ಸೋಮವಾರ, ಜನವರಿ 22, 2007

ಏಳೆನ್ನ ಮನದನ್ನೆ!!!


ಇತ್ತೀಚಿಗೆ ನಾವು ಚಲನಚಿತ್ರ, ಧಾರಾವಾಹಿಗಳಲ್ಲಿ ನೋಡಿರುವುದು, ಬೆಳಗಿನ ಜಾವದಲ್ಲಿ ಹೆಂಡತಿ ಶುಭ್ರವಾಗಿ ಸ್ನಾನ ಮಾಡಿ, ಕಣ್ಣು ಕುಕ್ಕುವ ಸೀರೆಯನ್ನುಟ್ಟು ಕೈಯಲ್ಲಿ ಕಾಫ಼ಿ ಲೋಟ ಹಿಡಿದು ಬಂದು, ಗಂಡನಿಗೆ ಗುಡ್ ಮಾರ್ನಿಂಗ್ (ಶುಭೋದಯ ಅಲ್ಲ) ಹೇಳಿ, ಇನ್ನೇನು ಕಾಫ಼ಿ ಗಂಡನ ಕೈಗೆ ಕೊಡುವಷ್ಟರಲ್ಲಿ, ಗಂಡ ಆ ಕಾಫ಼ಿ ಲೋಟವನ್ನು ಪಕ್ಕದ ಮೇಜಿನ ಮೇಲಿಟ್ಟು ಹೆಂಡತಿಯನ್ನು ಬೆಳಗ್ಗೆಯೇ ರಂಗ ಕ್ರೀಡೆಗೆ ಎಳೆಯುವುದು... ಇದು ನಂತರ ಅಯ್ಯೊ ಇದೇನ್ರಿ ಬೆಳಗ್ಗೆ ಬೆಳಗ್ಗೆ?? ಇತ್ಯಾದಿ ಸಂಭಾಷಣೆಗಳಿಂದ ಮುಂದುವರೆಯುತ್ತದೆ... ಇನ್ನೂ ಮದುವೆಯಾಗದಿರುವ, ಮಧ್ಯಮ ವರ್ಗದ ಕುಟುಂಬದಿಂದ ( ಎಲ್ಲಿ ಬೆಳಗ್ಗೆಯೇ ಗಂಡ ಮತ್ತೆ ಹೆಂಡತಿ ಇಬ್ಬರೂ ಒಟ್ಟಿಗೆ ಎದ್ದು, ಕೆಲಸಗಳನ್ನು ಶುರು ಮಾಡಿ, ಬೆಳಗ್ಗೆಯೇ ಜಗಳವಾಡಿ, ಸ್ನಾನ ಮಾಡೋದನ್ನೇ ಮರೆತು ತಮ್ಮ ಕಛೇರಿಗಳಿಗೆ ಹೊರಡಲು ಸನ್ನದ್ಧರಾಗುವ ) ಬಂದ ನನ್ನಂತವನಿಗೆ ಮೇಲಿನ ಚಲನಚಿತ್ರ ದೃಶ್ಯ ಕೃತಕ/ನಾಟಕೀಯವಾಗಿ ಕಂಡು ಬಂದರೂ.. ಇವುಗಳನ್ನು ದೃಶ್ಯ ಮಾಧ್ಯಮಗಳಲ್ಲಿ ಸರ್ವೇ ಸಾಮಾನ್ಯ ನೋಡ್ತಾನೆ ಇರ್‍ತೀವಿ.

