ಮಂಗಳವಾರ, ಮಾರ್ಚ್ 24, 2009

ಅರ್ಧ ಶತಕದ ಹಾದಿಯಲ್ಲಿ,

ಇದು ನನ್ನ ಬ್ಳಾಗ್ ತಾಣದ ೫೦ ನೇ ಅಂಕಣ. ನಾನು ೨೦೦೬ ರಲ್ಲಿ ಬ್ಳಾಗ್ ಲೋಕಕ್ಕೆ ಕಾಲಿಟ್ಟಾಗ ಈ ಬ್ಳಾಗಿಂಗ್ ಬಗ್ಗೆ ಆಶ್ಚರ್ಯ ಮತ್ತು ಮೆಚ್ಚುಗೆ ವ್ಯಕ್ತ ಪಡಿಸಿದ್ದೆ. ನಂತರ ಬರೆದದ್ದು ಒಂದೊಷ್ಟು ಜಳ್ಳು, ಒಂದಷ್ಟು ಗಟ್ಟಿ.

ಮೊದಲಿಗೆ ಕನ್ನಡದಲ್ಲೇ ಪ್ರಾರಂಭಿಸಿದರೂ, (ಕನ್ನಡ ಉಚ್ಚಾರಣೆಯನ್ನು ಆಂಗ್ಲದಲ್ಲಿ ಬರೆದು) ಲಿಪ್ಯಂತರ ಮಾಡಲಿಲ್ಲ. (ದಾಂಡೇಲಿಗೆ ಚಾರಣ - ಇದನ್ನು ಸಂಪೂರ್ಣವಾಗಿ ಬರೆದು ಮುಗಿಸಲೂ ಇಲ್ಲ!). ನಂತರ ಶೇಷಾದ್ರಿ ವಾಸುರವರ ಮಾಂತ್ರಿಕ ತಂತ್ರಙ್ನಾನ ’ಬರಹ’ (Barahapad) ಉಪಯೋಗಿಸಿ ಕನ್ನಡದಲ್ಲೇ ಬರೆಯುತ್ತಾ ಬಂದಿದ್ದೇನೆ. ಆಗಾಗ ಆಂಗ್ಲ ಬಾಷೆಯಲ್ಲೂ ಬರೆದದ್ದುಂಟು.(kurumgad island, The White Tiger Review, The Guru Film Review). ಆದರೆ ಓದುಗರು ಇದ್ದುದರಲ್ಲಿ ಮೆಚ್ಚಿದ್ದು ನಾನು ಕನ್ನಡದಲ್ಲಿ ಬರೆದಿದ್ದನ್ನೆ. ಆದುದರಿಂದ ಈ ಬ್ಳಾಗ್ ತಾಣದಲ್ಲಿ ಸಂಪೂರ್ಣ ಕನ್ನಡದಲ್ಲೆ ಬರೆಯಲು ನಿರ್ಧರಿಸಿದೆ. ಜೂನ್ ೨೦೦೬ ರಿಂದ ಸೆಪ್ಟಂಬರ್ ೨೦೦೮ ರವರೆಗೆ ಬರೆದದ್ದು ಬಹಳ ಕಡಿಮೆ. ಕಾರಣಗಳು ಬಹಳಷ್ಟು, ಅದರ ಚರ್ಚೆಯ ಅಗತ್ಯ ಇಲ್ಲಿಲ್ಲ. ಬರೆದದ್ದು ಬರೀ ೧೪ ಲೇಖನಗಳು! ನಂತರ ಅಕ್ಟೋಬರ್ ೨೦೦೮ ರಿಂದ ಇಲ್ಲಿಯವರೆಗೆ ನಿರಂತರವಾಗಿ, (ನಿರಂತರ ಅಂದರೆ, ಅಂಕಣಗಳ ಮಧ್ಯೆ ಹೆಚ್ಚು ಸಮಯದ ಅಂತರವಿಲ್ಲದೆ ಬರೆಯುತ್ತಾ ಬಂದಿದ್ದೇನೆ.

ಮೊದಲಿಗೆ ಈ ಬ್ಳಾಗ್ ನ ಹೆಸರನ್ನು "ನನ್ನ ಬ್ಳಾಗು" ಎಂದಿದ್ದೆ, ನಂತರ ಬರೆಯುವುದು ಕಡಿಮೆಯಾದಾಗ, ೧೫ ದಿನಗಳಿಗೊಮ್ಮೆ ಬರೆಯೋಣವೆಂದು "ಅಮಾವಾಸ್ಯೆಗೊಂದು ಸಾರ್ತಿ, ಪೊರ್ಣಾಮಿಗೊಂದು ಸಾರ್ತಿ - A Fortnightly Blog" ಎಂದು ಹೆಸರು ಬದಲಾಯಿಸಿದೆ. ಆದರೂ ಹೆಸರಿಗೆ ವ್ಯತಿರಿಕ್ತವಾಗಿ, (ಹೊಂದಿಕೆಯಿಲ್ಲದೆ) ಇತ್ತೇಚೆಗೆ ಹೆಚ್ಚಾಗಿಯೇ ಬರೆಯುತ್ತಿದ್ದೇನೆ.

ಬಹಳಷ್ಟು ಬ್ಳಾಗ್ ತಾಣಗಳು ಒಂದು ವಿಷಯಕ್ಕೆ ಸೀಮಿತಗೊಳ್ಳುತ್ತವೆ! ನನ್ನದು ಅದೇಕೋ ಹಾಗಾಗಲಿಲ್ಲ.ಬಹಳಷ್ಟು ವಿಷಯಗಳ ಚರ್ಚೆಗಳು ಇಲ್ಲಿ ನಡೆದವು. ಓದುಗರು ಇದನ್ನು ವೈವಿಧ್ಯಮಯ ಅನ್ನಬಹುದು ಅಥವಾ ಚಿತ್ರಾನ್ನ ಅಂತಲೂ ಕರೆಯಬಹುದು. ಅವುಗಳ ಒಂದು ಸಣ್ಣ ಅವಲೋಕನ.

ಅಮೇರಿಕೆಯಲ್ಲಿ ಅಕ್ಕ ಸಮ್ಮೇಳನ ನಡೆದಾಗ, ನನ್ನ ಅನಿಸಿಕೆಯನ್ನು ಬರೆದೆ. ಸ್ವಲ್ಪ ದಿನಗಳ ನಂತರ ಅದನ್ನು ಓದಿದಾಗ, ಬರೆದ ವಿಷಯ ಮತ್ತು ಬರೆದ ರೀತಿ ನನಗೇ ಇಷ್ಟವಾಗಲಿಲ್ಲ. ಇದನ್ನು ವಿಕ್ರಾಂತ ಕರ್ನಾಟಕ ಮತ್ತು ದಟ್ಸ್ ಕನ್ನಡ ಅಂತರ್ಜಾಲ ತಾಣಗಳಿಗೆ ಕಳಿಸಿಕೊಟ್ಟಾಗ, ಇದು ವಿಕ್ರಾಂತ ಕರ್ನಾಟಕ ಅಂತರ್ಜಾಲದಲ್ಲಿ ಪ್ರಕಟವಾಯಿತಾದರೂ, ವ್ಯಯಕ್ತಿಕಾವಾಗಿ ಮತ್ತೊಮ್ಮೆ ಓದಿದಾಗ ಇದನ್ನು ಬರೆಯಬಾರದಿತ್ತೆನ್ನಿಸಿತು. ಅದರಲ್ಲಿದ್ದ ಋಣಾತ್ಮಕ ಅಂಶಗಳು ನನಗೇ ಹಿಡಿಸದೆ ಹೋದವು!

ನಂತರ ನಾನು ಬಹಳ ಆಸಕ್ತಿಯಿಂದ ವಿಷಯಗಳನ್ನು ಸಂಗ್ರಹಿಸಿ ಬರೆದಿದ್ದು, ಸಾಹಿತಿಗಳು ಮತ್ತು ಕೆಲವು ಮಾಹಾತ್ಮರ ಬಗೆಗಿನ ವಿಷಯಗಳನ್ನ. ಕೆಲವನ್ನು ಅವರುಗಳ ಜನ್ಮೋತ್ಸವದಂದು ನುಡಿನಮನವಾಗಿ ಬರೆದೆ. ಅವುಗಳು ಈ ರೀತಿಯಲ್ಲಿವೆ,

ಕುವೆಂಪು ೧, ಕುವೆಂಪು ೨
ರಾಜರತ್ನಂ ೧, ರಾಜರತ್ನಂ ೨
ಬೇಂದ್ರೆ ೧, ಬೇಂದ್ರೆ ೨
ಜಿ ಎಸ್ ಶಿವರುದ್ರಪ್ಪ
ಭೀಮ್ ಸೇನ್ ಜೋಷಿ
ಕನಕದಾಸರು
ಡಿ ಎಸ್ ಕರ್ಕಿ
ತೀ ನಂ ಶ್ರೀ
ಡಿ ವಿ ಜಿ

ನಮ್ಮ ಕನ್ನಡ ಮತ್ತು ಆಂಗ್ಲ ಚಲನ ಚಿತ್ರಗಳ ಬಗ್ಗೆ ಚಕಾರವೆತ್ತಿ, ವಿಮರ್ಶೆಗಳನ್ನು ಬರೆದೆ. ಕೆಲವೊಮ್ಮೆ ಈ ವಿಮರ್ಶೆಗಳು ವ್ಯಯಕ್ತಿಕ ಅಭಿಪ್ರಾಯದ ಮಟ್ಟಕ್ಕೆ ಕೂಡ ಹೋದದ್ದುಂಟು, ಅವುಗಳು

ಐಶ್ವರ್ಯ
The Guru
ಗಾಳಿಪಟ
ಪಯಣ
ವಂಶಿ
ಬುದ್ಧಿವಂತ
ಸ್ಲಂಬಾಲ
ಜಂಗ್ಲಿ
ಗುಲಾಬಿ ಟಾಕೀಸ್

ನಾನು ಕನ್ನಡ ಮತ್ತು ಆಂಗ್ಲ ಪುಸ್ತಗಳನ್ನು ಹೆಚ್ಚು ಹೆಚ್ಚಾಗಿ ಓದುವೆನಾದರೂ, ಪುಸ್ತಗಳ ಬಗ್ಗೆ ಬರೆದದ್ದು ಯಾಕೋ ಕಡಿಮೆಯೆ.

The White Tiger
ನಾನು ಓದಿದ ಪುಸ್ತಕಗಳು
ಹಂಪಿ ಎಕ್ಸ್ ಪ್ರೆಸ್

ಕೆಲವು ಪ್ರವಾಸ / ಚಾರಣ ಕಥೆಗಳನ್ನು ಬರೆದೆ,

ದಾಂಡೇಲಿ (ಇದನ್ನು ಪೂರ್ಣಗೊಳಿಸಲಿಲ್ಲ!, ಇದು ಮತ್ತೊಮ್ಮೆ, ನನಗೆ ಮತ್ತೊಮ್ಮೆ ಓದಲು ಹಿಡಿಸದ ಲೇಖನವಾಯಿತು)
Kurumgad Island
ರಂಗನತಿಟ್ಟು ಮತ್ತು ಅತ್ತಿವೇರಿ ಪಕ್ಷಿಧಾಮಗಳು
ಕುಮಾರಪರ್ವತ
ಚಿತ್ರದುರ್ಗ(ಕೊನೆಯ ನಾಲ್ಕು ಪ್ರವಾಸ/ಚಾರಣ ಕಥೆಗಳಲ್ಲಿ ಹೇರಳ ಛಾಯಚಿತ್ರಗಳನ್ನು ಲಗತ್ತಿಸಿದ್ದೇನೆ)

ರಾಜಕೀಯ ಮತ್ತು ಪತ್ರಿಕಾ ಸುದ್ದಿಗಳನ್ನು ವಿಶ್ಲೇಷಿಸಿದ್ದುಂಟು.

ಬೆಳಗಾವಿ ಸಮಸ್ಯೆ
ಕುಮಾರಸ್ವಾಮಿ ೧
ಕುಮಾರಸ್ವಾಮಿ ೨
ಟೀಕೆ ಟಿಪ್ಪಣಿ
ಹವಾ ನಿಯಂತ್ರಿತ ತಂಗುದಾಣ
ಚೂರು ಚಿಂದಿ
ಕನ್ನಡ ಸಾಹಿತ್ಯ ಸಮ್ಮೇಳನ
ಪ್ರತಾಪ್ ಸಿಂಹ ೧
ಪ್ರತಾಪ್ ಸಿಂಹ ೨
ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ
ಪಬ್ಬು (ಇದು ಒಬ್ಬ ಕವಿಯ ಕವನವನ್ನು ಅನುಸರಿಸಿ, ವಿಡಂಬನಾ ಶೈಲಿಯಲ್ಲಿ ಬರೆದದ್ದು)
೪ ನೇ ಪೀಳಿಗೆ (ಇದಕ್ಕೆ ತಂತ್ರಙ್ನಾನದ ಹಣೆಪಟ್ಟಿಯನ್ನೂ ಹಚ್ಚಬಹುದು)

ಕೆಲವು ಲಲಿತ ಪ್ರಬಂಧಗಳನ್ನು ಬರೆಯಲು ಪ್ರಯತ್ನಿಸಿದೆ,

ಏಳೆನ್ನ ಮನದನ್ನೆ
ನೃತ್ಯ
ಹೊಟ್ಟೆ (ಜಾಗೃತ ಲೇಖನ!)
ಮಿದ್ದಿಟ್ಟು (ಪಾಕ ಶಾಸ್ತ್ರ!)

ಕಾರ್ಯಕ್ರಮಗಳ ವಿಮರ್ಶೆ, ಟಿಪ್ಪಣಿಗಳನ್ನು ಬರೆದೆ,

ಎದೆ ತುಂಬಿ ಹಾಡಿದೆನು
ವಸುಧೇಂದ್ರ ಸಂವಾದ (ಟಿಪ್ಪಣಿ)

ಇತ್ತೇಚೆಗೆ ಕಾರ್ಯಕ್ರಮಗಳ ವಿವರವನ್ನು ಒದಗಿಸುವ ಪ್ರಯತ್ನ ಮಾಡಿದೆ,

ಪುಸ್ತಕ ಪ್ರದರ್ಶನ
ಪೌರಾಣಿಕ ನಾಟಕಗಳುಡಿ ವಿ ಜಿ ಜಯಂತಿ

ಬಹಳಷ್ಟು ಲೇಖನಗಳನ್ನು ಹಾಸ್ಯಮಯವಾಗಿ ಬರೆಯಲು ಪ್ರಯತ್ನಿಸಿದ್ದುಂಟು, ಮತ್ತು ಹಾಸ್ಯವೇ ಪ್ರಧಾನವಾಗಿಟ್ಟುಕೊಂಡು ಎರಡು ಲೇಖನ ಬರೆದದ್ದುಂಟು, ಅವುಗಳು ಓದುಗರಿಗೆ ಹಾಸ್ಯದ ಕಚಗುಳಿಯಿಟ್ಟವೋ ಅಥವ ಹಾಸ್ಯಾಸ್ಪದವೆನಿಸಿ ಸಮಯ ವ್ಯರ್ಥವೆನಿಸಿದವೋ!

ಬಸ್ಸಿನ ಬೆನ್ನೇರಿ
ನನ್ನ ಪ್ರಬಂಧಕ!

ಎಲ್ ಕೆ ಜಿ ಯಲ್ಲಿ ಓದುತ್ತಿರುವ ನನ್ನ ಸೋದರಳಿಯ ಹನುಮಂತನ ವೇಷ ತೊಟ್ಟ ಪ್ರಸಂಗವನ್ನು ಕೂಡ ಓದುಗರ ಜೊತೆ ಹಂಚಿಕೊಂಡೆ

ಶ್ರೇಷ್ಠ ಹನುಮಂತನಾದದ್ದು

ಹೀಗೆ ಮನಸ್ಸಿಗೆ ತೋಚಿದ್ದೆಲ್ಲಾ ಬರೆಯುತ್ತಾ ಬಂದಿದ್ದೇನೆ. ಮೊದಲೇ ಹೇಳಿದಂತೆ ಒಂದಷ್ಟು ಜಳ್ಳು, ಕೆಲವು ಓದಲು ಯೋಗ್ಯ ಲೇಖನಗಳು. ಈ ವಿಷಯದಲ್ಲಿ "ಹೆತ್ತವರಿಗೆ ಹೆಗ್ಗಣ ಮುದ್ದು" ಎಂಬುದು ನನಗೆ ಹೊಂದುವುದಿಲ್ಲ. ನೀವೆಲ್ಲಾ ಓದುತ್ತಾ ಪ್ರೋತ್ಸಾಹ ಪೂರ್ವಕ ಪ್ರತಿಕ್ರೆಯೆಗಳನ್ನು ಕೊಡುತ್ತಾ, ಬೆನ್ನು ತಟ್ಟಿದ್ದೀರಿ. ಧನ್ಯವಾದಗಳು. ಹೀಗೆ ಓದುತ್ತಾ ಇರಿ. ನನ್ನ ಮಿತಿಯಲ್ಲಿ ಆದೊಷ್ಟು ಚೆನ್ನಾಗಿ ಬರೆಯಲು ಮುಂದೆ ಪ್ರಯತ್ನಿಸುತ್ತೇನೆ. ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಆದರೆ ತಪ್ಪುಗಳನ್ನು ಕೂಡ, ನಿಷ್ಟುರವಾಗಿ ಪ್ರತಿಕ್ರಿಯಿಸುವುದನ್ನು ಮಾತ್ರ ಮರೆಯಬೇಡಿ.

ಜೈ ಕರ್ನಾಟಕ ಮಾತೆ!

ಶನಿವಾರ, ಮಾರ್ಚ್ 21, 2009

ನನ್ನ ಪ್ರಬಂಧಕನ ಪ್ರಸಂಗ

ಅಧಿಕ ಪ್ರಸಂಗ!

ವಿಶೇಷ ಸೂಚನೆ: ಈ ಪ್ರಸಂಗ ಮತ್ತು ಪ್ರಸಂಗದ ಪಾತ್ರಧಾರಿಗಳೆಲ್ಲಾ ಕಾಲ್ಪನಿಕ! ’ನನ್ನ’, ’ನಾನು’ ಎಂಬುದು ಕೂಡ ಕಾಲ್ಪನಿಕ ಪಾತ್ರಧಾರಿಯೆ! ನಿಜ ಜೀವನಕ್ಕೆ ಸಮೀಪದಲ್ಲಿ ಕಂಡು ಬಂದರೆ ಅದು ಕಾಕತಾಳೀಯ ಮಾತ್ರ!

ನನ್ನ ಪ್ರಬಂಧಕನನ್ನು (ದೀಪಕ್ ಎಂದಿಟ್ಟುಕೊಳ್ಳಿರಿ) ಒಂದೇ ಸಾಲಿನಲ್ಲಿ ಬಣ್ಣಿಸುವುದಾದರೆ ’ಬೆಳೆದ ದೇಹ ಮತ್ತು ಬೆಳೆದ ಬುದ್ಧಿಯ ಅಸಮತೋಲನ’ (ಯಾವುದು ದೊಡ್ದದು, ಯಾವುದು ಚಿಕ್ಕದು ಎಂಬುದರ ಸ್ಪಷ್ಟೀಕರಣ ಅಗತ್ಯವಿಲ್ಲ, ಮುಂದೆ ಓದಿ ನಿಮಗೇ ತಿಳಿಯುತ್ತದೆ) ! ಇವನಿಗೆ ಒಂದು ಚಟ - ಹಾಸ್ಯ ಚಟಾಕಿಗಳನ್ನು ಹಾರಿಸುವುದು, ಮತ್ತು ಅದರಲ್ಲಿ ದಯನೀಯವಾಗಿ ಸೋಲುಂಡು ಅಪಹಾಸ್ಯಕ್ಕೀಡಾಗುವುದು. ಹೀಗೆ ಒಮ್ಮೆ ನಡೆದ ಪ್ರಸಂಗ ಓದಿ.

ಕೆಲವು ದಿನಗಳ ಹಿಂದೆ, ಆರ್ಥಿಕ ಹಿಂಜರಿತದ ಹಿನ್ನಲೆಯಲ್ಲಿ ನಮ್ಮ ಸಂಸ್ಥೆಯ ಎಲ್ಲಾ ನೌಕರ ಸಂಬಳಕ್ಕೂ (ಕೆಲವರು ಹೇಳುವಂತೆ ’ಕೂಲಿ ದುಡ್ಡಿ’ಗೆ) ಕತ್ತರಿ ಬಿತ್ತು. ಇಂತಹ ಶೋಕದ ಸನ್ನಿವೇಶದಲ್ಲೂ, ನಮಗೆ ಸಂತಸ ತಂದ ವಿಷಯವೆಂದರೆ, ಪ್ರಬಂಧಕರಿಗೆ ಅಭಿಯಂತರರಿಗಿಂತ ಶೇ ೩ ರಷ್ಟು ಹೆಚ್ಚು ಸಂಬಳ ಕಡಿತವಾಗಿತ್ತು. ನನ್ನ ಸಂಬಳ ಕಡಿತ (ಕ)% ಆದರೆ ನನ್ನ ಪ್ರಬಂಧಕನದು (ಕ+೩)% ಆಗಿತ್ತು. ಕಡಿತ ಹೆಚ್ಚಾದಂತೆ ಕೆರೆತ/ಗಾಯ ಕೂಡ ಹೆಚ್ಚಾಗಬೇಕೆಲ್ಲ!

ಆ ಕರಾಳ ದಿನದಂದು, ಯಾವುದೇ ಮುನ್ಸೂಚನೆಯಿಲ್ಲದೆ, ದೀಪಕ್ ಅಪರಾಹ್ನ ಊಟಕ್ಕೆ ನಮ್ಮ ಜೊತೆ ಬಂದು ಕೂತುಬಿಟ್ಟ. ಅವನು ಬಂದು ಕೂರುವ ಒಂದು ಸಣ್ಣ ಸೂಚನೆ ಸಿಕ್ಕಿದ್ದರೂ, ಅವನಿಗೆ ಕೂರಲಾಗದಂತ ಇಕ್ಕಟ್ಟಿನ ಜಾಗದಲ್ಲಿ ನಾವು ಊಟಕ್ಕೆ ಕುಳಿತುಬಿಡುತ್ತಿದ್ದೆವು! ಏಟುಗಳೇ ಹೀಗೆ, ಬಿದ್ದಾಗ ಒಂದರ ಮೇಲೊಂದು ದಬ ದಬ ಬೀಳುತ್ತವೆ. ಮೊದಲೇ ಜೀರ್ಣಿಸಿಕೊಳ್ಳಲಾಗದ ಸುದ್ದಿಯನ್ನು ಕೇಳಿ ನೊಂದಿದ್ದ ನಮಗೆ, ಇವನು ಬಂದಿದ್ದು ಗಾಯದ ಮೇಲೆ ಬರೆ ಎಳೆದಂತಾಗಿ, ಅವನ ಮುಖವನ್ನು ದುರುಗುಟ್ಟಿ ನೋಡಿ ನಕ್ಕಂತೆ ನಟಿಸಿದ್ದಾಯಿತು.

ಅವನ ನಗೆ ಚಟಾಕಿಗಳನ್ನು ತಡೆಯಬೇಕೆಂದಲೇ, ನನ್ನ ಗೆಳೆಯ ಅವನಲ್ಲಿ, ಸಂಬಳ ಕಡಿತದ ಅಸಮಧಾನವನ್ನು ತೋಡಿಕೊಂಡ. ಆದರೆ ಶ್ವಾನದ ಬಾಲ! ತನ್ನ ಎಂದಿನ ಧಾಟಿಯಂತೆ ದೀಪಕ್,

ಒಮ್ಮೆ ಜೋರಾಗಿ ನಕ್ಕಿ, ನನ್ನದು (ಕ+೩)%, ನನ್ನದೇ ಜಾಸ್ತಿ, ನಿಮ್ಮದೆಲ್ಲಾ ಕಡಿಮೆ ಹ ಹ ಹ ಎಂದು ಮತ್ತೊಮ್ಮೆ ನಕ್ಕ.

ಪಾಪ, ಅದು ತನ್ನ ದು:ಖ ವನ್ನು ಮರೆಯಲು ಪ್ರಯತ್ನಿಸಿದ ಪ್ರಾಮಾಣಿಕ ಪ್ರಯತ್ನವೇನೋ ನನಗೆ ತಿಳಿಯಲಿಲ್ಲ, ಮೊದಲೇ ನನಗೆ ಹಿಂದಿನ ಸಿಟ್ಟಿತ್ತು, ಅದಕ್ಕೆ ನಾನು,

ರೀ ದೀಪಕ್, ಅದಕ್ಕೆ ಯಾಕೆ ಯೋಚನೆ ಮಾಡ್ತೀರಾ? ಅಭಿಯಂತರನಾಗಿ ಹಿಂಬಡ್ತಿ ತೆಗೆದುಕೊಳ್ಳಿ, ಆಗ ನಿಮ್ಮ ಕಡಿತ ಕಡೆಮೆಯಾಗುತ್ತದೆ. ನೀವು ಅದಕ್ಕೆ ಲಾಯಕ್ಕು ಎಂಬರ್ಥದಲ್ಲಿ ಖಾರವಾಗಿ ನುಡಿದೆ!

ಪಕ್ಕದಲ್ಲಿ ಕುಳಿತಿದ್ದವರೆಲ್ಲ ಗೊಳ್ಳೆಂದು ನಕ್ಕರು.
ಆ ಬೃಹಾದಾಕೃತಿಯ ಮುಖ ಸಣ್ಣಗಾಯಿತು ಎಂದು ಹೇಳುವುದಕ್ಕೆ ಬರುವುದಿಲ್ಲ, ಮುಖವನ್ನಂತೂ ಗಂಟಿಕ್ಕಿಕೊಂಡರು.

ಜಟ್ಟಿ ಬಿದ್ದಾಗ ಆಳಿಗೊಂದು ಏಟು ಎಂಬಂತೆ, ನನ್ನ ಗೆಳೆಯ ಎಷ್ಟು ದಿನದಿಂದ ಅದುಮಿಟ್ಟಿಕೊಂಡಿದ್ದನೋ,
ಮುಂಬಡ್ತಿ ಸಿಕ್ಕಾಗ ನಮಗೆ ಕಳಿಸುವ ವಿ-ಅಂಚೆಯನ್ನು ಅಭಿನಯಿಸಿ ಓದಿಬಿಟ್ಟ (ನಮ್ಮ ಸಂಸ್ಥೆಯಲ್ಲಿ, ಯಾರಾದರೂ ಮುಂಬಡ್ತಿ ಪಡೆದಾಗ, ಮುಂಬಡ್ತಿ ಪಡೆದ ನೌಕರನ ಪ್ರಬಂಧಕ, ಆ ಸಿಹಿ ಸುದ್ದಿಯನ್ನು ವಿ - ಆಂಚೆಯ ಮೂಲಕ ಸಮಸ್ತ ನೌಕರರಿಗೂ ಕಳಿಸುತ್ತಾರೆ)

"ಆತ್ಮೀಯರೆ,
ದೀಪಕ್ ನನ್ನು ಅಭಿಯಂತರನಾಗಿ ಹಿಂಬಡ್ತಿ ನೀಡಲು ನನಗೆ ಅತೀವ ಸಂತಸವಾಗುತ್ತಿದೆ. ಅವರು ಕಷ್ಟ ಪಟ್ಟು ದುಡಿದು, ನಿಭಾಯಿಸಿದ (ಬೇ)ಜವಾಬ್ದಾರಿಗಳನ್ನು ಗುರುತಿಸಿ ಸಂಸ್ಥೆ ಈ ಕಾಣಿಕೆಯನ್ನು ಗೌರವಪೂರ್ವಕವಾಗಿ, ಸಂತೋಷದಿಂದ ನೀಡುತ್ತಿದೆ. ನೀವು ಅಡ್ಡಾಡುತ್ತಿರುವಾಗೆಲ್ಲಿಯಾದರೂ ದೀಪಕ್ ಎದುರಾದರೆ, ಅವನಿಗೆ ಶುಭಕೋರಿ ಸಂತೋಷವನ್ನು ಹಂಚಿಕೊಳ್ಳಿ. ಔತಣ ಕೂಟಕ್ಕೆ ಒತ್ತಾಯಿಸಿ."

ಇಲ್ಲಿಯವರೆಗೂ, ಹತೋಟಿಯಲ್ಲಿದ್ದ ನಗೆ ಅತಿಶಯವಾಯಿತು. ಪಕ್ಕದ ಮೇಜುಗಳಲ್ಲಿ ಕುಳಿತವರೆಲ್ಲಾ ನಮ್ಮೆಡೆಗಿ ನೋಡಲು ಪ್ರಾರಂಭಿಸಿದರು. ದೂರದಲ್ಲಿ ಕುಳಿತಿದ್ದ ಒಂದು ತಂಡವಂತೂ ನಮ್ಮ ಅತಿಶಯ ನಗುವನ್ನು ಅಣಕಿಸಲೆಂದೇ ಗಟ್ಟಿಯಾಗಿ ನಕ್ಕರು.

ನಮ್ಮ ಪ್ರಬಂಧಕನನ್ನು ಗೇಲಿ ಮಾಡಿ ವಿಕೃತ ಸಂತೋಷವನ್ನು ಪಡೆದುಕೊಳ್ಳುವ ಆನಂದ ಸಮಯ ನಮ್ಮದಾಗಿತ್ತು.

ನಾವು ಮತ್ತೊಬ್ಬರನ್ನು ಗೇಲಿ ಮಾಡಿ ಸಂತೋಷವನ್ನು ತೆಗೆದುಕೊಳ್ಳಬಹುದಾದರೆ, ನಮ್ಮನ್ನು ಯಾರಾದರೂ ಗೇಲಿ ಮಾಡಿದಾಗ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ದೊಡ್ಡತನವನ್ನು ಬೆಳೆಸಿಕೊಳ್ಳಬೇಕಲ್ಲವೆ? ನಮ್ಮ ಪ್ರಬಂಧಕ ಗೇಲಿಗೆ ಉರಿದು ಹೋದನೋ? ಅಥವಾ ಕ್ರೀಡಾ ಮನೋಭಾವದಿಂದ ತೆಪ್ಪಗಾದನೋ? ಅದನ್ನೂ ಗಮನಿಸದೆ ಊಟ ಮುಗಿಸಿ ಕೈ ತೊಳೆದುಕೊಂಡೊ!

ಶುಕ್ರವಾರ, ಮಾರ್ಚ್ 20, 2009

ರವೀಂದ್ರ ಕಲಾಕ್ಷೇತ್ರದಲ್ಲಿ ಏನೇನು?

ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತಿದೆ. ಆಸಕ್ತರು, ಲಗತ್ತಿಸಿರುವ ಛಾಯಾಚಿತ್ರಗಳಿಂದ ವಿವರಗಳನ್ನು ಪಡೆದುಕೊಳ್ಳಬಹುದು.ಈ ನಾಟಕಗಳನ್ನು ನೋಡಿದ್ದರೆ, ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.







ಮಲ್ಲೇಶ್ವರಂ ನ ಸೇವಾಸದನದಲ್ಲಿ, ಕೈಲಾಸಂ ನಾಟಕಗಳು



ನಾನು ಹುತ್ತದಲ್ಲಿ ಹುತ್ತ ನಾಟಕವನ್ನು ನೋಡಿದ್ದೀನಿ ಮತ್ತು ಓದಿದ್ದೀನಿ. ಬಹಳ ಹಾಸ್ಯಮಯ ನಾಟಕ. ಓದಲು ಮತ್ತು ನೋಡಲು ಯಾವುದಾದರೂ ಸರಿ ಉತ್ತಮವಾಗಿದೆ, ಸಮಯ ಸಿಕ್ಕಾಗ ತಪ್ಪದೆ ನೋಡಿ.

ಸೋಮವಾರ, ಮಾರ್ಚ್ 16, 2009

ಧೀಮಂತ ಸಾಹಿತಿಯ ಜಯಂತಿ


"ಮೇಲೆ ನೋಡೆ ಕಣ್ಣ ತಣಿಪ
ನೀಲ ಪಟದಿ ವಿವಿಧ ರೂಪ
ಜಾಲಗಳನು ಬಣ್ಣಿಸಿರ್ಪ
ಚಿತ್ರ ಚತುರನಾರ್!
ಕಾಲದಿಂದ ಮಾಸದಾ ವಿ
ಚಿತ್ರವೆಸಪನಾರ್?"
(ನಿವೇದನ - ನಿವೇದನ ಕವನ ಸಂಕಲನ)


ಎಂದು ಪ್ರಕೃತಿ ಸೊಬಗಿಗೆ ಬೆರಗಾಗಿ ದೇವರನ್ನು ನಿವೇದಿಸಿದ ಕವಿ,


"ಶಿಲ್ಪಿ ವರ ಕುವರಿಯರೆ ಸೌಂದರ್ಯ ಮುದ್ರಿಕೆಯರೆ |
ದೇವದೇವನ ಸೇವೆಗೈತರ್ಪ ಸಾಧುಕುಲಮಂ |
ಭಾವ ವಿನ್ಯಾಸ ವೈಕೃತಿಗಳಿಂ ಬೆರಗುವಡಿಸಿ |
ಚಂಚಲತೆಗೆಡೆಯೆನೆಸಿ ನೀವಿಂತು ನಿಲುವುದೇಕೆ"
(ಬೇಲೂರಿನ ಶಿಲಾ ಬಾಲಿಕೆಯರು -ನಿವೇದನ ಕವನ ಸಂಕಲನ)


ಎಂದು ಬೇಲೂರು ಶಿಲಾಬಾಲಿಕೆಯರ ಸೌಂದರ್ಯ ಕಂಡು ಮೆಚ್ಚಿದ ಕವಿ,



"ವನಕುಸುಮದೊಳೆನ್ನ ಜೀ |
ವನವು ವಿಕಸಿಸುವಂತೆ |
ಮನವನನುಗೊಳಿಸು ಗುರುವೇ - ಹೇ ದೇವ

ಜನಕೆ ಸಂತಸವೀವ |
ಘನನು ನಾನೆಂದು |
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ ||"
(ವನಸುಮ - ನಿವೇದನ ಕವನ ಸಂಕಲನ)


