ಇತ್ತೀಚೆಗೆ ನಾನು ನೋಡಿದ ಮೂರು ಚಿತ್ರಗಳ ವಿಮರ್ಶೆ.
ಪಯಣ.. ಚಿತ್ರಮಂದಿರದಿಂದ ಪ್ರೇಕ್ಷಕನ ಪಲಾಯನ...
ನಾನು ಡಾ ವಿಠ್ಠಲ್ ರಾವ್ ಅಲ್ಲಾ! ಹೀಗೆ ಗಟ್ಟಿಯಾಗಿ ಕಿರುಚುವುದೊರೊಂದಿಗೆ ರವಿಶಂಕರ್ ರವರ ಪಾತ್ರ ಬೆಳ್ಳಿತೆರೆಗೆ ಪರಿಚಯವಾಗುತ್ತದೆ. ಹೌದು ಇದು ನಾವೆಲ್ಲಾ ಮೆಚ್ಚಿರುವ ಡಾ ವಿಠ್ಠಲ್ ರಾವ್ ಆಗಿ ಕಿರುತೆರೆಯಲ್ಲಿ/’ಸಿಲ್ಲಿ ಲಲ್ಲಿ’ ಧಾರವಾಹಿಯಲ್ಲಿ ಅತ್ಯುತ್ತಮ ಅಭಿನಯ ನೀಡಿ ರಂಜಿಸಿದ್ದ ರವಿಶಂಕರ್ ನಟನೆಯ ಮೊದಲೆನೆಯ ಚಿತ್ರ ’ಪಯಣ’ದ ವಿಮರ್ಶೆ. ಹಲವಾರು ಪತ್ರಿಕೆಗಳಲ್ಲಿ ಉತ್ತಮ ಪ್ರತಿಕ್ರೆಯೆ ಗಿಟ್ಟಿಸಿಕೊಂಡಿರುವ ಈ ಚಿತ್ರವನ್ನು ಬಹಳ ಕಾತರದಿಂದ ನೋಡಲು ಹೋದೆ.ಹಿಂದೆಂದೂ ಕನ್ನಡ ಚಿತ್ರಗಳನ್ನು ಪ್ರದರ್ಶಿಸದ (ಅಕಸ್ಮಾತ್ ಪ್ರದರ್ಶಿಸಿದ್ದರೆ ನನ್ನ ಗಮನಕ್ಕಂತೂ ಬಂದಿಲ್ಲ) ’ಅಭಿನಯ್’ ಎಂಬ ಉತ್ತಮ ಚಿತ್ರಮಂದಿರದಲ್ಲಿ ಈ ಚಿತ್ರವನ್ನು ಪ್ರದರ್ಶಿಸುತ್ತಿರುವುದು ಬಹಳ ಮೆಚ್ಚುಗೆಯ ವಿಚಾರವಾಗಿತ್ತು.
ಕಥೆ: ನಾಯಕ ಕಾರ್ ಚಾಲಕ. ಪೆದ್ದು ಪೆದ್ದಾಗಿ ಏನೇನೊ ಕನಸು ಕಾಣುವುದು. ಆ ಕನಸನ್ನು ಎಲ್ಲರಿಗೂ ಹೇಳಿ ತಲೆ ಕೊರೆಯುವುದು. ವಿಮಾನ ನಿಲ್ದಾಣದಿಂದ ಕರೆತರಬೇಕಾದ ಹುಡುಗಿಯನ್ನೇ ತನ್ನ ಕನಸಿನ ರಾಜಕುಮಾರಿ ಎಂದು ಕಲ್ಪಿಸಿಕೊಳ್ಳುವುದು. ಆವಳಿಗೆ ಕರ್ನಾಟಕವನ್ನು ತನ್ನ ಕಾರಿನಲ್ಲಿ ತೋರಿಸಲು ಕರೆದೊಯ್ಯುವುದು. ಹೀಗೆ ಸಾಗುತ್ತದೆ. ಮತ್ತದೇ ಅತೀ ಸಾಧಾರಣ ಪ್ರೇಮ ಕಥೆ. ಜೊತೆಗೆ ಸ್ವಲ್ಪ ತಾಯಿ - ಭಾವಾವೇಶವುಳ್ಳ ಸನ್ನಿವೇಶಗಳು. ಚಿತ್ರ ಪ್ರೇಕ್ಷಕರ ಊಹೆಗಳಿಂದ ಆಚೀಚೆ ಹೋಗದೆ ಸಾಗುತ್ತದೆ.
