ಮಂಗಳವಾರ, ಸೆಪ್ಟೆಂಬರ್ 22, 2009

ಕಲಾತ್ಮಕ ಪರ್ಯಾಯ ಚಲನಚಿತ್ರಗಳಲ್ಲಿ ಮನರಂಜನೆಯ ಕೊರತೆಯೇ?

ಸಮರಸ ಸಂಪಾದಕೀಯದಲ್ಲಿ,

art_films


ಇತ್ತೀಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯ ಹಿನ್ನಲೆಯಲ್ಲಿ ಮತ್ತೆ ಪರ್ಯಾಯ/ಕಲಾತ್ಮಕ ಚಲನಚಿತ್ರಗಳ ಚರ್ಚೆ ಪ್ರಾರಂಭವಾಗಿದೆ. ಕಲಾತ್ಮಕ ಚಲನಚಿತ್ರ ನಟರ, ನಿರ್ದೇಶಕರ, ನಿರ್ಮಾಪಕರ ಮತ್ತು ಇತರೆ ತಂತ್ರಜ್ಞರ ಪ್ರಶಂಸೆ ಕೂಡ ಈ ಸಮಯದಲ್ಲಿ ಹೆಚ್ಚಾಗುತ್ತದೆ. ಆದರೆ ಆ ಚಲನಚಿತ್ರಗಳ ನಿರ್ಮಾಪಕರ, ನಿರ್ದೇಶಕರ, ನಟರ ಕೊರಗು ಹಲವು. ನಮ್ಮ ಚಲನಚಿತ್ರಗಳನ್ನು ಜನ ಸ್ವೀಕರಿಸುವುದಿಲ್ಲ. ನಮ್ಮ ಚಲನಚಿತ್ರಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವುದಿಲ್ಲ. ಹಣಗಳಿಕೆಯಲ್ಲಿ ಮುಂದಿಲ್ಲ. ಹೀಗೆ ಪಟ್ಟಿಗೆ ಕೊನೆಯಿಲ್ಲ.


ಈ ಪರ್ಯಾಯ ಚಲನಚಿತ್ರಗಳು, ವ್ಯವಹಾರಿಕ ಚಲನಚಿತ್ರಗಳಿಗಿಂತ ಹೇಗೆ ವಿಭಿನ್ನ ಎಂದು ಚಿಂತಿಸುತ್ತಾ ಹೋದರೆ, ಸಾಮಾನ್ಯವಾಗಿ ಈ ಕಲಾತ್ಮಕ ಚಲನಚಿತ್ರಗಳು ಒಂದು ಕಾದಂಬರಿಯನ್ನೋ,ಅಥವಾ ಒಬ್ಬ ಸಾಹಿತಿಯ ಕಥೆಯನ್ನೋ ಆಧರಿಸಿದ್ದಾಗಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿ ವ್ಯವಹಾರಿಕ ಚಲನಚಿತ್ರಗಳಿಗೆ ಕಥೆಗೆ ಹೆಚ್ಚಿನ ಪ್ರಾಧ್ಯಾನವೇನೂ ಇಲ್ಲ. ಪ್ರಾಧ್ಯಾನತೆ ಕೊಟ್ಟರೆ ಜನರ ಪುಣ್ಯ! ಪರ್ಯಾಯ ಚಲನಚಿತ್ರಗಳ ಇಡೀ ಕಥೆ, ನಿರೂಪಣೆ ಒಂದು ಸಮಸ್ಯೆಯ ಸುತ್ತಲೋ, ಒಂದು ವಸ್ತುವಿನ ಸುತ್ತಲೋ ಹೆಣೆದಿರುತ್ತವೆ.ಆ ಚಲನಚಿತ್ರಗಳು ಒಂದು ಸಂದೇಶವನ್ನು ಕೊಡಲು ಬದ್ಧವಾಗಿರುತ್ತವೆ. ಆದರೆ ವ್ಯವಹಾರಿಕ ಚಿತ್ರಗಳು ಚಿತ್ರಾನ್ನವೆನ್ನಬಹುದು. ಚಿತ್ರ ಗೆಲ್ಲಲು, ಹಣ ಗಳಿಸಲು ಏನು ಬೇಕೋ ಅಷ್ಟೆ! ಸಾಮಾನ್ಯವಾಗಿ ಪರ್ಯಾಯ ಚಲನಚಿತ್ರಗಳಲ್ಲಿ ನಟನೆ ಗಂಭೀರ. ಹಾಸ್ಯ ಅಥವಾ ಸಂಗೀತಕ್ಕೆ ಕಡಿಮೆ ಆದ್ಯತೆ. ಅವುಗಳು ಚಲನಚಿತ್ರಗಳಲ್ಲಿ ಸ್ಥಾನ ಪಡೆದರೂ ಚಲನಚಿತ್ರ ಕೊಡುವ ಸಂದೇಶಕ್ಕೆ ಪೂರಕವಾಗಿರುತ್ತವೆ. ಈ ನಿಯಮಬದ್ಧ ಚೌಕಟ್ಟಿನ ಅವಶ್ಯಕತೆ ವ್ಯವಹಾರಿಕ ಚಲನಚಿತ್ರಗಳಿಗಿಲ್ಲ. ಚಲನಚಿತ್ರಕ್ಕೆ ಸಂಬಂಧವಿಲ್ಲದ ಹಾಸ್ಯ, ನೃತ್ಯ ದೄಶ್ಯಗಳು ಕಂಡುಬರುವುದು ಸಾಮಾನ್ಯ.