ಆದ್ರೆ ಇಂದು ನನ್ನ ತಲೆ ಕೊರೆಯುತ್ತಿರುವ ವಸ್ತು/ವಿಷಯ ಅಂದ್ರೆ ಗಂಡ/ಹುಡುಗ ತನ್ನ ಹೆಂಡತಿ/ಪ್ರೇಯಸಿಯನ್ನು ಎಬ್ಬಿಸಿವುದು.. ಶೀರ್ಷಿಕೆ ನೋಡಿದ್ದೀರಿ.. ಏಳೆನ್ನ ಮನದನ್ನೆ... ಒಂದು ತರಹ ಕಿವಿಗೆ ಹಿತವಾಗಿ ಕೇಳಿಸುವುದಿಲ್ಲವೇ ಈ ಪ್ರಾಸಬದ್ಧ ಪದಗಳು??? ಪ್ರೇಯಸಿಗೆ ಬದಲಾಗಿ ಉಪಯೋಗಿಸಿರುವ ಈ ಮನದನ್ನೆ ಎಂಬುವ ಪದ ಬಹಳ ಹಿತವಾಗಿಲ್ಲವೆ/ಭಾವಪೂರ್ಣವಾಗಿಲ್ಲವೆ??? ಆದರೆ ಈ ಪದ ಹೇಗೆ ಉದ್ಭವ ಆಯ್ತು?? ಇದರ ಮೂಲ ಏನು ಅನ್ನೋದು ನನ್ನ ತಲೆಯನ್ನ ಕಾಡ್ತಾ ಇರ್‍ಓ ಇನ್ನೊಂದು ಸಂಗತಿ...

ನಾನು ಈ ಪದಗಳನ್ನು ನೋಡಿರೋದು.. ಕೇಳಿರೋದು ಎಲ್ಲಿ ಅಂತ ಹೇಳ್ಬಿಡ್ತೀನಿ...
ಮೊದಲೆಯನದಾಗಿ.. ಉಮರನ ಒಸಗೆ ಗೊತ್ತಿರ್‍ಬೇಕು ನಿಮ್ಗೆ...( ಡಿ ವಿ ಜಿ ಯವರು ಒಮರ್ ಖಯ್ಯಾಮ್ ಎನ್ನುವ ಪರ್ಷಿಯನ್ ಕವಿಯ ಮುಕ್ತಕಗಳನ್ನ , ಆಂಗ್ಲ ಭಾಷೆಗೆ ಅನುವಾದಿಸಿರುವ ಫ಼ಿಟ್ಸ್ ಗೆರಾಳ್ಡ್ ನ ರುಬಾಯತ್ ಆಫ಼್ ಒಮರ್ ಕಯ್ಯಾಮ್ ಎಂಬ ನಾಲ್ಕು ಸಾಲಿನ ಪದ್ಯಗಳ ಅನುವಾದ.. ಕವಿ ತನ್ನ ಭಾವಕ್ಕೆ ಸ್ವಲ್ಪ ಬದಲಾವಣೆ ಮಾಡಿದ್ದಾರೆ.. ಅಂದರೆ ಇದು ಅಕ್ಷರಶಃ ಅನುವಾದ ಅಲ್ಲ ಅಂತ )

ಇದರ ಮೊದಲ ಕವನ,

ಏಳೆನ್ನ ಮನದೆನ್ನೆ ! ನೋಡು, ಪೊಳ್ತರೆ ಬಂದು
ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸೆದು
ತಾರೆಯರಳುಗಳನಲ್ಲಿಂದ ಚೆಲ್ಲಾಡಿಹನು
ನಿದ್ದೆ ಸಾಕಿನ್ನೀಗ, ಮುದ್ದುಣುಗಿ ಬಾರೆ.

ಇದರ ಮೂಲ ಅಂದ್ರೆ ಫ಼ಿಟ್ಸ್ ಗೆರಾಳ್ಡ್ ಇಂಗ್ಳೀಷ್ ನಲ್ಲಿ ಹೇಗ್ ಬರ್‍ದಿದ್ದಾನೆ ಅಂತ ನೋಡಿಬಿಡೋಣ..

Awake! for Morning in the bowl of Night
Has flung the stone that puts the stars to fight:
And Lo! the Hunter of the east has caught
The Sultan's Turret in a Noose of Light

ಈ ದೃಶ್ಯಗಳೇನೂ ಸಹಜ ಅಂತ ಹೇಳ್ತಾ ಇಲ್ಲಾ... ಆದ್ರೆ ಪ್ರೇಯಸಿ/ಹೆಂಡತಿಯನ್ನು ಬೆಳಗಿನ ಜಾವದಲ್ಲಿ ಎಬ್ಬಿಸೋದನ್ನ ಎಷ್ಟು ಭಾವಪೂರ್ಣವಾಗಿ ಚಿತ್ರಿಸಲ್ಪಟ್ಟಿದೆ ಅಲ್ಲವೆ?? ಬರೀ ಹೆಂಡತಿ ಗಂಡನನ್ನು ಎಚ್ಚರ ಮಾಡುವುದನ್ನೇ ನೋಡಿರುವ/ ಕೇಳಿರುವ ನಮಗೆ ಇದು ಸ್ವಲ್ಪ ವಿಚಿತ್ರವಾಗಿ ಕಂಡರೂ, ಆ ವಿಚಿತ್ರದಲ್ಲಿ ರೋಮಾಂಚನಗೊಳಿಸುವ ಭಾವುಕತೆ ಇಲ್ಲವೆ???

