ಸೋಮವಾರ, ಮಾರ್ಚ್ 16, 2009

ಧೀಮಂತ ಸಾಹಿತಿಯ ಜಯಂತಿ


"ಮೇಲೆ ನೋಡೆ ಕಣ್ಣ ತಣಿಪ
ನೀಲ ಪಟದಿ ವಿವಿಧ ರೂಪ
ಜಾಲಗಳನು ಬಣ್ಣಿಸಿರ್ಪ
ಚಿತ್ರ ಚತುರನಾರ್!
ಕಾಲದಿಂದ ಮಾಸದಾ ವಿ
ಚಿತ್ರವೆಸಪನಾರ್?"
(ನಿವೇದನ - ನಿವೇದನ ಕವನ ಸಂಕಲನ)


ಎಂದು ಪ್ರಕೃತಿ ಸೊಬಗಿಗೆ ಬೆರಗಾಗಿ ದೇವರನ್ನು ನಿವೇದಿಸಿದ ಕವಿ,


"ಶಿಲ್ಪಿ ವರ ಕುವರಿಯರೆ ಸೌಂದರ್ಯ ಮುದ್ರಿಕೆಯರೆ |
ದೇವದೇವನ ಸೇವೆಗೈತರ್ಪ ಸಾಧುಕುಲಮಂ |
ಭಾವ ವಿನ್ಯಾಸ ವೈಕೃತಿಗಳಿಂ ಬೆರಗುವಡಿಸಿ |
ಚಂಚಲತೆಗೆಡೆಯೆನೆಸಿ ನೀವಿಂತು ನಿಲುವುದೇಕೆ"
(ಬೇಲೂರಿನ ಶಿಲಾ ಬಾಲಿಕೆಯರು -ನಿವೇದನ ಕವನ ಸಂಕಲನ)


ಎಂದು ಬೇಲೂರು ಶಿಲಾಬಾಲಿಕೆಯರ ಸೌಂದರ್ಯ ಕಂಡು ಮೆಚ್ಚಿದ ಕವಿ,



"ವನಕುಸುಮದೊಳೆನ್ನ ಜೀ |
ವನವು ವಿಕಸಿಸುವಂತೆ |
ಮನವನನುಗೊಳಿಸು ಗುರುವೇ - ಹೇ ದೇವ

ಜನಕೆ ಸಂತಸವೀವ |
ಘನನು ನಾನೆಂದು |
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ ||"
(ವನಸುಮ - ನಿವೇದನ ಕವನ ಸಂಕಲನ)


ಎಂದು ತನ್ನ ದೊಡ್ಡತನವನ್ನು ಮರೆಮಾಡುವಂತೆ ದೇವರನ್ನು ಬೇಡಿದ ದಾರ್ಶನಿಕ,



"ಮಗುಗಳಾಟದೆ ಮನಸು ಬೇಸರುವ ಮುನ್ನ
ನಗುವಾತಿನಿಂದಲೆ ವಿಕಸಿಸದ ಮುನ್ನ
ಜಗದಿ ನಾನೊಬ್ಬಂಟಿಯೆಂದೆನಿಮ ಮುನ್ನ
ಮುಗಿಯಲೀ ಬಾಳು
ಮಿಗುವೊಡದು ಗೋಳು"
(ಬಾಳೊಂದು ಗೋಳು - ಕೇತಕೀ ವನ ಕವನ ಸಂಕಲನ)


ಬದುಕಿನ ಗೋಳನ್ನು ಬರೆದ ಸಾಹಿತಿ

"ಆ ಹೊತ್ತಿನ ಊಟ, ಆ ರಾತ್ರಿಯ ನಿದ್ದೆ, ಅಂದಂದಿನ ಚಾಕರಿ, ಅಂದಂದಿನ ಪೇಚಾಟ, ಮಾರನೆ ದಿನ ಬಂದಾಗ ಅದರ ಯೋಚನೆ - ಹೀಗಿರುವುದು ಸರಿಯೇ? ಅಥವಾ ಹೊಟ್ಟೆಯ ಪಾಡಿನ ಯೋಚನೆಗಿಂತ ಮೇಲ್ಪಟ್ಟ ವಿಚಾರ ಏನಾದರೂ ಮನುಷ್ಯನ ಪಾಲಿಗೆ ಉಂಟೋ?"
(ಬದುಕು ಏಕೆ - ಬಾಳಿಗೊಂದು ನಂಬಿಕೆ
)

ಎಂಬ ಪ್ರಶ್ನೆಯನ್ನೆತ್ತಿದ ವಿಚಾರವಾದಿ. ಇದಕ್ಕೆ ಉತ್ತರವನ್ನು ತಿಳಿಸಿ ಸಾಮಾನ್ಯರಲ್ಲಿ ಬಾಳಿಗೊಂದು ನಂಬಿಕೆಯನ್ನು ತುಂಬಿದ ವಿದ್ವಾಂಸ.

