ಶುಕ್ರವಾರ, ನವೆಂಬರ್ 07, 2008

ಭಾರತ ರತ್ನ ಭೀಮ್ ಸೇನ್ ಜೋಶಿ

ಭೀಮ್ ಸೇನ್ ಜೋಶಿಯವರ/ಜೋಶಿಯವರ ಸಂಗೀತದ ಬಗ್ಗೆ ನಾನು ತಿಳಿದಿರುವ (ಓದಿ, ಕೇಳಿ) ಕೆಲವು ಸ್ವಾರಸ್ಯಕರ ಸಂಗತಿಗಳು.

ಕೆಲವೇ ತಿಂಗಳುಗಳ ಹಿಂದೆ ಚೌಡಯ್ಯ ಸ್ಮಾರಕ ಭವನದಲ್ಲಿ , ಪದ್ಮವಿಭೂಶಣ ಜಸ್ ರಾಜ್ ರವರ (ಅಂಬಿ ಸುಬ್ರಮಣ್ಯನ್ ರವರ ಪಿಟೀಲು ವಾದನ ಕೂಡ ಇತ್ತು.) ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದೆ. ಕಾರ್ಯಕ್ರಮದ ನಂತರ ಸಂವಾದ ಕೂಡ ಏರ್ಪಡಿಸಿದ್ದರು. ಶ್ರೋತೄಗಳು ತಮ್ಮ ಪ್ರಶ್ನೆಗಳನ್ನು ವಿದ್ವಾಂಸರಲ್ಲಿ (ಜಸ್ ರಾಜ್, ಖ್ಯಾತ ಪಿಟೀಲು ವಾದಕ ಎಲ್ ಸುಬ್ರಮಣ್ಯನ್, ಅಂಬಿ - ಎಲ್ ಸುಬ್ರಮಣ್ಯನ್ ರವರ ಮಗ ಮೂರು ಜನ ವೇದಿಕೆ ಮೇಲೆ ಉಪಸ್ಥಿತರಿದ್ದರು) ಕೇಳುವ ಸದವಕಾಶವಿತ್ತು. ಈ ಸಂದರ್ಭದಲ್ಲಿ ಒಬ್ಬ ಜಿಗುಪ್ಸಿ ತಂತ್ರಜ್ಞ (ಸಾಫ್ಟ್ ವೇರ್ ಇಂಜಿನೀಯರ್) ಜಸ್ ರಾಜ್ ರವರಿಗೆ ಕೇಳಿದ ಪ್ರಶ್ನೆ,
ಸ್ವಾಮಿ ನನಗೆ ಸಂಗೀತ ಮೇಲೆ ಬಹಳ ಆಸಕ್ತಿ ಇತ್ತು. ಆದರೆ ನಮ್ಮ ಮನೆಯಲ್ಲಿ ಅದಕ್ಕೆ ಅಗತ್ಯ ಪ್ರೋತ್ಸಾಹ ಸಿಗಲಿಲ್ಲ. ಬಲವಂತದಿಂದ ಇಂದು ನಾನು ಸಾಫ್ಟ್ ವೇರ್ ಇಂಜಿನೀಯರ್ ಆಗಿ ಬಹಳ ನೊಂದಿದ್ದೇನೆ, ಹೀಗೆ ಸುಮಾರು ೧೦ ನಿಮಿಶ ತನ್ನ ಜೀವನ ಸಂಕಟಗಳೊಂದಿಗೆ ಪ್ರಶ್ನೆಯನ್ನು ಬೆರೆಸಿ, ಇಂತಹ ಸಮಯದಲ್ಲಿ ನಮ್ಮಂತ ಸಾಮಾನ್ಯ ಸಂಗೀತಾಸಕ್ತರು ಏನು ಮಾಡಬೇಕು ಎಂಬ ದೀರ್ಘ ಪ್ರಶ್ನೆಯನ್ನು ವಿದ್ವಾಂಸರ ಮುಂದಿಟ್ಟ.

