ಬುಧವಾರ, ಫೆಬ್ರವರಿ 18, 2009
ಕನ್ನಡ ಸಾಹಿತ್ಯ ಸಮ್ಮೇಳನ , ಚಿತ್ರದುರ್ಗ ಪ್ರವಾಸ
ಕೋಟೆಯ ಮೇಲಿಂದ ಸೆರೆ ಹಿಡಿದ ಒಂದು ಪಕ್ಷಿನೋಟ. (ಗಾಳಿಗೋಪುರದ ಜೊತೆ ಕನ್ನಡ ಬಾವುಟಗಳನ್ನು ಕಾಣಬಹುದು)
ಸಿದ್ಧತೆ
ಕೊನೆಯ ದಿನ ಸಮ್ಮೇಳನದಲ್ಲಿ ಭಾಗವಹಿಸುವ ಮತ್ತು ಚಿತ್ರದುರ್ಗವನ್ನು ಸುತ್ತಾಡುವ ಮಹದಾಸೆಯಿಂದ ಶುಕ್ರವಾರ ಸಂಜೆ ೫ ಘಂಟೆಗೆ ನನ್ನ ಇಂಡಿಕಾ ರಥದಲ್ಲಿ ಹೊರಟೆವು. ೫ ಜನರ ತಂಡದಿಂದ ಒಬ್ಬ ಹಿಂದೆ ಸರಿದು, ಉಳಿದದ್ದು ನಾನು, ರವೀಶ, ಮಧುರ್ ಮತ್ತು ಆದರ್ಶ. ರಾಷ್ಟ್ರೀಯ ಹೆದ್ದಾರಿ-೪ ರಲ್ಲಿ ಚಲಿಸಿ ಚಿತ್ರದುರ್ಗವನ್ನು ತಲುಪಿದಾಗ ರಾತ್ರಿ ೯:೩೦. ಜನರು ಸಮ್ಮೇಳನದಲ್ಲಿ ಊಟ ಮುಗಿಸಿ ಗುಂಪು ಗುಂಪಾಗಿ ಮನೆಗೆ ತೆರಳುತಿದ್ದರು. ಬಹಳ ಬೇಡಿಕೆಯಲ್ಲಿದ್ದ ವಸತಿ ಗೃಹಗಳಿಗೆ ಹೆಣಗಾಡಿ ಕೊನೆಗೆ ದುಬಾರಿಯೆನಿಸಿದ (ನಾಲ್ಕು ಜನರಿಗ ೧ ಕೊಠಡಿ, ೧೨೦೦ ರೂ) ಕೊಠಡಿಯನ್ನಿಡಿದೆವು. ರಾತ್ರಿ ಸುಖನಿದ್ದೆಗೆ ಜಾರಿ, ಬೆಳಗೆದ್ದು ಸಾಹಿತ್ಯ ಸಮ್ಮೇಳನದ ಕೊನೆಯ ದಿನವನ್ನು ಕಣ್ಣಾರೆ ನೋಡಲು ಸಿದ್ಧರಾದೆವು.