ನಟನೆ: ನಾಯಕ ರವಿಶಂಕರ್ ರವರು ತಮ್ಮ ವಿಠ್ಠಲ್ ರಾವ್ ಪಾತ್ರದ ನೆರಳಿನಿಂದ ಹೊರ ಬರುವುದಕ್ಕೆ ಬಹಳ ಪ್ರಯತ್ನಿಸಿ, ಸೋತಿದ್ದಾರೆ. ಚಿತ್ರದಲ್ಲಿ ಬರುವ ವಿಠ್ಠಲ್ ರಾವ್ ಲಕ್ಷಣ ಸ್ವಭಾವ ಹೊಂದುವ ಸಂಭಾಶಣೆಗಳು ಮಾತ್ರ ಜನರ ಮೆಚ್ಚುಗೆ ಗಳಿಸುತ್ತವೆ. ನಟನೆ ಸಾಧಾರಣ ಎನ್ನಬಹುದು. ನಟಿಸುವಾಗ ಕ್ಯಾಮರಾವನ್ನೇ ದಿಟ್ಟಿಸಿ ನೋಡುತ್ತಾ ಇದ್ದಾರೇನೋ ಅನ್ನಿಸುತ್ತದೆ. ಮೊದಲನೆ ಚಿತ್ರವಾದ ಕಾರಣ ಇರಬಹುದು. ಇನ್ನು ನಾಯಕಿ ರಮಣೀತು ಚೌಧರಿ ನಟನೆಗೆ ಬಹಳ ಮಹತ್ವ ವಿಲ್ಲ. ರಂಗಾಯಣ ರಘು ಉಳಿದವರಿಗಿಂತ ಮೇಲು. ಶರತ್ ಬಾಬು ಪೋಷಕ ಪಾತ್ರದಲ್ಲಿ ಮತ್ತೆ ಸಾಧಾರಣ ನಟನೆ.
ಸಂಭಾಷಣೆ: ಇನ್ನು ಸಂಭಾಷಣೆಯಂತೂ ಕನ್ನಡ ಬಲ್ಲದವರೇ ಮೆಚ್ಚಬೇಕು. ಪ್ರೀತಿ, ಪ್ರೇಮ, ಕನಸು, ಹೃದಯ, ಗೀಚು ಇತ್ಯಾದಿ ಹಳಸಿದ (ಚಲನಚಿತ್ರಗಳಲ್ಲಿ ತುಂಬಾ ಬಳಕೆಯಲ್ಲಿರುವ ಪದಗಳಾದ್ದರಿಂದ ಹೀಗೆಂದೆ) ಪದಗಳನ್ನಿಟ್ಟುಕೊಂಡೂ ಸತ್ವವಿಲ್ಲದ ಸಂಭಾಷಣೆ ಬರೆಯುವುದು ಇತ್ತೀಚಿನ ಚಿತ್ರಗಳಲ್ಲಿ ಸಾಧಾರಣ.
ಹಾಸ್ಯ: ಮಂಡ್ಯ ರಮೇಶ್ ಮತ್ತು ಬುಲೆಟ್ ಪ್ರಕಾಶ್ ಇವರುಗಳದ್ದು ಅಬ್ಬರದ ಕೂಗಾಟದ ಹಾಸ್ಯ (ಅಸಹ್ಯ). ಆಗಲೆ ಹೇಳಿದಂತೆ ರಂಗಾಯಣ ರಘು ಪರವಾಗಿಲ್ಲ. ಚಿತ್ರದಲ್ಲಿ ಹಾಸ್ಯಕ್ಕೆ ಮೀಸಲು ಸಮಯ ಕಡಿಮೆ.
