ಗುರುವಾರ, ಡಿಸೆಂಬರ್ 04, 2008
ರತ್ನನ ಜಯಂತಿ
"ಅವರೂ ನಾನೂ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಮೇಲೆ ಕುಳಿತಿದ್ದು ಉಡುಪಿಯಲ್ಲಿ. ೧೯೪೪ ರಲ್ಲಿ ನಡೆದ ನಾಡಹಬ್ಬಕ್ಕೆ ’ವಿ.ಸೀ.’ (ವಿ ಸೀತಾರಾಮಯ್ಯ)ಅವರೊಂದಿಗೆ ನಾನೂ ಹೋಗಿದ್ದೆ. ಅದೇ ಕಾರಣಕ್ಕಾಗಿ ಶ್ರೀ ರಾಜರತ್ನಂ ಅಲ್ಲಿಗೆ ಬಂದಿದ್ದರು. ಆ ಸಂಜೆಯ ಸಮಾರಂಭ ಬೋರ್ಡ್ ಹೈಸ್ಕೂಲ್ ಸಭಾಓಗಣದಲ್ಲಿ ’ವಿ ಸೀ.’ ಅವರ ಅಧ್ಯಕ್ಷತೆಯಲ್ಲಿ ಜರುಗಿತು; ನಾವಿಬ್ಬರೂ ಕವನಗಳನ್ನು ಓದುವ ಕಾರ್ಯಕ್ರಮವಿತ್ತು. ಮೊದಲು ನನ್ನ ಸರದಿ ಬಂತು. ನಾನು ’ರಾಯರು ಬಂದರು’ (’ಮೂಲ’ ಮೈಸೂರು ಮಲ್ಲಿಗೆ ಚಿತ್ರದಲ್ಲಿ ಅಳವಡಿಸಿರುವ ’ರಾಯರು ಬಂದರು ಮಾವನ ಮನೆಗ’ ಕೇಳಿದ್ದೀರಲ್ಲವೆ?) ಕವನವನ್ನು ಓದುತ್ತಿದ್ದಾಗ ಸಭೆಯಲ್ಲಿ ಗದ್ದಲ ಕೇಳಿಸಿತು. ಆಗ ಶ್ರೀ ರಾಜರತ್ನಂ ಎದ್ದು ನಿಂತು, ಅಧ್ಯಕ್ಷರ ಅನುಮತಿ ಪಡೆದು, "ಕಾವ್ಯವಾಚನಕ್ಕೆ ಅವರು ಕೊಂಚ ಹೊಸಬರು ಎಂದು ತೋರುತ್ತದೆ. ಅದೇ ಕವನವನ್ನು ನಾನೀಗ ಓದುತ್ತೇನೆ, ಶಾಂತಿಯಿಂದ ಕೇಳಿ" ಎಂದು ಸಭೆಗೆ ಭಿನ್ನವಿಸಿ ನನ್ನ ಕವನವನ್ನು ಹಾಡಿದರು. ಅವರ ಕಂಚಿನ ಕಂಠದಿಂದ ಮೂಡೀಬಂದ ಆ ಕವನವನ್ನು ಕೇಳಿ ತುಂಬಿದ ಸಭೆಯಲ್ಲಿ ಚಪ್ಪಾಳೆಯ ಸುರಿಮಳೆಯಾಯಿತು. ನಾನು ಹಿಗ್ಗಿ ಹೋದೆ."
ಮೇಲಿನ ಮಾತುಗಳನ್ನು (ಆವರಣಗಳಲ್ಲಿರುವುದನ್ನು ಬಿಟ್ಟು) ಕನ್ನಡದ ಖ್ಯಾತ ಪ್ರೇಮ ಕವಿ ದಿವಂಗತ ಕೆ ಎಸ್ ನರಸಿಂಹಸ್ವಾಮಿಯವರು, ಜೆ ಪಿ ರಾಜರತ್ನಂ ರವರ ನೆನಪಿನಲ್ಲಿ ಬರೆದಿರುವುದು!
ಇಂದು "ಗುಂಡ್ಲು ಪಂಡಿತ ರಾಜರತ್ನಂ" ರವರ ಜನ್ಮ ದಿನ.ಇಂದಿಗೆ ರಾಜರತ್ನಂ ರವರು ಹುಟ್ಟಿ ೧೦೦ ವರ್ಷ. ಜನನ : ೦೫/೧೨/೧೯೦೮.
ಹಿಂದೆ ಜೆ ಪಿ ರಾಜರತ್ನಂರವರ ಕಿರು ಪರಿಚಯ ಮಾಡಿಕೊಟ್ಟಿದ್ದೆ! ಇಲ್ಲಿ ಓದಿ!
http://guruve.blogspot.com/2006/10/blog-post_116218904908111393.html
ರಾಜರತ್ನಂ ರವರು ತಮ್ಮ ರತ್ನನ ಪದಗಳು ಮತ್ತು ನಾಗನ ಪದಗಳ ಬಗ್ಗೆ ಸ್ವತ: ಏನು ಹೇಳುತ್ತಾರೆ?
ರತ್ನನ ಪದಗಳು
೧೯೩೨ ರಲ್ಲಿ ನಾನು ರತ್ನನ ಪದಗಳನ್ನು ಬರೆಯ ತೊಡಗಿದಾಗ, ಇಂಥ ಪದ್ಯಗಳನ್ನು ಇಷ್ಟು ಸಂಖ್ಯೆಯಲ್ಲಿ ಬೆರೆಯುವೆನೆಂದು ನಾನೇ ಅಂದುಕೊಂಡಿರಲಿಲ್ಲ. ಆಯಾ ಸಂದರ್ಭದಲ್ಲಿ ನಾನು ವ್ಯಯಕ್ತಿಕವಾಗಿ ಅನುಭವಿಸಿದ ವಿವಿಧವಾದ ಯಾತನೆಗಳನ್ನು ಕುಡುನೊಬ್ಬನು ಹೇಳಿಕೊಂಡ ಹಾಗೆ ಹೇಳಿಕೊಳ್ಳುವುದು ನನಗೆ ಸಹಜವಾಗಿತ್ತು. ಅದುವರೆಗೆ ನಾನು ಬರೆಯುತ್ತಿದ್ದ (’ಶಾಂತಿ’ ಮೊದಲಾದ) ಗ್ರಂಥಸ್ಥ ಭಾಷೆಯ ರೀತಿರಚನೆಗಳೇ ಬೇರೆ; ೧೯೩೨ ರಿಂದ ೧೯೩೪ ರ ವರೆಗೆ ನಾನು ಬರೆದ ಈ ಪದ್ಯಗಳ ರೀತಿ ರಚನೆಗಳೇ ಬೇರೆ. ’ರತ್ನ’ನ ಪ್ರಾಣವಾಗಿದ್ದ ’ನಂಜಿ’ಯ ಮರಣದೊಂದಿಗೆ ಈ ಪದ್ಯಗಳ ಮಾಲೆ ಮುಗಿದುಹೋಯಿತು.
ನಾಗನ ಪದಗಳು
೧೯೩೨-೩೪ ರಲ್ಲಿ ರತ್ನನ ಪದಗಳನ್ನು ಬರೆದಾಗ ನನ್ನನ್ನು ಮೆಟ್ಟಿಕೊಂಡಿದ್ದ ಭೂತಾವೇಶದ ಸ್ವರೂಪವೇ ಬೇರೆ; ೧೯೫೦-೫೨ ರಲ್ಲಿ ನಾಗನ ಪದಗಳನ್ನು ಬರೆದಾಗ ನನ್ನನ್ನು ಮೆಟ್ಟಿಕೊಂಡ ಭೂತಾವೇಶದ ಸ್ವರೂಪವೇ ಬೇರೆ. ಅವುಗಳಲ್ಲಿ ಮೊದಲನೆಯದಕ್ಕಿಂತ ಎರಡನೆಯದರ ಅನುಭವ ಹೆಚ್ಚು ತೀವ್ರವಾದದ್ದು ಹೊರಗಡೆ ನೋಡುವುದಕ್ಕೆ ಸಾಮಾನ್ಯವಾಗಿದ್ದರೂ ತಮ್ಮ ಅಂತರಂಗ ಸಂಪತ್ತಿಯಿಂದ ಆಢ್ಯವಗಿರುವ ನಾಗ-ಮಲ್ಲಿಯ ಸಂಸಾರದ ಚಿತ್ರಣವು ನನಗಂತೂ ತುಂಬ ತೃಪ್ತಿಯನ್ನು ಕೊಟ್ಟಿದೆ. ನಾಗನ ಪದಗಳನ್ನು ರಚಿಸುವಾಗ ನನಗೆ ಆದ ಅನುಭವ ರತ್ನನ ಪದಗಳನ್ನು ಬರೆದಾಗ ಆಗಲಿಲ್ಲ.
ಕೊನೆಗೆ ನಾಗನ ಪದಗಳಿಂದ ಆರಿಸಿದ ಈ ಪದ್ಯ,
ಛೀ!
ಪುಂಡಮಾತು! ಛೀ! ಸುಡು!
ಕಿವಿಗೆ ಕಾದ ಗುಳ!
ಯೇಳಿದೋರ ಬಾಯಾಗೇ
ಬೀಳತೈತೆ ವುಳ!
ಬಂಡಮಾತು ಬರದು - ಸೇದೇ
ವೋಗತೈತೆ ಕೈ!
ತಾಯಿ ಆಲು ಕುಡಿಲಿಲ್ಲಿದು-
ಏನೋ ತಿಂದ ಮೈ!
ಸುಲಬದಾಗೆ ಸಿಕಾಕಿಲ್ಲ
ಮನಸು - ಕೋತಿಮರಿ!
ಮಾತಿಗೊಂದು, ಮೈಯಿಗೆರಡು,
ಅವಕೆ ಕಿತ್ತು ಗರಿ!
ಮನಸಿಗೊಂದು ನೀನೆ ಸದಾ!
ಕನಡಿ ಯೆತ್ತಿ ಯಿಡಿ!
ಯಿದನೆ ಬಾಪು ನಮಗ್ ಯೋಳಿದ್ದು;
"ಮಾಡು - ಇಲ್ಲವೆ ಮಡಿ."
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