ಈ ಧೀರ್ಘ ಪ್ರಶ್ನೆಗೆ ಜಸ್ ರಾಜ್ ರವರು ಕೊಟ್ಟಿದ್ದು ಒಂದು ಸಾಲಿನ ಉತ್ತರ! "ಸಂಗೀತಾಸಕ್ತಿಯಿಂದ ಚಿಕ್ಕವಯಸ್ಸಿನಲ್ಲಿಯೆ ಮನೆ ಬಿಟ್ಟು ಓಡಿ ಹೋಗಿ, ನಂತರ ದೇಶದಲ್ಲೆ ದೊಡ್ದ ಸಂಗೀತ ವಿದ್ವಾಂಸರಾದದ್ದು ಈ ರಾಜ್ಯದವರೆ! ಭೀಮ್ ಸೇನ್ ಜೋಶಿ!"

ಇಲ್ಲಿ ಈ ಪ್ರಸಂಗ ನೆನೆಸಿಕೊಂಡ ಔಚಿತ್ಯವೇನೆಂದರೆ, ಇಂತಹುದೊಂದು ಸೂಕ್ಷ್ಮ ಪ್ರಶ್ನೆಗೆ ಉತ್ತರಿಸಲು ಹೆಸರಾಂತ ಹಿಂದೂಸ್ತಾನಿ ಗಾಯಕ ಜಸ್ ರಾಜ್ ಉದಾಹರಿಸಿದ್ದು ಇನ್ನೊಬ್ಬ ಘನ ವಿದ್ವಾಂಸ ಭೀಮ್ ಸೇನ್ ಜೋಶಿ ಎಂದರೆ ಓದುಗರಿಗೆ ಜೋಶಿಯವರ ಪಾಂಡಿತ್ಯದ ಪರಿಚಯವಾಗುತ್ತದೆ.

ಇನ್ನೊಂದು ಪ್ರಸಂಗ, ಒಮ್ಮೆ ನನ್ನ ಹಿಂದಿನ ಸಂಸ್ಥೆ ಲ್ಯೂಸೆಂಟ್ ನಲ್ಲಿ ಒಬ್ಬ ತೆಲುಗು ಗೆಳೆಯನ ಜೊತೆ ಸಂಗೀತ, ಸಂಗೀತ ಕಾರರ ಬಗ್ಗೆ ಚರ್ಚಿಸುತ್ತಿದ್ದೆ. ನಾನು ಅವನಲ್ಲಿ, ಭೀಮ್ ಸೇನ್ ಜೋಶಿ ಯವರು ನಿನಗೆ ಗೊತ್ತೆ? ಅವರ ಸಂಗೀತ ಆಲಿಸಿದ್ದೀಯೆ? ಎಂದು ಕೇಳಿದ್ದೆ! ಆದರೆ ಅವ ಜೋಶಿಯವರ ಬಗ್ಗೆ ಗೊತ್ತಿಲ್ಲ ಎಂದಾಗ ಆಶ್ಶ್ಚ್ರರ್ಯ ಸಹಿತ ಖೇದವಾಯಿತು. ಆದರೆ ಜೋಶಿ ಯವರ ಬಗ್ಗೆ ಅವನಿಗೆ ತಿಳಿಸಲು ನನಗೆ ಬಹಳ ಕಷ್ಟವಾಗಲಿಲ್ಲ. ನೀನು "ಮೀಲೆ ಸುರುಮೇಳ ತುಮ್ಹಾರಾ" ಕೇಳಿದ್ದೀಯ? ಒಹ್ ಕೇಳಿದ್ದೀನಿ, ಅದು ನನಗೆ ಬಹಳ ಪ್ರಿಯವಾದದ್ದು ಎಂದ. ಆ ಹಾಡು ಶುರುವಾಗುವುದೆ ಪಂಡಿತ್ ಭೀಮ್ ಸೇನ್ ಜೋಶಿ ಯವರ ಕಂಠದಿಂದ!

ಹೀಗೆ ಬಹಳಷ್ಟು ವರ್ಷಗಳಿಂದ ಸಂಗೀತಾಸಕ್ತರ ತನು ಮನಗಳನ್ನು ತಮ್ಮ ವಿಶಿಷ್ಟ ಗಾಯನದಿಂದ ತಣಿಸಿರುವ ಕನ್ನಡಿಗ ಭೀಮ್ ಸೇನ್ ಜೊಷಿಯವರಿಗೆ ಅತ್ಯುನ್ನತ ನಾಗರೀಕ ಪ್ರಶಸ್ತಿ ಎನ್ನಿಸಿರುವ (ಈ ಪ್ರಶಸ್ತಿ ಕೆಲವು ರಾಜಕಾರಣಿ, ಸ್ವಾಮಿ ನಿಷ್ಟರಿಗೆ ಸಿಕ್ಕ ಅಪವಾದವನ್ನು ಬದಿಗಿಟ್ಟು) ಭಾರತರತ್ನ ಪ್ರಶಸ್ತಿ ಪಂಡಿತ್ ಭೀಮ್ ಸೇನ್ ಜೋಶಿ ಯವರಿಗೆ ಸಿಕ್ಕ ಸಿಹಿ ಸಮಾಚಾರ ಬೆಳಗಿನ ಪ್ರಾಜಾವಾಣಿ ಯಲ್ಲಿ ನೋಡಿ ಅತೀವ ಆನಂದವಾಯಿತು. ಆದರೆ ಈ ಸುದ್ದಿ ಅಮೇರಿಕಾದ ಚುನಾವಣಾ ಸುದ್ದಿಯ ನಡುವೆ ಸಿಲುಕಿ, ಅದಕ್ಕೆ ಸಿಗಬೇಕಾದ ಮಹತ್ವ ಸಿಗದೆ (ಯಾವುದೇ ಆಂಗ್ಲ ಅಥವಾ ಕನ್ನಡ ಟಿ ವಿ ವಾಹಿನಿಗಳಲ್ಲಿ ಹಿಂದಿನ ರಾತ್ರಿ ಬಿತ್ತರವಾದಂತೆ ಕಂಡು ಬರಲಿಲ್ಲ) ಹೋದದ್ದಕ್ಕೆ ದುಖವಾಯಿತು. ಮಾಧ್ಯಮಗಳ ಮೇಲೆ ಸಿಟ್ಟು ಬಂತು (ಬಡವನ ಕೋಪ ದವಡೆಗೆ ಮೂಲ).ಆದರೆ ವಿಜಯ ಕರ್ನಾಟಕ ದಿನ ಪತ್ರಿಕೆಗೆ ಅಭಿನಂದನೆಗಳು ಮಹಾಪೂರವೆ ಸಲ್ಲಬೇಕು. ಮುಖಪುಟದ, ಮುಖ್ಯ ಭೂಮಿಕೆಯಲ್ಲಿ ಸುದ್ದಿ ಪ್ರಕಟವಾದದ್ದಲ್ಲದೆ, ಎರಡನೆ ಪುಟ ಪೂರ್ತಿ ಜೋಶಿ ಯವರಿಗೆ ಮೀಸಲಾಗಿತ್ತು. ಇದು ಮುಂದಿನ ದಿನ ಕೂಡ ಮುಂದುವರೆದಿರುವುದು ಸಂತಸಕರ ಸಂಗತಿ.

ಭೀಮ್ ಸೇನ್ ಜೋಶಿಯವರು ಕನ್ನಡಿಗರಿಗೆ ತಟ್ಟನೆ ಹೊಳೆಯುವುದೆಂದರೆ ಪುರಂದರ ದಾಸ ವಿರಚಿತ "ಭಾಗ್ಯದ ಲಕ್ಶ್ಮಿ ಬಾರಮ್ಮ" ದೇವರ ನಾಮವನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಹಾಡಿರುವುದು. ಇದು ಬಹಳಶ್ಟು ಜನರು ಶಂಕರ್ ನಾಗ್ ರವರ "ನೋಡಿ ಸ್ವಾಮಿ ನಾವಿರೋದೆ ಹೀಗೆ" ಚಿತ್ರದಲ್ಲಿ ನೋಡಿರಬಹುದು/ಕೇಳಿರಬಹುದು. ನನ್ನ ತಿಳುವಳಿಕೆಯ ಪ್ರಕಾರ ಜೋಶಿಯವರು, ೧೯೯೦ ರಲ್ಲಿ ರಾಮಸೇವಾ ಮಂಡಲಿಯ ಸಂಗೀತೋತ್ಸವದಲ್ಲಿ ಹಿಂದೂಸ್ತಾನಿ ಶೈಲಿಯಲ್ಲಿ ಈ ದೇವರ ನಾಮವನ್ನು ಧೀರ್ಘವಾಗಿ ಪ್ರಸ್ತುತ ಪಡಿಸಿದ್ದಾರೆ. ಇದೇ ಸಮಯದಲ್ಲಿ ಶ್ರೀಪಾದರ "ಕಣ್ಗಳಿದ್ಯಾತಕೋ ಕಾವೇರಿ ರಂಗನ ನೋಡದ" ಕೀರ್ತನೆಯನ್ನೂ ಪ್ರಸ್ತುತ ಪಡಿಸಿದ್ದಾರೆ. ಇವುಗಳನ್ನು ಕೇಳಿದರೆ ಜೋಶಿಯವರ ಕಟ್ಟಾಭಿಮಾನಿಗಳಾಗುದರಲ್ಲಿ ಸಂಶಯವೇ ಇಲ್ಲ.

