ಬುಧವಾರ, ಮೇ 21, 2014

ಗಿರಿಯವರ ಗತಿ, ಸ್ಥಿತಿ ---- ಜಿ.ಎನ್. ರಂಗನಾಥರಾವ್

ಇತ್ತೀಚೆಗಷ್ಟೇ ಆಕೃತಿ ಪುಸ್ತಕ ಬಿಡುಗಡೆ ಮಾಡಿದ ಗಿರಿ ಅವರ ಸಮಗ್ರ ಕೃತಿ 'ಗತಿ ಸ್ಥಿತಿ ಮತ್ತೆಲ್ಲ' ಪುಸ್ತಕವನ್ನು ಗಮನಿಸಿರಬೇಕಷ್ಟೆ. ಅದರ ವಿಮರ್ಶೆಗೆ ಒಂದು ಸ್ಪರ್ಧೆಯನ್ನು ಚುಕ್ಕುಬುಕ್ಕು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ. ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಹೊಸ ವಿಮರ್ಶೆ ಬರೆದು 3000 ರೂ ಗೆಲ್ಲಿರಿ!

ಇದಕ್ಕೆ ಪೂರಕವಾಗಿ ೧೯೭ ರಲ್ಲಿ ಮಾನ್ಯ ಶ್ರೀ ಜಿ ಎನ್ ರಂಗನಾಥ ರಾವ್ ಅವರು ಸಾಕ್ಷಿ ಸಾಹಿತ್ಯ ಮಾಸಿಕಕ್ಕೆ ಬರೆದ ಈ ಓದು ನಿಮಗಾಗಿ..
________________________________________________________________________________

ಗಿರಿಯವರ ಗತಿ, ಸ್ಥಿತಿ

ಜಿ.ಎನ್. ರಂಗನಾಥರಾವ್

ಒಂದು ಮುಂಜಾನೆ ಹಠಾತ್ತನೆ ಪ್ರತ್ಯಕ್ಷವಾಗುವ ಪ್ರಿಯಮಿತ್ರನಂತೆ ಇತ್ತೀಚಿನ ದಿನಗಳಲ್ಲಿ ನಮ್ಮನ್ನು ಸಂಪೂರ್ಣವಾಗಿ ಆವರಿಸಿಬಿಡುವ ಕಾದಂಬರಿಗಳು ಕನ್ನಡದಲ್ಲಿ ಆಗೊಂದು ಈಗೊಂದು ಕಾಣಿಸಿಕೊಳ್ಳುತ್ತಿವೆ. ಗಿರಿಯವರ ‘ಗತಿ, ಸ್ಥಿತಿ’ ಈ ಪಂಕ್ತಿಗೆ ಸೇರುವ ಕಾದಂಬರಿ. ಒಂದೇ ಪಟ್ಟಿನಲ್ಲಿ ಓದಿಸಿಕೊಂಡು ನಮ್ಮನ್ನು ತನ್ನಲ್ಲಿ ಒಳಗು ಮಾಡಿಕೊಳ್ಳುವ ಈ ಕಾದಂಬರಿ ನಾಯಕನ ಅಪರಿಚಿತ ಲೋಕದಲ್ಲಿ ಓದುಗರನ್ನೂ ಮುಳುಗಿಸಿ ಬಿಡುತ್ತದೆ. ನಾಯಕನ ತಿರುವುಗಳಲ್ಲೆಲ್ಲ ನಮ್ಮನ್ನೂ ಸುತ್ತಿಸಿ ಕಕ್ಕಾಬಿಕ್ಕಿ ಸ್ಥಿತಿಗೆ ನೂಕಿಬಿಡುತ್ತದೆ. ಗಿರಿಯವರ ಕೈಯಲ್ಲಿ ಭಾಷೆ ಬೆರಗುಗೊಳಿಸುವ ಸಾಧನವಾಗಿದೆ. ಹೀಗೇಕೆ- ಇದೇನು?- ಎಂದು ತಲೆತುರಿಸಿಕೊಳ್ಳುವಷ್ಟರಲ್ಲಿ ಸೂಕ್ಷ್ಮಾತಿಸೂಕ್ಷ್ಮಗಳನ್ನು ಸೆರೆಹಿಡಿಯುವ ಗಿರಿಯವರ documentary ಭಾಷೆ ನಮ್ಮ ಕಣ್ಮುಂದೆ ಮತ್ತೊಂದು ಚಿತ್ರವನ್ನೇ ಬಿಚ್ಚಿರುತ್ತದೆ. ಹೀಗೆ ಒಂದೊಂದನ್ನೂ ವಿವರಿಸುತ್ತ ನಮ್ಮನ್ನು ಸಂಪೂರ್ಣವಾಗಿ ಸೆಳೆದುಕೊಳ್ಳುವ ‘ಆತ’ ಒಂದು ಕಡೆ ನಿಲ್ಲದೇ ಓಡುವುದು, ನಮ್ಮನ್ನೂ ತನ್ನೊಂದಿಗೆ ಎಳೆದುಕೊಂಡು ಹೋಗುವುದು, ಎಲ್ಲಿ ಹೋದರೂ ಬಿಸಿಲು, ಬೆವರು ಸೆಖೆ ಗುಡ್ಡ-ಬೆಟ್ಟ, ಕೋಟೆಕೊತ್ತಲ- ಇವುಗಳೆದುರು ‘ಆತ’ ಅಸಹಾಯಕನಾಗಿ ಚಡಪಡಿಸುವುದನ್ನು ಕಂಡಾಗ ಇದೇನು fantasy ಯೇ ಅಥವಾ ಆತ homesick ಇರಬಹುದೇ ಎನ್ನಿಸುತ್ತದೆ. ಆದರೆ ಇದಿಷ್ಟೇ ಆಗಿದ್ದರೆ ‘ಗತಿ, ಸ್ಥಿತಿ’ ಒಂದು documentary ಚಿತ್ರವೋ ಕಾಮೆಂಟರಿಯೋ ಆಗುತ್ತಿತ್ತು. ‘ಆತ’ನ ಓಡುವಿಕೆ-ನೋಡುವಿಕೆಯ ಎಲ್ಲ ವಿವರಗಳನ್ನೂ ಗ್ರಹಿಸುವ ಆದರೆ ಯಾವುದೂ ಜೀವಂತ ತುಡಿತವಲ್ಲ ಎನ್ನಿಸುವ ನಾಯಕನ ವ್ಯಕ್ತಿತ್ವದ ಹಿಂದಿನ ಮನಸ್ಥಿತಿಯೇ ಈ ಕಾದಂಬರಿಯ ಮೂಲ ಶಕ್ತಿ. ಮುಖ್ಯವಾಗಿ ಆತನದು ಒಂದು ಕಡೆ ನಿಲ್ಲುವ ಚೇತನವಲ್ಲ. ಆತನ ಪಾಲಿಗೆ ಎಲ್ಲಿ ಹೋದರೂ ಅಲ್ಲಿ ಬಹು ಬೇಗನೆ ನೀರು ಮಡುಗಟ್ಟಿಬಿಡುತ್ತದೆ. ಗಾಳಿ ಬೀಸುವುದಿಲ್ಲ, ಧಗೆ ಜಾಸ್ತಿಯಾಗುತ್ತದೆ. ಎಲ್ಲೂ ನೆಲಸಲಾಗದ ಆತನದು ಅಲೆಮಾರಿ ವ್ಯಕ್ತಿತ್ವ. ಪರಿಸರದೊಡನೆ ಆತ ಹೊಂದಿಕೊಳ್ಳಲಾರ. ಅವನಿಗೆ ಎಲ್ಲೆಲ್ಲೂ ಅನುಭವಕ್ಕೆ ಬರುವುದು ಉಸಿರು ಕಟ್ಟುವ ವಾತಾವರಣ, ಪರ ಊರು, ತನ್ನ ಊರು, ಬೆಂಗಳೂರು, ಮೈಸೂರು ಎಲ್ಲೂ ಆತ ನಿಲ್ಲಲಾರ; ನೆಲೆಯಾಗಲಾರ. ಯಾವುದರ ಜೊತೆಯೂ, ಯಾರ ಜೊತೆಯೂ ಸಂಬಂಧ ಸ್ಥಾಪಿಸಲಾರ. ಯಾವುದರೊಡನೆಯೂ ಬೆಸೆದುಕೊಳ್ಳಲಾರ. ಎಲ್ಲವನ್ನೂ ನೋಡಿದರೂ ಅದರೊಡನೆ ಬೆರೆತುಕೊಳ್ಳಲಾಗದ, ಪ್ರತಿಕ್ರಿಯಿಸಲಾಗದ ನಿರ್ಲಿಪ್ತತೆ, ಒಂಟಿತನ, ಆಸಹಾಯಕತೆ, ಗುಮ್ಮೆನ್ನಿಸುವ ಅಸಹನೀಯ ವಾತಾವರಣ. ಇದರಿಂದ ದೂರ ಓಡುವ ಮನಸ್ಸು : ಹೋಟೆಲಿನ ಕೋಣೆಯಿಂದ ನ್ಯೂರಾಲಜಿ ಡಿಪಾರ್ಟ್‌ಮೆಂಟಿಗೆ, ಅಲ್ಲಿಂದ ಕಾಲೇಜಿಗೆ ಮತ್ತೆ ರೂಮಿಗೆ, ರೂಮಿನಿಂದ ಬೀದಿಗೆ, ಮುಗಿದಂತೆ ಕಂಡರೂ ಮುಗಿಯದ ರಸ್ತೆಗಳ ತಿರುವಿಗೆ, ಬೆಟ್ಟ, ಗುಡ್ಡ, ಕೋಟೆಗಳಿಗೆ. ಕೊನೆಗೊಮ್ಮೆ ಬೆಂಗಳೂರಿಗೆ, ಬೆಂಗಳೂರಿನಲ್ಲಿ ಕಚೇರಿ, ಬಾರುಗಳಿಗೆ. ಅಲ್ಲಿಂದ ಮೈಸೂರಿಗೆ, ಮೈಸೂರಿನಿಂದ ತನ್ನ ಹಳ್ಳಿಗೆ, ಅಲ್ಲಿಂದ ಜೋಗ್ ಜಲಪಾತಕ್ಕೆ- ಹೀಗೆ ಅಲೆಯುತ್ತಾನೆ. ಕಾದಂಬರಿಯೂ ಯಥಾಸ್ಥಿತಿ ಓಡುತ್ತದೆ. ಘಟನೆ, ಸನ್ನಿವೇಶ, ಪಾತ್ರಗಳು, ಅನಿರೀಕ್ಷಿತ ಆಘಾತ- ಹೀಗೆ ಏನಾದರೊಂದು ಸಂಭವಿಸಿ ಕ್ರಿಯೆಯಲ್ಲಿ ಕಾದಂಬರಿ ಬೆಳೆಯುವುದಿಲ್ಲ. ‘ಆತ’ನೂ ಅಷ್ಟೇ : ಒಂದೇ ಗೆರೆಯಲ್ಲಿ ಓಡುತ್ತಾನೆ. ಆದರೂ ವೀಕ್ಷಕ ವಿವರಣೆಯಲ್ಲೇ ಅನೇಕ ಅಚ್ಚರಿಗಳ ಬಾಗಿಲು ತೆಗೆದುಬಿಡುತ್ತದೆ.

