ಬಗ್ಗೆ ಒಂದು ಲೇಖನ ಇದ್ದೇ ಇರುತ್ತಿತ್ತು. ನಿರುದ್ಯೋಗದ ವಿರುದ್ಧ ಹೋರಾಟಗಳು ನಿರಂತರ ನಡೆಯುತ್ತಿದ್ದವು. "ನಿರುದ್ಯೋಗ"ವೆಂಬ ಪದ ಅಂದಿನ ಯುವಕರ ನಾಲಿಗೆಯಲ್ಲಿ ತಾಂಡವವಾಡುತ್ತಿದ್ದ ಪದ ಎಂದರೆ ತಪ್ಪಾಗಲಾರದು! ಇಂದು ಈ ಪದದ ಬಳಕೆಯಿಂದ ಹಿಡಿದು, ನಿರುದ್ಯೋಗ ಸಮಸ್ಯೆಯೇ ಕಡಿಮೆಯಾಗಿದೆಯೆಂದರೆ, ಅದಕ್ಕೆ ಕಾರಣ ಜಾಗತೀಕರಣ ಮತ್ತು ಮಾಹಿತಿ ತಂತ್ರಙ್ನಾನದಲ್ಲಾದ ’ಕ್ರಾಂತಿ’. ಇದು ಸ್ವತಂತ್ರ ಪೂರ್ವ, ಸ್ವತಂತ್ರಾನಂತರ ನಡೆದ ಯಾವುದೇ ಕ್ರಾಂತಿಗಳಷ್ಟೇ ಮಹತ್ವವಾದದ್ದು. ೧೦ ವರ್ಷಗಳ ಹಿಂದಿದ್ದ ನಿರುದ್ಯೋಗದ ಪಿಡುಗನ್ನು ನೆನೆದರೆ ಆ ಮಹತ್ವ ಗೊತ್ತಾಗುತ್ತದೆ. ಮಾ.ತಂ ಬಂತು, ಊಟಕ್ಕೆ, ವಸತಿಗೃಹಗಳಿಗೆ, ಮನೆಗಳಿಗೆ, ಪತ್ರಿಕೆಗಳಿಗೆ, ಸಾರಿಗೆಗೆ, ಚಾಲಕರಿಗೆ, ಮೂಲಸೌಕರ್ಯಕ್ಕೆ ಎಲ್ಲದಕ್ಕೂ ಬೇಡಿಕೆ ಬಂತು. ಇದೇ ಸ್ವಾಮಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲು ಕಾರಣ! ಮಾ.ತಂ ನಿಂದ ಕೆಲವೊಂದು ವ್ಯತಿರಿಕ್ತ ಪರಿಣಾಮಗಳಾಗಿವೆ, ಮೂಲ ಸೌಕರ್ಯದ ನೆಪದಲ್ಲಿ ಮರಗಳು ಕಡಿಯಲ್ಪಟ್ಟವು, ಹಸಿರು ಕಡಿಮೆಯಾಯಿತು. ತ್ರಿಚಕ್ರ ವಾಹನಗಳ ಪ್ರಯಾಣ ದರ ತೀವ್ರ ಏರಿಕೆ ಕಂಡಿತು. ಸಾಮಾಜಿಕ ಅಸಮತೋಲನ ಕೆಲವೊಂದು ಕಡೆ ಹೆಚ್ಚಾಯಿತು.(ಕೆಲೊವೊಂದು ಕಡೆ ಕಡಿಮೆಯೂ ಆಗಿದೆ).

ಸ್ವಾಮಿ ’ಬದಲಾವಣೆ’ ಜಗತ್ತಿನ ನಿಯಮ! ತಾನು ದುಡಿದಿದ್ದನ್ನು ಖರ್ಚು ಮಾಡುವುದರಲ್ಲಿ ತಪ್ಪೇನಿಲ್ಲ. ಹಿಂದೆಯೂ ಇದನ್ನು ಮಾಡುತ್ತಿದ್ದರು, ಬಹುಪಾಲು ಆಗ ದುಡಿಯುತ್ತಿದ್ದು ಕಡಿಮೆ ಇರಬಹುದು.ನೀವು ಹೇಳುವ ಪ್ರಕಾರ ಮಾ.ತಂ. ದಲ್ಲಿ ಕೆಲಸ ಮಾಡುವವರು ಯಾರೂ ಮಕ್ಕಳನ್ನು ಬೆಳೆಸುವುದೇ ಇಲ್ಲ, ತಂದೆ ತಾಯಿಗಳನ್ನು ನೋಡಿಕೊಳ್ಳುವುದೇ ಇಲ್ಲ ಏಂಬ ಅರ್ಥ ಕಲ್ಪಿಸುವಂತೆ ಏನೇನೋ ಬಡಬಡಾಯಿಸಿದ್ದೀರ.ಹಿಂದೆಯೂ ತಂದೆ ತಾಯಿಗಳು ಮಕ್ಕಳನ್ನು ಬೆಳೆಸುತ್ತಿದ್ದರು, ಇಂದೂ ಅದೇ ಆಗುತ್ತಿರುವುದು.ಇನ್ನು ಖರ್ಚು ಮಾಡುವುದು ಎಂದರೇನು? ದುಡಿದಿದ್ದನ್ನು ಕೂಡಿಡುವ ಸಂಸ್ಕೃತಿ ಬೆಳೆಸಿಕೊಂಡರೆ ಯಾವುದೇ ದೇಶದ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗುವುದಿಲ್ಲ. ಹಿಂದಿನ ಕಾಲಗಳಲ್ಲಿ ಹಾಗೆ ಮಾಡುವವರನ್ನು ಜಿಪುಣರು, ಜುಗ್ಗರು ಎಂದು ಹಂಗಿಸುತ್ತಿದ್ದುದುಂಟು. (ಪುರಂದರ ದಾಸರೂ ಕೂಡ ಮೊದಲು ಜಿಪುಣರಾಗಿ, ಆಮೇಲೆಯೇ ಅವರಿಗೆ ಙ್ನಾನೋದಯವಾದದ್ದು). ದುಡಿದ ದುಡ್ಡನ್ನು ಅಗತ್ಯಕ್ಕೆ ,ಅಭಿರುಚಿಗೆ ತಕ್ಕಂತೆ ಖರ್ಚು ಮಾಡಿದಾದ, ಅಂದರೆ ಒಂದು ಬಟ್ಟೆಯನ್ನು ಕೊಂಡಾಗ, ಬಟ್ಟೆ ಮಾರುವವನ, ಬಟ್ಟೆ ಹೊಲೆಯುವವನ, ಗಾರ್ಮೆಂಟ್ಸ್ನಲ್ಲಿ ದುಡಿಯುವವನ ಜೀವನೋಪಾಯವಾಗುತ್ತದೆ. ಅಷ್ಟೇ ಯಾಕೆ ಸ್ವಾಮಿ, ನಾನು ನಿಮ್ಮ ಐದೂ ’ಬೆತ್ತಲೆ ಜಗತ್ತು’ ಪುಸ್ತಕಗಳನ್ನು ಮತ್ತು ’ಯಾರೂ ತುಳಿಯದ ಹಾದಿಯನ್ನು’ ಕೊಂಡಿದ್ದು ನಾನು ಕಷ್ಟ ಪಟ್ಟು ದುಡಿದ ದುಡ್ಡಿನಿಂದಲೇ!

"ದುಡ್ಡಿಗಿಂತ ಕಸುಬು ಕಲಿಯಬೇಕು ಎಂಬ ಮೆಂಟಾಲಿತು ಐ ಟಿ ಯವರಿಗೆ ಬರಲೇ ಇಲ್ಲ" ಎಂದಿರಿ. ಈ ನಿಮ್ಮ ಅಙ್ನಾನಕ್ಕೆ ಏನೆನ್ನಬೇಕೊ. ಸ್ವಾಮಿ ನೀವು ಸರ್ಕಾರಿ ನೌಕರಿಗಳನ್ನು ಮನಸ್ಸಿನಲ್ಲಿಟ್ಟು ಮಾಹಿತಿ ತಂತ್ರಙ್ನಾನದ ಬಗ್ಗೆ ಬರೆದರೆ ಹೀಗೆ ಅಪಭ್ರಂಶವಾಗುವುದು. ಎಲ್ಲಾದರು ತಾವು ದುಡಿಯುವ ದುಡ್ಡಿಗೆ ಅಗತ್ಯವಾದ ಙ್ನಾನವುಳ್ಳ ಮಾನವ ಸಂಪನ್ಮೂಲವಿದ್ದರೆ, ಅದರಲ್ಲಿ ಮೊದಲ ಸ್ಥಾನ ಮಾ.ತಂ ಕ್ಷೇತ್ರವೆ!ಕಸುಬು ಮತ್ತು ಙ್ನಾನ ಒಂದೊಕ್ಕೊಂದು ಪೂರಕ.

ಇವರ ವಾದಗಳನ್ನು ಇನ್ನೂ ಓದುತ್ತಾ ಹೋದರೆ, ದೊಡ್ಡ ನಿಟ್ಟುಸಿರು ಬಿಡಬೇಕು. ಇಲ್ಲಿ ನೋಡಿ, ಇದಕ್ಕಿಂತ ಜೊಳ್ಳು, ಬಾಲಿಷ ಇನ್ನಿರಲಾರದು! ನಕ್ಕುಬಿಡಿ.
"ಎಲ್ಲಾ ವೃತ್ತಿಗಳಿಗೂ ಅವುಗಳದೇ ಆದ ಒಂದು ಗುಣ, ಲಕ್ಷಣಗಳಿವೆಯಂತೆ, ಐ ಟಿ ಗೆ ಮಾತ್ರ ಏನೂ ಇಲ್ಲವಂತೆ. ಎಲ್ಲಾ ವೃತ್ತಿಗಳಲ್ಲೂ ಅವರ ಮಾಡುವ ಕೆಲಸ ಗೊತ್ತಾಗುತ್ತದಂತೆ, ಐ ಟಿ ಯವರು ನೆನೆದರೆ ಹೊಳೆಯುವುದು ದುಡ್ಡು ಮಾತ್ರವಂತೆ!"
ಇದು ಹೇಗೆಂದರೆ ನನಗೆ ಪತ್ರಕರ್ತರನ್ನು ನೆನೆದರೆ ರಾಜಕಾರಣಿಗಳನ್ನು ಬೆದರಿಸಿ ದುಡ್ಡು ಮಾಡುವ ಕೆಟ್ಟ ಜನರೇ ನೆನಪಿಗೆ ಬರುವುದು ಎಂಬ ಹೇಳಿಕೆ ಕೊಟ್ಟರೆ ಎಷ್ಟು ತಪ್ಪಾಗುತ್ತದಲ್ಲವೆ?ಪುಟ ತುಂಬಿಸಲು ಇವರಿಗೆ ಇದಕ್ಕಿಂತ ಒಳ್ಳೆಯ ಅಂಶಗಳೇ ಸಿಗಲಿಲ್ಲವೆ? ಇವರಿಗೆ ಐ ಟಿ ಬಗ್ಗೆ ಙ್ನಾನ ಬೇಕಾಗಿದ್ದರೆ ಯಾರನ್ನಾದರೂ ಕೇಳಬಹುದಿತ್ತು. ಹೇಳಿಕೊಳ್ಳುವದಕ್ಕೆ ಖ್ಯಾತ ಪತ್ರಕರ್ತರು. ಬೇರೆದ್ದಕ್ಕೆಲ್ಲಾ ವಿಕಿಪೀಡಿಯಾದಲ್ಲಿ, ಗೂಗಲ್ಲಿನಲ್ಲಿ ಹುಡುಕಾಡುತ್ತಾರೆ. ಈ ವಿಷಯದ ಬಗ್ಗೆ ಮಾತ್ರ ಜಾಣ ಕುರುಡು! ವಿಕಿಪೀಡಿಯ, ಗೂಗಲ್ಲು, ಸ್ವಾಮಿ ಅಷ್ಟೇ ಯಾಕೆ ತಾವು ಬಳಸುವ ದೂರವಾಣಿ, ಸುದ್ದಿ ಸಂಪಾದನೆಗೆ ಬಳಸುವ ಇನ್ನೂ ಹಲವಾರು ಸಲಕರಣೆಗಳು ಐ ಟಿ ಯವರು ಸಿದ್ಧಪಡಿಸಿದ್ದೇ!