ಎಂದು ತನ್ನ ದೊಡ್ಡತನವನ್ನು ಮರೆಮಾಡುವಂತೆ ದೇವರನ್ನು ಬೇಡಿದ ದಾರ್ಶನಿಕ,



"ಮಗುಗಳಾಟದೆ ಮನಸು ಬೇಸರುವ ಮುನ್ನ
ನಗುವಾತಿನಿಂದಲೆ ವಿಕಸಿಸದ ಮುನ್ನ
ಜಗದಿ ನಾನೊಬ್ಬಂಟಿಯೆಂದೆನಿಮ ಮುನ್ನ
ಮುಗಿಯಲೀ ಬಾಳು
ಮಿಗುವೊಡದು ಗೋಳು"
(ಬಾಳೊಂದು ಗೋಳು - ಕೇತಕೀ ವನ ಕವನ ಸಂಕಲನ)


ಬದುಕಿನ ಗೋಳನ್ನು ಬರೆದ ಸಾಹಿತಿ

"ಆ ಹೊತ್ತಿನ ಊಟ, ಆ ರಾತ್ರಿಯ ನಿದ್ದೆ, ಅಂದಂದಿನ ಚಾಕರಿ, ಅಂದಂದಿನ ಪೇಚಾಟ, ಮಾರನೆ ದಿನ ಬಂದಾಗ ಅದರ ಯೋಚನೆ - ಹೀಗಿರುವುದು ಸರಿಯೇ? ಅಥವಾ ಹೊಟ್ಟೆಯ ಪಾಡಿನ ಯೋಚನೆಗಿಂತ ಮೇಲ್ಪಟ್ಟ ವಿಚಾರ ಏನಾದರೂ ಮನುಷ್ಯನ ಪಾಲಿಗೆ ಉಂಟೋ?"
(ಬದುಕು ಏಕೆ - ಬಾಳಿಗೊಂದು ನಂಬಿಕೆ
)

ಎಂಬ ಪ್ರಶ್ನೆಯನ್ನೆತ್ತಿದ ವಿಚಾರವಾದಿ. ಇದಕ್ಕೆ ಉತ್ತರವನ್ನು ತಿಳಿಸಿ ಸಾಮಾನ್ಯರಲ್ಲಿ ಬಾಳಿಗೊಂದು ನಂಬಿಕೆಯನ್ನು ತುಂಬಿದ ವಿದ್ವಾಂಸ.

"ಹಾ ! ಪ್ರಿಯಳೆ, ಬಾ; ಇಂದಿನಿಂ ಹಿಂದಿನಳಲುಗಳ
ಮುಂದಿನಳುಕುಗಳ ತೊಲಗಿಸುವ ಬಟ್ಟಲನು
ತುಂಬಿ ನೀಡೆನಗೀಗ; ’ನಾಳೆ’ಯೆಂಬೆಯೊ? -ನಾಳೆ
ಸೇರುವೆನು ನೂರ್ಕೋಟಿ ನಿನ್ನೆಗಳ ಜೊತೆಗೆ"
(ಉಮರನ ಒಸಗೆ)


ಎಂದು ಒಮರ್ ಖಯ್ಯಾಮನ ಲೋಕೋಪದೇಶವನ್ನು ಉಮರನ ಒಸಗೆಯಾಗಿ ಭಾವಾನುವಾದವನ್ನು ಕನ್ನಡಕ್ಕೆ ತಂದ ಕವಿ.

"ಜಲಡಿಯಲ್ಲಿ ಪಯಣಿಸಿ ನಾನತ್ತ ಆರುವೆನ್ ;
ಬಾಲವಿಲ್ಲದಿಲಿಯ ರೂಪವನ್ನು ತಾಳುವೆನ್;
ಮಾಡುವೆನ್, ಮಾಡುವೆನ್, ಮತ್ತೆ ಮಾಡುವೆನ್. "
(ಕನ್ನಡ ಮ್ಯಾಕ್ ಬೆತ್
)

ಶೇಕ್ಸ್ ಪಿಯರ್ಸ್ ನ ನಾಟಕವನ್ನು ಕನ್ನಡಕ್ಕೆ ತಂದ ನಾಟಕ ರಚನಕಾರ.

"ಎತ್ತಿರಣ್ಣ ಕತ್ತೆಲದ್ದಿಯ -ಸ-
ಮಸ್ತಜನರೆ - ಎತ್ತಿರಣ್ಣ ಕತ್ತೆಲದ್ದಿಯಾ ||
ಎತ್ತಿರಣ್ಣ ಕತ್ತೆಲದ್ದಿ
ಕತ್ತೆ ಬುದ್ಧಿಗೆ ಪ್ರಸಿದ್ಧಿ
ಬುದ್ಧಿಯ ರ್ಸಸಾರ ಲದ್ಧಿ
ಲದ್ದಿಯಿಂದ ಸರ್ವ ಸಿದ್ಧಿ"
(ಗರ್ದಭ ವಿಜಯ - ಪ್ರಹಸನತ್ರಯೀ
)

ಹಾಸ್ಯ ನಾಟಕಗಳನ್ನು ಕೊಟ್ಟ ವಿಕಟ ಕವಿ

ಹೋರಾಡು ಬೀಳ್ವನ್ನಮೊಬ್ಬೊಂಟಿಯಾದಡಂ |
ಧೀರಪಥವನೆ ಬೆದಕು ಸಕಲಸಮಯದೊಳಂ ||
ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ? |
ಹೋರಿ ಸತ್ವವ ಮೆರಸು ಮಂಕುತಿಮ್ಮ ||
(ಮಂಕು ತಿಮ್ಮನ ಕಗ್ಗ
)

ಎಂದು ಮಂಕುತಿಮ್ಮನಾಗಿ,
(ಸ್ವಾಮಿ ಬ್ರಹ್ಮಾನಂದರ ಮಂಕು ತಿಮ್ಮನ ಕಗ್ಗ ದ ಪ್ರವಚನ ಕೇಳಲು ಇಲ್ಲಿ ಒತ್ತಿ)

ಬಿಸಿ ಬಿಸಿಯ ನೀರಿಂಗೆ ಹಿಮಗಿರಿಯ ತಣ್ಣೀರ|
ಹಸಿರು ತಣ್ಣೀರಿಂಗೆ ಬಿಸಿಯ ಸೇರಿಸುತೆ||
ಹಸನು ಶೀತೋಷ್ಣದಿಂದೊಡಲ ಮಜ್ಜನಗೈವ|
ಕುಶಲತೆ ಸಮನ್ವಯವೊ - ಮರುಳ ಮುನಿಯ
(ಮರುಳ ಮುನಿಯನ ಕಗ್ಗ
)

ಎಂದು ಮರುಳ ಮುನಿಯನಾಗಿ

ನನ್ನಂತ ಸಾವಿರಾರು ಮಂಕು ತಿಮ್ಮರಿಗೆ, ಮರುಳ ಮುನಿಯರಿಗೆ ಬುದ್ಧಿವಾದ ಹೇಳಿದ ಹಿರಿಯ ಸಾಹಿತಿ.

"ಯದುವಂಶತಿಲಕನ - ವೇಷವಿದೇನೆ|
ಮದಿರಾಕ್ಷಿ ಮುರಳೀ - ನಾದವಿದೇನೇ||

ಮುರಳೀಗಾನವಿದೇನೆ - ತರಲಾಪಾಂಗವದೇನೆ|
ಸ್ಮರಸಂಭ್ರಮಾನಂದ-ಸ್ಮರಣೆಯಿದೇನೆ||"
(ಮುರಳೀಧರೆ - ಅನ್ತ:ಪುರಗೀತೆ
)


ಎಂದು ಬೇಲೂರಿನ ಚೆನ್ನಕೇಶವ ಗುಡಿಯ ಶಿಲ್ಪಕಲೆಗೆ ಮಾರು ಹೋಗಿ, ಅಲ್ಲಿನ ಕೆತ್ತನೆಯ ಬಹುತೇಕ ಎಲ್ಲಾ ವಿಗ್ರಹ ಗಳ ಮೇಲೂ ಕವಿತೆ ರಚಿಸಿದ ಮಹಾ ಕವಿ

ಮೇಲೆ ಪರಿಚಯಿಸಿದ್ದದ್ದಲ್ಲದೆ, ನಾಸ್ತಿಕರಿಗೆ, ಸಂದೇಹಕರ್ತ ರಿಗೆ (Agnostics) ಸೆಡ್ಡು ಹೊಡೆದು ಆಸ್ತಿಕವಾದ ವನ್ನು ತರ್ಕ ಬದ್ಧವಾಗಿ ಚರ್ಚಿಸಿ ’ದೇವರು’ ಎಂಬ ಪ್ರಬಂಧವನ್ನು, ಮಾಧ್ಯಮದ ಚರಿತ್ರೆ, ಕರ್ತವ್ಯ ಮತ್ತು ಸ್ವಾತಂತ್ರ್ಯವನ್ನು ಚರ್ಚಿಸಿ ’ವೃತ್ತಪತ್ರಿಕೆಯನ್ನು’, ಸಾಮಾನ್ಯತಿಗೆ ಸಾಹಿತ್ಯ ಪ್ರಚಾರಕ್ಕಾಗಿ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ’ಸಾಹಿತ್ಯ ಶಕ್ತಿ’ ಯನ್ನು, ಸತ್ಯ ಧರ್ಮ ಪ್ರಗತಿ ಸಂಸ್ಕೃತಿ ವಿಷಯಗಳ ಚರ್ಚೆಯನ್ನೊಳಗೊಂಡ ’ಸಂಸ್ಕೃತಿ’ ಯನ್ನು, ’ಈಷೋಪನಿಷತ್ತು’, ’ಭಗವದ್ಗೀತಾ ಸಾರ ಅಥವಾ ಜೀವನ ಧರ್ಮ ಯೋಗ’, ’ಪುರುಷ ಸೂಕ್ತ’ ಗಳನ್ನು ಸಂಸ್ಕೃತದಿಂದ ಸರಳ ಕನ್ನಡಕ್ಕೆ, ರಾಜ್ಯಾಂಗ, ರಾಷ್ಟ್ರ - ರಾಷ್ಟ್ರಕ ನ ಸಂಬಂಧವನ್ನು, ಕರ್ತವ್ಯವನ್ನು ಚರ್ಚಿಸಿದ ’ರಾಜ್ಯಶಾಸ್ತ್ರ’ ವನ್ನು, ಮಕ್ಕಳಿಗಾಗಿ ’ಇಂದ್ರವಜ’ ’ಚಿಕ್ಕೋಜಿ’ ಕಥೆಗಳನ್ನು, ’ದಿವಾನ್ ರಂಗಾಚಾರ್ಲು’ ಮತ್ತು ’ಗೋಪಾಲಕೃಷ್ಣ ಗೋಖಲೆ’ ವಿಚಾರಗಳನ್ನು ಒಳಗೊಂಡ ಆತ್ಮ ಚರಿತ್ರೆಗಳನ್ನು, ’ಗೀತಾ ಶಾಂಕುತಲಂ’ , ’ಶೃಂಗಾರಮಂಗಳಂ’, ’ಶ್ರೀಕೃಷ್ಣಪರೀಕ್ಷಣಂ’ ಎಂಬ ಮಹಾ ಕಾವ್ಯಗಳನ್ನು, ’ವಸಂತ ಕುಸುಮಾಂಜಲಿ’ ಕವನ ಸಂಕಲನವನ್ನು, ತಮಗೆ ತಿಳಿದ ಹಿರಿಯ, ಕಿರಿಯ ಮಹಾನುಭಾವರ ೮ ಸಂಪುಟದ ’ಙ್ನಾಪಕ ಚಿತ್ರ ಶಾಲೆ’ ಯನ್ನು ( ೧) ಸಾಹಿತಿ ಸಜ್ಜನ ಸಾರ್ವ ಜನಿಕರು ೨) ಕಲೋಪಾಸಕರು ೩) ಸಾಹಿತ್ಯೋಪಾಸಕರು ೪) ಮೈಸೂರಿನ ದಿವಾನರುಗಳು ೫) ವೈದಿಕ ಧರ್ಮ ಸಮ್ಪ್ರದಾಯಸ್ಥರು ೬)ಹಲವು ಸಾರ್ವಜನಿಕರು ೭) ಹೃದಯ ಸಂಪನ್ನರು ೮) ಸ್ಮೃತಿ ಚಿತ್ರಗಳು ) ರಚಿಸಿ ಕನ್ನಡ ಸಾಹಿತ್ಯ ವನ್ನು ಶ್ರೀಮಂತಗೊಳಿಸಿದ, ಸಾರ್ವಜನಿಕ ಸೇವೆಯನ್ನು ಮಾಡಿದ ಮಹಾ ಧೀಮಂತ ಸಾಹಿತಿ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (ಡಿವಿಜಿ) ನವರ ಜನ್ಮದಿನ ನಾಳೆ. (ಮಾರ್ಚ್ -೧೭). ಈ ಸಂದರ್ಭದಲ್ಲಿ ಡಿ ವಿ ಜಿ ಯವರ ಕೃತಿಗಳ ಪರಿಚಯದ ಜೊತೆ ಅವರ ಸಾಹಿತ್ಯದ ಕೆಲವು ತುಣುಕುಗಳನ್ನು ಕೂಡ ಸಂಗ್ರಹಿಸಿ ಒದಗಿಸಿದ್ದೇನೆ. ಓದುಗರು ಡಿ ವಿ ಜಿ ಯವರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಪ್ರತಿಕ್ರಿಯಿಸುವ ಮೂಲಕ ಹಂಚಿಕೊಳ್ಳಲು ವಿನಂತಿ .