ಒಂದು ಪರಿಸರದಿಂದ ಮತ್ತೊಂದಕ್ಕೆ, ಒಂದು ವಾತಾವರಣದಿಂದ ಮತ್ತೊಂದು ವಾತಾವರಣಕ್ಕೆ ಓಡುವ ‘ಆತ’ನ ಮನಸ್ಸಿಗೆ ನಿರಂತರ ಚಲಿಸುವಿಕೆಯಷ್ಟೇ ಗುರಿಯೇನೊ ಅನ್ನಿಸುತ್ತದೆ. ಈ ಅಲೆಮಾರಿ ವ್ಯಕ್ತಿತ್ವದ ಆತನಿಗೆ ಅಚಲವಾದದ್ದೆಲ್ಲ ಅಸಹನೀಯ. ಬೆಟ್ಟ, ಗುಡ್ಡ, ಕೋಟೆ ಇಕ್ಕಟ್ಟಿನ ಕಟ್ಟಡಗಳು ಇದೊಂದೂ ಅವನಿಗಾಗದು. ಇವೆಲ್ಲ ಅವನ ಮನಸ್ಸಿನಲ್ಲಿ ಭೀತಿ, ಅಸಹನೆ, ಅಸಹಾಯಕತೆ, ಭ್ರಮೆಗಳನ್ನು ಮೂಡಿಸುತ್ತದೆ. ಗುಡ್ಡದ ಮೇಲಿನ ಬಂಡೆ ಎಲ್ಲಿ ಉರುಳಿ ಬಂದು ಆಹುತಿ ತೆಗೆದುಕೊಳ್ಳುವುದೋ ಎನ್ನಿಸಿ ಭಯವಾಗುತ್ತದೆ. ಅಚಲವಾಗಿ ನಿಂತಿರುವ ಬೆಟ್ಟ, ಕೋಟೆ, ಮುಗಿಯದ ತಿರುವಿನ ರಸ್ತೆಗಳು, ಕೊಳಕು ಬೀದಿ, ನೀರಿನ ಕಾಲುವೆ, ಹೊರಗೆ ಹೋಗಲು ಊರ ಬಾಗಿಲಿಗಾಗಿ ಹುಡುಕಾಟ ಇವೇ ಆವರಿಸಿವೆ.