ಇವೇ ಪದಗಳು ಸಿ ಅಶ್ವಥ್ ರಾಗ ಸಂಯೋಜನೆಯಲ್ಲಿ, ಜಿ ವಿ ಅತ್ರಿ ಯವರು ಹಾಡಿರುವ ಏಳೆನ್ನ ಮನದನ್ನೆ ಹಾಡಿನಲ್ಲಿ ಕೇಳಿರ್‍ತೀವಿ,
ಇದನ್ನ ರಚನೆ ಮಾಡಿರುವವರು ಚನ್ನವೀರ ಕಣವಿಯವರು...

ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ,
ಏಳು ಮಂಗಳದಾಯಿ ಉಷೆಯ ಗೆಳತಿ
ಏಳು ಮುತ್ತಿನ ಚೆಂಡೆ, ಏಳು ಮಲ್ಲಿಗೆ ದಂಡೆ
ಏಳು ಬಣ್ಣದ ಬಿಲ್ಲೆ ಮಾಟಗಾತಿ!

ಹೀಗೆ ಮುಂದುವರೆಯುತ್ತಾ, ಸ್ವಲ್ಪ ನಿಸರ್ಗದ ರಮಣೀಯತೆಯ ವರ್ಣನೆಯಿಂದ ಕೂಡಿ ಕೊನೆಯ ಚರಣ ಹೀಗೆ ಕೊನೆಗೊಳ್ಳುತ್ತದೆ...

ಲಲಿತ ಶೃಂಗಾರ ರಸಪೂರ್ಣೆ ಚಂದಿರವರ್ಣೆ
ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ;
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕತೆ ಹೇಳು
ಒಂದು ಚಣ ಜಗವನ್ನೆ ಮರೆತು ಬಿಡುವೆ.

ಇದು ಉಷೆಯ ಗೆಳತಿ ಪದ್ಯ.. ಮಧು ಚಂದ್ರ ಎಂಬ ಕವನ ಸಂಕಲನದಲ್ಲಿದೆ..

ಈ ಕವನ ಸಂಕಲನದಲ್ಲಿ ಇಷ್ಟೇ ರೋಮಾಂಚನಗೊಳಿಸುವ ಇನ್ನೊಂದು ಕವನದ ಎರಡು ಚರಣಗಳನ್ನು ನೆನೆಸಿಕೊಳ್ಳಲೇಬೇಕಾಗಿದೆ?

ಬಾ ಮಲ್ಲಿಗೆ
ಬಾ ಮೆಲ್ಲಗೆ
ನನ್ನೆದೆ ಮೆಲ್ವಾಸಿಗೆ
ಇಳೆಗಿಳಿದಿದೆ
ಬೆಳುದಿಂಗಳು
ನಮ್ಮೊಲುಮೆಯ ಕರೆಗೆ!

ಚೆಲುವಾಗಿದೆ
ಬನವೆಲ್ಲವು
ಗೆಲುವಾಗಿದೆ ಮನವು;
ಉಸಿರುಸಿರಿಗು
ತಂಪೆರಚಿದೆ
ನಿನ್ನೆದೆ ಪರಿಮಳವು.

ಮಧುಚಂದ್ರದಲ್ಲಿ ಮನದನ್ನೆಯ ಮನ ತಣಿಸಲು ಎಂತಹ ಅದ್ಭುತ ಸಾಲುಗಲ್ಲವೆ??