ಸಮಾಜ ಸೇವಕ ಸಮಿತಿಯ ವತಿಯಿಂದ ನಾಳೆ ಅರ್ಥಪೂರ್ಣ ಆಚರಣೆ A D A ರಂಗಮಂದಿರದಲ್ಲಿ. ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ಒತ್ತಿ. ನಾನು ಹಿಂದೆ ಎರಡು ಬಾರಿ ಈ ಸಮಿತಿ ನಡೆಸುವ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ಹಿಂದಿನ ಕಾರ್ಯಕ್ರಮಗಳ ಸಿಹಿ ನೆನಪುಗಳು ಮನಸ್ಸಿನಿಂದ ಇನ್ನೂ ಮಾಸಿಲ್ಲ. ಬನ್ನಿ ಭೇಟಿಯಾಗೋಣ.

ಸೋಮವಾರ, ಮಾರ್ಚ್ 09, 2009

ಕನ್ನಡ ಪುಸ್ತಕ ಮತ್ತು ಕನಿಷ್ಠ ೨೫% ರಿಯಾಯಿತಿ ಮಾರಾಟ


ಪುಸ್ತಕ ಪ್ರೇಮಿಗಳಿಗೊಂದು ಸುವರ್ಣಾವಕಾಶ. ನಿಮ್ಮ ಗ್ರಂಥಾಲಯದಲ್ಲಿ ಪುಸ್ತಕ ಭಂಢಾರವನ್ನು ಹೆಚ್ಚಿಸಿಕೊಳ್ಳಿ, ನಿಮ್ಮ ಙ್ನಾನ ಭಂಢಾರವನ್ನೂ ವೃದ್ಧಿಸಿಕೊಳ್ಳಿ, ಬಹಳ ಕಡಿಮೆ ಖರ್ಚಿನಲ್ಲಿ. ಇಗೋ ನಡೆಯುತ್ತಿದೆ, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪ್ರತಿಷ್ಟಿತ ಮುದ್ರಕರ ಪುಸ್ತಕ ಮೇಳ. ಕನಿಷ್ಟ ಶೇಕಡ ೨೫ ರಿಂದ ಶೇಕಡ ೬೦ ರ ವರೆಗೆ ರಿಯಾಯಿತಿ. ಕೊಂಡಿರುವ ಪುಸ್ತಕಗಳನ್ನೆ ಇನ್ನೂ ಓದಿ ಮುಗಿಸಿಲ್ಲವೆ? ನಿಮ್ಮ ದು:ಖಕ್ಕೆ ರಿಯಾಯಿತಿ ಕೊಡಿ. ಮುಂದೊಂದು ದಿನ ಓದುವೆನೆಂಬ ಆಶಾವಾದದೊಂದಿಗೆ ಪುಸ್ತಕಗಳನ್ನು ಸಂಗ್ರಹಿಸಿ.

ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಮುಖ್ಯಾಂಶಗಳು,

* ಮಾರ್ಚ್ ೧೦ ರ ವರೆಗೆ ಈ ಮೇಳ ನಡೆಯುತ್ತದೆ. ಸಮಯ ಬೆಳಗ್ಗೆ ೧೦:೩೦ ರಿಂದ ರಾತ್ರಿ ೮ ರ ವರೆಗೆ. ಇನ್ನೆರಡೇ ದಿನ ಉಳಿದಿರುವುದು ನೆನಪಿರಲಿ!
* ಮಳಿಗೆಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಮಳಿಗೆಗಳ ಮೇಲಿನ ಮರಗಳ ನೆರಳು, ಪುಸ್ತಕಾಭಿಮಾನಿಗಳ ದಣಿವನ್ನು ಕಡಿಮೆ ಮಾಡಿವೆ.
ಮತ್ತು ನೂಕು ನುಗ್ಗಲು ಕಡಿಮೆ. (ಇದು ಒಂದು ರೀತಿ ದು:ಖದ ಸಮಾಚಾರವೂ ಹೌದು!)
* ತ ರಾ ಸು ಮತ್ತು ಅ ನ ಕೃ ರವರ ಎಲ್ಲಾ ಪುಸ್ತಕಗಳೂ ೨೫% ರಿಯಾಯಿತಿಯಲ್ಲಿ ಎರಡು ಪ್ರತ್ಯೇಕ ಮಳಿಗೆಗಳಲ್ಲಿ ದೊರೆಯುತ್ತಿವೆ.
* ಮೈಸೂರು ಪ್ರಸಾರಾಂಗದ ಪುಸ್ತಕ ಮಳಿಗೆಯಲ್ಲಿ, ಉತ್ತಮ ಪುಸ್ತಕಗಳಿವೆ. ಉದಾ: ಬಿ ಎಂ ಶ್ರೀ ಯವರ ಸಮಗ್ರ ಸಾಹಿತ್ಯ, ಸಾಮಾನ್ಯವಾಗಿ ಇವುಗಳ
ದರ ಹೆಚ್ಚಿದ್ದರೂ ೩೫% ರಿಯಾಯಿತಿಯಲ್ಲಿ ಕೊಳ್ಳಲು ಬಹಳಷ್ಟು ಅನುಕೂಲ.
* ಸಪ್ನಾ ಕೂಡ ತಮ್ಮ ಪ್ರಕಾಶನದ ಪುಸ್ತಕಗಳನ್ನು ೨೫% ರಿಯಾಯಿತಿ ದರದಲ್ಲಿ ಮಾರುತ್ತಿದೆ.
* ಹಂಪಿ ವಿಶ್ವವಿದ್ಯಾಲಯದ ಮಳಿಗೆಯಲ್ಲಿ ಒಳ್ಳೆಯ ಪುಸ್ತಕಗಳಿವೆ. ೫೦% ರಿಯಾಯಿತಿ.
* ಸರ್ಕಾರಕ್ಕೆ ಸಂಬಂಧಿಸಿದ ಮುದ್ರಕರು ಸಾಮಾನ್ಯ ವಾಗಿ ೫೦% ರಿಂದ ೬೦% ರಿಯಾಯಿತಿ. ನವಕರ್ನಾಟಕ ಕೂಡ ೫೦% ರಿಯಾಯಿತಿ ದರದಲ್ಲಿ
ಪುಸ್ತಕಗಳನ್ನು ಮಾರುತ್ತಿವೆ. ಗೀತ ಪ್ರಕಾಶನ ಮೈಸೂರು:೨೫%
* ಸಂಗೀತ ಪ್ರೇಮಿಗಳಿಗಂತೂ (ಕರ್ನಾಟಕ ಮತ್ತು ಹಿಂದೂಸ್ತಾನಿ) ರಸದೌತಣ. ಸಂಗೀತಕ್ಕೆ ಸಂಬಂಧಿಸಿದ ಬಹಳಷ್ಟು ಪುಸ್ತಕಗಳು ಪ್ರದರ್ಶನದಲ್ಲಿವೆ.
ಮತ್ತೂ ಲಹರಿ ಸಂಸ್ಥೆ ಕೂಡ ಮಳಿಗೆಯನ್ನು ತೆರೆದು ೧೦% ರಿಯಾಯಿತಿ ದರದಲ್ಲಿ ಸಿ ಡಿ ಗಳನ್ನು ಮಾರುತ್ತಿದೆ.
* ತುಳು ನಾಡಿನವರಿಗೆ ಸಂತಸವನ್ನು ತರಬಲ್ಲ, ಗೋವಿಂದ ಪೈ ಸಂಶೋಧನಾ ಸಂಸ್ಥೆಯವರ ಮಳಿಗೆ ಮಳಿಗೆ ಮತ್ತು ದ್ರಾವಿಡ ವಿಶ್ವವಿದ್ಯಾನಿಲಯದ
ಮಳಿಗೆಗಳು, ತುಳು ಮತ್ತು ಯಕ್ಷಗಾನ ಸಂಬಂಧಿಸಿದ ಬಹಳಷ್ಟು ಉತ್ತಮ ಪುಸ್ತಕಗಳನ್ನು ೨೫% ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.
* ಆಧ್ಯಾತ್ಮಿಕ ಪುಸ್ತಕ ಮಳಿಗೆಗಳೂ ಕೂಡ ಇವೆ.
* ರವಿ ಬೆಳಗೆರೆ ಅಭಿಮಾನಿಗಳಿಗೆ, ಭಾವನ ಪ್ರಕಾಶನ ಕೂಡ ಮಳಿಗೆಯನ್ನು ತೆರೆದಿದೆ.
* ಅಂಕಿತ, ಲಂಕೇಶ್ ಮತ್ತು ಅಭಿನವ ಪ್ರಕಾಶಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
* ಆಂಗ್ಲ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇಲ್ಲ. ತಿಂಡಿ ತಿನಿಸುಗಳ ಮಳಿಗೆಗಳಿಲ್ಲ! :)

ಕೊನೆಗೆ,
ಫೋಟೊ ಒದಗಿಸಿಕೊಟ್ಟ ರವೀಶನಿಗೆ ಧನ್ಯವಾದಗಳು.