"ಹಾ ! ಪ್ರಿಯಳೆ, ಬಾ; ಇಂದಿನಿಂ ಹಿಂದಿನಳಲುಗಳ
ಮುಂದಿನಳುಕುಗಳ ತೊಲಗಿಸುವ ಬಟ್ಟಲನು
ತುಂಬಿ ನೀಡೆನಗೀಗ; ’ನಾಳೆ’ಯೆಂಬೆಯೊ? -ನಾಳೆ
ಸೇರುವೆನು ನೂರ್ಕೋಟಿ ನಿನ್ನೆಗಳ ಜೊತೆಗೆ"
(ಉಮರನ ಒಸಗೆ)


ಎಂದು ಒಮರ್ ಖಯ್ಯಾಮನ ಲೋಕೋಪದೇಶವನ್ನು ಉಮರನ ಒಸಗೆಯಾಗಿ ಭಾವಾನುವಾದವನ್ನು ಕನ್ನಡಕ್ಕೆ ತಂದ ಕವಿ.

"ಜಲಡಿಯಲ್ಲಿ ಪಯಣಿಸಿ ನಾನತ್ತ ಆರುವೆನ್ ;
ಬಾಲವಿಲ್ಲದಿಲಿಯ ರೂಪವನ್ನು ತಾಳುವೆನ್;
ಮಾಡುವೆನ್, ಮಾಡುವೆನ್, ಮತ್ತೆ ಮಾಡುವೆನ್. "
(ಕನ್ನಡ ಮ್ಯಾಕ್ ಬೆತ್
)

ಶೇಕ್ಸ್ ಪಿಯರ್ಸ್ ನ ನಾಟಕವನ್ನು ಕನ್ನಡಕ್ಕೆ ತಂದ ನಾಟಕ ರಚನಕಾರ.

"ಎತ್ತಿರಣ್ಣ ಕತ್ತೆಲದ್ದಿಯ -ಸ-
ಮಸ್ತಜನರೆ - ಎತ್ತಿರಣ್ಣ ಕತ್ತೆಲದ್ದಿಯಾ ||
ಎತ್ತಿರಣ್ಣ ಕತ್ತೆಲದ್ದಿ
ಕತ್ತೆ ಬುದ್ಧಿಗೆ ಪ್ರಸಿದ್ಧಿ
ಬುದ್ಧಿಯ ರ್ಸಸಾರ ಲದ್ಧಿ
ಲದ್ದಿಯಿಂದ ಸರ್ವ ಸಿದ್ಧಿ"
(ಗರ್ದಭ ವಿಜಯ - ಪ್ರಹಸನತ್ರಯೀ
)

ಹಾಸ್ಯ ನಾಟಕಗಳನ್ನು ಕೊಟ್ಟ ವಿಕಟ ಕವಿ

ಹೋರಾಡು ಬೀಳ್ವನ್ನಮೊಬ್ಬೊಂಟಿಯಾದಡಂ |
ಧೀರಪಥವನೆ ಬೆದಕು ಸಕಲಸಮಯದೊಳಂ ||
ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ? |
ಹೋರಿ ಸತ್ವವ ಮೆರಸು ಮಂಕುತಿಮ್ಮ ||
(ಮಂಕು ತಿಮ್ಮನ ಕಗ್ಗ
)

ಎಂದು ಮಂಕುತಿಮ್ಮನಾಗಿ,
(ಸ್ವಾಮಿ ಬ್ರಹ್ಮಾನಂದರ ಮಂಕು ತಿಮ್ಮನ ಕಗ್ಗ ದ ಪ್ರವಚನ ಕೇಳಲು ಇಲ್ಲಿ ಒತ್ತಿ)

ಬಿಸಿ ಬಿಸಿಯ ನೀರಿಂಗೆ ಹಿಮಗಿರಿಯ ತಣ್ಣೀರ|
ಹಸಿರು ತಣ್ಣೀರಿಂಗೆ ಬಿಸಿಯ ಸೇರಿಸುತೆ||
ಹಸನು ಶೀತೋಷ್ಣದಿಂದೊಡಲ ಮಜ್ಜನಗೈವ|
ಕುಶಲತೆ ಸಮನ್ವಯವೊ - ಮರುಳ ಮುನಿಯ
(ಮರುಳ ಮುನಿಯನ ಕಗ್ಗ
)

ಎಂದು ಮರುಳ ಮುನಿಯನಾಗಿ

ನನ್ನಂತ ಸಾವಿರಾರು ಮಂಕು ತಿಮ್ಮರಿಗೆ, ಮರುಳ ಮುನಿಯರಿಗೆ ಬುದ್ಧಿವಾದ ಹೇಳಿದ ಹಿರಿಯ ಸಾಹಿತಿ.

"ಯದುವಂಶತಿಲಕನ - ವೇಷವಿದೇನೆ|
ಮದಿರಾಕ್ಷಿ ಮುರಳೀ - ನಾದವಿದೇನೇ||

ಮುರಳೀಗಾನವಿದೇನೆ - ತರಲಾಪಾಂಗವದೇನೆ|
ಸ್ಮರಸಂಭ್ರಮಾನಂದ-ಸ್ಮರಣೆಯಿದೇನೆ||"
(ಮುರಳೀಧರೆ - ಅನ್ತ:ಪುರಗೀತೆ
)


ಎಂದು ಬೇಲೂರಿನ ಚೆನ್ನಕೇಶವ ಗುಡಿಯ ಶಿಲ್ಪಕಲೆಗೆ ಮಾರು ಹೋಗಿ, ಅಲ್ಲಿನ ಕೆತ್ತನೆಯ ಬಹುತೇಕ ಎಲ್ಲಾ ವಿಗ್ರಹ ಗಳ ಮೇಲೂ ಕವಿತೆ ರಚಿಸಿದ ಮಹಾ ಕವಿ

ಮೇಲೆ ಪರಿಚಯಿಸಿದ್ದದ್ದಲ್ಲದೆ, ನಾಸ್ತಿಕರಿಗೆ, ಸಂದೇಹಕರ್ತ ರಿಗೆ (Agnostics) ಸೆಡ್ಡು ಹೊಡೆದು ಆಸ್ತಿಕವಾದ ವನ್ನು ತರ್ಕ ಬದ್ಧವಾಗಿ ಚರ್ಚಿಸಿ ’ದೇವರು’ ಎಂಬ ಪ್ರಬಂಧವನ್ನು, ಮಾಧ್ಯಮದ ಚರಿತ್ರೆ, ಕರ್ತವ್ಯ ಮತ್ತು ಸ್ವಾತಂತ್ರ್ಯವನ್ನು ಚರ್ಚಿಸಿ ’ವೃತ್ತಪತ್ರಿಕೆಯನ್ನು’, ಸಾಮಾನ್ಯತಿಗೆ ಸಾಹಿತ್ಯ ಪ್ರಚಾರಕ್ಕಾಗಿ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ’ಸಾಹಿತ್ಯ ಶಕ್ತಿ’ ಯನ್ನು, ಸತ್ಯ ಧರ್ಮ ಪ್ರಗತಿ ಸಂಸ್ಕೃತಿ ವಿಷಯಗಳ ಚರ್ಚೆಯನ್ನೊಳಗೊಂಡ ’ಸಂಸ್ಕೃತಿ’ ಯನ್ನು, ’ಈಷೋಪನಿಷತ್ತು’, ’ಭಗವದ್ಗೀತಾ ಸಾರ ಅಥವಾ ಜೀವನ ಧರ್ಮ ಯೋಗ’, ’ಪುರುಷ ಸೂಕ್ತ’ ಗಳನ್ನು ಸಂಸ್ಕೃತದಿಂದ ಸರಳ ಕನ್ನಡಕ್ಕೆ, ರಾಜ್ಯಾಂಗ, ರಾಷ್ಟ್ರ - ರಾಷ್ಟ್ರಕ ನ ಸಂಬಂಧವನ್ನು, ಕರ್ತವ್ಯವನ್ನು ಚರ್ಚಿಸಿದ ’ರಾಜ್ಯಶಾಸ್ತ್ರ’ ವನ್ನು, ಮಕ್ಕಳಿಗಾಗಿ ’ಇಂದ್ರವಜ’ ’ಚಿಕ್ಕೋಜಿ’ ಕಥೆಗಳನ್ನು, ’ದಿವಾನ್ ರಂಗಾಚಾರ್ಲು’ ಮತ್ತು ’ಗೋಪಾಲಕೃಷ್ಣ ಗೋಖಲೆ’ ವಿಚಾರಗಳನ್ನು ಒಳಗೊಂಡ ಆತ್ಮ ಚರಿತ್ರೆಗಳನ್ನು, ’ಗೀತಾ ಶಾಂಕುತಲಂ’ , ’ಶೃಂಗಾರಮಂಗಳಂ’, ’ಶ್ರೀಕೃಷ್ಣಪರೀಕ್ಷಣಂ’ ಎಂಬ ಮಹಾ ಕಾವ್ಯಗಳನ್ನು, ’ವಸಂತ ಕುಸುಮಾಂಜಲಿ’ ಕವನ ಸಂಕಲನವನ್ನು, ತಮಗೆ ತಿಳಿದ ಹಿರಿಯ, ಕಿರಿಯ ಮಹಾನುಭಾವರ ೮ ಸಂಪುಟದ ’ಙ್ನಾಪಕ ಚಿತ್ರ ಶಾಲೆ’ ಯನ್ನು ( ೧) ಸಾಹಿತಿ ಸಜ್ಜನ ಸಾರ್ವ ಜನಿಕರು ೨) ಕಲೋಪಾಸಕರು ೩) ಸಾಹಿತ್ಯೋಪಾಸಕರು ೪) ಮೈಸೂರಿನ ದಿವಾನರುಗಳು ೫) ವೈದಿಕ ಧರ್ಮ ಸಮ್ಪ್ರದಾಯಸ್ಥರು ೬)ಹಲವು ಸಾರ್ವಜನಿಕರು ೭) ಹೃದಯ ಸಂಪನ್ನರು ೮) ಸ್ಮೃತಿ ಚಿತ್ರಗಳು ) ರಚಿಸಿ ಕನ್ನಡ ಸಾಹಿತ್ಯ ವನ್ನು ಶ್ರೀಮಂತಗೊಳಿಸಿದ, ಸಾರ್ವಜನಿಕ ಸೇವೆಯನ್ನು ಮಾಡಿದ ಮಹಾ ಧೀಮಂತ ಸಾಹಿತಿ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (ಡಿವಿಜಿ) ನವರ ಜನ್ಮದಿನ ನಾಳೆ. (ಮಾರ್ಚ್ -೧೭). ಈ ಸಂದರ್ಭದಲ್ಲಿ ಡಿ ವಿ ಜಿ ಯವರ ಕೃತಿಗಳ ಪರಿಚಯದ ಜೊತೆ ಅವರ ಸಾಹಿತ್ಯದ ಕೆಲವು ತುಣುಕುಗಳನ್ನು ಕೂಡ ಸಂಗ್ರಹಿಸಿ ಒದಗಿಸಿದ್ದೇನೆ. ಓದುಗರು ಡಿ ವಿ ಜಿ ಯವರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಪ್ರತಿಕ್ರಿಯಿಸುವ ಮೂಲಕ ಹಂಚಿಕೊಳ್ಳಲು ವಿನಂತಿ .