ಹೀಗೆ ಕುವೆಂಪು ಕೂಡ ಮನದನ್ನೆಯನ್ನು ಎಬ್ಬಿಸಲು ಒಂದು ಕವನ ಕೊಟ್ಟಿದ್ದಾರೆ ನಮಗೆ!! ಅಲ್ಲಿ ಮನದನ್ನೆ ಎಂಬ ಪದದ ಪ್ರಯೋಗ ಆಗಿಲ್ಲಾ ಅಷ್ಟೆ.. (ಕವನ ಸಂಕಲನ - ಚಂದ್ರ ಮಂಚಕೆ ಬಾ ಚಕೋರಿ)

ಏಳು, ರಮಣಿ, ಏಳು! ಅದೋ
ಪೂರ್ವದಿಶಾದೇವಿಯಾರ್‍ಯ
ಮೂಡುತಿಹನು ಉದಯಸೂರ್‍ಯ;
ಕೈಮುಗಿದು ಮಣಿ!
ಜಗತ್ ಪ್ರಾಣ ಶಕ್ತಿ ಸಿಂಧು,
ಜಗಜ್ಜೀವ ಹೃದಯ ಬಂಧು,
ದೇವ ದಿನಮಣಿ!

ಇದೂ ಕೂಡ ಹೀಗೆ ಮುಂದುವರೆಯುತ್ತ.. ಪ್ರಕೃತಿ ಸೌಂದರ್ಯದ ಸವಿಯುಣಿಸುತ್ತಾ, ಕೊನೆಯ ಚರಣ ಹೀಗಿದೆ.

ನಿದ್ದೆ ಸಾಕು, ಏಳು, ರಮಣಿ;
ಮೂಡಿ ಬಂದನದೋ ಖಮಣಿ!
ಕೈಮುಗಿದು ಮಣಿ!
ನಮ್ಮ ಬಾಳ್ಗೆ ಬೆಳಕೆ ಕಣ್ಣು;
ಪ್ರಾಣಕಮೃತ ರಸದ ಹಣ್ಣು
ದೇವ ದಿನಮಣಿ!

ಆದರೆ ನನಗೆ ಇಲ್ಲಿ ಒಂದು ದ್ವಂದ್ವ ಇದೆ.. ಇಲ್ಲಿ ಕವಿ ತಮ್ಮ ಮನದನ್ನೆಗೆ ರಮಣಿಯೆಂದು ಕರೆದು ಎಬ್ಬಿಸ್ತಾ ಇದಾರ?? ಅಥವಾ ಬೆಳಗಿನ ಜಾವದಲ್ಲಿ ರವಿ ಸೌಂದರ್ಯಕ್ಕೆ ಮರುಳಾಗಿ ತಮ್ಮಲ್ಲಿರುವ ರಮಣೀಯತೆಯನ್ನು ಹೊಡೆದೆಬ್ಬಿಸುತ್ತಿದ್ದಾರಾ ಎಂಬುದು!!!!

ಇನ್ನು ಬರೀ ಮನದನ್ನೆಯನ್ನು ಬೆಳಗಿನ ಜಾವದಲ್ಲಿ ಎಚ್ಚರ ಮಾಡೋದೇ ಆಗೋಯ್ತೆಲ್ಲಾ!!! ಇಲ್ಲಾ.. ನಮ್ಮ ಕವಿ ಮನದನ್ನೆಯನ್ನು ಮಲಗಿಸಲು ಕೂಡ ನಮಗೆ ಒಂದು ಕವನ ಬರೆದು ಕೊಟ್ಟಿದ್ದಾರೆ.. ಈ ಜೋಗುಳಾನ ನೋಡೋಣವೆ??

(ಕವಿ - ಕುವೆಂಪು, ಕವನ ಸಂಕಲನ - ಪ್ರೇಮ ಕಾಶ್ಮೀರ, ಕವನ - ಇಂದಾಗಲಿ)

ಮಲಗು ಮನದನ್ನೆ, ಮಲಗೆಲೆಗೆ ಚೆನ್ನೆ;
ಕೊಳದ ತಾವರೆಯ ಹೃದಯದಲಿ ತುಂಬಿ
ಸೆರೆಯಾಗಿದೆ.
ಮಲಗೆ ಮನದನ್ನೆ, ಮಲಗು ಜೇನನ್ನೆ,
ದಣಿದ ರವಿಬಿಂಬವದ್ರಿಮಂಚದಲಿ
ಮರೆಯಾಗಿದೆ.
.....
.....
.....
.....

