ಶನಿವಾರ, ನವೆಂಬರ್ 15, 2008

ಇಬ್ಬರು ಮಹಾತ್ಮರ ಜಯಂತಿ

ಇಲ್ಲಿ ನಾನು ಕೆಲವು ಜಾತಿ ವ್ಯವಸ್ಥೆಗಳನ್ನು ಪ್ರಸ್ತಾಪಿಸಿದ್ದರೂ, ಅವುಗಳು ನಾನು ನಂಬಿದ್ದಲ್ಲ. ಈ ಲೇಖನಕ್ಕೆ ಪೂರಕವಾಗಿ ಉಲ್ಲೇಖಿಸಲೇಬೇಕಾಗಿದ್ದರಿಂದ ದು:ಖದಿಂದ ಪ್ರಸ್ತಾಪಿಸಲಾಗಿದೆ. ಶೂದ್ರರು, ಬ್ರಾಹ್ಮಣರು, ದಲಿತರು, ಮೇಲ್ವರ್ಗದವರು, ಕೆಳವರ್ಗದವರು ಎಂದು ಕರೆಯಲ್ಪಟ್ಟವರು ಎಂದಿದ್ದೇನೆಯೆ ಹೊರತು, ಈ ವಿಂಗಡನೆಯನ್ನು ನಾನು ನಂಬಿದ್ದಲ್ಲ. ಒಂದೆ ಜಾತಿ ಒಂದೆ ಕುಲ ನಾವು ಮನುಜರು ಎಂಬ ಕವಿವಾಣಿಯನ್ನು ಬೆಂಬಲಿಸುವವನು. ಆಚರಣೆ, ನಂಬಿಕೆ ಇತ್ಯಾದಿಗಳು ಒಬ್ಬೊಬ್ಬರಿಗೂ ವಿಭಿನ್ನವಾದುದರಿಂದ ಜಾತಿ, ಧರ್ಮಗಳಿರಲಿ ಆದರೆ ಎಲ್ಲರೂ ಸಮಾನರು ಎಂಬುದಾದರೆ ಅದಕ್ಕೂ
ನನ್ನ ಸಹಮತವಿದೆ.