ಸಮ್ಮೇಳನ,ಸಂಗೀತ,ಭಾಷಣ,ಕವಿಘೋಷ್ಠಿ, ಪುಸ್ತಕ ಮಳಿಗೆಗಳು ಮತ್ತು ಊಟ
ಭವ್ಯವಾಗಿ ಅಲಂಕೃತಗೊಂಡ ’ತಾ ರಾ ಸು’ ವೇದಿಕೆಯನ್ನು ಕಂಡು ಮನಸ್ಸು ಪುಳಕಿತಗೊಂಡಿತು! ಮದಕರಿ ನಾಯಕನ, ಒನಕೆ ಓಬವ್ವನ ಚಿತ್ರಪಟಗಳು ಮುಖ್ಯವಾಗಿ ವೇದಿಕೆಯ ಹಿಂಭಾಗದಲ್ಲಿ ರಾರಾಜಿಸುತ್ತಿದ್ದವು.ವೇದಿಕೆಯ ಮೇಲೆ ಒಬ್ಬ ಹಿರಿಯರು ಮತ್ತು ಸಂಗಡಿಗರು ಕರ್ನಾಟಕ ಸಂಗೀತದಲ್ಲಿ ವೀಣೆಯನ್ನು ನುಡಿಸುತ್ತಿದ್ದರು. ಬಹಳ ಅದ್ಭುತವಾಗಿತ್ತು ಆ ವೀಣಾವಾದನ. ಆದರೆ ಒಂದು ಕೊರಗಂತೂ ಮನಸ್ಸಿನಲ್ಲುಳಿಯಿತು. ಬೇರೆ ವೇದಿಕೆಗಳಲ್ಲಿ ಕನ್ನಡೇತರ ಕೃತಿಗಳನ್ನು ನುಡಿಸಿದರೆ ಬೇಜಾರಿಲ್ಲ, ಆದರೆ ಕನ್ನಡವೇ ರಾರಾಜಿಸಿಬೇಕಾದ ಇಂತಹ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಕೃತಿಗಳನ್ನೇ ನುಡಿಸುವುದೊಳಿತೆಂಬುದು ನನ್ನ ಅನಿಸಿಕೆ. ಅಂದಹಾಗೆ ಅಲ್ಲಿ ನುಡಿಸುತ್ತಿದ್ದುದು ಮುತ್ತು ಸ್ವಾಮಿ ದೀಕ್ಷಿತರ ’ವಾತಾಪಿ ಗಣಪತೀಂ’, ನಂತರ ಪುರಂದರದಾಸರ ’ಭಾಗ್ಯದ ಲಕ್ಷ್ಮಿ ಬಾರಮ್ಮ’ ದೇವರ ನಾಮದಿಂದ ಮುಕ್ತಾಯವಾಯಿತು. ನಂತರ ವೀಣೆ ನುಡಿಸಲು ಬಂದ ಮತ್ತೊಂದು ತಂಡ ಕೂಡ ’ವಾತಾಪಿ’ ಕೃತಿಯಿಂದಲೇ ಪ್ರಾರಂಭಿಸಿದರು. ಕಾರ್ಯಕ್ರಮವನ್ನು ವಿಘ್ನನಿವಾರಕ ಗಣಪತಿಯ ಆರಾಧನೆಯೊಂದಿಗೆ ಪ್ರಾರಂಭಿಸುವುದು ವಾಡಿಕೆ. ಕನ್ನಡದ್ದೇ ಆದ ದಾಸರ ’ಗಜವಧನ ಬೇಡುವೆ’ ಕೃತಿಯಿಂದ ಆರಂಭಿಸಿದ್ದಿದ್ದರೆ ಕಾರ್ಯಕ್ರಮ ಇನ್ನೂ ಅರ್ಥಪೂರ್ಣವಾಗಿರುತ್ತಿತ್ತು. (ಇಲ್ಲೊಂದು ಸ್ಪಷ್ಟೀಕರಣ: ನನಗೆ ಮುತ್ತು ಸ್ವಾಮಿ ದೀಕ್ಷಿತರ ಮತ್ತು ಅವರ ಕೃತಿಗಳ ಮೇಲೆ ಬಹಳ ಅಭಿಮಾನ, ಅಪಾರ ಗೌರವ. ಆದರೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡವೇ ರಾರಾಜಿಸಬೇಕೆಂಬುದು ಆಸೆ).ನಂತರ ಇದೇ ತಂಡ ಕೆಲವು ಕನ್ನಡದ ಭಾವಗೀತೆಗಳನ್ನು ವೀಣೆಯಲ್ಲಿ ನುಡಿಸಿದರು. ಸಮಾನ್ಯವಾಗಿತ್ತು! (ಇದೇ ರೀತಿ ಮತ್ತೊಂದು ವೇದಿಕೆಯಲ್ಲಿ, ತೆಲುಗಿನ ’ರಾ ರಾ’ ಹಾಡಿಗೆ ನೃತ್ಯ ಪ್ರದರ್ಶನ ಮಾಡಿ, ಪ್ರತಿಭಟನೆ ಕೂಡ ನಡೆದಿದ್ದನ್ನು ನೆನಪಿಸಿಕೊಳ್ಳಬಹುದು.)
(ಮೇಲೆ) ಮದಕರಿನಾಯಕನ ಮಂಟಪ
(ಕೆಳಗೆ) ತಾ ರಾ ಸು ವೇದಿಕೆ
ನಂತರ ಕವಿಘೋಷ್ಠಿಗೆ ವೇದಿಕೆ ಸಜ್ಜಾಯಿತು. ಇದು ನಾನು ಪ್ರತ್ಯಕ್ಷವಾಗಿ ನೋಡುತ್ತಿದ್ದ ಮೊದಲ ಕಾವ್ಯಘೋಷ್ಠಿಯಾದದ್ದರಿಂದ ಉತ್ಸಾಹ ತುಸು ಜಾಸ್ತಿಯಾಗಿತ್ತು. ನೆರೆದಿದ್ದ ಎಲ್ಲಾ ಕವಿಗಳ ಸನ್ಮಾನವಾದ ಮೇಲೆ, ಒಬ್ಬರ ಭಾಷಣ. ಈ ಭಾಷಣ ನನ್ನ ಉತ್ಸುಕತೆಯನ್ನು ಇಳಿಸಿಬಿಟ್ಟಿತು. ಮೊದಲೇ ಸಮ್ಮೇಳನಾಧ್ಯಕ್ಷರ ಕೆಟ್ಟ ಭಾಷಣವನ್ನು (ಆ ಭಾಷಣದಲ್ಲಿ ಸಮ್ಮೇಳಾಧ್ಯಕ್ಷರು ಆ ವರ್ಗ,ಈ ವರ್ಗ ಎಂದು ಮನುಷ್ಯರನ್ನು ವರ್ಗೀಕರಿಸಿ ಕೆಲೊವೊಂದು ವರ್ಗದವರ ಮೇಲೆ ವಿಷ ಕಾರಲು ಬಹಳಷ್ಟು ಸಮಯವನ್ನು ಮೀಸಲಿಟ್ಟಿದ್ದರು!) ಓದಿದ್ದ ನನಗೆ, ಈ ಮಹಾನುಭಾವನ ಭಾಷಣವನ್ನು ಕೇಳಿ ಸಮ್ಮೇಳನದ ಬಗ್ಗೆ ನಿರಾಸಕ್ತಿ ಮೂಡಿಸಿಬಿಟ್ಟಿತು.ಇನ್ನು ಕವಿಘೋಷ್ಠಿಯ ಮೊದಲನೆ ಕಾವ್ಯ ವಾಚನವನ್ನು ಆಲಿಸಿದೆ, ಮತ್ತೆ ಆಸಕ್ತಿಯನ್ನು ಕೆರಳಿವಂತಿರಲಿಲ್ಲ ಆ ವಾಚನ. ಎಲ್ಲರೂ ಪುಸ್ತಕ ಮಳಿಗೆಗಳ ಕಡೆ ಹೆಜ್ಜೆ ಹಾಕಿದೆವು.
