"ಯಾರು ನಂಟರು?
ಇದು ಎಂಥ ಪ್ರಶ್ನೆ! ಎಳೆಯ ಮಕ್ಕಳಿಗೆ ಕೂಡ ಯಾರು ನಂಟರು ಎಂದು ಗೊತ್ತಿದೆಯಲ್ಲಾ! ಎಂದು ಹಾಸ್ಯ ಮಾಡಬೇಡಿ. ಇದು ಎಷ್ಟು ತೊಡಕಾದ ಸಮಸ್ಯೆ ಎನ್ನುವುದು ಒಂದು ಕ್ಷಣದಲ್ಲಿ ಮನದಟ್ಟಾಗುತ್ತದೆ.
ಮಾವ, ಭಾವ, ಅತ್ತೆ, ಮೈದುನ - ಇವರೆಲ್ಲರೂ ನಂಟರೆಂದು ನೀವು ಬೇಗ ಹೇಳಿಬಿಡಬಹುದು. ರಕ್ತಸಂಬಂಧಿಗಳೆಲ್ಲರೂ ನಂಟರೆಂದು ಶಾಸ್ತ್ರ ಪರಿಷ್ಕೃತವಾದ ಬುದ್ಧಿಯುಳ್ಳವರು ಲಕ್ಷಣವನ್ನೂ ಕಲ್ಪಿಸಬಹುದು. ಆದರೆ ಬಾಂಧವ್ಯದ ರಹಸ್ಯಗಳನ್ನೆಲ್ಲಾ ಒಂದು ಸೂತ್ರದಿಂದ ಕಟ್ಟಿ ಹಾಕುವುದು ಸಾಧ್ಯವಿಲ್ಲ. ತಂದೆತಾಯಿಗಳ ರಕ್ತವೇ ನಮ್ಮ ದೇಹದಲ್ಲೆಲ್ಲಾ ಹರಿಯುತ್ತಿದೆಯಷ್ಟೆ. ಇವರು ನಂಟರೆ? ಈಗಿನ ವಿದ್ಯಾವಂತರಾದ ನೀವು ನಿಮ್ಮ ಮುಪ್ಪಿನ ತಂದೆಯೊಡನೆ ಬೆಂಗಳೂರಿನಲ್ಲಿ ಪೇಟೆಯ ಕಡೆಗೆ ಹೊರಟಿರಿ ಎನ್ನಿ. ಆಗ ನಿಮ್ಮ ಮಿತ್ರರೊಬ್ಬರು ಎದುರಿಗೆ ಬಂದು ಕಂಡು "ಇವರು ಯಾರು?" ಎಂದು ನಿಮ್ಮ ತಂದೆಯ ಕಡೆಗೆ ತೋರಿಸಿ ಕೇಳಿದಾಗ, ನೀವು "ನಮ್ಮ ನಂಟರು" ಎಂದು ಹೇಳಿಬಿಟ್ಟರೆ ಆಗುವ ಅನರ್ಥವನ್ನು ಊಹಿಸುವುದಾದರೂ ಸಾಧ್ಯವೆ? ಕೆಲವು ಮಂದಿ ಸತ್ಪುತ್ರರು ಇಂಥ ಉತ್ತರಗಳನ್ನು ಕೊಟ್ಟ ಮಾತ್ರದಿಂದಲೇ ಎಷ್ಟೋ ಸಂಸಾರಗಳು ಒಡೆದು ಹೋಗಿಲ್ಲವೇ?"
