ಪುಸ್ತಕಗಳು ನಮ್ಮ ಜೀವನವನ್ನು ರೂಪಿಸಿಕೊಳ್ಳಲು, ರೂಪಿಸಿಕೊಂಡ ಜೀವನವನ್ನು ಉತ್ತಮಪಡಿಸಿಕೊಳ್ಳಲು ಬಹಳ ಉಪಯುಕ್ತ. ಇಂದು ಇದು ಬಹಳಷ್ಟು ಮಂದಿಗೆ ತಿಳಿದ ಸತ್ಯ! ಜೀವನೋದ್ಧಾರಕ್ಕಷ್ಟೇ ಅಲ್ಲ, ಓದು ಮನರಂಜನೆಗೂ ಕೂಡ ಆಗಬಹುದು.ಬಹಳಷ್ಟು ಜನ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಂಡಿರುತ್ತೇವೆ. ನಾನೂ ನನ್ನ ಜೀವನದಲ್ಲಿ ಹೆಚ್ಚಿನ ಉಪಯುಕ್ತವಾದ ಗುಣಗಳನ್ನು ಬೆಳೆಸಿಕೊಳ್ಳುವ ಸಲುವಾಗಿ, ಅನುಪಯುಕ್ತ ಗುಣಗಳನ್ನು ತೊಡೆದು ಹಾಕುಲು ನಾನು ಕಂಡು ಕೇಳಿ ಅರಿದ ಕೆಲವು ಪ್ರಮುಖ ವ್ಯಕ್ತಿಗಳ ಪುಸ್ತಕಗಳನ್ನು ಓದುತ್ತಾ ಬಂದಿದ್ದೇನೆ. ಕೆಲವನ್ನು ಮನರಂಜನೆಗಾಗಿ ಕೂಡ ಓದಿದ್ದೀನಿ. ನಾನು ೨೦೦೮ ರಲ್ಲಿ ಓದಿದ ಕೆಲವು ಪುಸ್ತಕಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ. ಆ ಪುಸ್ತಕಗಳ ಬಗ್ಗೆ ವ್ಯಯಕ್ತಿಕ ಅಭಿಪ್ರಾಯವಾಗಿ ಒಂದೆರಡು ಸಾಲುಗಳನ್ನು ಕೂಡ ಬರೆದಿದ್ದೀನಿ. ಓದುಗರು ಇದನ್ನು ವಿಮರ್ಶೆ ಎಂದು ತಿಳಿಯಬಾರದಾಗಿ ವಿನಂತಿ.
ಮರಳಿ ಮಣ್ಣಿಗೆ, ಮೈ ಮನಗಳ ಸುಳಿಯಲ್ಲಿ - ಡಾ ಶಿವರಾಮ ಕಾರಂತ
ಎರಡು ಪುಸ್ತಕಗಳೂ ಉತ್ತಮ ಪುಸ್ತಕಗಳು. ಬರವಣಿಗೆ ಶೈಲಿ ಓದುಗರನ್ನು ಮುದಗೊಳಿಸುತ್ತದೆ. ಎರಡೂ ಸುಮಾರು ೨ ದಶಕಗಳ ಹಿಂದಿನ ಕಥೆಗಳು ಎನ್ನಬಹುದಾದರೂ ಮರಳಿ ಮಣ್ಣಿಗೆ ಇವತ್ತಿಗೂ ಪ್ರಸ್ತುತವಾಗಬಹುದಾದಂತ ಕಾದಂಬರಿ. ಮೈ ಮನಗಳ ಸುಳಿಯಲ್ಲಿ ದೇವದಾಸಿಯರ ಬಗ್ಗೆ ಬರೆದ ಕಾದಂಬರಿ. ಹಿಂದೆ ನಾನು ಓದಿದ ಕಾರಂತರ ಪುಸ್ತಕಗಳಾದ ಮೂಕಜ್ಜಿಯ ಕನಸುಗಳು (ಕಾರಂತರಿಗೆ ಙ್ನಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ) ಮತ್ತು ಸರಸಮ್ಮನ ಸಮಾಧಿ ಪುಸ್ತಕಗಳಿಗೆ ಹೋಲಿಸಿದರೆ ನನಗೆ ಈ ಪುಸ್ತಗಳು ಅಷ್ಟು ಇಷ್ಟವಾಗಲಿಲ್ಲ. ಕಾರಂತರ ಕನ್ನಡಿಯಲ್ಲಿ ಕಂಡಾತ, ಆತ್ಮ ಕಥೆಗೆ ಹತ್ತಿರವಾಗಬಲ್ಲ ಹುಚ್ಚು ಮನಸ್ಸಿನ ಹತ್ತು ಮುಖಗಳು ಮತ್ತು ಬಾಳ್ವೆಯೇ ಬೆಳಕು ಪುಸ್ತಕಗಳನ್ನು ಕೂಡ ಹಿಂದೆ ಓದಿದ್ದೀನಿ.