ಇವರು ಈ ವಾದ ಚರ್ಚೆಗಳಲ್ಲಿ ಎಲ್ಲೆ ತಪ್ಪಿ, ಅನಾಥಾಲಯ, ವೃದ್ಧಾಶ್ರಮಗಳಿಗೆ ಸಹಾಯ ಮಾಡುವುದು, ತೆರಿಗೆ ಕಟ್ಟುವುದು ಮತ್ತು ಸರ್ಕಾರದಿಂದ ಉತ್ತಮ ಮೂಲ ಸೌಕರ್ಯಗಳನ್ನು ಅಪೇಕ್ಷಿಸುವುದು ಕೂಡ ತಪ್ಪೆಂದಿದ್ದಾರೆ. ಪತ್ರಕರ್ತರು ಏನು ಬೇಕಾದರೂ ಬರೆಯಬಹುದು ಎಂಬ ಉದ್ಧಟತನವೇ? ಕಡಿಮೆ ಸಮಯದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದರೆ ಹೀಗೆ ಆಗುವುದು ಅನ್ನಿಸುತ್ತಿದೆ. ಅವರೇ ಹೇಳಿಕೊಂಡಂತೆ, ’ಅಲ್ಪನಿಗೆ ಐಶ್ವರ್ಯ ಬಂದರೆ, ಅರ್ಧ ರಾತ್ರೀಲಿ ಕೊಡೆ ಹಿಡಿದುಕೊಂಡನಂತೆ!’ ಎಂಬ ಮಾತು ಪ್ರತಾಪ್ ಸಿಂಹರಿಗೇ ಹೆಚ್ಚು ಅನ್ವಯವಾಗುತ್ತದೆ.ಇನ್ನು ಕೂಲಿಯವನ ಬಳಿ ಮೊಬೈಲ್ ಫೋನು ಇರುವುದೇ ತಪ್ಪೆನ್ನುವಂತೆ ಅನಗತ್ಯ ಚರ್ಚೆಯನ್ನು ಎಳೆದು ತಂದಿದ್ದಾರೆ. ದೂರಸಂಪರ್ಕ ಕ್ರಾಂತಿಯ ಬಗ್ಗೆ ಇವರಿಗೆ ತಿಳಿ ಹೇಳಬೇಕಾರೆ ವರ್ಷಗಳೇ ಬೇಕಾಗಬಹುದು.

ಇನ್ನು ಮಾ.ತಂ ಮಂದಿ, ವಾರಾಂತ್ಯಕ್ಕೆ ಇನ್ನೋವಾ ದಲ್ಲಿ ಪ್ರವಾಸ ಹೋಗಿಬಿಡುತ್ತಾರಂತೆ. ಮಹನೀಯ ಪತ್ರಕರ್ತರಿಗೆ "ಕೋಶ ಓದು, ದೇಶ ಸುತ್ತು" ಎಂಬ ನಾನ್ನುಡಿ ಮರೆತುಹೋಗಿರುವ ಹಾಗಿದೆ. ಪತ್ರಕರ್ತರು ಎಂದೂ ಮರೆಯಬಾರದಂತಹ ಮಾತು ಸ್ವಾಮಿ ಇದು! ಆದರೆ ತಿಳಿಯಿರಿ, ಇನ್ನೋವಾದಲ್ಲಿ ಹೋಗುವವರೂ ಇದ್ದಾರೆ, ಸರ್ಕಾರಿ ಬಸ್ಸುಗಳಲ್ಲಿ ಹೋಗುವವರೂ ಇದ್ದಾರೆ, ಎಲ್ಲಾ ಅವರವರ ಅನುಕೂಲಕ್ಕೆ ಬಿಟ್ಟಿದ್ದು.

ಇಂತಹ ಒದಲು ಅನರ್ಹವಾದ ಈ ಲೇಖನ ಓದಿದ ಮೇಲೆ ಏನನ್ನಾದರೂ ಬರೆಯಬೇಕೆನ್ನಿಸಿತು. ಬರೆದೆ. ಇನ್ನೂ ಬಹಳಷ್ಟು ಅಸಂಬದ್ಧ ಹೇಳಿಕೆಗಳು, ವಾದಗಳಿವೆ ಈ ಲೇಖನದಲ್ಲಿ. ಅವುಗಳಿಗೆ ಉತ್ತರಿಸಲು ಆ ಸಾಲುಗಳ ಮೇಲೆ ಮತ್ತೊಮ್ಮೆ ಕಣ್ಣಾಡಿಸಲೂ ಕೂಡ ಅರ್ಹವಲ್ಲ.ಸದ್ಯಕ್ಕೆ ಇಲ್ಲಿಗೆ ನಿಲ್ಲಿಸುವೆ.

ಸ್ವಾಮಿ ಕೊನೆಯದಾಗಿ, ನಿಮ್ಮ ಅನುಕಂಪ ಯಾವ ಮಾ.ತಂ ಉದ್ಯೋಗಿಗೂ ಬೇಕಾಗಿಲ್ಲ. ’ಸಮಾಜ’ ಎಂಬುದು ನಿಮ್ಮಂತಹ ಸಣ್ಣ ಜನಗಳೇ ತುಂಬಿರುವ ವ್ಯವಸ್ಥೆ ಎಂಬ ತಪ್ಪು ಕಲ್ಪನೆಯನ್ನು ತಿದ್ದುಕೊಳ್ಳಿ. ನಿಮಗಿಂತಲೂ ವಿಶಾಲ ದೃಷ್ಟಿ ಕೋನ ಹೊಂದಿರುವ ಸಾಮಾನ್ಯರು, ಸಮಾನ ಮನಸ್ಕರು ಬಹಳಷ್ಟು ಜನರಿದ್ದಾರೆ. ನಿಮ್ಮ ದೃಷ್ಟಿಕೋನವೂ ವಿಶಾಲವಾಗಲಿ ಎಂದು ಹಾರೈಸುತ್ತೇನೆ. ಬೇಂದ್ರೆಯವರು, ಕೆಲವು ದುಷ್ಟರು ದುಡ್ಡಿನ ಮದದಲ್ಲಿ ಬಡವರನ್ನು ತುಳಿಯುತ್ತಿದ್ದಾರೆ ಎಂಬ ಅರ್ಥದಲ್ಲಿ ಬರೆದ ಕವನ ವನ್ನು, ಮಾಹಿತಿ ತಂತ್ರಙ್ನರಿಗೆ ಸಮೀಕರಿಸಿ ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದೀರಿ. ಹಿರಿಯರು ಹೇಳಿದ್ದಾರೆ, ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ, ಇನ್ನು ಮುಂದೆಯಾದರೂ ನೀವು ತಿಳಿದ ಮತ್ತು ಓದುಗರು ನಂಬಲಾರ್ಹವಾದುದ್ದನ್ನೇ ಬರೆಯಿರಿ. ಎಲ್ಲ ಬಲ್ಲೆನೆಂಬ ಅಹಂಕಾರ ಬಿಡುವುದು ಒಳಿತು.

ಗುರುವಾರ, ಫೆಬ್ರವರಿ 19, 2009

ವಸುಧೇಂದ್ರ- ಪರಿಚಯ, ಸಂವಾದ, ಹಂಪಿ ಎಕ್ಸ್ ಪ್ರೆಸ್

ಪರಿಚಯ
ನನಗೆ ಇತ್ತೀಚಿನ ಕನ್ನಡ ಲೇಖಕರ ಪರಿಚಯವೇ ಇರಲಿಲ್ಲ, ಇದ್ದರೂ ಒಂದಿಬ್ಬರದು ಮಾತ್ರ ಮತ್ತು ಓದುತ್ತಿದ್ದುದು ಅವರು ವಿಜಯ ಕರ್ನಾಟಕದಲ್ಲಿ ಬರೆಯುವ ಲೇಖನಗಳು ಮಾತ್ರ.ಕಡಲತೀರ ಬ್ಳಾಗ್ ನಿಂದ ವಸುಧೇಂದ್ರ ರವರ ಪರಿಚಯ ಆಯ್ತು. ಅದರಲ್ಲಿ ಅವರ ಬಗ್ಗೆ ಮತ್ತು ಅವರ ಪುಸ್ತಗಳ ಬಗ್ಗೆ (ಹೆಚ್ಚಾಗಿ ಹಂಪಿ ಎಕ್ಸ್ ಪ್ರೆಸ್ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯ ಮೂಡಿತ್ತು) ಮೆಚ್ಚುಗೆ ವ್ಯಕ್ತವಾಗಿತ್ತು. ಅವರ ಹಂಪಿ ಎಕ್ಸ್ ಪ್ರೆಸ್ ನನಗೆ ಸಪ್ನಾದಲ್ಲಿ ಸಿಗಲಿಲ್ಲ. ಬದಲಾಗಿ ’ಯುಗಾದಿ’ ಎಂಬ ಕಥಾಸಂಕಲನವನ್ನು ತಂದು ಮನೆಯಲ್ಲಿಟ್ಟೆ ಅಷ್ಟೆ! ನಂತರ ಒಂದು ದಿನ ವಸುಧೇಂದ್ರ ರವರ ಜಾಡು ಹಿಡಿದು ಅಂತರ್ಜಾಲದಲ್ಲಿ ಜಾಲಾಡಿದಾಗ ವಿಕ್ರಾಂತ ಕರ್ನಾಟಕ ತಾಣದಲ್ಲಿ ’ಬಾಗಿಲಿನಿಂದಾಚೆ ಪೋಗದಿರಲ, ರಂಗ’ ಕಥೆ ಓದಿದೆ. ಬಹಳ ಇಷ್ಟ ಆಯ್ತು! (ಸರಳ ಬರವಣಿಗೆ ಶೈಲಿಯಂತೂ ಮನಸ್ಸಿಗೆ ಬಹಳ ಹಿಡಿಸಿತು). ಹೀಗೆ, ಅವಧಿ/ಮೆ ಫ್ಲವರ್ ನವರು ಫಿಷ್ ಮಾರ್ಕೆಟ್ ನಲ್ಲಿ ನಡೆಸುತ್ತಿದ್ದ "ವಸುಧೇಂದ್ರ ಅಂದ್ರೆ ನಮಗಿಷ್ಟ" ಎಂಬ ಸಂವಾದ ಕಾರ್ಯಕ್ರಮದ ಬಗ್ಗೆ ತಿಳಿಯಿತು.ನಾನೂ ಕಾರ್ಯಕ್ರಮಕ್ಕೆ ಹೋದೆ. ಹೀಗೆ ನನಗೆ ಆದದ್ದು ವಸುಧೇಂದ್ರ ರವರ ಮೊದಲ ಪರಿಚಯ!