ಶುಕ್ರವಾರ, ಮಾರ್ಚ್ 06, 2009

ಮಿದ್ದಿಟ್ಟು

ಹಲವು ವರ್ಷಗಳ ಹಿಂದಿನ ಮಾತು. ಬಾಲ್ಯದ ನೆನಪುಗಳು. ನಾನು ಬೆಂಗಳೂರಿಗೆ ಪ್ರೌಢ ಶಿಕ್ಷಣಕ್ಕೆಂದು ಬಂದ ಹೊಸತು. ಊಟ ಆಯಿತೇ ಎಂದು ಕೇಳುವ ವಾಡಿಕೆಯನ್ನು ನಾನು ಬಹಳವಾಗಿ ಗೆಳೆಯರ ಮೇಲೆ ಪ್ರಯೋಗಿಸುತ್ತಿದ್ದೆ. ಈ ಪ್ರಶ್ನೆಗೆ ಸಮಯದ ಮಹತ್ವವಿವೆ ಎಂಬುದರ ಬಗ್ಗೆ ನನಗೆ ಅರಿವಿಲ್ಲ. ಒಂದು ದಿನ ನನ್ನಗೆ ಗೆಳಯನನ್ನು ಬೆಳಗ್ಗೆಯೇ ಊಟ ಆಯಿತೇ ಎಂದು ಕೇಳಿದ ಕ್ಷಣ, ಅವ ನಕ್ಕು ಬೆಳಗ್ಗೆ ತಿನ್ನುವುದು ತಿಂಡಿ, ಊಟವಲ್ಲ ಎಂಬ ಙ್ನಾನವನ್ನು ನನ್ನ ತಲೆಗೆ ತುಂಬಿದ. ಆದರೂ ಈ ವಿಷಯವನ್ನು ಕರಗತ ಮಾಡಿಕೊಳ್ಳಲು ಮತ್ತು ಈ ಪ್ರಶ್ನೆ ಕೇಳುವಾಗ ತಪ್ಪಾಗದಂತೆ ಎಚ್ಚರ ವಹಿಸಲು ಬಹಳ ಸಮಯ ಹಿಡಿಯಿತು. ನಾನು ನಮ್ಮ ಊರಿನಲ್ಲಿರಬೇಕಾದರೆ, ನಮಗೆ ತಿಂಡಿ ಊಟದ ವ್ಯತ್ಯಾಸವೇ ಗೊತ್ತಿರಲಿಲ್ಲ. ನಮ್ಮ ಬೆಳಗಿನ (ಉಪಹಾರ)ಊಟ ಮುದ್ದೆ, ಅನ್ನ ಸಾರು. ಮಧ್ಯಾಹ್ನ ಕೂಡ ಅದೆ. ಎಂದೋ ತಪ್ಪಿದರೆ ಅಪರಾಹ್ನ ರೊಟ್ಟಿಯಿರುತ್ತಿತ್ತು. ರಾತ್ರಿ ಕೂಡ ಅದೇ ಪಾಕಗಳು. ಇಂತಹ ವಾತಾವರಣದಲ್ಲಿ ನನಗೆ ಊಟ ಮತ್ತು ಬೆಳಗಿನ ಲಘು ಉಪಹಾರದ ವ್ಯತ್ಯಾಸ ಹೇಗೆ ತಿಳಿಯಬೇಕು? ಅದೇನೆ ಇರಲಿ ವಿಷಯಕ್ಕೆ ಬರುತ್ತೇನೆ.

ಇಂದು ನಾನು ಬರೆಯುವುದು ಒಂದು ಸರಳ ಮತ್ತು ವಿಶಿಷ್ಟ ಪಾಕದ ಬಗ್ಗೆ. ಇದನ್ನು ಸಾಮಾನ್ಯವಾಗಿ ರಾಗಿ ಬೆಳೆಯುವ ಪ್ರದೇಶದಲ್ಲಿ ತಯಾರಿಸುತ್ತಾರೆ ಎಂಬುದು ನನ್ನ ನಂಬಿಕೆ. ಈ ಪಾಕವನ್ನು ಸಾಮಾನ್ಯವಾಗಿ ಅಪರಾಹ್ನದ ಹೊತ್ತಿನಲ್ಲಿ, ಸಮಯದ ಅಭಾವವಿರುವಾಗ, ಅಡುಗೆ ಮಾಡಲು ಆಲಸ್ಯವಿರುವಾಗ ಅಥವಾ ಅಡುಗೆ ಮಾಡುವ ಶಕ್ತಿಗುಂದಿರುವಾಗ (ಅಂದರೆ ಮೈಯಲ್ಲಿ ಹುಷಾರಿಲ್ಲದೆ ಇರುವಾಗ) ಸಿದ್ಧಪಡಿಸುತ್ತಾರೆ. ಹೇಗೆ?

ಈ ಪಾಕಕ್ಕೆ ಪ್ರಾಥಮಿಕವಾಗಿ/ಮುಖ್ಯವಾಗಿ ಬೇಕಾಗಿರಿವುದು ತಂಗಳು ಹಿಟ್ಟು. ಇಲ್ಲಿ ಹಿಟ್ಟು ಅಂದರೆ ರಾಗಿ ಮುದ್ದೆ ಎಂದು ತಿಳಿಯಬೇಕು. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ರಾಗಿ ಮುದ್ದೆಯನ್ನು ಹಿಟ್ಟು ಅಥವಾ ಇಟ್ಟು ಎಂದೇ ಕರೆಯುವುದು.ಇಲ್ಲಿ ಗಮನದಲ್ಲಿಡಬೇಕಾದ ಅಂಶ ಎಂದರೆ ಹಿಟ್ಟು ತಂಗಳಾಗಿರಬೇಕು, ಬಿಸಿ ಮುದ್ದೆಯಿಂದ ಈ ಪಾಕವನ್ನು ಸಿದ್ಧಪಡಿಸಲಾಗುವುದಿಲ್ಲ! ಇನ್ನುಳಿದ ಪದಾರ್ಥಗಳು, ಹಸಿ ಮೆಣಸಿನ ಕಾಯಿ, ಕಲ್ಲುಪ್ಪು ಅಥವಾ ಪುಡಿ ಉಪ್ಪು, ಹಸಿ ಬೆಳ್ಳುಳ್ಳಿ. ಈ ಮೂರೂ ಪದಾರ್ಥಗಳನ್ನು ಒಟ್ಟಾಗಿ ಅರೆದುಕೊಳ್ಳಬೇಕು. ಒಳಕಲ್ಲು ಮತ್ತು ರುಬ್ಬಿನ ಗುಂಡಿ/ಕಲ್ಲಿನಿಂದ ಅರೆದರೆ ರುಚಿ ಹೆಚ್ಚಾಗುತ್ತದೆ. ನಂತರ ತಂಗಳಿಟ್ಟನ್ನು, ಅರೆದುಕೊಂಡ ಈ ಖಾರಕ್ಕೆ ಚೆನ್ನಾಗಿ ಮಿದ್ದಬೇಕು. ಅಷ್ಟೆ ಮಿದ್ದಿಟ್ಟು ಸಿದ್ಧ!

ಸಾಮಾನ್ಯವಾಗಿ ಮುದ್ದೆಯನ್ನು ಸಾರಿನಲ್ಲಿ ಅದ್ದಿ ಗುಳುಂ ಮಾಡುತ್ತೇವೆ. ಆದರೆ ಈ ಮಿದ್ದಿಟ್ಟನ್ನು ಅಗೆದು ತಿನ್ನುವುದರಿಂದ ಬಹಳ ವಿಶಿಷ್ಟ ಮತ್ತು ತುಂಬಾ ರುಚಿಕರವಾಗಿರುತ್ತದೆ. ನೆಂಚಿಗೆಕೆ ಈರುಳ್ಳಿಯಿದ್ದರಂತೂ ರುಚಿ ದ್ವಿಗುಣವಾಗುತ್ತದೆ. ನೀವು ಎಂದಾದರು ಇದನ್ನು ಸವಿದಿದ್ದೀರ? ನೀವು ರಾಗಿ ಮುದ್ದೆ, ಹುರಿಟ್ಟು (ಬೆಲ್ಲದ ಸಿಹಿ ತಿಂಡಿ), ರಾಗಿ ಉಪ್ಪಿಟ್ಟು ಮುಂತಾದುವುಗಳನ್ನು ತಿಂದು ಮೆಚ್ಚಿದ್ದರೆ ಇದನ್ನೂ ಒಮ್ಮೆ ಪ್ರಯತ್ನಿಸಿ.

ಬುಧವಾರ, ಮಾರ್ಚ್ 04, 2009

ಗುಲಾಬಿ ಟಾಕೀಸ್

ಮೊದಲ ಬಾರಿ ಕೇಳಿದಾಗ ಈ ಚಿತ್ರದ ಹೆಸರು ನನಗೆ ಅಷ್ಟು ಹಿಡಿಸಿರಲಿಲ್ಲ. ಯಾವುದೋ ತೊಂದರೆಯಿಂದ ಪಿ ವಿ ಆರ್ ಚಿತ್ರಮಂದಿರದಲ್ಲಿ ಈ ಚಲನ ಚಿತ್ರ ಬಿಡುಗಡೆಯಾದಗ ನೋಡುವ ಸೌಭಾಗ್ಯ ಸಿಕ್ಕಿರಲಿಲ್ಲ. ಹೋದ ಭಾನುವಾರ ಅವಿರತ ತಂಡದವರು ಮಲ್ಲೇಶ್ವರಂ ೧೮ ನೇ ತಿರುವಿನಲ್ಲಿರುವ ಶ್ರೀಗಂಧ ಎಂಬ ಸಣ್ಣ ಚಿತ್ರಮಂದಿರದಲ್ಲಿ ಈ ಚಲನ ಚಿತ್ರ ಪ್ರದರ್ಶನ ಮತ್ತು ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರ ಜೊತೆ ಸಂವಾದವನ್ನು ಏರ್ಪಡಿಸಿದ್ದರು. ಗೆಳೆಯ ರವೀಶನ ಸಹಾಯದಿಂದ ನನಗೆ ಆ ಚಲನಚಿತ್ರ ನೋಡುವ ಅವಕಾಶ ದೊರೆಯಿತು.

ಕುಂದಾಪುರದ ಸನಿಹ ಕೆಲವೊಂದದು ದ್ವೀಪಗಳಲ್ಲಿ ಚಿತ್ರೀಕರಿಸಿರುವ ಈ ಚಲನಚಿತ್ರ, ದಕ್ಷಿಣ ಕನ್ನಡದ ಮೀನು ಮಾರುಕಟ್ಟೆಯಲ್ಲಿ ಚಿತ್ರದ ನಾಯಕಿ ಉಮಾಶ್ರೀ ಮೀನು ಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ಕುಂದಾಪುರದ ಆಡು ಮಾತಿನ ಸಂಭಾಷಣೆಯ ಸೊಡಗಿನಿಂದ ಕೂಡಿ, ದಕ್ಷಿಣ ಕನ್ನಡದ ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಕೋನದಲ್ಲಿ ಚಿತ್ರ ಮುಂದುವರೆಯುತ್ತಾ ಹೋಗುತ್ತದೆ. ಹಲವು ಕೋಮುಗಳಿಗೆ ಸೂಕ್ಷ್ಮವೆನಿಸಬಲ್ಲ ಸಂಗತಿಯನ್ನು ಕಾಸರವಳ್ಳಿಯವರು, ಯಾರಿಗೂ ನೋವಾಗದಂತೆ, ಪ್ರೇಕ್ಷಕರಿಗೆ ಕೊಡಬೇಕಾದ ಸಂದೇಶವನ್ನು ಪರಿಣಾಮಕಾರಿಯಾಗಿ ಕೊಟ್ಟಿದ್ದಾರೆ. ಇಷ್ಟು ಚಲನಚಿತ್ರದ ಸಂಕ್ಷಿಪ್ತ ವಿವರ.