ನೀವು ನಿಮ್ಮ ಪ್ರೌಢಶಾಲೆಯಲ್ಲಿ (೯ ನೆಯ ಅಥವಾ ೧೦ ನೆಯ ತರಗತಿ ಇರಬಹುದು) ಪ್ರಥಮ ಭಾಷಾ ವಿಷಯವಾಗಿ ಕನ್ನಡವನ್ನು ಆಯ್ಕೆ ಮಾಡಿದ್ದರೆ (ಸಾಮಾನ್ಯವಾಗಿ ಸರ್ಕಾರಿ ಪಠ್ಯ ಪುಸ್ತಕಗಳು ೮ - ೧೦ ವರ್ಷಗಳಲ್ಲಿ ಬದಲಾಗುವುದಿಲ್ಲ), ನೀವು ಮೇಲಿನ ಸಾಲುಗಳನ್ನು ನಂಟರು ಎಂಬ ಗದ್ಯ/ಪಾಠದಲ್ಲಿ ಓದಿರಬಹುದು. ಆ ವಯಸ್ಸಿನಲ್ಲಿ ನಾನು ಭಾಷಾ ವಿಷಯಗಳನ್ನು ಅಷ್ಟೇನೂ ವಿಷೇಶಾಸಕ್ತಿಗಳಿಂದ ಓದದೇ ಇದ್ದಾಗ್ಯೂ, ಅದೇನೋ ಒಂದು ತರಹ ಆಸಕ್ತಿ ಮೂಡಿಸಿದ್ದ ಪಾಠವಿದು. ಇಂದು ಇದರ ಕರ್‍ತೃ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯನವರ ಜನ್ಮ ದಿನ. (೨೬/೧೧/೧೯೦೬ - ೦೭/೦೯/೧೯೬೬).
(ನಂಟರು ಎಂಬ ಲಲಿತ ಪ್ರಬಂಧ ಓದುವ ಆಸಕ್ತಿಯುಳ್ಳವರು, ತೀ ನಂ ಶ್ರೀ ಯವರ ನಂಟರು ಎಂಬ ಪುಸ್ತಕವನ್ನು ಓದಬಹುದು. ಇದು ಇನ್ನೂ ಹಲವಾರು ಪ್ರಬಂಧಗಳು/ಹರಟೆಗಳನ್ನು ಒಳಗೊಂಡಿದೆ).
ತೀ ನಂ ಶ್ರೀ ಯವರು ನವೋದಯ ಕನ್ನಡ ಸಾಹಿತ್ಯ ಸಂದರ್ಭದ ಪ್ರಮುಖ ಸಾಹಿತಿ/ ಕವಿಗಳೊಲ್ಲೊಬ್ಬರು. (ಇತ್ತೀಚೆಗೆ ಬಹಳ ಉಪಯೋಗಿಸಲ್ಪಡುವ ಈ ನವೋದಯ ಸಾಹಿತ್ಯ ಕಾಲ ಯಾವುದು ಎಂದು ತಿಳಿಯಲು ಈ ಲೇಖನದ ಕೊನೆಯಲ್ಲಿರುವ ಕಿರು ಸೂಚನೆ ಓದಿ).
ಕವಿ, ವಿಮರ್ಶಕ, ಪ್ರಬಂಧಕಾರ ಪ್ರೊ. ತೀ ನಂ ಶ್ರೀ ಕರ್ನಾಟಕ, ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ಬೋಧನೆ, ಗ್ರಂಥ ಸಂಪಾದನೆ ಇವರಿಗೆ ಪ್ರಿಯವಾದುದು. ೧೯೩೨ ರಲ್ಲಿ ಪ್ರಕಟವಾದ ’ಒಲುಮೆ’ ಹೊಸಗನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ. ’ನಂಬಿಯಣ್ಣನ ರಗಳೆ’ ಮತ್ತು ’ರನ್ನನ ಗಧಾಯುದ್ಧ ಸಂಗ್ರಹ’ - ಇವರು ಸಂಪಾದಿಸಿರುವ ಮಹತ್ವದ ಗ್ರಂಥಗಳು. ’ಭಾರತೀಯ ಕಾವ್ಯ ಮೀಮಾಂಸೆ’ ತೀ ನಂ ಶ್ರೀ ಯವರ ದೀರ್ಘಕಾಲದ ಅಧ್ಯಯನ,ಪರಿಶ್ರಮಗಳ ಫಲ.ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆಂದು ಬರೆದ ’ಕನ್ನಡ ಮಧ್ಯಮ ವ್ಯಾಕರಣ’ ಸರಳವಾದ ಗ್ರಂಥ. ಸಂಸ್ಕೃತ ಮೂಲಗಳನ್ನು ಆಧರಿಸಿ ಬರೆದ ಮುಕ್ತಕಗಳಲ್ಲಿ ತೀ ನಂ ಶ್ರೀ ಯವರ ಕಾವ್ಯಶಕ್ತಿಯ ವಿಶೇಷ ಗುಣವಿದೆ. ’ವಿಶಾಖದತ್ತ’ನ ’ಮುದ್ರಾರಾಕ್ಷಸ’ದ ಕನ್ನಡ ಅನುವಾದ ’ರಾಕ್ಷಸನ ಮುದ್ರಿಕೆ’ ನಾಟಕ ಅವರ ಅಪೂರ್ವ ಸಾಹಿತ್ಯ ಕೃತಿ. ’ನಂಟರು’ ಪ್ರಭಂದ ಸಂಕಲನದಲ್ಲಿ ತೀ ನಂ ಶ್ರೀಯವರ ಆಳವಾದ ಪಾಂಡಿತ್ಯ ಲೋಕಾನುಭವದ ಪರಿಚಯವಾಗುತ್ತದೆ. ’ಸಮಾಲೋಕನ’ ತೀ ನಂ ಶ್ರೀ ಯವರ ಅಸಾಧಾರಣ ವಿದ್ವತ್ತಿಗೆ ಸಾಕ್ಷಿಯಾಗಿದೆ.
(ತೀ ನಂ ಶ್ರೀ ಯವರ ಕೃತಿಗಳನ್ನು ಪರಿಚಯಿಸುವ ಈ ಮೇಲಿನ ಪಂಕ್ತಿಯನ್ನು ’ತೀ ನಂ ಶ್ರೀ ಯವರ ಸಮಗ್ರ ಕವಿತೆಗಳು’ ಪುಸ್ತಕದ ’ಪ್ರಕಾಶಕರ ಮಾತು’ - ನಾಗರತ್ನರಾವ್ ರವರ ಬರಹದಿಂದ ಆಯ್ದು ಪ್ರಕಟಿಸಲಾಗಿದೆ)
ಕೊನೆಗೆ ತೀ ನಂ ಶ್ರೀ ಯವರ ಒಂದು ಕವನ,
ಸುಳಿಸು ಕಣ್ಣಿನಲೊಮ್ಮೆ
ಸುಳಿಸು ಕಣ್ಣಿನಲೊಮ್ಮೆ
ನಗೆಮಿಂಚ ನಲ್ಲೆ!
ಒಲುಮೆ ಒಳಗಿರಲೇನು;
ತುಳಕದಿರೆ ನೋಟದಲಿ
ಬಗೆ ನೆಚ್ಚದಲ್ಲೆ!
ಮೊಗದ ಬಿಂಕದ ಮುಸುಕ -
ನೆರೆ ನಿಮಿಷ ಸರಿಸು;
ಬಿಗಿದ ತುಟಿಯನು ಬಿಚ್ಚಿ
ಕಿರುನಗೆಯ ಹರಿಸು;
ಕೆನ್ನೆ ನಸುಗೆಂಪೇರಿ
ಕಣ್ಣಿನಾಳದೊಳೊಮ್ಮೆ
ಒಲವಿಕ್ಕಿ ಬರಲಿ;
ನನ್ನ ದುಗುಡದ ಮನಕೆ
ನಲವನದು ತರಲಿ!
ಈ ಕವನ ಎಷ್ಟು ಸರಳವಾಗಿದ್ದು, ಮನಸ್ಸಿಗೆ ಮುದ ಕೊಡುವಂತಾಗಿದೆ ಅಲ್ಲವೆ?