ನಿರ್ದೇಶನ: ಇದು ಕಿರಣ್ ಗೋವಿಯವರ ಚೊಚ್ಚಲ ನಿರ್ದೇಶನವೆ? ಉತ್ತಮ ನಿರ್ದೇಶಕರಾಗಲು ಇನ್ನೂ ಬಹಳ ದುಡಿತ ಬೇಕೆನ್ನಿಸುತ್ತದೆ.
ಸಂಗೀತ/ಸಾಹಿತ್ಯ: ವಿ ಹರಿಕೃಷ್ಣ ಸಂಗೀತ. ಒಂದೆರಡು ಹಾಡುಗಳು ಕೇಳಬಹುದು. ಮತ್ತದೆ ಸೋನು ನಿಗಮ್ ಸಿರಿಕಂಠ ದಲ್ಲಿ ’ಮೋಡದೆ ಒಳಗೆ’ ಹಾಡು ಚೆನ್ನಾಗಿದೆ. ಎಲ್ಲಾ ಹಾಡುಗಳಿಗೂ ವಿ ನಾಗೇಂದ್ರ ಪ್ರಸಾದ್ ರವರ ಸಾಹಿತ್ಯವಿದೆ.
ಛಾಯಗ್ರಹಣ, ಇತರೆ ಆಕರ್ಷಣೆಗಳು : ಈ ಚಿತ್ರದ ದೊಡ್ದ ಆಕರ್ಷಣೆ, ಕರ್ನಾಟಕದ ಹಲವು ಪ್ರಾವಾಸಿ ಸ್ಥಳಗಳನ್ನು ತೋರಿಸಿರುವುದು. ಭರಚುಕ್ಕಿ ಜಲಪಾತ, ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಬಾದಾಮಿ ಈ ಸ್ಥಳಗಳನ್ನು ಹೆಸರು ಸಮೇತ ಚಿತ್ರದಲ್ಲಿ ತೋರಿಸಿದ್ದಾರೆ. ಛಾಯಾಗ್ರಹಣ ಇನ್ನೂ ಸುಧಾರಿಸಬಹುದಿತ್ತು.
ಈ ಚಿತ್ರದ ಬಗ್ಗೆ ಇದಕ್ಕಿಂತ ಹೆಚ್ಚು ಹೇಳಲು ಇನ್ನೇನಿಲ್ಲ.
ವಂಶಿ,
ಈ ಚಿತ್ರದ ಬಗ್ಗೆ ಬಹಳ ಸಂಕ್ಷಿಪ್ತವಾಗಿ ಬರೆದುಬಿಡುತ್ತೇನೆ. ಮತ್ತದೇ ಮಚ್ಚು ಹೊಡೆತ, ತಾಯಿ - ಭಾವಾತಿರೇಕವುಳ್ಳ, ದುರ್ಬಲ ಕಥೆ, ವ್ಯರ್ಥ ಸಂಭಾಷಣೆಯುಳ್ಳ ಚಿತ್ರ. ಈ ಚಿತ್ರಕ್ಕೆ ಕಥೆ ೩ ಬಾರಿ ತಿರಸ್ಕ್ರುತಗೊಂಡು ನಾಲ್ಕನೇ ಬಾರಿ ರಾಘಣ್ಣನವರು ಒಪ್ಪಿದ್ದಂತೆ. ಇನ್ನು ಆ ಮೂರು ಕಥೆಗಳು ಇನ್ನೆಷ್ಟು ಕೆಟ್ಟದಾಗಿರಬಹುದು ಎಂಬುವುದೇ ಹಾಸ್ಯ. ಚಿತ್ರದಲ್ಲಿ ಹಾಸ್ಯಕ್ಕೆ ಜಾಗ ಇಲ್ಲ. ಮರೆತಿದ್ದೆ, ಕೋಮಲ್ ಹಾಸ್ಯನಟನಾಗಿ ಇದ್ದಾರೆ ಅಷ್ಟೆ. ನಿಖಿತ ನೋಡಲು ಎಷ್ಟು ಚೆನ್ನಾಗಿದ್ದಾರೋ, ಅವರ ನಟನೆ ಅದಕ್ಕೆ ತದ್ವಿರುದ್ಧ. ವಂಶಿ ಚಿತ್ರ ಇನ್ನೂ ಚಿತ್ರಮಂದಿರಗಳಿಂದ ಪಲಾಯನವಾಗಿಲ್ಲದಿದ್ದರೆ ಪುನೀತ್ ಮತ್ತು ತಾಯಿಯ ಪಾತ್ರದಲ್ಲಿ ನಟಿಸಿರುವ ಲಕ್ಷ್ಮಿ ಯವರುಗಳ ನಟನೆಯೇ ಕಾರಣ. ಕನ್ನಡಿಗ ಗಾಯಕ ರಾಜೇಶ್ ಕೃಷ್ಣನ್ ಮತ್ತು ಹರಿಣಿ ಹಾಡಿರುವ ’ಅಮಲು ಅಮಲು’ ಹಾಡು ಅತ್ಯುತ್ತಮ. ಅಣ್ನಾವ್ರು ಹಾಡಿರುವ ತಾಯಿ ತಾಯಿ ಮತ್ತು ಪುನೀತ್ ಹಾಡಿರುವ ಜೊತೆ ಜೊತೆಯಲಿ ಹಾಡುಗಳು ಉತ್ತಮ. ಪುನೀತ್ ರವರ ನೃತ್ಯ ಮತ್ತು ಹೊಡೆದಾಟದ ಸನ್ನಿವೇಶಗಳು ಅವರ ಅಭಿಮಾನಿಗಳಿಗೆ ರಸದೌತಣ ಉಣಿಸಬಹುದು. ಕೊನೆಗೆ ಕೆಲವು ಪ್ರಶ್ನೆಗಳು ಮನದಲ್ಲಿ ಕಾಡುತ್ತವೆ. ಮಿಲನ ಎಂಬ ಅತ್ಯುತ್ತಮ ಚಿತ್ರ ಕೊಟ್ಟ ಪ್ರಕಾಶ್ ವಂಶಿಯಲ್ಲಿ ಸೋತದ್ದೇಕೆ? ಪುನೀತ್ ರವರಿಗೆ ಮಚ್ಚು ಕೊಚ್ಚು ಬೇಕಾಗಿತ್ತೆ?
ಬುದ್ಧಿವಂತ, ಎಲ್ಲರಿಗಾಗಿ
ಇನ್ನೂ ಸಂಕ್ಷಿಪ್ತವಾಗಿ, ಉಪೇಂದ್ರ ರವರ ಗತ ವೈಭವ ಮರುಕಳಿಸಿಲ್ಲ. ಇತ್ತೀಚೆಗೆ ಗಲ್ಲಾಪೆಟ್ಟಿಗೆಯಲ್ಲಿ ಸೋಲನ್ನೆ ಉಣ್ಣುತ್ತಿರುವ ಉಪ್ಪಿಗೆ ಸ್ವಲ್ಪ ಗೆಲುವಿನ ರುಚಿ ತೋರಿಸಿರಬಹುದು. ಕಥೆಗೆ ಅಷ್ಟು ಮಹತ್ವವಿಲ್ಲ. ಚಿತ್ರದ ಅರ್ಧ ಭಾಗದಲ್ಲಿ ನಮ್ಮ ಗತ ವೈಭವದ ಉಪ್ಪಿ (ಎ - ಉಪೇಂದ್ರ - ಪ್ರೀತ್ಸೆ -ರಕ್ತ ಕಣೀರು ಗಳ ಕಾಲದ ಉಪ್ಪಿ) ಕಾಣಿಸಿಕೊಳ್ಳುತ್ತಾರೆ. ಚುರುಕು ಸಂಭಾಷಣೆಗಳಿಂದ ಚಪ್ಪಾಳೆ ಶಿಳ್ಳೆಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಚಿಕ್ಕ ಪಾತ್ರದಲ್ಲಿ ಲಕ್ಷ್ಮಿ ಚೊಕ್ಕವಾಗಿ ಕಾಣಿಸಿಕೊಳ್ಳುತ್ತಾರೆ. ಐದೂ ಜನ ನಾಯಕಿಯರೂ ಪರವಾಗಿಲ್ಲ. ನಾಯಕಿಯರ ಸೌಂದರ್ಯ ನಟನೆಯನ್ನು ಮೀರಿಸಿದೆ. ಕೆಲವು ಹಾಡುಗಳು ಜನಪ್ರಿಯ, ಆದರೆ ಯಾವುದೂ ಮತ್ತೆ ಮತ್ತೆ ಕೇಳಬೇಕೆನಿಸುವುದಿಲ್ಲ. ರವಿವರ್ಮನ ಹಾಡನ್ನು ಕೆಡಿಸಿ ಆಗಲೇ ಬಹಳಷ್ಟು ಜನರಿಂದ ಉಗಿಸಿಕೊಂಡಿರುವುದರಿಂದ ನಾನೇನೂ ಜಾಸ್ತಿ ಹೇಳುವುದಿಲ್ಲ.(ಇಲ್ಲಿ ಬಹಳಷ್ಟು ಜನಕ್ಕೆ ಭಿನ್ನಾಭಿಪ್ರಾಯ ಇರಬಹುದು.. ಹಾಡಿಗೆ ಸಂಗೀತವಷ್ಟೇ ಮುಖ್ಯವಲ್ಲ. ಸಾಹಿತ್ಯ ಕೂಡ. ಉತ್ತಮ ಸಾಹಿತ್ಯವನ್ನು ಕೆಟ್ಟದಾಗಿ ಉಚ್ಛಾರಣೆ ಮಾಡುವುದಂತೂ ಅಕ್ಷಮ್ಯ ಅಪರಾಧ). ಕೊಟ್ಟ ಕಾಸಿಗಷ್ಟೇ ಮನರಂಜಿಸುವ ಚಿತ್ರ.
ಈ ಚಿತ್ರಗಳ ಬಗ್ಗೆ ನಿಮ್ಮ ಅನಿಸಿಕೆ ನನ್ನದಕ್ಕಿಂತ ವಿಭಿನ್ನವಾದುದೆ? ಅಥವಾ ನಿಮ್ಮ ಅನಿಸಿಕೆಗಳಿಗೆ ಸಾಮೀಪ್ಯ ಇದೆಯೆ? ಕೆಳಗೆ ಬರೆಯಿರಿ!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Have seen only buddivanta...Uppi is in good form delivering deadly dialogues...but the story line is weak and depends completely on Uppi.Overall just above average according to me
ಪ್ರತ್ಯುತ್ತರಅಳಿಸಿVivek Shastry
@ shastry: ashTe ashTe.. average to above average ashTe.. filn nalli uppi sambhaashaNe biTre bEre ashTEnu illaa...
ಪ್ರತ್ಯುತ್ತರಅಳಿಸಿಶಿವಶಂಕರ್ ರವರೆ,
ಪ್ರತ್ಯುತ್ತರಅಳಿಸಿನನ್ನ ಬ್ಳಾಗ್ ತಾಣಕ್ಕೆ ಸ್ವಾಗತ.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮ ಬ್ಳಾಗ್ ಗೆ ಭೇಟಿ ಯಿತ್ತು ಲೇಖನಗಳನ್ನು ಓದುವೆ..