ಕಾದಂಬರಿಯ ನಾಯಕ ’ಆತ’ ಮತ್ತು ಆಕೆ ನೌಕರಿಗಾಗಿ ಪರ ಊರಿಗೆ ಬರುತ್ತಾರೆ. ಆತನಿಗೆ ನ್ಯೂರಾಲಜಿ ಡಿಪಾರ್ಟ್‌ಮೆಂಟಿನಲ್ಲಿ ಕೆಲಸ ಮಾಡಲು ಆರ್ಡರ್ ಇರುತ್ತೆ. ಆಕೆಯದು ಲೆಕ್ಚರಿಕೆ. ಆದರೆ ಈ ಮಧ್ಯ appointment ವಿಷಯದಲ್ಲಿ ಸ್ವಲ್ಪ difficulties ಬಂದು ಆತ ಕೆಲಸಕ್ಕೆ ಹಾಜರಾಗಲಾಗದೇ ಕಾಯಬೇಕಾಗುತ್ತದೆ. ಈ ಕಾಯುವಿಕೆಯಲ್ಲಿ ಆತನ ಆತಂಕ ಬೆಳೆಯುತ್ತ ಹೋಗುತ್ತದೆ. ನಿಂತಕಡೆ ನಿಲ್ಲಲಾಗದೆ, ಕುಳಿತುಕೊಳ್ಳಲಾಗದೇ ತಹತಹಿಸುತ್ತಾನೆ. ಊರೆಲ್ಲ ಸುತ್ತುತ್ತಾನೆ. ಕಾದಂಬರಿ ಪೂರ್ತಿ ಈತನ ಸುತ್ತುವಿಕೆ-ಇಂದ್ರಿಯ ಪ್ರಜ್ಞೆ ಸೆರೆಹಿಡಿಯುವ ವಿವರಗಳು.

ಪರ ಊರಿನಲ್ಲಿ ವಸತಿ ಹುಡುಕುವುದರೊಂದಿಗೇ ಆರಂಭವಾಗುತ್ತದೆ, ಆತನ ಅಲೆದಾಟ, ಆತಂಕ. ಹೋಟೆಲಾದ ಮೇಲೆ ಹೋಟೆಲು. ಆಕೆಗೆ ಭಯವುಂಟು ಮಾಡುವ ಶವದ ಮನೆಯಂಥ ಉದ್ದನೆಯ ಹಜಾರದಲ್ಲಿ ಬಿಳಿಯ ಬೆಡ್‌ಷೀಟ್ ಹೊದೆದು ಸಾಲಾಗಿ ಮಲಗಿದ ವ್ಯಕ್ತಿಗಳನ್ನೊಳಗೊಂಡ ಕೋಣೆಯಲ್ಲಿನ ನಿರ್ಜೀವತನ, ಅಸಹನೀಯ ಮೌನ, ನಾಯಕನನ್ನು ಸ್ವಲ್ಪವೂ ಕದಕುವುದಿಲ್ಲ. ಸತ್ತ ಸಮಾಜವನ್ನು ಮೊದಲೇ ಒಪ್ಪಿಕೊಂಡಂತೆ ಆತ ವರ್ತಿಸುತ್ತಾನೆ. ಇಲ್ಲಿ ಹೋಟೆಲಿನ ಹುಡುಗನಿಂದ ಆಕೆಗೆ ಆಗುವ ಅನುಭವವೂ ಅವನನ್ನು ಕೆರಳಿಸುವುದಿಲ್ಲ. ಇದೆಲ್ಲದಕ್ಕೆ ತಾನು ನಿರ್ಲಿಪ್ತ ಎಂಬಂತೆ ಅವನ ವರ್ತನೆ. ಹೀಗೆ ಪರ ಊರಿನ ಪ್ರವೇಶವೇ ಅವರಿಗೆ ಉಸಿರಾಡುವ ಸೂಚನೆಯೂ ತೋರದ ನಿರ್ಜೀವ ಪ್ರಪಂಚದೊಂದಿಗೆ ಆರಂಭವಾಗುತ್ತದೆ. ಮುಂದಿನದೆಲ್ಲ ಕಾಯುವ ಆತಂಕ, ಉಸಿರು ಕಟ್ಟಿಸುವ ವಾತಾವರಣದಿಂದ ಪಾರಾಗುವ ತವಕ.

ಪರ ಊರಿನಲ್ಲಿ ಆತನಿಗೆ ಕಾಣುವುದು ಅನಿರೀಕ್ಷಿತವಾಗಿ ದೊಡ್ಡದೊಂದು ಬೆಟ್ಟ. ತೆರೆದುಕೊಳ್ಳುವುದು ಮುಗಿಯುವ ಸೂಚನೆಯೇ ಇಲ್ಲದ ತಿರುವು ದಾರಿಗಳು. ಕಣ್ಣಿಗೆ ಕತ್ತಲೆ ಬರಿಸುವ ಬಣ್ಣದ ರೂಮು, ಅಚಲವಾಗಿ ನಿಂತ ಬೆಟ್ಟ. ಒಮ್ಮೊಮ್ಮೆ ಅದರ ಮೇಲಿನ ಕೋಡುಗಲ್ಲು ಜಾರಿ ಬೀಳಬಹುದೆಂಬ ದೃಷ್ಟಿಭ್ರಮೆ, ಮುಗಿಯದ ದಾರಿಗಳು, ಕಚೇರಿಯಲ್ಲಿ ಯಾರಿಗೂ ಏನೂ ತಿಳಿಯದಂಥ ಅನಿಶ್ಚಿತ ಪರಿಸ್ಥಿತಿ, ಯಾಂತ್ರಿಕ ವ್ಯವಸ್ಥೆ ಇವೆಲ್ಲ ಆತನಿಗೆ ಜಡತೆಯ, ಸತ್ತ ಜೀವನದ ಸಂಕೇತವಾಗಿ, ಕುತ್ತಿಗೆ ಹಿಚುಕುವಂಥ ಉಸಿರುಕಟ್ಟಿಸುವ ವಾತಾವರಣವಾಗಿ ಕಾಡುತ್ತವೆ.ಮೈಮೇಲೆ ಬರುವ ವಾಸ್ತವಿಕ ಸ್ಥಿತಿಯ ಪ್ರತೀಕವಾಗಿ ತುಳಿಯುವ ಶಕ್ತಿಯಾಗಿ ಹಣ್ಣು ಮಾಡಿಬಿಡುತ್ತವೆ. ಆತನ ಗತಿಗೆಡಿಸುತ್ತವೆ. ಮುಗಿಯದ ತಿರುವು ದಾರಿಗಳು ಗುರಿ ಇಲ್ಲದ್ದನ್ನೂ ಕಣ್ಣುಕಟ್ಟುವ ಸ್ಥಿತಿಯ ಗೊಂದಲವನ್ನೂ ಸೂಚಿಸಿ ಮುಕ್ತಿಯೇ ಇಲ್ಲವೇನೋ ಎಂಬಂಥ ದಾರುಣಸ್ಥಿತಿಗೆ ತಂದುಬಿಡುತ್ತವೆ. ಈ ಆತಂಕ ಮುಂದಿನ ಹಂತಕ್ಕೆ ಅಂದರೆ ಮತ್ತೊಂದು ಓಡುವಿಕೆಗೆ ಸಿದ್ಧತೆ ನಡೆಸುತ್ತದೆ.