(ಡಾ ಜಿ ಎಸ್ ಶಿವರುದ್ರಪ್ಪನವರು "ತೀ ನಂ ಶ್ರೀ ಯವರ ಸಮಗ್ರ ಗದ್ಯ" ಪುಸ್ತಕಕ್ಕೆ ಬರೆದಿರುವ ಮುನ್ನುಡಿಯ ಮಾತುಗಳಿಂದ : ತೀ ನಂ ಶ್ರೀಕಂಠಯ್ಯನವರು ಕನ್ನಡ ಸಾಹಿತ್ಯ ಪ್ರವೇಶಿಸಿದ್ದೇ ಒಬ್ಬ ಕವಿಯಾಗಿ, ೧೯೩೨ ರಲ್ಲಿ ಅವರು ಪ್ರಕಟಿಸಿದ ’ಒಲುಮೆ’ ಎಂಬ ಕವನ ಸಂಗ್ರಹದ ಮೂಲಕ. ಹೊಸಗನ್ನಡದಲ್ಲಿ ಪ್ರೇಮವನ್ನು ಒಂದು ಘನವಾದ ಹಾಗೂ ಜನಪ್ರಿಯವಾದ ರೀತಿಯಲ್ಲಿ ವರ್ಣಿಸಿ ವಿಖ್ಯಾತರಾದ ಕನ್ನಡದ ಒಲವಿನ ಕವಿ ಕೆ ಎಸ್ ನರಸಿಂಹಸ್ವಾಮಿಯವರಿಗಿಂತ ಮೊದಲೆ, ಈ ವಸ್ತುವನ್ನು ಕುರಿತು ಮೊದಲು ಬರೆದವರು ತೀ ನಂ ಶ್ರೀ. ಈ ದೃಷ್ಟಿಯಿಂದ ಚಾರಿತ್ರಿಕವಾಗಿ ತೀ ನಂ ಶ್ರೀ ಅವರ ಒಲುಮೆ ಕವನ ಸಂಗ್ರಹವೆ ಹೊಸಗನ್ನಡ ಸಾಹಿತ್ಯ ಸಂದರ್ಭದ ಮೊದಲ ಪ್ರೇಮಕಾವ್ಯ ಸಂಕಲನ.)
ಕಿರು ಸೂಚನೆ : ನವೋಹಯ ಸಾಹಿತ್ಯ ಸಂದರ್ಭದ ಬಗ್ಗೆ ಡಾ ಜಿ ಎಸ್ ಶಿವರುದ್ರಪ್ಪನವರು "ತೀ ನಂ ಶ್ರೀ ಯವರ ಸಮಗ್ರ ಗದ್ಯ" ಪುಸ್ತಕಕ್ಕೆ ಬರೆದಿರುವ ಮುನ್ನುಡಿಯಿಂದ: "ಹತ್ತೊಂಬತ್ತನೆಯ ಶತಮಾನದ ಕೊನೆಯ ಮೂರು ದಶಕಗಳು ಮತ್ತು ಇಪ್ಪತ್ತನೆಯ ಶತಮಾನದ ಮೊದಲ ಒಂದು ದಶಕ - ಈ ನಾಲ್ಕು ದಶಕಗಳು (೧೮೭೦ - ೧೯೧೦), ಹೊಸಗನ್ನಡ ಸಾಹಿತ್ಯ ದೃಷ್ಟಿಯಿಂದ, ಅನೇಕ ಮಹತ್ವದ ಸಾಹಿತಿಗಳು ಹುಟ್ಟಿಕೊಂಡ ಕಾಲವಾಗಿದೆ. ಪಂಜೆ, ಪೈ, ಬಿ ಎಂ ಶ್ರೀ, ಕೈಲಾಸಂ, ಡಿ ವಿ ಜಿ, ಎ ಆರ್ ಕೃ, ಮಾಸ್ತಿ, ಬೇಂದ್ರೆ, ಕುವೆಂಪು, ವಿ ಸೀ, ಕಾರಂತ, ಶ್ರೀರಂಗ, ಪು ತಿ ನ, ಡಿ ಎಲ್ ನ, ಅ ನ ಕೃ, ಗೊರೂರು, ತೀ ನಂ ಶ್ರೀ ಮತ್ತು ಇನ್ನೂ ಹಲವಾರು ಹುಟ್ಟಿದ್ದು ಈ ದಶಕಗಳಲ್ಲಿ. ಈ ಮಹಾ ಸಾಹಿತಿಗಳ ಸಾಧನೆಯಿಂದಾಗಿ, ನವೋದಯ ಸಾಹಿತ್ಯ ಸಂದರ್ಭ ಎಂದು ಹೆಸರಿಸುವ ಕಾಲಮಾನವು, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಏಕಕಾಲಕ್ಕೆ ಅತ್ಯಂತ ಎತ್ತರದ ಬಹಿಸಂಖ್ಯೆಯ ಸಾಹಿತಿಗಳು ಸಂಭವಿಸಿದ ಹಾಗೂ ಕನ್ನಡ ಸಾಹಿತ್ಯಕ್ಕೆ ಅತ್ಯಂತ ವೈವಿಧ್ಯ, ವಿಸ್ತಾರ ಮತ್ತು ಚಲನಶೀಲತೆಗಳನ್ನು ತಂದ ಕಾಲವಾಗಿದೆ."
