ಒಂದು ಸೋಲು ಮನುಷ್ಯನನ್ನು ಈ ಪರಿ ಬೆಚ್ಚಿ ಬೀಳಿಸುತ್ತದೆ ಎಂದರೆ? ’ದುನಿಯ’ ಗೆಲುವಿನ ನಾಗಾಲೋಟದಲ್ಲಿದ್ದ ಸೂರಿಯವರಿಗೆ ತುಸು ವಿಭಿನ್ನ ರುಚಿಯ ’ಇಂತಿ ನಿನ್ನ ಪ್ರೀತಿಯ’ ತಡೆ ಹೊಡ್ಡಿತು. ’ಇಂತಿ ನಿನ್ನ ಪ್ರೀತಿಯ’ ಚಿತ್ರವನ್ನು ತಾವೇ ನಿರ್ಮಿಸಿದ್ದಿದ್ದರಿಂದೇನೋ, ತಡೆಯ ಜೊತೆ ಹೊಡೆತ ಕೂಡ ಕಂಡರು ಸೂರಿ. ಚಿತ್ರ ಕೆಟ್ಟದಾಗಿಲ್ಲದಿದ್ದರೂ ಗಲ್ಲಾಪೆಟ್ಟಿಯಲ್ಲಿ ಸೋತದ್ದಕ್ಕೆ ಸೂರಿ ಖಿನ್ನರಾಗಿ, ತಮ್ಮ ಹಳೆಯ ಹಳಿಗೆ ಜಾರಿ ’ಜಂಗ್ಲಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಕಥೆ: ಕಥೆಯ ಒಂದು ಎಳೆ, ಮಾಮೂಲಿ ಹೊಡೆದಾಟದ-ಭೂಗತ ಜಗತ್ತಿನ ಕಥೆಗಳಿಗಿಂತ ತುಸು ಭಿನ್ನ ಎನ್ನಬಹುದು. ಅಷ್ಟೆ! ಹೆಚ್ಚೇನು ಮಹತ್ವವಿಲ್ಲ ಕಥೆಗೆ.
ಸಂಭಾಷಣೆ: ಪ್ರೇಕ್ಷಕರು ಸೂರಿ ಮೇಲೆ ಮತ್ತೆ ಕೋಪಿಸಿಕೊಂಡರೆ ಈ ಚಿತ್ರದ ಮೊದಲರ್ಧದ ಸಂಭಾಷಣೆಗೆ. "ಅತಿಯಾದರೆ ಅಮೃತವೂ ವಿಷ" ಎನ್ನುವ ನಾನ್ನುಡಿಗೆ ಕನ್ನಡಿ ಹಿಡಿದಂತಿದೆ ಸಂಭಾಷಣೆ. ಮೊದಲರ್ಧವನ್ನು ಬಹಳಷ್ಟು ಆಕ್ರಮಿಸಿಕೊಂಡಿರುವುದು ರಂಘಾಯಣ ರಘು ಮತ್ತು ವಿಜಯ್ ನಡುವಿನ ಸಂಭಾಷಣೆ ಮತ್ತು ಅವರ ಪೂರ್ವಾಪರ ಜೀವನ ವೃತ್ತಾಂತಗಳು. ಇವುಗಳು ತಲೆ ನೋವು ಬರಿಸುತ್ತವೆ. ಇವರಿಬ್ಬರ ಏಕತಾನತೆಯ ಯಾತನೆ ಕೊನೆಗೊಂಡರೆ ಸಾಕೆನ್ನಿಸುತ್ತದೆ. ದ್ವಿತೀಯಾರ್ಧದ ಸಂಭಾಷಣೆ ಅದ್ಭುತವಲ್ಲದಿದ್ದರೂ ಮೆದುಳಿಗೆ ಕೈ ಹಾಕದಿರುವುದೇ ಸಂತೋಷ.
ನಟನೆ:ಎಲ್ಲರೂ ತಮ್ಮ ಪಾತ್ರವನ್ನು ಚೊಕ್ಕಟವಾಗಿ ಅಭಿನಯಿಸಿದ್ದಾರೆ. ದುನಿಯಾ ಖ್ಯಾತಿಯ ರಘು ಮತ್ತು ವಿಜಯ್ ಜೋಡಿ ಪಡ್ಡೆ ಹುಡುಗರಿಗೆ ಮುದ ನೀಡುತ್ತದೆ. ಮುದ ನೀಡುವುದು ಅವರಷ್ಟೇ ಅಲ್ಲ, ನಾಯಕಿ ಅಂದ್ರಿತಾ ರೇ ಮೈ ಚಳಿಯನ್ನು ಬಿಟ್ಟು ನಟಿಸಿರುವುದು ಚಿತ್ರದ ಋಣಾತ್ಮಕ ಅಂಶ. ಯುವಕರನ್ನು ಚಿತ್ರಕ್ಕೆ ಎರಡನೇ ಬಾರಿ ಬರುವಂತೆ ಮಾಡಿದರೆ, ಸಂಪೂರ್ಣ ಖ್ಯಾತಿ ರೇ ಗೆ ಸಲ್ಲಬೇಕು. ಇನ್ನು ವಿಜಯ್ ರವರು ಹಾಡುಗಳಲ್ಲಿ ಶಾರುಕ್ ಖಾನ್ ನಟನೆಯನ್ನು ಅನುಕರಿಸಿ, ಸ್ವಲ್ಪ ಮಟ್ಟಿಗೆ ಗೆದ್ದಿದ್ದಾರೆ.
ಸಂಗೀತ, ಸಾಹಿತ್ಯ: ಸಂಗೀತ ಸಾಹಿತ್ಯ ಎರಡನ್ನೂ ಒಟ್ಟಿಗೆ ಅವಲೋಕಿಸಿದರೆ ನಿಮಗೆ ಹಾಡುಗಳನ್ನು ಮುಂದೆಂದೂ ಕೇಳಬೇಕೆನ್ನಿಸುವುದಿಲ್ಲ. (ಜಯಂತ್ ಕಾಯ್ಕಿಣಿ ಬರೆದಿರುವ ’ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ’ ಒಂದು ಹಾಡು ಇದಕ್ಕೆ ಅಪವಾದ.). ಸಂಗೀತ ಅದ್ಭುತವಾಗಿದೆ. ಹರಿಕೄಷ್ಣ ರವರು ಕೂಡ ಜಂಗ್ಲಿ ಯಶಸ್ಸಿದೆ ಶ್ರಮಿಸಿದ್ದಾರೆ. ಆದರೆ ಎರಡು ಹಾಡುಗಳ "ಸೋಪ್ ಹಾಕ್ಕೊಳೊ ತಲೆ ಬಾಚ್ಕಳೊ" (ಇದು ಇದ್ದುದರಲ್ಲಿ ಪರವಾಗಿಲ್ಲ), "ಹಳೆ ಕಬ್ಣ.. ಹಳೆ ಪಾತ್ರೆ" ಸಾಹಿತ್ಯ ಕೆಟ್ಟದಾಗಿದೆ ಮತ್ತು ಚಿತ್ರಕ್ಕೆ ಅಸಂಬದ್ಧವಾಗಿದೆ. ಯೋಗರಾಜ್ ಭಟ್ ರವರ ಸೃಜನಶೀಲತೆಗೆ ಕಪ್ಪು ಚುಕ್ಕೆಯಂತಿವೆ, ಅವರು ಬರೆದ ಈ ಹಾಡುಗಳು. ಆದರೆ ಹಿಂದಿಯ ಕೈಲಾಶ್ ಕೇರ್ ರವರು ’ಹಳೆ ಕಬ್ಣ’ ಹಾಡನ್ನು ಚೆನ್ನಾಗಿ ಹಾಡಿದ್ದಾರೆ.
ಛಾಯಾಗ್ರಹಣ: ಛಾಯಾಗ್ರಹಣದಲ್ಲಿ ವಿಶೇಷತೆಯೂ ಇಲ್ಲ. ಕೊರತಯೂ ಇಲ್ಲ.
ನಿರೂಪಣೆ, ನಿರ್ದೇಶನ: ನಿರ್ದೇಶನ ಸಮಾನ್ಯ. ನಿರೂಪಣೆಯೂ ಕೂಡ ಸ್ವಲ್ಪ ವಿಶಿಷ್ಟವಾಗಿದೆ (ಮೊದಲಾರ್ಧದ ಪೂರ್ವಾಪರ ಕಥೆಗಳು ಮತ್ತು ಸಂಭಾಷಣೆಯನ್ನು ಹೊರತುಪಡಿಸಿ).ಸೂರಿಯವರು ಸೋಲನ್ನು ಸ್ವಲ್ಪ ಹಗುರವಾಗಿ ತೆಗೆದುಕೊಂದು ಇನ್ನೂ ಹೊಸತನದ ಚಿತ್ರಗಳನ್ನು ಮಾಡಲಿ. ತಮ್ಮ ಕ್ರಿಯಾಶೀಲತೆಯನ್ನು ಮಾಮೂಲಿ ಚಿತ್ರಗಳನ್ನು ಮಾಡುವುದಕ್ಕೆ ಹಾಳುಗೆದವದಿರಲಿ ಎಂಬುದು ಈ ಅಭಿಮಾನಿಯ ಕೋರಿಕೆ.
ಏನೆ ಕೊರತೆ ಇದ್ದರೂ ಅಂದ್ರಿತಾ ರೇ ಗಾಗಿ, ಮತ್ತು ಕೆಟ್ಟ ಸಾಹಿತ್ಯವನ್ನು ಹೊರತುಪಡಿಸಿದ ಉತ್ತಮ ಸಂಗೀತದ ಹಾಡುಗಳನ್ನು ಕೇಳಿಬರಲು, ಮತ್ತು ಆ ಹಾಡುಗಳ ಮಾದಕ ನೃತ್ಯವನ್ನು (ಅಂದ್ರಿತಾ ರೇ ರವರ) ನೋಡಿ ಬರಲು ಖಂಡಿತಾ ಹೋಗಿ ಬನ್ನಿ. ಕೊಟ್ಟ ದುಡ್ಡಿಗೆ ಮೋಸವಿಲ್ಲ!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