ಗುಲಾಬಿ ಊರಿನಲ್ಲಿ ಅಲ್ಪಸಂಖ್ಯಾತ ಕೋಮಿಗೆ ಸೇರಿದವಳು. ಹೆರಿಗೆ ಮಾಡುವುದರಲ್ಲಿ ನುರಿತ ಕೈ. ಗಂಡ ’ಮೂಸ ಕಾಕ’ ಇನ್ನೊಬ್ಬಳ ಜೊತೆ ವಾಸಿಸುತ್ತಿರುತ್ತಾನೆ. ಸಂಜೆ ೬ ಘಂಟೆಯಾದ ನಂತರ ಗುಲಾಬಿಗೆ ಪೇಟೆಯಲ್ಲಿ ಚಲನ ಚಿತ್ರ ನೋಡುವ ಹುಚ್ಚು. ಹೀಗೊಮ್ಮೆ ಗುಲಾಬಿ ಸಿನಿಮಾ ನೋಡುತ್ತಿರುವಾಗ, ಊರಿನ ಒಬ್ಬ ಸಾಹುಕಾರ ಹೆಂಗಸಿನ ಮಗಳಗಿ ಹೆರಿಗೆ ಬೇನೆಯುಂಟಾಗುತ್ತದೆ. ಗುಲಾಬಿ ತಾನು ಸಿನೆಮಾ ನೋಡುವಾಗ ಹೆರಿಗೆ ಮಾಡುವುದಿಲ್ಲವೆಂದು ನಿರಾಕರಿಸುತ್ತಾಳೆ.ಗುಲಾಬಿಯನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ, ಬಣ್ಣದ ಟಿ ವಿ ಕೊಡಿಸುವ ಆಮಿಷವೊಡ್ಡಿ ಹೆರಿಗೆಯನ್ನು ಮಾಡಿಸುತ್ತಾರೆ.ಅಂದಿನಿಂದ ಗುಲಾಬಿಗೆ ಮನೆಯಲ್ಲೇ ಚಲನಚಿತ್ರಗಳನ್ನು ನೋಡುವ ಖುಷಿ! ಆ ದ್ವೀಪದ ಜನರಿಗೆಲ್ಲಾ ಮೊದಲಿಗೆ ಗುಲಾಬಿ ಮನೆಯಲ್ಲಿ ಟಿ ವಿ ನೋಡಲು ಮುಜುಗರವಾದರೂ, ಕ್ರಮೇಣ ಮನೆಯೊಳಗೆ ಹೊಕ್ಕು ಟಿ ವಿ ನೋಡಲು ಪ್ರಾರಂಭಿಸುತ್ತಾರೆ.ಹೀಗೆ ಗುಲಾಬಿ ತನ್ನೂರಿನ ಜನರ ಜೊತೆ ಒಬ್ಬಳಾಗಿ ಸಹಬಾಳ್ವೆಯನ್ನು ನಡೆಸುತ್ತಿರುತ್ತಾಳೆ.

ಪರ ಊರಿನ ಸುಲೈಮಾನ್ ಸಾಹುಕಾರ, ದುಬೈನಿಂದ ಹರಿದು ಬರುವ ಹಣದಿಂದ, ಯಾಂತ್ರೀಕೃತ ಮೀನುಗಾರಿಕೆಯನ್ನು ನಡೆಸುತ್ತಿರುತ್ತಾನೆ. ಮೂಸಾ ಕಾಕ ಸುಲೈಮಾನ್ ಸಾಹುಕಾರನ ಭಂಟ. ಇದರಿಂದ ಮೀನುಗಾರಿಕೆಯನ್ನೇ ನಂಬಿದ ನೆರೆ ಹೊರೆಯ ಸ್ಥಳೀಯ ಜನರಿಗೆ ತೊಂದರೆ, ಅವರ ಹತ್ತಿರ ಸಾಹುಕಾರನಲ್ಲಿರುವ ಯಂತ್ರಗಳಿಲ್ಲ. ಇದರಿಂದ ಸ್ಥಳೀಯರಿಗೂ, ಸುಲೈಮಾನ್ ಕಡೆಯವರಿಗೂ ಸಣ್ಣ ಸಣ್ಣ ತಿಕ್ಕಾಟಗಳು ನಡೆಯುತ್ತಲೇ ಇರುತ್ತವೆ.

ಹೀಗಿರುವಾಗ, ಗುಲಾಬಿಯ ಮನೆಯಲ್ಲಿ ಧಾರಾವಾಹಿಯ ಪ್ರಭಾವಕ್ಕೊಳಗಾಗಿ ಊರಿನ ಸ್ಥಳೀಯ ಕೋಮಿನ ಯುವತಿಯೊಬ್ಬಳು ಕನಸುಗಳನ್ನು ಕಟ್ಟಿ ಊರಿನಿಂದ ಪರಾರಿಯಾಯಾಗುತ್ತಾಳೆ. ಅದೇ ಸಮಯದಲ್ಲಿ ಮೂಸ ಕಾಕ ಕೂಡ ಕಾಣೆಯಾಗುತ್ತಾನೆ. ಮುಂದೆ ಏನಾಗುತ್ತದೆ, ಚಲನ ಚಿತ್ರ ನೋಡಿ ಸವಿದರೇ ಚಂದ.

ಹೀಗೆ ಧಾರವಾಹಿಗಳು, ಕಾರ್ಗಿಲ್ ಯುದ್ಧದ ಸುದ್ದಿಗಳು ಜನರನ್ನು ಹೇಗೆ ಪ್ರಭಾವಿಸುತ್ತವೆ? ಜನ ತಮಗೆ ಸಂಬಂಧವಿಲ್ಲದ ತೊಂದರೆಗಳಲ್ಲಿ ಹೇಗೆ ಸಿಕ್ಕಿಕೊಳ್ಳುತ್ತಾರೆ. ಇಂತಹ ಪ್ರಭಾವಗಳಿಂದ ಜನರಲ್ಲಿ ಮತ್ತೊಬ್ಬರ ಮೇಲೆ ಹೇಗೆ ಸಂಶಯ ಹುಟ್ಟುತ್ತದೆ? ಇಂತಹ ಸಂಧರ್ಭಗಳನ್ನು ಕೆಲವರು ತಮ್ಮ ಹಿತಾಸಕ್ತಿಗೆ ಹೇಗೆ ಬಳಸಿಕೊಳ್ಳುತ್ತಾರೆ? ಇವುಗಳನ್ನೆಲ್ಲಾ ಕಾಸರವಳ್ಳಿಯವರು ಅಚ್ಚುಕಟ್ಟಾಗಿ, ಮನಸ್ಸಿಗೆ ಹತ್ತಿರವಾಗಿ ತೋರಿಸಿದ್ದಾರೆ.

ವೈದೇಹಿಯವರ ಒಂದು ಕಥೆಯಿಂದ ಪ್ರಭಾವಿತಗೊಂಡು, ಕಾಸರವಳ್ಳಿಯವರು ಚಿತ್ರಕ್ಕೆ ಕಥೆಯನ್ನು ಚಲನಚಿತ್ರಕ್ಕೆ ಮಾರ್ಪಡಿಸಿದ್ದಾರೆ. ಒಬ್ಬಬ್ಬರೂ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದೆ. ಎಲ್ಲರೂ ಅನುಭವಿಸಿ ಅಭಿನಯಿಸಿದ್ದಾರೆ. ಉಮಾಶ್ರೀಯವರದಂತೂ ಜೀವನ ಶ್ರೇಷ್ಠ ಅಭಿನಯ ಎನ್ನಬಹುದು.

ಸಂಭಾಷಣೆ ಅದ್ಭುತ, ಚಿತ್ರೀಕರಣಕ್ಕೆ ಆಯ್ದುಕೊಂದ ಪ್ರದೇಶ ಚಿತ್ರಕ್ಕೆ ಬಹಳ ಪೂರಕವಾದದ್ದು. ಛಾಯಾಗ್ರಹಣ ಕೂಡ ಚೊಕ್ಕಟವಾಗಿದೆ. ಸಂವಾದದಲ್ಲಿ ಇವನ್ನೆಲ್ಲ ಹೊಗಳಿಕೆಯಂತೆ ಗಿರೀಶ್ ಕಾಸರವಳ್ಳಿಯವರಿಗೆ ಹೇಳಿದರೆ, ಅವರು ನಿರಾಕರಿಸುತ್ತಾರೆ. ಅವರ ಪ್ರಕಾರ ಈ ಅಂಶಗಳು (ಉತ್ತಮ ಸಂಭಾಷಣೆ, ಚಿತ್ರೀಕರಣ ಪ್ರದೇಶದ ಆಯ್ಕೆ ಇತ್ಯಾದಿ) ಯಾವುದೇ ಚಲನ ಚಿತ್ರದ ಮೂಲ ಅವಶ್ಯಕತೆಗಳು. ಇವೆಲ್ಲಾ ವಿಶೇಷವಾಗಿ ಹೊಗಳಿಸಿಕೊಳ್ಳುವ ಅಂಶಗಳಲ್ಲವೆನ್ನುತ್ತಾರೆ. ಚಿತ್ರದ ನಿರೂಪಣೆ, ಸಂಕಲನ, ಹಿನ್ನಲೆಯಲ್ಲಿ ಬರುವ ಸಂಗೀತ ಎಲ್ಲವೂ ಚಂದ. ಚಲನಚಿತ್ರದ ಹೆಸರೂ ಕೂಡ ಸುಂದರವಾಗಿದೆ.ಚಿತ್ರದ ಎಲ್ಲಾ ವಿಭಾಗಗಳಲ್ಲೂ ಅತ್ಯಂತ ಆಸಕ್ತಿಯಿಂದ ಮಾಡಿದ ಚಿತ್ರವಿದು.

ಗಿರೀಶ್ ಕಾಸರವಳ್ಳಿಯವರೇ ಹೇಳಿದಂತೆ, ಅಷ್ಟು ಸೌಂದರ್ಯಭರಿತ ಪ್ರದೇಶದಲ್ಲಿ ಚಿತ್ರೀಕರಿಸಿದರೂ, ಆ ಸೌಂದರ್ಯವನ್ನು ಆದೊಷ್ಟು ಮರೆ ಮಾಚಲು ಪ್ರಯತ್ನಿಸಿದ್ದಾರಂತೆ, ಕಾರಣ ತಾವು ಹೇಳಬೇಕಾದ ಸಂದೇಶಕ್ಕೆ ಆ ಸೌಂದರ್ಯ ಅಡ್ಡಿ ಬರಬಾರದೆಂದು. ಚಿತ್ರದ ಸಂದೇಶ ಮುಖ್ಯವಾಗಬೇಕು, ಸೂರ್ಯಾಸ್ತ ಅಥವಾ ಸೂರ್ಯೋದಯದಲ್ಲಿ ಪ್ರೇಕ್ಷಕ ಗಮನ ಬದಲಾಗಬಾರದಂತೆ.

ಕೊನೆಯದಾಗಿ, ಇದು ಬಹಳ ಅತ್ಯುತ್ತಮ ಚಿತ್ರ. ೫ ಕ್ಕೆ ೫ ಅಂಕ ಕೊಟ್ಟೆ ನಾನು. ಅವಕಾಶ ಸಿಕ್ಕರೆ ತಪ್ಪದೆ ನೋಡಿ. ನಿಮ್ಮ ಅಭಿಪ್ರಾಯವನ್ನು ನಿಷ್ಠುರವಾಗಿ ತಿಳಿಸಿ. ಅವಕಾಶ ಸಿಕ್ಕರೆ ನಾನು ಮತ್ತೊಮ್ಮೆ ನೋಡುತ್ತೇನೆ.

ಸೋಮವಾರ, ಮಾರ್ಚ್ 02, 2009

ಪ್ರತಾಪ್ ಸಿಂಹ ಹೇಳಿದ ದೂರಸಂಪರ್ಕ (Telecommunications) ಪಾಠ

ಭೂತದ ಬಾಯಲ್ಲಿ ಭಗವದ್ಗೀತೆ

ಪ್ರತಾಪ್ ಸಿಂಹರ ಈ ಶನಿವಾರದ ಲೇಖನ ಓದಿದ ಮೇಲೆ ನನಗೆ ಮೊದಲು ನೆನಪಿಗೆ ಬಂದಿದ್ದು, ಉಪೇಂದ್ರ ಚಲನಚಿತ್ರದಲ್ಲಿ "ಹೌದು ನಾನು ಕಚಡ, ಲೋಪರ್, ಪಾಪಿ ಏನೀಗ?" ಎಂದು ಉಪೇಂದ್ರ ಹೇಳುವುದು. ಈ ಕಥೆಯೂ ಹೀಗೆ ಆಯಿತು. ಹೋದ ವಾರ ಬರೆದಿದ್ದೇ ತಪ್ಪು ಕಣಯ್ಯ, ಬೇಕಿದ್ರೆ ಯಾರಾದ್ರು ಪರಿಣಿತರನ್ನು ಕೇಳಿ ಬರೆಯಪ್ಪ ಎಂದು ಎಷ್ಟೋ ಜನ ಹಿತೈಷಿಗಳು ಪ್ರತಾಪ್ ಸಿಂಹನಿಗೆ ತಿಳಿ ಹೇಳಿದರು. ಆದರೆ ಪ್ರತಾಪ್ ಕೇಳಲಿಲ್ಲ, ಹೌದು ನಾನು ಅಙ್ನಾನಿ, ನಾನು ಬರೆಯೋದೆಲ್ಲಾ ಅರ್ಥವಿಲ್ಲದ್ದೆ ನಿಮಗೇನು ಎಂಬಂತೆ ಈ ವಾರದ ಸಂಪಾದಕೀಯವನ್ನು ಅತಿ ಕೆಟ್ಟದಾಗಿ ಬರೆದಿದ್ದಾರೆ.

ನಾನು ಈ ೩ ನೇ ಪೀಳಿಗೆ ತಂತ್ರಙ್ನಾನವಾದ UMTS (ಪ್ರತಾಪ್ ಸಿಂಹ ಹೇಳುವ product development!) ಅಭಿವೃದ್ಧಿಯಲ್ಲಿ ಕೆಲಸ ಮಾಡಿರುವುದರಿಂದ ದೂರಸಂಪರ್ಕ ತಂತ್ರಙ್ನಾನವನ್ನು ಅಲ್ಪ ಸ್ವಲ್ಪ ಅರಿತಿರುವೆ. ಆದ್ದರಿಂದ ಪ್ರತಾಪ್ ಸಿಂಹನ ಲೇಖನ ಓದಿ ಪಕ ಪಕ ನಕ್ಕಿಬಿಟ್ಟೆ! ಇಸ್ರೋ ಅಭಿವೃದ್ಧಿಪಡಿಸಿದ ಉಪಗ್ರಹಗಳಿಂದ ತಂತಿರಹಿತ ದೂರಸಂಪರ್ಕ (mobile telecommunications) ಕ್ರಾಂತಿಯಾಗಿದೆ ಎಂದು ಪ್ರತಾಪ್ ಮಾಹಾಶಯರು ಹೇಳಿಬಿಟ್ಟಿದ್ದಾರೆ.ನಾವು ಮಾಡುವ ಮೊಬೈಲ್ ಕರೆಗಳು ಈ ಉಪಗ್ರಹಗಳ ಮೂಲಕವೇ ಹಾದು ಹೋಗುವುದಂತೆ! :))

ಸ್ವಾಮಿ ಪ್ರತಾಪ್ ಸಿಂಹ, ನಾವು ಬಳಸುವ ಮೊಬೈಲ್ ಫೋನ್ ಗಳಿಗೂ, ಉಪಗ್ರಹಗಳಿಗೂ ಯಾವುದೇ ಸಂಬಂಧವಿಲ್ಲ. ಉಪಗ್ರಹ ಚಾಲಿತ ಫೋನಗಳನ್ನು (satellite phone) ಸಾಮಾನ್ಯವಾಗಿ ಸೇನೆಯಲ್ಲಿ ಬಳಸುತ್ತಾರೆ. ಇತ್ತೀಚೆಗೆ ಉಗ್ರರು ಕೂಡ ಈ ಫೋನ್ ಗಳನ್ನು ಬಳಸುತ್ತಿರುವುದು ದುರದೃಷ್ಟಕರ.ಇನ್ನು ಬಹಳ ಸರಳ ಸಾಲುಗಳಲ್ಲಿ ಹೇಳುವುದಾದರೆ, ನಾವು ಬಳಸುವ ಮೊಬೈಲ್ ಫೋನ್ ಗಳು ಒಂದು ನಿರ್ಧಿಷ್ಟ ತರಂಗಾಂತರ ಶ್ರೇಣಿಯಲ್ಲಿ ವಿದ್ಯುತ್ ತರಂಗಗಳನ್ನು ಹಾಯಿಸಿ, (ಮೊಬೈಲ್ ಫೋನ್ ನಿಂದ base station ನ ವರೆಗೆ) ನಂತರ ಎಲ್ಲವೂ ತಂತಿಯ ಮೂಲಕ digital signal ಗಳನ್ನು ಕಳಿಸಿ ಕೆಲಸ ಮಾಡೂತ್ತವೆ. ಇದಕ್ಕೂ ಉಪಗ್ರಹಗಳಿಗೂ ಯಾವುದೇ ಸಂಬಂಧವಿಲ್ಲ. ಅಲ್ಪ ಸ್ವಲ್ಪ ಕಲಿತ ನಮಗೇ ತಂತ್ರಙ್ನಾನದ ಬಗ್ಗೆ ಬರೆಯುವಾಗ ಹೆದರಿಕೆಯಾಗುತ್ತದೆ. ಎಲ್ಲಿ ತಪ್ಪಾಗುವುದೋ ಎಂದು. ಪ್ರತಾಪ್ ನೋಡಿ, ಮೈ ಚಳಿ ಬಿಟ್ಟು ಎಲ್ಲವನ್ನೂ ಬೆತ್ತಲೆಯಾಗಿ ಬರೆದುಬಿಟ್ಟಿದ್ದಾರೆ!

ಮತ್ತದೇ ತಲೆ ಕೆಟ್ಟ ವಿತಂಡ ವಾದಕ್ಕೆ ಉತ್ತರಿಸುವುದಕ್ಕೆ ಬೇಸರ. ಆದರೂ ಕೆಲವೊಂದು ವಿಷಯಗಳನ್ನು ಸ್ಪಷ್ಟಪಡಿಸಬೇಕೆಂಬ ಬಯಕೆ.

ಪ್ರತಾಪ್ ಸಿಂಹ, ಪೇಟೆಂಟ್ ನಲ್ಲಿ ಚಿಲ್ಲರೆ ಪೇಟೆಂಟ್, ನಗದು ಪೇಟೆಂಟ್ ಗಳೆಂಬ ಎರಡು ವಿಧಗಳಿಲ್ಲಪ್ಪ. ಇನ್ಫೋಸಿಸ್ ಬಳಿ ಇರುವುದೆಲ್ಲಾ ಚಿಲ್ಲರೆ ಪೇಟೆಂಟ್ ಅಂತೆ. ಇಂತಹ ಒಂದು ಹೇಳಿಕೆ ಕೊಡುವ ಅರ್ಹತೆಯಾದರೂ ಪ್ರತಾಪ್ ಗಿದೆಯೆ? ತಾನು ಓದಿರುವುದೇನು? ತಾನು ಬರೆಯುತ್ತಿರುವುದೇನು ಎಂಬುದರ ಬಗ್ಗೆ ಸ್ವಲ್ಪ ವಿವೇಚನೆ ಇದ್ದಿದ್ದರೆ ಇಂತಹ ಪ್ರಮಾದ ಆಗುತ್ತಿರಲಿಲ್ಲವೇನೋ?

ವಿಜಯಕರ್ನಾಟದ ಆರ್ಥಿಕ ಸುದ್ದಿಯ ವಿಭಾಗದಲ್ಲಿ ಹಿಂದಿನ ದಿನದ ಎಕನಾಮಿಕ್ ಟೈಮ್ಸ್ ಸುದ್ದಿಯ ಹಳಸನ್ನು ಪ್ರಕಟಿಸುವುದಕ್ಕಿಂತ, ಬೆನ್ನೆಟ್ಟೆನ್ ಕೋಲ್ಮಾನ್ ನಿಂದ ಹೊರಬಂದು, ನವೀನ ಪತ್ರಿಕೆಯನ್ನು ಪ್ರಾರಂಭಿಸುವ ತಾಕತ್ತಿದೆಯೆ ಪ್ರತಾಪ್ ಸಿಂಹನಿಗೆ? ಇಲ್ಲಾ! ಎಲ್ಲದ್ದಕ್ಕೂ ತನ್ನದೇ ಆದ ಸಮಯ ಹಿಡಿಯುತ್ತೆ. ಮಾ. ತಂ ಕ್ಷೇತ್ರದಲ್ಲೂ ಅಷ್ಟೆ, ಒಂದೇ ದಿನದಲ್ಲಿ R&D ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಲಾಗುವುದಿಲ್ಲ. ಈ ನಿಟ್ಟಿನಲ್ಲಿ ಬಹಳಷ್ಟು ಪ್ರಯತ್ನಗಳಿ ನಡೆದಿವೆ. ಉದಾಹರಣೆಗೆ "ತೇಜಸ್ ನೆಟ್ವರ್ಕ್ಸ್" ಪಕ್ಕಾ ದೇಶೀಯ product ಸಂಸ್ಥೆ. ಈ ರೀತಿಯ ಸಂಸ್ಥೆಗಳು ನೂರಾರಿವೆ. ಆದರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಲು ಸಮಯ ಬೇಕಷ್ಟೆ. ಅಷ್ಟಕ್ಕೂ ಅಮೇರಿಕಾದಲ್ಲಿರುವಷ್ಟು ಉನ್ನತ ವ್ಯಾಸಂಗ ಮಹಾ ವಿದ್ಯಾಲಯಗಳು ಭಾರತದಲ್ಲಿ ಕಡಿಮೆ, ಮತ್ತು ಬಹಳಷ್ಟು ಸಂಶೋಧನೆ ನಡೆಯುವುದು ಉನ್ನತ ವ್ಯಾಸಂಗ ವಿದ್ಯಾಲಯಗಳಲ್ಲೇ.

ಇನ್ಫೋಸಿಸ್ ನ 'finacle' ಎಂಬ ಉತ್ಪನ್ನ (product) ಜಗತ್ಪ್ರಸಿದ್ಧ ಸ್ವಾಮಿ. ಇದನ್ನು ಬಹಳಷ್ಟು ಬ್ಯಾಂಕಗಳು ಬಳಸುತ್ತವೆ. ಮತ್ತೊಮ್ಮೆ ತಮ್ಮಲ್ಲಿ ವಿನಂತಿ, ತಮಗೆ ಗೊತ್ತಿಲ್ಲದ ಸಂಗತಿಗಳನ್ನು ಕೇಳಿ ತಿಳಿಯಿರಿ. ತಿಳಿದ ಮೇಲೆ ಅದನ್ನು ಚಿಲ್ಲರೆ ಎನ್ನುವ ದುರಹಂಕಾರ ಬೇಡ!

ಒಂದೇ ಸಾಲಿನಲ್ಲಿ ಪ್ರಾತಾಪ್ ಸಿಂಹನ ಸಂಪಾದಕೀಯದ ಬಗ್ಗೆ ಅಭಿಪ್ರಾಯ ಹೇಳುವುದಾದರೆ, "ಭೂತದ ಬಾಯಲ್ಲಿ ಭಗವದ್ಗೀತೆ"