ನನ್ನ ಭಯಾಗ್ರಫಿ - ಬೀಚಿ
ಹೋರಾಟದ ಹಾದಿ - ಡಾ ಹೆಚ್ ನರಸಿಂಹಯ್ಯ
ಕನ್ನಡದ ಆತ್ಮ ಕಥೆಗಳಲ್ಲಿ ಅತ್ಯುತ್ತಮವಾದವು ಮತ್ತು ಉತ್ತೇಜನಕಾರಿಯಾದವುವು ಎನ್ನಬಹುದು. ಮತ್ತೂ ಬಹಳಷ್ಟು ವಿಷಯಗಳಲ್ಲಿ ಆದರ್ಶಪ್ರಾಯವಾಗಬಲ್ಲವು.
ನೆನಪಿನ ದೋಣಿಯಲ್ಲಿ - ಕುವೆಂಪು
ಎರಡು ಭಾಗಗಳಲ್ಲಿರುವ ಈ ಬೃಹತ್ ಆತ್ಮಕಥೆಯನ್ನು ಸ್ವಲ್ಪ ಕಷ್ಟ ಪಟ್ಟೇ ಓದಿ ಮುಗಿಸಿದೆ. ಕುವೆಂಪುರವರ ಅತ್ಯುತ್ತಮ ಕೃತಿಗಳಾದ ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡತಿ ಪುಸ್ತಕಗಳ ಮಟ್ಟಕ್ಕೆ ಅವರ ಆತ್ಮಕಥೆ ಏರಿಲ್ಲ. ಆತ್ಮಕಥೆಗೂ, ಕಾದಂಬರಿಗಳಿಗೂ ವ್ಯತ್ಯಾಸವಿರುತ್ತದೆ ಹೋಲಿಕೆ ಸಲ್ಲ ಎಂದರೆ, ನಾನು ಓದಿರುವ ಇನ್ನಿತರ ಆತ್ಮಕಥೆಗಳಿಗೆ ಹೋಲಿಸಿ ನೋಡಿದರೆ ಕೂಡ ಅಷ್ಟೇನು ಉತ್ತಮವಾದದ್ದಲ್ಲ ಎಂದೇ ಹೇಳಬಹುದಾಗಿದೆ.
