ಶುಕ್ರವಾರ, ಡಿಸೆಂಬರ್ 26, 2008

ಕುಮಾರ ಪರ್ವತ/ ಪುಷ್ಪಗಿರಿಯ ಚಾರಣದ ಕಥೆ

ಬೆಂಗಳೂರು-ಕುಕ್ಕೆ-ಕುಮಾರಪರ್ವತ/ಪುಷ್ಪಗಿರಿ-ಹೆಗ್ಗಡೆಮನೆ-ಸೋಮವಾರಪೇಟೆ-ಬೆಂಗಳೂರು


ಗೆಳೆಯರ ಗುಂಪು
ಪಿಂಗ(ನವೀನ), ಕುಂಟ(ಸಂದೀಪ), ಆನೆ(ಅನಿರುದ್ಧ) ಮೂರೂ ಜನ ಕುಮಾರಪರ್ವತ ಏರುವುದೆಂದು ನಿರ್ಧರಿಸಿದ್ದರು. ಕೊನೆಗೆ ಇವರನ್ನು ನಾನೂ ಸಹ ಸೇರಿದೆ.

ಸಿದ್ಧತೆ
೨೨ ರ ರಾತ್ರಿ ಬಿಡುವುದೆಂದೂ, ಮತ್ತು ಪರ್ವತವನ್ನು ಕುಕ್ಕೆಯಿಂದಲೂ ಹತ್ತುವುದೆಂದು ನಿಶ್ಚಯಿಸಿ ರಾಜಹಂಸದಲ್ಲಿ ೪ ಸ್ಥಳಗಳನ್ನು ಮುಂಗಡ ಕಾಯ್ದಿರಿಸಿದ್ದೆವು. ಇಳಿಯುವುದು ಕುಕ್ಕೆಗೋ ಅಥವ ಹೆಗ್ಗಡೆ ಮನೆಯ (ಸೋಮವಾರ ಪೇಟೆಯ ಕಡೆ) ಕಡೆಗೋ ಎಂಬುದರ ಬಗ್ಗೆ ಒಮ್ಮತಕ್ಕೆ ಬರಲಾಗದೆ ಹಿಂದಿರುಗುವ ಯೋಜನೆಯನ್ನು ಭವಿಷ್ಯದಲ್ಲಿ ಯೋಚಿಸುವುದೆಂದು ನಿರ್ಣಯಿಸಿದೆವು. ನಾಲ್ಕೂ ಜನದ ಚೀಲಗಳಲ್ಲಿ ಸಾಕಷ್ಟು ತಿಂಡಿ ತಿನಿಸು, ಬೇಡವಾಗಿದ್ದ ಅನಗತ್ಯ ಬಟ್ಟೆಗಳು, ಪಾನೀಯಗಳು ತುಂಬಿ ನನ್ನ ಮತ್ತು ಆನೆಯ ದೇಹದ ಭಾರವನ್ನು ಅಣಕಿಸುವಂತೆ ಯಮ ಭಾರವಾಗಿ ಊದಿಕೊಂಡಿದ್ದವು. ಬಾಡಿಗೆ ಟೆಂಟಿನ ಸಮಾನುಗಳನ್ನು ತುಂಬಿದ್ದ ಮತ್ತೊಂದು ಹೆಣ ಭಾರದ ಮತ್ತೊಂದು ಚೀಲವನ್ನು ಸರದಿ ಪ್ರಾಕಾರವಾಗಿ ಎಲ್ಲರೂ(!) ಎತ್ತಿ ಒಯ್ಯುವುದು ಎಂಬುದಾಗಿ ೨೨ ರ ರಾತ್ರಿ ೯:೩೦ ಕ್ಕೆ ಬೆಂಗಳೂರಿನಿಂದ ಹೊರಟೆವು.

ನಾವೇನೂ ನಿಯತ ಚಾರಣಿಗರಲ್ಲ ಮತ್ತು ಯಾವುದೇ ಚಾರಣಿಗ ಗುಂಪಿನ ಸದಸ್ಯರಲ್ಲ. ನನಗೆ ಹಿಂದೆ ಒಮ್ಮೆ ಸಾವನದುರ್ಗ ಬೆಟ್ಟ, ದಾಂಡೇಲಿಯ ಕಾಡಿನ ಸಮತಟ್ಟಿನ ದಾರಿಯಲ್ಲೊಮ್ಮೆ ನಡೆದಿದ್ದು, ಮಗದೊಮ್ಮೆ ಹುಣ್ಣಿಮೆ ಬೆಳಕಿನಲ್ಲಿ ಕಳಾವಾರಿ ಬೆಟ್ಟ (ಸ್ಕಂದಗಿರಿಯನ್ನು ) ಹತ್ತಿದ್ದು ಬಿಟ್ಟರೆ ಬೇರೆ ಯಾವುದೇ ಚಾರಣದ ಅನುಭವವಿರಲಿಲ್ಲ. ಉಳಿದ ಗೆಳೆಯರ ಅನುಭವಗಳು ಕೂಡ ಅಷ್ಟಕ್ಕಷ್ಟೆ! ಇದೇ ಕಾರಣದಿಂದ ಕೆಲವು ಚಾರಣಿಗ ಗೆಳೆಯರನ್ನು ಕುಮಾರಪರ್ವತದ ಬಗ್ಗೆ ಕೇಳಿದಾಗ, ಅವರುಗಳ ಚಾರಣದ ರೋಚಕ ಕಥೆಗಳು, ಅಲ್ಲಿ ಪ್ಲಾಷ್ಟಿಕ್ ವಸ್ತುಗಳನ್ನು ಎಸೆಯಬೇಡಿ ಎಂಬ ಬುದ್ಧಿವಾದದ ಮಾತುಗಳ ಅಬ್ಬರದಲ್ಲಿ ಅವರು ಕೊಟ್ಟ ಉಪಯುಕ್ತ ಮಾಹಿತಿಗಳು ಮಸುಕಾಗಿದ್ದವು.ಇದಲ್ಲದೆ ನಾವು ಕೆಲವು ಬ್ಳಾಗುಗಳ ಮೊರೆ ಹೋಗಿ ಬೇಕಾದ ಮಾಹಿತಿ ಸಂಗ್ರಹಿಸಿಕೊಂಡೆವು.


ಕುಕ್ಕೆಯಿಂದ ಚಾರಣ ಪ್ರಾರಂಭ
ರಜಾದಿನವಾಗದೆ, ವಾಹನ ದಟ್ಟಣೆ ಕಡಿಮೆಯಿದ್ದುದರ ಕಾರಣದಿಂದಲೋ ನಿಗದಿತ ಅವಧಿಗೆ ಮುಂಚೆಯೇ ಅಂದರೆ ೪:೪೫ ಕ್ಕೆ ಕುಕ್ಕೆ ತಲುಪಿದೆವು. ಪ್ರಕೃತಿ ಸವಿಯಲು ಹೊರಟಿರುವಾಗ ಪ್ರಕೃತಿ ವಿರುದ್ಧವಾದ ಹಲ್ಲು ಉಜ್ಜುವುದಕ್ಕೆ ನನ್ನ ಮೂರೂ ಗೆಳೆಯರು ನಿರಾಕರಿಸಿ ಅಲ್ಲೇ ಇದ್ದ ಒಂದು ಉಪಹಾರ ದರ್ಶಿನಿಯಲ್ಲಿ ಇಡ್ಲಿ ಮತ್ತು ಕಾಫಿಗಳಿಗೆ ಆಙ್ನೆಯಿತ್ತರು. ನಾನು ಅಲ್ಲೇ ಕೈ ತೊಳೆಯುವ ನಲ್ಲಿಯಲ್ಲಿ ಹಲ್ಲುಜ್ಜಿ ಅವರನ್ನು ಸೇರಿ ಬೆಳಗಿನ ತಿಂಡಿ ಮುಗಿಸಿ ಸುಮಾರು ೫:೩೦ ಕ್ಕೆ ಪರ್ವತದ ತಪ್ಪಲಾದ ಚಾರಣದ ಪ್ರಾರಂಭ ಬಿಂದುವನ್ನು ತಲುಪಿದೆವು.ಇನ್ನೂ ಬೆಳಕಾಗದೆ ಇದ್ದುದರಿಂದ ಮತ್ತು ಹಾವು ಹುಳ-ಹಪ್ಪಟೆಗಳ ಭಯದಿಂದ ೬:೧೫ ರವರೆಗೂ ಬೆಟ್ಟದ ತಪ್ಪಲಿನಲ್ಲಿ ಹರಟೆಗೆ ಜಾರಿದೆವು. ಇಲ್ಲಿಂದ ಕುಮಾರ ಪರ್ವತ ಶಿಖರಕ್ಕೆ ೧೩ ಕಿ ಮೀ ಗಳು.