ಸಮಾಜ ಸೇವಕ ಸಮಿತಿಯ ವತಿಯಿಂದ ನಾಳೆ ಅರ್ಥಪೂರ್ಣ ಆಚರಣೆ A D A ರಂಗಮಂದಿರದಲ್ಲಿ. ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ಒತ್ತಿ. ನಾನು ಹಿಂದೆ ಎರಡು ಬಾರಿ ಈ ಸಮಿತಿ ನಡೆಸುವ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ಹಿಂದಿನ ಕಾರ್ಯಕ್ರಮಗಳ ಸಿಹಿ ನೆನಪುಗಳು ಮನಸ್ಸಿನಿಂದ ಇನ್ನೂ ಮಾಸಿಲ್ಲ. ಬನ್ನಿ ಭೇಟಿಯಾಗೋಣ.

7 ಕಾಮೆಂಟ್‌ಗಳು:

  1. mukhyavaagi DVG yarava rachanegaLinda rachitavaada lekhanavu DVG bagge aptha parichayadantide. Haageye neenu hinde bareda ithara kavigala parichayada link annu illi kottare innU uttama.

    ಪ್ರತ್ಯುತ್ತರಅಳಿಸಿ
  2. ಮೊದಲ ನಾಲ್ಕು ಚಿತ್ರಗಳಿಗೆ ತಕ್ಕಂತಹ ಕವನಗಳು...
    ವನಸುಮ ಕವನಗಳು ಚೆನ್ನಾಗಿವೆ....

    ಮಂಕುತಿಮ್ಮನ ಕಗ್ಗ...

    ಡಿ.ವಿ.ಜಿ. ಯವರ ಬಗ್ಗೆ ಅವರ ಪದ್ಯಗಳ ಬಗ್ಗೆ ಪರಿಚಯ ಚೆನ್ನಾಗಿದೆ...