ಕೆಲವೇ ದಿನಗಳ ಹಿಂದೆ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಹಿಂದೂ ಧರ್ಮದ ಅಸ್ಪೃಶ್ಯತೆ ಹೋಗಲಾಡಿಸಲು ತಮ್ಮ ಕೈಲಾದ ಪ್ರಯತ್ನ ಮಾಡಿದರು. ನಾವು ಮತ್ತು ನಮ್ಮ ಮಠದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ ಎಂದು ಬಹಿರಂಗವಾಗಿ ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟರು. ದಲಿತರು/ಶೂದ್ರರು ಎಂದು ಕರೆಯಲ್ಪಟ್ಟವರು(ಕರೆದುಕೊಳ್ಳುವವರು) ಬೌದ್ಧ ಧರ್ಮ ಸೇರುವುದಕ್ಕಿಂತ, ಹಿಂದೂ ಧರ್ಮದ ಮೌಢ್ಯ, ಅಸ್ಪೃಶ್ಯತೆಗಳನ್ನು ಹೋಗಲಾಡಿಸಲು ಅವಿರತವಾಗಿ ದುಡಿದ ಸ್ವಾಮಿ ದಯಾನಂದ ಸರಸ್ವತಿಯವರ ಆರ್ಯ ಸಮಾಜ ಸೇರುವುದು ಬಹಳಷ್ಟು ಸೂಕ್ತ ಎಂಬ ಸಲಹೆ ಕೂಡ ಕೊಟ್ಟರು. ಇದನ್ನು ಕೆಲವರಿಗೆ ಸಹಿಸಲಾಗಲಿಲ್ಲ. ನಾವು ಕೆಳವರ್ಗದವರು ಎಂದು ತಾವೇ ಕರೆದುಕೊಳ್ಳುವವರು ಬಹಳಷ್ಟು ಮಂದಿ ನಮ್ಮಲ್ಲಿದ್ದಾರೆ. ಅವರ ಕೆಲಸ ಬ್ರಾಹ್ಮಣರು ಅಥವಾ ಮೇಲ್ವರ್ಗದವರು ಎಂದು ಕರೆಯಲ್ಪಟ್ಟವರು ಶೂದ್ರ ಎಂದು ಕರೆಯಲ್ಪಟ್ಟವರನ್ನು ಅನಾದಿಕಾಲದಿಂದ ಶೋಷಿಸಿದ್ದಾರೆ,(ಶೂದ್ರ ಎಂದು ಕರೆಯಲ್ಪಟ್ಟವರು, ದಲಿತರು ಎಂದು ಕರೆಯಲ್ಪಟ್ಟವರನ್ನು ಶೋಷಿಸಿದ್ದಾರೆ ಎಂಬುದೂ ಇದೆ) ಮತ್ತು ಈಗಲೂ ಶೋಷಿಸುತ್ತಿದ್ದಾರೆ ಎಂದು ಧರಣಿ ಸತ್ಯಾಗ್ರಹಗಳನ್ನು ಮಾಡುವುದು, ಸಂಘಗಳನ್ನು ಕಟ್ಟುವುದು, ಸತ್ವವಿಲ್ಲದ ವಿಚಾರ ಘೋಷ್ಠಿಗಳನ್ನು ಮಾಡುವುದು (ಇವುಗಳಲ್ಲಿ ತಮ್ಮನ್ನು ಬುದ್ಧಿಜೀವಿಗಳೆಂದು ಕರೆದುಕೊಂದು, ಮೇಲ್ವರ್ಗವೆಂದು ಕರೆಯಲ್ಪಟ್ಟ ವರನ್ನು ವಾಮಾಗೋಚರ ಬೈಯ್ಯುವುದು). ಒಟ್ಟಿನಲ್ಲಿ ತಮ್ಮನ್ನೇ ವಿಚಾರವಾದಿಗಳು, ಚಿಂತಕರು, ಬುದ್ಧಿಜೀವಿಗಳು ಎಂಬಿತ್ಯಾದಿಯಾಗಿ ಕರೆದುಕೊಂಡು ಮಾಧ್ಯಮಗಳಲ್ಲಿ ಚಾಲ್ತಿಯಲ್ಲಿರುವುದೇ ಇವರ ಕೆಲಸ. ಎಲ್ಲಿ ಇನ್ನಿತರ ಸ್ವಾಮಿಗಳು ಹಿಂದೂ ಧರ್ಮದ ಏಳಿಗೆಗೆ, ಅಸ್ಪೃಶ್ಯತಾ ನಿವಾರಣೆಗೆ ಬದ್ಧರಾಗಿ ಒಂದಾಗಿ ಹೀಗೆ ಬಹಿರಂಗ ಹೇಳಿಕೆ ಕೊಟ್ಟರೆ ತಮ್ಮ ಮಾರುಕಟ್ಟೆ ಬೆಲೆ ಕಡಿಮೆಯಾಗುವುದೇನೋ ಎಂದು ದಿಗಿಲಾಗಿರಬೇಕು, ಶೂದ್ರರು, ಕೆಳವರ್ಗದವರು ಎಂದು ಕರೆದುಕೊಳ್ಳುವವರಿಗೆ. ಪೇಜಾವರ ಸ್ವಾಮಿಗಳ ಪ್ರಕೃತಿ ದಹನ ಮುಂತಾದ ಧರಣಿಗಳು ನಡೆದವು .

ಕೆಳವರ್ಗದವರು ಎಂದು ಕರೆದುಕೊಳ್ಳುವವರು ಮಾತ್ರ ಇರುವುದೇ? ತಾವು ಮೇಲ್ವರ್ಗದವರು ಎಂದು ಕರೆದುಕೊಳ್ಳುವವರೂ ಇದ್ದಾರೆ. ಇಂದು ಈ ಕೆಳವರ್ಗದವರು ಎಂದು ಕರೆದುಕೊಂಡು ಅನಾವಶ್ಯಕವಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡುವುದಕ್ಕೆ ಇವರ ಪಾತ್ರವೂ ಇದೆ. ದೇವಸ್ಥಾನಗಳನ್ನು ಕಟ್ಟುವುದು, ದೇವರಿಗೇ ಜಾತಿ ಕಟ್ಟುವುದು, ಕೆಲವು ಜಾತಿಯವರನ್ನು ದೇವಸ್ಥಾನದ ಒಳಗೆ ಬಿಡದೆ ಇರುವುದು, ಒಂದೊಂದು ವರ್ಗದವರಿಗೆ ಒಂದೊಂದು ಊಟದ ಪದ್ಧತಿ ಮಾಡುವುದು ಈ ರೀತಿಯ ಶೋಷಣೆಗಳು ಇಂದಿಗೂ ಇರುವುದು ಬಹಳ ದು:ಖಕರ ಸಮಾಚಾರ.