ಅಲೆಮಾರಿನ ಅಂಡಮಾನ್ ಮತ್ತು ಮಹಾನದಿ ನೈಲ್, ಚಿದಂಬರ ರಹಸ್ಯ, ಕನ್ನಡ ನಾಡಿನ ಹಕ್ಕಿಗಳು ಭಾಗ -೧ - ಪೂರ್ಣಚಂದ್ರ ತೇಜಸ್ವಿ
ಅಲೆಮಾರಿನ ಅಂಡಮಾನ್ ಕನ್ನಡದಲ್ಲಿರುವ ಅತ್ಯುತ್ತಮ ಪ್ರವಾಸ ಕಥನ. ಕನ್ನಡ ನಾಡಿನ ಹಕ್ಕಿಗಳು ಭಾಗ-೧ ಇದು ಬರೀ ಪಕ್ಷಿಗಳ ಬಗ್ಗೆಯ ವೈಙ್ನಾನಿಕ ಪರಿಚಯವಾಗದೆ, ತಮ್ಮ ಜೀವನದಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ಕೂಡ (ಪಕ್ಷಿಗಳಿಗೆ ಸಂಬಂಧಿಸಿದ) ಒಳಗೊಂಡಿದೆ. ಕೆಲವು ಕಡೆ ತಿಳಿ ಹಾಸ್ಯದಿಂದ ಕೂಡ ಕೂಡಿದೆ. ಪಕ್ಷಿ ವೀಕ್ಷಕರಿಗಂತೂ ರಸದೌತಣ. ಪಕ್ಷಿ ವೀಕ್ಷಕರಲ್ಲದವರಿಗೂ ಇಷ್ಟವಾಗಬಲ್ಲುದು! ಇನ್ನು ಚಿದಂಬರ ರಹಸ್ಯ ಚಿಕ್ಕಮಗಳೂರಿನಲ್ಲಿ ಕಾಫಿ ತೋಟಗಳ ನಡುವೆ ನಡೆಯುವ ಕಥೆ. ಬರೆದ ಶೈಲಿ ಚೆನ್ನಾಗಿದ್ದರೂ ನನಗೆ ಅಷ್ಟು ಇಷ್ಟವಾಗಲಿಲ್ಲ! (ಇವರ ಇತರ ಪುಸ್ತಕಗಳಿಗೆ ಹೋಲಿಸಿದ್ದಕ್ಕೆ, ಮತ್ತು ಅವರ ತಂದೆ ಕುವೆಂಪುರವರ ಸಾಮಾಜಿಕ ಕಾದಂಬರಿಗಳ ಜೊತೆ ಹೋಲಿಸಿ ಓದಿದ್ದರ ಪರಿಣಾಮವೂ ಇರಬಹುದು). ಹಿಂದೆ ತೇಜಸ್ವಿಯವರ "ಅಣ್ಣನ ನೆನಪುಗಳು" ಪುಸ್ತಕ ಓದಿದ್ದೆ.
ಆವರಣ - ಭೈರಪ್ಪ
ಐತಿಹಾಸಿಕ ಕಾದಂಬರಿ. ಉತ್ತಮ ಬರವಣಿಗೆ ಶೈಲಿ, ಸಂಶೋಧನೆಗಳಿಂದ ಕೂಡಿದ ಕಾದಂಬರಿ. ಸುಮಾರು ೧೦ ಕ್ಕಿಂತ ಹೆಚ್ಚು ಮುದ್ರಣಗಳನನ್ನು ಕಂಡಿದೆಯೆನ್ನಿಸುತ್ತದೆ! ಭೈರಪ್ಪನವರ ಗೃಹಭಂಗ ಕಾದಂಬರಿಯನ್ನು ಹಿಂದೆ ಓದಿದ್ದೆ.
we the living - Ayn Rand
ಆಯನ್ ರಾಂಡ್ ರವರ fountainhead, atlas shrugged, anthem ಪುಸ್ತಕಗಳನ್ನು ಹಿಂದೆ ಓದಿ ಮುಗಿಸಿದ್ದ ನನಗೆ ಈ ಪುಸ್ತಕವನ್ನು ಓದದೆ ಇರಲಾಗಲಿಲ್ಲ. ಆಯನ್ ರಾಂಡ್ ರವರ ಬರವಣಿಗೆಯ ಶಕ್ತಿ ಅದು! ಈ ಪುಸ್ತಕದಲ್ಲಿ ಆಯನ್ ರಾಂಡ್ ರವರ ವಸ್ತುನಿಷ್ಟತೆ (objectivism) ಕಥೆಯ ವಸ್ತುವಾಗಿದ್ದರೂ,ತಮ್ಮ ಇತರ ಪುಸ್ತಕಗಳೊಷ್ಟು ಹರಿತವಾಗಿಲ್ಲ. ರಷ್ಯಾದ ಎಡಪಂಥೀಯರ ದುರಾಡಳಿತದಲ್ಲಿ ಸಮಾನತೆಯ ಹೆಸರಿನಲ್ಲಿ ಹೇಗೆ ಕಷ್ಟ ಪಟ್ಟು ಮೇಲೆ ಬರುವ ಜನರು ತುಳಿಯಲ್ಪಟ್ಟರು ಎಂಬುದು ಕಥೆ. ಆಯನ್ ರಾಂಡ್ ರವರ ಕೃತಿಗಳನ್ನು ನನಗೆ ಬಹಳ ಇಷ್ಟವಾದ ಕಾದಂಬರಿಯಿಂದ ಹಿಡಿದು, ಕಡಿಮೆ ಇಷ್ಟವಾದ ಕಾದಂಬರಿಗಳ ಪಟ್ಟಿ ಮಾಡಿದರೆ ಸರದಿ ಹೀಗಿರುತ್ತದೆ. atlas shrugged,fountainhead,anthem,we the living. ಇವರ ಕಾದಂಬರಿಯ ಮುಖ್ಯ ವಸ್ತುವಾದ ನಾಯಕನ (/ನಾಯಕಿಯ) ವಸ್ತುನಿಷ್ಟತೆಯ ಜೀವನ ಇಷ್ಟವಾದರೂ, ಇದು ನಮ್ಮಂತ ಮಧ್ಯಮ ವರ್ಗದವರ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆ ಮೂಡುತ್ತದೆ!
The white tiger - Arvind Adiga
೨೦೦೮ ರ ಬೂಕರ್ ಪ್ರಶಸ್ತಿ ತಂದ ಕಾದಂಬರಿಯೆಣಿಸಿ, ಮತ್ತು ನಾನು ಓದಿದ ಮೊದಲ ಬೂಕರ್ ಪ್ರಶಸ್ತಿ ವಿಜೇತ ಕಾದಂಬರಿ. ನನಗೆ ನಿರಾಸೆಯನ್ನುಂಟು ಮಾಡಿತು. ಇದರ ಧೀರ್ಘ ವಿಮರ್ಶೆ ಆಂಗ್ಲ ಭಾಷೆಯಲ್ಲಿ ಇಲ್ಲಿದೆ!
http://guruve.blogspot.com/2008/11/white-tiger-aravind-adiga.html
MidNight's children - Salman Rushdie
ಅರವಿಂದ ಅಡಿಗ ರವರ ಪುಸ್ತಕದಿಂದ ನಿರಾಸೆಗೊಂಡು ಇತರ ಬೂಕರ್ ಪ್ರಶಸ್ತಿ ವಿಜೇತ ಕೃತಿಗಳನ್ನು ಓದಬೇಕೆಂದೆನಿಸಿ ಓದಿದ ಪುಸ್ತಕ. ಕೆಲವೊಂದು ಪುಟಗಳಲ್ಲಿನ ವಿವರಣೆಗಳ ಉತ್ತಮ ಬರವಣಿಗೆ ಶೈಲಿಯನ್ನು ಬಿಟ್ಟರೆ, ಅಷ್ಟೇನೂ ಇಷ್ಟವಾಗಲಿಲ್ಲ. ಇನ್ನು ಮುಂದೆ ಬೂಕರ್ ಪ್ರಶಸ್ತಿ ವಿಜೇತ ಅಥವಾ ಬೂಕರ್ ಪ್ರಶಸ್ತಿ ಸ್ಪರ್ಧೆಗೆ ನೇಮಕಗೊಳ್ಳುವ ಯಾವುದೇ ಪುಸ್ತಕವನ್ನು ಓದಬಾರದೆಂಬ ನಿಶ್ಚಯಕ್ಕೆ ಬಂದಿದ್ದೇನೆ. (ಪುಸ್ತಕದ ಭಾಷೆ ನನ್ನ ಸಾಮರ್ಥ್ಯಕ್ಕೆ ಸ್ವಲ್ಪ ಕ್ಲಿಷ್ಠ ವಾಗಿದ್ದುದೂ ಕೂಡ ಈ ಪುಸ್ತಕದ ಬಗ್ಗೆ ಈ ನನ್ನ ಋಣಾತ್ಮಕ ಧೋರಣೆಗೆ ಒಂದು ಕಾರಣ ಎನ್ನಬಹುದು)
Not a penny more Not a penny less - Jeffery Archer
ಮನರಂಜನೆಗಾಗಿ ಓದಿದ ಪುಸ್ತಕ.ಇಷ್ಟವಾಯಿತು ಎನ್ನಬುದಷ್ಟೆ, ಜೆಫ್ರಿ ಆರ್ಚರ್ ರವರ ಅಭಿಮಾನಿ ಆಗಲಿಲ್ಲ!
Netaji in germany - N G Ganpuley
ಸುಭಾಷ್ ಚಂದ್ರ ಬೋಸ್ ರವರು ಜರ್ಮನಿಯಲ್ಲಿ ಹೇಗೆ ಸೈನ್ಯ ಕಟ್ಟಿದರು, ಹೇಗೆ ಭಾರತದ ಸ್ವಾತಂತ್ರದ ಕನಸು ಕಂಡರು, ಅವರು ಎದುರಿಸಿದ ಕಷ್ಟ ಕಾರ್ಪಣ್ಯಗಳ ಚಿತ್ರಣ ಮೂಡೀ ಬಂದಿದೆ. ಲೇಖಕರು ನೇತಾಜಿಯವರ ಜೊತೆ ಜರ್ಮನಿಯಲ್ಲಿ ಇದ್ದವರು. ಉತ್ತಮ ಪುಸ್ತಕ.
ಇನ್ನೂ ಹಲವಾರು ಪುಸ್ತಕಗಳ(ತೀನಂಶ್ರೀ ಸಮಗ್ರ ಸಾಹಿತ್ಯ, ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗ, ಜಿ ಪಿ ರಾಜರತ್ನಂ ರವರ ಭ್ರಮರ, ಕುವೆಂಪುರವರ ಕೆಲವು ಕವನ ಸಂಕಲನಗಳು ಇತ್ಯಾದಿ) ಬಿಡಿ ಲೇಖನ, ಕವನಗಳನ್ನು ಬಹಳಷ್ಟು ಓದಿದ್ದರೂ ಅವುಗಳನ್ನು ಇಲ್ಲಿ ಉಲ್ಲೇಖಲಿಸಲಾಗಲಿಲ್ಲ.
ಮುಂದೆ ಓದಲು ವಿನಾಯಕ ಕೃಷ್ಣ ಗೋಕಾಕ್ ರವರ ಕೃತಿ ಸಮರಸವೇ ಜೀವ (ಭಾಗ ೧ -ಇಜ್ಜೋಡು, ಭಾಗ ೨ - ಏರಿಳಿತ) ನನ್ನ ಮೇಜಿನ ಮೇಲಿದೆ!
ಈ ಪುಸ್ತಕಗಳನ್ನು ನೀವು ಓದಿದ್ದೀರಾ? ನಿಮ್ಮ ಅಭಿಪ್ರಾಯಗಳನ್ನು ಕೆಳಗೆ ಪ್ರತಿಕ್ರಿಯಿಸಿ!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
VK Gokak ravara jnanapeetha vijetha kruthi "Bhaaratha Sindhu Rashmi" allave??
ಪ್ರತ್ಯುತ್ತರಅಳಿಸಿRaveesha, tappannu tiddukoLLalaaguvudu. gOkaak ravarige gnaapeeTha samagra saaahityakke bandaddo? athava "bhaarata sindu rashmi" krutigO?
ಪ್ರತ್ಯುತ್ತರಅಳಿಸಿI think it is for Bharatha Sindhu Rashmi. Also check the wiki link http://en.wikipedia.org/wiki/Jnanpith_Award
ಪ್ರತ್ಯುತ್ತರಅಳಿಸಿhowdu, "bhaaratha sindhu rashmi" ye irabEku. tappannu saripaDisiddEne. :)
ಪ್ರತ್ಯುತ್ತರಅಳಿಸಿ