ಇನ್ನು ಕನ್ನಡ ಚಲನ ಚಿತ್ರ ರಂಗದಲ್ಲಿ ತಟ್ಟನೆ ನೆನಪಾಗುವುದು, ಸಂಧ್ಯಾರಾಗದ (ಇದು ಕನ್ನಡ ಕಾದಂಬರಿಕಾರ "ಅ ನ ಕೃ" ರವರ ಹೆಸರಾಂತ ಕಾದಂಬರಿ "ಸಂಧ್ಯಾರಾಗ" ವನ್ನು, ಎ ಸಿ ನರಸಿಂಹ ಮೂರ್ತಿ ಮತ್ತು ಎಸ್ ಕೆ ಭಗವಾನ್ ೧೯೬೬ ರಲ್ಲಿ ಚಲನಚಿತ್ರವಾಗಿಸಿದ್ದಾರೆ. ಇದಕ್ಕೆ ಜಿ ಕೆ ವೆಂಕಟೇಶ್ ಮತ್ತು ಬಾಲಮುರಳಿಕೃಷ್ಣ ರವ ಸಂಗೀತ ಸಂಯೋಜನೆಯಿದೆ) "ನಂಬಿದೆ ನಿನ್ನ ನಾದ ದೇವತೆ". ಪೂರ್ವಿ ಕಲ್ಯಾಣ ದಲ್ಲಿ ಪ್ರಸ್ತುತ ಪಡಿಸಿರುವ ಪುರಂದರದಾಸರ ಮತ್ತೊಂದು ಕೃತಿ. ಇದೇ ಚಿತ್ರದಲ್ಲಿ "ತೇಲಿಸು ಇಲ್ಲಾ ಮುಳುಗಿಸು", "ಕನ್ನಡತಿ ತಾಯೆ ಬಾ", "ಗುರುವಿನ ಗುಲಾಮನಾಗುವ ತನಕ" ಹಾಡುಗಳನ್ನೂ ತಮ್ಮ ಸಿರಿಕಂಠ ದಿಂದ ಹೊರಡಿಸಿದ್ದಾರೆ. ನಾನು ನೋಡಿರುವ ಸಂಗೀತಾಧಾರಿತ ಚಿತ್ರಗಳಲ್ಲಿ ಉಳಿದವಕ್ಕಿಂತ ಇದು ಅತ್ತ್ಯುತ್ತಮ ಚಿತ್ರ ಎಂದರೆ ತಪ್ಪಾಗಲಾರದು! ಕಾದಂಬರಿ ಆಧಾರಿತ ಚಿತ್ರಗಳ ಪೈಕಿಯಲ್ಲೂ ಇದು ಅತ್ಯುತ್ತಮ ಚಿತ್ರ.
http://in.youtube.com/watch?v=UkBca8f7q5Q ಇಲ್ಲಿ ಕೇಳಿ. ನಿಮ್ಮ ಕರ್ಣಾನಂದವಾಗುವುದರಲ್ಲಿ ಸಂಶಯವಿಲ್ಲ.

ಶ್ರೀಯುತರು ಹಿಂದಿಯಲ್ಲಿ "ಬಸಂತ್ ಬಹಾರ್" ಎಂಬ ಚಲನ ಚಿತ್ರದಲ್ಲಿ (ಇದು ಕನ್ನಡ ಕಾದಂಬರಿಕಾರ "ತ ರಾ ಸು" ರವರ "ಹಂಸಗೀತೆ" ಕಾದಂಬರಿಯನ್ನು ೧೯೫೬ ರಲ್ಲ್ಲಿ ಚಲನಚಿತ್ರವಾಗಿಸಿದ್ದು) "ಕೇತಕೀ ಗುಲಾಬ್ ಜೂಹಿ" ಎಂಬ ಹಾಡನ್ನು ಹಾಡಿದ್ದಾರೆ.
http://in.youtube.com/watch?v=GJAdhSnblRo ಇದನ್ನು ಒಮ್ಮೆ ಇಲ್ಲಿ ಕೇಳಿ. ನಿಮಗೆ ಹಿಂದೂಸ್ತಾನಿ ಸಂಗೀತದ ಮೇಲೆ ಆಸಕ್ತಿ ಇಲ್ಲದಿದ್ದರೂ, ನಿಮ್ಮ ಮನ ತಣಿಸುವ ಮಾಯಾ ಶಕ್ತಿಯಂತೂ ಇದೆ, ಈ ಹಾಡಿನಲ್ಲಿ.

ಜೋಶಿಯವರು ಹಲವು ಧ್ವನಿ ಸುರಳಿಗಳನ್ನು ಹೊರ ತಂದಿದ್ದಾರೆ. ಅದರಲ್ಲಿ ಕೆಲವು "ದಾಸರ ಪದಗಳು"/"ದಾಸವಾಣಿ", "ಎನ್ನ ಪಾಲಿಸೊ" ಇತ್ಯಾದಿ. ಈ ಧ್ವನಿ ಸುರಳಿಗಳಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ವಿರಚಿತ "ಇಂದು ಎನಗೆ ಶ್ರೀ ಗೋವಿಂದ" , ಹಲವು ಹರಿದಾಸರ ರಚನೆಗಳಾದ "ಸದಾ ಎನ್ನಾ ಹೃದಯದಲ್ಲಿ", "ತುಂಗಾ ತೀರದಿ ನಿಂತ ಸುಯತಿವರ", "ಕರುಣಾಕರನೀನೆಂಬುವದ್ಯಾತಕೊ?" , "ಎನ್ನ ಪಾಲಿಸೊ ಕರುಣಾಕರ", "ಕೈಲಾಸವಾಸ ಗೌರೀಶ ಈಶ", "ಕರುಣಿಸೋ ರಂಗಾ", "ಯಾದವ ನೀ ಬಾ", "ಭಾಗ್ಯದ ಲಕ್ಷ್ಮೀ ಬಾರಮ್ಮಾ", "ಕಣ್ಗಳಿದ್ಯಾತಕೋ?", "ಯಾಕೆ ಮೂಕನಾದೆಯೋ ಗುರುವೆ?", "ದಯಮಾಡೋ ರಂಗಾ" , "ಏಂದಿಗಾಹುದೋ ನಿನ್ನ ದರುಶನ?", ಇನ್ನೂ ಮುಂತಾದ ಕೃತಿಗಳು ಒಂದನನ್ನೊಂದು ಮೀರಿಸಿದಂತೆ ಮೂಡಿ ಬಂದಿವೆ.

ತಮ್ಮ ಒಂದು ಧ್ವನಿ ಸುರಳಿಯಲ್ಲಿ (ಹೆಸರು ನೆನಪಿಲ್ಲ), ಜ್ಞಾನ ಪೀಠ ಪ್ರಶಸ್ತಿ ವಿಜೇತ ವರಕವಿ ಬೇಂದ್ರೆ ಯವರ "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಹಾಡಿರುವುದು ಮತ್ತೊಂದು ವಿಶೇಷ.

ಜೋಶಿಯವರ ಮತ್ತೊಂದು ವಿಶೇಷವೆಂದರೆ ಇನ್ನೊಬ್ಬ ಖ್ಯಾತ ಕರ್ನಾಟಕ ಸಂಗೀತಕಾರ ಬಾಲಮುರಳಿಕೄಷ್ಣರ ಜೊತೆ ಹಾಡಿರುವುದು. (ಹಿಂದೂಸ್ತಾನಿ-ಕರ್ನಾಟಕ ಜುಗಲ್ ಬಂಧಿ). ಈ ಕಾರ್ಯಕ್ರಮಕ್ಕೆ ಮೊದಲು ವೇದಿಕೆ ಯಾಗಿದ್ದು ಬಹುಷ: ದೂರದರ್ಶನದವರು ಎಂದೆನಿಸುತ್ತದೆ. ಈ ಜೋಡಿ ಬಹಳ ಜನಪ್ರಿಯ ಆಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ನೀಡಿರುವುದಲ್ಲದೆ, ಒಂದು ಧ್ವನಿಸುರಳಿ ಕೂಡ ಹೊರಬಂದಿರುವುದು ಸಂತೋಷಕರ ಸಂಗತಿ. ಈ ಸುರಳಿಯಲ್ಲಿ ದರ್ಬಾರಿ ಕನ್ನಡ, ಭೈರವಿ, ಮಾಲಕೌಂಸ್ ರಾಗಗಳು ಮತ್ತು ಈ ರಾಗಾಧಾರಿತ ಕೃತಿಗಳು ಮೂಡಿ ಬಂದಿವೆ.

"ಹಿಂದೂಸ್ತಾನಿ ಮುಕುಟಮಣಿಗಳು" ಎಂಬ ಪುಸ್ತಕದಲ್ಲಿ ಡಾ ಕೆ ಶ್ರೀಕಂಠಯ್ಯನವರು, ಜೋಶಿ ಯವರ ಬಗ್ಗೆ ಬರೆದಿರುವ ಲೇಖನದ ಕೆಲವು ಸಾಲುಗಳು.

{ "ಕಚೇರಿಗಳಲ್ಲಿ ಜೋಶಿಯವರು ಗಳಿಸಿರುವ ಅಸಾಧಾರಣ ಜನಪ್ರಿಯತೆಗೆ ಅವರು ರೂಢಿಸಿಕೊಂಡಿರುವ ಕೆಲವು ಗುಣಗಳೇ ಕಾರಣ. ಸಾಮಾನ್ಯವಾಗಾವರು ಕಚೇರಿಗಳಿಗೆ ಆರಿಸಿಕೊಳ್ಳುವುದು ಸಂಮಿಶ್ರ ರಾಗಗಳು. ಕಂಡವರು ಕರುಬುವಷ್ಟರಮಟ್ಟಿಗೆ ಪರಿಪಕ್ವತೆಯನ್ನು ಸಾಧಿಸಿರುವ ಈ ಸಂಯೋಜಿತ ರಾಗಗಳ ಆಯ್ಕೆ ಅವರ ಯಶಸ್ಸಿನ ಒಂದು ಗುಟ್ಟು, ಯಮನ್ ಕಲ್ಯಾಣ್, ಶುದ್ಧ ಕಲ್ಯಾಣ್, ಪೂರಿಯ, ಪೂರಿಯ ಕಲ್ಯಾಣ್ (ಪೂರ್ವಿ ಕಲ್ಯಾಣಿ), ಮತ್ತು ಪೂರಿಯ ಧನಶ್ರೀ - ರಾಗಗಳನ್ನು ಹೃದ್ ಗತ ಮಾಡಿಕೊಡು ಅವುಗಳ ಮೇಲೆ ಪ್ರಭುತ್ವವನ್ನು ಸಂಪಾದಿಸಿರುವುದೇ ಆಗಿದೆ."

"ಪರಂಪರಾಗತ ರಚನೆಗಳಿದ್ದಾಗ್ಯೂ ಜೋಶಿಯವರ ತೋಡಿ, ಮಾಲಕೌಂಸ್, ಪೂರಿಯ ಕಲ್ಯಾಣಿ ಮತ್ತು ದರ್ಬಾರಿ ನಿರೂಪಣೆಗಳು ಭಾರತೀಯ ಸಂಗೀತದಲ್ಲಿ ಒಂದು ಹೊಸ ಆಯಕಟ್ಟನ್ನು ನೀಡಿವೆ." }

ಇವುಗಳಲ್ಲಿ ನಾನು, ಶ್ರೀಯುತರು ರಾಜಸ್ಥಾನದ ಯಾವುದೋ ದರ್ಬಾರ್ ಹಾಲ್ ನಲ್ಲಿ ಹಾಡಿರುವ ಪೂರ್ವಿ ಕಲ್ಯಾಣಿ ರಾಗ ವನ್ನು ಧ್ವನಿ ಸುರುಳಿಯಲ್ಲಿ ಕೇಳಿ ಮೈಮರೆತು ಹೋದೆ ಎಂದರೆ ಸ್ವಲ್ಪವೂ ಅತಿಶಯೋಕ್ತಿಯಿಲ್ಲ. ಜೋಶಿಯವರು ಹಾಡಿರುವ, ಅವುಗಳಲ್ಲಿ ನಾನು ಕೇಳಿರುವುದರಲ್ಲಿ ಇದು ನನಗೆ ಅತ್ಯಂತ ಪ್ರಿಯವಾದದ್ದು. ಇವರ ತೋಡಿ ರಾಗದ ಆಲಾಪನೆ ಕೂಡ ನನಗೆ ಬಹಳ ಇಷ್ಟವಾದದ್ದು.

ಕೊನೆಯದಾಗಿ, ಭೀಮ್ ಸೇನ್ ಜೋಶಿಯವರ ಸಿರಿಕಂಠದಿಂದ, ಹಿಂದೂಸ್ತಾನಿ ಕಾಫಿ ರಾಗದಲ್ಲಿರುವ ಪುರಂದರ ದಾಸ ವಿರಚಿತ "ಜಗದೋದ್ಧಾರನ ಆಡಿಸಿದಳೆ ಯಶೋಧೆ" ಕೀರ್ತನೆಯನ್ನು ಕೇಳಬೇಕೆಂಬುದು ಜಿಜ್ಞಾಸೆ.

ನಿಮ್ಮ ಅಭಿಪ್ರಾಯಗಳೆನು? ಕೆಳಗೆ ಬರೆದು ತಿಳಿಸಿ.
ಅಕ್ಷರ ದೋಷಗಳಿದ್ದರೆ ಕ್ಷಮಿಸಿ, ತಿಳಿಸಿ, ತಿದ್ದಿಕೊಳ್ಳುವೆ!

4 ಕಾಮೆಂಟ್‌ಗಳು:

  1. ಬಹಳ ಚೆನ್ನಾಗಿದೆ ಗುರುಗಳೇ! ಭೀಮ್ ಸೇನ್ ಜೋಶಿಗಳ ಬಗ್ಗೆ ಹೆಚ್ಚೇನು ತಿಳಿದಿಲ್ಲದ ನನಗೆ ಈ ಲೇಖನದಿ೦ದ ಬಹಳ ಮಾಹಿತಿ ದೊರೆಯಿತು. ಇನ್ನೂ ಅಚ್ಚ ಕನ್ನಡದ ಹೆಚ್ಚು ಹೆಚ್ಚು ಲೇಖನಗಳು ಬರಲಿ ನಿನ್ನಿ೦ದ.

    ಪ್ರತ್ಯುತ್ತರಅಳಿಸಿ
  2. ati uttama guruve. Sogasagide. Heege barita iru.

    ಪ್ರತ್ಯುತ್ತರಅಳಿಸಿ
  3. ಅನಾಮಧೇಯ8:17 PM

    Tumba Channagide lekhana. Joshi avara katta abhimaani aagiruva nange ee lekhana odi bahala khushi aaitu.
    Heege inthaha olle kannada lekhana galannu bareeta iru.

    ಪ್ರತ್ಯುತ್ತರಅಳಿಸಿ
  4. raaveesha, simha, kabbur bahaLa dhanyavaadagaLu.. heege Odtaa iri. nimminda nanna lEkhanagaLige uttEjana/teekegaLu bartaa irli....

    ಪ್ರತ್ಯುತ್ತರಅಳಿಸಿ