ಪುಸ್ತಕ ಮಾರಾಟ ಮಳಿಗೆಗಳ ಅವ್ಯವಸ್ಥೆಯ ಬಗ್ಗೆ ಬಹಳಷ್ಟು ಸುದ್ದಿಯನ್ನು ವೀಕ್ಷಿಸಿ, ಓದಿದ್ದ ನಮಗೆ ಅಷ್ಟೇನು ತೊಂದರೆಯಾಗಲಿಲ್ಲ. ಅಪಾರ ಮಳಿಗೆಗಳಿದ್ದವು. ಬಹಳಷ್ಟು ಮಳಿಗೆಗಳನ್ನು ಸುತ್ತಾಡಿ, ಪುಸ್ತಕಗಳನ್ನು ಕೊಂಡು ಊಟಕ್ಕೆ ಹೊರಟೆವು. ಸ್ವಲ್ಪ ಧೂಳು ಹೆಚ್ಚ್ಹೆನ್ನುವುದು ಬಿಟ್ಟರೆ, ಅಂತಹ ಅವ್ಯವಸ್ಥೆ ನನಗೇನೂ ಕಾಣಲಿಲ್ಲ.
ಊಟದ ವ್ಯವಸ್ಥೆ ಕೂಡ ಅದ್ಬುತವಲ್ಲದಿದ್ದರೂ ಚೊಕ್ಕಟವಾಗಿತ್ತು. ಬಹಳಷ್ಟು ಊಟದ ಮಳಿಗೆಗಳನ್ನು ತೆರೆಯಲಾಗಿತ್ತು. ಊಟವಾಯಿತು, ಕೊಠಡಿಗೆ ಹಿಂತಿರುಗಿದೆವು. ಇನ್ನು ಪ್ರವಾಸಕ್ಕೆ ಸನ್ನದ್ಧವಾದೆವು.
ಚಂದ್ರವಳ್ಳಿ
ಚಿತ್ರದುರ್ಗದ ಕೇಂದ್ರದಿಂದ ೨ ಕಿ ಮೀ ದೂರದಲ್ಲಿದೆ. ಸಂಜೆ ನಾಲ್ಕು ಘಂಟೆಗೆ ಹೊರಟೆವು. ಚಂದ್ರವಳ್ಳಿಯಲ್ಲಿ ಮೊದಲು ಎದುರಾಗುವುದು ಭವ್ಯ ಕೆರೆ. ಮುಂದುವರೆದು, ಸ್ವಲ್ಪ ಮೇಲೆರಿದರೆ, ಗುಡ್ಡದಂತಹ ಪ್ರದೇಶದಲ್ಲಿ, ಗುಹೆಗಳು. ಒಬ್ಬ ಮಾರ್ಗದರ್ಶಿಯನ್ನು ಹಿಡಿದು ಕಗ್ಗತ್ತಲಿನ ಗುಹೆಗಳನ್ನು ಸುತ್ತಾಡಿದೆವು. ಅದ್ಭುತವೆನಿಸಿತು. ನಾವು ಬೆಟ್ಟದ ತುದಿಯಿಂದ ೭೫ ಮೀ ಕೆಳಗೆ, ಗುಹೆಯೊಳಗೆ ಇದ್ದೇವೆಂದಾಗ ಆಶ್ಚರ್ಯವಾಯಿತು. ಆ ಗುಹೆಗಳ ರಚನೆಗೆ ಮತ್ತು ಗೊಹೆಯೊಳಗಿನ ಚಿತ್ರ ಮತ್ತು ಶಿಲ್ಪ ಕಲೆಗೆ ತಲೆದೂಗಿದೆವು. ಆ ಗುಹೆ ಒಬ್ಬರು ಸ್ವಾಮೀಜಿಗಳು ವಾಸವಾಗಿದ್ದ ಸ್ಥಳವಂತೆ. ಆಗಿನ ಸ್ವಾಮಿಗಳು ಲೌಖಿಕತೆಯಿಂದ ದೂರವಿರಲು ಎಂತಹ ಸ್ಥಳಗಳನ್ನು ಆಯ್ಕೆ ಮಾಡುತ್ತಿದರು ಎಂದು ನೆನೆದು ಸೋಜಿಗವೆನಿಸಿತು ನನಗೆ!
