ಮಂಗಳವಾರ, ಜುಲೈ 13, 2010

ವಸುಧೇಂದ್ರರ ಆತ್ಮೀಯ ಕಾರ್ಯಕ್ರಮದ ಸಂಕ್ಷಿಪ್ತ ವಿವರ



ಆಕೃತಿ ಪುಸ್ತಕ ಮಳಿಗೆಯಲ್ಲಿ, ವಸುಧೇಂದ್ರ ತಮ್ಮ ರಕ್ಷಕ ಅನಾಥ ಪುಸ್ತಕದ ’ರಕ್ಷಕ ಅನಾಥ’ ಪ್ರಬಂಧ ಓದಿ ರಂಜಿಸಿದರು. ನೆರೆದಿದ್ದವರನ್ನೆಲ್ಲ ಪರಿಚಯಿಸಿಕೊಳ್ಳುವುದರಿಂದ ಹಿಡಿದು, ಮಕ್ಕಳಲ್ಲಿ ಕನ್ನಡ ಓದುವ ಆಸಕ್ತಿ ಮೂಡಿಸುವುದು ಹೇಗೆ? ದೃಶ್ಯ ಮಾಧ್ಯಮ ಓದಿಗೆ ಪೂರಕವೋ? ಮಾರಕವೋ? ಓದಿನ ಹವ್ಯಾಸ ಹೆಚ್ಚಾಗಲು ಕನ್ನಡದಲ್ಲೂ ನಕಲಿ ಪುಸ್ತಕದ ಹಾವಳಿ ಪ್ರಾರಂಭವಾಗಬೇಕೆ? ಎಂಬಿತ್ಯಾದಿ ಚರ್ಚೆಗಳಾದವು!

ಹಿರಿಯರೊಬ್ಬರ ’ಅಥಿತಿ ಮತ್ತು ಸಂಸ್ಕೃತಿ’ ಪ್ರಬಂಧವನ್ನು ಓದಲು ಕೇಳಿಕೊಂಡಾಗ, ಅದರಲ್ಲಿರುವ ಕೆಲವು ಸಾಲುಗಳನ್ನು ಎಲ್ಲರ ಮುಂದೆ ಓದುವುದು ಸರಿ ಬರುವುದಿಲ್ಲ ಎಂದುಕೊಂಡು, ಈಗಾಗಲೇ ’ಸಮ್ಮೇಳನ’ದ ಬಗ್ಗೆ ಹಲವಾರು ಬಾರಿ ಮಾತನಾಡಿದ್ದರಿಂದ, ’ರಕ್ಷಕ ಅನಾಥ’ ಪ್ರಬಂಧವನ್ನೇ ಓದಿದರು. ರಕ್ಷಕ ಅನಾಥದ ಕಥೆಯನ್ನು ಶ್ರೋತೃಗಳು ತಮ್ಮ ಜೀವನದಲ್ಲಿ ನಡೆದ ಸಂಗತಿಗಳಿಗೆ ಹೋಲಿಸಿ, ತಮ್ಮ ಅನುಭಗಳನ್ನೂ ಹಂಚಿಕೊಂಡರು. ಕೊನೆಗೆ ವಸುಧೇಂದ್ರರ ಮನೆಯಲ್ಲಿದ್ದ ಆ ಫೋಟೋಗಳ ಗತಿ ಏನಾಯಿತು ಎಂಬ ಪ್ರಶ್ನೆಗೆ, ವಸುಧೇಂದ್ರರ ನಗುವೇ ಉತ್ತರ! ವಸುಧೇಂದ್ರರು ಬರೆಯುವುದು ಹೆಚ್ಚು ಐ.ಟಿ ಕ್ಷೇತ್ರದ ಬಗೆಗೇ ಅಲ್ಲವೇ ಅಂಬುದಕ್ಕೆ, ಹಾಗೇನಿಲ್ಲ, ನನ್ನ ಬಾಲ್ಯದ ದಿನಗಳ ಬಗ್ಗೆ ಬರೆದಿರುವುದೆಲ್ಲಾ ಐ ಟಿ ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲ. ಇನ್ನುಳಿದದ್ದರಲ್ಲಿ ಅದೇ ಹೆಚ್ಚಿರಬಹುದು, ಏಕೆಂದರೆ ನನ್ನ ಅನುಭವಕ್ಕೆ ಬಂದಿರುವುದು ಅವುಗಳೇ ಎಂದರು! ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಾಹಿತ್ಯವನ್ನು ರೂಪಿಸುವುದಕ್ಕೆ ಗಂಭೀರ ಚಿಂತನೆ ನಡೆಸುವುದಾಗಿ ಭರವಸೆಯಿತ್ತರು. ಮಕ್ಕಳಿಗೆ ಏನೇ ಮಾಡಿದರೂ ಬಣ್ಣ ಬಣ್ಣವಾಗಿರುತ್ತದೆ. ಕಪ್ಪು ಬಿಳುಪಿನಲ್ಲಿ ಮಾಡಿ ಅವರ ಆಸಕ್ತಿಯನ್ನು ಕುಂದಿಸುವುದಿಲ್ಲವೆಂದರು. ಯಾರೋ ವಸುಧೇಂದ್ರ ರವರನ್ನು ನಿಮ್ಮ ಪುಸ್ತಕಗಳನ್ನು ನಕಲು ಮಾಡುವ ಸಾಧ್ಯತೆಯಿದೆ ಎಚ್ಚರಿಕೆಯಿಂದಿರಿ ಎಂದಿದ್ದರಂತೆ. ಅದಕ್ಕೆ ವಸುಧೇಂದ್ರ ಆಯ್ಯೋ, ಮಾಡಲಿ ಬಿಡಿ. ನನ್ನ ಪುಸ್ತಕವನ್ನು ಹಾಗಾದರೂ ಓದಿದರೆ ನನಗೆ ಬಹಳ ಸಂತೋಷ ಎಂದರಂತೆ. ನಾವೇ ಪುಸ್ತಕದ ಬೆಲೆಯನ್ನು ಅಷ್ಟು ಕಡಿಮೆ ಇಡುತ್ತೇವೆ. ಅದಕ್ಕಿಂತ ಕಡಿಮೆ ಬೆಲೆಯಿಟ್ಟು ಮಾರಾಟ ಮಾಡಲು ಪೈರೆಸಿ ಮಾಡುವವರಿಗೆ ಅಷ್ಟು ಸುಲಭವಲ್ಲ ಎಂಬುದು ವಸುಧೇಂದ್ರ ರವರ ನಂಬಿಕೆ. ಟಿ ವಿ ಯಲ್ಲಿ ಪುಸ್ತಕಗಳನ್ನು ಪರಿಚಯಿಸುವಂತ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಬೇಕೆ ಎಂದರು. ಪಾಶ್ಚಿಮಾತ್ಯ ದೇಶಗಳಲ್ಲಿ, ಟಿ ವಿ ಮಾಧ್ಯಮ ಲಗ್ಗೆಯಿಟ್ಟು ಪುಸ್ತಕಗಳನ್ನು ಓದುವರ ಸಂಖ್ಯೆ ಕುಸಿದು, ಅದು ಮತ್ತೆ ಚೇತರಿಸಿಕೊಂಡಿರುವುದನ್ನು ತಿಳಿಸಿ, ನಮ್ಮಲ್ಲೂ ಹೆಚ್ಚು ವ್ಯತ್ಯಾಸವೇನಿಲ್ಲ. ನಮ್ಮಲ್ಲೂ ಪುಸ್ತಕ ಓದುವ ಅರಿವು ಹೆಚ್ಚುತ್ತದೆ. ಎಲ್ಲದ್ದಕ್ಕೂ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು!

ವಸುಧೇಂದ್ರರ ಪರಿಚಯವೇ ಇಲ್ಲದಿದ್ದ ಮಂದಿಗೆ ವಸುಧೇಂದ್ರರ ಪರಿಚಯವಾದ ಖುಷಿ. ವಸುಧೇಂದ್ರರ ಪರಿಚಯವಿದ್ದವರಿಗೆ ಅವರ ಮಾತುಗಳನ್ನು ಕೇಳುವ, ಅವರ ಕಂಠದಲ್ಲೇ ಅವರ ಪ್ರಬಂಧವನ್ನು ಕೇಳುವ ಖುಷಿ. ಶಿವಮೊಗ್ಗದಿಂದ ತಮ್ಮ ನೆಚ್ಚಿನ ಲೇಖಕ ವಸುಧೇಂದ್ರರನ್ನು ಕಾಣಲು ಬಂದಿದ್ದ ಬೋರಣ್ಣನಿಗೆ, ಇವೆಲ್ಲದರ ಜೊತೆಗೆ ಪುಸ್ತಕಗಳಿಗೆ ವಸುಧೇಂದ್ರರ ಹಸ್ತಾಕ್ಷರಗಳನ್ನು ಹಾಕಿಸಿಕೊಂಡು ಅವರ ಜೊತೆ ಹರಟಿದ ಸಂತೋಷ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