ಸೋಮವಾರ, ಏಪ್ರಿಲ್ 13, 2009

ಸಾಹಸ ಕ್ರೀಡೆಗಳೋ.. ಸಾಯಿಸೊ ಕ್ರೀಡೆಗಳೋ??

ಸ್ವಲ್ಪ ದಿನದ ಹಿಂದೆ ಈ "ಬಂಗೀ ಜಂಪಿಂಗ್" ನ್ನು ಬೆಂಗಳೂರಿನಲ್ಲಿ ಯಾವುದೋ ಒಂದು ಸಂಸ್ಥೆ ಆಯೋಜಿಸುತ್ತಿರುವ ಸುದ್ದಿ ಓದಿ ಪುಳಕಿತಗೊಂಡೆ. ಗೆಳೆಯರನ್ನು ಕೂಡಿಸಿ ಒಮ್ಮೆ ಹೋಗಿ ಬರಬೇಕೆಂದು ಮನಸ್ಸು ಮಾಡಿದ್ದೆ.

ನಾನು ಹಿಂದೆ ಹಲವಾರು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ, ಚಂಡೀಗಢದ ಬಿಯಾಸ್ ನದಿಯಲ್ಲಿ ’ರಾಫ್ಟಿಂಗ್’, ಲಕ್ಷದ್ವೀಪದಲ್ಲಿ ’ಸ್ಕೂಬ ಡೈವಿಂಗ್’, ಗೋವಾ ದಲ್ಲಿ ’ಪ್ಯಾರ ಸೈಲಿಂಗ’, ಬನಾನ ರೈಡ್’, ಕುರುಂಗಡ್ ನಲ್ಲಿ ’ಕಯಾಕಿಂಗ್’,’ವಾಟರ್ ಸರ್ಫಿಂಗ್’ ಇತ್ಯಾದಿ. ಇವುಗಳಲ್ಲಿ ಭಾಗವಹಿಸುವ ಮುಂಚೆ, ಯಾವೊತ್ತೂ ಈ ಸಾಹಸ ಕ್ರೀಡೆಗಳನ್ನು ಆಯೋಜಿಸುವವರು ಯಾರು? ಅವರ ಅನುಭವವೇನು? ಇಂತಹ ವಿಷಯಗಳನ್ನು ವಿವೇಚನೆಯಿಂದ ಯೋಚಿಸಿದ್ದೇ ಇಲ್ಲ. ಎಲ್ಲ ಮಾಡ್ತಾರೆ, ಏನೂ ಆಗೋಲ್ಲ ಎಂಬ ಭಂಢ ದೈರ್ಯ.

ಇಂತಹ ಭಂಢ ಧೈರ್ಯಕ್ಕೆ, ನಡುಕ ಹುಟ್ಟಿಸಿದ್ದು ನೆನ್ನೆಯ ಸುದ್ದಿ. ೨೫ ವರ್ಷದ ಬಾರ್ಘವ ಎಂಬ ಅಭಿಯಂತರ ’ರಿವರ್ಸ್ ಬಂಗೀ ಜಂಪಿಂಗ್’ ಮಾಡಲು ಹೋಗಿ ಮೃತ ಪಟ್ಟ ಸುದ್ದಿ ಓದಿದ ಮೇಲೆ! ಸಚಿನ್ ವೆಂಕಟೇಶಯ್ಯ ಎಂಬುವರು ನಡೆಸುತ್ತಿರುವ ’ಹೆಡ್ ರಶ್’ ಎಂಬ ಸಂಸ್ಥೆ ಇದನ್ನು ಆಯೋಜಿಸಿತ್ತು. ಇದಕ್ಕೆ ಪೋಲೀಸ್ ಅನುಮತಿ ಸಿಕ್ಕಿರಲಿಲ್ಲ ಎಂಬುದು ಇತ್ತೀಚೆಗೆ ಬಯಲಾದ ಸತ್ಯ!

ಆಯೋಜಕರ ಬೇಜವಬ್ದಾರಿತನ ಎಷ್ಟೆಂದರೆ, ಅಲ್ಲಿ ಆ ಸಾಹಸ ಕ್ರೀಡೆಯ ಅನುಭವಕ್ಕಾಕಿ ಬಂದವರಿಗೆ ಆಯೋಜಕರು "ಎಮ್ ಜಿ ರಸ್ತೆ ದಾಟುವುದು, ಬಂಗೀ ಜಂಪಿಂಗ್ ಮಾಡುವುದಕ್ಕಿಂತಲೂ ಅಪಾಯಕರ’ ಎಂಬ ಉಡಾಫೆ ಮಾತುಗಳನ್ನಾಡಿದ್ದಾರೆ. ’ರಿವರ್ಸ್ ಬಂಗೀ ಜಂಪಿಂಗ್’ ಮಾಡಿದಾಗ, ಸೊಂಟಕ್ಕೆ ಕಟ್ಟಿದ್ದ ಪಟ್ಟಿ ಬಿಚ್ಚಿ ಹೋಗಿದೆ. ಬಿದ್ದ ಮೇಲೆ ತುರ್ತು ಆಸ್ಪತ್ರೆಗೆ ಕರೆದೊಯ್ಯಲು, ಒಂದು ’ಆಂಬ್ಯುಲೆಂನ್ಸ್’ ಕೂಡ ಇಲ್ಲ. ಇದಲ್ಲದೆ ತಮಗೆ ಈ ಸಾಹಸಕ್ರೀಡೆಯನ್ನು ೫ ವರ್ಷಗಳು ನಡೆಸಿದ ಅನುಭವವಿದೆ ಎಂದು ಸುಳ್ಳು ಹೇಳಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ಗೆಳೆಯರನ್ನೊದಗೂಡಿ ’ವಂಡರ್ ಲಾ’ ಹೋಗಿದ್ದೆ. ಆಕಾಶದಲ್ಲಿ ಹುಚ್ಚಾಪಟ್ಟೆ ಸುರಳಿ ಸುತ್ತುವ (ಜೈಂಟ್ ವೀಲ್ ಅಲ್ಲ) ಒಂದು ಕ್ರೀಡೆಯಲ್ಲಿ ಭಾಗವಹಿಸಿದ್ದೆ. ಅದರಲ್ಲಿ ಒಮ್ಮೆ ಮೇಲೆ ಕರೆದುಕೊಂಡು ಹೋಗಿ, ನಮ್ಮನ್ನು ಬೀಳುವಂತೆ ನಿಲ್ಲಿಸುತ್ತಾರೆ. ನಾವು ಕುಳಿತ ಕುರ್ಚಿಗೆ ಹಾಕಿದ ಒಂದು ಪಟ್ಟಿಯಲ್ಲಿ ನೇತಾಡುತ್ತಿರುತ್ತೇವೆ. ಪಕ್ಕದಲ್ಲಿ ಕುಳಿತ ತರಲೆ ಗೆಳೆಯ, ಮಗಾ ಯಾಕೋ "ನಿನ್ನ ಬೆಲ್ಟ್ ಸರಿಯಾಗಿ ಲಾಕ್ ಆಗಿಲ್ಲ ನೋಡ್ಕೋಳ್ಳೋ ಅಂದ!" ಆ ಒಂದು ಮಾತಿನಿಂದಲೇ ಪ್ರಾಣ ಹಾರಿಹೋಗುವಷ್ಟು ಭಯ ಆಗಿತ್ತು!

ಯಾಕೋ ಇನ್ನು ಮುಂದೆ ಇಂತಹ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ದಿಗಿಲಾಗುತ್ತದೆ. ಅವರಿವರ ಅನುಭವವನ್ನು ಓದಿಯೇ ಸಂತಸ ಪಡುವುದು ಮೇಲೆನ್ನಿಸುತ್ತದೆ. ಅಥವಾ ಸ್ವಲ್ಪ ದಿನದ ನಂತರ ಈ ಕಹಿ ನೆನಪುಗಳು ಸ್ಮೃತಿ ಪಟಲದಿಂದ ಕಾಣೆಯಾಗಬಹುದು, ಮತ್ತದೇ ಭಂಢ ದೈರ್ಯ, ಬೇಜವಬ್ದಾರಿತನ ಮರುಕಳಿಸಬಹುದು!

ಆದರೂ, ನೀವುಗಳು ಇನ್ನೊಮ್ಮೆ ಯಾವುದೇ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕಾದಾಗ, ನಿಮ್ಮ ಕುಟುಂಬ ವರ್ಗದ ಬಗ್ಗೆ ಒಮ್ಮೆ ಯೋಚಿಸಿ. ಆಯೋಜಕರ ಬಗ್ಗೆ ಧೀರ್ಘವಾಗಿ ವಿಚಾರಿಸಿ. ಗೆಳೆಯರ ಊಡಾಫೆ ಮಾತುಗಳಿಗೆ ಮರುಳಾಗಬೇಡಿ. ಗೆಳೆಯರು ಪುಕ್ಕಲ ಎಂದು ಹಾಸ್ಯ ಮಾಡುವರೆಂದು ಧೈರ್ಯ ತಂದುಕೊಳ್ಳಬೇಡಿ. ವಿವೇಚನೆಯಿಂದ ಹೆಜ್ಜೆ ಇಡಿ. ನಿಮ್ಮ ಜೀವನದಲ್ಲಿ ಆ ’ಥ್ರಿಲ್’ ಬೇಕೇ ಬೇಕೆ? ಎಂಬುದನ್ನೆ ಒಮ್ಮೆ ಯೋಚಿಸಿ.

ಸಾಹಸ ಕ್ರೀಡೆಗಳು ಸಾಯಿಸೊ ಕ್ರೀಡೆಗಳಾಗಬಾರದಲ್ಲ?

ಭಾನುವಾರ, ಏಪ್ರಿಲ್ 12, 2009

ಭಕ್ತಿ ಪರವಶಗೊಳಿಸಿದ ಸಂಗೀತ

ನೆನ್ನೆ ಗಾನಕಲಾಭೂಷಣ ಆರ್ ಕೆ ಪದ್ಮನಾಭ (ಆರ್ ಕೆ ಪಿ) ರವರ ಗಾಯನವನ್ನು ಶ್ರೀ ವಾಣಿ ವಿದ್ಯಾ ಕೇಂದ್ರದ ವತಿಯಿಂದ ಆಯೋಜಿಸಿದ ೧೮ ನೇ ಶ್ರೀ ರಾಮನವಮಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ, ಕೇಳುವ ಸೌಭಾಗ್ಯ ಒದಗಿ ಬಂತು. ಪಕ್ಕ ವಾದ್ಯಗಳಲ್ಲಿ, ಪಿಟೀಲು ನಳಿನಿ ಮೋಹನ್, ಮೃದಂಗ ವಿ ಅರ್ಜುನ್ ಕುಮಾರ್ ಮತ್ತು ಘಟಂ ನಲ್ಲಿ ಓಂಕಾರ್ ಜಿ ಸಾಥ್ ಕೊಟ್ಟರು.


ಆರ್ ಕೆ ಪಿ ರವರ ಕಿರು ಪರಿಚಯವೆಂದರೆ, ಕರ್ನಾಟಕದ ಮೇರು ವಾಙ್ನೇಯಕಾರರಲ್ಲಿ ಒಬ್ಬರು. ವಾಙ್ನೇಯಕಾರರಲ್ಲದೆ, ಅತ್ಯುತ್ತಮ ಕೀರ್ತನ ರಚನಕಾರರೂ ಹೌದು. ಪದ್ಮನಾಭ ದಾಸ ಎಂಬ ನಾಮದೊಂದಿಗೆ ಕೀರ್ತನೆಗಳನ್ನು ರಚಿಸಿದ್ದಾರೆ. ಬಹಳಷ್ಟು ಕೀರ್ತನೆಗಳು ವಾದಿರಾಜರ ಮೇಲೆ ರಚಿತವಾಗಿವೆ. ಹರಿ ದಾಸರ ನಂತರ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿದವರು ಕಡಿಮೆ, ಆ ಕಂದರವನ್ನು ಪದ್ಮನಾಭ ರವರು ೨೦ ನೇ ಶತಮಾನದಲ್ಲಿ ತುಂಬುತ್ತಿರುವುದು, ಕಲಿಯುಗದ ಹಿರಿಮೆ! ಸಂಗೀತ ಕಲಿತದ್ದು ಪ್ರಾಯದ ವಯಸ್ಸಿನಲ್ಲಿ. ಹುಳಿಮಾವಿನಲ್ಲಿ ವಾದಿರಾಜರ ಭವನ, ಹಾಸನದ ರುದ್ರಪಟ್ನಂ ನಲ್ಲಿ ಸಪ್ತ ಸ್ವರ ಹೊಮ್ಮಿಸುವ ತಂಬೂರಿ ಆಕಾರದ ಭವನ ತಾವು ಸಂಘಟಕರಾಗಿ, ವ್ಯವಸ್ಥಾಪಕರಾಗಿ ಮಾಡಿರುವ ಉತ್ತಮ ಕೆಲಸಗಳು.

ನೆನ್ನೆಯ ಕಛೇರಿ, ನೆನಪಿನಲ್ಲುಳಿಯುವಂತದ್ದು. ಆರ್ ಕೆ ಪಿ ತಮ್ಮ ವಿದ್ವತ್ತಿನ ಜೊತೆಗೆ, ಜನಕ್ಕೆ ಬೇಕಾದ ರಂಜನೆಯನ್ನು ಬೆರೆಸಿ, ನೆರೆದಿದ್ದ ಶ್ರೋತೃ ವೃಂದವನ್ನು ಭಕ್ತಿಯ ಅಲೆಯಲ್ಲಿ ತೇಲಿಸಿದರು. ಪಕ್ಕ ವಾದ್ಯ ಕಲಾವಿದರೂ ಸಹ ಅತ್ಯುತ್ತಮವಾಗಿ ನುಡಿಸಿದರು.

ಮತ್ತೊಂದು ವಿಶೇಷ ಕಛೇರಿಯಲ್ಲಿ ಹಾಡಿದ್ದು ಹೆಚ್ಚಿನ ಕನ್ನಡ ಕೃತಿಗಳನ್ನು.

ಕಾರ್ಯಕ್ರಮ ಪ್ರಾರಂಭವಾದದ್ದು,
೧) ತಪೋ ವಿದ್ಯಾ ಎಂಬ ವಾದಿರಾಜರ ಉಗಾಭೋಗದಿಂದ
೨) ಜಲಜಾಕ್ಷ ನಿನ್ನೇ
೩) ದಾಸರಾಯ ಪುರಂದರ ದಾಸರಾಯ , ಜಗನ್ನಾಥ ದಾಸರು
ಇದು ಜಗನ್ನಾಥ ದಾಸರು, ಪುರಂದರ ದಾಸರ ಬಗ್ಗೆ ಬರೆದ ಒಂದು ಅಪರೂಪದ ಕೃತಿ. ನಾನು ಮೊದಲ ಬಾರಿಗೆ ಕೇಳಿದ್ದು.
೪) ನಾದೋಪಾಸನ, ತ್ಯಾಗರಾಜರು
೫) ದಾಸನೆಂತಾಗುವೆ ಧರೆಯೊಳಗೆ, ಪುರಂದರ ದಾಸರು
೬) ಸೀತಾಪತೆ ನಾ, ತ್ಯಾಗರಾಜರು,
ಇದನ್ನು ಅಪರೂಪದ ದೇಶಾದಿ ತಾಳದಲ್ಲಿ ಪ್ರಸ್ತುತ ಪಡಿಸಿದರು. ಇತ್ತೀಚೆಗೆ ಈ ತಾಳದಲ್ಲಿ ಹಾಡುವುದು ಕಡಿಮೆಯಾಗಿದೆಯಂತೆ.
೭) ಶಂಬುಧ್ಯುತಿ ರಾಗದ ಆಲಾಪನೆ, ಈ ರಾಗವನ್ನು ಪದ್ಮನಾಭರು ಮೊದಲ ಬಾರಿಗೆ ಹಾಡಿದ್ದಂತೆ.. ಇದನ್ನು ಅಲಾಪಿಸಿದ ರೀತಿ, ಎಲ್ಲರನ್ನೂ
ಮೋಡಿಗೊಳಿಸಿತು.
* ನಿನ್ನ ದಯೆ ಇರಲು ನನಗೇತರ ಚಿಂತೆ, ವಾದಿರಾಜರ ಕುರಿತ ಪದ್ಮನಾಭರ ರಚನೆ,
ಇದರ ಸಾಹಿತ್ಯ ಕೂಡ ಬಹಳ ಸೊಗಸಾಗಿದೆ.
೮) ಸದಾ ನೀ ಪಾದಮೇ ನಮ್ಮಿದಿ
೯) ಮಡಿ ಮಡಿ ಮಡಿಯೆಂದು, ಪುರಂದರ ದಾಸರು
೧೦) ಶೃಂಗಾಪುರದೇಶ್ವರಿ ಶಾರದೆ
೧೧) ಶ್ರೀರಾಮಂ ಸುಗ್ರೀವಂ,
ಇದು ಕನ್ನಡ ಪ್ರತಿಮಾ ನಾಟಕದ ಒಂದು ಪದ್ಯವಂತೆ. ಕನ್ನಡದ ಶ್ರೀಮಂತಿಕೆಯನ್ನು ತೋರಿಸಲು ಕಛೇರಿಗಳಲ್ಲಿ ಸಾಮಾನ್ಯವಾಗಿ ಇದನ್ನು
ಹಾಡುತ್ತೇನೆಂದರು
೧೨) ತಿಲ್ಲಾಣ
೧೩) ಏನು ಸುಕೃತವಾ ಮಾಡಿದಳು ಯಶೋಧೆ
೧೪ ) ಪುರಂದರ ದಾಸರ ಮಂಗಳ ಗೀತೆಯೊಂದಿಗೆ ಕಾರ್ಯಕ್ರಮ ಸುಮಂಗಳವಾಯಿತು

ಹೀಗೆ ೩ ಘಂಟೆಗಳ ಕಾಲ ಕೇಳುಗರನ್ನು ರಂಜಿಸಿ, ಭಕ್ತಿ/ಭಾವ ಪರವಶಗೊಳಿಸಿದ ಆರ್ ಕೆ ಪಿ ರವರಿಗೆ ಅನಂತ ವಂದನೆಗಳು.

ಕಾರ್ಯಕ್ರಮದ ಕೊನೆಯಲ್ಲಿ, ಖ್ಯಾತ ಸಂಗೀತ ವಿಮರ್ಶಕ, ವೈಣಿಕ ಮೈಸೂರು ವಿ ಸುಬ್ರಮಣ್ಯ (ವೀಣೆ ಶೇಷಣ್ಣ ನವರ ಮರಿಮಗ) ಮಾತನಾಡಿ, ಆರ್ ಕೆ ಪಿ ಯವರ ಗಾಯನವನ್ನು ಮನಸಾರ ಕೊಂಡಾಡಿದರು. ಆರ್ ಕೆ ಪಿ ರವರಿಗೆ, ಗಂಡರ ಗಂಡ ಮತ್ತು ಷಣ್ಮುಘ ಎಂಬ ಬಿರುದುಗಳನ್ನು ಕೊಟ್ಟರು. ಆರ್ ಕೆ ಪಿ ಯವರ ಸಂಘಟನಾ ಚಾತುರ್ಯವನ್ನು ನೆನಪಿಸಿ, ಗಾಯನ ಸಮಾಜದಲ್ಲಿ ನಡೆಸಿದ ಘೋಷ್ಠಿ ಗಾಯನವನ್ನು ತಿಳಿಯ ಪಡಿಸಿದರು. ಈ ಘೋಷ್ಠಿ ಗಾಯನವೆಂಬುದು, ತ್ರಾಗರಾಜರ ಕಾಲದಲ್ಲಿ ಪ್ರಚುರ ಗೊಂಡಿದ್ದಲ್ಲ , ಅದಕ್ಕೂ ಹಿಂದೆ ಪುರಂದರ ದಾಸರ ಕಾಲದಲ್ಲೆ ಮಧುಕರ ವೃತ್ತಿ ನಡೆಯುತ್ತಿತ್ತು ಎಂದರು. ಆರ್ ಕೆ ಪಿ ಯವರು ಹುಳಿಮಾವಿನಲ್ಲಿ ಸ್ಥಾಪಿಸಿರುವ ವಾದಿರಾಜ ಭವನ ಮತ್ತು ರುದ್ರಪಟ್ನಂ ನಲ್ಲಿ ನಿರ್ಮಿಸಿರುವ ತಂಬೂರಿ ಆಕಾರದ ಮಂಟಪ ಗಳು ಇಂದು ಉತ್ತಮ ಪ್ರವಾಸಿ ತಾಣಗಳಾಗಿವೆ ಎಂದರು. ಎಲ್ಲಾ ಕಲಾವಿದರ ಸಾಧನೆಗಳನ್ನು ಕೇಳುಗರಿಗೆ ತಿಳಿಸಿದರು.

ಬುಧವಾರ, ಏಪ್ರಿಲ್ 08, 2009

ಶೇಷಾದ್ರಿಪುರಂ ರಾಮೋತ್ಸವದಲ್ಲಿ ವಿದ್ಯಾಭೂಷಣ ಸ್ವಾಮಿಗಳು

ವಿದ್ಯಾಭೂಷಣರ ಕಛೇರಿಯನ್ನು ಪ್ರತ್ಯಕ್ಷವಾಗಿ ನೋಡಬೇಕೆಂದ ಬಹು ದಿನದ ಆಸೆ ನೆನ್ನೆ ನೆರವೇರಿತು. ಶೇಷಾದ್ರಿಪುರಂ ಕಾಲೇಜಿನ ರಾಮಸೇವಾ ಸಮಿತಿಯವರು ಆಯೋಜಿಸುತ್ತಿರುವ ೬೧ ನೇ ರಾಮೋತ್ಸವದ ಕಾರ್ಯಕ್ರಮದಲ್ಲಿ ವಿದ್ಯಾಭೂಷಣರ ವಿದ್ವತ್ ಪೂರ್ಣ ಗಾಯನಕ್ಕೆ, ಶೇಷಗಿರಿ ರಾಯರು ಪಿಟೀಲಿನಲ್ಲಿ, ಗಣೇಶ್ ರಾವ್ ರವರು ಮೃದಂಗದಲ್ಲಿ, ಶ್ರೀಶೈಲ ರವರು ಘಟಂ ನಲ್ಲಿ ಅದ್ಭುತ ಸಾಥ್ ನೀಡಿದರು. ಶೇಷಗಿರಿ ರಾಯರ ಪಿಟೀಲಿನಲ್ಲಿ ಹೊಮ್ಮುತ್ತಿದ್ದುದು, ಬರೀ ಪಿಟೀಲಿನ ನಾದವಾಗದೆ, ವಿದ್ಯಾಭೂಷಣರ ಪ್ರತಿದ್ವನಿಯೇನೋ ಎನ್ನುವ ಹಾಗಿತ್ತು. ಗಣೇಶ್ ರಾವ್ ಮತ್ತು ಶ್ರೀಶೈಲ ರವರು ಕೂಡ ಕ್ರಮವಾಗಿ ಮೃದಂಗ ಮತ್ತು ಘಟಂ ಗಳ ಜೊತೆ ತಮ್ಮ ಅದ್ಭುತ ಕೈಚಳಕವನ್ನು ತೋರಿದರು.



ವಿದ್ಯಾಭೂಷಣರವರು ತಮ್ಮ ವಿದ್ವತ್ ಪೂರ್ಣ ಗಾಯನಕ್ಕಲ್ಲದೆ, ಇಷ್ಟವಾಗುವುದು ಮತ್ತೊಂದು ಅತಿ ಪ್ರಮುಖವಾದ ವಿಷಯಕ್ಕೆ. ಅವರ ಯಾವುದೇ ಕಚೇರಿಯಲ್ಲಾದರೂ, ಹೆಚ್ಚು ದಾಸರ ಉಗಾಭೋಗಗಳನ್ನೂ, ಕೀರ್ತನೆಗಳನ್ನು ಹಾಡಿ ಪ್ರಚುರ ಪಡಿಸುತ್ತಾರೆ. ಬಹಳಷ್ಟು ಸಾಮಾನ್ಯ ಜನರಿಗೆ, ಕನ್ನಡದ್ದಲ್ಲದ ಕೀರ್ತನೆಗಳನ್ನು ಅಸ್ವಾದಿಸುವುದು ಕಷ್ಟ. ಏಕೆಂದರೆ ಆ ಸಾಹಿತ್ಯ ನಮ್ಮ ತಲೆಗೆ ಹೊಕ್ಕುವುದಿಲ್ಲ. ನಾವು ಸಂಗೀತವನ್ನು ಎಷ್ಟೇ ಆಹ್ವಾದಿಸಿದರೂ, ಅದಕ್ಕೆ ಸರಳ ಅರ್ಥವಾಗುವ ಸಾಹಿತ್ಯದ ಜೊತೆ ಸಿಕ್ಕಾಗ, ಗಾಯನದ ಇಂಪು ಹೆಚ್ಚಾಗುತ್ತದೆ. ಅದಕ್ಕೆ ನನ್ನ ಪ್ರತಿಪಾದನೆಯೆಂದರೆ, ಕರ್ನಾಟಕದಲ್ಲಿ ಹಾಡುವಾಗ, ಹೆಚ್ಚು ಹೆಚ್ಚು ಕನ್ನಡದ ಕೃತಿಗಳನ್ನು ಹಾಡುವುದು ಎಲ್ಲ ಸಂಗೀತಕಾರರಿಗೂ, ಸಂಗೀತಾಸಕ್ತ ಕೇಳುಗರಿಗೂ ಒಳಿತು. ಹೌದು ಸಂಗೀತಕ್ಕೆ ಭಾಷೆಯಿಲ್ಲ! ತ್ಯಾಗರಾಜರದೂ ಇರಲಿ, ಮುತ್ತು ಸ್ವಾಮಿ ದೀಕ್ಷಿತರದೂ ಇರಲಿ, ಆದರೆ ಪ್ರಾದೇಶಿಕ / ಸಾಮಾನ್ಯ ಜನಕ್ಕೆ ಹೆಚ್ಚು ಅರ್ಥವಾಗುವ ಭಾಷೆಯ ಕೃತಿಗಳು ಹೆಚ್ಚಿರಲಿ!

ಇನ್ನು ಕಛೇರಿ ಪ್ರಾರಂಭವಾಗಿದ್ದು ೧) ವಿಜಯ ವಿಠಲ ದಾಸರ , ಗಜವಧನ ಪಾಲಿಸೋ ಕೃತಿಯಿಂದ
೨) ಭಜನ..
೩) ಮನಸುಲೋನಿ ಮರ್ಮಮು - ತ್ಯಾಗರಾಜರು
೪) ಪೊರೆಯಮ್ಮ ಸ್ವಾಮಿ, ಜಗದಂತರ್ಯಾಮಿ, ಗೋಪಾಲ ದಾಸರು
೫) ಪ್ರಾಣಪತೇ ನೀ ಸಲಹೋ
೬) ಚಿಂತೆ ಯಾಕೆ ಮಾಡುತಿದ್ದಿ, ಚಿನ್ಮಯನಿದ್ದಾನೆ , ಪುರಂದರ ದಾಸರು
೭) ನಾರಾಯಣ ನಿನ್ನ ನಾಮದ, ಪುರಂದರ ದಾಸರು

ಈ ಪುರಂದರ ದಾಸರ ಈ ಕೃತಿಯ ಹಿಂದೆ ಡಿ ವಿ ಜಿ ಯವರು ಹೇಳುವ ಒಂದು ಕಥೆಯಿದೆ. ಹಿಂದೆ ದಾಸರ / ಕನ್ನಡ ಕೃತಿಗಳನ್ನು ಸಂಗೀತ ಕಛೇರಿಗಳಲ್ಲಿ, ವೇದಿಕೆಗಳಲ್ಲಿ ಹಾಡುತ್ತಿರಲಿಲ್ಲವಂತೆ. ದಾಸರ ಕೃತಿಗಳನ್ನು ಮೊದಲ ಬಾರಿಗೆ ಕಛೇರಿಗಳಲ್ಲಿ ಹಾಡಲು ಪ್ರಾರಂಬಿಸಿದವರು ’ಬಿಡಾರಂ ಕೃಷ್ಣಪ್ಪ’ ನವರು. ದ್ವನಿವರ್ಧಕಗಳಿಲ್ಲದ ಆಗಿನ ಕಾಲದಲ್ಲಿ, ಗಾಯಕರಿಗೆ ಬೇಕಾದ ಉತ್ತಮ ಶಾರೀರ ಇವರಲ್ಲಿತ್ತಂತೆ. ಎಷ್ಟೇ ಜನ ಕಿಕ್ಕಿರದು ತುಂಬಿದ್ದರೂ, ಎಲ್ಲರಿಗೂ ಕೇಳಿಸುವ ಹಾಗೆ ಗಟ್ಟಿಯಾಗಿ, ಮಾಧುರ್ಯವಾಗಿ, ಶಾಸ್ತ್ರೀಯವಾಗಿ ಹಾಡುವ ವಿದ್ವತ್ತು ಇತ್ತಂತೆ. ಹೀಗೆ ಒಮ್ಮೆ ಬೆಂಗಳೂರಿನಲ್ಲಿ ನಡೆದ ಒಂದು ಕಛೇರಿಯಲ್ಲಿ ದಾಸರ "ನಾರಾಯಣ ನಿನ್ನ ನಾಮದ ಸ್ಮರಣೆಯ" ಕೃತಿಯನ್ನು ಹಾಡಿದಾಗ ಸಭೆಯಲ್ಲಿ ಕರಾಡತನ. ಮುಂದೆ ಬೆಂಗಳೂರಿನಲ್ಲಿ ನಡೆದ ಎಲ್ಲಾ ಶಾಸ್ತ್ರೀಯ ಸಂಗೀತ ಸಭೆಗಳಲ್ಲೂ ಅವರನ್ನು ಅನುಕರಿಸಿದ್ದೇ ಅನುಕರಿಸಿದ್ದು!

೮) ಕಂಡೆ ನಾ ಗೋವಿಂದನಾ , ಪುರಂದರ ದಾಸರು
೯) ಹರಿಹರಿಯೆಂದು ಕರೆಯುವುದೇ ತಡ , ಪುರಂದರ ದಾಸರು (ಉಗಾಭೋಗ)
೧೦) ದಾಸನ ಮಾಡಿಕೊ ಎನ್ನ, ಪುರಂದರ ದಾಸರು
೧೧) ಯಮನ್ ಕಲ್ಯಾಣಿಯಲ್ಲಿ, ಕೃಷ್ಣಾ ನೀ ಬೇಗನೆ ಬಾರೋ, ವ್ಯಾಸರಾಯ ತೀರ್ಥರು
೧೧) ನೀ ತಂದೆ ನಾ ಬಂದೆ.. ಹಿಂದಿನ ಜನ್ಮ .. (ಉಗಾಭೋಗ) ಪುರಂದರ ದಾಸರು
೧೨) ಹಲವು ಜೀವನವ ಒಂದೆಲೆ ನುಂಗಿತು, ಕನಕ ದಾಸರು
೧೩) ತೂಗಿರೆ ರಾಯರ
೧೪) ಕಮಲಾಂಬಿಕೆ
೧೫) ಶುಭವಿದು ,ಪುರಂದರ ದಾಸರು ..

ಎಂಬ ಮಂಗಳ ದೊಂದಿಗೆ ಕಾರ್ಯಕ್ರಮ ಮಂಗಳವಾಯಿತು.

ಭಾನುವಾರ, ಏಪ್ರಿಲ್ 05, 2009

ಆಂಗ್ಲ ಭಾಷೆಯ ಒಂದಕ್ಷರದ ’ಹೆಸರು’

’Y'

ಕಳೆದ ಶುಕ್ರವಾರ, ನನ್ನ ಸೋದರಳಿಯ ಶ್ರೇಷ್ಠ L K G ತರಗತಿಯಿಂದ ತೇರ್ಗಡೆಗೊಂಡ ಫಲಿತಾಂಶವನ್ನು ಶಾಲೆಯಲ್ಲಿ ಪ್ರಕಟಿಸಿದ್ದರು. ಅಂಕಪಟ್ಟಿ ತರಲು ನಾವು ಶಾಲೆಗೆ ಹೋದೆವು. ಗಣಕೀಕೃತ ಅಂಕಪಟ್ಟಿಯ ಜೊತೆ, A4 ಉದ್ದಗಲದ ಒಂದು ತೇರ್ಗಡೆ ಪ್ರಮಾಣ ಪತ್ರವನ್ನೂ ಕೊಟ್ಟರು. ಆ ಪ್ರಮಾಣ ಪತ್ರದಲ್ಲಿ, ಶ್ರೇಷ್ಠನ ಬಗ್ಗೆ ಅವರ ’ಟೀಚರ್’ ಫೀಡ್ ಬ್ಯಾಕ್ ಕೊಟ್ಟಿದ್ದರು. ಅದರ ಸಾರಾಂಶ ಹೀಗಿತ್ತು. ಮಗು ಎಲ್ಲಾ ವಿಭಾಗದಲ್ಲೂ ಚುರುಕಾಗಿದ್ದಾನೆ, ಆದರೆ ಇಂಗ್ಳಿಷ್ ನಲ್ಲಿ ಮಾತನಾಡಲು ಹಿಂಜರಿಯುತ್ತಾನೆ. ಮನೆಯವರು ಆಂಗ್ಲ ಭಾಷೆಯನ್ನು ಮಾತನಾಡಲು ಪ್ರೋತ್ಸಾಹಿಸಬೇಕೆಂದಿತ್ತು. ಇಕ್ಕಟ್ಟಿಗೆ ಸಿಲುಕಿಕೊಂಡೆವು. ಇಂಗ್ಳಿಷ್ ಕಲಿಯಲಿ ಎಂದು ಶಾಲೆಗೆ ಕಳುಹಿಸದರೆ, ಶಾಲೆಯವರು ನಮಗೇ ಕಲಿಸಿ ಎನ್ನುವುದೇ?

ಸರಿ ಅವೊತ್ತಿನಿಂದಲೇ ನಾನು ಕಲಿತ ಇಂಗ್ಳಿಷನ್ನು ಧಾರೆಯೆರದು ಕೊಡಲು ಮುಂದಾದೆ.

"What is your Name?"
"My name is Shreshta."

ಇವುಗಳನ್ನೆಲ್ಲಾ, ಶಾಲೆಗೆ ಸೇರಿಸುವ ಮುನ್ನವೇ ಶಾಲೆಯಲ್ಲಿ ನಡೆಸುವ ಸಂದರ್ಶನಕ್ಕಾಗಿ ಹೇಳಿಕೊಟ್ಟಿದ್ದೆ. ಅವುಗಳನ್ನೆಲ್ಲಾ ಒಂದು ಬಾರಿ ಪುನರಾವರ್ತನೆ ಮಾಡಿಸಿ, ಅವರ ಶಾಲೆಯಲ್ಲೂ ಒಂದು ಪ್ರಯೋಗ ನಡೆಸಿಯೇ ತೀರಬೇಕೆಂದು ಯೋಚಿಸಿದೆ.

ಅವನಿಗೆ ಅವರ ’ಟೀಚರ್’ ಹೆಸರನ್ನು ’ಇಂಗ್ಳಿಷ್’ ನಲ್ಲಿ ಕೇಳಿಕೊಂಡು ಬರಲು ಪುಸಲಾಯಿಸಿದೆ. (ಈಗ ಬೇಸಿಗೆ ಶಿಬಿರದ ವಿಶೇಷ ಶಾಲೆ, ಚಿತ್ರ ಬರೆಯುವುದು ಮತ್ತು ಬಣ್ಣ ಹಚ್ಚುವುದನ್ನು ಕಲೆಯಲು ಹೋಗುತ್ತಿದ್ದಾನೆ). ಮೊದಲ ದಿನ ಸಂಕೋಚದಿಂದ ಕೇಳದೆ ಹಾಗೆಯೇ ಬಂದು ಬಿಟ್ಟ. ನನಗೆ ಸ್ವಲ್ಪ ಕೋಪ ಬಂದು, ಮುಂದಿನ ದಿನ ಅವನ ಮೇಲೆ ತುಸು ಜೋರು ಮಾಡಿ, ಹೆಸರು ಕೇಳದೆ ಹಾಗೆಯೇ ಬಂದರೆ, ’ಕಂಪ್ಯೂಟರ್ ಗೇಮ್ಸ್’ ರದ್ದು ಎಂದು ಬ್ಳಾಕ್ ಮೈಲ್ ಮಾಡಿದ್ದು ಉಪಯೋಗಕ್ಕೆ ಬಂತು.

ಅಂದು ನಾವು ಕಛೇರಿಯಿಂದ ಮನೆಗೆ ಹಿಂತಿರುಗಿದಾಗ, ಖುಷಿಯಿಂದ ಬಂದು "ನಾನಿವೊತ್ತು ಮಿಸ್ ಹೆಸ್ರು ಕೇಳ್ಕೊಂಡ್ ಬಂದೆ" ಎಂದು ಘೋಷಿಸಿದ.

ನನ್ನ ಬ್ಳಾಕ್ ಮೈಲ್ ತಂತ್ರ ಕೆಲಸ ಮಾಡಿದೆ ಎಂದು ನನಗೆ ಅತೀವ ಸಂತೋಷವಾಯಿತು.

ಏನು ಪುಟ್ಟ ನಿಮ್ಮ ಮಿಸ್ ಹೆಸರು? ಕೇಳಿದೆ.

ಅದಕ್ಕೆ ಶ್ರೇಷ್ಠ,

'Y' ಎಂದ!

ನನಗೆ ತಕ್ಷಣ ನಗು ಬಂದಿತು, ಇದೆಂತಾ ಹೆಸರಪ್ಪ ಅಂತ.

ವಿಚಾರಣೆಗೆ ತೊಡಗಿದೆ, ಏನಂತ ಕೇಳ್ದೆ ಶ್ರೇಷ್ಠ?

ಕಥೆ ಶುರು ಹಚ್ಚಿಕೊಂಡ, ಮಧ್ಯಾಹ್ನ ’ಸ್ನ್ಯಾಕ್ಸ್’ ತಿಂದ ಮೇಲೆ, ಮಿಸ್ ಬಂದ್ರು. ನಾನು

’What is your name Miss?' ಅಂತ ಕೇಳ್ದೆ,

ಅದಕ್ಕೆ ಮಿಸ್ಸು

’My Name? Why?' ಅಂದ್ರಂತೆ,

ಅದಕ್ಕೆ ಇವ O K ಅಂದನಂತೆ!

ಹೀಗೆ ಅವರ ಚಿತ್ರಕಲೆಯ ಗುರುಗಳ ಹೆಸರು ವಿಚಿತ್ರವಾದ ’Y' ಆಗಿ ಹೋಗಿತ್ತು.

ನನಗೆ ಈ "Why" ಪದದ ಅರ್ಥ ವಿವರಸಲು ಸಾಕು ಬೇಕಾಗಿ ಹೋಯಿತು.

ಎಲ್ಲಾ ವಿವರಿಸಿದ ಮೇಲೆ ಅವನು ಹೇಳಿದ್ದಿಷ್ಟು, ನಿನಗೆ ಗೊತ್ತಿಲ್ಲ, ನಮ್ಮ ಮಿಸ್ ಹೆಸ್ರು 'Y' ಅಂತಾನೆ. ಇನ್ಮೇಲೆ ನಾನು ಅವರನ್ನ ’Y' ಮಿಸ್ ಅಂತಾನೆ ಕರ್ಯೋದು ಅಂತ ಕೊನೆಯ ತೀರ್ಪು ಕೊಟ್ಟ.

ನನಗೆ ನಗುವುದನ್ನು ಬಿಟ್ಟು ಬೇರೇನು ಹೊಳೆಯಲಿಲ್ಲ! ಹೀಗೆ ಇವನಿಗೆ ಇಂಗ್ಳಿಷ್ ಕಲಿಸಿಕೊಡುವ ಮೊದಲ ಪ್ರಯತ್ನದಲ್ಲೆ ಸೋಲುಂಡ ಪ್ರಸಂಗವನ್ನು ನೆನೆದು ನಗುತ್ತಲೇ ಇದನ್ನು ಬರೆಯುತ್ತಿದ್ದೇನೆ.

ಆದರೆ ನನಗೆ ಅರ್ಥವಾಗದೆ ಉಳಿದು ಹೋದ ಸಂಶಯವೆಂದರೆ, ವಿದ್ಯಾರ್ಥಿಗಳು, ಶಿಕ್ಷಕಿಯ ಹೆಸರನ್ನು ಕೇಳಿದರೆ? ನನ್ನ ಹೆಸರು ನಿನಗೇಕೆ ಎಂದು ಯಾಕೆ ಕೇಳುತ್ತಾರೆ? ಹೆಸರು ಕೇಳಲು ಕಾರಣ ಬೇಕೆ? ಅಥವಾ ಆ ಶಿಕ್ಷಕಿಯ ಹೆಸರು ನಿಜವಾಗಿಯೂ 'Y' ಅಂತಲೇ? ಇನ್ನೊಮ್ಮೆ ಅವರ ಹೆಸರನ್ನು ಕೇಳಿ ಬರಲು ಇಂದು ಮತ್ತೆ ಪುಸಲಾಯಿಸಿ ಕಳಿಸಿದ್ದೇನೆ, ಕಾದು ನೋಡಬೇಕು!

ಶನಿವಾರ, ಏಪ್ರಿಲ್ 04, 2009

ಸಂಗೀತ ಸುಧೆ ಹರಿಯುತ್ತಿದೆ

ರಾಮನವಮಿಯ ಆಚರಣೆ ಬೆಂಗಳೂರಿನಲ್ಲಿ ವಿಶಿಷ್ಟ. ರಾಮನವಮಿ ಬಂತೆಂದರೆ, ಶಾಸ್ತ್ರೀಯ ಸಂಗೀತಪ್ರಿಯರಿಗೆ, ಹಬ್ಬದ ಸುಗ್ಗಿ ಸ್ವಲ್ಪ ಹೆಚ್ಚು, ಕಾರಣ ರಾಮೋತ್ಸವ ಹೆಸರಿನಲ್ಲಿ ತಿಂಗಳುಗಟ್ಟಲೆ ನಡೆಯುವ ಸಂಗೀತ ಕಾರ್ಯಕ್ರಮಗಳು. ಇದರಲ್ಲಿ ಬಹು ಪ್ರಮುಖವಾದದ್ದು ಚಾಮರಾಜಪೇಟೆಯ ಕೋಟೆ ಶಾಲೆ ಮೈದಾನದಲ್ಲಿ ಜರುಗುವ ಸಂಗೀತ ಕಾರ್ಯಕ್ರಮಗಳು (ಕಾರ್ಯಕ್ರಮ ಪಟ್ಟಿಗೆ ಈ ಕೊಂಡಿಯನ್ನು ಒತ್ತಿ). ಇದು ರಾಮಸೇವಾ ಮಂಡಲಿಯವರು ನಡೆಸುತ್ತಿರುವ ೭೧ ನೇ ರಾಮೋತ್ಸವ ಸಂಗೀತ ಕಾರ್ಯಕ್ರಮ. ಶೇಷಾದ್ರಿಪುರಂ ಕಾಲೇಜಿನ ’ಕುವೆಂಪು ವೇದಿಕೆಯಲ್ಲೂ’, ರಾಮೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ.


ಫೋಟೋ ಕೃಪೆ: ಶಿವಾನಂದ ಗಾವಲ್ಕರ್

ಇಂದು ಸ್ಯಾಕ್ಸಾಫೋನ್ ಸಾಮ್ರಾಟ್ ಕದ್ರಿ ಗೊಫಾಲನಾಥ್ ರ ವಾದನದೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾಯಿತು.ಇದಕ್ಕೂ ಮೊದಲು ನಿಗದಿಯಂತೆ ೬:೧೫ ಕ್ಕೆ ಸರಿಯಾಗಿ ಭಾಷಣಗಳಿಂದ ಕಾರ್ಯಕ್ರಮ ಉದ್ಘಾಟನೆಯಾಯಿತು. ನಿರೂಪಣೆ ಅಚ್ಚುಕಟ್ಟಾಗಿತ್ತು ಮತ್ತು ಕನ್ನಡದಲ್ಲಿತ್ತು. ಅಧ್ಯಕ್ಷತೆ ವಹಿಸಿದ್ದವರು ಬೆಂಗಳೂರು ಪೋಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್. ವೇದಿಕೆಯ ಮೇಲೆ ನೆರೆದಿದ್ದ ಇತರರು, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರವೀಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧ್ಯಕ್ಷ ಮನು ಬಾಳಿಗಾರ್ ಮತ್ತು ರಾಮ ಸೇವಾ ಮಂಡಲಿ ಅಧ್ಯಕ್ಷ ಮಣಿ ನಾರಾಯಣ ಸ್ವಾಮಿ. ರವೀಂದ್ರ ರವರು ಸ್ವಾಗತ ಭಾಷಣ ಮಾಡಿ, ಅಜಯ್ ಕುಮಾರ್ ಸಿಂಗ್ ರ ಕನ್ನಡವನ್ನು ಮತ್ತು ಅವರ ಸಾಹಿತ್ಯ ಪ್ರೇಮವನ್ನು ಮನಸಾರೆ ಹೊಗಳಿದರು. ಅಜಯ್ ಕುಮಾರ್ ಸಿಂಗ್ ರವರು ಮಾತನಾಡಿ, ೩೧ ವರ್ಷಗಳ ಹಿಂದೆ ಈ ರಾಮೋತ್ಸವ ಸಂಗೀತ ಕಾರ್ಯಕ್ರಮಕ್ಕೆ ಪ್ರೇಕ್ಷಕರಾಗಿ ಬಂದಿದ್ದರಂತೆ. ಸಂಗೀತ ಎಂಬುದು ಹೃದಯಗಳನ್ನು ಬೆಸೆಯುವ ವಾಹಿನಿ ಎಂಬುವ ಮಾತನ್ನು ಹೇಳಿದರು. ಅಮೀರ್ ಖುಸ್ರೋ ಎಂಬ ೧೦ ನೇ ಶತಮಾನದ ವ್ಯಕ್ತಿ, ಹಿಂದಿಯಲ್ಲಿ ಬರೆದ ಖಯಾಲಿಗಳನ್ನು ಪಾಕಿಸ್ತಾನದ ಸಂಗೀತಗಾರರು ಹಾಡುತ್ತಿದ್ದುದು, ಅದಕ್ಕೆ ಮಲ್ಲಿಕಾ ಸಾರಾಭಾಯಿ ನೃತ್ಯ ಮಾಡುತ್ತಿದ್ದುದನ್ನು ಉದಾಹರಿಸಿ, ಹೇಗೆ ಬೇರೆ ಬೇರೆ ದೇಶ, ಭಾಷೆ, ಧರ್ಮದ ವ್ಯಕ್ತಿಗಳನ್ನು ಸಂಗೀತ ಎಂಬುದು ಒಟ್ಟುಗೂಡಿಸುತ್ತದೆ ಎಂಬುದನ್ನು ಸ್ಮರಿಸಿದರು. ಇಂದು ನಡೆಯುತ್ತಿರುವ ವಿದ್ವಂಸಕ ಕೃತ್ಯಗಳಿಗೆ ಸಂಗೀತ ಪರಿಹಾರವಾಗಬಹುದು ಎಂದರು.ನಂತರ ಮನು ಬಳಿಗಾರ್, ತಾವು ರಾಮ ಸೇವಾ ಮಂಡಲಿಯ ಸಂಗೀತ ಸೇವೆಯನ್ನು ಮೆಚ್ಚಿ, ಸರ್ಕಾರದಿಂದ ಮಂಡಲಿಗೆ ಬರುವ ಅನುದಾನವನ್ನು ೧೦ ಪಟ್ಟು ಹೆಚ್ಚಿಸಿದ್ದೇನೆಂಬ ಅಂಶವನ್ನು ತಿಳಿಸಿದರು. ನಂತರ ಮಾತನಾಡಿದ ಮಣಿ ನಾರಾಯಣ ಸ್ವಾಮಿ ರವರು, ರವೀಂದ್ರರು ತೆಲುಗು ಮಾತೃ ಭಾಷಿಕರಾಗಿದ್ದರೂ, ತಮ್ಮದು ತಮಿಳು, ಅಜಯ್ ರವರದು ಹಿಂದಿ, ಮನು ಬಳಿಗಾರ್ ರವರದು ಕನ್ನಡ ದವರು, "ಸಂಗೀತ ಪ್ರೇಮ", ವೇದಿಕೆಯಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿದೆ ಎಂದರು. ಎಲ್ಲರೂ ಕನ್ನಡದಲ್ಲೇ ಮಾತನಾಡಿದ್ದು ವಿಶೇಷ ಮತ್ತು ಸಂತಸದ ಸಂಗತಿ.

ನಂತರ ೧೦ ನಿಮಿಷಗಳ ತಡವಾಗಿ ಸಂಗೀತ ಕಾರ್ಯಕ್ರಮ ಪ್ರಾರಂಭ. ಗೋಪಾಲನಾಥರ ಜೊತೆ ಪಕ್ಕವಾದ್ಯದಲ್ಲಿ, ಪಿಟೀಲು ಕನ್ಯಾಕುಮಾರಿ, ಮೃದಂಗ ಬಿ ಹರಿ ಕುಮಾರ್, ಖಂಜೀರ ದಲ್ಲಿ ಎನ್ ಅಮೃತ್, ಮೋರ್ಸಿಂಗ್ ನಲ್ಲಿ ರಾಜಶೇಖರ್ ಬಿ ಅದ್ಭುತವಾಗಿ ನುಡಿಸಿದರು.

ಕಾರ್ಯಕ್ರಮ ಪ್ರಾರಂಭವಾದದ್ದು ೧) ಮುತ್ತುಸ್ವಾಮಿ ದೀಕ್ಷಿತರ, ಹಂಸಧ್ವನಿ ರಾಗದ ವಾತಾಪಿ ಗಣಪತಿ ಯಿಂದ. ಇದನ್ನು ಕದ್ರಿ ನುಡಿಸಿದಾಗ ಪ್ರತಿ ಶ್ರೋತೃಗಳೂ ತಲೆ ದೂಗುವುದರಲ್ಲಿ ಅನುಮಾನವಿಲ್ಲ.
ನಂತರ ನುಡಿಸಿದ ಕೃತಿಗಳ ಪಟ್ಟಿ,
೨) ರಾಮ ಭಕ್ತಿ ಸಾಮ್ರಾಜ್ಯ, ತ್ಯಾಗರಾಜರು
೩) ಸಾರಮತಿ ರಾಗದಲ್ಲಿ ಮೋಕ್ಷಮು ಗಲದಾ, ತ್ಯಾಗರಾಜರು (ಇದು ನನಗೆ ಅತ್ಯಂತ ಪ್ರಿಯವಾದ ಕೃತಿ)
೪) ಪೂರ್ವಿ ಕಲ್ಯಾಣಿ ರಾಗದಲ್ಲಿ ಙ್ನಾನಮು ಸಗರಾದ
೫) ನಿರವಧಿ ಸುಖಮಾ, ತ್ಯಾಗರಾಜರು
೬) ಅಖಿಲಾಂಡೇಶ್ವರಿ ರಕ್ಷಿತಾಂ, ಮುತ್ತು ಸ್ವಾಮಿ ದೀಕ್ಷಿತರ್
೭ ) ರಘುವಂಶಸುಧಾ, ಪಟ್ನಮ್ ಸುಬ್ರಮಣ್ಯ ಅಯ್ಯರ್
೮) ಮೋಹನ ರಾಗದ ವಿಸ್ತೃತ ಆಲಾಪನೆ, ಮೋಹನ ರಾಮ ಕೃತಿ , ತ್ಯಾಗರಾಜರು , ಇದನ್ನು ನುಡಿಸಿದ ರೀತಿ ಕಿಕ್ಕಿರಿದು ತುಂಬಿದ್ದ ಕೇಳುಗರ ಮನ ಮೋಹಕಗೊಳಿಸಿತು

ನಾನು ದಾಸರ ಕೀರ್ತನೆಗಳಿಗಾಗಿ ಕಾಯುತ್ತಲೇ ಇದ್ದೆ,

೯) ತಿರುಪತಿ ವೆಂಕಟ ರಮಣ, ಪುರಂದರ ದಾಸರು
೧೦) ವೈಷ್ಣವ ಜನತೊ (ಇದರ ಕರ್ತೃ ಯಾರೆಂದು ದಯವಿಟ್ಟು ತಿಳಿಸಿ!)
೧೧) ರಘುಪತಿ ರಾಘವ ರಾಜಾ ರಾಮ್, ವಿಷ್ಣು ದಿಗಂಬರ್ ಪಲುಸ್ಕಾರ್ (ಮೇಲಿನ ಎರಡೂ ಮಹಾತ್ಮ ಗಾಂಧಿ ಯವರಿಗೆ ಪ್ರಿಯವಾಗಿದ್ದವುವು)
೧೨) ಈ ಕೃತಿಯನ್ನು ನಾನು ಗುರಿತಿಸಲಾಗಲಿಲ್ಲ, ಕದ್ರಿಯವರು ತಾವು ನುಡಿಸಿದ್ದು ಯಾವುದೆಂದು ಪ್ರಕಟಿಸಲೂ ಇಲ್ಲ!
೧೩) ಇನ್ನು ದಯಬಾರದೆ , ಪುರಂದರ ದಾಸರು
೧೪) ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ, ಶ್ರೀ ಪಾದರು
೧೫) ಭಾಗ್ಯದಾ ಲಕ್ಷ್ಮಿ ಬಾರಮ್ಮ, ಪುರಂದರ ದಾಸರು

ಹೀಗೆ ಸುಮಾರು ೩ ಘಂಟೆಗಳ ಕಾಲ ಕೇಳುಗರನ್ನು ಸಂಗೀತದ ಅಮೃತ ಸುಧೆಯಲ್ಲಿ ಮುಳಿಗಿಸಿದ ಎಲ್ಲಾ ವಾದ್ಯಗಾರರಿಗೂ, ಆಯೋಜಿಸಿದ ರಾಮ ಸೇವಾ ಮಂಡಲಿಗೂ, ಪ್ರಾಯೋಜಿಸಿದ ದಿ ಪ್ರಿಂಟರ್ಸ್ (ಮೈಸೂರ್) ಪ್ರೈವೇಟ್ ಲಿಮಿಟೆದ್ ಮತ್ತು ಙ್ನಾನ ಮಂದಿರ ಟ್ರಸ್ಟ್ ನವರಿಗೂ ಅನಂತ ಧನ್ಯವಾದಗಳು.