ಭಾನುವಾರ, ಏಪ್ರಿಲ್ 12, 2009

ಭಕ್ತಿ ಪರವಶಗೊಳಿಸಿದ ಸಂಗೀತ

ನೆನ್ನೆ ಗಾನಕಲಾಭೂಷಣ ಆರ್ ಕೆ ಪದ್ಮನಾಭ (ಆರ್ ಕೆ ಪಿ) ರವರ ಗಾಯನವನ್ನು ಶ್ರೀ ವಾಣಿ ವಿದ್ಯಾ ಕೇಂದ್ರದ ವತಿಯಿಂದ ಆಯೋಜಿಸಿದ ೧೮ ನೇ ಶ್ರೀ ರಾಮನವಮಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ, ಕೇಳುವ ಸೌಭಾಗ್ಯ ಒದಗಿ ಬಂತು. ಪಕ್ಕ ವಾದ್ಯಗಳಲ್ಲಿ, ಪಿಟೀಲು ನಳಿನಿ ಮೋಹನ್, ಮೃದಂಗ ವಿ ಅರ್ಜುನ್ ಕುಮಾರ್ ಮತ್ತು ಘಟಂ ನಲ್ಲಿ ಓಂಕಾರ್ ಜಿ ಸಾಥ್ ಕೊಟ್ಟರು.


ಆರ್ ಕೆ ಪಿ ರವರ ಕಿರು ಪರಿಚಯವೆಂದರೆ, ಕರ್ನಾಟಕದ ಮೇರು ವಾಙ್ನೇಯಕಾರರಲ್ಲಿ ಒಬ್ಬರು. ವಾಙ್ನೇಯಕಾರರಲ್ಲದೆ, ಅತ್ಯುತ್ತಮ ಕೀರ್ತನ ರಚನಕಾರರೂ ಹೌದು. ಪದ್ಮನಾಭ ದಾಸ ಎಂಬ ನಾಮದೊಂದಿಗೆ ಕೀರ್ತನೆಗಳನ್ನು ರಚಿಸಿದ್ದಾರೆ. ಬಹಳಷ್ಟು ಕೀರ್ತನೆಗಳು ವಾದಿರಾಜರ ಮೇಲೆ ರಚಿತವಾಗಿವೆ. ಹರಿ ದಾಸರ ನಂತರ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿದವರು ಕಡಿಮೆ, ಆ ಕಂದರವನ್ನು ಪದ್ಮನಾಭ ರವರು ೨೦ ನೇ ಶತಮಾನದಲ್ಲಿ ತುಂಬುತ್ತಿರುವುದು, ಕಲಿಯುಗದ ಹಿರಿಮೆ! ಸಂಗೀತ ಕಲಿತದ್ದು ಪ್ರಾಯದ ವಯಸ್ಸಿನಲ್ಲಿ. ಹುಳಿಮಾವಿನಲ್ಲಿ ವಾದಿರಾಜರ ಭವನ, ಹಾಸನದ ರುದ್ರಪಟ್ನಂ ನಲ್ಲಿ ಸಪ್ತ ಸ್ವರ ಹೊಮ್ಮಿಸುವ ತಂಬೂರಿ ಆಕಾರದ ಭವನ ತಾವು ಸಂಘಟಕರಾಗಿ, ವ್ಯವಸ್ಥಾಪಕರಾಗಿ ಮಾಡಿರುವ ಉತ್ತಮ ಕೆಲಸಗಳು.

ನೆನ್ನೆಯ ಕಛೇರಿ, ನೆನಪಿನಲ್ಲುಳಿಯುವಂತದ್ದು. ಆರ್ ಕೆ ಪಿ ತಮ್ಮ ವಿದ್ವತ್ತಿನ ಜೊತೆಗೆ, ಜನಕ್ಕೆ ಬೇಕಾದ ರಂಜನೆಯನ್ನು ಬೆರೆಸಿ, ನೆರೆದಿದ್ದ ಶ್ರೋತೃ ವೃಂದವನ್ನು ಭಕ್ತಿಯ ಅಲೆಯಲ್ಲಿ ತೇಲಿಸಿದರು. ಪಕ್ಕ ವಾದ್ಯ ಕಲಾವಿದರೂ ಸಹ ಅತ್ಯುತ್ತಮವಾಗಿ ನುಡಿಸಿದರು.