(ಮೇಲೆ) ಕಗ್ಗತ್ತಲಿನ ಗುಹೆ (ಕ್ಯಾಮರಾದ ಬೆಳಕಿನಿಂದ ಕತ್ತಲೆ ಮಾಯವಾಗಿದೆ!)
(ಎಡ) ಗುಹೆಯೊಳಗೆ, ಸ್ವಾಭಾವಿಕ (ತರಕಾರಿಗಳಿಂದ) ಬಣ್ಣಗಳಿಂದ ಮೂಡಿ ಬಂದಿರುವ ಚಿತ್ರ
(ಕೆಳಗೆ) ಗುಹೆಯೊಳಗಿನ ಕೆತ್ತನೆ
ಚಂದ್ರವಳ್ಳಿಯ ಒಳಗೆ,ಸುತ್ತಮುತ್ತ
ಜಂಗ್ಲಿ
ಚಂದ್ರವಳ್ಳಿ ನೋಡಿ ಬಂದು ಅಲ್ಲಿನ ಒಂದು ಚಿತ್ರಮಂದಿರದಲ್ಲಿ, ರಾತ್ರಿ ಆಟದಲ್ಲಿ ಈ ಕನ್ನಡ ಚಲನಚಿತ್ರವನ್ನು ನೋಡಿದೆವು. ಇದರ ವಿಮರ್ಶೆಯನ್ನು ಶೀಘ್ರದಲ್ಲೆ ನಿರೀಕ್ಷಿಸಿ. ನಂತರ ನಿದ್ದೆ ಮಾಡುವ ಸಮಯವಾಗಿತ್ತು.
ಏಳು ಸುತ್ತಿನ ಕೋಟೆ
ಚಿತ್ರದುರ್ಗದ ಐತಿಹಾಸಿಕ ಕೋಟೆಯನ್ನು ಸುತ್ತಾಡಲು, ಬೆಳಗ್ಗೆ ಬೇಗನೆ ಹೊರಟೆವು. ಸುಮಾರು ೫ ಘಂಟೆಗಳ ಕಾಲ ಕೋಟೆಯನ್ನು ಸುತ್ತಾಡಿದೆವು. ಬಹಳ ಆನಂದ ಪಟ್ಟೆವು. ಕೋಟೆಯ ಬಗ್ಗೆ ಹೆಚ್ಚು ಬರೆಯುವುದಿಲ್ಲ. ಛಾಯಾಚಿತ್ರಗಳೆ ಮಾತಾಡಲಿ!
(ಮೇಲೆ)ಕೋಟೆಯ ಕಲ್ಲಿನ ಗೋಡೆಯ ಮುಂದೆ ಪ್ರಜೆಗಳು (ಬಲದಿಂದ ಎಡಕ್ಕೆ :ನಾನು, ಆದರ್ಶ, ರವೀಶ,ಮಧುರ್)
(ಬಲ)ಕೋಟೆಯ ಒಂದು ಕಲ್ಲಿನ ಗೋಡೆಯ ಮೇಲೆ ’ನಾಗರ ಹಾವಿನ’ ಲಾಂಚನ
(ಕೆಳಗೆ)ಅರಮನೆಯ ಪಳೆಯುಳಿಕೆ
1)ತುಪ್ಪದ ಕೊಳಕ್ಕೆ ಇಳಿಯುತ್ತಿರುವ ನಾನು
2)ಓಬವ್ವನ ಕಿಂಡಿ ಯಲ್ಲಿ ಶತ್ರು!
3)ದೇಹದ ಗುರುತ್ವಾಕರ್ಷಣ ಕೇಂದ್ರ ಬಿಂದುವನ್ನು ಕೆಳಗಿಳಿಸಿ ಹತ್ತು!
4)ಕೋಟೆ ಹತ್ತಿದ್ದಕ್ಕೆ ಪುರಾವೆ!
(ಛಾಯಚಿತ್ರ ಮತ್ತು ಅಡಿಬರಹವನ್ನು ನೀವೇ ಹೊಂದಿಸಿಕೊಳ್ಳಿ!)
ಚಿತ್ತಾರ/ಚಿತ್ರ - ದುರ್ಗ
1)ಮೊಲ/ಗೂಳಿ ಬಂಡೆ
2)ಆನೆ ಬಂಡೆ
3)ಹಡಗು ಬಂಡೆ
4)ಕಪ್ಪೆ ಬಂಡೆ
(ಚಟುವಟಿಕೆ : ಬಂಡೆಯನ್ನು ಆಕಾರದ ಅಡಿಬರಹಕ್ಕೆ ಹೊಂದಿಸಿ!)
ಜೋಗಿಮಟ್ಟಿ, ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ
ಕೋಟೆಯ ವೀಕ್ಷಣೆಯ ನಂತರ ಚಿತ್ರದುರ್ಗದಿಂದ ೧೦ ಕಿ ಮೀ ದೂರವಿರುವ ಜೋಗಿಮಟ್ಟಿ ಗಿರಿಧಾಮಕ್ಕೆ ಹೊರಟೆವು. ಜೋಗಿಮಟ್ಟಿಗೆ ತಲುಪಲು ಅರಣ್ಯ ಇಲಾಖೆಯ ಅನುಮತಿ ಪತ್ರವಿರಬೇಕೆಂಬುದನ್ನು, ಅರಣ್ಯ ಸಿಬ್ಬಂದಿಯಿಂದ ತಿಳಿಸಲ್ಪಟ್ಟಾಗ ನಿರಾಸೆಯಿಂದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ಗಾಡಿಯನ್ನು ತಿರುಗಿಸಿದೆವು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಮೈಸೂರು ಪ್ರಾಣಿ ಸಂಗ್ರಹಾಲಯಗಳನ್ನು ನೋಡಿದ ಬೆಂಗಳೂರು-ಮೈಸೂರು ಸೀಮೆಯವರಿಗೆ ಈ ಪ್ರಾಣಿಸಂಗ್ರಹಾಲಯದಲ್ಲಿ ನಿರಾಸೆ ಕಟ್ಟಿಟ್ಟ ಬುತ್ತಿ!
ಮದಿಸಿದ ಕರಿಯ ಮದವಡಗಿಸಿದ ಮದಕರಿನಾಯಕನ ಪ್ರತಿಮೆ!
ನೆಲಂಗಲದ ಬವಣೆ,
ಚಿತ್ರದುರ್ಗದಿಂದ ೪ ಘಂಟೆಗೆ ಹೊರಟು ನೆಲಮಂಗಲ ವಾಹನದಟ್ಟಣೆಯಲ್ಲಿ ಪ್ರಾಣಹಿಂಸೆ ಅನುಭವಿಸಿ ಮನೆ ತಲುಪಿದಾಗ ರಾತ್ರಿ ೯:೩೦.
ಒಟ್ಟಿನಲ್ಲಿ ಸಮ್ಮೇಳನ, ವಾಹನ ದಟ್ಟಣೆಯ ಕಹಿಯನ್ನು, ಚಿತ್ರದುರ್ಗ ಪ್ರವಾಸದ ನೆನಪುಗಳು ಮರೆಸಿತ್ತು.
ಧನ್ಯವಾದಗಳು: ರವೀಶ, ಮಧುರ್ ಮತ್ತು ಆದರ್ಶ ಸೆರೆ ಹಿಡಿದ ಬಹಳಷ್ಟು ಭಾವಚಿತ್ರಗಳನ್ನು ಅವರ ಅನುಮತಿ ಇಲ್ಲದೆ ಧಾರಾಳವಾಗಿ ಇಲ್ಲಿ ಬಳಸಿದ್ದೇನೆ.ಗೆಳೆಯರೆ ಛಾಯಾಚಿತ್ರಗಳಿಗೆ ಧನ್ಯವಾದಗಳು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