ಈ ಭಿನ್ನತೆಯನ್ನು ಗಮನಿಸಿದಾಗ, ಒಂದು ಕಲಾತ್ಮಕ ಚಲನಚಿತ್ರವನ್ನು ನೋಡಲು ಒಂದು ಚಂದದ ಮನಸ್ಥಿತಿಯ ಅವಶ್ಯಕತೆ ಇರುತ್ತದೆ. ಚಲನಚಿತ್ರ ಕೊಡುವ ಸಂದೇಶವನ್ನು ಅರಿಯಲು, ಚಲನಚಿತ್ರವನ್ನು ಗಂಭೀರವಾಗಿ ವೀಕ್ಷಿಸಬೇಕಾದ, ಕೆಲವೊಮ್ಮೆ ಚಲನಚಿತ್ರದ ಬಗ್ಗೆ ಚರ್ಚಿಸಬೇಕಾದ ಅವಶ್ಯಕತೆ ಇರುತ್ತದೆ. ಕಲಾತ್ಮಕ ಚಲನಚಿತ್ರಗಳು ಮನರಂಜನೆ ಒದಗಿಸಬಲ್ಲವಾದರೂ, ಆ ಮನರಂಜನೆಯನ್ನು ಅನುಭವಿಸಬೇಕಾದರೆ, ಆ ಚಲನಚಿತ್ರ ಕೊಡುವ ಸಂದೇಶವನ್ನು ಅನುಭವಿಸಬೇಕಾಗುತ್ತದೆ. ಆ ಚಲನಚಿತ್ರ ತನ್ನ ಸಂದೇಶ ಜನರಿಗೆ ತಲುಪಿಸುವಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ (ನಟನೆ, ನಿರೂಪಣೆ ಮುಂತಾದ ಚಲನಚಿತ್ರದ ಅಂಗಗಳು ಇದರಲ್ಲಿ ಸೇರಿಸಬಹುದಾದರೂ), ಮತ್ತು ಅದನ್ನು ಪ್ರೇಕ್ಷಕ ಪ್ರಂಶಸಿಸಬಲ್ಲನೇ ಎಂಬುದರ ಮೇಲೆ ಆ ಚಲಚಿತ್ರ ಒದಗಿಸಬಲ್ಲ ಮನರಂಜನೆ ಅವಲಂಬಿತವಾಗಿದೆ. ಆದರೆ ಎಷ್ಟೋ ಬಾರಿ ಸಾಮಾನ್ಯ ಪ್ರೇಕ್ಷಕನಿಗೆ ಗಂಭೀರವಾಗಿ ಚಲನಚಿತ್ರಗಳನ್ನು ನೋಡುವ ವ್ಯವಧಾನ ಕಡಿಮೆ. ಇದಕ್ಕೆ ಸಾಕಷ್ಟು ಆರ್ಥಿಕ, ಸಾಮಾಜಿಕ ಕಾರಣಗಳಿವೆ. ಆದುದರಿಂದ ಒಂದು ವ್ಯಾವಾಹಾರಿಕ ಚಲನಚಿತ್ರದಲ್ಲಿ ಕಂಡುಬರುವ ಒಂದು ಉತ್ತಮ ಹಾಡು ಮತ್ತು ನೃತ್ಯವೋ, ಒಂದು ಹಾಸ್ಯ ದೃಶ್ಯಾವಳಿಯೋ, ಒಂದು ಭಾವಾತಿರೇಕದ ದೃಶ್ಯಾವಳಿಯೋ ಜನರಿಗೆ ಸುಲಭವಾಗಿ ಮುದ ನೀಡಬಲ್ಲುದು. ಈ ಕಾರಣದಿಂದ ಹಣ ಮಾಡುವುದನ್ನೇ ಮಾನದಂಡವಾಗಿಟ್ಟುಕೊಂಡರೆ, ಈ ರೀತಿಯ ಚಿತ್ರಾನ್ನದ ಚಲನಚಿತ್ರಗಳು ಸುಲಭವಾಗಿ ಗೆಲ್ಲುತ್ತವೆ.

ಮುಂದೆ ಓದಿ

1 ಕಾಮೆಂಟ್‌:

  1. ಸಿನೆಮಾ ಅಂದರೆ ಬಫೆ ಇದ್ದ ಹಾಗೆ ಸರ್. ಮನರಂಜನೆ ಬಯಸುವವರು ಅದನ್ನು ಹುಡುಕಿ ನೋಡುತ್ತಾರೆ. ಬೇರೆ ರೀತಿ ಬಯಸುವವರಿಗೆ ಬೇರೆ ರೀತಿಯ ಸಿನೆಮಗಳಿವೆ.

    ತಮಗೆ ಹೇಳಬೇಕಾದ್ದನ್ನು ಮನರಂಜನೆಯ ಚೌಕಟ್ಟಿನಲ್ಲಿ ಹೇಳುವ ಕಲೆ ಕೆಲ ನಿರ್ದೇಶಕರಿಗೆ ಮಾತ್ರ ಇರ್ತದೆ. ಅಂತವರ ಸಿನೆಮಾ ನೋಡಿದರೆ ನಿಮಗೆ ಅದು ಕಮರ್ಶಿಯಲ್ ಸಿನೆಮಾ ಅಥವ ಕಲಾತ್ಮಕತೆಯಾ ಹೇಳೋಕೇ ಆಗಲ್ಲ.

    ಪ್ರತ್ಯುತ್ತರಅಳಿಸಿ