ಮತ್ತೊಂದು ವಿಶೇಷ ಕಛೇರಿಯಲ್ಲಿ ಹಾಡಿದ್ದು ಹೆಚ್ಚಿನ ಕನ್ನಡ ಕೃತಿಗಳನ್ನು.

ಕಾರ್ಯಕ್ರಮ ಪ್ರಾರಂಭವಾದದ್ದು,
೧) ತಪೋ ವಿದ್ಯಾ ಎಂಬ ವಾದಿರಾಜರ ಉಗಾಭೋಗದಿಂದ
೨) ಜಲಜಾಕ್ಷ ನಿನ್ನೇ
೩) ದಾಸರಾಯ ಪುರಂದರ ದಾಸರಾಯ , ಜಗನ್ನಾಥ ದಾಸರು
ಇದು ಜಗನ್ನಾಥ ದಾಸರು, ಪುರಂದರ ದಾಸರ ಬಗ್ಗೆ ಬರೆದ ಒಂದು ಅಪರೂಪದ ಕೃತಿ. ನಾನು ಮೊದಲ ಬಾರಿಗೆ ಕೇಳಿದ್ದು.
೪) ನಾದೋಪಾಸನ, ತ್ಯಾಗರಾಜರು
೫) ದಾಸನೆಂತಾಗುವೆ ಧರೆಯೊಳಗೆ, ಪುರಂದರ ದಾಸರು
೬) ಸೀತಾಪತೆ ನಾ, ತ್ಯಾಗರಾಜರು,
ಇದನ್ನು ಅಪರೂಪದ ದೇಶಾದಿ ತಾಳದಲ್ಲಿ ಪ್ರಸ್ತುತ ಪಡಿಸಿದರು. ಇತ್ತೀಚೆಗೆ ಈ ತಾಳದಲ್ಲಿ ಹಾಡುವುದು ಕಡಿಮೆಯಾಗಿದೆಯಂತೆ.
೭) ಶಂಬುಧ್ಯುತಿ ರಾಗದ ಆಲಾಪನೆ, ಈ ರಾಗವನ್ನು ಪದ್ಮನಾಭರು ಮೊದಲ ಬಾರಿಗೆ ಹಾಡಿದ್ದಂತೆ.. ಇದನ್ನು ಅಲಾಪಿಸಿದ ರೀತಿ, ಎಲ್ಲರನ್ನೂ
ಮೋಡಿಗೊಳಿಸಿತು.
* ನಿನ್ನ ದಯೆ ಇರಲು ನನಗೇತರ ಚಿಂತೆ, ವಾದಿರಾಜರ ಕುರಿತ ಪದ್ಮನಾಭರ ರಚನೆ,
ಇದರ ಸಾಹಿತ್ಯ ಕೂಡ ಬಹಳ ಸೊಗಸಾಗಿದೆ.
೮) ಸದಾ ನೀ ಪಾದಮೇ ನಮ್ಮಿದಿ
೯) ಮಡಿ ಮಡಿ ಮಡಿಯೆಂದು, ಪುರಂದರ ದಾಸರು
೧೦) ಶೃಂಗಾಪುರದೇಶ್ವರಿ ಶಾರದೆ
೧೧) ಶ್ರೀರಾಮಂ ಸುಗ್ರೀವಂ,
ಇದು ಕನ್ನಡ ಪ್ರತಿಮಾ ನಾಟಕದ ಒಂದು ಪದ್ಯವಂತೆ. ಕನ್ನಡದ ಶ್ರೀಮಂತಿಕೆಯನ್ನು ತೋರಿಸಲು ಕಛೇರಿಗಳಲ್ಲಿ ಸಾಮಾನ್ಯವಾಗಿ ಇದನ್ನು
ಹಾಡುತ್ತೇನೆಂದರು
೧೨) ತಿಲ್ಲಾಣ
೧೩) ಏನು ಸುಕೃತವಾ ಮಾಡಿದಳು ಯಶೋಧೆ
೧೪ ) ಪುರಂದರ ದಾಸರ ಮಂಗಳ ಗೀತೆಯೊಂದಿಗೆ ಕಾರ್ಯಕ್ರಮ ಸುಮಂಗಳವಾಯಿತು

ಹೀಗೆ ೩ ಘಂಟೆಗಳ ಕಾಲ ಕೇಳುಗರನ್ನು ರಂಜಿಸಿ, ಭಕ್ತಿ/ಭಾವ ಪರವಶಗೊಳಿಸಿದ ಆರ್ ಕೆ ಪಿ ರವರಿಗೆ ಅನಂತ ವಂದನೆಗಳು.

ಕಾರ್ಯಕ್ರಮದ ಕೊನೆಯಲ್ಲಿ, ಖ್ಯಾತ ಸಂಗೀತ ವಿಮರ್ಶಕ, ವೈಣಿಕ ಮೈಸೂರು ವಿ ಸುಬ್ರಮಣ್ಯ (ವೀಣೆ ಶೇಷಣ್ಣ ನವರ ಮರಿಮಗ) ಮಾತನಾಡಿ, ಆರ್ ಕೆ ಪಿ ಯವರ ಗಾಯನವನ್ನು ಮನಸಾರ ಕೊಂಡಾಡಿದರು. ಆರ್ ಕೆ ಪಿ ರವರಿಗೆ, ಗಂಡರ ಗಂಡ ಮತ್ತು ಷಣ್ಮುಘ ಎಂಬ ಬಿರುದುಗಳನ್ನು ಕೊಟ್ಟರು. ಆರ್ ಕೆ ಪಿ ಯವರ ಸಂಘಟನಾ ಚಾತುರ್ಯವನ್ನು ನೆನಪಿಸಿ, ಗಾಯನ ಸಮಾಜದಲ್ಲಿ ನಡೆಸಿದ ಘೋಷ್ಠಿ ಗಾಯನವನ್ನು ತಿಳಿಯ ಪಡಿಸಿದರು. ಈ ಘೋಷ್ಠಿ ಗಾಯನವೆಂಬುದು, ತ್ರಾಗರಾಜರ ಕಾಲದಲ್ಲಿ ಪ್ರಚುರ ಗೊಂಡಿದ್ದಲ್ಲ , ಅದಕ್ಕೂ ಹಿಂದೆ ಪುರಂದರ ದಾಸರ ಕಾಲದಲ್ಲೆ ಮಧುಕರ ವೃತ್ತಿ ನಡೆಯುತ್ತಿತ್ತು ಎಂದರು. ಆರ್ ಕೆ ಪಿ ಯವರು ಹುಳಿಮಾವಿನಲ್ಲಿ ಸ್ಥಾಪಿಸಿರುವ ವಾದಿರಾಜ ಭವನ ಮತ್ತು ರುದ್ರಪಟ್ನಂ ನಲ್ಲಿ ನಿರ್ಮಿಸಿರುವ ತಂಬೂರಿ ಆಕಾರದ ಮಂಟಪ ಗಳು ಇಂದು ಉತ್ತಮ ಪ್ರವಾಸಿ ತಾಣಗಳಾಗಿವೆ ಎಂದರು. ಎಲ್ಲಾ ಕಲಾವಿದರ ಸಾಧನೆಗಳನ್ನು ಕೇಳುಗರಿಗೆ ತಿಳಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