ಅಷ್ಟೇನು ಸ್ವಂತ ಬರಹವಲ್ಲದ, ಈ ಸಂಗ್ರಹ ಲೇಖನದ ಬಗ್ಗೆ ಮತ್ತು ತೀ ನಂ ಶ್ರೀ ಯವರ ಬಗ್ಗೆ ಹೆಚ್ಚಿನ ಮಾಹಿತಿಯಿದ್ದರೆ ಕೆಳಗೆ ಪ್ರತಿಕ್ರಿಯಿಸಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Nantaru... Paatha odiddu eegalu nenapide. Haasya Mishrithavaada prabamdha nanagoo aaga hidisittu.
ಪ್ರತ್ಯುತ್ತರಅಳಿಸಿಹೌದು ರವೀಶ, ತೀ ನಂ ಶ್ರೀ ಯವರ ನಂಟರು ಪಾಠದ ಕೊನೆಯ ಎರಡು ಪಂಕ್ತಿಗಳಂತೂ ಬಹಳ ಚೆನ್ನಾಗಿವೆ. ಉದ್ದವಾಗುತ್ತದೆಂಬ ಕಾರಣದಿಂದ ಮೇಲಿನ ಲೇಖನದಲ್ಲಿ ಸೇರಿಸಲಿಲ್ಲ.. ಇಲ್ಲಿ ಬರೆದೇಬಿಡುವೆ.
ಪ್ರತ್ಯುತ್ತರಅಳಿಸಿ" ನಂಟರು ಎಂದರೆ ಸುಮ್ಮನೆ ಜನರು ಹಿಗ್ಗುತ್ತಾರಲ್ಲ, ಒಂದು ಸೋಜಿಗದ ಸಂಗತಿಯನ್ನು ಯಾರಾದರೂ ಆಲೋಚಿಸಿದ್ದೀರಾ? ನಿಮ್ಮ ನಂಟರಲ್ಲಿ ಎಷ್ಟು ಜನ ನಿಮ್ಮ ಸ್ನೇಹಿತರು? ಅಥವಾ ಆ ಪ್ರಶ್ನೆಯನ್ನೇ ಮುಗುಚಿ ಕೇಳುವುದಾದರೆ ನಿಮ್ಮ ಸ್ನೇಹಿತರಲ್ಲಿ ಎಷ್ಟು ಜನ ನಿಮ್ಮ ನಂಟರು? ನಂಟನಾದವನು ಎಂದಿಗೂ ಸ್ನೇಹಿತನಾಗುವುದಿಲ್ಲ: ನಿಜವಾದ ಸ್ನೇಹವು ರಕ್ತಸಂಬಂಧವಿಲ್ಲದವನಲ್ಲಿಯೇ ಹುಟ್ಟುವುದು. ನಿಮ್ಮ ಪ್ರಿಯಮಿತ್ರನನ್ನು ಹೆಣ್ಣು ಕೊಟ್ಟೋ ತಂದೋ ನಂಟನನ್ನು ಮಾತ್ರ ಮಾಡಿಕೊಳ್ಳಬೇಡಿ. ಆ ದಿನವೆ ನಿಮ್ಮಿಬ್ಬರ ಸ್ನೇಹಕ್ಕೆ ನೀವು ಎಳ್ಳು ನೀರು ಬಿಟ್ಟಹಾಗೆ. (ಈ ಗಾದೆ ವಿಸ್ತರಿಸಿ ಎಂಬ ಪ್ರಶ್ನೆ ಇತ್ತಲ್ಲವೆ ನಮಗೆ, ನಾವು ಓದಿದ ತರಗತಿಯಲ್ಲಿ :D, ವಿಷಯ ಪಲ್ಲಟ ಬೇಡ..) ಇದಕ್ಕೆ ಕಾರಣವುಂಟು. ಸ್ನೇಹದ ತಳಹದಿ ಪ್ರೇಮ, ಋಜುತ್ವ. ಬಾಂಧವ್ಯದ ತಳಹದಿ ಗೌರವ ಮತ್ತು, ಬಿಗುಮಾನ. ಅದಕ್ಕೂ ಇದಕ್ಕೂ ಗಂಟುಬೀಳುವುದು ಹೇಗೆ? ಸ್ನೇಹಿತನ ಸಂಗಡ ಮುಚ್ಚು ಮರೆಯಿಲ್ಲದೆ ನಿಮ್ಮ ಅಂತರಂಗವನ್ನು ಬಿಚ್ಚಿ ಹೇಳುವಂತೆ ನಂಟನ ಸಂಗಡ ಹೇಳಲಾದೀತೆ? ಸ್ನೇಹಿತನೊಂದಿಗೆ ಸರಸವಾಡುವಂತೆ ನಂಟನೊಂದಿಗೆ ಆಡಲಾದೀತೆ? ಯಾವ ಘಳಿಗೆಗೆ ನಗೆ ಹೋಗಿ ಹೊಗೆಯಾಗುವುದೋ ಎಂಬ ಭೀತಿ.
ನಂಟರೆಂದರೆ ಯಾವಾಗಲೂ ಹೆದರಿಕೆ; ನಿಮ್ಮನ್ನು ಎಲ್ಲಿ ಆಡಿಕೊಳ್ಳುವರೋ ಎಂದು. ನಿಮ್ಮ ಹುಳುಕು ಯಾವುದೂ ಅವರಿಗೆ ಕಾಣಿಸದ ಹಾಗೆ ನೀವು ಬಲು ಎಚ್ಚರವಾಗಿರುತ್ತೀರಿ. ನಂಟರು ಮನೆಗೆ ಬಂದರೆ, ಹೊರಕ್ಕೇ ತೆಗೆಯದ ಜಮಖಾನವನ್ನು ಆ ಹೊತ್ತು ಹಾಸಬೇಕು. ಮಿಕ್ಕ ದಿನಗಳಲ್ಲಿ ಹರುಕು ಸೀರೆಯನ್ನೇ ಉಡುತ್ತಿದ್ದರೂ ಆ ದಿನ ದೊಡ್ಡಂಚಿನ ಸೀರೆಯನ್ನುಟ್ಟುಕೊಂಡೇ ನಿಮ್ಮ ಹೆಂಡತಿ ಊಟಕ್ಕೆ ಬಡಿಸಬೇಕು. ಮಾರನೆಯ ದಿನಕ್ಕೆ ಅಕ್ಕಿಯೇ ಇಲ್ಲದಿದ್ದರೂ, ಅಂಗಡಿಯಲ್ಲಿ ಸಾಲ ವಿಷದಂತೆ ಏರುತ್ತಿದ್ದರೂ, ಏನಾದರೂ ಮಾಡಿ ರೆವೆ, ಸಕ್ಕರೆ, ಕಾಫಿಪುಡಿ ಇವನ್ನೆಲ್ಲ ತಂದು ಅಚ್ಚುಕಟ್ಟಾಗಿ ಫಲಾಹಾರಕ್ಕೆ ಏರ್ಪಡಿಸಬೇಕು. "ಅಟ್ಟಡಿಗೆ ಅಳಿಯನಿಗೆ, ಇಟ್ಟ ನೀರು ಮಾವನಿಗೆ" ಎಂದು ಹಾಡು ಹೇಳುವ ಹಾಗೆ. ಆಮೇಲೆ ಗೊತ್ತೇ ಇದೆ: "... ಮುಂದೆ ಬರುವ ಪತ್ರದ ಸಾಲ ಮಗನಿಗೆ"