    ಪ್ರತ್ಯುತ್ತರಅಳಿಸಿ
  3. ರವೀಶ, ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿನ್ನ ಸಲಹೆಯನ್ನು, ಮತ್ತೊಂದು ಪೋಶ್ಟಾಗಿ ಪರಿವರ್ತಿಸುವೆ.

    ಶಿವು, ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ಗುರುಪ್ರಸಾದ್..

    ಮಂಕುತಿಮ್ಮನ ಕಗ್ಗದಲ್ಲಿ ಏನಿಲ್ಲ..?
    ಎಲ್ಲ ಆಧ್ಯಾತ್ಮ ತತ್ವಗಳಿವೆ..

    ಅಂತಹ ಧೀಮಂತ ಕವಿಯ ಜನ್ಮದಿನ ಜ್ಞಾಪಿಸಿದ್ದಕ್ಕೆ

    ಹ್ರದಯ ಪೂರ್ವಕ ವಂದನೆಗಳು..

    ಇಂದು ಬರುತ್ತೇನೆ..

    ಪ್ರತ್ಯುತ್ತರಅಳಿಸಿ
  5. ಪ್ರಕಾಶ್,

    ಹೌದು ಮಂಕುತಿಮ್ಮನ ಕಗ್ಗದಲ್ಲಿ ಇಲ್ಲದದ್ದೇ ಇಲ್ಲ.. ಆಧ್ಯಾತ್ಮ, ಲೌಖಿಕ ಎಲ್ಲಾ ವಿಚಾರಧಾರೆಯೂ ಅದರಲ್ಲಿದೆ.. ಓದಿದಂತೆ, ಕೇಳಿದಂತೆ ಹೊಸ ಹೊಸ ವಿಷಯಗಳು ದೊರಕುತ್ತವೆ.

    ಧನ್ಯವಾದಗಳು.

    ನಿಮ್ಮನ್ನು ಕಾರ್ಯಕ್ರಮದಲ್ಲಿ ಭೇಟಿ ಮಾಡಬಹುದಿತ್ತು! ಆದರೆ ನಿಮ್ಮನ್ನು ಇಂದು ಅಲ್ಲಿ ಗುರುತು ಹಿಡಿಯುವುದು ಹೇಗೆ?

    ಪ್ರತ್ಯುತ್ತರಅಳಿಸಿ
  6. ಗುರುಪ್ರಸಾದ್ ಅವರೇ,

    ಪ್ರಕಾಶ್ ಅವರ ಬ್ಲಾಗಿನಿಂದ ಇಲ್ಲಿಗೆ ಬಂದೆ. ಡಿವಿಜಿ ಯವರ ಬಹುತೇಕ ಕೃತಿಗಳ ಸೂಕ್ಷ್ಮ ಪರಿಚಯ ಚೆನ್ನಾಗಿ ಮೂಡಿಬಂದಿದೆ, ಹೊಂದುವ ಚಿತ್ರಗಳೊಂದಿಗೆ. ಅವರಿಂದ ಪ್ರಭಾವಿತರಾಗದವರೇ ಇಲ್ಲ. ಅವರ ೧೨೨ ನೇ ಜನ್ಮದಿನಕ್ಕಾಗಿ ನನ್ನ ಬ್ಲಾಗಿನಲ್ಲೊಂದು ಲೇಖನ ಬರೆದಿದ್ದೆ. ಬಿಡುವಾದಾಗ ನೋಡಿ. ನೀವು ಕೇಳಿರುವ ಹೆಚ್ಚಿನ ಮಾಹಿತಿ ದೊರೆತರೂ ದೊರಕಬಹುದು.

    ಪ್ರತ್ಯುತ್ತರಅಳಿಸಿ
  7. ವಿನುತಾರವರೆ,

    ನನ್ನ ಬ್ಳಾಗ್ ತಾಣಕ್ಕೆ ಸ್ವಾಗತ. ತಮ್ಮ ಪ್ರೋತ್ಸಾಹ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು. ಹೌದು, ನಾವೆಲ್ಲಾ ಬಹಳಷ್ಟು ಜನ ಡಿ ವಿ ಜಿ ಯಿಂದ ಪ್ರಭಾವಿತರಾಗಿದ್ದೇವೆ.

    ನಿಮ್ಮ ಲೇಖನವನ್ನು ಓದಿ, ಪ್ರತಿಕ್ರಿಯಿಸುತ್ತೇನೆ.

    ಪ್ರತ್ಯುತ್ತರಅಳಿಸಿ