ಮರಗಳ ಮಧ್ಯೆ ಇದ್ದ ಪಕ್ಷಿಯ ಛಾಯಾಚಿತ್ರವನ್ನು ಸೆರೆ ಹಿಡಿದಿದ್ದು ಹೀಗೆ (ಪಕ್ಷಿಯ ಹೆಸರು ಗೊತ್ತಿಲ್ಲ)

೬:೧೫ ರ ಮುಸುಕಿನಲ್ಲೆ ನಮ್ಮ ಚಾರಣ ಪ್ರಾರಂಭವಾಯಿತು. ಮುಂಜಾನೆಯ ಹಕ್ಕಿಗಳ ಚಿಲಿ ಪಿಲಿ ಕಲರವದ ನಡುವೆ, ಆರಂಭ ಶೂರತ್ವ ಸೇರಿ ಎಲ್ಲರೂ ಉಲ್ಲಾಸದಾಯಕವಾಗಿ ನಡೆಯತೊಡಗಿದೆವು. ತಂದಿದ್ದ ಪಾನೀಯಗಳಿಂದ ಅಲ್ಲಲ್ಲಿ ದಣಿವಾರಿಕೊಂಡು ಅಷ್ಟೇನು ಗೊಣಗಾಡದೆ ಸುಮಾರು ೩ ಕಿ ಮೀ ಹತ್ತಿ ಬಂದಾಗ ಒಂದು ದಾರಿ ಕವಲೊಡೆಯಿತು. ಅಲ್ಲಿ ಯಾರೋ "ನೀರು ಸಿಗುವ ಜಾಗ" ಎಂದು ಒಂದು ಬಿಳಿ ಹಾಳೆಯಲ್ಲಿ ಬರೆದು ನೇತು ಹಾಕಿದ್ದರು. ಆಗ ಅರಣ್ಯ ಇಲಾಖೆಯವರು ಪರ್ವತದ ತಪ್ಪಲಿನಲ್ಲಿ ಹಾಕಿದ್ದ ಹಲಗೆಯಲ್ಲಿ ನೀರು ಸಿಗುವ ಜಾಗಗಳಲ್ಲಿ ಮೊದಲನೆಯದಾದ ಭೀಮನಕಲ್ಲು ಎಂಬುದು ಇದೇ ಎಂದು ನೆನಪಿಗೆ ಬಂತು. ನಮ್ಮಲ್ಲಿ ನೀರಿನ ಕೊರತೆ ಇಲ್ಲವಾದದ್ದರಿಂದ ಭೀಮನಕಲ್ಲಿನ ನೀರಿನ ಒರತೆಯವರೆಗೆ ನಡೆದು ಶ್ರಮ ವ್ಯಯಿಸುವ ಧೈರ್ಯ ತೋರಲಿಲ್ಲ. ಇನ್ನೊಂದು ಕಿ ಮೀ ಮೇಲೆ ಹತ್ತಿ ದಣಿವಾರಿಸಿಕೊಳ್ಳುತ್ತಿದ್ದಾಗ ಯಾರೋ ಒಬ್ಬರು ತಲೆಯ ಮೇಲೆ ಮೂಟೆಯನ್ನು ಹೊತ್ತೊಯ್ಯುತ್ತಿದ್ದರು. ಅವರು ಭಟ್ಟರ ಮನೆಯವರು ಎಂಬುದು ತಿಳಿಯಲಾಗಿ ನಾವು ಕುಳಿತಿದ್ದ ಸ್ಥಳದಿಂದ ಭಟ್ಟರ ಮನೆ ಇನ್ನೆರಡು ಕಿ ಮೀ ಗಳು ಎಂದು ತಿಳಿದು ಏರತೊಡಗಿದೆವು. ದಾರಿಯುದ್ದಕ್ಕೂ ಹಕ್ಕಿಯ ಚಿಲಿಪಿಲಿ ಹೆಚ್ಚಾಗಿದ್ದರೂ ಆ ಪಕ್ಷಿಗಳನ್ನು ಕಾಣಲಾಗದೆ ಇದದ್ದುದರಿಂದ ನನಗೆ ದು:ಖವಾಗುತ್ತಿತ್ತು.(ಕೊನೆಗೆ ಯಾವುದೋ ಒಂದು ಕುಪ್ಪಳಿಸುವ ಪಕ್ಷಿ ಕಾಣಿಸಿತಾದರೂ, ನನ್ನ ಕ್ಯಾಮರಾಗೆ ಸೆರೆ ಸಿಕ್ಕಲಿಲ್ಲ). ಈ ವಿಷಯದ ಬಗ್ಗೆ ನನ್ನ ಗೆಳೆಯರು ನನ್ನನ್ನು ಹಾಸ್ಯ ಮಾಡುತ್ತಾ ಮುಂದುವರೆದರು.


ಭಟ್ಟರ ಮನೆ/ಗಿರಿಗದ್ದೆ ಜೋಯಿಸರ ಮನೆ
ಬಹಳಷ್ಟು ಮಂದಿಗೆ ಕುಮಾರ ಪರ್ವತದ ಬಗ್ಗೆ ಗೊತ್ತಿಲ್ಲದಿದ್ದರೂ ಈ ಭಟ್ಟರ ಮನೆಯ ಬಗ್ಗೆ ಗೊತ್ತಿರುತ್ತದೆ! ಇನ್ನು ಕೇವಲ ಎರಡೇ ಕಿ ಮೀ ಗಳು ಎಂದು ತಿಳಿದು ನಮ್ಮ ಮಾಮೂಲಿ ವೇಗಕ್ಕಿಂತ ಸ್ವಲ್ಪ ರಭಸವಾಗಿಯೇ ಏರಲು ಶುರು ಉಮಾಡಿದೆವು. ಆಗಲೇ ಸೂರ್ಯ ತನ್ನ ಝಳಪಿನಿಂದ ನಮ್ಮ ತಲೆಯನ್ನು ಕುಕ್ಕತೊಡಗಿದ್ದರಿಂದ ನಮಗೆ ಆ ೨ ಕಿ ಮೀಗಳು ಪೂರೈಸಲು ಹೆಣಗುತ್ತಿದ್ದಾಗ ನಮ್ಮ ಹಿಂದೆ ೩ ಜನದ ಇನ್ನೊಂದು ಚಾರಣಿಗ ಗುಂಪು ಪೀಪಿ ಊದುತ್ತಾ ಬಂದರು. ಅವರು ೭:೧೫ ಕ್ಕೆ ಪ್ರಾರಂಭಿಸಿ ನಮಗಿಂತಾ ವೇಗವಾಗಿ ಹತ್ತಿದ್ದನ್ನು ಕೇಳಿ ಸ್ವಲ್ಪ ಆಶ್ಚರ್ಯವಾಯಿತಾದರೂ, ಅವರ ಚೀಲಗಳು ನಮ್ಮ ಚೀಲಗಳಂತೆ ಉಬ್ಬಿರದೆ ಹಗುರಾಗಿದ್ದದ್ದನ್ನು (ಆ ಗುಂಪಿನದು ಅಂದು ಭಟ್ಟರ ಮನೆಯಲ್ಲೇ ತಂಗುವ ಯೋಜನೆಯಿತ್ತು) ಕಂಡು ನಮ್ಮ ಚೀಲಗಳನ್ನೂ ಮತ್ತು ಇನ್ನೆರಡೇ ಕಿ ಮೀ, ಬಹಳ ಹತ್ತಿರ ಎಂದು ಹೇಳಿ ಹೋದ ಭಟ್ಟರ ಮನೆಯ ಮನುಷ್ಯನನ್ನು ಬೈದುಕೊಂಡೆವು. ಪರರನ್ನು ಶಪಿಸಿ ಸಿಗುವ ವಿಕೃತ ಸಂತೋಷಕ್ಕೆ ದಣಿವಾರಿಸುವ ಶಕ್ತಿ ಕೂಡ ಇದೆ ಎಂದೆನೆಸುತ್ತಿತ್ತು ಆ ಕ್ಷಣದಲ್ಲಿ.

ಭಟ್ಟರ ಮನೆಯ ಮುಂದಿನ ದಾಸವಾಳ ಗಿಡದ ಹೂವಿನಲ್ಲಿ ಮಕರಂದ ಹೀರಲು ಬಂದ ಹೂವಿನ ಹಕ್ಕಿ ನನ್ನ ಕ್ಯಾಮರಾಗೆ ಸೆರೆ ಸಿಕ್ಕಿದ್ದು ಹೀಗೆ!

ಕೊನೆಗೂ ೧೦:೩೦ ಕ್ಕೆ (ಬೆಟ್ಟದ ತಪ್ಪಲಿನಿಂದ ೬ ಕಿ ಮೀ ಚಾರಣ) ಭಟ್ಟರ ಮನೆಗೆ ತಲುಪಿದಾಗ ಊಟದ ಅಪೇಕ್ಷೆಯಲ್ಲಿ ಅತೀವ ಆನಂದವಾಯಿತು. ಭಟ್ಟರೇ ಎದುರಿಗೆ ಸಿಕ್ಕಿದರಾದರೂ ಅವರ ಕಡೆ ಕೂಡ ನೋಡದೆ ಮನೆಯ ಒಳಗೆ ನುಗ್ಗಿದೆವು. ಕೊನೆಗೆ ಭಟ್ಟರು ಒಳಗೆ ಬಂದಾಗ ಅವರೇ ಭಟ್ಟರೆಂದು ತಿಳಿದು ಊಟಕ್ಕೆ ವ್ಯವಸ್ಥೆ ಮಾಡಬೇಕೆಂದು ಕೋರಿದೆವು. ಭಟ್ಟರು ಊಟ ೧ ಘಂಟೆಗೆ ಸಿದ್ಧವಾಗುವುದೆಂದು ತಿಳಿಸಿದಾಗ ನನ್ನ ಗೆಳೆಯರು ನಿದ್ದೆಗೆ ಜಾರಿದರು. ನಾನು ಮಾತ್ರ ಭಟ್ಟರ ಮನೆಯ ಎದುರಿಗಿದ್ದ ದಾಸವಾಳ ಗಿಡದ ಹೂವಿನಲ್ಲಿ ಮಕರಂದ ಹೀರಲು ಬರುತ್ತಿದ್ದ ಹೂವಿನ ಪಕ್ಷಿಯ (SunBird /Humming Bird?) ಫೋಟೋ ತೆಗೆಯುವುದರಲ್ಲಿ ಮಗ್ನನಾದೆ. ನಂತರ ಭಟ್ಟರ ಮನೆಯ ಶೌಚಾಲಯದಲ್ಲಿ ಮಲವಿಸರ್ಜನೆ ಮಾಡಿ, ಹೊಟ್ಟೆ ತುಂಬಾ ಊಟ ಮಾಡಿ ಭಟ್ಟರಿಗೆ ೨೦೦ ರೂ ಗಳನ್ನು ಕೊಟ್ಟು ೧:೩೦ ಕ್ಕೆ ಮುಂದಿನ ಗುರಿ ತಲುಪಲು ಆಣಿಯಾದೆವು.

ಮುಂದಿನ ಗುರಿ ಮಂಟಪ
ಪರ್ವತದ ತಪ್ಪಲಿನಿಂದ ೮ ಕಿ ಮೀ ದೂರದಲ್ಲಿರುವ ಮಂಟಪದಲ್ಲಿ ಟೆಂಟ್ ಹಾಕಿ ತಂಗುವುದೆಂದು ಈ ಮೊದಲೇ ನಿಶ್ಚಯಿಸಿದ್ದೆವು. ಬೇಗ ತಲುಪಿದರೆ ಪರ್ವತದ ತುದಿಗೆ ಹೋಗಿ ಅಲ್ಲೇ ತಂಗಬಹುದೆಂದು, ಸುಡುವ ಬಿಸಿಲಿನಲ್ಲಿ ಬಿರು ಬಿರನೆ ಹೆಜ್ಜೆ ಹಾಕತೊಡಗಿದೆವು. ಭಟ್ಟರ ಮನೆಯಿಂದ ಸ್ವಲ್ಪ ದೂರದಲ್ಲಿ ಅರಣ್ಯ ಇಲಾಖೆಯ ಕಛೇರಿಯಲ್ಲಿ ಒಬ್ಬರಿಗೆ ತಲಾ ೧೧೫ ರಂತೆ (ರೂ ೪೦ ಪ್ರವೇಶ ಶುಲ್ಕ + ೭೫ ಚಾರಣ ಶುಲ್ಕ) ಶುಲ್ಕ ಕಟ್ಟಿ, ರಸೀತಿ ಪಡೆದು, ಸಿಬ್ಬಂದಿಯಿಂದ ಪ್ಲಾಶ್ಟಿಕ್ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕುವಂತೆ ಕೋರಿಸಿಕೊಂಡು ಮುಂದೆ ಹೆಜ್ಜೆ ಹಾಕತೊಡಗಿದೆವು. ಅಲ್ಲಲ್ಲಿ ವಿಶ್ರಮಿಸಿ ಭಟ್ಟರ ಮನೆಯಿಂದ ಸುಮಾರು ೧ ಕಿ ಮೀ ನಡೆದ ಮೇಲೆ ಚಾರಣ ಬೇಕಾಗಿತ್ತೇ ಎನ್ನಿಸತೊಡಗಿತ್ತು! ಪಿಂಗ ತನ್ನ ಮನೆಯಲ್ಲಿ ತಕ್ಷಣದ ಬಟ್ಟಲು ಶ್ಯಾವಿಗೆಯನ್ನು (instant cup noodles) ಚೀಲದಲ್ಲಿ ತುಂಬಿಸುವಾಗ ಅವರಮ್ಮ ಕೋಪದಿಂದ ಕೇಳಿದ ಮಾತು "ಏನು ಈ ಶ್ಯಾವಿಗೆ ತಿನ್ನೋಕೆ ಬೆಟ್ಟದ ಮೇಲೆ ಹೋಗಬೇಕಾ? ಮನೇಲ್ಲಿ ತಿಂದರೆ ಆಗಲ್ವಾ?" ಎಂಬುದು ಇಲ್ಲಿಯವರೆಗೂ ತಮಾಷೆಯ ವಸ್ತುವಾಗಿದ್ದರೂ ಈಗ ಅದಕ್ಕೆ ತಾತ್ವಿಕ ಮೆರುಗು ಸಿಕ್ಕಿತ್ತು!ಸದಾಲು ಗೊಣಗುತ್ತಿರುವ ಪಿಂಗ ಈಗ ಕೂತಲ್ಲೆಲ್ಲಾ ತತ್ವ ಙ್ನಾನಿಯಂತೆ ಯೋಚಿಸತೊಡಗಿದ್ದ!ಈಗ ಯಾರನ್ನಾದರೂ ಬೈದುಕೊಳ್ಳಲೂ ಸಹ ಶಕ್ತಿಯಿರಲಿಲ್ಲ.ನಮ್ಮ ಗುರಿ ಸನಿಹವಾಗುತ್ತಿದ್ದಂತೆ ದಾರಿಯ ಏರು ಜಾಸ್ತಿಯಾಗುತ್ತಿತ್ತು. ಕೊನೆಗೆ ನಮ್ಮ ಜೊತೆಯಲ್ಲೇ ಹತ್ತುತ್ತಿದ್ದ ಧರ್ಮ (ಇದು ಭಟ್ಟರ ಮನೆಯಿಂದ ನಮ್ಮನ್ನು ಕೂಡಿಕೊಂಡ ನಾಯಿ, ಪಿಂಗ ಮಹಾಭಾರತದ ಪಾಂಡವರು ವನವಾಸಕ್ಕೆ ಕಾಡಿಗೆ ಹೊರಟಾಗ ಹಿಂಬಾಲಿಸಿದ ನಾಯಿಯ ಕಥೆ ಹೇಳಿ, ನಮ್ಮ ಜೊತೆಗೆ ಬಂದ ನಾಯಿಗೂ ಧರ್ಮ ಎಂದು ನಾಮಕರಣ ಮಾಡಿದ್ದ!) ಇದ್ದಕ್ಕಿದ್ದಂತೆ ಓಡಲು ಶುರು ಮಾಡಿತು.ಆಗಲೇ ನಮಗೆ ಮಂಟಪ ಇಲ್ಲೇ ಹತ್ತಿರದಲ್ಲಿರಬಹುದೆಂಬ ಸುಳಿವು ಸಿಕ್ಕಿದ್ದು. ಮಂಟಪದ ಹತ್ತಿರದಲ್ಲಿದ್ದ ನೀರಿನ ಗುಂಡಿಯಲ್ಲಿ ಧರ್ಮ ದಣಿವಾರಿಸಿಕೊಳ್ಳುತಿತ್ತು.ಕೊನೆಗೂ ನಮಗೆ ನಮ್ಮ ಗುರಿ ಕಂಡು ಸಂತಸವಾಗಿ ಅಲ್ಲೇ ಇದ್ದ ನೀರಿನ ಕುಳಿಯಲ್ಲಿ ನಮ್ಮ ಬಾಟಲಿಗಳಿಗೆ ನೀರು ತುಂಬಿಸಿ ಮಂಟಪವನ್ನು ಸೇರಿದೆವು.ಸಮಯ ೪:೦೦ ಕಳೆದಿತ್ತು.ಮುಂದೆ ನಡೆಯುವ ಉತ್ಸಾಹ ಕುಂದಿತ್ತು!

ಕೆಳಗಿನಿಂದ ಕಂಡ ಮಂಟಪ/ಕಲ್ಲು ಚಪ್ಪಡಿ

ಆ ರಾತ್ರಿ ಕಳೆದೆವು!
ಮಂಟಪ ಸೇರಿದ ಮೇಲೆ ಸ್ವಲ್ಪ ವಿಶ್ರಾಂತಿಯ ನಂತರ ಮತ್ತೆ ಕರ್ಮಕ್ಕೆ ಜಿಗಿದೆವು. ಟೆಂಟ್ ನ ಚೀಲವನ್ನು ಬಿಚ್ಚಿ,ಗುಳಿ ಹೊಡೆದು, ಹಗ್ಗ ಬಿಗಿದು ಟೆಂಟ್ ಕಟ್ಟಲು ಕಷ್ಟವೇನೂ ಆಗಲಿಲ್ಲ. ಅಲ್ಲೇ ಮಂಟಪದ ಪಕ್ಕದಲ್ಲಿದ್ದ ಸ್ವಲ್ಪ ಸಮತಟ್ಟಾದ ಜಾಗದಲ್ಲಿ ಮಲಗಿದಾಗ ಒತ್ತದೆ ಇರಲಿ ಎಂದು ಪಕ್ಕದಲ್ಲೇ ಸಮೃದ್ಧವಾಗಿ ಬೆಳೆದಿದ್ದ ಹುಲ್ಲನ್ನು ಕುಯ್ದು ಹಾಕಿ ಅದರ ಮೇಲೆ ಟೆಂಟ್ ನಿರ್ಮಿಸಿದೆವು.ಕಲ್ಲುಗಳನ್ನು ಜೋಡಿಸಿ, ಒಣ ಕಟ್ಟಿಗೆಗಳನ್ನು ಆಯ್ದು ಒಲೆ ಹಾಕಿ ನೀರು ಕಾಯಿಸಲು ಶುರು ಮಾಡಿದೆವು.ಕುಂಟ ತಂದಿದ್ದ ಸೀಮೆ ಎಣ್ಣೆ ಮತ್ತು ಪಿಂಗ ತನ್ನ ಮನೆಯಲ್ಲಿ ನೀರೊಲೆಯಲ್ಲಿ ಸೌವ್ದೆ/ಕಟ್ಟಿಗೆ ಹಾಕಿ ನೀರು ಕಾಯಿಸಿದ ಅನುಭವ, ಉಪಯೋಗಕ್ಕೆ ಬಂತಾದರೂ, ಬೀಸುತ್ತಿದ್ದ ಗಾಳಿಯಿಂದ ಬೆಂಕಿಯನ್ನು ಆರದೆ ಇರುವಂತೆ ಮಾಡಲು ಹರ ಸಾಹಸ ಪಟ್ಟೆವು. ಕೊನೆಗೆ ಬೆಚ್ಚಗಿನ ನೀರನ್ನೆ ಬಟ್ಟಲು ಶ್ಯಾವಿಗೆಗೆ ಹಾಕಿ ಅರೆ ಬೆಂದ ಶ್ಯಾವಿಗೆ ಮತ್ತು ಇನ್ನಿತರ ಕುರುಕಲು ತಿಂಡಿಯನ್ನು ತಿಂದೆವು!ಸೂರ್ಯಾಸ್ತ ಶಿಖರಗಳ ನಡುವೆ ಅಂದವಾಗಿ ಕಾಣಿಸಿತು.ರಾತ್ರಿ ಏಳು ಗಂಟೆಗೆ ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಾ ಅದ್ಭುತವಾದ ದೃಶ್ಯ ನಿರ್ಮಾಣವಾಗಿತ್ತು. ಆದರೆ ಆ ದೃಶ್ಯವನ್ನು ಸವಿಯುವ ಕ್ಷಮತೆ ಯಾರಲ್ಲೂ ಇರಲಿಲ್ಲ.ಎಲ್ಲರೂ ಟೆಂಟಿನೊಳಗೆ ಜಾರಿದೆವು.ಆನೆ ತಾನು ಟೆಂಟಿನ ಹೊರಗೆ ಮಲಗುವುದೆಂದು ನಿಶ್ಚಯಿಸಿ ತನ್ನ ನಿದ್ರಾ ಚೀಲ (sleeping bag) ತಂದಿದ್ದನಾದರೂ ಕೊನೆಯ ಗಳಿಗೆಯಲ್ಲಿ ಕಾಡಿನಲ್ಲಿರದ ಕಾಡುಪ್ರಾಣಿಗಳಿಗೆ ಹೆದರಿ ಟೆಂಟಿನೊಳಗೆ ಮಲಗಲು ಬಂದದ್ದಲ್ಲದೆ, ಟೆಂಟಿನ ಅರ್ಧ ಭಾಗವನ್ನು ಆಕ್ರಮಿಸಿಕೊಂಡು ಯಾರೂ ಹೊರಳಾಡದಂತೆ ಮಾಡಿದ.ಆನೆ ದೂರದ ಕುಕ್ಕೆಯ ಯಾವುದೋ ಬೀದಿ ದೀಪ ನೋಡಿ ಆ ದೀಪ ನಮ್ಮ ಕಡೆಗೇ ಬರುತ್ತಿದೆಯೆಂದು ಹೆದರಿಸುವದಕ್ಕೂ, ಪಿಂಗ ಎನೋ ಶಬ್ದ ಕೇಳಿ, ಕಾಡುಪ್ರಾಣಿಗಳಿರಬಹುದೆಂದು ಊಹಿಸಿ ನಮ್ಮನ್ನು ನಿಶ್ಯಬ್ದಗೊಳಿಸುವುದಕ್ಕೂ, ಅಲ್ಲೇ ಇದ್ದ ನೀರಿನ ಹೊಂಡದಿಂದ ಕಪ್ಪೆ ವಟರ್‍ ಗುಟ್ಟುವದಕ್ಕೂ, ಸಿಕ್ಕಾಪಟ್ಟೆ ಶಬ್ದ ಮಾಡಿ ಜೋರಾಗಿ ಬೀಸುತ್ತಿದ್ದ ಗಾಳಿ ಟೆಂಟನ್ನು ಎಲ್ಲಿ ಹಾರಿಸಿಬಿಡುವುದೋ ಎಂಬ ಭಯಕ್ಕೂ, ನಮ್ಮ ಕಾಲು ನೋವುಗಳು ಸೇರಿ ಯಾರಿಗೂ ನಿದ್ದೆ ಹತ್ತಲಿಲ್ಲ. ಗಂಟೆ ಗಂಟೆಗೂ ಗಡಿಯಾರ ನೋಡಿ ಇನ್ನೂ ಬೆಳಗಾಗಲಿಲ್ಲವೆಲ್ಲಾ ಎಂದು ಶಪಿಸಿಕೊಂಡು, ಒಬ್ಬರಿಗೊಬ್ಬರು ಇನ್ನೊಬ್ಬ ಚೆನ್ನಾಗಿ ಗೊರಕೆ ಹೊಡೆದು ನಿದ್ದೆ ಮಾಡಿದನೆಂದು ಬೈದುಕೊಂಡು ಗೊಣಗಿಡುತ್ತಿದ್ದಾಗ ಗಂಟೆ ಐದಾಯಿತು. ನೆನ್ನೆಯೇ ನಿಶ್ಚಯಿಸಿದಂತೆ ೬ ಗಂಟೆಗೆ ಹೊರಡುವುದೆಂದಿತ್ತು.೫ ಗಂಟೆಗೆ ನಾನು ಉಳಿದವರನ್ನು ಎಬ್ಬಿಸಲು ಪ್ರಯತ್ನಿಸಲು ಅವರಿಗೆಲ್ಲಾ ಆಗ ತಾನೆ ನಿದ್ದೆ ಹತ್ತಿದೆಯೆಂದು ಕಾದಾಟಕ್ಕೇ ಇಳಿದರು! ಕೊನೆಗೆ ಟೆಂಟನ್ನು ಅಳ್ಳಾಡಿಸಿ ಎಲ್ಲರನ್ನೂ ಎಬ್ಬಿಸಿ ನಾನೇ ಗೆದ್ದೆ. ನಂತರ ನಿತ್ಯಕರ್ಮದಲ್ಲಿ ಒಂದಾದ ಮಲವಿಸರ್ಜನೆಯನ್ನು ಮುಗಿಸಿ ಉಳಿದ ಬ್ರೆಡ್ ಜಾಮ್ ಮತ್ತು ಸಾಸ್ ಗಳನ್ನು ಹೊಟ್ಟೆಗೆ ತುಂಬಿಸಿ, ಬಿಸ್ಕಟ್ ಗಳನ್ನು ಧರ್ಮನ ಹೊಟ್ಟೆಗೆ ತುಂಬಿಸಿ, ನೀರನ್ನು ಬಾಟಲಿಗಳಿಗೆ ತುಂಬಿಸಿ ಮುಂದಿನ ಸಿದ್ಧಿಗೆ ಹೊರಡಲು ಪ್ರಾರಂಭಿಸಿದಾಗ ಗಂಟೆ ೭:೩೦.


(ಮೇಲೆ) ಮಂಟಪದಲ್ಲಿ ಅಡುಗೆ ಭಟ್ಟ ಪಿಂಗ, ನೀರು ಕಾಯಿಸಲು ಆಣಿಯಾಗುತ್ತಿರುವುದು, ನಮ್ಮ ಟೆಂಟನ್ನೂ ಕೂಡ ಕಾಣಬಹುದು
(ಬಲ) ಮಂಟಪದಿಂದ ಕಂಡ ಸೂರ್ಯಾಸ್ತ
(ಕೆಳಗೆ) ನಾವು ಹಾಕಿದ ಒಲೆ ಮತ್ತು ನಾವು


ಶೇಷಪರ್ವತ / ಕುಮಾರ ಪರ್ವತ ಮತ್ತು ಮುಂದೆ?
ಮೊದಲೇ ಭಟ್ಟರ ಮನೆಯಲ್ಲಿ ಕೇಳಿಕೊಂಡಂತೆ ಮಂಟಪದಿಂದ ಕುಮಾರಪರ್ವತದ ತುದಿಗೆ ೫ ಕಿ ಮೀ. ಇವುಗಳ ಮಧ್ಯೆ ಶೇಷಪರ್ವತ ಸಿಗುತ್ತದೆ, (ಮಂಟಪದಿಂದ ೨.೫ ಕಿ ಮೀ) ಅಲ್ಲಿ ಬಂಡೆಗಳ ಮಧ್ಯೆ ನೀರು ಸಿಗುತ್ತದೆ ಎಂದು ಕೂಡ ಹೇಳಿದ್ದರು. ಪರ್ವತದ ತಪ್ಪಲಿನಿಂದ ಭಟ್ಟರ ಮನೆವರೆಗೂ ಕಾಡಿನ ಹಾದಿ. ಮರಗಳ ನೆರಳು, ನಡೆಯಲು ಅಷ್ಟೇನು ತ್ರಾಸವಾಗುವುದಿಲ್ಲ. ಆದರೆ ಭಟ್ಟರ ಮನೆಯಿಂದ ಮಂಟಪ, ಮಂಟಪದಿಂದ ಶೇಷ ಪರ್ವತದ ವೆರೆಗೂ ಹುಲ್ಲುಗಾವಲಿನ ದಾರಿ. ಮರಗಳಿಲ್ಲ, ಆದ್ದರಿಂದ ಈ ದಾರಿಗಳಲ್ಲಿ ಚಾರಣಿಸುವಾಗ ಬಿಸಿಲಿಲ್ಲದ ಸಮಯವನ್ನು ಆಯ್ಕೆ ಮಾಡಿಕೊಂದರೆ ಸೂಕ್ತ! ನಾವು ಶೇಷ ಪರ್ವತವನ್ನು ಹುಡುಕಿ ನಡೆಯತೊಡಗಿದೆವು. ಮಂಟಪದಿಂದ ಮುಂದಿನ ದಾರಿ ಸ್ವಲ್ಪ ಏರು ಜಾಸ್ತಿ ಎನ್ನಬಹುದು. ಹಾದಿಯೆಲ್ಲ ಸುಮಾರು ೫೦-೭೦ ಡಿಗ್ರೀ ಕೋನದಲ್ಲಿರುವವು. ನಡೆಯಲು ಅಷ್ಟೇನೂ ದುರ್ಗಮವಲ್ಲದೇ ಇದ್ದರೂ, ಬಹಳ ದಣಿವನ್ನುಂಟುಮಾಡುವ ಏರು ರಸ್ತೆಗಳು, ಬಾರೆಗಳು. ಸುಮಾರು ೨.೫ ಕೆ ಮೀ ದೂರ ಕ್ರಮಿಸಿದಾಗ ಬಹಳಷ್ಟು ಬಂಡೆಗಳು ಕಂಡವಾದರೂ ಎಲ್ಲೂ ನೀರು ಕಾಣಿಸಲಿಲ್ಲ. ಧರ್ಮ ಕೂಡ ಓಡಿ ಹೋಗಿ ನೀರು ಕುಡಿದಿದ್ದು ಕಂಡು ಬರಲಿಲ್ಲ. ಮುಂದೆ ಮತ್ತೆ ಕಾಡಿನ ದಾರಿ ಪ್ರಾರಂಭವಾಯಿತು, ಅಲ್ಲಿ ನಾವು ಬೆಂಗಳೂರಿನಿಂದ ಬಂದ ಸುಮ್ಮಾರು ೧೦ ಜನರ ತಂಡವೊಂದು ಎದುರಾಯಿತು. ಅವರು ಹಿಂದಿನ ದಿನ ಸೋಮವಾರ ಪೇಟೆಯ ಕಡೆಯಿಂದ ಚಾರಣ ಪ್ರಾರಂಭಿಸಿ ಅಲ್ಲೇ ಟೆಂಟ್ ಹಾಕಿದ್ದರು. ಅವರ ಗುಂಪಿನಲ್ಲಿ ಇಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲಾ ಕುಮಾರಪರ್ವತವನ್ನು ೫-೬ ಬಾರಿ ಹತ್ತಿದವರಂತೆ! ಅದಕ್ಕೆ ಬಹುಶ: ಹೇಳುವುದು, ಕುಮಾರಪರ್ವತ ಚಾರಣಿಗರ ಸ್ವರ್ಗವೆಂದು. ನಮಗಿನ್ನೂ ಆ ಸ್ವರ್ಗ ನೋಡಲು ೨.೫ ಕಿ ಮೀ ನಡೆಯುವ ಅವಶ್ಯಕತೆಯಿತ್ತು.ಈಗ ನಾವು ಕೆಳಗೆ ಹಿಂತಿರುಗುವ ಯೋಜನೆಯ ಬಗ್ಗೆ ಚರ್ಚಿಸಲು, ಶಿಖರದ ತುದಿಯಿಂದ ೫ ಕಿಮೀ ಸೋಮವಾರ ಪೇಟೆಯ ಕಡೆಗೆ ತಗ್ಗಿನಲ್ಲಿ ಇಳಿದರೆ ಹೆಗ್ಗಡೆ ಮನೆ (ಊರಿನ ಹೆಸರು) ತಲುಪಬಹುದು, ಕ್ರಮಿಸಬೇಕಾದ ದೂರವೂ ಕಡಿಮೆ ಮತ್ತು ಪೂರ್ತಿ ಕಾಡಿನ ದಾರಿ, ದಣಿವಾಗುವುದು ಕಡಿಮೆ ಎಂದೆಣಿಸಿ ಸೋಮವಾರ ಪೇಟೆಯ ಕಡೆಗೇ ಇಳಿಯುವುದೆಂದು ನಿಶ್ಚಯಿಸಿದೆವು. ಆದರೆ ಇಲ್ಲಿದ್ದ ಒಂದು ತಾಂತ್ರಿಕ ತೊಂದರೆಯೆಂದರೆ, ಹೆಗ್ಗಡೆ ಮನೆಯ ಅರಣ್ಯ ಇಲಾಖಾ ಕಛೇರಿ ಯಿಂದ ಮತ್ತೆ ೪ ಕಿ ಮೀ ನಡೆದರೆ ಬೀದಳ್ಳಿ ಎಂಬ ಊರು ಸಿಗುತ್ತದೆ. ಅಲ್ಲಿಂದ ಮಾತ್ರ ನಮಗೆ ಸೋಮವಾರ ಪೇಟೆಗೆ ಬಸ್ ಸಿಗುವುದು. ಕೊನೆಯ ಬಸ್ ೩:೩೦ ಕ್ಕೆ ಮಾತ್ರ. ಅಂದರೆ ಕನಿಷ್ಟ ಪಕ್ಷ ೧:೩೦ ಕ್ಕಾದರೂ ನಾವು ಹೆಗ್ಗಡೆ ಮನೆ ತಲುಪಬೇಕು, ಇಲ್ಲದಿದ್ದರೆ ಮತ್ತೊಂದು ದಿನ ಟೆಂಟ್ ನಲ್ಲಿ ಕಳೆಯಬೇಕು. ಅಥವಾ ಅರಣ್ಯ ಸಿಬ್ಬಂದಿಯನ್ನು ನಮಗೆ ಸೋಮವಾರ ಪೇಟೆಯವರೆಗೂ ತಲುಪಿಸಲು ಯಾವುದಾದರೂ ವಾಹನದ ವ್ಯವಸ್ಥೆ ಮಾಡಿಕೊಡಲು ಕೋರಬೇಕು. ಹೀಗೆ ಅನಿಶ್ಚಯಗಳ ನಡುವೆಯೂ ಭಂಡ ಧೈರ್ಯದಿಂದ ಹೆಜ್ಜೆ ಹಾಕತೊಡಗಿದೆವು.




ಕುಮಾರ ಪರ್ವತ/ಪುಷ್ಪಗಿರಿ
ಕೊನೆಗೂ ಒಂದು ಕಡಿದಾದ ಬಂಡೆಯೇರಿ ಸ್ವಲ್ಪ ಮೇಲೆ ನಡೆದಾಗ ಕುಮಾರ ಪರ್ವತ ಸಿಕ್ಕೇಬಿಟ್ಟಿತು. ಕರ್ನಾಟಕದ ಎರಡನೇ ಅತಿ ದೊಡ್ಡ ಶಿಖರವನ್ನು (ಸಮುದ್ರ ಮಟ್ಟಕ್ಕಿಂತ ೫೬೧೨ ಅಡಿಗಳು) ಕಾಲ್ನಡಿಗೆಯಲ್ಲಿ ಏರಿದ ತೃಪ್ತಿಯಿತ್ತು.ಹಿಂದೆ ಕರ್ನಾಟಕದ ಅತಿ ದೊಡ್ಡ ಶಿಖರವಾದ ಮುಳ್ಳಯ್ಯನ ಗಿರಿಯನ್ನು (ಚಿಕ್ಕಮಗಳೂರು ಜಿಲ್ಲೆ - ಸಮುದ್ರ ಮಟ್ಟಕ್ಕಿಂತ ೬೩೧೨ ಅಡಿಗಳು) ಮೋಟಾರು ಬಂಡಿಯಲ್ಲಿ ಏರಿದ್ದೆ. ಎರಡೂ ಗಿರಿಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಮುಳ್ಳಯ್ಯನ ಗಿರಿಯಲ್ಲಿ ಸದಾ, ಅದರಲ್ಲೂ ಚಳಿಗಾಲದಲ್ಲಿ ಮೋಡ ಮುಚ್ಚಿ ತಣ್ಣನೆಯ ಹವೆಯಿರುತ್ತದೆ,ಆದರೆ ಕುಮಾರ ಪರ್ವತದಲ್ಲಿ ಬಿಸಿಲಿನ ಝಳಪಿರುತ್ತದೆ, ಆದರೂ ತಣ್ಣನೆಯ ಗಾಳಿ ಬೀಸುತ್ತಿರುತ್ತದೆ.ಪರ್ವತದಲ್ಲಿ ಸ್ವಲ್ಪ ವಿರಮಿಸಿ ಅಲ್ಲಿದ್ದ ಒಂದು ಸಣ್ಣ ಶಿವ ಲಿಂಗ ದೇವಾಲಯವನ್ನು ವೀಕ್ಷಿಸಿ, ಫೋಟೋ ಗಳನ್ನು ಕ್ಳಿಕ್ಕಿಸಿ ಹೆಗ್ಗಡೆ ಮನೆಗೆ ಇಳಿಯಲು ಬಿರುಸಿನ ಹೆಜ್ಜೆ ಹಾಕತೊಡಗಿದಾಗ ಗಂಟೆ ೧೧:೩೦.ಇಲ್ಲಿಗೆ ಧರ್ಮ ತನ್ನ ನಿಯತ್ತನ್ನು ಬದಲಿಸಿ ಬೇರೆ ಗುಂಪನ್ನು ಸೇರಿಯಾಗಿತ್ತು.



ಕುಮಾರಪರ್ವತವನ್ನೇರಿದ ಮೇಲೆ, ಶಿಖರದ ತುದಿಯಲ್ಲಿ ನಿಂತು ವಿಜಯದ ಸಂಕೇತವನ್ನು ತೋರಿಸುತ್ತಿರುವ ನಾವು

ಹೆಗ್ಗಡೆ ಮನೆ
ಪುಷ್ಪಗಿರಿಯಿಂದ ಹೆಗ್ಗಡೆ ಮನೆಯವರೆಗಿನ ದಾರಿ ಕಾಡು ದಾರಿ, ೫ ಕಿ ಮೀ. ದಾರಿಯಲ್ಲಿ ಕೆಲವು ದೊಡ್ಡ ಕಡಿದಾದ ಬಂಡೆಗಳನ್ನು ಇಳಿದೆವು. ನಾವು ಹತ್ತಿದ ದಾರಿಗೆ ಹೋಲಿಸಿದರೆ ಈ ದಾರೆ ಸ್ವಲ್ಪ ಕಡಿದು ಮತ್ತು ದುರ್ಗಮ ದಾರಿ ಎನ್ನಬಹುದು. ಕೆಲವು ೬೦-೮೦ ಡಿಗ್ರೀ ಕೋನದ ದೊಡ್ದ ಬಂಡೆಗಳನ್ನು ಇಳಿಯಬೇಕಾಯಿತು. ನಾನಂತೂ ನನ್ನ ಭಾರವಾದ ದೇಹದ ಗುರುತ್ವಾಕರ್ಷಣ ಕೇಂದ್ರ ಬಿಂದುವನ್ನು (centre of gravity) ನಂಬದೆ ತೆವಳುವುದಕ್ಕೆ ಮೊರೆ ಹೋದೆ. ಇದರಿಂದ ನಡೆಯಲು ಬೇಕಾದ ಸ್ವಲ್ಪ ಶ್ರಮ ಉಳಿಸಿದೆ. ಚಡ್ಡಿ ಮತ್ತು ಚೀಲಗಳನ್ನು ಸವೆಸಿದೆ. ಇಷ್ಟೆಲ್ಲಾ ಕಾಡು ಸುತ್ತಿದರೂ ಒಂದೂ ಕಾಡು ಪ್ರಾಣಿ ಕೂಡ ನೋಡಲು ಸಿಗಲಿಲ್ಲವೆಲ್ಲಾ ಎಂದು ಶಪಿಸಿ ಮುನ್ನಡೆದು ಹೆಗ್ಗಡೆ ಮನೆಯ ಅರಣ್ಯ ಇಲಾಖೆಯ ಕಛೇರಿ ಸೇರಿದಾಗ ೨:೩೦. ಅರಣ್ಯ ಸಿಬ್ಬಂದಿಗಳನ್ನು ಮೋಟಾರು ವಾಹನಕ್ಕೆ ವಿಚಾರಿಸಲಾಗಿ, ಅವರಿಂದ ಋಣಾತ್ಮಕ/ನಕಾರಾತ್ಮಕ ಉತ್ತರ ಬಂದು ಬೀದಳ್ಳಿ ಗೆ ನಡೆದೇ ಹೋಗಬೇಕೆಂದು ಸೂಚಿಸಿದರು. ಹಾದಿ ಅಗಲವಾದ ರಸ್ತೆಯಾದರೂ ೧.೫ ಗಂಟೆಗಳೊಳಗೆ ೪ ಕಿ ಮೀ ಕ್ರಮಿಸಿ ಕನಿಷ್ಟ ೪:೦೦ ಗಂಟೆಯ ಒಳಗಾದರೂ ಬೀದಳ್ಳಿ ಸೇರಿ ಬಸ್ ಹಿಡಿಯಬೇಕಾಗಿತ್ತು. ಅಲ್ಲಿ ಒಬ್ಬ ಸಿಬ್ಬಂದಿ, ಮುಂದೆ ಒಂದು ಕಾಲು ದಾರಿ ಇರುವದಾಗಿ ಹೇಳಿ ಅಲ್ಲಿಂದ ಹೊರಟರೆ ನಾವು ೧ ಕಿ ಮೀ ದೂರವನ್ನು ಉಳಿತಾಯ ಮಾಡಿ ಕೇವಲ ೩ ಕಿ ಮೀ ನಡೆದರೆ ಬೀದಳ್ಳಿ ಮುಟ್ಟಬಹುದೆಂಬ ಸೂಚನೆ ಕೊಟ್ಟರು. ನಾವು ಬೇರೇನು ವಿಧಿಯಿಲ್ಲದೆ (ಟೆಂಟ್ ಹಾಕಬಹುದಾಗಿದ್ದರೂ ನಮ್ಮ ಹೊಟ್ಟೆಗಳಿಗೆ ಬೇಕಾದ ಅಗತ್ಯ ಪ್ರಮಾಣದ ವಸ್ತುಗಳಿಗೆ ಕೊರತೆ ಇತ್ತು!) ಬಾಟಲಿಗಳಲ್ಲಿ ನೀರು ತುಂಬಿಸಿ ಕಾಲಿಗೆ ಬುದ್ಧಿ ಹೇಳಿದೆವು.

ಶಿಖರದ ತುದಿಯಲ್ಲಿನ ದೇವಾಲಯದ ಮೇಲೆ ವಿರಮಿಸುತ್ತಿದ್ದ ಪಕ್ಷಿ (ಹೆಸರು ಗೊತ್ತಿಲ್ಲ)

ನಾಡಿನಲ್ಲೇ ಕಳೆದು ಹೋದೆವು!
ನಮಗೆ ಕಂಡ ಕಾಲು ದಾರಿ ಹಿಡಿದು ಹೊರಟೆವು. ಸಂಶಯವಿದ್ದರೂ ಯಾರಿಗೂ ಹಿಂದೆ ನಡೆದು ಸಂಶಯ ನಿವಾರಿಸಿಕೊಳ್ಳುವಷ್ಟು ಸಮಯ, ಶಕ್ತಿ ಇಲ್ಲದೆ ಹೋದದ್ದರಿಂದ, ಮತ್ತು ಬಸ್ ಹಿಡಯಲೇಬೇಕೆಂಬ ಛಲದಿಂದ ಬಿರುಸಿನ ಹೆಜ್ಜೆ ಹಾಕಿ ಸುಮಾರು ಒಂದೂ ವರೆ ಕಿ ಮೀ ನಡೆದಾಗ, ಚಾರಣಿಗರ ಸ್ವರ್ಗದಿಂದ ಇಳಿದು ಬಂದ ಅದೃಷ್ಟದ ಫಲವೋ ಏನೋ ಅಲ್ಲೇ ಒಬ್ಬ ವ್ಯಕ್ತಿ ದನ ಕಾಯುತ್ತಿದ್ದುದು ಕಂಡು ಬಂತು. ನಾವು ಬೀದಳ್ಳಿ ಬಗ್ಗೆ ವಿಚಾರಿಸಿದಾಗ, ವಿಕೃತ ಸಂತೋಷ ಪಡೆದುಕೊಳ್ಳುವ ಸರದಿ ಆ ಮನುಷ್ಯನದಾಗಿತ್ತು. ಹ ಹ ಹ ಈ ಕಡೆ, ಈ ಗುಡ್ಡಕ್ಕೆ ಯಾಕೆ ಬಂದಿರಿ? ತಪ್ಪು ದಾರಿ ಹಿಡಿದಿದ್ದೀರಿ ಎಂದು ಒಮ್ಮೆಮ್ಮೆ ನಕ್ಕಾಗಲೂ ನೋಯುತ್ತಿದ್ದ ಕಾಲಿನ ಮೇಲೆ ಯಾರೋ ಮರದ ದಿಮ್ಮಿಯಿಂದ ಬಾರಿಸಿದಂತಿತ್ತು! ಮತ್ತೆ ಬಂದ ದಾರಿಯಲ್ಲೇ ಪೂರ್ತಿ ಹಿಂದಿರುಗಿ, ಬೇರೆ ತಿರುವಿನಲ್ಲಿ ಸಿಗುವ ಕಾಲು ದಾರಿ ಹಿಡಿಯಲು ಸೂಚಿಸಿದರು. ಅರಣ್ಯ ಸಿಬ್ಬಂದಿಗೆ ಹಿಗ್ಗಾ ಮುಗ್ಗಾ ಬೈದುಕೊಂಡು ಮತ್ತೆ ೧.೫ ಕಿ ಮೀ ಕ್ರಮಿಸಿ ಹಿಂತಿರುಗಿದ್ದಾಯಿತು. ಬೆಳಗ್ಗಿನಿಂದ ತಿಂದದ್ದು ಬ್ರೆಡ್ ಬಿಟ್ಟರೆ ಬೇರೇನೂ ಇಲ್ಲ, ಕ್ರಮಿಸಿದ್ದು ೧೩ ಕಿ ಮೀ. ಈಗ ಪಿಂಗನ ಅಮ್ಮ ಕೇಳಿದ ಪ್ರಶ್ನೆಯನ್ನು ಕೂಡ ಯೋಚಿಸುವುದಕ್ಕೆ ದಿಗಿಲಾಗುತ್ತಿತ್ತು, ಯಾಕೆಂದರೆ ತಿನ್ನಲೂ ಶ್ಯಾವಿಗೆ ಕೂಡ ಇರಲಿಲ್ಲ! ಇನ್ನು ಆನೆ ಕಾಲೇ ಮುರಿದವನಂತೆ ನರಳಲು ಶುರು ಮಾಡಿದ, ನನ್ನಿಂದ ಇನ್ನಾಗುವುದಿಲ್ಲ, ನೀವು ಹೊರಡಿ ನಾನು ಇಲ್ಲೇ ಇದ್ದು ನಾಳೆ ಬರುತ್ತೇನೆಂದು ಕಣ್ಣೀರಿಡತೊಡಗಿದ! ನಾನು ಮತ್ತು ಪಿಂಗ, ಕಾಲು ದಾರಿಯನ್ನು ಹಿಡಿದು ಅಲ್ಲೇ ೧ ಕಿ ಮೀ ದೂರದಲ್ಲಿರುವ ಹತ್ತಿರದ ಊರಿಗೆ ಹೋಗಿ ಆನೆಯನ್ನು ಸಾಗಿಸಲು ಯಾವುದಾದರೂ ಟ್ರಕ್ ವ್ಯವಸ್ಥೆ ಮಾಡುವ ಸಲುವಾಗಿ ಹೊರಡಲು ಸನ್ನದ್ಧವಾಗುವುದಕ್ಕೂ, ಹಸು ಮೇಯಿಸುತ್ತಿದ್ದ ಆ ವ್ಯಕ್ತಿ ನಾವಿದ್ದಲ್ಲಿ ಬರುವುದಕ್ಕೂ ಸರಿಯಾಗಿ, ಇನ್ನು ದಾರಿ ತಪ್ಪುವುದಿಲ್ಲ ಎಂಬ ಖಾತ್ರಿಯಾಗಿ, ಕುಂಟ ಮತ್ತು ಕುಂಟಾನೆಯನ್ನು ಅಲ್ಲೆ ದಾರಿಯಲ್ಲಿ ಕೂರಿಸಿ ನಮ್ಮ ಚೀಲಗಳನ್ನು ಕಾಯಲು ಹೇಳಿ, ಆ ವ್ಯಕ್ತಿಯ ಜೊತೆಗೆ ಊರಿಗೆ ಹೊರಟೆವು.
ಹಲವರದ್ದು ಕಾಡಿನಲ್ಲಿ ಕಳೆದು ಹೋಗುವ ರೋಚಕ ಕಥೆಯಾದರೆ ನಮ್ಮದು ನಾಡಿನಲ್ಲಿ ಕಳೆದು ಹೋದ ವಿರೋಚಕ ಕಥೆ!

ಜೀಪು, ಸೋಮವಾರ ಪೇಟೆ, ಬೆಂಗಳೂರು ಮತ್ತು ಆಟೋ!
ಅಲ್ಲಿನ ಜನಕ್ಕೆ ಕಾಲು ದಾರಿ ಮತ್ತು ಕಾಡು ದಾರಿ ಎರಡೂ ಒಂದೆ. ಆ ದನಗಳನ್ನು ಓಡಿಸಿ ಹೋಗುತ್ತಿದ್ದ ಆ ಮನುಷ್ಯನ ವೇಗಕ್ಕೆ ನಾವೂ ಕೂಡ ಓಡಿ ಊರು ತಲುಪಿದೆವು. ನಮ್ಮ ಗೆಳೆಯನೊಬ್ಬನಿಗೆ ಕಾಲು ಉಳುಕಿ ನೋವಾಗಿದೆ ಎಂದು ಹೇಳಿದಾಗ ಹಳ್ಳಿಗರಿಗೆ ಆತಂಕ, ಪಾಪ ಆನೆಗೆ ಏನಾಯಿತೋ ಎಂದು. ಏಳುವುದಕ್ಕೆ ಆಗ್ತಾ ಇದ್ಯಾ? ಕಣ್ಣು ಬಿಟ್ಟಿದ್ದಾರಾ? ಮುಂತಾದ ಪ್ರಶ್ನೆಗಳಿಗೆ ಉತ್ತರಿಸಲು ಸಾಕು ಬೇಕಾಗಿ ಹೋಯಿತು. ಆನೆಯನ್ನು ಮನಸ್ಸಿನಲ್ಲೆ ಶಪಿಸಿಕೊಂಡು ಸುಮಾರು ಹತ್ತಿಪ್ಪತ್ತು ಜನರಿಗೆ ಉತ್ತರಿಸಿದ್ದಾಯಿತು.ಅಲ್ಲೇ ಇದ್ದ ಒಬ್ಬ ಮಾನವೀಯ ವ್ಯಕ್ತಿಗೆ ನಮ್ಮ ನೋವಿನ ಅರಿವಾಗಿ ಬೀದಳ್ಳಿಯಲ್ಲಿ ಜೀಪಿನ ಒಡೆಯ ತಮ್ಮಣನವರ ಮನೆಗೆ ದೂರವಾಣಿ ಕರೆ ಮಾಡಿದಾಗ, ಅವರ ಹೆಂಡತಿ ಕರೆಗೆ ಉತ್ತರಿಸಿ ತಮ್ಮಣ್ಣನವರು ಗದ್ದೆಯ ಕಡೆ ಹೋಗಿರುವುದಾಗಿ, ಬಂದ ತಕ್ಷಣ ಕಳಿಸಿಕೊಡುವುದಾಗಿ ತಿಳಿಸಿದರು. (ನಮ್ಮ ಎಲ್ಲರ ಮೊಬೈಲ್ ಫೋನುಗಳೂ ಅಷ್ಟರಲ್ಲಿ ಸತ್ತು ಹೋದದ್ದು ನಮ್ಮ ದುರ್ದೈವ!).೨ ಲೋಟ ಕಾಫಿ ಕೂಡ ಕೊಟ್ಟರು. ಅಮೃತ ಪಾನ ಮಾಡಲಾಗಿ, ಅಲ್ಲೆ ಇದ್ದ ಡಾಂಬರು ರಸ್ತೆಯಲ್ಲಿ ಬರುವ ಆ ಒಂದೇ ಜೀಪಿನ ಆಸೆಯಲ್ಲಿ ಕಾಯುತ್ತಾ ಕುಳಿತೆವು.ನಮಗೆ ಅವರು ಬರುತ್ತಾರೊ ಇಲ್ಲವೋ ಎಂಬ ಸಂಶಯವಿದ್ದರೂ ಆ ಊರಿನವರೆಲ್ಲಾ ತಮ್ಮಣನವರು ಹೇಳಿದ ಮೇಲೆ ಬಂದೇ ಬರುತ್ತಾರೆಂಬ ಅಭಯವನ್ನು ಕೊಡುತ್ತಿದ್ದರು. ೫:೦೦ ರಿಂದ ಸುಮಾರು ೬:೩೦ ರ ವರೆಗೆ ಕಾದ ನಂತರ ತಮ್ಮಣ್ಣನವರ ರಥ ಬಂದು ನಮ್ಮನ್ನು ಹತ್ತಿಸಿ ಅರಣ್ಯ ಇಲಾಖೆಯ ಕಛೇರಿಯ ಕಡೆ ಹೊರಟಿತು. ರಾತ್ರಿ ೮:೩೦, ೯:೦೦ ಮತ್ತು ೧೦:೦೦ ಗಂಟೆಗೆ ಬಸ್ಸುಗಳು ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಹೊರಡುವವೆಂದು ತಿಳಿಯಲಾಗಿ, ಸೋಮವಾರ ಪೇಟೆಯವರೆಗೂ ನಮ್ಮನ್ನು ಕೊಂಡೊಯ್ಯಬೇಕೆಂದು ವಿನಂತಿಸಿಕೊಂಡೆವು.ಹೊಡೆತಗಳು ಬಿದ್ದರೆ ಮೇಲಿಂದ ಮೇಲೆ ಬೀಳುತ್ತವೆ ನೋಡಿ, ನಾವು ಜೀಪಿನಿಂದ ಕಚೇರಿ ಕಡೆ ಹೊರಟರೆ ಯಾರೊ ಮೂರ್ಖ ಶಿಕಾಮಣಿಗಳು ರಸ್ತೇಯಲ್ಲೇ ಟೆಂಟ್ ಹಾಕಿದ್ದಾರೆ. ಸುಮಾರು ೧೫ ಕಾಲೇಜು ಹುಡುಗ-ಹುಡುಗಿಯರ ಗುಂಪು.(ಕಾಡಿನಲ್ಲಿ ಅಷ್ಟೋಂದು ಬಯಲು ಜಾಗವಿದ್ದರೂ, ರಸ್ತೆಯಲ್ಲಿ ಟೆಂಟ್ ಹಾಕುವವರು ಮಂದೆ ತಮ್ಮನ್ನು ನಿಯತ ಚಾರಣಿಗರು ಎಂದು ಕರೆದುಕೊಂಡು, ಗುಂಪು ಕಟ್ಟುತ್ತಾರೆ, ಇಂತಹ ಶತ ಮೂರ್ಖರು). ಇಂತ ಮೂರ್ಖರ ಹತ್ತಿರ ಇನ್ನೂ ಟೆಂಟ್ ಬಿಚ್ಚಿಸುವುದು ಕಾಲಹರಣ ಎಂದು ತಿಳಿದು, ಅಲ್ಲಿಂದ ಸುಮಾರು ೧/೩ ಕಿ ಮೀ ನಡೆದು ಹೋಗಿ ಕುಂಟಾನೆ ಮತ್ತು ಕುಂಟನನ್ನು ಕೂಡಿಕೊಂಡು ಜೀಪಿಗೆ ಮರಳಿದೆವು. ಅಲ್ಲೆ ತಮ್ಮಣ್ಣನ ಹತ್ತಿರ ಮಾತಾಡಿಕೊಂಡು ನಿಂತಿದ್ದ ಆ ಚಾರಣಿಗರ ಗುಂಪಿನ ಸದಸ್ಯನೊಬ್ಬನನ್ನು ಯಾರೋ ಎಂದು ತಿಳಿದು ಅಲ್ಲಿ ಟೆಂಟ್ ಹಾಕಿದವರಿಗೆ ಉಗಿದು ನಮ್ಮ ಸೋಮವಾರ ಪೇಟೆಯ ಪ್ರಯಾಣ ಮುಂದುವರೆಸಿದೆವು. ಸುಮಾರು ೨೮ ಕಿ ಮೀ ಪ್ರಯಾಣ. ಸೋಮವಾರ ಪೇಟೆ ತಲುಪಿದಾಗ ೭:೪೫. ತಮ್ಮಣ್ಣನವರಿಗೆ ೭೦೦ ರೂಪಾಯಿಗಳನಿತ್ತು ಅಲ್ಲೇ ಇದ್ದ ಗಣೆಶ ದರ್ಶಿನಿಯಲ್ಲಿ ನಮ್ಮ ಜಠರಾಗ್ನಿಯನ್ನು ಶಮನಗೊಳಿಸಿದಾಗಲೆ ಮಾತುಗಳನ್ನಾಡಲು ಶಕ್ತಿ ಬಂದದ್ದು! ೯:೧೫ ಕ್ಕೆ ಬೆಂಗಳೂರಿಗೆ ಹೊರಟ ultra deluxe ಬಸ್ ಹತ್ತಿ ಕುಳಿತಾಗ ಒಳ್ಳೆ ನಿದ್ದೆ ಆವರಿಸಿತು. ಬೆಂಗಳೂರಿಗೆ ತಲುಪಿದಾಗ ೩:೪೫. ಇನ್ನು ಗೊತ್ತೇ ಇದೆ ಬೆಂಗಳೂರು ಯಾವುದಕ್ಕೆ ಪ್ರಸಿದ್ಧಿ ಎಂದು! ಡಬಲ್ ಮೀಟರ್ ಖ್ಯಾತಿಯಿ ತ್ರಿಚಕ್ರ ವಾಹನ ಆಟೊ ಹಿಡಿದು ಮನೆ ತಲುಪಿದರೆ ಓಡಿದ ಮೀಟರ್ ೮೫ ರೂಪಾಯಿ! (ನ್ಯಾಯಸಮ್ಮತವಾಗಿ ಅಲ್ಲಿಂದ ಗರಿಷ್ಟ ೪೫ ರೂ ಆಗಬೇಕಿತ್ತು) ಜಗಳ ಮಾಡಿದರೂ ಕೊನೆಗೆ ೧೫೦ ರೂ ತೆತ್ತಲೇ ಬೇಕಾಯಿತು. ಮೋಸಕ್ಕೂ ಇತಿ ಮಿತಿ ಇಲ್ಲವೆ?

ಓದುವ ತಾಳ್ಮೆಯಿದ್ದರೆ ಕೊನೆಗೆ ಒಂದಿಷ್ಟು ಸಲಹೆಗಳು!
೧)ಕುಮಾರ ಪರ್ವತ ಏರುವು/ಇಳಿಯುವ ದಾರಿ ಯಾವುದೂ ದುರ್ಗಮವಲ್ಲ. ಕಾಲು/ತೊಡೆಗಳಲ್ಲಿ ಬಲವಿದ್ದರೆ, ಮತ್ತು ಯೋಜನೆಯನ್ನು ಸರಿಯಾಗಿ ಮಾಡಿಕೊಂಡರೆ ನಿಮಗೆ ಬೇರೆ ಯಾವುದೇ ಚಾರಣದ ಅನುಭವವಿಲ್ಲದೇ ಇದ್ದರೂ ಕುಮಾರಪರ್ವತಕ್ಕೆ ಚಾರಣ ಮಾಡಬಹುದು.
೨)ಕನಿಷ್ಟ ಬಟ್ಟೆಗಳನ್ನು ಕೊಂಡೊಯ್ಯಿರಿ. ಚಾರಣದ ಮಧ್ಯೆ ಸ್ನಾನ ಮಾಡಲು ಅವಕಾಶ ಬಹಳ ಕ್ಷೀಣ. ಆದ್ದರಿಂದ ಹೆಚ್ಚು ಬಟ್ಟೆಗಳನ್ನು ಕೊಂಡೊಯ್ಯದಿರಿ.ಚೀಲದ ತೂಕ ಕಡಿಮೆಯಾದಷ್ಟೂ ನಿಮ್ಮ ಚಾರಣದ ವೇಗ ಹೆಚ್ಚಾಗುತ್ತದೆ.
೩)ಟೆಂಟ್, ಮತ್ತು ಬೆಚ್ಚಗಿನ ಉಡುಪುಗಳನ್ನು ಹೊತ್ತೊಯ್ಯುವುದು ಸೂಕ್ತ!
೪)ಒಂದು ಕಡೆಯಿಂದ ಹತ್ತಿ ಮತ್ತೊಂದು ಕದೆಯಿಂದ ಇಳಿಯುವುದು ಸಮಯದ ಸದ್ಬಳಕೆಯಾಗುತ್ತದೆ ಎಂಬುದು ನನ್ನ ಅನಿಸಿಕೆ. ಮತ್ತು ಎರಡೂ ಕಡೆಗಳಲ್ಲಿ ಚಾರಣ ಮಾಡಿದ ತೃಪ್ತಿ.
೫)ಹೆಚ್ಚಿನ ತಿಂಡಿ ತಿನಿಸುಗಳು, ಪಾನೀಯಗಳು ಅದರಲ್ಲೂ ನೀರು ನಿಮ್ಮ ಚೀಲದಲ್ಲಿರಲಿ.

ವಿ ಸೂ : ಮತ್ತೊಮ್ಮೆ ತನ್ನ ಕ್ಯಾಮಾರವನ್ನು ಒದಗಿಸಿದ ಗೆಳೆಯ ಕೃಪಾಶಂಕರ್ ಗೆ ಧನ್ಯವಾದಗಳು.
ಕುಂಟ ತನ್ನ ಕ್ಯಾಮಾರಾದಿಂದ ತೆಗೆದ ಕೆಲವು ಛಾಯಾಚಿತ್ರಗಲನ್ನು ಅವನ ಅನುಮತಿಯಿಲ್ಲದೆ ಪ್ರಕಟಿಸಿದ್ದೇನೆ. ಕುಂಟನಿಗೂ ಅನಂತ ಧನ್ಯವಾದಗಳು.

4 ಕಾಮೆಂಟ್‌ಗಳು:

  1. ಗುರು ಅವರು, ಗೋವಾಗೆ ತಂದಿದ್ದ ತಮ್ಮ ಕಿರು ಕೈಚೀಲವನ್ನು ಕುಮಾರಪರ್ವತದ ಚಾರಣಕ್ಕೆ ತರದಿರಿವುದು ಸಂತಸದ ವಿಷಯ.
    -ಎಲ್ಲರಿಗೂ ಶುಭವಾಗಲಿ

    ಪ್ರತ್ಯುತ್ತರಅಳಿಸಿ
  2. ಕೃಪಾ, ಹ ಹ.. ಬೆಟ್ಟದ ಮೇಲೆ ಮೋಟಾರು ಬಂಡಿಗಳು ಹೋಗುವುದಿಲ್ಲ, ಅದಕ್ಕೆ ಬದಲಾವಣೆ!

    ಪ್ರತ್ಯುತ್ತರಅಳಿಸಿ
  3. ಗುರು ಮತ್ತು ಸ್ನೇಹಿತರು, ಎಲ್ಲೋ ಕಾಲು ದಾರಿಯಲ್ಲಿ ನಡೆದು ಬಂದಿದ್ದಿರಾ ಅನ್ನಿಸುತ್ತಿದೆ .. ನಮ್ಮ ಆಫೀಸಿನಿಂದ ಹೋಗಿದ್ದ ಗುಂಪೊಂದು ತೆಗೆದಿರುವ ಚಿತ್ರಗಳನ್ನು ನೋಡಿ

    http://picasaweb.google.com/prajna80/Kumaraparvata202#

    ಪ್ರತ್ಯುತ್ತರಅಳಿಸಿ
  4. ಹ ಹ.. ಕೃಪಾ, ನಿಮ್ಮ ಹಾಸ್ಯಕ್ಕೆ ನಕ್ಕಿಬಿಡೋಣ! ನಿಮ್ಮ ಗೆಳೆಯರ ಫೋಟೋಗಳು ಚೆನ್ನಾಗಿವೆ. ಉತ್ತಮ ಕ್ಯಾಮರ ಬಳಸಿದ್ದಾರೆಂದು, ಒಂದು ಫೋಟೋದಲ್ಲಿರುವ ಟ್ರೈಪಾಡ್ ನೋಡಿದರೇ ಗೊತ್ತಾಗುತ್ತದೆ! ನಮ್ಮಲ್ಲೂ ಬೆಟ್ಟ ಕಡಿದಾಗಿ ಕಾಣುವ ಬಹಳಷ್ಟು ಫೋಟೋಗಳಿವೆ, ಆದರೆ ಬ್ಳಾಗಿಗೆ ಸಂಬಂಧಪಟ್ಟ ಫೋಟೋಗಳನ್ನಷ್ಟೇ ನಾನು ಲಗತ್ತಿಸಿದ್ದೇನೆ. ನಿಮ್ಮಿಂದ ಎರವಲು ಪಡೆದ ಕ್ಯಾಮರಾದಲ್ಲಿ ನಾನು ತೆಗೆದಿರುವದಕ್ಕಿಂತಲೂ ಉತ್ತಮ ಗುಣಮಟ್ಟದ ಚಾಯಾಚಿತ್ರಗಳನ್ನು ಸೆರೆ ಹಿಡಿಯಲು ಸ್ವಲ್ಪ ಕಷ್ಟ. ;). ಮುಂದಿನ ಬಾರಿ ಇನ್ನೂ ಉತ್ತಮ ಕ್ಯಾಮರಾವನ್ನು ಕೊಂಡು ನಮಗೆ ಕೊಡಿ. :D

    ಪ್ರತ್ಯುತ್ತರಅಳಿಸಿ