ಶನಿವಾರ, ಮಾರ್ಚ್ 21, 2009

ನನ್ನ ಪ್ರಬಂಧಕನ ಪ್ರಸಂಗ

ಅಧಿಕ ಪ್ರಸಂಗ!

ವಿಶೇಷ ಸೂಚನೆ: ಈ ಪ್ರಸಂಗ ಮತ್ತು ಪ್ರಸಂಗದ ಪಾತ್ರಧಾರಿಗಳೆಲ್ಲಾ ಕಾಲ್ಪನಿಕ! ’ನನ್ನ’, ’ನಾನು’ ಎಂಬುದು ಕೂಡ ಕಾಲ್ಪನಿಕ ಪಾತ್ರಧಾರಿಯೆ! ನಿಜ ಜೀವನಕ್ಕೆ ಸಮೀಪದಲ್ಲಿ ಕಂಡು ಬಂದರೆ ಅದು ಕಾಕತಾಳೀಯ ಮಾತ್ರ!

ನನ್ನ ಪ್ರಬಂಧಕನನ್ನು (ದೀಪಕ್ ಎಂದಿಟ್ಟುಕೊಳ್ಳಿರಿ) ಒಂದೇ ಸಾಲಿನಲ್ಲಿ ಬಣ್ಣಿಸುವುದಾದರೆ ’ಬೆಳೆದ ದೇಹ ಮತ್ತು ಬೆಳೆದ ಬುದ್ಧಿಯ ಅಸಮತೋಲನ’ (ಯಾವುದು ದೊಡ್ದದು, ಯಾವುದು ಚಿಕ್ಕದು ಎಂಬುದರ ಸ್ಪಷ್ಟೀಕರಣ ಅಗತ್ಯವಿಲ್ಲ, ಮುಂದೆ ಓದಿ ನಿಮಗೇ ತಿಳಿಯುತ್ತದೆ) ! ಇವನಿಗೆ ಒಂದು ಚಟ - ಹಾಸ್ಯ ಚಟಾಕಿಗಳನ್ನು ಹಾರಿಸುವುದು, ಮತ್ತು ಅದರಲ್ಲಿ ದಯನೀಯವಾಗಿ ಸೋಲುಂಡು ಅಪಹಾಸ್ಯಕ್ಕೀಡಾಗುವುದು. ಹೀಗೆ ಒಮ್ಮೆ ನಡೆದ ಪ್ರಸಂಗ ಓದಿ.

ಕೆಲವು ದಿನಗಳ ಹಿಂದೆ, ಆರ್ಥಿಕ ಹಿಂಜರಿತದ ಹಿನ್ನಲೆಯಲ್ಲಿ ನಮ್ಮ ಸಂಸ್ಥೆಯ ಎಲ್ಲಾ ನೌಕರ ಸಂಬಳಕ್ಕೂ (ಕೆಲವರು ಹೇಳುವಂತೆ ’ಕೂಲಿ ದುಡ್ಡಿ’ಗೆ) ಕತ್ತರಿ ಬಿತ್ತು. ಇಂತಹ ಶೋಕದ ಸನ್ನಿವೇಶದಲ್ಲೂ, ನಮಗೆ ಸಂತಸ ತಂದ ವಿಷಯವೆಂದರೆ, ಪ್ರಬಂಧಕರಿಗೆ ಅಭಿಯಂತರರಿಗಿಂತ ಶೇ ೩ ರಷ್ಟು ಹೆಚ್ಚು ಸಂಬಳ ಕಡಿತವಾಗಿತ್ತು. ನನ್ನ ಸಂಬಳ ಕಡಿತ (ಕ)% ಆದರೆ ನನ್ನ ಪ್ರಬಂಧಕನದು (ಕ+೩)% ಆಗಿತ್ತು. ಕಡಿತ ಹೆಚ್ಚಾದಂತೆ ಕೆರೆತ/ಗಾಯ ಕೂಡ ಹೆಚ್ಚಾಗಬೇಕೆಲ್ಲ!

ಆ ಕರಾಳ ದಿನದಂದು, ಯಾವುದೇ ಮುನ್ಸೂಚನೆಯಿಲ್ಲದೆ, ದೀಪಕ್ ಅಪರಾಹ್ನ ಊಟಕ್ಕೆ ನಮ್ಮ ಜೊತೆ ಬಂದು ಕೂತುಬಿಟ್ಟ. ಅವನು ಬಂದು ಕೂರುವ ಒಂದು ಸಣ್ಣ ಸೂಚನೆ ಸಿಕ್ಕಿದ್ದರೂ, ಅವನಿಗೆ ಕೂರಲಾಗದಂತ ಇಕ್ಕಟ್ಟಿನ ಜಾಗದಲ್ಲಿ ನಾವು ಊಟಕ್ಕೆ ಕುಳಿತುಬಿಡುತ್ತಿದ್ದೆವು! ಏಟುಗಳೇ ಹೀಗೆ, ಬಿದ್ದಾಗ ಒಂದರ ಮೇಲೊಂದು ದಬ ದಬ ಬೀಳುತ್ತವೆ. ಮೊದಲೇ ಜೀರ್ಣಿಸಿಕೊಳ್ಳಲಾಗದ ಸುದ್ದಿಯನ್ನು ಕೇಳಿ ನೊಂದಿದ್ದ ನಮಗೆ, ಇವನು ಬಂದಿದ್ದು ಗಾಯದ ಮೇಲೆ ಬರೆ ಎಳೆದಂತಾಗಿ, ಅವನ ಮುಖವನ್ನು ದುರುಗುಟ್ಟಿ ನೋಡಿ ನಕ್ಕಂತೆ ನಟಿಸಿದ್ದಾಯಿತು.

ಅವನ ನಗೆ ಚಟಾಕಿಗಳನ್ನು ತಡೆಯಬೇಕೆಂದಲೇ, ನನ್ನ ಗೆಳೆಯ ಅವನಲ್ಲಿ, ಸಂಬಳ ಕಡಿತದ ಅಸಮಧಾನವನ್ನು ತೋಡಿಕೊಂಡ. ಆದರೆ ಶ್ವಾನದ ಬಾಲ! ತನ್ನ ಎಂದಿನ ಧಾಟಿಯಂತೆ ದೀಪಕ್,

ಒಮ್ಮೆ ಜೋರಾಗಿ ನಕ್ಕಿ, ನನ್ನದು (ಕ+೩)%, ನನ್ನದೇ ಜಾಸ್ತಿ, ನಿಮ್ಮದೆಲ್ಲಾ ಕಡಿಮೆ ಹ ಹ ಹ ಎಂದು ಮತ್ತೊಮ್ಮೆ ನಕ್ಕ.

ಪಾಪ, ಅದು ತನ್ನ ದು:ಖ ವನ್ನು ಮರೆಯಲು ಪ್ರಯತ್ನಿಸಿದ ಪ್ರಾಮಾಣಿಕ ಪ್ರಯತ್ನವೇನೋ ನನಗೆ ತಿಳಿಯಲಿಲ್ಲ, ಮೊದಲೇ ನನಗೆ ಹಿಂದಿನ ಸಿಟ್ಟಿತ್ತು, ಅದಕ್ಕೆ ನಾನು,

ರೀ ದೀಪಕ್, ಅದಕ್ಕೆ ಯಾಕೆ ಯೋಚನೆ ಮಾಡ್ತೀರಾ? ಅಭಿಯಂತರನಾಗಿ ಹಿಂಬಡ್ತಿ ತೆಗೆದುಕೊಳ್ಳಿ, ಆಗ ನಿಮ್ಮ ಕಡಿತ ಕಡೆಮೆಯಾಗುತ್ತದೆ. ನೀವು ಅದಕ್ಕೆ ಲಾಯಕ್ಕು ಎಂಬರ್ಥದಲ್ಲಿ ಖಾರವಾಗಿ ನುಡಿದೆ!

ಪಕ್ಕದಲ್ಲಿ ಕುಳಿತಿದ್ದವರೆಲ್ಲ ಗೊಳ್ಳೆಂದು ನಕ್ಕರು.
ಆ ಬೃಹಾದಾಕೃತಿಯ ಮುಖ ಸಣ್ಣಗಾಯಿತು ಎಂದು ಹೇಳುವುದಕ್ಕೆ ಬರುವುದಿಲ್ಲ, ಮುಖವನ್ನಂತೂ ಗಂಟಿಕ್ಕಿಕೊಂಡರು.

ಜಟ್ಟಿ ಬಿದ್ದಾಗ ಆಳಿಗೊಂದು ಏಟು ಎಂಬಂತೆ, ನನ್ನ ಗೆಳೆಯ ಎಷ್ಟು ದಿನದಿಂದ ಅದುಮಿಟ್ಟಿಕೊಂಡಿದ್ದನೋ,
ಮುಂಬಡ್ತಿ ಸಿಕ್ಕಾಗ ನಮಗೆ ಕಳಿಸುವ ವಿ-ಅಂಚೆಯನ್ನು ಅಭಿನಯಿಸಿ ಓದಿಬಿಟ್ಟ (ನಮ್ಮ ಸಂಸ್ಥೆಯಲ್ಲಿ, ಯಾರಾದರೂ ಮುಂಬಡ್ತಿ ಪಡೆದಾಗ, ಮುಂಬಡ್ತಿ ಪಡೆದ ನೌಕರನ ಪ್ರಬಂಧಕ, ಆ ಸಿಹಿ ಸುದ್ದಿಯನ್ನು ವಿ - ಆಂಚೆಯ ಮೂಲಕ ಸಮಸ್ತ ನೌಕರರಿಗೂ ಕಳಿಸುತ್ತಾರೆ)

"ಆತ್ಮೀಯರೆ,
ದೀಪಕ್ ನನ್ನು ಅಭಿಯಂತರನಾಗಿ ಹಿಂಬಡ್ತಿ ನೀಡಲು ನನಗೆ ಅತೀವ ಸಂತಸವಾಗುತ್ತಿದೆ. ಅವರು ಕಷ್ಟ ಪಟ್ಟು ದುಡಿದು, ನಿಭಾಯಿಸಿದ (ಬೇ)ಜವಾಬ್ದಾರಿಗಳನ್ನು ಗುರುತಿಸಿ ಸಂಸ್ಥೆ ಈ ಕಾಣಿಕೆಯನ್ನು ಗೌರವಪೂರ್ವಕವಾಗಿ, ಸಂತೋಷದಿಂದ ನೀಡುತ್ತಿದೆ. ನೀವು ಅಡ್ಡಾಡುತ್ತಿರುವಾಗೆಲ್ಲಿಯಾದರೂ ದೀಪಕ್ ಎದುರಾದರೆ, ಅವನಿಗೆ ಶುಭಕೋರಿ ಸಂತೋಷವನ್ನು ಹಂಚಿಕೊಳ್ಳಿ. ಔತಣ ಕೂಟಕ್ಕೆ ಒತ್ತಾಯಿಸಿ."

ಇಲ್ಲಿಯವರೆಗೂ, ಹತೋಟಿಯಲ್ಲಿದ್ದ ನಗೆ ಅತಿಶಯವಾಯಿತು. ಪಕ್ಕದ ಮೇಜುಗಳಲ್ಲಿ ಕುಳಿತವರೆಲ್ಲಾ ನಮ್ಮೆಡೆಗಿ ನೋಡಲು ಪ್ರಾರಂಭಿಸಿದರು. ದೂರದಲ್ಲಿ ಕುಳಿತಿದ್ದ ಒಂದು ತಂಡವಂತೂ ನಮ್ಮ ಅತಿಶಯ ನಗುವನ್ನು ಅಣಕಿಸಲೆಂದೇ ಗಟ್ಟಿಯಾಗಿ ನಕ್ಕರು.

ನಮ್ಮ ಪ್ರಬಂಧಕನನ್ನು ಗೇಲಿ ಮಾಡಿ ವಿಕೃತ ಸಂತೋಷವನ್ನು ಪಡೆದುಕೊಳ್ಳುವ ಆನಂದ ಸಮಯ ನಮ್ಮದಾಗಿತ್ತು.

ನಾವು ಮತ್ತೊಬ್ಬರನ್ನು ಗೇಲಿ ಮಾಡಿ ಸಂತೋಷವನ್ನು ತೆಗೆದುಕೊಳ್ಳಬಹುದಾದರೆ, ನಮ್ಮನ್ನು ಯಾರಾದರೂ ಗೇಲಿ ಮಾಡಿದಾಗ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ದೊಡ್ಡತನವನ್ನು ಬೆಳೆಸಿಕೊಳ್ಳಬೇಕಲ್ಲವೆ? ನಮ್ಮ ಪ್ರಬಂಧಕ ಗೇಲಿಗೆ ಉರಿದು ಹೋದನೋ? ಅಥವಾ ಕ್ರೀಡಾ ಮನೋಭಾವದಿಂದ ತೆಪ್ಪಗಾದನೋ? ಅದನ್ನೂ ಗಮನಿಸದೆ ಊಟ ಮುಗಿಸಿ ಕೈ ತೊಳೆದುಕೊಂಡೊ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