ಛಂದದ ಸಂಜೆಯ ಸಂವಾದ
ಅಂದಿನ ವಸುಧೇಂದ್ರ ರವರ ಭಾಷಣ ಮತ್ತು ನಂತರ ನಡೆದ ಸಂವಾದ ನಿಜಕ್ಕೂ ಬಹಳ ಚೆನ್ನಾಗಿತ್ತು. ಅಲ್ಲಿ ನಡೆದ ಮಾತುಕಥೆಯನ್ನು ನನ್ನ ಹೆಂಡತಿಯ ಮುಂದೆ ಬಿಚ್ಚಿಡುವವರೆಗೂ ಸಮಾಧಾನವೇ ಇಲ್ಲ. ನನ್ನ ಮನಸ್ಸಿಗೆ ನಾಟಿದ, ನೆನಪಿರುವ ಕೆಲವು ತುಣುಕುಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಟಿಪ್ಪಣಿ ಮಾಡುತ್ತೇನೆ!


ಚಿತ್ರ ಕೃಪೆ: ಅವಧಿ (ಫಿಷ್ ಮಾರ್ಕೆಟ್ ನಲ್ಲಿ ವಸುಧೇಂದ್ರರ ಹಸ್ತಾಕ್ಷರಕ್ಕೆ ಸರದಿಯಲ್ಲಿ ಕಾಯುತ್ತಿರುವ ನಾನು)

ನನಗೆ ಅಷ್ಟು ಚೆನ್ನಾಗಿ ಮಾತನಾಡುವುದಕ್ಕೆ ಬರುವುದಿಲ್ಲ ಎಂದೇ ಭಾಷಣಕ್ಕಿಳಿದ ವಸುಧೇಂದ್ರ ರವರು, ನಾನೇನು ಸಾಹಿತ್ಯಿಕ ವಾತಾವರಣದಲ್ಲಿ ಬೆಳೆದು ಬಂದದ್ದಿಲ್ಲ, ಕಥೆ ಬರೆಯುವುದಕ್ಕೆ ಆ ರೀತಿಯ ವಾತಾವರಣ ಅವಶ್ಯಕವೇನಿಲ್ಲ ಎಂದರು. ವಸುಧೇಂದ್ರ ರವರ ಅಮ್ಮ, ನಡೆದ/ನಡೆಯದ ಘಟನೆಗಳನ್ನು ತಮಗೆ ವೈಭವೀಕರಿಸಿ ವಿವರಿಸುತ್ತದ್ದ ರೀತಿ ತಾವು ಬರೆಯುವ ಕಥೆಯ ಶೈಲಿಗೆ ಒಂದು ಪ್ರೇರೇಪಣೆಯೆಂದರು. ತಾವು ಇಂಗ್ಲೇಂಡಿನಲ್ಲಿ ಕೆಲಸ ಮಾಡುತ್ತಿದ್ದಾಗ ’ಬ್ರಿಟಿಷ್ ಲೈಬ್ರರಿ’ ಸಹಾಯದಿಂದ ನೋಡಿದ ಬಹಳಷ್ಟು ಭಾಷೆಯ ಅಂತರಾಷ್ಟ್ರೀಯ ಚಲನಚಿತ್ರಗಳು ಕೂಡ ತಾವು ಕಥೆಗಳನ್ನೇಳುವ ರೀತಿಗೆ ಸ್ಪೂರ್ಥಿಯೆಂದರು.

ಟಿ ಸಿ ಎಸ್ ಸಂಸ್ಥೆಯಲ್ಲಿ ಅಭಿಯಂತರರಾಗಿ ಕೆಲಸ ಮಾಡುವಾಗ, ಕೆಲಸ ಏಕತಾನತೆಗೆ ಬೇಸತ್ತು ಲೇಖನಿ ಹಿಡಿದರಂತೆ.

ಕನ್ನಡ ಮಾಧ್ಯಮದಲ್ಲಿ ಓದಿದವರು ಕನ್ನಡ ಕಥೆಗಳನ್ನು ಸುಲಲಿತವಾಗಿ ಬರೆಯಬಹುದು. ಈಗಿನ ಕಾಲದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವವರು ಕ್ಷೀಣಿಸುತ್ತಿರುವುದರಿಂದ ಕನ್ನಡ ಲೇಖಕರೂ ಕಡಿಮೆಯಾಗಬಹುದೇನೋ ಎಂಬ ಸಂಶಯವನ್ನು ವ್ಯಕ್ತಪಡಿಸಿದರು.

ಕಥೆಗಳನ್ನು ಬರೆಯುವಾಗ ಸೂಕ್ಷ್ಮತೆ ಬಹಳ ಮುಖ್ಯ ಎಂಬುದು ವಸುಧೇಂದ್ರರ ಅನಿಸಿಕೆ. ಬಡತನದ ಕಥೆಗಳನ್ನು ಬರೆಯಲು ಬಡತನದಲ್ಲಿ ಬದುಕಿ ಬಂದವರಿಗೇ ಸಾಧ್ಯವೆಂದೇನಿಲ್ಲ, ಶ್ರೀಮಂತರಾದರೂ ಬಡತನದ ಕಥೆಗಳನ್ನು ಬರೆಯಬಹುದು. ಆದರೆ ಆ ಸೂಕ್ಷ್ಮತೆ ಕಥೆಗಳಲ್ಲಿದ್ದರೆ, ಅದು ಒಳ್ಳೆಯ ಕಥೆಯೆನ್ನಿಸುತ್ತದೆಯೆಂದರು.

ವಸುಧೇಂದ್ರರು ಹೇಳಿದ ಮತ್ತೊಂದು ಸೂಕ್ಷ್ಮ ಅಂಶವೆಂದರೆ, ಯಾವುದೇ ಕಥೆಗಾರನಿಗೆ ಅಪಾರ ಓದುಗ ವೃಂದ ಸೃಷ್ಟಿಯಾಗಬೇಕಾದರೆ ತನ್ನದೇ ಆದ ಕಾಲ ಹಿಡಿಯುತ್ತದೆ. ಅವರಿಗೂ ೧೦ ವರ್ಷ ಬೇಕಾಯುತಂತೆ. ನಿಮ್ಮ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಕಡಿಮೆ ಎಂಬ ಸಂಶಯವನ್ನು ಒಬ್ಬ ಓದುಗ ವ್ಯಕ್ತಪಡಿಸಿದಾಗ ವಸುಧೇಂದ್ರರು ಅದನ್ನು ಒಪ್ಪದೆ, ತಮ್ಮ ಕಥೆಗಳನ್ನು ಪ್ರಕಟಿಸಿದ ಕನ್ನಡ ಪ್ರಭ ದಿನ ಪತ್ರಿಕೆ, ಮತ್ತು ಕನ್ನಡ ಪುಸ್ತಕ ಮಾರಾಟಕ್ಕೆ ತೆರಿಗೆ ವಿನಾಯಿತಿಯನ್ನು ಕೊಟ್ಟಿರುವ ರಾಜ್ಯ ಸರ್ಕಾರವನ್ನು ನೆನೆದರು. ಶ್ಲಾಘಿಸಿದರು.

ಕಥೆ ಬರೆಯುವ ಪ್ರಾರಂಭದಲ್ಲಿ, ಯಾವುದೋ ಪುಸ್ತಕ ಮಳಿಗೆಯಲ್ಲಿ ಮಾರಾಟಕಿಟ್ಟ ತಮ್ಮ ೫ ಪುಸ್ತಕಗಳಲ್ಲಿ, ೬ ತಿಂಗಳು ಕಳೆದರೂ ಒಂದೇ ಪುಸ್ತಕ ಮಾರಾಟವಾದದ್ದರಿಂದ ಕೊನೆಗೆ ತಾವೇ ಇನ್ನುಳಿದ ನಾಲ್ಕು ಪುಸ್ತಕಗಳನ್ನು ಕೊಂಡಿದ್ದರಂತೆ!

ಯಾವುದೇ ಒಬ್ಬ ಲೇಖಕನ ಮೊದಲನೆಯ ಪುಸ್ತಕವೇ ಒಂದು ವಿವಾದದಿಂದ ಪ್ರಖ್ಯಾತಿಯಾದರೆ, ಆ ಪ್ರಖ್ಯಾತಿಯನ್ನು ಉಳಿಸಿಕೊಳ್ಳುವುದು ಕಷ್ಟ ಎಂದರು. ಇದಕ್ಕೆ ಒಬ್ಬ ವಾಚಕ ಮುಂದಿನ ಪುಸ್ತಕಕ್ಕೂ ಒಂದು ವಿವಾದ ಸೃಷ್ಟಿಸಿದರಾಯಿತು ಎಂದು ನಗೆ ಚಟಾಕಿಯನ್ನು ಹಾರಿಸಿದರು. ವಸುಧೇಂದ್ರರು ತಮ್ಮ ವಾದಕ್ಕೆ ಬಾಲ ನಟರ ಉದಾಹರಣೆಯನ್ನು ಕೊಟ್ಟು ಸಮರ್ಥಿಸಿದರು.

ಪ್ರಸಕ್ತ ೨೦೦೯ ರ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಉಡುಪಿಯಲ್ಲಿ ನಡೆದ ಹಿಂದಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ತಾವೇ ಪುಸ್ತಕ ಮಳಿಗೆಗಳನ್ನು ತೆರೆದು,ಕೊನೆಗೆ ಹೇಗೆ ನಾಚಿಕೆಯಿಂದ ಹೊರಬಂದು, ತಮ್ಮ ಪುಸ್ತಕಗಳನ್ನು ಹೊಗಳಿ ಮಾರಾಟ ಮಾಡಿದರು ಎಂಬುದನ್ನು ವಿವರಿಸಿದರು. ಮಾರಾಟ ಮಾಡುವಾಗ ನಡೆದ ಕೆಲವು ಹಾಸ್ಯ ಸನ್ನಿವೇಶಗಳನ್ನು ಹೇಳಿ ವಾಚಕರನ್ನು ನಗೆಯ ಕಡಲಲ್ಲಿ ತೇಲಿಸಿದರು. (ಒಮ್ಮೆ ಇಬ್ಬರು ಮಹಿಳೆಯರು ಮಳಿಗೆಗೆ ಬಂದು, ತಮ್ಮ ಯಾವುದೋ ಪುಸ್ತಕದ ಬಗ್ಗೆ ಅಭಿಪ್ರಾವನ್ನು ಕೇಳಿದರಂತೆ. ಅದಕ್ಕೆ ವಸುಧೇಂದ್ರರು ತಮ್ಮ ಪುಸ್ತಕವನ್ನು ಮನಸಾರೆ ಹೊಗಳಿದಾಗ, ಜೊತೆಯಲ್ಲಿ ಬಂದಿದ್ದ ಇನ್ನೊಬ್ಬ ಮಹಿಳೆ, ಆ ಪುಸ್ತಕವನ್ನು ಮಾತ್ರ ಕೊಳ್ಳಬೇಡ, ಲೇಖಕನಿಗೆ ಮಡಿ ಮೈಲಿಗೆ ಯಾವುದೂ ಇಲ್ಲ ಎಂದಳಂತೆ. ಅದಕ್ಕೆ ಪುಸ್ತಕದ ಬಗ್ಗೆ ವಿಚಾರಿಸಿದ ಮಹಿಳೆ ವಸುಧೇಂದ್ರರು ತನಗೆ ಮೋಸ ಮಾಡಿದರೆಂಬ ರೀತಿಯಲ್ಲಿ ನೋಟ ಬೀರಿ ಮುನ್ನಡೆದಳಂತೆ.)

ತಮ್ಮ ಒಂದು ಪುಸ್ತಕವನ್ನು ಬ್ರೈಲ್ ಲಿಪಿಗೆ (ಕಣ್ಣಿದ ದೋಷವಿರುವವರು ಓದಲು ಸಹಾಯವಾಗುವ ಲಿಪಿ) ತರಲು ಪಟ್ಟ ಪಾಡನ್ನು ವಿವರಿಸಿದರು. ಇದಕ್ಕೆ ಸಹಾಯ ಮಾಡಿ ಬರಹ ಖ್ಯಾತಿಯ ಶೇಷಾದ್ರಿ ವಾಸುವನ್ನು ಕೂಡ ನೆನೆದರು. ಇವರಿಬ್ಬರೂ ಭಾರತೀಯ ವಿಙ್ನಾನ ಸಂಸ್ಥೆಯಲ್ಲಿ ಓದುತ್ತಿದ್ದಾಗ ಸಹಪಾಠಿಗಳಂತೆ. ವಾಸು ಬರಹ ತಂತ್ರಙ್ನಾವನ್ನು ಸಿದ್ಧಪಡಿಸಿದಾಗ, ವಸುಧೇಂದ್ರರು ಅದರಲ್ಲಿ ಕಥೆ ಬರೆದು ತಂತ್ರಙ್ನಾವನ್ನು ಪರೀಕ್ಷಿಸಿದ್ದ್ರಂತೆ! ಈ ಬ್ರೈಲ್ ಲಿಪಿಗೆ ಪುಸ್ತಕವನ್ನು ತರಲು, ಅವರು ನೋಡಿನ ಒಂದು ಇರಾನ್ ಚಲನಚಿತ್ರ (The color of paradise) ಕಾರಣವಂತೆ. ಈ ಕಥೆಯಲ್ಲಿ ನಾಯಕನಿಗೆ (೭ ನೇ ತರಗತಿಯ ವಿದ್ಯಾರ್ಥಿ) ದೃಷ್ಟಿ ದೋಷ. ಅಂಧರ ಶಾಲೆಯಲ್ಲಿ ಕಲಿಯುತ್ತಿರುತ್ತಾನೆ. ಇವನು ಒಮ್ಮೆ ಸಮುದ್ರಕ್ಕೆ ಹೋದಾಗ, ತಳದಲ್ಲಿರುವ ಮರಳಿನಲ್ಲಿ ಕೈಯಾಡಿಸಿದಾಗ ಅವನಿಗೆ ಅಲ್ಲೂ ಅಕ್ಷರಗಳ ಸ್ಪರ್ಷ! ಮೆಕ್ಕೆ ಜೋಳದ ಮೇಲೆ ಕೈಯಾಡಿಸಿದಿಗಾಲೂ ಅಕ್ಷರಗಳ ಅನುಭವ. ಈ ವಿದ್ಯಾರ್ಥಿ ಇತರ ಸಾಮಾನ್ಯ (ಅಂಧರಲ್ಲದ) ವಿಧ್ಯಾರ್ಥಿಗಳನ್ನೂ ಹಿಂದಿಕ್ಕಿ ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸುತ್ತಾನಂತೆ.
ವಸುಧೇಂದ್ರರು ದೃಷ್ಟಿ ದೋಷವುಳ್ಳವರನ್ನು ಬ್ರೈಲ್ ಲಿಪಿಯ ಪುಸ್ತಕಗಳ ಬಗ್ಗೆ ವಿಚಾರಿಸಿದಾಗ, ಅವರಿಗೆ ಪುಸ್ತಕಗಳನ್ನು ಒಂದೇ ಸಮನೆ ಓದಲು ಕಷ್ಟವಾಗುತ್ತದಂತೆ. ಬೆರಳಿನ ಚರ್ಮದ ಸಂವೇದನೆ ಇಲ್ಲವಾಗುತ್ತದಂತೆ. ಅದಕ್ಕೆ ಪುಸ್ತಕಗಳನ್ನು ವಾಚನ (Audio) C D ಗಳ ಮೂಲಕ ಹೊರತಂದರೆ ಬಹಳ ಸಹಾಯಬಾಗುತ್ತದೆ ಎಂಬ ಸಲಹೆಯಿತ್ತರಂತೆ. ಈ ನಿಟ್ಟಿನಲ್ಲಿ ಯಾರಾದರೂ ಮುಂದಾಳತ್ವ ವಹಿಸಿ ಕೆಲಸ ಮಾಡಬೇಕಾಗಿದೆ ಎಂಬ ಕರೆಕೊಟ್ಟರು!

ಇನ್ನೊಂದು ಸೋಜಿಗದ ಸಂಗತಿಯೆಂದರೆ ವಸುಧೇಂದ್ರರವರು ಬಹಳ ಬರೆಯುವುದು ವಾಹನದಟ್ಟಣೆಯಲ್ಲೇ ಅಂತೆ! ಅದಕ್ಕೆ ಒಬ್ಬ ಓದುಗರು, ಬೆಂಗಳೂರಿನ ಮೂಲಸೌಕರ್ಯಗಳು ಅಭಿವೃದ್ಧಿಯಾಗಿ ವಾಹನ ದಟ್ಟಣೆ ಮಾಯವಾದರೆ ನಿಮ್ಮ ಬರವಣಿಗೆಯ ಗತಿಯೇನು ಎಂದಾಗ, ಇನ್ನೊಬ್ಬ ಸಹೃದಯ ಓದುಗನಿಂದ, ನಾವು ಚಳುವಳಿ, ಪ್ರತಿಭಟನೆಗಳನ್ನು ಮಾಡಿ ರಸ್ತೆ ತಡೆ ಮಾಡಿ ವಾಹನ ದಟ್ಟನೆಯನ್ನು ಸೃಷ್ಟಿಸಿ ವಸುಧೇಂದ್ರರವರಿಗೆ ಬರೆಯಲು ಅನುಕೂಲ ಮಾಡಿಕೊಡುತ್ತೇವೆ ಎಂದಾಗ ಎಲ್ಲರೂ ಒಮ್ಮೆ ನಕ್ಕರು!

ತಾವು ತಮ್ಮ ಗೆಳೆಯೊರೊಂದಿಗೆ ಪ್ರಾರಂಭಿಸಿದ ಪ್ರಕಾಶನ ಸಂಸ್ಥೆಯ ’ಛಂದ ಪುಸ್ತಕ’ ಬಗ್ಗೆ ಕೂಡ ಮಾತನಾಡಿದರು. ಛಂದ ಎಂಬ ಛಂದಸ್ಸಿನ ಛಂದ ಏಕೆ ಹೆಸರಿನಲ್ಲಿ, ಇದು ಅಕ್ಷರ ದೋಷವಲ್ಲವೆ ಎಂದು ಬಹಳಷ್ಟು ಮಂದಿ ಕೇಳಿದ್ದಾರಂತೆ. ಉತ್ತರ ಕರ್ನಾಟಕ ಸೊಗಡಿರಲೆಂದು ಈ ಛಂದ ಪದವನ್ನು ಆಯ್ಕೆ ಮಾಡಿರುವುದಾಗಿ ಹೇಳಿದರು.

ಕೇಳುಗರ ಓಂದು ಪ್ರಶ್ನೆಗೆ, ತಾವಿನ್ನೂ ಬರೆಯುತ್ತಿರುವುದು ಕೇಳಿ ಕಂಡ ಅನುಭವದ ಕಥೆಗಳೆಂದೂ, ಅಮೂರ್ತ (Abstract) ಕಥೆಗಳನ್ನು ಬರೆಯಲು ಇನ್ನೂ ಸಮಯ ಬೇಕೆಂದರು. ಕವನಗಳನ್ನೂ ಮುಂದೊಮ್ಮೆ ಬರೆಯುವೆನೆಂದರು.

