ಸೋಮವಾರ, ಸೆಪ್ಟೆಂಬರ್ 07, 2009

ಪುಸ್ತಕಗಳನ್ನು ನಿಷೇಧಿಸುವುದು ಸರಿಯೇ?

banned_books


ಇತ್ತೀಚೆಗೆ ಜಸ್ವಂತ್ ಸಿಂಗ್ರವರು ಬರೆದ "ಇಂಡಿಯಾ - ಪಾರ್ಟಿಷನ್ ಇಂಡಿಪೆಂಡೆನ್ಸ್" ಪುಸ್ತಕವನ್ನು ಗುಜರಾತ್ ಸರ್ಕಾರ ನಿಷೇಧಿಸಿದ ಹಿನ್ನಲೆಯಲ್ಲಿ, ಭಾರತದ ಸರ್ವೋಚ್ಚ ನ್ಯಾಯಾಲಯ ಗುಜರಾತ್ ಸರ್ಕಾರಕ್ಕೆ ನಿಷೇದಿಸಲು ಕಾರಣದ ವಿವರಣೆಯನ್ನು ಕೇಳಿ ನೋಟೀಸ್ ಜಾರಿ ಮಾಡಿದ ಈ ಹಿನ್ನಲೆಯಲ್ಲಿ ಈ ಲೇಖನ ಬರುತ್ತಿದ್ದರೂ, ಹಿಂದೆ ಬಹಳಷ್ಟು ಪುಸ್ತಕಗಳು ಭಾರತದಲ್ಲೂ, ಹಲವು ಪುಸ್ತಕಗಳು ವಿದೇಶಗಳಲ್ಲೂ ನಿಷೇಧಿಸಿರುವ ಉದಾಹರಣೆಗಳಿವೆ. ಇದು ಎಷ್ಟು ಸರಿ? ಎಷ್ಟು ತಪ್ಪು ? ಒಂದು ಚಿಂತನೆ!


ಪುಸ್ತಕಗಳು ಧರ್ಮನಿಂದನೆ/ದೈವನಿಂದನೆ ಆಧಾರದ ಮೇಲೆ ದೂರಿಸಿಕೊಂಡು ನಿಷೇಧಗೊಳ್ಳುವುದು ಸಾಮಾನ್ಯ. ಇದಕ್ಕೆ ಪ್ರಖ್ಯಾತ ಉದಾಹರಣೆಗಳೆಂದರೆ, ಸಲ್ಮಾನ್ ರಶ್ದಿ ಯವರ "ದ ಸಟಾನಿಕ್ ವರ್ಸಸ್" ಪುಸ್ತಕವನ್ನು ಇಸ್ಲಾಮ್ ಧರ್ಮದ ನಿಂದನೆ ಆಧಾರದ ಮೇಲೆ ಭಾರತದಲ್ಲಿ ನಿಷೇಧಿಸಿರುವುದು. ಅಲ್ಲದೆ ಅವರ ವಿರುದ್ಧ ಇರಾನ್ ದೇಶದ ಅಧ್ಯಕ್ಷರೊಬ್ಬರು ಸಲ್ಮಾನ್ ರಶ್ದಿಯ ವಿರುದ್ಧ ಫತ್ವಾ ಹೊರಡಿಸಿದ್ದು, ಸಲ್ಮಾನ್ ರಶ್ದಿ ಭೂಗತಕ್ಕೆ ಹೋದದ್ದು, ಆ ಪುಸ್ತಕದ ಜಪಾನಿನ ಅನುವಾದಕನನ್ನು ಕೊಂದದ್ದು ಈಗ ದಂತಕಥೆ. ಮತ್ತೊಂದು ಉದಾಹರಣೆಯೆಂದರೆ ಬಾಂಗ್ಲಾ ದೇಶದ ಲೇಖಕಿ ತಸ್ಲೀಮಾ ನಸ್ರೀನ್ ರವರ ಲಜ್ಜಾ ಕಾದಂಬರಿಯನ್ನು ಬಾಂಗ್ಲಾ ದೇಶದಲ್ಲಿ ನಿಷೇಧಿಸಿ ಅವರನ್ನು ಗಡಿಪಾರು ಮಾಡಿದ್ದು, ಅವರು ಬಂದು ಭಾರತದಲ್ಲಿ ನೆಲೆಯೂರಿದ್ದು, ನಂತರ ಒಂದು ಸರ್ಕಾರದ ಧೋರಣೆಯಿಂದಾಗಿ, ಅವರಿಗೆ ಭಾರತದಲ್ಲಿ ತಂಗಲು ಅವಕಾಶ ನಿರಾಕರಿಸಿದ್ದು! ಡ್ಯಾನ್ ಬ್ರೌನ್ ರವರ ’ಡಾ ವಿನ್ಚಿ ಕೋಡ್’ ಪುಸ್ತಕವನ್ನು ಭಾರತದ ಒಂದು ರಾಜ್ಯದಲ್ಲಿ ನಿಷೇಧಿಸುವ ಚಿಂತನೆ ನಡೆದು ಕೊನೆಗೆ ನಿಷೇಧದ ವಿರುದ್ಧವಾದ ನಿಲುವನ್ನು ತೆಗೆದುಕೊಳ್ಳಲಾಯಿತು. ಈಗಲೂ ಈ ಪುಸ್ತಕ ಲೆಬನಾನ್ ದೇಶದಲ್ಲಿ ಕ್ಯಾಥೋಲಿಕ್ ಕ್ರಿಸ್ಚಿಯನ್ನರ ವಿರೋಧಿಯೆಂದು ನಿಷೇಧಿಸಲಾಗಿದೆಯಂತೆ.

ಮುಂದೆ ಓದಿ

1 ಕಾಮೆಂಟ್‌: