ಗುರುವಾರ, ಜುಲೈ 01, 2010

ಕನ್ನಡ ಸಾಹಿತ್ಯಕ್ಕೆ ಕುಂದಣವಿಟ್ಟವರ ಹೆಸರಿಗೆ ಅಪಚಾರವೇಕೆ?

ಅ.ನ.ಕೃಷ್ಣರಾಯರು, ’ಕನ್ನಡ ಕುಲ ರಸಿಕರು’ ಎಂಬ ತಮ್ಮ ಪುಸ್ತಕದಲ್ಲಿ ಹೀಗೆನ್ನುತ್ತಾರೆ “ಕನ್ನಡ ಸಾಹಿತ್ಯ ಪ್ರಪಂಚದಲ್ಲೇನಾದರೂ ಸಹೃದಯತೆ, ಸಹನೆ, ಪರರ ಗುಣಗ್ರಹಣ ಶಕ್ತಿಯಿದ್ದರೆ ಅದನ್ನು ತಂದುಕೊಟ್ಟ ಸಿ.ಕೆ. ವೆಂಕಟರಾಮಯ್ಯನವರ ಉಪಕಾರ ನಾವು ಮರೆಯಬಾರದು”. ಕರ್ನಾಟಕದ ಕೆಲ ರಾಜಕಾರಣಿಗಳಿಗೆ ಇಷ್ಟೊಂದುದು ಸೂಚ್ಯವಾದ ಹೇಳಿಕೆ ಅರ್ಥವಾಗದೆ ಹೋಗಬಹುದಾದದ್ದರಿಂದ, ಇದನ್ನೇ ಸ್ವಲ್ಪ ವಿಸ್ತರಿಸಿ, ಕನ್ನಡ, ಕರ್ನಾಟಕದ ಬಗ್ಗೆ ಸ್ವಲ್ಪವಾದರೂ ಗೌರವ,ಕಾಳಜಿ ಇದ್ದರೆ ಸಿ ಕೆ ವೆಂಕಟರಾಮಯ್ಯನವರ ಹೆಸರನ್ನು ನೀವು ಬೆಳಗದೇ ಹೋದರೂ ಕನಿಷ್ಠ ಪಕ್ಷ ಅಗೌರವ ತರುವಂತಹ ಕೆಲಸವನ್ನು ಮಾಡಬಾರದು.

ಆಗಿರುವ ಅಪಚಾರವೇನು?

ಪದ್ಮಶ್ರೀ ವಿಜೇತ ಪ್ರಥಮ ಕನ್ನಡಿಗ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸ್ಥಾಪಕ-ನಿರ್ದೇಶಕ, ಮೇರು ಸಾಹಿತಿ, ಶ್ರೇಷ್ಠ ವಾಗ್ಮಿ ಸಿ ಕೆ ವೆಂಕಟರಾಮಯ್ಯನವರ ಹೆಸರಿಗೆ ಅಪಚಾರ ತರುವಂತಹ ಒಂದು ಕೆಲಸ ಸದ್ದಿಲ್ಲದೆ ಸಾಗಿರುವುದರಿಂದ ಮೇಲಿನ ಸಾಲುಗಳ ಅನಿವಾರ್ಯತೆ ಕಂಡುಬರುತ್ತಿದೆ. ಕೆಲವು ತಿಂಗಳ ಹಿಂದೆ ಬಿ. ಬಿ. ಎಂ. ಪಿ, ಮಲ್ಲೇಶ್ವರದ ೮ ನೇ ಮುಖ್ಯರಸ್ತೆಯನ್ನು “ಪದ್ಮಶ್ರೀ ಸಿ.ಕೆ ವೆಂಕಟರಾಮಯ್ಯ ರಸ್ತೆ” ಎಂದು ನಾಮಕರಣ ಮಾಡುವ ನಿರ್ಧಾರವನ್ನು ತಳೆದು, ಇದರ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟನೆ ಹೊರಡಿಸಿತ್ತು. ಈ ನಿರ್ಣಯಕ್ಕೆ ಸಾರ್ವಜನಿಕರು ಯಾರೂ ಆಕ್ಷೇಪಣೆ ವ್ಯಕ್ತಪಡಿಸಿರಲಿಲ್ಲ. ಆಲ್ಲದೆ ಈ ನಿರ್ಣಯಕ್ಕೆ ಮಾನ್ಯ ಮುಖ್ಯಮಂತ್ರಿಗಳ ಅನುಮತಿಯೂ ದೊರೆತು, ಈ ವಿಷಯವಾಗಿ ಸರ್ಕಾರದ ಆಜ್ಞೆಯಾಗುವುದರಲ್ಲಿತ್ತೆಂದು ತಿಳಿದು ಬಂದಿದೆ. ಇನ್ನೇನು ರಸ್ತೆಗೆ ಸಿ. ಕೆ. ವೆಂಕಟರಾಮಯ್ಯನವರ ನಾಮಕರಣವಾಗುತ್ತದೆನ್ನುವುದರಲ್ಲಿ, ಒಬ್ಬ ರಾಜಕಾರಣಿ ಮಧ್ಯ ಪ್ರವೇಶಿಸಿ, ಅದೇ ರಸ್ತೆಗೆ ಒಂದು ಸಮುದಾಯವನ್ನು ಪ್ರತಿನಿಧಿಸುವ ಖಾಸಗಿ ಸಂಸ್ಥೆಯ ಹೆಸರಿಡಲು ಸನ್ನದ್ಧರಾಗಿದ್ದಾರೆ! ಕರ್ನಾಟಕದ ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದರಲ್ಲಿ ಸಿ.ಕೆ. ವೆಂಕಟರಾಮಯ್ಯನವರಿಗೆ ಯಾವುದೇ ವಿಧದಲ್ಲೂ ಸರಿಸಾಟಿಯಾಗಿ ನಿಲ್ಲದ ಆ ಖಾಸಗಿ ಸಂಸ್ಥೆಯ ಹೆಸರನ್ನು ಒಂದು ಪ್ರಮುಖ ರಸ್ತೆಗೆ ಇಡುವ ಔಚಿತ್ಯ ಕಂಡು ಬರುತ್ತಿಲ್ಲವಾದ್ದರಿಂದ ಇದು ಕನ್ನಡ ನಾಡು ನುಡಿಗೆ ಹೋರಾಟ ನಡೆಸಿದ ಅಪ್ರತಿಮ ಕನ್ನಡಿಗನಿಗೆ ತೋರುವ ಅಪಮಾನವಲ್ಲದೆ ಬೇರೇನಿಲ್ಲ. ಮುಂದೆ ಓದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