ಹಿಂದೊಮ್ಮೆ ’ಜೋಗಿ’ ಯವರು (ಇವರು ಕೂಡ ಇತ್ತೀಚಿನ ಕನ್ನಡ ಲೇಖಕರು) ಕೆಟ್ಟವನಾದರೂ ಬುದ್ಧಿವಂತನ ಜೊತೆ ವ್ಯವಹರಿಸಬಹುದು, ಆದರೆ ಒಳ್ಳೆಯವನಾದರೂ ದಡ್ಡನ ಜೊತೆ ವ್ಯವಹರಿಸುವುದು ಕಷ್ಟ ಎಂದಿದ್ದರಂತೆ. ಇದಕ್ಕೆ ವಿರುದ್ಧವಾದ ನಿಲುವಂತೆ ವಸುಧೇಂದ್ರರವರದು. ಯಾವುದೇ ಮನುಷ್ಯನ ಜೊತೆ ವ್ಯವಹರಿಸಬೇಕಾದರೆ ಆ ವ್ಯಕ್ತಿ ಮೊದಲು ಒಳ್ಳೆಯವನಾಗಿರಬೇಕು. ಮನುಷ್ಯ ಕಥೆಗಾರನಾಗುವದಕ್ಕಿಂತಲೂ ಮೊದಲು ಒಳ್ಳೆಯ ವ್ಯಕ್ತಿಯಾಗಬೇಕೆಂಬ ಮಾತನ್ನು ಹೇಳಿದರು.

ಇದೇ ರೀತಿ ಎಲ್ಲದಕ್ಕೂ ಸಂಭದವನ್ನು ಬೆಸೆದು ಒಂದೂ ವರೆ ಘಂಟೆ ತಮ್ಮ ಮಾತಿನಲ್ಲಿ ವಾಚಕರನ್ನು ಮೋಡಿ ಮಾಡಿದರು. ಸೂಕ್ಷ್ಮತೆ ಕಥೆಯಲ್ಲಿ, ಕಥೆಯ ಪಾತ್ರಗಳಲ್ಲಷ್ಟೇ ಅಲ್ಲ ಬೇಕಾಗಿರುವುದು, ಎಲ್ಲ ಮನುಷ್ಯರಲ್ಲಿರಬೇಕು ಎಂಬುದನ್ನು ಸಾರಿ ಹೇಳುವಂತಿತ್ತು ಅವರ ಮಾತುಗಳು. ವಸುಧೇಂದ್ರರೂ ಸೂಕ್ಷ್ಮಜೀವಿ ಎಂದು ನೆರೆದವರಿಗೆಲ್ಲಾ ಗೊತ್ತಾಗಿತ್ತು!

ಹಂಪಿ ಎಕ್ಸ್ ಪ್ರೆಸ್

ಸಂವಾದ ಮುಕ್ತಾಯವಾದ ಮೇಲೆ, ವಸುಧೇಂದ್ರರಿಗೆ ನನ್ನ ಪರಿಚಯವನ್ನು ಹೇಳಿ ಅವರ ಹಸ್ತಾಕ್ಷರ ಪಡೆದ ಹಂಪಿ ಎಕ್ಸ್ ಪ್ರೆಸ್ ಪುಸ್ತಕವನ್ನು ಕೊಂಡೆ.ಮನೆಗೆ ಬಂದ ಮೇಲೆ ಪ್ರಸಕ್ತವಾಗಿ ಓದುತ್ತಿದ್ದ ’ವಿ ಎಸ್ ನಾಯ್ಪಾಲ್’ ರವರ ’INDIA - A Million Mutinies Now' ಪುಸ್ತಕದ ಓದನ್ನು ಸದ್ಯಕ್ಕೆ ತಡೆ ಹಿಡಿದು ಹಂಪಿ ಎಕ್ಸ್ ಪ್ರೆಸ್ ಪ್ರಾರಂಭಿಸಿದೆ. ’ಸೀಳು ಲೋಟ’ ಓದಿದೆ. ಬಹಳ ಇಷ್ಟವಾಯಿತು. ನಂತರ ’ಕೆಂಪು ಗಿಣಿ’ಯನ್ನು ಓದಿದೆ. ನಿಜಕ್ಕೂ ಈ ಕಥೆಯನ್ನು ಹೊಗಳಲು ನನಗೆ ಪದಗಳ ಕೊರತೆ ಇದೆ. ಇದು ಅತಿಶಯೋಕ್ತಿಯಲ್ಲ. ಆ ಶೀರ್ಷಿಕೆ, ಕಥೆಯನ್ನು ಕೊಂಡೊಯ್ಯುವಿಕೆ, ಒಂದೊಕ್ಕೊಂದರ ಸಂಬಂಧ, ಮುಕ್ತಾಯ ಎಲ್ಲವೂ ವರ್ಣನಾತೀತ. ನಾನು ಸಾಮಾನ್ಯವಾಗಿ ಕಾದಂಬರಿಗಳನ್ನು ಓದುತ್ತಿದ್ದೆ. ಸಣ್ಣ ಕಥೆಗಳನ್ನು ಓದುತ್ತಿದ್ದುದೆ ಕಡಿಮೆ. ವಸುಧೇಂದ್ರರ ಬರವಣಿಗೆ ನನ್ನನ್ನು ಈ ಸಣ್ಣ ಕಥಾಲೋಕಕ್ಕೆ ಎಳೆದು ತಂದಿದೆ. ಮುಂದೆ ’ಕ್ಷಮೆಯಿಲ್ಲದೂರಿನಲಿ’ ಓದಿದೆ. ವಸುಧೇಂದ್ರರು ಅಂದು ಸಂವಾದದಲ್ಲಿ ಮಾತನಾಡಿದ ಸೂಕ್ಷ್ಮತೆ ನನಗೆ ಈ ಕಥೆಯಲ್ಲಿ ಕಾಣಿಸಿತು.ವ್ಯಯಕ್ತಿಕ ಅಭಿಪ್ರಾಯವಾಗಿ ಈ ಕಥೆಯ ಮುಕ್ತಾಯ ನನಗೆ ಅಷ್ಟೇನು ಇಷ್ಟವಾಗಲಿಲ್ಲ.ಆದರೂ ಬರವಣಿಗೆ ಖುಷಿ ಕೊಟ್ಟಿತು. ಕೆಂಪು ಗಿಣಿಯನ್ನು ಓದಲು ಪುಸ್ತಕವನ್ನು ನನ್ನ ಮಡದಿಗೆ ಒಪ್ಪಿಸಿದ್ದೇನೆ. ಅಷ್ಟರಲ್ಲಿ ಈ ಟಿಪ್ಪಣಿಯನ್ನು ಬರೆಯಬೇಕೆಂದು ಮನಸ್ಸು ಹವಣಿಸುತ್ತಿತ್ತು.ಯುಗಾದಿ ಕಥಾಸಂಕಲನವನ್ನೂ ತಂದು ಮೇಜಿನ ಮೇಲಿಟ್ಟಿದ್ದೇನೆ!

ನೆನ್ನೆ ಇದನ್ನು ಬರೆದ ನಂತರ, ಕೆಂಧೂಳಿ, ಹೊಸ ಹರೆಯ, ಎರಡು ರೂಪಾಯಿ ಮತ್ತು ನವಿರು ಗರಿ ಕಥೆಗಳನ್ನೂ ಓದಿ ಮುಗಿಸಿದೆ. ಕೆಂಧೂಳಿಯನ್ನು ಹೊರತು ಪಡಿಸಿ ಎಲ್ಲಾ ಕಥೆಗಳೂ ಬಹಳ ಹಿಡಿಸಿದವು ಮನಸ್ಸಿಗೆ.

ಬುಧವಾರ, ಫೆಬ್ರವರಿ 18, 2009

ಹಳೆ ಜೋಡಿ,ಬರಿ ಮಾತು.. ಬಲು ಬೇಜಾರ್ ಕಣೊ _ _ (ಡ್ಯಾಶ್ ಡ್ಯಾಶ್) ?

ಒಂದು ಸೋಲು ಮನುಷ್ಯನನ್ನು ಈ ಪರಿ ಬೆಚ್ಚಿ ಬೀಳಿಸುತ್ತದೆ ಎಂದರೆ? ’ದುನಿಯ’ ಗೆಲುವಿನ ನಾಗಾಲೋಟದಲ್ಲಿದ್ದ ಸೂರಿಯವರಿಗೆ ತುಸು ವಿಭಿನ್ನ ರುಚಿಯ ’ಇಂತಿ ನಿನ್ನ ಪ್ರೀತಿಯ’ ತಡೆ ಹೊಡ್ಡಿತು. ’ಇಂತಿ ನಿನ್ನ ಪ್ರೀತಿಯ’ ಚಿತ್ರವನ್ನು ತಾವೇ ನಿರ್ಮಿಸಿದ್ದಿದ್ದರಿಂದೇನೋ, ತಡೆಯ ಜೊತೆ ಹೊಡೆತ ಕೂಡ ಕಂಡರು ಸೂರಿ. ಚಿತ್ರ ಕೆಟ್ಟದಾಗಿಲ್ಲದಿದ್ದರೂ ಗಲ್ಲಾಪೆಟ್ಟಿಯಲ್ಲಿ ಸೋತದ್ದಕ್ಕೆ ಸೂರಿ ಖಿನ್ನರಾಗಿ, ತಮ್ಮ ಹಳೆಯ ಹಳಿಗೆ ಜಾರಿ ’ಜಂಗ್ಲಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಕಥೆ: ಕಥೆಯ ಒಂದು ಎಳೆ, ಮಾಮೂಲಿ ಹೊಡೆದಾಟದ-ಭೂಗತ ಜಗತ್ತಿನ ಕಥೆಗಳಿಗಿಂತ ತುಸು ಭಿನ್ನ ಎನ್ನಬಹುದು. ಅಷ್ಟೆ! ಹೆಚ್ಚೇನು ಮಹತ್ವವಿಲ್ಲ ಕಥೆಗೆ.

ಸಂಭಾಷಣೆ: ಪ್ರೇಕ್ಷಕರು ಸೂರಿ ಮೇಲೆ ಮತ್ತೆ ಕೋಪಿಸಿಕೊಂಡರೆ ಈ ಚಿತ್ರದ ಮೊದಲರ್ಧದ ಸಂಭಾಷಣೆಗೆ. "ಅತಿಯಾದರೆ ಅಮೃತವೂ ವಿಷ" ಎನ್ನುವ ನಾನ್ನುಡಿಗೆ ಕನ್ನಡಿ ಹಿಡಿದಂತಿದೆ ಸಂಭಾಷಣೆ. ಮೊದಲರ್ಧವನ್ನು ಬಹಳಷ್ಟು ಆಕ್ರಮಿಸಿಕೊಂಡಿರುವುದು ರಂಘಾಯಣ ರಘು ಮತ್ತು ವಿಜಯ್ ನಡುವಿನ ಸಂಭಾಷಣೆ ಮತ್ತು ಅವರ ಪೂರ್ವಾಪರ ಜೀವನ ವೃತ್ತಾಂತಗಳು. ಇವುಗಳು ತಲೆ ನೋವು ಬರಿಸುತ್ತವೆ. ಇವರಿಬ್ಬರ ಏಕತಾನತೆಯ ಯಾತನೆ ಕೊನೆಗೊಂಡರೆ ಸಾಕೆನ್ನಿಸುತ್ತದೆ. ದ್ವಿತೀಯಾರ್ಧದ ಸಂಭಾಷಣೆ ಅದ್ಭುತವಲ್ಲದಿದ್ದರೂ ಮೆದುಳಿಗೆ ಕೈ ಹಾಕದಿರುವುದೇ ಸಂತೋಷ.

ನಟನೆ:ಎಲ್ಲರೂ ತಮ್ಮ ಪಾತ್ರವನ್ನು ಚೊಕ್ಕಟವಾಗಿ ಅಭಿನಯಿಸಿದ್ದಾರೆ. ದುನಿಯಾ ಖ್ಯಾತಿಯ ರಘು ಮತ್ತು ವಿಜಯ್ ಜೋಡಿ ಪಡ್ಡೆ ಹುಡುಗರಿಗೆ ಮುದ ನೀಡುತ್ತದೆ. ಮುದ ನೀಡುವುದು ಅವರಷ್ಟೇ ಅಲ್ಲ, ನಾಯಕಿ ಅಂದ್ರಿತಾ ರೇ ಮೈ ಚಳಿಯನ್ನು ಬಿಟ್ಟು ನಟಿಸಿರುವುದು ಚಿತ್ರದ ಋಣಾತ್ಮಕ ಅಂಶ. ಯುವಕರನ್ನು ಚಿತ್ರಕ್ಕೆ ಎರಡನೇ ಬಾರಿ ಬರುವಂತೆ ಮಾಡಿದರೆ, ಸಂಪೂರ್ಣ ಖ್ಯಾತಿ ರೇ ಗೆ ಸಲ್ಲಬೇಕು. ಇನ್ನು ವಿಜಯ್ ರವರು ಹಾಡುಗಳಲ್ಲಿ ಶಾರುಕ್ ಖಾನ್ ನಟನೆಯನ್ನು ಅನುಕರಿಸಿ, ಸ್ವಲ್ಪ ಮಟ್ಟಿಗೆ ಗೆದ್ದಿದ್ದಾರೆ.

ಸಂಗೀತ, ಸಾಹಿತ್ಯ: ಸಂಗೀತ ಸಾಹಿತ್ಯ ಎರಡನ್ನೂ ಒಟ್ಟಿಗೆ ಅವಲೋಕಿಸಿದರೆ ನಿಮಗೆ ಹಾಡುಗಳನ್ನು ಮುಂದೆಂದೂ ಕೇಳಬೇಕೆನ್ನಿಸುವುದಿಲ್ಲ. (ಜಯಂತ್ ಕಾಯ್ಕಿಣಿ ಬರೆದಿರುವ ’ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ’ ಒಂದು ಹಾಡು ಇದಕ್ಕೆ ಅಪವಾದ.). ಸಂಗೀತ ಅದ್ಭುತವಾಗಿದೆ. ಹರಿಕೄಷ್ಣ ರವರು ಕೂಡ ಜಂಗ್ಲಿ ಯಶಸ್ಸಿದೆ ಶ್ರಮಿಸಿದ್ದಾರೆ. ಆದರೆ ಎರಡು ಹಾಡುಗಳ "ಸೋಪ್ ಹಾಕ್ಕೊಳೊ ತಲೆ ಬಾಚ್ಕಳೊ" (ಇದು ಇದ್ದುದರಲ್ಲಿ ಪರವಾಗಿಲ್ಲ), "ಹಳೆ ಕಬ್ಣ.. ಹಳೆ ಪಾತ್ರೆ" ಸಾಹಿತ್ಯ ಕೆಟ್ಟದಾಗಿದೆ ಮತ್ತು ಚಿತ್ರಕ್ಕೆ ಅಸಂಬದ್ಧವಾಗಿದೆ. ಯೋಗರಾಜ್ ಭಟ್ ರವರ ಸೃಜನಶೀಲತೆಗೆ ಕಪ್ಪು ಚುಕ್ಕೆಯಂತಿವೆ, ಅವರು ಬರೆದ ಈ ಹಾಡುಗಳು. ಆದರೆ ಹಿಂದಿಯ ಕೈಲಾಶ್ ಕೇರ್ ರವರು ’ಹಳೆ ಕಬ್ಣ’ ಹಾಡನ್ನು ಚೆನ್ನಾಗಿ ಹಾಡಿದ್ದಾರೆ.

ಛಾಯಾಗ್ರಹಣ: ಛಾಯಾಗ್ರಹಣದಲ್ಲಿ ವಿಶೇಷತೆಯೂ ಇಲ್ಲ. ಕೊರತಯೂ ಇಲ್ಲ.

ನಿರೂಪಣೆ, ನಿರ್ದೇಶನ: ನಿರ್ದೇಶನ ಸಮಾನ್ಯ. ನಿರೂಪಣೆಯೂ ಕೂಡ ಸ್ವಲ್ಪ ವಿಶಿಷ್ಟವಾಗಿದೆ (ಮೊದಲಾರ್ಧದ ಪೂರ್ವಾಪರ ಕಥೆಗಳು ಮತ್ತು ಸಂಭಾಷಣೆಯನ್ನು ಹೊರತುಪಡಿಸಿ).ಸೂರಿಯವರು ಸೋಲನ್ನು ಸ್ವಲ್ಪ ಹಗುರವಾಗಿ ತೆಗೆದುಕೊಂದು ಇನ್ನೂ ಹೊಸತನದ ಚಿತ್ರಗಳನ್ನು ಮಾಡಲಿ. ತಮ್ಮ ಕ್ರಿಯಾಶೀಲತೆಯನ್ನು ಮಾಮೂಲಿ ಚಿತ್ರಗಳನ್ನು ಮಾಡುವುದಕ್ಕೆ ಹಾಳುಗೆದವದಿರಲಿ ಎಂಬುದು ಈ ಅಭಿಮಾನಿಯ ಕೋರಿಕೆ.

ಏನೆ ಕೊರತೆ ಇದ್ದರೂ ಅಂದ್ರಿತಾ ರೇ ಗಾಗಿ, ಮತ್ತು ಕೆಟ್ಟ ಸಾಹಿತ್ಯವನ್ನು ಹೊರತುಪಡಿಸಿದ ಉತ್ತಮ ಸಂಗೀತದ ಹಾಡುಗಳನ್ನು ಕೇಳಿಬರಲು, ಮತ್ತು ಆ ಹಾಡುಗಳ ಮಾದಕ ನೃತ್ಯವನ್ನು (ಅಂದ್ರಿತಾ ರೇ ರವರ) ನೋಡಿ ಬರಲು ಖಂಡಿತಾ ಹೋಗಿ ಬನ್ನಿ. ಕೊಟ್ಟ ದುಡ್ಡಿಗೆ ಮೋಸವಿಲ್ಲ!

ಕನ್ನಡ ಸಾಹಿತ್ಯ ಸಮ್ಮೇಳನ , ಚಿತ್ರದುರ್ಗ ಪ್ರವಾಸ


ಕೋಟೆಯ ಮೇಲಿಂದ ಸೆರೆ ಹಿಡಿದ ಒಂದು ಪಕ್ಷಿನೋಟ. (ಗಾಳಿಗೋಪುರದ ಜೊತೆ ಕನ್ನಡ ಬಾವುಟಗಳನ್ನು ಕಾಣಬಹುದು)
ಸಿದ್ಧತೆ
ಕೊನೆಯ ದಿನ ಸಮ್ಮೇಳನದಲ್ಲಿ ಭಾಗವಹಿಸುವ ಮತ್ತು ಚಿತ್ರದುರ್ಗವನ್ನು ಸುತ್ತಾಡುವ ಮಹದಾಸೆಯಿಂದ ಶುಕ್ರವಾರ ಸಂಜೆ ೫ ಘಂಟೆಗೆ ನನ್ನ ಇಂಡಿಕಾ ರಥದಲ್ಲಿ ಹೊರಟೆವು. ೫ ಜನರ ತಂಡದಿಂದ ಒಬ್ಬ ಹಿಂದೆ ಸರಿದು, ಉಳಿದದ್ದು ನಾನು, ರವೀಶ, ಮಧುರ್ ಮತ್ತು ಆದರ್ಶ. ರಾಷ್ಟ್ರೀಯ ಹೆದ್ದಾರಿ-೪ ರಲ್ಲಿ ಚಲಿಸಿ ಚಿತ್ರದುರ್ಗವನ್ನು ತಲುಪಿದಾಗ ರಾತ್ರಿ ೯:೩೦. ಜನರು ಸಮ್ಮೇಳನದಲ್ಲಿ ಊಟ ಮುಗಿಸಿ ಗುಂಪು ಗುಂಪಾಗಿ ಮನೆಗೆ ತೆರಳುತಿದ್ದರು. ಬಹಳ ಬೇಡಿಕೆಯಲ್ಲಿದ್ದ ವಸತಿ ಗೃಹಗಳಿಗೆ ಹೆಣಗಾಡಿ ಕೊನೆಗೆ ದುಬಾರಿಯೆನಿಸಿದ (ನಾಲ್ಕು ಜನರಿಗ ೧ ಕೊಠಡಿ, ೧೨೦೦ ರೂ) ಕೊಠಡಿಯನ್ನಿಡಿದೆವು. ರಾತ್ರಿ ಸುಖನಿದ್ದೆಗೆ ಜಾರಿ, ಬೆಳಗೆದ್ದು ಸಾಹಿತ್ಯ ಸಮ್ಮೇಳನದ ಕೊನೆಯ ದಿನವನ್ನು ಕಣ್ಣಾರೆ ನೋಡಲು ಸಿದ್ಧರಾದೆವು.

ಸಮ್ಮೇಳನ,ಸಂಗೀತ,ಭಾಷಣ,ಕವಿಘೋಷ್ಠಿ, ಪುಸ್ತಕ ಮಳಿಗೆಗಳು ಮತ್ತು ಊಟ
ಭವ್ಯವಾಗಿ ಅಲಂಕೃತಗೊಂಡ ’ತಾ ರಾ ಸು’ ವೇದಿಕೆಯನ್ನು ಕಂಡು ಮನಸ್ಸು ಪುಳಕಿತಗೊಂಡಿತು! ಮದಕರಿ ನಾಯಕನ, ಒನಕೆ ಓಬವ್ವನ ಚಿತ್ರಪಟಗಳು ಮುಖ್ಯವಾಗಿ ವೇದಿಕೆಯ ಹಿಂಭಾಗದಲ್ಲಿ ರಾರಾಜಿಸುತ್ತಿದ್ದವು.ವೇದಿಕೆಯ ಮೇಲೆ ಒಬ್ಬ ಹಿರಿಯರು ಮತ್ತು ಸಂಗಡಿಗರು ಕರ್ನಾಟಕ ಸಂಗೀತದಲ್ಲಿ ವೀಣೆಯನ್ನು ನುಡಿಸುತ್ತಿದ್ದರು. ಬಹಳ ಅದ್ಭುತವಾಗಿತ್ತು ಆ ವೀಣಾವಾದನ. ಆದರೆ ಒಂದು ಕೊರಗಂತೂ ಮನಸ್ಸಿನಲ್ಲುಳಿಯಿತು. ಬೇರೆ ವೇದಿಕೆಗಳಲ್ಲಿ ಕನ್ನಡೇತರ ಕೃತಿಗಳನ್ನು ನುಡಿಸಿದರೆ ಬೇಜಾರಿಲ್ಲ, ಆದರೆ ಕನ್ನಡವೇ ರಾರಾಜಿಸಿಬೇಕಾದ ಇಂತಹ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಕೃತಿಗಳನ್ನೇ ನುಡಿಸುವುದೊಳಿತೆಂಬುದು ನನ್ನ ಅನಿಸಿಕೆ. ಅಂದಹಾಗೆ ಅಲ್ಲಿ ನುಡಿಸುತ್ತಿದ್ದುದು ಮುತ್ತು ಸ್ವಾಮಿ ದೀಕ್ಷಿತರ ’ವಾತಾಪಿ ಗಣಪತೀಂ’, ನಂತರ ಪುರಂದರದಾಸರ ’ಭಾಗ್ಯದ ಲಕ್ಷ್ಮಿ ಬಾರಮ್ಮ’ ದೇವರ ನಾಮದಿಂದ ಮುಕ್ತಾಯವಾಯಿತು. ನಂತರ ವೀಣೆ ನುಡಿಸಲು ಬಂದ ಮತ್ತೊಂದು ತಂಡ ಕೂಡ ’ವಾತಾಪಿ’ ಕೃತಿಯಿಂದಲೇ ಪ್ರಾರಂಭಿಸಿದರು. ಕಾರ್ಯಕ್ರಮವನ್ನು ವಿಘ್ನನಿವಾರಕ ಗಣಪತಿಯ ಆರಾಧನೆಯೊಂದಿಗೆ ಪ್ರಾರಂಭಿಸುವುದು ವಾಡಿಕೆ. ಕನ್ನಡದ್ದೇ ಆದ ದಾಸರ ’ಗಜವಧನ ಬೇಡುವೆ’ ಕೃತಿಯಿಂದ ಆರಂಭಿಸಿದ್ದಿದ್ದರೆ ಕಾರ್ಯಕ್ರಮ ಇನ್ನೂ ಅರ್ಥಪೂರ್ಣವಾಗಿರುತ್ತಿತ್ತು. (ಇಲ್ಲೊಂದು ಸ್ಪಷ್ಟೀಕರಣ: ನನಗೆ ಮುತ್ತು ಸ್ವಾಮಿ ದೀಕ್ಷಿತರ ಮತ್ತು ಅವರ ಕೃತಿಗಳ ಮೇಲೆ ಬಹಳ ಅಭಿಮಾನ, ಅಪಾರ ಗೌರವ. ಆದರೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡವೇ ರಾರಾಜಿಸಬೇಕೆಂಬುದು ಆಸೆ).ನಂತರ ಇದೇ ತಂಡ ಕೆಲವು ಕನ್ನಡದ ಭಾವಗೀತೆಗಳನ್ನು ವೀಣೆಯಲ್ಲಿ ನುಡಿಸಿದರು. ಸಮಾನ್ಯವಾಗಿತ್ತು! (ಇದೇ ರೀತಿ ಮತ್ತೊಂದು ವೇದಿಕೆಯಲ್ಲಿ, ತೆಲುಗಿನ ’ರಾ ರಾ’ ಹಾಡಿಗೆ ನೃತ್ಯ ಪ್ರದರ್ಶನ ಮಾಡಿ, ಪ್ರತಿಭಟನೆ ಕೂಡ ನಡೆದಿದ್ದನ್ನು ನೆನಪಿಸಿಕೊಳ್ಳಬಹುದು.)

(ಮೇಲೆ) ಮದಕರಿನಾಯಕನ ಮಂಟಪ
(ಕೆಳಗೆ) ತಾ ರಾ ಸು ವೇದಿಕೆ



ನಂತರ ಕವಿಘೋಷ್ಠಿಗೆ ವೇದಿಕೆ ಸಜ್ಜಾಯಿತು. ಇದು ನಾನು ಪ್ರತ್ಯಕ್ಷವಾಗಿ ನೋಡುತ್ತಿದ್ದ ಮೊದಲ ಕಾವ್ಯಘೋಷ್ಠಿಯಾದದ್ದರಿಂದ ಉತ್ಸಾಹ ತುಸು ಜಾಸ್ತಿಯಾಗಿತ್ತು. ನೆರೆದಿದ್ದ ಎಲ್ಲಾ ಕವಿಗಳ ಸನ್ಮಾನವಾದ ಮೇಲೆ, ಒಬ್ಬರ ಭಾಷಣ. ಈ ಭಾಷಣ ನನ್ನ ಉತ್ಸುಕತೆಯನ್ನು ಇಳಿಸಿಬಿಟ್ಟಿತು. ಮೊದಲೇ ಸಮ್ಮೇಳನಾಧ್ಯಕ್ಷರ ಕೆಟ್ಟ ಭಾಷಣವನ್ನು (ಆ ಭಾಷಣದಲ್ಲಿ ಸಮ್ಮೇಳಾಧ್ಯಕ್ಷರು ಆ ವರ್ಗ,ಈ ವರ್ಗ ಎಂದು ಮನುಷ್ಯರನ್ನು ವರ್ಗೀಕರಿಸಿ ಕೆಲೊವೊಂದು ವರ್ಗದವರ ಮೇಲೆ ವಿಷ ಕಾರಲು ಬಹಳಷ್ಟು ಸಮಯವನ್ನು ಮೀಸಲಿಟ್ಟಿದ್ದರು!) ಓದಿದ್ದ ನನಗೆ, ಈ ಮಹಾನುಭಾವನ ಭಾಷಣವನ್ನು ಕೇಳಿ ಸಮ್ಮೇಳನದ ಬಗ್ಗೆ ನಿರಾಸಕ್ತಿ ಮೂಡಿಸಿಬಿಟ್ಟಿತು.ಇನ್ನು ಕವಿಘೋಷ್ಠಿಯ ಮೊದಲನೆ ಕಾವ್ಯ ವಾಚನವನ್ನು ಆಲಿಸಿದೆ, ಮತ್ತೆ ಆಸಕ್ತಿಯನ್ನು ಕೆರಳಿವಂತಿರಲಿಲ್ಲ ಆ ವಾಚನ. ಎಲ್ಲರೂ ಪುಸ್ತಕ ಮಳಿಗೆಗಳ ಕಡೆ ಹೆಜ್ಜೆ ಹಾಕಿದೆವು.

ಪುಸ್ತಕ ಮಾರಾಟ ಮಳಿಗೆಗಳ ಅವ್ಯವಸ್ಥೆಯ ಬಗ್ಗೆ ಬಹಳಷ್ಟು ಸುದ್ದಿಯನ್ನು ವೀಕ್ಷಿಸಿ, ಓದಿದ್ದ ನಮಗೆ ಅಷ್ಟೇನು ತೊಂದರೆಯಾಗಲಿಲ್ಲ. ಅಪಾರ ಮಳಿಗೆಗಳಿದ್ದವು. ಬಹಳಷ್ಟು ಮಳಿಗೆಗಳನ್ನು ಸುತ್ತಾಡಿ, ಪುಸ್ತಕಗಳನ್ನು ಕೊಂಡು ಊಟಕ್ಕೆ ಹೊರಟೆವು. ಸ್ವಲ್ಪ ಧೂಳು ಹೆಚ್ಚ್ಹೆನ್ನುವುದು ಬಿಟ್ಟರೆ, ಅಂತಹ ಅವ್ಯವಸ್ಥೆ ನನಗೇನೂ ಕಾಣಲಿಲ್ಲ.

ಊಟದ ವ್ಯವಸ್ಥೆ ಕೂಡ ಅದ್ಬುತವಲ್ಲದಿದ್ದರೂ ಚೊಕ್ಕಟವಾಗಿತ್ತು. ಬಹಳಷ್ಟು ಊಟದ ಮಳಿಗೆಗಳನ್ನು ತೆರೆಯಲಾಗಿತ್ತು. ಊಟವಾಯಿತು, ಕೊಠಡಿಗೆ ಹಿಂತಿರುಗಿದೆವು. ಇನ್ನು ಪ್ರವಾಸಕ್ಕೆ ಸನ್ನದ್ಧವಾದೆವು.

ಚಂದ್ರವಳ್ಳಿ

ಚಿತ್ರದುರ್ಗದ ಕೇಂದ್ರದಿಂದ ೨ ಕಿ ಮೀ ದೂರದಲ್ಲಿದೆ. ಸಂಜೆ ನಾಲ್ಕು ಘಂಟೆಗೆ ಹೊರಟೆವು. ಚಂದ್ರವಳ್ಳಿಯಲ್ಲಿ ಮೊದಲು ಎದುರಾಗುವುದು ಭವ್ಯ ಕೆರೆ. ಮುಂದುವರೆದು, ಸ್ವಲ್ಪ ಮೇಲೆರಿದರೆ, ಗುಡ್ಡದಂತಹ ಪ್ರದೇಶದಲ್ಲಿ, ಗುಹೆಗಳು. ಒಬ್ಬ ಮಾರ್ಗದರ್ಶಿಯನ್ನು ಹಿಡಿದು ಕಗ್ಗತ್ತಲಿನ ಗುಹೆಗಳನ್ನು ಸುತ್ತಾಡಿದೆವು. ಅದ್ಭುತವೆನಿಸಿತು. ನಾವು ಬೆಟ್ಟದ ತುದಿಯಿಂದ ೭೫ ಮೀ ಕೆಳಗೆ, ಗುಹೆಯೊಳಗೆ ಇದ್ದೇವೆಂದಾಗ ಆಶ್ಚರ್ಯವಾಯಿತು. ಆ ಗುಹೆಗಳ ರಚನೆಗೆ ಮತ್ತು ಗೊಹೆಯೊಳಗಿನ ಚಿತ್ರ ಮತ್ತು ಶಿಲ್ಪ ಕಲೆಗೆ ತಲೆದೂಗಿದೆವು. ಆ ಗುಹೆ ಒಬ್ಬರು ಸ್ವಾಮೀಜಿಗಳು ವಾಸವಾಗಿದ್ದ ಸ್ಥಳವಂತೆ. ಆಗಿನ ಸ್ವಾಮಿಗಳು ಲೌಖಿಕತೆಯಿಂದ ದೂರವಿರಲು ಎಂತಹ ಸ್ಥಳಗಳನ್ನು ಆಯ್ಕೆ ಮಾಡುತ್ತಿದರು ಎಂದು ನೆನೆದು ಸೋಜಿಗವೆನಿಸಿತು ನನಗೆ!


(ಮೇಲೆ) ಕಗ್ಗತ್ತಲಿನ ಗುಹೆ (ಕ್ಯಾಮರಾದ ಬೆಳಕಿನಿಂದ ಕತ್ತಲೆ ಮಾಯವಾಗಿದೆ!)
(ಎಡ) ಗುಹೆಯೊಳಗೆ, ಸ್ವಾಭಾವಿಕ (ತರಕಾರಿಗಳಿಂದ) ಬಣ್ಣಗಳಿಂದ ಮೂಡಿ ಬಂದಿರುವ ಚಿತ್ರ
(ಕೆಳಗೆ) ಗುಹೆಯೊಳಗಿನ ಕೆತ್ತನೆ




ಚಂದ್ರವಳ್ಳಿಯ ಒಳಗೆ,ಸುತ್ತಮುತ್ತ



ಜಂಗ್ಲಿ
ಚಂದ್ರವಳ್ಳಿ ನೋಡಿ ಬಂದು ಅಲ್ಲಿನ ಒಂದು ಚಿತ್ರಮಂದಿರದಲ್ಲಿ, ರಾತ್ರಿ ಆಟದಲ್ಲಿ ಈ ಕನ್ನಡ ಚಲನಚಿತ್ರವನ್ನು ನೋಡಿದೆವು. ಇದರ ವಿಮರ್ಶೆಯನ್ನು ಶೀಘ್ರದಲ್ಲೆ ನಿರೀಕ್ಷಿಸಿ. ನಂತರ ನಿದ್ದೆ ಮಾಡುವ ಸಮಯವಾಗಿತ್ತು.

ಏಳು ಸುತ್ತಿನ ಕೋಟೆ

ಚಿತ್ರದುರ್ಗದ ಐತಿಹಾಸಿಕ ಕೋಟೆಯನ್ನು ಸುತ್ತಾಡಲು, ಬೆಳಗ್ಗೆ ಬೇಗನೆ ಹೊರಟೆವು. ಸುಮಾರು ೫ ಘಂಟೆಗಳ ಕಾಲ ಕೋಟೆಯನ್ನು ಸುತ್ತಾಡಿದೆವು. ಬಹಳ ಆನಂದ ಪಟ್ಟೆವು. ಕೋಟೆಯ ಬಗ್ಗೆ ಹೆಚ್ಚು ಬರೆಯುವುದಿಲ್ಲ. ಛಾಯಾಚಿತ್ರಗಳೆ ಮಾತಾಡಲಿ!


(ಮೇಲೆ)ಕೋಟೆಯ ಕಲ್ಲಿನ ಗೋಡೆಯ ಮುಂದೆ ಪ್ರಜೆಗಳು (ಬಲದಿಂದ ಎಡಕ್ಕೆ :ನಾನು, ಆದರ್ಶ, ರವೀಶ,ಮಧುರ್)
(ಬಲ)ಕೋಟೆಯ ಒಂದು ಕಲ್ಲಿನ ಗೋಡೆಯ ಮೇಲೆ ’ನಾಗರ ಹಾವಿನ’ ಲಾಂಚನ
(ಕೆಳಗೆ)ಅರಮನೆಯ ಪಳೆಯುಳಿಕೆ



















1)ತುಪ್ಪದ ಕೊಳಕ್ಕೆ ಇಳಿಯುತ್ತಿರುವ ನಾನು
2)ಓಬವ್ವನ ಕಿಂಡಿ ಯಲ್ಲಿ ಶತ್ರು!
3)ದೇಹದ ಗುರುತ್ವಾಕರ್ಷಣ ಕೇಂದ್ರ ಬಿಂದುವನ್ನು ಕೆಳಗಿಳಿಸಿ ಹತ್ತು!
4)ಕೋಟೆ ಹತ್ತಿದ್ದಕ್ಕೆ ಪುರಾವೆ!
(ಛಾಯಚಿತ್ರ ಮತ್ತು ಅಡಿಬರಹವನ್ನು ನೀವೇ ಹೊಂದಿಸಿಕೊಳ್ಳಿ!)








































ಚಿತ್ತಾರ/ಚಿತ್ರ - ದುರ್ಗ



1)ಮೊಲ/ಗೂಳಿ ಬಂಡೆ
2)ಆನೆ ಬಂಡೆ
3)ಹಡಗು ಬಂಡೆ
4)ಕಪ್ಪೆ ಬಂಡೆ
(ಚಟುವಟಿಕೆ : ಬಂಡೆಯನ್ನು ಆಕಾರದ ಅಡಿಬರಹಕ್ಕೆ ಹೊಂದಿಸಿ!)














ಜೋಗಿಮಟ್ಟಿ, ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ
ಕೋಟೆಯ ವೀಕ್ಷಣೆಯ ನಂತರ ಚಿತ್ರದುರ್ಗದಿಂದ ೧೦ ಕಿ ಮೀ ದೂರವಿರುವ ಜೋಗಿಮಟ್ಟಿ ಗಿರಿಧಾಮಕ್ಕೆ ಹೊರಟೆವು. ಜೋಗಿಮಟ್ಟಿಗೆ ತಲುಪಲು ಅರಣ್ಯ ಇಲಾಖೆಯ ಅನುಮತಿ ಪತ್ರವಿರಬೇಕೆಂಬುದನ್ನು, ಅರಣ್ಯ ಸಿಬ್ಬಂದಿಯಿಂದ ತಿಳಿಸಲ್ಪಟ್ಟಾಗ ನಿರಾಸೆಯಿಂದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ಗಾಡಿಯನ್ನು ತಿರುಗಿಸಿದೆವು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಮೈಸೂರು ಪ್ರಾಣಿ ಸಂಗ್ರಹಾಲಯಗಳನ್ನು ನೋಡಿದ ಬೆಂಗಳೂರು-ಮೈಸೂರು ಸೀಮೆಯವರಿಗೆ ಈ ಪ್ರಾಣಿಸಂಗ್ರಹಾಲಯದಲ್ಲಿ ನಿರಾಸೆ ಕಟ್ಟಿಟ್ಟ ಬುತ್ತಿ!

ಮದಿಸಿದ ಕರಿಯ ಮದವಡಗಿಸಿದ ಮದಕರಿನಾಯಕನ ಪ್ರತಿಮೆ!
ನೆಲಂಗಲದ ಬವಣೆ,
ಚಿತ್ರದುರ್ಗದಿಂದ ೪ ಘಂಟೆಗೆ ಹೊರಟು ನೆಲಮಂಗಲ ವಾಹನದಟ್ಟಣೆಯಲ್ಲಿ ಪ್ರಾಣಹಿಂಸೆ ಅನುಭವಿಸಿ ಮನೆ ತಲುಪಿದಾಗ ರಾತ್ರಿ ೯:೩೦.

ಒಟ್ಟಿನಲ್ಲಿ ಸಮ್ಮೇಳನ, ವಾಹನ ದಟ್ಟಣೆಯ ಕಹಿಯನ್ನು, ಚಿತ್ರದುರ್ಗ ಪ್ರವಾಸದ ನೆನಪುಗಳು ಮರೆಸಿತ್ತು.

ಧನ್ಯವಾದಗಳು: ರವೀಶ, ಮಧುರ್ ಮತ್ತು ಆದರ್ಶ ಸೆರೆ ಹಿಡಿದ ಬಹಳಷ್ಟು ಭಾವಚಿತ್ರಗಳನ್ನು ಅವರ ಅನುಮತಿ ಇಲ್ಲದೆ ಧಾರಾಳವಾಗಿ ಇಲ್ಲಿ ಬಳಸಿದ್ದೇನೆ.ಗೆಳೆಯರೆ ಛಾಯಾಚಿತ್ರಗಳಿಗೆ ಧನ್ಯವಾದಗಳು.

ಬುಧವಾರ, ಫೆಬ್ರವರಿ 04, 2009

ಬೀರು ಹೇಳಿದ ಪಬ್ಬಿನ ಕಥೆ!

ಇದ್ದ ಐವರಲ್ಲಿ ಉತ್ತಮನು ಯಾರು?
ನಾನೇ ಎಂದಿತು ಪಬ್ಬಿನ ಬೀರು!
ಪಬ್ಬಿನ ಹೈಕಳಿಗೆ ಮ(ಮು)ತ್ತನು ಕೊಟ್ಟೆ!
ಧೀರ-ಶೂರ ಸೇನೆಯನ್ನು ಜೈಲಿಗೆ ಅಟ್ಟೆ!
ಮಾಧ್ಯಮಕ್ಕೆ ಬಿಸಿ ಬಿಸಿ ಸುದ್ದಿಯ ಹಾರಿಸಿ ಬಿಟ್ಟೆ!
ರೇಣುಕಾ ಅಮ್ಮನಿಗೆ ಯಾಕೊ ಕಾಣೆ, ಬರೀ ಸಿಟ್ಟೆ!

ಬೀರು ಉವಾಚ,
ತೋರುವರು ತಮ್ಮ ಬೆಟ್ಟುಗಳನ್ನು ನನ್ನೆಡೆಗೆ(ಇನ್ನೊಬ್ಬನೆಡೆಗೆ), ನರರು
ಮುಚ್ಚಿಕೊಳ್ಳಲು ತಮ್ಮ ದೌರ್ಬಲ್ಯಗಳನು,

ಪಬ್ಬಿನ ಹೈಕಳಿಗೆ ಅಮಲಿನ,
ಸೇನೆಗೆ ಕ್ಷಣದಲಿ ಸರ್ವನಾಯಕರಾಗುವ ದುರಾಸೆಯ,
ಮಾಧ್ಯಮಕ್ಕೆ ಹಸಿ ಬಿಸಿ ಸುದ್ದಿಯನು ತೋರುವ ತೆವಲಿನ,
ರೇಣುಕಮ್ಮನಿಗೆ ರಾಜಕೀಯದಲ್ಲಿ ಚಾಲ್ತಿಯಲ್ಲಿರಬೇಕಾದ,
ಇವುಗಳನ್ನೋದುವವರಿಗೆ ಕೆಲಸದೊತ್ತಡದ ಮಧ್ಯೆ ಬೇಕಾದ ಮನರಂಜನೆಯ ದೌರ್ಬಲ್ಯ......