ಯಾಕೋ ವಿಚಾರ ಲಹರಿ ನಿಲ್ಲುತ್ತಲೇ ಇಲ್ಲ. ಇನ್ನೊಂದು ಬ್ಳಾಗಿನಲ್ಲಿ ವಿಚಾರ ಮುಂದುವರೆಸುತ್ತೇನೆ. ಇವೊತ್ತು ನೆನೆಸಿಕೊಳ್ಳಬೇಕೆಂದುಕೊಂಡಿದ್ದು, "ಕನಕ ದಾಸರನ್ನು". "ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯೇನಾದರು ಬಲ್ಲಿರಾ " (ಈ ಕೃತಿಯ ಸಾಹಿತ್ಯ ಇಲ್ಲಿ ಓದಿ : http://www.kannadalyrics.com/?q=node/2358, ಭಕ್ತ ಕನಕದಾಸ ಚಿತ್ರದಲ್ಲಿ ಅಳವಡಿಸಿಕೊಂಡಿರುವ ಈ ಗೀತೆಯನ್ನು ಇಲ್ಲಿ ಕೇಳಿ:http://in.youtube.com/watch?v=s-ywVM3veDk)ಎಂದು ಮುಖಕ್ಕೆ ಉಗಿದಂತೆ ಹೇಳಿದ್ದರೂ, ಕನಕ ದಾಸರಿಗೇ ಜಾತಿ/ಮತಗಳನ್ನು ಕಟ್ಟಿ ಕಿತ್ತಾಡುವ ಮಹಾನುಭಾವರಿದ್ದಾರೆ! ಹೌದು ಇಂದು ’ಕನಕ ಜಯಂತಿ’.

ಇನ್ನು ಈ ಹೊಲಸು ಜಾತಿ, ಅಸ್ಪೃಶ್ಯತೆಗಳನ್ನು ಇಲ್ಲಿಗೆ ನಿಲ್ಲಿಸಿ ಕನಕ ದಾಸರ ಬಗ್ಗೆ ಅವಲೋಕಿಸೋಣ.
ವ್ಯಾಸರಾಯರ ಶಿಷ್ಯವರ್ಗದಲ್ಲಿ ಒಬ್ಬರಾದ ಕನಕದಾಸರು ಕರ್ನಾಟಕದ ಪ್ರಮುಖ ಹರಿದಾಸರುಗಳಲ್ಲಿ ಒಬ್ಬರು.(ಪುರಂದರ ದಾಸರು, ವಾದಿರಾಜರು ಕೂಡ ವ್ಯಾಸರಾಯರ ಶಿಷ್ಯರು). ಕನಕದಾಸರು, ’ನೆಲೆಯಾದಿಕೇಶವ’, ಕಾಗಿನೆಲೆಯಾದಿಕೇಶವ’ ’ಬಡದಾದಿಕೇಶವ’ ಮೊದಲಾದ ಅಂಕಿತದಿಂದ ಅಪಾರ ಭಕ್ತಿ ಕೀರ್ತನೆ ಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತಕ್ಕೆ ಕನಕದಾಸರ ಕೊಡುಗೆ ಅಪಾರ. ವರಕವಿಗಳಾದ ಇವರು ’ಮೋಹನ ತರಂಗಿಣಿ’, ’ನಳ ಚರಿತ್ರೆ’, ’ಕನಕನ ಮುಂಡಿಗೆ’ ಎಂಬ ಗ್ರಂಥಗಳನ್ನು ರಚಿಸಿರುವುದು ಕನ್ನಡ ಭಾಷೆಗೆ ಕನಕದಾಸರ ಕೊಡುಗೆ.

