ಸೋಮವಾರ, ಡಿಸೆಂಬರ್ 29, 2008

ಕುವೆಂಪು ಜಯಂತಿ


ಈ ರಸಋಷಿಯ ಜನ್ಮದಿನದಂದು ಬರೆಯುತ್ತಿರುವ ಈ ಲೇಖನಕ್ಕೆ ವರಕವಿ ಬೇಂದ್ರೆಯವರ ಈ ಕವನದಿಂದ ಪ್ರಾರಂಭಿಸಿದರೆ ಹೆಚ್ಚು ಅರ್ಥಪೂರ್ಣವಾಗಬಲ್ಲದು.

ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ - ಮಣಿಯದವರು ಯಾರು?
ರಾಮಕೃಷ್ಣ ವಚನೋದಿದ ಪ್ರತಿಭೆ ತೆರೆದ
ಕವನ ತತಿಗೆ ತಣಿಯದವರು ಆರು?
ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ
ಕವಿಯ ಜತೆಗೆ ಕುಣಿಯದವರು ಆರು?
ಕನ್ನಡಿಸಲಿ ಶಿವ ಜೀವನ
ಮುನ್ನಡೆಸಲಿ ಯುವ - ಜನ - ಮನ
ಅದೆ ಪ್ರಾರ್ಥನೆ ನಮಗೆ
ತಮವೆಲ್ಲಿದೆ ರವಿಯಿದಿರಿಗೆ? (ತಮ = ಕತ್ತಲು, ಅಂಧಕಾರ)
ಉತ್ತಮ ಕವಿ ನುಡಿ - ಚದುರೆಗೆ (ಚದುರ = ಜಾಣ)
ಚಾರುತ್ವದ ಕುಂದಣದಲಿ (ಚಾರು = ಶ್ರೇಷ್ಠವಾದ, ಇಷ್ಟವಾದ ; ಕುಂದಣ = ಅಪರಂಜಿ)
ಚಾರಿತ್ರ್ಯದ ರತ್ನ
ಚಾತುರ್ಯದ ಮಂತನದಲಿ
ಸತ್ಸಂಗದ ಯತ್ನ
ಇದೆ ತೃಪ್ತಿಯು ನಿಮಗೆ

ಇದು ಕನ್ನಡ ಒಬ್ಬ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರು, ಇನ್ನೊಬ್ಬ ಶ್ರೇಷ್ಠ ಕವಿಯಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಬಗ್ಗೆ ಬರೆದ ಕವನ. ಇಂದು ಕುವೆಂಪು ರವರ ೧೦೪ ಜನ್ಮ ವರ್ಷ.

ಹಿಂದೆ ಕುವೆಂಪುರವರ ಕಿರು ಪರಿಚಯ ಮಾಡಿಕೊಟ್ಟಿದ್ದೆ! ಇಲ್ಲಿ ಓದಿ!
http://guruve.blogspot.com/2006/10/blog-post_27.html

ನಾನು ಬಹಳ ಹಿಂದೆ ಇವರ ಎರಡು ಬೃಹತ್ ಕಾದಂಬರಿಗಳಾದ ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡತಿ ಓದಿದೆ. ಈ ಕಾದಂಬರಿಗಳ ಭಾಷೆ, ಪ್ರಕೃತಿ ವರ್ಣನೆ, ಕಥೆಯನ್ನು ಕೊಂಡೊಯ್ಯುವ ರೀತಿ ಬಹಳ ಚೆನ್ನಾಗಿದೆ. ಒಮ್ಮೆ ಪುಸ್ತಕ ಓದಲು ಕುಳಿತರೆ ಪುಸ್ತಕ ನಿಮ್ಮನ್ನು ಓದಿಸಿಬಿಡುತ್ತದೆ. ಕಾನೂರು ಸುಬ್ಬಮ್ಮ ಹೆಗ್ಗಡತಿ ಸಮಾಜವನ್ನು ತಿದ್ದುವ ಸಾಮಾಜಿಕ ಕ್ರಾಂತಿಕಾರಿ ಕಾದಂಬರಿ. ಈ ಕಾದಂಬರಿಯ ಮುಖ್ಯ ಪಾತ್ರಧಾರಿ ಹೂವಯ್ಯ ವಿದ್ಯಾವಂತ, ತಿಳಿದವ. ಹೇಗೆ ತನ್ನ ಸುತ್ತಲಿನ ಸಮಾಜದ ಮೌಢ್ಯಗಳನ್ನು ತನ್ನ ಆದರ್ಶಗಳಿಂದ ಹೆದರಿಸುತ್ತಾನೆ ಎಂಬುದು ಕಥೆಯ ಮುಖ್ಯ ವಸ್ತು. ಈ ಕಾದಂಬರಿ ಈ ಕವನದಿಂದ ಕೊನೆಯಾಗುತ್ತದೆ.

ಉದಯಿಸುತಿದೆ ಅಭಿನವ ದಿನಮಣಿ
ಸಹ್ಯಾದ್ರಿಯ ಶೃಂಗಾಳಿಯ ಮೇಲೆ.
ಹರಿದೋಡೀದೆ ನಿಶೆ, ನಗೆ ಬೀರಿದೆ ಉಷೆ,
ತೀಡುತಲಿದೆ ತಂಗಾಳಿಯ ಲೀಲೆ.
ಮಲೆನಾಡನು ಮನಮೋಹಿಸುತಿದೆ ಓ
ದಿನಮುಖದಿನ ಕಾಂಚನಕಾಂತಿ
ಏಳೇಳಿರಿ! ಕರೆಯುತ್ತಿದೆ ಕೇಳಿರಿ,
ಓ ನವಜೀವನ ಸಂಕ್ರಾಂತಿ!

ಉದಯಿಸುತಿದೆ ನೂತನಯುಗದೇವತೆ!
ಮಿಥ್ಯೆಯ ಮೌಢ್ಯತೆಯನು ಸೀಳಿ;
ಙ್ನಾನದ ವಿಙ್ನಾನದ ಮತಿಖಡ್ಗದಿ
ಮೈದೋರುವಳೈ ನವಕಾಳಿ!
ಕೆಚ್ಚಿನ ನೆಚ್ಚಿನ ತನುಮಯ ಪಟುತೆಯ
ಸಂಪಾದಿಸಿ ಓ ಮೇಲೇಳಿ;

ಕಣ್ದೆರೆಯಿರಿ ನವಕಾಂತಿಗೆ. ಶಾಂತಿಗೆ,
ಓ ಕ್ರಾಂತಿಯ ಪುತ್ರರೆ, ಬಾಳಿ!

ಈ ಕವನದಲ್ಲಿ ಪ್ರಕೃತಿ ಸೌಂದರ್ಯ ಮತ್ತು ವೈಚಾರಿಕತೆಯು ಮೇಳೈಸಿರುವುದನ್ನು ಕಾಣಬಹುದು. ಹೇಗೆ ಮೌಢ್ಯತೆ ನಾಶವಾಗಿ, ಙ್ನಾನ - ವಿಙ್ನಾನವು ಮಲೆನಾಡಿನಲ್ಲಿ ಉದಯವಾಗುತ್ತಿದೆ ಎಂಬ ತಮ್ಮ ಕಾದಂಬರಿಯ ಸಾರಾಂಶವನ್ನು ಈ ಕವಿತೆಯ ಮೂಲಕ ಹೇಳಿ ಮುಗಿಸಿದ್ದಾರೆ.

ಸಾಮಾನ್ಯವಾಗಿ ಕುವೆಂಪುರವರ ಕಾವ್ಯದಲ್ಲಿ ಪ್ರಕೃತಿ ರಮಣೀಯತೆ, ಆಧ್ಯಾತ್ಮಿಕತೆ, ವೈಚಾರಿಕತೆ - ಸಾಮಾಜಿಕ ಮೌಢ್ಯಗಳನ್ನು ವಿರೋಧಿಸುವ ಮನೋಭಾವಗಳು ಎದ್ದು ಕಾಣಿಸುತ್ತವೆ. ಉದಾಹರಣೆಗೆ "ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ" ಕವಿತೆಯಾಗಲೀ "ನೂರು ದೇವರನೆಲ್ಲಾ ನೂಕಾಚೆ ದೂರ, ಭಾರತಾಂಬೆಯೇ ನಿನ್ನ ಪೂಜಿಸುವ ಬಾರ" ಕವಿತೆಯಾಗಲೀ, ದೇಶದ ಮೌಢ್ಯ ಆಚರಣೆಗಳನ್ನು ವಿರೋಧಿಸಿ ಬರೆದವು. ಕುವೆಂಪುರವರು ಅರ್ಥವಿಲ್ಲದ ಆಚರಣೆಯ ವಿರೋಧಿಗಾಳಗಿದ್ದವರೇ ಹೊರತು ಆಧ್ಯಾತ್ಮಿಕ ಸಾಧನೆಯ ವಿರೋಧಿಗಳಲ್ಲ! ತಮ್ಮ ಕವನಗಳಲ್ಲಿ ಆಚರಣೆ ಮತ್ತು ಆಧ್ಯಾತ್ಮಿಕತೆ ಳನ್ನು ಪ್ರತ್ಯೇಕಿಸುವ ಗೆರೆ ಎಳೆದಿದ್ದಾರೆ. ಕುವೆಂಪುರವರು ಶ್ರೀ ರಾಮಕೃಷ್ಣ ಮತ್ತು ವಿವೇಕಾನಂದರ ಆತ್ಮಚರಿತ್ರೆಗಳನ್ನು ಕೂಡ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.ನಮ್ಮದೇಶದ ಜಾತಿ ಪದ್ಧತಿ ಯನ್ನು ವಿರೋಧಿಸಿದ ಕನ್ನಡ ಕವಿಗಳಲ್ಲ್ಲಿ ಪ್ರಮುಖರು ಎನ್ನಬಹುದು.

ಕುವೆಂಪುರವರು ಎಲ್ಲಾ ಪ್ರಾಕಾರದ ಸಾಹಿತ್ಯಗಳಲ್ಲೂ ತಮ್ಮ ಪ್ರತಿಭೆ ಮೆರೆದಿದ್ದಾರೆ. ಕಾದಂಬರಿ, ಕವನ, ನಾಟಕ (ಜಲಗಾರ, ರಕ್ತಾಕ್ಷಿ, ಇತ್ಯಾದಿ), ಮಹಾಕಾವ್ಯ (ಙ್ನಾನಪೀಠ ಪ್ರಶಸ್ತಿ ವಿಜೇತ "ಶ್ರೀ ರಾಮಾಯಣದರ್ಶನಂ"), ವಿಮರ್ಶೆ, ಸಣ್ಣಕಥೆಗಳು, ಶಿಶು ಸಾಹಿತ್ಯ (ಬೊಮ್ಮನ ಹಳ್ಳಿಯ ಕಿಂದರಜೋಗಿ - ಇದು ಬರೀ ಶಿಶು ಸಾಹಿತ್ಯವಾಗಿರವೆ ಸಾಮಾಜಿಕ ವಿಡಂಬನೆಯ ಕೃತಿ ಕೂಡ ಆಗಿದೆ).

ಇನ್ನು ಇವರ "ಜೈ ಭಾರತ ಜನನಿಯ ತನುಜಾತೆ " ನಾಡಗೀತೆಯನ್ನು ಕೇಳದ ಕನ್ನಡಿಗರಿರಲಾರರು! ಇವರ ಅನಿಕೇತನ ಪದ್ಯ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದಂತಹ ಕವಿತೆ. ಕುವೆಂಪುರವರು ವಿಶ್ವಕ್ಕೆ ವಿಶ್ವ ಮಾನವ ಸಂದೇಶವನ್ನು ಕೂಡ ಕೊಟ್ಟಿದ್ದಾರೆ!

ಕುವೆಂಪುರವರ ಕೆಲವು ಕವನಗಳ, ಕೆಲವು ಸಾಲುಗಳನ್ನು ನೆನೆಯುವುದಾದರೆ,
ನೇಗಿಲ ಯೋಗಿ
"ನೇಗಿಲ ಹಿಡಿದಾ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೆ ಪೂಜೆಯು
ಕರ್ಮವೆ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೇ ಭೋಗಿ"

ಒಂದು ಕನ್ನಡ ಚಲನಚಿತ್ರದಲ್ಲೂ ಈ ಕವನವನ್ನು ಬಳಸಿಕೊಂಡಿದ್ದಾರೆ.

ನಿನ್ನವನು ನಾನಲ್ಲವೆ?
"ದೇಹವಿದು ನೀನಿರುವ ಗುಡಿಯೆಂದು ತಿಳಿದು
ಗುಡಿಸುವೆನು ದಿನದಿನವು, ದೇವಡೇವ;
ಬುದ್ಧಿಯಿದು ಗುಡಿಯೊಳುರಿಯುವ ದೀಪವೆಂದು
ಅಮಲ ಚಿಂತೆಯ ತೈಲವನು ತುಂಬುವೆ"

ಉದಯ
"ನೋಡುತಳಿತ ತಳಿರ ನಡುವೆ
ಅರುಣ ಕಿರಣ ಸರಿಯ ಸುರಿಸಿ
ಉದಯ ರವಿಯು ಮೆರೆಯುವನು;
ಕವಿಯ ಮನವ ಮೋಹಿಸುತ್ತ
ಮೌನವಾಗಿ ಕರೆವನು!"

ಭಾರತ ಜನನಿಗೆ
"ಭಾರತಾಂಬೆಯೆ, ಜನಿಸಿ ನಿನ್ನೊಳು ಧನ್ಯನಾನೆದು, ದೇವಿಯೇ.
ನಿನ್ನ ಪ್ರೇಮದಿ ಬೆಳೆದು ಜೀವವು ಮಾನ್ಯವಾದುದು, ತಾಯಿಯೆ"

ತೆರೆದಿದೆ ಮನೆ, ಓ, ಬಾ ಅತಿಥಿ!
"ತೆರೆದಿದೆ ಮನೆ, ಓ, ಬಾ ಅತಿಥಿ!
ಹೊಸಬೆಳಕಿನ ಹೊಸ ಗಾಳಿಯ ಹೊಸಬಾಳನು ತಾ, ಅತಿಥಿ!"

ಈ ಹಾಡನ್ನು ರಾಜ್ ಕುಮಾರ್ ರವರ ಹೊಸಬೆಳಕು ಚಿತ್ರದಲ್ಲಿ ಕೇಳಿದ್ದೀರಲ್ಲವೆ?

ಆತ್ಮನಿವೇದನ
"ಬೃಂದಾವನಕೆ ಹಾಲನು ಮಾರಲು
ಹೋಗುವ ಬಾರೇ ಬೇಗ, ಸಖಿ!
ಬೃಂದಾವನದಿ ಹಾಲನು ಕೊಳ್ಳುವರ್
ಆರಿಹರೇ ಹೆಳಿಂದುಮುಖಿ"

"ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೆ ನನ್ನದು"

"ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ"
ಇದನ್ನು ಕೂಡ ಕೇಳದೆ ಇದ್ದಿರಲಾರಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