ಆದರೆ ದಾರಿ? ಕೋಟೆಯೊಳಗೆ ಆತ ಬಂದಿ, ಸುತ್ತಿಬಳಸುವ ದಾರಿಗೆ ಕೊನೆಯೇ ಇಲ್ಲ. ಕೋಟೆಗೆ ಬಾಗಿಲೇ ಇಲ್ಲ. ಹಳೆಯ ಮೌಲ್ಯ, ಸಂಬಂಧ, ಸಂಪ್ರದಾಯಗಳ ರಕ್ಷಕ ವ್ಯವಸ್ಥೆಯ ಪ್ರತೀಕವಾಗಿರುವ ಈ ಕೋಟೆಯಿಂದ ತಪ್ಪಿಸಿಕೊಳ್ಳಲು ಹೆಣಗಿದಂತೆಲ್ಲ ಅದರ ಹತ್ತಿರ ಬರುತ್ತಾನೆ. ಯಾರು ಇದನ್ನು ಕಟ್ಟಿದವರು ಎಂದು ಆಸಕ್ತಿಯೂ ಮೂಡುತ್ತದೆ. ಆದರೆ ಅವನಿಗೆ ಗೊತ್ತಾಗುವುದು ಅದು ಊರಿಗೆ ಕಳಶ- pride.ಸೂರ್ಯನಿಗೂ ಸೆಖೆಯಾಗುತ್ತಿರಬಹುದಾದ ಆ ಊರಿನಲ್ಲಿ ಆತನಿಗೆ ಏನೂ ಪ್ರಯೋಜನವಿಲ್ಲ. ಆತ ಬೈಯ್ಯಲಾಗದ, ಶಪಿಸಲಾಗದ, ಓಡಲಾಗದ, ಪರಿಸ್ಥಿತಿಯಲ್ಲಿ ಬೇಯುತ್ತಾನೆ. ಮನುಷ್ಯರಲ್ಲೂ ಆತನಿಗೆ ವಿಶ್ವಾಸವಿಲ್ಲ, ಯಾರ ಮಾತಿಗೂ ಅರ್ಥವಿಲ್ಲ:

“....ಇವರೆಲ್ಲ ಬಾಯಿಯಿಂದ ಶಬ್ದಗಳನ್ನು ಆಚೆ ಹಾಕುತ್ತಾರಷ್ಟೆ. ವಾಕ್ಯವಿಲ್ಲ, ಅರ್ಥವಿಲ್ಲ, ನಿರ್ಧಾರವಿಲ್ಲ, ಯೋಚನೆಯಿಲ್ಲ. (ಪುಟ-೪೭) “ಏನೇ ಮಾಡೋದು, ಭೂಮಿ ಮೇಲೆ ಇದ್ದಹಾಗೆ ಇಲ್ಲ" ಎಂಬ ಚಡಪಡಿಕೆಗೆ ಬರುತ್ತಾನೆ. ಡೈರೆಕ್ಟರ್ ಬರುವಿಕೆಗಾಗಿ ಕಾಯುವುದು, ಬಾಸ್, ರಿಸರ್ಚ್ ಪ್ರೊಫೆಸರುಗಳ ಸತಾಯಿಸುವಿಕೆ, ಮಾನವೀಯ ಮೌಲ್ಯಗಳಿಗೆ ಎಳ್ಳಷ್ಟೂ ಬೆಲೆ ಇಲ್ಲದಂತೆ ಅಧಿಕಾರಿಗಳು, ಗುಮಾಸ್ತರುಗಳು ಆತನನ್ನು ನಡೆಸಿಕೊಳ್ಳುವ ರೀತಿ, ಸಹಿಸಲಾಗದ ಧಗೆ, ಬೆಟ್ಟ, ಕೋಟೆ, ಕೊಳಕು ಬೀದಿಗಳು ಇವೆಲ್ಲದರ ಮಧ್ಯ ‘ಆತ’ ತಪ್ತನಾಗುತ್ತಾನೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಿ ಆ ಸೀಮಿತ ಪರಿಸರದಲ್ಲಿ ಅವನು ಕಂಡದ್ದಕ್ಕೇ ಡಿಕ್ಕಿ ಹೊಡೆಯುತ್ತಾನೆ. ಯಾವುದನ್ನೂ ಹೃದಯಕ್ಕೆ ಗ್ರಹಿಸಲಾಗದೇ ಅನಾಥನಾಗುತ್ತಾನೆ. ಇಂಥ ಸ್ಥಿತಿಯಲ್ಲೂ ಆತನಿಗೆ ಆ ಊರಿನಲ್ಲಿ ಒಂದೇ ಆಕರ್ಷಣೆ : sweet ಆಗಿರುವ ಒಳ್ಳೆಯ ಮೈಕಟ್ಟಿನ ಹುಡುಗಿಯರು, ಮನಸ್ಸನ್ನು ಅಮುಕುವ ಕಿರಿಕಿರಿಗಳ ಮಧ್ಯ ಕಣ್ಣು ಕಣ್ಣು ಬಿಡುತ್ತ ಬದುಕುವ ಆತನಿಗೆ ಎದುರಾಗುವ ಹುಡುಗಿಯರು ಮಾತ್ರ ಅವನಲ್ಲಿ ಇನ್ನೂ ಜೀವಂತ ಬದುಕಿನ ಬಗ್ಗೆ ಇರುವ ಆಸಕ್ತಿಯ ಸಂಕೇತವಾಗುತ್ತಾರೆ. ಗುಟ್ಟಾಗಿ ಹೊಟ್ಟೆಯಲ್ಲಿ ಅಡಗಿರುವ ಈ ಜೀವಂತಿಕೆಯ ಆಸೆ ನೆನಪಾಗಿ ಕಾಣಿಸಿಕೊಳ್ಳುತ್ತದೆ. ಕೋಪವಾಗಿ ಕೆರಳುತ್ತದೆ :

“....ಒಂದು ಥರಾ ಮನಸ್ಸಿಗೆ ನಾಲ್ಕು ಕಡೆಯಿಂದ ದೊಣ್ಣೆ ಹಾಕಿ ಅಮುಕಿದಂತೆ ಕಿರಿಕಿರಿ. ಚಿಕ್ಕಂದಿನಲ್ಲಿ ಊರಿನ ಹೋರಿಯ ಬೀಜ ಒಡೆದದ್ದರ ನೆನಪು, ಯಮಯಾತನೆ, ನಾಲ್ಕಾರು ಜನ ದಾಂಡಿಗರು ಕೈಕಾಲು ಕಟ್ಟಿ ಬೀಳಿಸದ ಹೋರಿಯ ಆ ಸಾಮಾನನ್ನ ಮರದ ದೊಣ್ಣೆಗಳಿಂದ ತಯಾರಿಸಿದ ಇಕ್ಕಳದಂತಹದೊಳಗೆ ಹಾಕಿ ತಿಕ್ಕಿತಿಕ್ಕಿ ನೀರು ಮಾಡುತ್ತಿದ್ದ, ವಿಲಿವಿಲಿ ಹೋರಿ ಒದ್ದಾಡುತ್ತಿದ್ದ ದೃಶ್ಯ, ಆ ಧಾಂಡಿಗರನ್ನೆಲ್ಲ ಬಾರು ಕೋಲಿನಿಂದ ಥಳಿಸಬೇಕು. ಅವರಿಗೂ ಅದೇ ಮಾಡಿ ರುಚಿ ತೋರಿಸಬೇಕು." (ಪುಟ-೬೧)

ನಿರ್ವೀರ್ಯಗೊಳಿಸುತ್ತಿರುವ ಸುತ್ತಲಿನ ಬದುಕಿನಲ್ಲಿ ಸಿಕ್ಕಿಬಿದ್ದಿರುವ ಆತ ತನ್ನನ್ನು ಇಡಹೊಡೆಸಿಕೊಳ್ಳುತ್ತಿರುವ ಹೋರಿಗೆ ಹೋಲಿಸಿಕೊಳ್ಳುತ್ತಾನೆ. ಆ ಊರು, ಅಲ್ಲಿನ ಬೆಟ್ಟ-ಕೋಟೆ, ಗಲೀಜು ಬೀದಿಗಳು, ಕಾಲುವೆ, ಆಫೀಸಿನ ಯಾಂತ್ರಿಕತೆ, ಬದುಕಲಿಕ್ಕೆ ಏನೇನೂ ತರವಲ್ಲ ಎನ್ನುವಂಥ ವಾತಾವರಣ- ಹೀಗೆ ಇಕ್ಕಳದಲ್ಲಿ ಆತ ಸಿಕ್ಕಿಬಿದ್ದಿದ್ದಾನೆ. ಆತನದು ಹೋರಿಗಿಂತ ಮಿಗಿಲಾದ ಸ್ಥಿತಿ ಏನಲ್ಲ. ಆ ನೋವು ಅವನನ್ನು ಗಾಸಿಗೊಳಿಸುತ್ತದೆ. ಅದರ ವಿರುದ್ಧ ಹೋರಾಡುವ, ಜೀವಂತ ಉಳಿಯುವ ಛಲವೂ ಸ್ವಲ್ಪ ಏಳುತ್ತದೆ.ಆದರೆ ಆತನಿಗೆ ಅಂತಿಮವಾಗಿ ಕಾಣುವುದು : ಬರೀ ಖಾಲಿತನ. ಕೈಯ್ಯಲಿದ್ದ ರೊಕ್ಕವೂ ಖರ್ಚಾಗಿ ಹೋಟೆಲಿನ ಮಾಲೀಕ ಬೆನ್ನ ಹಿಂದೆ ಗೂಢಚರ್ಯೆ ನಡೆಸಿದಾಗ, ಆಕೆಗೆ ಸಿಕ್ಕ ಕೆಲಸದಲ್ಲೂ ಕಿರುಕುಳ, ದೊಡ್ಡವರ ಅಪ್ರಾಮಾಣಿಕತೆ, ಹಲ್ಕಾತನ ಕಂಡಾಗ ಅವನಿಗನ್ನಿಸುವುದು ಒಂದೇ : ಓಡಿ ಹೋಗುವುದು, ಮಾನಸಿಕವಾಗಿ ಅವರಾಗಲೇ ಓಡಲಾರಂಭಿಸುತ್ತಾರೆ. ದಮ್ಮುಕಟ್ಟಿ ಓಡುತ್ತಾರೆ. ಹೊರದಾರಿಯಿಲ್ಲದ ಊರೊಳಗೆ ಸುತ್ತುತ್ತಾರೆ. ಸಿಕ್ಕ ರೈಲು ಹಾದಿಯೂ ಅವರನ್ನು dead end ಗೆ ಒಯ್ಯುತ್ತದೆ. ಮತ್ತೆ ತಿರುಗಿ ಬೀಡ ಕಟ್ಟುವ ಧಡೂತಿ ವ್ಯಕ್ತಿಯನ್ನು ‘ದಾರಿ’ ಕೇಳುತ್ತಾರೆ. ಬೀಡಾ ಕಟ್ಟುವ ವ್ಯಕ್ತಿ ಊರಿನ ಬೆಟ್ಟದಷ್ಟೇ ಭಯಂಕರವಾಗಿ, ನಿಶ್ಚಲನಾಗಿ, ಬಾಯಿ ಬಿಡದೆ ನಿರ್ಜೀವಸ್ಥಿತಿಯ, ಮಾನವೀಯ ಮೌಲ್ಯಗಳೆಲ್ಲ ಸತ್ತ ಸಮಾಜದ ಖದೀಮ ವ್ಯವಸ್ಥೆಗಳ ಸಂಕೇತವಾಗಿ ಬಿಡುತ್ತಾನೆ. ಈತನ ಮೌನ ಕೊನೆಗೂ ಕೈಗೂಡದ ದಿಕ್ಕೆಟ್ಟ ಸ್ಥೀತಿಯ ಸ್ಪಷ್ಟತೆ.

ಹೆಸರಿಲ್ಲದ ಊರಿಗೆ ಬಂದ ಐದನೆಯ ಶುಕ್ರವಾರದ ವೇಳೆಗೆ ಆತ ಸಂಪೂರ್ಣ ಸೋತು ಹೋಗುತ್ತಾನೆ. ಕೈ ಖಾಲಿಯಾದಾಗ ನೆನಪಾದ ಗೆಳೆಯನ ಬಗ್ಗೆಯೂ ಅನುಮಾನ, ಹಣ ಸಿಕ್ಕ ಗೆಳೆಯ ಮೂರ್ತಿ ಗುಂಡುಹಾಕಿ ಮಜಾ ಮಾಡಿರಬಹುದು. ಹಣ ಬರುವ ಖಾತ್ರಿ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತಾನೆ. ಯಾರೊಬ್ಬರೊಡನೆಯೂ ಸಂಬಂಧ ಕಾಣದೆ ಅನಾಥಸ್ಥಿತಿಯಲ್ಲಿ ಇರುವ ಆತನಿಗೆ ತಾಕುವ ವ್ಯಕ್ತಿಗಳೆಂದರೆ ಆಕೆ ಮತ್ತು ಮೂರ್ತಿ. ಆಕೆ ಮತ್ತು ಆತ ಒಂದೇ ಕೋಣೆಯಲ್ಲಿದ್ದರೂ ಪರಕೀಯರಂತೆ ಕಾಣುತ್ತಾರೆ. ಆದರೆ “ಮುತ್ತಿಲ್ಲ ಮುದ್ದಿಲ್ಲ" ಎಂಬ ಮಾತುಗಳಿಂದ, ಮೂರ್ತಿ ಆಕೆ ಬಗ್ಗೆ ತೋರುವ informal attitude ನಿಂದ ಅವರಿಬ್ಬರೂ ಆತನಿಗೆ ಆಪ್ತರೆಂಬ ಸೂಚನೆ. ಆಕೆ ಡೀನ್ ತನ್ನನ್ನು ಹೀನಾಯವಾಗಿ ಕಾಣವ ಬಗ್ಗೆ ನೊಂದುಕೊಂಡಾಗ ಇವನ ಕರುಳು ಚುಚ್ಚುತ್ತದೆ. ಆಗ ಕೊಂಡಿ ಬೆಸೆದುಕೊಂಡಂಥ ಕ್ರಿಯೆ, ದುಃಖ ಮೊದಲ ಬಾರಿಗೆ ಇಬ್ಬರನ್ನೂ ಹತ್ತಿರ ತರುತ್ತದೆ. ಕೊನೆಗೊಮ್ಮೆ ಇಬ್ಬರೂ ಧಗೆಯಿಂದ ಪಾರಾಗುತ್ತಾರೆ. ಆತ ಬೆಂಗಳೂರಿನಲ್ಲಿ ಉಳಿಯುತ್ತಾನೆ. ಆಕೆ ಮೈಸೂರಿಗೆ ಹೋಗುತ್ತಾಳೆ.