ಉಡುಪಿ ಶ್ರೀಕ್ಷೇತ್ರದಲ್ಲಿ ಕೃಷ್ಣನ ದರ್ಶನಕ್ಕೆ ಅವಕಾಶ ಸಿಗದಿರಲು, ಗರ್ಭ ಗೃಹದ ಹಿಂಭಾಗದಲ್ಲಿ ನಿಂತು ದೇವರನ್ನು ಪರಮ ಭಕ್ತಿಯಿಂದ ಸ್ತುತಿಸಲು, ಪರಮಾತ್ಮ ಕನಕದಾಸರ ಕಡೆಗೇ ತಾನೂ ತಿರುಗಿ ಗರ್ಭಗುಡಿಯ ಹಿಂಭಾಗದ ಗೋಡೆಯ ಕಿಂಡಿಯಿಂದ ದರ್ಶನವಿತ್ತನಂತೆ. ಅಠಾಣ ರಾಗದಲ್ಲಿರುವ "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ಎಂಬ ಕನಕದಾಸರ ದೇವರ ನಾಮವನ್ನು, ಮೇಲಿನ ದೃಶ್ಯವನ್ನು ಭಕ್ತ ಕನಕದಾಸ ಚಲನಚಿತ್ರದಲ್ಲಿ ತೋರಿಸುವಾಗ ಬಳಸಿಕೊಂಡಿದ್ದಾರೆ.(ಇಲ್ಲಿ ಕೇಳಿ:http://in.youtube.com/watch?v=CrK0-EhhCUc&feature=related, ಇಲ್ಲಿ ಸಾಹಿತ್ಯ ಲಭ್ಯವಿದೆ: http://haridasa.in)

ಕನಕ ದಾಸ ರಚನೆಗಳು ಬಹಳ ಸರಳವಾಗಿದ್ದು ಭಕ್ತಿ ರಸವನ್ನೇ ಹರಿಸುವಂತವಾಗಿವೆ. ಉದಾಹರಣೆಗೆ ದರ್ಬಾರಿ ರಾಗದಲ್ಲಿರುವ "ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ" ಕೇಳಿದರೆ ಭಕ್ತಿಯ ಜೊತೆಗೆ ಮನಸ್ಸೂ ಕೂಡ ನಲಿಯುವುದು . (ವಿದ್ಯಾಭೂಷಣ ರವರು ಹಾಡಿರುವ ಈ ಕೀರ್ತನೆಯನ್ನು ಇಲ್ಲಿ ಕೇಳಿ:http://in.youtube.com/watch?v=1pPd_CWaQm4 ). ಇನ್ನು ಹಲವಾರು ಕರ್ನಾಟಕ ಸಂಗೀತ ಸಭೆಗಳಲ್ಲಿ (ಅದರಲ್ಲೂ ಮಾಂಡೋಲಿನ್ ವಾದಕ ಯು. ಶ್ರೀನಿವಾಸರ ವಾದನಗಳಲ್ಲಿ) "ಬಾರೋ ಕೃಷ್ಣಯ್ಯಾ" ದ ಪ್ರಸ್ತುತಿ ಸಭಿಕರ ಮೆಚ್ಚುಗೆಗೆ ಪಾತ್ರವಾಗಿ ಹೆಚ್ಚಿನ ಚಪ್ಪಾಳೆಗಳನ್ನು ಗಳಿಸುತ್ತದೆ.(ಇಲ್ಲಿ ಕೇಳಿ: http://in.youtube.com/watch?v=pksRRuwgOms,) ಇದು ಕೂಡ ಕನಕ ದಾಸರ ರಚನೆಯೆ.

ಒಂದು ದೊಡ್ದ ಕೊರಗೆಂದರೆ ಇಷ್ಟೋಂದು ಅಚ್ಚ ಕನ್ನಡದ ಕನಕ ದಾಸರ ದೇವರನಾಮಗಳು ಕರ್ನಾಟಕ ಸಂಗೀತ ಸಭೆಗಳಲ್ಲಿ ಹೆಚ್ಚು ಬಳಕೆಯಾಗದೆ ಇರುವುದು. ನಮ್ಮಲ್ಲಿ ಬಹಳಷ್ಟು ಕರ್ನಾಟಕ ಸಂಗೀತ ವಿದ್ವಾಂಸರಿದ್ದಾರೆ. ಬಹಳಷ್ಟು ಸಂಗೀತ ಸಭೆಗಳು ನಡೆಯುತ್ತವೆ. ಇನ್ನು ಮುಂದೆಯಾದರೂ ನಮ್ಮ ಹರಿದಾಸರ ಕೃತಿಗಳನ್ನು ಜನಪ್ರಿಯಗೊಳಿಸಲು ವಿದ್ವಾಂಸರುಗಳು , ಕಾರ್ಯಕ್ರಮ ಪ್ರಾಯೋಜಕರು ಉತ್ತೇಜನ ಕೊಡಬೇಕಾಗಿದೆ.(ಇದು ಕನ್ನಡ ರಾಜ್ಯೋತ್ಸವ ಮಾಸ)

ನಮ್ಮ ಸಮಾಜೋದ್ಧಾರಕ್ಕೆ ಕನಕದಾಸರು ಅನೇಕ ಕೃತಿಗಳನ್ನು ರಚಿಸಿದ್ದಾರೆ. "ಕುಲ ಕುಲವೆಂದು ಹೊಡೆದಾಡದಿರಿ" ಜನಪ್ರಿಯವಾಗಿದೆ. ಹಾಡುವುದು, ಕೇಳುವುದರ ಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅವಶ್ಯಕತೆ. ಕನಕದಾಸರ ಇನ್ನೊಂದು ರಚನೆ ಇಲ್ಲಿ ನೋಡೋಣ. ರಾಗ ಮಧ್ಯಮಾವತಿಯಲ್ಲಿ,

ಪಲ್ಲವಿ: ಕುಲಕುಲವೆನ್ನುತಿಹರು ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ!!
ಚರಣ: ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೆ (ಬಿಸಜನಾಭ : ತಾವರೆಯನ್ನು ಹೊಕ್ಕುಳಿನಲ್ಲುಳ್ಳವ, ವಿಷ್ಣು)
ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು ವಸುಧೆಯೊಳಗೆ ಭೂಸುರರುಣ್ಣಲಿಲ್ಲವೆ

ಮೃಗಗಳ ಮೈಯಲ್ಲಿ ಪುಟ್ಟಿದ ಕಸ್ತೂರಿ ತೆಗೆದು ಪೂಸುವರು ಭೂಸುರರೆಲ್ಲರು
ಬಗೆಯಿಂದ ನಾರಯಣನ್ಯಾವಕುಲದವ ಅಗಜಾವಲ್ಲಭನ್ಯಾತರಕುಲದವನು (ಅಗಜಾವಲ್ಲಭ : ಪಾರ್ವತಿಯ ಪತಿ, ಈಶ್ವರ)

ಆತ್ಮ ಯಾವ ಕುಲ ಜೀವ ಯಾವ ಕುಲ ತತ್ವೇಂದ್ರಿಯಗಳ ಕುಲ ಪೇಳಿರಯ್ಯ
ಆತ್ಮಾಂತರಾತ್ಮ ನೆಲೆಯಾದಿಕೇಶವ ಆತನೊಲಿದಮೇಲೆ ಯಾತರ ಕುಲವಯ್ಯ