ಕೊನೆಯ ಚರಣ

ಮಲಗು ಮನದನ್ನೆ, ಮಲಗೆನ್ನ ಚೆನ್ನೆ;
ನಿನ್ನ ಹೂಗೆನ್ನೆಗಳಲೆನ್ನ ಕೆನ್ನೆ
ಒಂದಾಗಲಿ.
ಮಲಗು ಮಲಗೆನ್ನೆ, ಬಾಳಿರುಳ ಜೊನ್ನೆ:
ಅಂದಿಂದು ನೆನ್ನೆ ನಾಳೆಯಲಿ ಸೊನ್ನೆ
ಇಂದಾಗಲಿ!

ನೆನ್ನೆ ನಾಳೆಗಳು ಸೊನ್ನೆ, ಇಂದು ನಿನ್ನ ಹೂಗೆನ್ನೆಯಲಿ ನನ್ನ ಕೆನ್ನೆ ಒಂದಾಗಲಿ.. ರಸಿಕತೆಯಿಲ್ಲವೆ... ಈ ಮನದನ್ನೆ ಎಂಬ ಪದ ಈ ಕವನಕ್ಕೆ ರಸಿಕತೆಯನ್ನು ತುಂಬಿಲ್ಲವೆ???

ಹೀಗೆ ಇವೆಲ್ಲವನ್ನೂ ನೆನೆಯುತ್ತಾ.. ನನ್ನ ಪ್ರಶ್ನೆಗಳಿಗೆ ಅರ್ಥ/ಉತ್ತರ ಸಿಕ್ತಾ ಅನ್ನೋದನ್ನೆ ಮರೆತೆ!!!! ಇಷ್ಟೆಲ್ಲಾ ಸವಿಯುಂಡ ಮೇಲೆ ನನ್ನ ಪ್ರಶ್ನೆಗಳಿಗೆ ಉತ್ತರ ಹುಡ್ಕೋದ್ರಲ್ಲಿ ಅರ್ಥವಿದೆಯೆ???

ಕುವೆಂಪು ಕವಿ ವಾಣಿ ಕೇಳಿಲ್ಲವೆ??

ಅನಂತದಿಂ ದಿಗಂತದಿಮ್ ಅನಂತದಿಂ ದಿಗಂತದಿಮ್
ಅನಂತದಾ ದಿಗಂತದಿಮ್ ಅನಂತದಾ ದಿಗಂತದಿಮ್
ನೋಡೆ ನೋಡೆ ಮೂಡಿತೊಂದು ಮೋಡ ಗೋಪುರ
ಗಿರಿಯ ಬಿತ್ತರ ಶಿಖರದೆತ್ತರ
ಅನುಭವಿಸುವ ರಸಋಷಿಮತಿಗತಿ ಮಹತ್ತರ

......
.....
.....
......

ಮಾತಿಗೊಂದು ಅರ್ಥ ಬೇಕೆ?
ಅರ್ಥವಿದ್ದರಷ್ಟೆ ಸಾಕೆ?
ಮೋಡಗಳನು ನೋಡಿ ಕಲಿ
ಅರ್ಥ ಅಲ್ಪ ಎಂದು ತಿಳಿ

ಹೀಗೆ ಮುಂದುವರೆಯುತ್ತ..

ದೂರವಾಗು ಅರ್ಥ ವ್ಯರ್ಥ ವೆಂಬ ವ್ಯಾಧಿಗೆ ಎಂಬ ಸಾಲು ಬರುತ್ತೆ... ಪೂರ್ಣ ಕವನ ಸಿಕ್ತಾ ಇಲ್ಲ...

ಹೀಗೆ ಅರ್ಥ ವ್ಯರ್ಥದ ಬಗ್ಗೆ ಯೋಚನೆ ಬಿಟ್ಟು.. ನನಗೆ ರಸವುಣಿಸಿದ ಈ ಕವನಗಳನ್ನು ಮತ್ತೆ ಮೆಲುಕು ಹಾಕುವುದೇ ಯೋಗ್ಯವಲ್ಲವೆ?? ನನ್ನ ಮನದನ್ನೆಗೆ ಮುಂದೊಂದು ದಿನ ಇವನ್ನೆಲ್ಲ ಹಾಡಿ ಅವಳ ಮನತಣಿಸಬಹುದಲ್ಲವೆ??

ಗುರು...

1 ಕಾಮೆಂಟ್‌: