ಶುಕ್ರವಾರ, ಅಕ್ಟೋಬರ್ 29, 2010

’ನುಡಿ’ದರೆ...

ಇಂದು ಬೆಳಗ್ಗೆ ಅಳ್ವಾಸ್ ’ನುಡಿಸಿರಿ’ಗ ಇಂದು ಬೆಳಗ್ಗೆ ಕರ್ನಾಟಕದ ವಿವಿಧ ಕಲಾವಿದರ ತಂಡದಿಂದ ಲಯ ವಾದ್ಯಗಳ ಮೇಳಗಳ ಪ್ರದರ್ಶನದೊಂದಿಗೆ ವಿದ್ಯುಕ್ತವಾಗಿ ಚಾಲನೆಗೊಂಡಿತು. ಲಯ ವಾದ್ಯಗಳ ಪ್ರದರ್ಶನ ಅದ್ಭುತವಾಗಿತ್ತು. ಕೇಳಲು, ನೋಡಲು ಆನಂದ. ವೈದೇಹಿಯವರನ್ನು ಪಲ್ಲಕ್ಕಿಯ ಮೇಲೆ ಕೂರಿಸಿ, ವೇದಿಕೆಗೆ ಕರೆತರುವುದನ್ನೂ ನೋಡುವುದೇ ಚಂದ. ಈ ಉನ್ಮಾದದಲ್ಲಿ ನೆನ್ನೆಯ ಕಹಿಯನ್ನು ಮರೆತಿದ್ದೆ.



ನಂತರದ ಘಟನೆಗಳು ಮತ್ತೆ ಮನಸ್ಸಿಗೆ ಬೇಸರವನ್ನು ತಂದವು. ನೆನ್ನೆಯ ಬ್ಲಾಗ್‌ನಲ್ಲಿ ಹೆಸರಿಸಿದ ವ್ಯಕ್ತಿಗೆ ವಿಷಯ ತಿಳಿದು ನಮ್ಮ ಮಳಿಗೆಗೆ ಬಂದು ಕಿರುಚಾಡಲು ಪ್ರಾರಂಬಿಸಿದ. ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದರಿಂದ ನಾನೂ ಆ ಶಬ್ದಗಳನ್ನು ಅವರಿಗೆ ತಿರುಗಿಸಬೇಕಾಯಿತು! ನೀವು ಕೃತಘ್ನರು. ಮುಂದಿನ ವರ್ಷದಿಂದ ಬರಲೇಬೇಡಿ. ಊಟ ಹಾಕ್ತೀವಿ! ನಿಮಗೆ ವಸತಿ ಕೊಡಲು ಅನುಕೂಲ ಮಾಡಿಕೊಟ್ಟಿದ್ದೇವೆ. ಆದರೂ ಬ್ಲಾಗ್‌ನಲ್ಲಿ ಬರೆದಿದ್ದೀರಿ, ___________ (ಅವಾಚ್ಯ ಶಬ್ದಗಳು)..

ಸ್ವಲ್ಪ ಸಮಯದ ನಂತರ ಕೆಲ ಸಹೃದಯ ಗೆಳೆಯರು, ಈ ತಪ್ಪಿನ ವಿರುದ್ಧ ಧ್ವನಿ ಎತ್ತಿದ್ದರಿಂದ ಕಿರುಚಾಡಿದ ವ್ಯಕ್ತಿ ಮತ್ತು ಸಂಘಟನೆಯ ಕೆಲ ಸದಸ್ಯರೂ ಬಂದು ನನ್ನ ಕ್ಷಮೆ ಕೇಳಿದರು. ಆದ್ದರಿಂದ ಈ ಸಮಸ್ಯೆಯನ್ನು ಬೆಳಸದೆ ಇತಿಶ್ರೀ ಹಾಡಲು ನಿರ್ಧರಿಸಿದ್ದೇನೆ. ಆದರೆ ಕೆಲವು ಸ್ಪಷ್ಟೀಕರಣಗಳೊಂದಿಗೆ!

ನಾನು ಅವರ ವಸತಿಯನ್ನೂ ನಿರಾಕರಿಸಿದ್ದೇನೆ. ಅವರ ಊಟವನ್ನೂ ಕೂಡ. ನಾವು ಕೊಟ್ಟ ೨೦೦೦/- ರೂಪಾಯಿ ಅವುಗಳನ್ನು ಒಳಗೊಂಡಿವೆ ಎಂದು ತಿಳಿದು ಒಪ್ಪಿಕೊಂಡಿದ್ದೆನೇ ಹೊರತು ಅವರ ಮರ್ಜಿಗೆ ಬಿದ್ದಲ್ಲ. ಅಕ್ಕ ಪಕ್ಕದ ಮಳಿಗೆಗಳ ವಾರಸುದಾರರು ಹೇಳುವಂತೆ ಅವೆಲ್ಲವೂ ನಾವು ಪಾವತಿಸಿರುವ ಹಣದಲ್ಲಿಯೇ ಕೊಡವೇಕಾದ ಅನುಕೂಲಗಳು. ಇಲ್ಲೂ ಪಾರದರ್ಶಕತೆಯಿಲ್ಲ. ನನಗೆ ಅವರ ಫೇವರ್‌ಗಳು ಅನವಶ್ಯಕ!

ಅಳ್ವಾಸ್ ನುಡಿಸಿರಿ ಕಾರ್ಯಕ್ರಮ ಸಂಘಟನೆ ಹೆಸರುವಾಸಿ. ಕೆಲವು ಸಮಸ್ಯೆಗಳನ್ನು ಎತ್ತಿ ತೋರಿಸುವ ಉದ್ದೇಶ ಸಂಘಟನೆ ತನ್ನ ನ್ಯೂನ್ಯತೆಗಳನ್ನು ತಿದ್ದಿಕೊಂಡು ಹೆಚ್ಚು ಬೆಳೆಯಲಿ ಎಂಬ ಉದ್ದೇಶದಿಂದಷ್ಟೇ! ಅಲ್ವಾಸ್ ನುಡಿಸಿರಿಯ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವುದರಿಂದ ನನಗೆ ಯಾವುದೇ ರೀತಿಯ ವ್ಯಯಕ್ತಿಕ ಲಾಭಗಳಿಲ್ಲ.

ಯಾವುದೇ ಸಾಹಿತ್ಯ ಸಮ್ಮೇಳನದ ಅತ್ಯಂತ ದೊಡ್ಡ ಆಕರ್ಷಣೆ ಮತ್ತು ಅಗತ್ಯ ಪುಸ್ತಕ ಮೇಳ. ನೀವು ಕರೆಸುವ ಸಾಹಿತಿಗಳಿಗೆ ಅತ್ಯುತ್ತಮ ಸೌಕರ್ಯಗಳನ್ನೇ ಒದಗಿಸಿ. ಅವರ ಪುಸ್ತಕಗಳನ್ನು ಮಾರಾಟ ಮಾಡುವ ಪುಸ್ತಕ ಮಾರಾಟಗಾರರಿಗೆ ಕನಿಷ್ಟ ಸೌಕರ್ಯಗಳನ್ನಾದರೂ ಒದಗಿಸಿ! ನಮಗೂ ಕನ್ನಡದ ಕಳಕಳಿಯಿದೆ.

ಇನ್ನು, ನುಡಿಸಿರಿ ಎಂಬ ಹೆಸರಿಟ್ಟಿದ್ದೀರಿ. ನಿಮ್ಮ ಕಾರ್ಯಕ್ರಮ ಸಂಘಟಕರಿಗೆ ಒಂದು ಕಿವಿಮಾತು ಅವಶ್ಯಕ! "ನುಡಿದರೆ........ " ಇದನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ. ನಿಮ್ಮಲ್ಲಿ ಬಹುತೇಕ ಜನಕ್ಕೆ ಗೊತ್ತಿರಬೇಕು.
_____________________________________________________________________________________
ನಂತರದ ಪುಸ್ತಕ ಮಾರಾಟ ಅತ್ಯಂತ ಖುಷಿ ಕೊಟ್ಟಿತು. ಸಾಮಾನ್ಯ ಸಮಯದಲ್ಲಿ ಮಾರಾಟವೇ ಕಾಣದಂತಹ ಎಷ್ಟೋ ಪುಸ್ತಕಗಳನ್ನು ಕನ್ನಡ ಸಾಹಿತ್ಯಾಸಕ್ತರು ಹುಡುಕಿ ಕೊಂಡು ಹೋದರು. ಆಕೃತಿ ಪುಸ್ತಕ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ರಾಜೇಶ್ ತೊಳ್ಪಾಡಿ, ಕೇಶವ ಕುಡ್ಲ, ನಾ ಮೊಗಸಾಲೆ ಮುಂತಾದ ಸಾಹಿತಿಗಳ ಭೇಟಿ ಸಂತಸವನ್ನುಂಟುಮಾಡಿತು.
_____________________________________________________________________________________
ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಭರಾಟೆಯಲ್ಲಿ, ಘೋಷ್ಠಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲವೆಲ್ಲ ಎಂಬುದೇ ಸಂಕಟ!

3 ಕಾಮೆಂಟ್‌ಗಳು:

  1. ನುಡಿದರೆ..................
    ಮುತ್ತಿನ ಹಾರದಂತಿರಬೇಕು.
    :-)
    ಮಾಲತಿ ಎಸ್.

    ಪ್ರತ್ಯುತ್ತರಅಳಿಸಿ
  2. ಶ್ರೀ. ಗುರುಪ್ರಸಾದ್ ಅವರಿಗೆ ನಮಸ್ಕಾರಗಳು.

    ೦೧ ನವೆಂಬರ್ ೨೦೧೦ ದಂದು ನಿಮ್ಮಿಂದ ಬರಬಹುದೆಂದು ಆಶಿಸಿದ್ದ ನಿಮ್ಮ ಈ ಅನಿಸಿಕೆ

    "ನಂತರದ ಪುಸ್ತಕ ಮಾರಾಟ ಅತ್ಯಂತ ಖುಷಿ ಕೊಟ್ಟಿತು. ಸಾಮಾನ್ಯ ಸಮಯದಲ್ಲಿ ಮಾರಾಟವೇ ಕಾಣದಂತಹ ಎಷ್ಟೋ ಪುಸ್ತಕಗಳನ್ನು ಕನ್ನಡ ಸಾಹಿತ್ಯಾಸಕ್ತರು ಹುಡುಕಿ ಕೊಂಡು ಹೋದರು. ಆಕೃತಿ ಪುಸ್ತಕ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ರಾಜೇಶ್ ತೊಳ್ಪಾಡಿ, ಕೇಶವ ಕುಡ್ಲ, ನಾ ಮೊಗಸಾಲೆ ಮುಂತಾದ ಸಾಹಿತಿಗಳ ಭೇಟಿ ಸಂತಸವನ್ನುಂಟುಮಾಡಿತು. "

    ಇಂದು , ಶನಿವಾರ ೩೦ ಅಕ್ಟೋಬರ್ ೨೦೧೦ ನೋಡಿ ಸಂತೋಷವಾಯಿತು.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್

    ಪ್ರತ್ಯುತ್ತರಅಳಿಸಿ
  3. ಅನಾಮಧೇಯ10:06 ಅಪರಾಹ್ನ

    All is well that ends well :-)

    ಪ್ರತ್ಯುತ್ತರಅಳಿಸಿ