(ಕನಕದಾಸರ, ರಚನೆಗಳ ಬಗ್ಗೆ ಮಾಹಿತಿಗೆ, ಗ್ರಂಥ ಋಣ : "ಹರಿದಾಸ ಕೀರ್ತನ ಸುಧಾಸಾಗರ-ಪ್ರಥಮ ತರಂಗ" - ಗಾನಕಲಾಸಿಂಧು ಎನ್ ಚೆನ್ನಕೇಶವಯ್ಯ)
__________________________________________________________________________________
ಕೆಲವು ವಿಶಿಷ್ಟ ವ್ಯಕ್ತಿಗಳಿರುತ್ತಾರೆ. ಇವರ ಬಗ್ಗೆ ಹೆಚ್ಚೇನೂ ತಿಳಿಯದೆ ಇದ್ದರೂ ತಮ್ಮ ಯಾವುದೋ ಒಂದೇ ಒಂದು ವಿಶಿಷ್ಟ ಕೆಲಸದಿಂದ ಸಾರ್ವಜನಿಕರ ಮನೆಮಾತಾಗಿಬಿಟ್ಟಿರುತ್ತಾರೆ. ಅಥವ ಅವರ ಆ ವಿಶಿಷ್ಟ ಕೆಲಸ ಮನೆ ಮಾತಾಗಿರುತ್ತದೆ ಎಂದರೆ ಇನ್ನೂ ಬಹಳ ಸೂಕ್ತವೆನಿಸುತ್ತದೆ. ಕಣಗಲ್ ಪ್ರಭಾಕರ ಶಾಸ್ತ್ರಿಯವರು ಬಹಳ ಅತ್ಯುತ್ತಮ ಚಿತ್ರ ಗೀತೆಗಳನ್ನು ರಚನೆಗ ಮಾಡಿದ್ದಾರೆ. ಸಾಕ್ಷಾತ್ಕಾರ ಚಲನ ಚಿತ್ರದ "ಒಲವೆ ಜೀವನ ಸಾಕ್ಷಾತ್ಕಾರ" ಹಾಡು ಕೇಳಿದರೆ ಶಾಸ್ತ್ರಿಯವರು ತಟ್ಟನೆ ನೆನಪಾಗುತ್ತಾರೆ. ಅತ್ಯುತ್ತಮ ಸಾಹಿತ್ಯದಿಂದ ಕೂಡಿದ ಆ ರಚನೆಯಿಂದ ಶಾಸ್ತ್ರಿಯವರು ಮನೆಮಾತಾಗಿಬಿಟ್ಟಿದ್ದಾರೆ. ಹೀಗೆ ಯಾವುದೇ ಕನ್ನಡ ಉತ್ಸವ, ಸಮಾರಂಭಗಳು ಸಾಮಾನ್ಯವಾಗಿ ಶುರುವಾಗುವುದು "ಹಚ್ಚೇವು ಕನ್ನಡದ ದೀಪ" ಭಾವಗೀತೆಯಿಂದ. ಇದು ೧೯೬೦ ರಲ್ಲಿ ೫೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ಪ್ರಾರ್ಥನಾ ಗೀತೆಯಾಗಿ ಹಾಡಲ್ಪಟ್ಟಿತು, ಆನಂತರ ಇಂದಿನ ದಿನಗಳಲ್ಲಿ ಅಧಿಕೃತ ಉದ್ಘಾಟನಾ/ಪ್ರಾರ್ಥನಾ ಗೀತೆಯಾಗಿಬಿಟ್ಟಿದೆ.(ಇಲ್ಲಿ ಕೇಳಿ: http://in.youtube.com/watch?v=ohuUHGIaKuA, ಸಾಹಿತ್ಯ ಇಲ್ಲಿ ಓದಿ: http://vishvakannada.com/?q=node/147) ಈ ಗೀತೆಯಿಂದ, ಇದರ ರಚನಕಾರ "ಡಾ ದುಂಡಪ್ಪ ಸಿದ್ಧಪ್ಪ ಕರ್ಕಿ" ಯವರು ಕನ್ನಡಿಗರ ಮನೆಮಾತಾಗಿಬಿಟ್ಟಿದ್ದಾರೆ.

ಇಂದು ಇಂತಹ ಉತ್ಕೃಷ್ಟ ಕವಿತೆಯನ್ನು ಕನ್ನಡ ನಾಡಿಗೆ ಕೊಟ್ಟ ನವೋದಯ ಪರಂಪರೆಯ ಹಿರಿಯ ಕವಿ ಡಾ ಡಿ ಎಸ್ ಕರ್ಕಿಯವರ ಜನ್ಮ ದಿನ. ೧೯೦೭ ರಲ್ಲಿ ಬೆಳಗಾವಿಯ ಬಾಗೋಜಿ ಕೊಪ್ಪದಲ್ಲಿ ಜನನ. ತಂದೆ ಕೃಶಿಕ ಸಿದ್ಧಪ್ಪ ಕರ್ಕಿ, ತಾಯಿ ದುಂಡವ್ವ. ಚಿಕ್ಕಂದಿನಲ್ಲೆ ತಂದೆ, ತಾಯಿಯ ಮರಣ. ಸೋದರ ಮಾವ ಈಶ್ವರಪ್ಪ ಕಣಗಲಿ ಅವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ. ಬಾಗೋಜಿ ಕೊಪ್ಪದಲ್ಲಿ ಪ್ರಾಥಮಿಕ ಶಿಕ್ಷಣ, ಧಾರವಾಢದಲ್ಲಿ ಬಿ ಎ ಪದವಿ. ಮುಂಬೈ ಮಹಾವಿದ್ಯಾಲಯದಿಂದ ಕನ್ನಡ ಎಂ ಎ. ಕಾರಾವಾರದ ಸರ್ಕಾರಿ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ವೃತ್ತಿ ಆರಂಭ. ನಂತರ ಕೆ ಎಲ್ ಇ - ಬೆಳಗಾವಿ, ಕಾಲೇಜಿನಲ್ಲಿ ಸೇವೆ. ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಕರ್ಣಾಟಕ ವಿಶ್ವವಿದ್ಯಾಲಯ ಧಾರವಾಢದಲ್ಲಿ ಉಪನ್ಯಾಸಕರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಕರ್ಕಿಯವರು ಅಪಾರ ಕವಿತೆಗಳನ್ನು ರಚಿಸಿದ್ದಾರೆ. ಇವರ ಕವನ ಸಂಕಲನಗಳು ನಕ್ಷತ್ರ ಗಾನ, ಭಾವ ತೀರ್ಥ, ಗೀತ ಗೌರವ, ಕರಿಕೆ ಕಣಗಿಲು, ನಮನ, ತನನ ತೋಂ, ಬಣ್ಣದ ಚೆಂಡು. ನಕ್ಷತ್ರ ಗಾನ ಪ್ರಕಟವಾದ ಕರ್ಕಿಯವರ ಮೊದಲ ಕವನ ಸಂಕಲನ. ’ಹಚ್ಚೇವು ಕನ್ನಡದ ದೀಪ’ ವನ್ನು ಒಳಗೊಂಡಿರುವ ಕವನಸಂಕಲನ ಇದು. ಕರಿಕೆ ಕಣಗಿಲು ಕವನ ಸಂಕಲನವನ್ನು ತಮ್ಮ ಪೋಷಕರಾದ ಸೋದರಮಾವ ಈಶ್ವರಪ್ಪ ಕಣಗಲಿ ಅವರಿಗೆ ಅರ್ಪಿಸಿದ್ದಾರೆ. ಭಾವತೀರ್ಥ ದಲ್ಲಿ, ನಮ್ಮ ನಾಡಿನ ಹಲವಾರು ಪ್ರೇಕ್ಷಣೀಯ ಸ್ಥಳಗಳ ವರ್ಣನೆಯಿದೆ( ಕಾರಾವರದಲ್ಲಿ, ಗೋಕರ್ಣ ತೀರ, ಕೂಡಲ ಸಂಗಮ, ಜೋಗದ ಯೋಗ ಇತ್ಯಾದಿ). ಕರ್ಕಿಯವರು ಮಕ್ಕಳಿಗಾಗಿ ರಚಿಸಿರುವ ಬಣ್ಣದ ಚೆಂಡು ಮತ್ತು ತನನ ತೋಂ ಕವನ ಸಂಕಲನಗಳು ಬಹಳ ಸರಳವಾಗಿದ್ದು, ಮಕ್ಕಳಿಗೆ ಕಲಿಸಿಕೊಡಲು ಬಹಳ ಸೂಕ್ತವಾಗಿವೆ. ಈ ಸರಳ ರಚನೆ ಬಣ್ಣದ ಚೆಂಡು ಹಾಡಿದರೆ ನಾವೂ ಕೂಡ ಬಾಲ್ಯದ ನೆನಪಿಗೆ ಜಾರುತ್ತೇವೆ. (ನೆನ್ನೆ ಮಕ್ಕಳ ದಿನಾಚಾರಣೆ, ಇದು ಕನ್ನಡ ರಾಜ್ಯೋತ್ಸವ ಮಾಸ, ನಿಮ್ಮ ಮನೆಯಲ್ಲಿರುವ ಮಕ್ಕಳಿಗೆ ಈ ಸರಳ ಕನ್ನಡ ಪದ್ಯ ಹೇಳಿಕೊಡಿ). ಈ ಕವನ ಸಂಕಲನಗಳಲ್ಲಿರುವ ಎಲ್ಲಾ ಪದ್ಯಗಳೂ ಹಾಡಿಕೊಳ್ಳಲೂ ಮತ್ತು ಮಕ್ಕಳಿಗೆ ಕಳಿಸಿಕೊಳ್ಳಲು ಬಹಳ ಸುಲಭವಾಗಿವೆ. ಕೆಲವಂತೂ (ಬೆಲ್ಲ ತಿನ್ನುವ ಮಲ್ಲ ಇತ್ಯಾದಿ) ಕಥಾನಕ ಪದ್ಯಗಳಾಗಿದ್ದು ಮಕ್ಕಳಲ್ಲಿ ಆಸಕ್ತಿ ಮೂಡಿಸುವಂತವಾಗಿವೆ.

ಬಣ್ಣದ ಚೆಂಡು,
ಆಹಹಾ ರಬ್ಬರ ಚೆಂಡು!
ಗಾಳಿಯನುಂಡು
ಪುಟಿಯುವ ಚೆಂಡು
ಕಾಣಿಸುವುದು ಬಲು ದುಂಡು
ಆಹಹಾ ರಬ್ಬರ ಚೆಂಡು

ಆಹಹಾ ಬಣ್ಣದ ಚೆಂಡು!
ಪುಟಿಯಲು ಕಂಡು
ಹುಡುಗರ ದಂಡು
ನೆರೆವುದು ಹಿಂಡು ಹಿಂಡು
ಕರೆವುದು ಬಣ್ಣದ ಚೆಂಡು

ಆಹಹಾ ಕುಣಿಯುವ ಚೆಂಡು!
ತೈ ತಕ್ಕ ಎಂದು
ಕುಣಿ ಕುಣಿ ಎಂದು
ನಮ್ಮನು ಕುಣಿಸುವ ಚೆಂಡು
ಆಹಹಾ ರಬ್ಬರ ಚೆಂಡು

ಆಟಕೆ ಎಳೆಯುವ ಚೆಂಡು!
ಅಮ್ಮನು ಕರೆದರು
ಅಪ್ಪನು ಕರೆದರು
ಹೋಗಲು ಬಿಡದೀ ಚೆಂಡು
ಆಹಹಾ ಬಣ್ಣದ ಚೆಂಡು

ಮೊದಲೇ ಗಾಳಿಯ ಚೆಂಡು!
ಕೊನೆಯಲಿ ಒಂದು
ದಿನ ಪುಸ್ಸೆಂದು
ಆಟವ ಮುಗಿಸುವ ಚೆಂಡು
ಆಹಾಹ ರಬ್ಬರ ಚೆಂಡು

ಕರ್ಕಿಯವರ "ತಿಳಿ ನೀಲಿದಲ್ಲಿ ತಾ ನೀಲವಾಗಿ ಅವನು ಹೋದ ದೂರ ದೂರ", ಮಹಾತ್ಮ ಗಾಂಧಿ ಯವರು ಮರಣ ಹೊಂದಿದಾಗ ಬರೆದ ಮತ್ತೊಂದು ಕವನ.

ಕರ್ಕಿಯವರ ಇತರ ಕೃತಿಗಳು, "ಮಕ್ಕಳ ಶಿಕ್ಷಣ", "ಕನ್ನಡ ಛಂದೋವಿಕಾಸ", "ಸಾಹಿತ್ಯ-ಸಂಸ್ಕೃತಿ-ಶೃತಿ", "ನಾಲ್ದೆಸೆಯ ನೋಟ". ಕನ್ನದ ಛಂದೋವಿಕಾಸಕ್ಕಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸಿದೆ. ಈ ಕೃತಿ ಇಂದಿಗೂ ಕನ್ನಡ ವಿಧ್ಯಾರ್ಥಿಗಳಿಗೆ, ಸಾಹಿತ್ಯಾಭಿಮಾನಿಗಳಿಗೆ ಭಗವದ್ಗೀತೆಯಾಗಿದೆ.

ಕರ್ಕಿಯವರು, ಕನ್ನಡದ ವರಕವಿ ಬೇಂದ್ರೆ ಮತ್ತು ಮತ್ತೊಬ್ಬ ಮೇರು ಕವಿ ವಿ ಕೃ ಗೋಕಾಕರು ಒಡನಾಡಿಗಳಾಗಿದ್ದರು.

ಕರ್ಕಿಯವರು ೧೬-೦೧-೧೯೮೪ ರಲ್ಲಿ ಕಾಲವಾದರು.

(ಮಾಹಿತಿ ಕೃಪೆ: ಡಿ ಎಸ್ ಕರ್ಕಿಯವರ ಮೊಮ್ಮಗನಾದ ಸಂತೋಷ್ ಕರ್ಕಿಯವರು , ಗ್ರಂಥ ಋಣ: ಹಚ್ಚೇವು ಕನ್ನಡದ ದೀಪ : ಡಾ ಡಿ ಎಸ್ ಕರ್ಕಿಯವರ ಸಮಗ್ರ ಕಾವ್ಯ)

4 ಕಾಮೆಂಟ್‌ಗಳು: