ಗೆಳೆಯರೆ,
ಸುವರ್ಣ ಕನ್ನಡ ರಾಜ್ಯೋತ್ಸವ ಸನ್ನಿಹಿತವಾಗ್ತಾ ಇರೋ ಅಂತ ಸಂದರ್ಭದಲ್ಲಿ ನಮ್ಮ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ಕೊಟ್ಟ ನಮ್ಮ ಸಾಹಿತಿಗಳನ್ನು ನೆನೆಯಲು ಒಂದು ಸುವರ್ಣಾವಕಾಶ.
ಈ ನಿಟ್ಟಿನಲ್ಲಿ ದಿನವೂ ಒಬ್ಬ ಕವಿಯ ಬಗ್ಗೆ ನೆನೆಯೋಣ.. ಅವರ ಕೆಲವು ಕಾವ್ಯಗಳನ್ನು ಮೆಲುಕು ಹಾಕೋಣ..
ಕುವೆಂಪು : ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಇವರ ಅತ್ಯುತ್ತಮ ಕೃತಿಗಳು ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡತಿ. ಒಂದು ಬಾರಿ ಇವುಗಳನ್ನು ಓದಿ. ನೀವು ಕುವೆಂಪೂರವರ ಅಭಿಮಾನಿಗಳಾಗುವುದರಲ್ಲಿ ಸಂಶಯವೇ ಇಲ್ಲ.ಈ ಕೃತಿಗಳು ನಿಮ್ಮನ್ನು ಎಲ್ಲಾ ಭಾವಗಳಿಗೂ ಕೊಂಡೊಯ್ಯುವುದಲ್ಲದೆ ಸಮಾಜದ ಮೌಢ್ಯಗಳನ್ನು ಎತ್ತಿ ತೋರಿಸುತ್ತವೆ.
ಇವರ ಕೃತಿಗಳ ಬಗ್ಗೆ ಹೇಳಲು ನಮ್ಮಂತ ಸಾಮಾನ್ಯರಿಂದ ಸಾಧ್ಯವಾಗದ ಮಾತು. ಆದರೂ ಅವರನ್ನು ನೆನೆಸಿಕೊಳ್ಳಲು ಈ ಎರಡು ಅತ್ಯುತ್ತಮ ಕಾವ್ಯಗಳನ್ನು ನೋಡುವ..
ಅನಿಕೇತನ
ಓ ನನ್ನ ಚೇತನ
ಆಗು ನೀ ಅನಿಕೇತನ
ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ
ಓ ನನ್ನ ಚೇತನ....
ಎಲ್ಲಿಯು ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ಅನಂತವಾಗಿರು
ಓ ನನ್ನ ಚೆತನ....
ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯ ಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು
ಓ ನನ್ನ ಚೇತನ
ಆಗು ನೀ ಅನಿಕೇತನ
ನಾಡಗೀತೆ
ಜಯ ಹೇ ಕರ್ನಾಟಕ ಮಾತೆ!
ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ್ ಸುಂದರ ನದಿವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ ,
ಜಯ ಹೇ ಕರ್ನಾಟಕ ಮಾತೆ!
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ.
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ.
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರರಿಹ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ!
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ;
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗ.
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ.
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ!
ಕನ್ನಡ ನುಡಿ ಕುಣಿದಾಡುವ ಗೇಹ!
ಕನ್ನಡ ತಾಯಿಯ ಮಕ್ಕಳ ದೇಹ!
ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ್ ಸುಂದರ ನದಿವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