ಇಲ್ಲಿಯವರೆಗೆ ಸರಾಗವಾಗಿ ಓದಿಸಿಕೊಳ್ಳುವ ಕಾದಂಬರಿ ಥಟ್ಟನೆ ನಿಂತ ಅನುಭವವಾಗುತ್ತದೆ. ಪರ ಊರಿನ ಉಸಿರು ಕಟ್ಟಿಸುವಂಥ ವಾತಾವರಣದಿಂದ ಆತನ ಬಿಡುಗಡೆಯೊಂದಿಗೇ ಎಲ್ಲ ಮುಗಿಯಿತೇನೋ- ಆತ ಬೆಂಗಳೂರಿನಲ್ಲಿ normal ಗೆ ಬಂದನೇನೊ ಎನ್ನಿಸುತ್ತದೆ. ಆದರೆ ಬೆಂಗಳೂರೂ ಅವನ ಮನಸ್ಥಿತಿಗೆ ಹೊರತಾಗುವುದಿಲ್ಲ. ಕಚೇರಿ ಬಾರ್‌ಗಳಲ್ಲಿ ಸುತ್ತುವ ಆತನಿಗೆ ಮತ್ತೆ ಅದೇ ಉಸಿರುಕಟ್ಟಿಸುವ ಅನುಭವ. ಅದರಿಂದ ಮುಕ್ತನಾಗುವ ತಲ್ಲಣ. ಬೆಂಗಳೂರಿನ ಬಾರ್ ಒಂದರಲ್ಲಿ ಗುಂಡು ಹಾಕುವಾಗ ಮೊದಲ ಬಾರಿಗೆ fact ಒಂದರೊಡನೆ ಸಂಪರ್ಕ ಪಡೆದ ಅನುಭವವೂ ಬಿಯರ್‌ನ ಕಿಕ್‌ನಷ್ಟೇ ಕ್ಷಣಿಕ. ಬಾರ್‌ನಲ್ಲಿ ಸಿಕ್ಕ ವ್ಯಕ್ತಿಯ ಕಾಮ ಜೀವನದ ವೈಫಲ್ಯ ಇವನದೂ ಆಗುತ್ತದೆ. ‘ಆತ’ನದು ಪರಿಸರದಲ್ಲಿ ಒಳಹೋಗಲಾಗದಂಥ, ಬೆರೆಯಲಾಗದಂಥ, introduce ಆಗಲಾರದಂಥ ಸ್ಥಿತಿ.

ಬೆಂಗಳೂರಿಂದ ಮೈಸೂರಿಗೆ ಕೊನೆಗೆ ಸ್ವಂತ ಊರಿಗೆ. ಸ್ವಂತ ಹಳ್ಳಿಯಲ್ಲಿ ಒಂದು ಮಧ್ಯಾಹ್ನ ಕಳೆಯುತ್ತಲೇ ಆತನಿಗೆ ಅಳುಬರುವಷ್ಟು ಬೇಸರ. ಈ ಮುಜುಗರದಿಂದ ಪಾರಾಗಲು, ಹೊತ್ತು ಕಳೆಯುವುದನ್ನೇ ಪ್ರಧಾನವಾಗಿಟ್ಟುಕೊಂಡು ಜೋಗ್ ಜಲಪಾತಕ್ಕೆ ಹೋಗುತ್ತಾನೆ.ಜೋಗ ಜಲಪಾತವೂ ಅವನ ತಾಪವನ್ನು ತಣಿಸುವುದಿಲ್ಲ. ಅಲ್ಲೂ ಅವನಿಗೆ ಆತಂಕ, ಭೀತಿ, ಜಲಪಾತ ತಲೆಯೊಳಗಿದೆಯೊ, ಹೊರಗಿದೆಯೊ ಎನ್ನಿಸುತ್ತದೆ. ಜೋಗ ಜಲಪಾತದ ಅಗಾಧತೆ, ಪ್ರಪಾತ, ಅಲ್ಲಿನ ಸನ್ನಿವೇಶಗಳು ಬದುಕಿನ ನಿಗೂಢ ಶಕ್ತಿಯ ಸಂಕೇತವಾಗಿ ಅದರ ಮುಂದೆ ತನ್ನ ಬದುಕನ್ನು ಮುಷ್ಟಿಯಲ್ಲಿ ಹಿಡಿಯುವ ಪ್ರಯತ್ನ ವಿಫಲವೆನಿಸಿ ಆತ ಆರ್ತನಾಗುತ್ತಾನೆ.

ಕಾದಂಬರಿಯನ್ನು ಮುಗಿಸಿದ ನಂತರ ಕೆಲವು ಪ್ರಶ್ನೆಗಳು ಮೂಡುತ್ತವೆ : ಈ ವೀಕ್ಷಕ ವಿವರಣೆ, ಸ್ವಗತ, ವ್ಯಾಖ್ಯಾನಗಳ ಉದ್ದೇಶವೇನು? ಆತನ ನೋಡುವಿಕೆ, ಅಲ್ಲಿಂದ ಓಡುವಿಕೆ- ಇವುಗಳ ಅರ್ಥವೇನು? ಆತನ ಈ ಅನುಭವಗಳಿಗೆಲ್ಲ ಏನೂ ಅರ್ಥವಿಲ್ಲವೆ? ತೊಣಚಿ ಹೊಕ್ಕ ದನದಂತೆ ನಿಂತಕಡೆ ನಿಲ್ಲದೆ ಸುತ್ತುವ ಆತನಿಗೆ ಬೆಟ್ಟೆ, ಕೋಟೆ, ಗಲೀಜಿ ರಸ್ತೆಗಳು, ಹರಿಯುವ ಕಾಲುವೆ, ಕಕ್ಕಸಿಗೆ ಕುಳಿತವನು ಇವು ಬಿಟ್ಟು ಬೇರೇನೂ ಕಾಣಿಸಲಿಲ್ಲವೇ? ಯಾವ ಅನುಭವವೂ ಆತನ ಮನಸ್ಸಿನಾಳಕ್ಕೆ ಇಳಿಯುವುದಿಲ್ಲ ಏಕೆ? ಆತನ ಆತಂಕ, ತಬ್ಬಲಿತನಗಳ ಬಗ್ಗೆ ಅನುಕಂಪ ಮೂಡುವುದೇ ಹೊರತು ಇದರಲ್ಲಿ ಯಾವುದೂ significant ಅನ್ನಿಸುವುದಿಲ್ಲವಲ್ಲ? ಕಾದಂಬರಿಯ ಮೂಲ ಸಮಸ್ಯೆಯೇ ಇದು. ಯಾವುದೂ significant ಅನ್ನಿಸದೇ ಹೋಗುವುದೇ ‘ಆತ’ನ ವ್ಯಕ್ತಿತ್ವದ ಬಿರುಕಿಗೆ ಕಾರಣ.

ತಬ್ಬಲಿತನ, ಪರಕೀಯತೆ, ಭ್ರಷ್ಟ ಸಮಾಜ, ಯಾಂತ್ರಿಕ ಜೀವನದ ಜಿಗುಪ್ಸೆ- ಹೀಗೆ ಬದುಕಿನ ವಿವಿಧ ಹಂತಗಳಲ್ಲಿ ಆಗುವ ಯಾವ ಅನುಭವವೂ ಅರ್ಥಪೂರ್ಣವಾಗದೇ ಹೊಯ್ದಾಡುವ ಇಂದಿನ ಯುವಕರ ಪ್ರತಿರೂಪ ‘ಆತ’. ವಿವರಗಳನ್ನೆಲ್ಲ ನೋಡುತ್ತಾನೆ. ಆ ಬಗ್ಗೆ ಕಾಮೆಂಟ್ ಮಾಡುತ್ತಾನೆ. ಆದರೆ ಯಾವುದೂ ಜೀವಸತ್ವವಾಗಿ ಆತನ ಹೃದಯದಲ್ಲಿ ಉಳಿಯುವುದಿಲ್ಲ, ಏನೂ ಅನ್ನಿಸುವುದಿಲ್ಲ. ಗೆಳೆಯ ಮೂರ್ತಿಗೆ ಹೇಳುತ್ತಾನೆ : “ಏನೂ ಅನಿಸಲಿಲ್ಲ. ಹೀಗಾಯಿತು. ಹಾಗಾಯಿತು ಅಂತ ಮತ್ತೆ ಮತ್ತೆ ಘಟನೆಗಳೇ ಮರುಕಳಿಸುತ್ತವೆ. ಅನ್ನಿಸುವುದು ಮಾತ್ರ ಏನೂ ಇಲ್ಲ. ಅಥವಾ ಹೀಗೂ ಹೇಳಬಹುದು : ಇದು ಹೀಗಿದೆ ಅನ್ನಿಸುತ್ತೆ. ಮೆಣಸಿನಕಾಯಿ ಕಾರವಾಗಿದೆ ಅಂದ ಹಾಗೆ "(ಪುಟ-೯೨)

ಯಾವುದೂ ಒಂದು ಅನುಭವವಾಗಿ ಆತ ಬೆಳೆಯದೇ ಹೋಗುವುದಕ್ಕೆ, ಇದಾವುದೂ ಆತನಿಗೆ ಅರ್ಥಪೂರ್ಣ ಎಂದೆನ್ನಿಸದೇ ಇರುವುದಕ್ಕೆ ಮುಖ್ಯ ಅವನ ಮನಸ್ಥಿತಿಯೇ ಕಾರಣ. ಒಂದು ಕಡೆ ನಿಲ್ಲಲಾಗದ ಅವನ ಮನಸ್ಥಿತಿ ಯಾವುದನ್ನೂ ಅಗೆದು, ಅಳೆದು, ಸುರಿದು ನೋಡುವುದೇ ಇಲ್ಲ. ಕ್ಯಾಮೆರಾದಂತೆ ಬಾಹ್ಯಕ್ಕೆ ಕಂಡದ್ದೆಲ್ಲವನ್ನೂ ಗ್ರಹಿಸುತ್ತದೆ. ಹೆಚ್ಚಿನ ಕಾಳಜಿ ಮಾಡದಂಥ ನಿರ್ಲಿಪ್ತಸ್ಥಿತಿ ಮತ್ತು ಬೋರ್‌ಡಂನಿಂದ, ನೋಡುವಿಕೆ ಹಂತದಲ್ಲೇ ಆತ ಒಂದು ವಸ್ತು, ವ್ಯಕ್ತಿ, ಪರಿಸರದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾನೆ : ಆ ಕ್ಷಣದಲ್ಲೇ ಅಲ್ಲಿಂದ ತಪ್ಪಿಸಿಕೊಳ್ಳುವ ಲೆಕ್ಕಾಚಾರದಲ್ಲಿರುತ್ತಾನೆ. ಆದ್ದರಿಂದ ತಿಕ್ಕಾಟಕ್ಕೆ ಎಡೆಯೇ ಇಲ್ಲ. ಈ ವಿಲಕ್ಷಣ ಮನಸ್ಥಿತಿಗೆ ಯಾವುದೂ significant ಆಗದೇ ಬರೇ ಸಹಿಸಲಾಗದ ನೋವಾಗುತ್ತದೆ. ಈ ಕಾರಣದಿಂದ significant ಏನೂ ಇಲ್ಲ ಎನ್ನುವುದೂ ಆತನ ನೋಡುವಿಕೆಯಷ್ಟೇ ಕಣ್ಣು ನೇರಕ್ಕೆ ಆಡುವ ಮಾತಾಗುತ್ತದೆ. ಗತಿ, ಸ್ಥಿತಿ ಮುಖ್ಯವಾಗಿ ನಮ್ಮ ಸಮಕಾಲೀನ ಪ್ರಜ್ಞೆಯ ನಾಡಮಿಡಿತ. ಸಮಕಾಲೀನ ನಗರಜೀವನ, ಈ ನಗರ ಜೀವನಕ್ಕೆ ಅಲ್ಲಿನ ಖೋಟಾ ವ್ಯವಸ್ಥೆ- ಇಬ್ಬಂದಿಗಳಿಗೆ ಒಳಗಾದವರ ಅಸಹಾಯಕ ಅಪರಿಚಿತ ಬದುಕಿನ ಪ್ರತಿರೂಪ.

ಕಾಫ್ಕನ ಪ್ರಭಾವ ಈ ಕಾದಂಬರಿಯಲ್ಲಿ ದಟ್ಟೈಸಿರುವುದು ಸ್ಪಷ್ಟ. ಗತಿ, ಸ್ಥಿತಿಯ ನಾಯಕ ‘ಆತ’ ಕಾಫ್ಕನ Castle ನಾಯಕನಂತೆ. ಈತನಿಗೂ ಅಂಕಿತನಾಮವಿಲ್ಲ. ಈ ‘ಆತ’ ಯಾರು ಬೇಕಾದರೂ ಆಗಬಹುದು. ಆತ ಬದುಕುವ ಹೆಸರಿಲ್ಲದ ಊರು ಸಮಕಾಲೀನ ಭಾರತದ ಯಾವ ಊರು ಬೇಕಾದರೂ ಆಗಬಹುದು. Castle ನಾಯಕನಂತೆ ಈ ನಾಯಕನಿಗೂ ನೌಕರಿ ವಿಷಯದಲ್ಲಿ ತೊಡಕು. ಆತನಿಗೆ ನೇಮಕದ ಆಜ್ಞೆ ಇದ್ದರೂ ಆಗಿ ನೇಮಕಗೊಂಡಿರುವುದಾಗಿ ತಿಳಿಸಿದರೂ ಗ್ರಾಮದವರು survey ಕಾರ್ಯ ಮುಗಿದಿದೆ, ನಿನ್ನ ಸೇವೆಯ ಅಗತ್ಯ ಇಲ್ಲ ಎನ್ನುತ್ತಾರೆ. ಆದರೆ ಕಾಫ್ಕಾ ಕಾದಂಬರಿಗಳಿಗೆ ಕೊಡಬಹುದಾದ metaphysical interpretation ಇಲ್ಲಿ ಅಸಾಧ್ಯವೆನ್ನಿಸುತ್ತದೆ. ಗಿರಿಯವರ ಮೇಲೆ ಕಾಫ್ಕಾ ಪ್ರಭಾವ ಕುರಿತು -

“ಈ ಪ್ರಭಾವಕ್ಕೆ ಒಳಗಾದ ಮನಸ್ಸು ತನ್ನ ಪ್ರಜ್ಞೆಯಲ್ಲೇ ಅಂದರೆ ವಿಶಿಷ್ಟವಾದ ರೀತಿಯಲ್ಲೇ ಬೆಂಗಳೂರಿನಲ್ಲಿ ಮೈಸೂರಿನಲ್ಲಿ, ಜೋಗದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಸದ್ಯದ ನಗರಗಳಿಗೆಲ್ಲ ಸಾಂಕೇತಿಕವಾದ ಹೆಸರಿಲ್ಲದ ನಗರದಲ್ಲಿ ಬದುಕಿ ಬೇಯದಿದ್ದರೆ ಈ ಕೃತಿ ಹುಟ್ಟುತ್ತಲೇ ಇರಲಿಲ್ಲ....... ಕಾಮು, ಕಾಫ್ಕಾ ಓದಿದವರಿಗೆ ತಮ್ಮ ಪರಿಚಿತವಾದ ವಿಚಾರವನ್ನು ಈ ಆವರಣದಲ್ಲಿ ಜೀವಂತಿಸಿಕೊಂಡ ಅನುಭವದ ಜೊತೆಗೆ ಗಿರಿಯ ವಿಶಿಷ್ಟ ಪ್ರಜ್ಞೆಯ ಮೂಲಕ ನಮ್ಮ ಸಮಕಾಲೀನತೆಯನ್ನು ಹೊಸದಾಗಿ ಕಂಡಂತೆಯೂ ಆಗುತ್ತದೆ." (ಸಾಕ್ಷಿ-೧೩) ಅನಂತಮೂರ್ತಿಯವರ ಈ ಮಾತು ಸರಿ ಎನ್ನಿಸುತ್ತದೆ. ಮೊದಲಿನಿಂದಲೂ ನಾವು ಬಾಯಿಕಟ್ಟಿಕೊಂಡು ಬೆಳೆದವರು, ಅಭಿವ್ಯಕ್ತಿಯೇ ಇಲ್ಲದವರು. ನಮಗೆ ಹಿಂದಾದ ಅನೇಕ ಅನುಭವಗಳು ಕಾಫ್ಕಾ, ಸಾರ್ತ್ರ, ಕಾಮು, ಫ್ರಾಯ್ಡ್ ಓದಿದ ನಂತರ ಜಾಗೃತಿಗೊಂಡಿಲ್ಲವೆ? ಇವರುಗಳನ್ನು ಓದಿ ನಾವು ನಮ್ಮ ಅನುಭವಗಳನ್ನು ಗುರುತಿಸಿಕೊಂಡು, ಅರ್ಥೈಸಿಕೊಳ್ಳುವುದಿಲ್ಲವೇ? ನನಗೂ ಹೀಗೆ ಅನ್ನಿಸಿತ್ತು. ಇದೇ ಅನುಭವವಾಗಿತ್ತು ಎಂದು ಹೇಳಿಕೊಳ್ಳುವುದಿಲ್ಲವೆ?"

ಇನ್ನು ಭಾಷೆ: ಇಂದ್ರಿಯಗೋಚರವಾದುದನ್ನೆಲ್ಲ ಸಾಕ್ಷಿ ಚಿತ್ರದಂತೆ ನಮ್ಮ ಮುಂದಿಡುವ ಗಿರಿಯವರ ಭಾಷೆಗೆ ಎರಡು ಮುಖ, ವಸ್ತು, ಸ್ಥಿತಿ, ವ್ಯಕ್ತಿ, ಪರಿಸರ ಮತ್ತು ಅದರ ವರ್ಣನೆಗಳನ್ನು ಮುಂದಿಡುವ ಸಾಭಿನಯವಾಗಿ ತೋರಿಸುವ ರಂಜನೀಯ ಭಾಷೆ ಕಣ್ಣಿಗೆ ಕಟ್ಟುತ್ತದೆ.

ಇನ್ನೊಂದು ಸಮಕಾಲೀನ ನೋವು-ಆತಂಕಗಳ ಮಿಡುಕು ಉಂಟುಮಾಡುವ ಧ್ವನಿ. ಮುಖ್ಯವಾದದ್ದು, ಅಮುಖ್ಯವಾದದ್ದು, ನೋಡಬಹುದಾದ್ದು, ನೋಡಲಪೇಕ್ಷಣೀಯವಲ್ಲದ್ದು, ಎಲ್ಲವನ್ನೂ ಕ್ಲಿಕ್ ಎನ್ನಿಸುವ ಅವರ ಭಾಷೆ ಸಾಕ್ಷ್ಯ ಚಿತ್ರದಂತೆ ವಿವರಗಳ ಸುರುಳಿ ಬಿಚ್ಚುತ್ತದೆ. ಮೌಲ್ಯಗಳನ್ನು ತಲೆಕೆಳಗು ಮಾಡಿ ಆತನ ಮನಸ್ಥಿತಿಯ ನಿಜರೂಪವನ್ನು ತೋರಿಸುತ್ತದೆ. “ನೋವು, ಸಂಕಟ, ಆತಂಕಗಳು ಭಾಷೆಯಲ್ಲಿ ಹಾಗೆ ಮಡುಗಟ್ಟುತ್ತವೆ. ವಿವರಗಳಲ್ಲೇ ಸಮಕಾಲೀನ ನೋವು-ನಿರರ್ಥಕತೆಗಳನ್ನೂ significant ಸ್ಥಿತಿಯನ್ನೂ ಅರ್ಥೈಸುವ ರೀತಿ ಅದ್ಭುತ. ಎಲ್ಲ ವಿವರಗಳನ್ನು ಹೆಚ್ಚಿನ ಅರ್ಥಗಳಿಗೆ ಸಂಕೇತವಾಗಿಸುವ ಇಲ್ಲಿನ ಭಾಷೆ ನಮ್ಮ ಮುಖದಿಂದಲೇ ಹೊರಟಿದ್ದೇನೋ ಎನ್ನುವಷ್ಟು ಪರಿಚಿತವಾದದ್ದು. ಹೋಟೆಲಿನ ಕೋಣೆಯಲ್ಲಿ ಅಪರಿಚಿತ ಎಣ್ಣೆ ಬೇಡುವುದು, ಬೀಡ ಕಟ್ಟುವ ವ್ಯಕ್ತಿ, ಗುಮಾಸ್ತೆಯ ಪರದಾಟ, ರೈಲು ಪ್ರಯಾಣ, ಜೋಗ ಜಲಪಾತ ಇವುಗಳ ವರ್ಣನೆಗಳು ಕಣ್ಣ ಮುಂದೆ ಪ್ರತ್ಯಕ್ಷವಾದಷ್ಟು ರಮ್ಯವಾಗಿ ಅಭಿನಯಿಸುತ್ತವೆ. ಅಲ್ಲಲ್ಲಿ ಬೇಸರ ಬರಿಸುತ್ತದೆ. significant ಆಗಿ ಏನೂ ಇಲ್ಲ ಎನ್ನುವವರೂ ಗಿರಿ ಭಾಷೆಯಲ್ಲಿ ನಡೆಸಿರುವ ಈ ಕ್ರಿಯೆ ತಾರೀಫ್ ಮಾಡುವಂಥಾದ್ದು.

ಜನವರಿ, ೧೯೭೨