ಗುರುವಾರ, ನವೆಂಬರ್ 02, 2006

ಸುವರ್ಣ ಕನ್ನಡ ರಾಜ್ಯೋತ್ಸವ - ಕನ್ನಡ ಕವಿಗಳಿಗೆ ನಮನ - ೪

ನೆನ್ನೆಯ ಸುವರ್ಣ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ರಾಜ್ಯದಾದ್ಯಂತ ಆಚರಿಸಲ್ಪಟ್ಟಿತು.. ಏಕೀಕರಣಕ್ಕೆ ದುಡಿದ, ಮತ್ತು ಕನ್ನಡದ ಏಳಿಗೆಗೆ ಶ್ರಮಿಸಿದ ಹಲವು ಪ್ರಮುಖ ವ್ಯಕ್ತಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಮೂಲಕ (ಹಲವು ವಿವಾದಗಳ ನಡುವೆ) ಗೌರವಿಸಲಾಯಿತು. ಈ ಮಧ್ಯೆ ಈ ವರ್ಷದ ವಿಶಿಷ್ಟವಾದ ಪ್ರಶಸ್ತಿ ರಾಷ್ಟ್ರಕವಿ ಪ್ರಶಸ್ತಿ.

ಈ ರಾಷ್ಟ್ರಕವಿ ಪ್ರಶಸ್ತಿಯನ್ನು ಡಾ. ಜಿ ಎಸ್ ಶಿವರುದ್ರಪ್ಪ ನವರಿಗೆ ಕೊಡಲಾಗಿದೆ. ವಿಶೇಷ ಏನಪ್ಪ ಅಂದ್ರೆ ಈ ಪ್ರಶಸ್ತಿ ಪಡೆದ ಮೂರನೆಯ ವ್ಯಕ್ತಿ/ಕವಿ ಇವರು. ಇದಕ್ಕಿಂತ ಮುಂಚೆ ಈ ಗೌರವಕ್ಕೆ ಪಾತ್ರರಾದವರು ಕುವೆಂಪು ಮತ್ತೆ ಗೋವಿಂದ ಪೈ (ತಾಯೆ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ ಕವನ ಬರೆದ ಮಹಾನ್ ಕವಿ).

ಡಾ ಜಿ ಎಸ್ ಶಿವರುದ್ರಪ್ಪನವರು ತಮ್ಮ ವಿಮರ್ಶೆಗಳಿಗೆ ಮತ್ತು ಕಾವ್ಯ ಮೀಮಾಂಸೆಗಳಿಗೆ ಬಹಳ ಪ್ರಸಿದ್ಧರು. ಇವರ ಕವನಗಳಂತೂ ಬಹಳ ಸುಪ್ರಸಿದ್ಧ. ಇವರ ಬಹಳಷ್ಟು ಕವನಗಳು ಭಾವಗೀತೆಗಳಾಗಿ ಹೆಸರಿಸಲ್ಪಟ್ಟು ಹೆಸರಾಂತ, ಖ್ಯಾತ ಸಂಗೀತ ನಿರ್ದೇಶಕರ/ಹಾಡುಗಾರರ (ಮೈಸೂರು ಅನಂತಸ್ವಾಮಿ, ಸಿ ಅಶ್ವಥ್ ) ದುಡಿಮೆಯಿಂದ ಧ್ವನಿಸುರ್‍ಇಳಿಗಳಾಗಿ ಹೊಮ್ಮಿವೆ.. ಇವನ್ನು ನೀವುಗಳು ಕೊಂಡು ಕೇಳಿ.. ನಿಮ್ಮ ತನುಮನಗಳನ್ನು ತಣಿಸದೆ ಬಿಡಲಾರವು!!!

ಹೀಗೆ ಇವರ ಕೆಲವೊಂದು ಪದ್ಯಗಳನ್ನು ನೆನೆಸಿಕೊಳ್ತಾ...

ಅನ್ವೇಷಣೆ ( ಇದು ನನ್ನ ಅತ್ಯಂತ ಅಚ್ಚು ಮೆಚ್ಚಿನ ಗೀತೆ)

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮಳೊಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೊ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ

ತೃಪ್ತಿ


ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು.
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ,
ಕೇಳುವವರಿಹರೆಂದು ನಾಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ .