ರಾಮನವಮಿಯ ಆಚರಣೆ ಬೆಂಗಳೂರಿನಲ್ಲಿ ವಿಶಿಷ್ಟ. ರಾಮನವಮಿ ಬಂತೆಂದರೆ, ಶಾಸ್ತ್ರೀಯ ಸಂಗೀತಪ್ರಿಯರಿಗೆ, ಹಬ್ಬದ ಸುಗ್ಗಿ ಸ್ವಲ್ಪ ಹೆಚ್ಚು, ಕಾರಣ ರಾಮೋತ್ಸವ ಹೆಸರಿನಲ್ಲಿ ತಿಂಗಳುಗಟ್ಟಲೆ ನಡೆಯುವ ಸಂಗೀತ ಕಾರ್ಯಕ್ರಮಗಳು. ಇದರಲ್ಲಿ ಬಹು ಪ್ರಮುಖವಾದದ್ದು ಚಾಮರಾಜಪೇಟೆಯ ಕೋಟೆ ಶಾಲೆ ಮೈದಾನದಲ್ಲಿ ಜರುಗುವ ಸಂಗೀತ ಕಾರ್ಯಕ್ರಮಗಳು (ಕಾರ್ಯಕ್ರಮ ಪಟ್ಟಿಗೆ ಈ ಕೊಂಡಿಯನ್ನು ಒತ್ತಿ). ಇದು ರಾಮಸೇವಾ ಮಂಡಲಿಯವರು ನಡೆಸುತ್ತಿರುವ ೭೧ ನೇ ರಾಮೋತ್ಸವ ಸಂಗೀತ ಕಾರ್ಯಕ್ರಮ. ಶೇಷಾದ್ರಿಪುರಂ ಕಾಲೇಜಿನ ’ಕುವೆಂಪು ವೇದಿಕೆಯಲ್ಲೂ’, ರಾಮೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ.
ಫೋಟೋ ಕೃಪೆ: ಶಿವಾನಂದ ಗಾವಲ್ಕರ್
ಇಂದು ಸ್ಯಾಕ್ಸಾಫೋನ್ ಸಾಮ್ರಾಟ್ ಕದ್ರಿ ಗೊಫಾಲನಾಥ್ ರ ವಾದನದೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾಯಿತು.ಇದಕ್ಕೂ ಮೊದಲು ನಿಗದಿಯಂತೆ ೬:೧೫ ಕ್ಕೆ ಸರಿಯಾಗಿ ಭಾಷಣಗಳಿಂದ ಕಾರ್ಯಕ್ರಮ ಉದ್ಘಾಟನೆಯಾಯಿತು. ನಿರೂಪಣೆ ಅಚ್ಚುಕಟ್ಟಾಗಿತ್ತು ಮತ್ತು ಕನ್ನಡದಲ್ಲಿತ್ತು. ಅಧ್ಯಕ್ಷತೆ ವಹಿಸಿದ್ದವರು ಬೆಂಗಳೂರು ಪೋಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್. ವೇದಿಕೆಯ ಮೇಲೆ ನೆರೆದಿದ್ದ ಇತರರು, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರವೀಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧ್ಯಕ್ಷ ಮನು ಬಾಳಿಗಾರ್ ಮತ್ತು ರಾಮ ಸೇವಾ ಮಂಡಲಿ ಅಧ್ಯಕ್ಷ ಮಣಿ ನಾರಾಯಣ ಸ್ವಾಮಿ. ರವೀಂದ್ರ ರವರು ಸ್ವಾಗತ ಭಾಷಣ ಮಾಡಿ, ಅಜಯ್ ಕುಮಾರ್ ಸಿಂಗ್ ರ ಕನ್ನಡವನ್ನು ಮತ್ತು ಅವರ ಸಾಹಿತ್ಯ ಪ್ರೇಮವನ್ನು ಮನಸಾರೆ ಹೊಗಳಿದರು. ಅಜಯ್ ಕುಮಾರ್ ಸಿಂಗ್ ರವರು ಮಾತನಾಡಿ, ೩೧ ವರ್ಷಗಳ ಹಿಂದೆ ಈ ರಾಮೋತ್ಸವ ಸಂಗೀತ ಕಾರ್ಯಕ್ರಮಕ್ಕೆ ಪ್ರೇಕ್ಷಕರಾಗಿ ಬಂದಿದ್ದರಂತೆ. ಸಂಗೀತ ಎಂಬುದು ಹೃದಯಗಳನ್ನು ಬೆಸೆಯುವ ವಾಹಿನಿ ಎಂಬುವ ಮಾತನ್ನು ಹೇಳಿದರು. ಅಮೀರ್ ಖುಸ್ರೋ ಎಂಬ ೧೦ ನೇ ಶತಮಾನದ ವ್ಯಕ್ತಿ, ಹಿಂದಿಯಲ್ಲಿ ಬರೆದ ಖಯಾಲಿಗಳನ್ನು ಪಾಕಿಸ್ತಾನದ ಸಂಗೀತಗಾರರು ಹಾಡುತ್ತಿದ್ದುದು, ಅದಕ್ಕೆ ಮಲ್ಲಿಕಾ ಸಾರಾಭಾಯಿ ನೃತ್ಯ ಮಾಡುತ್ತಿದ್ದುದನ್ನು ಉದಾಹರಿಸಿ, ಹೇಗೆ ಬೇರೆ ಬೇರೆ ದೇಶ, ಭಾಷೆ, ಧರ್ಮದ ವ್ಯಕ್ತಿಗಳನ್ನು ಸಂಗೀತ ಎಂಬುದು ಒಟ್ಟುಗೂಡಿಸುತ್ತದೆ ಎಂಬುದನ್ನು ಸ್ಮರಿಸಿದರು. ಇಂದು ನಡೆಯುತ್ತಿರುವ ವಿದ್ವಂಸಕ ಕೃತ್ಯಗಳಿಗೆ ಸಂಗೀತ ಪರಿಹಾರವಾಗಬಹುದು ಎಂದರು.ನಂತರ ಮನು ಬಳಿಗಾರ್, ತಾವು ರಾಮ ಸೇವಾ ಮಂಡಲಿಯ ಸಂಗೀತ ಸೇವೆಯನ್ನು ಮೆಚ್ಚಿ, ಸರ್ಕಾರದಿಂದ ಮಂಡಲಿಗೆ ಬರುವ ಅನುದಾನವನ್ನು ೧೦ ಪಟ್ಟು ಹೆಚ್ಚಿಸಿದ್ದೇನೆಂಬ ಅಂಶವನ್ನು ತಿಳಿಸಿದರು. ನಂತರ ಮಾತನಾಡಿದ ಮಣಿ ನಾರಾಯಣ ಸ್ವಾಮಿ ರವರು, ರವೀಂದ್ರರು ತೆಲುಗು ಮಾತೃ ಭಾಷಿಕರಾಗಿದ್ದರೂ, ತಮ್ಮದು ತಮಿಳು, ಅಜಯ್ ರವರದು ಹಿಂದಿ, ಮನು ಬಳಿಗಾರ್ ರವರದು ಕನ್ನಡ ದವರು, "ಸಂಗೀತ ಪ್ರೇಮ", ವೇದಿಕೆಯಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿದೆ ಎಂದರು. ಎಲ್ಲರೂ ಕನ್ನಡದಲ್ಲೇ ಮಾತನಾಡಿದ್ದು ವಿಶೇಷ ಮತ್ತು ಸಂತಸದ ಸಂಗತಿ.
ನಂತರ ೧೦ ನಿಮಿಷಗಳ ತಡವಾಗಿ ಸಂಗೀತ ಕಾರ್ಯಕ್ರಮ ಪ್ರಾರಂಭ. ಗೋಪಾಲನಾಥರ ಜೊತೆ ಪಕ್ಕವಾದ್ಯದಲ್ಲಿ, ಪಿಟೀಲು ಕನ್ಯಾಕುಮಾರಿ, ಮೃದಂಗ ಬಿ ಹರಿ ಕುಮಾರ್, ಖಂಜೀರ ದಲ್ಲಿ ಎನ್ ಅಮೃತ್, ಮೋರ್ಸಿಂಗ್ ನಲ್ಲಿ ರಾಜಶೇಖರ್ ಬಿ ಅದ್ಭುತವಾಗಿ ನುಡಿಸಿದರು.
ಕಾರ್ಯಕ್ರಮ ಪ್ರಾರಂಭವಾದದ್ದು ೧) ಮುತ್ತುಸ್ವಾಮಿ ದೀಕ್ಷಿತರ, ಹಂಸಧ್ವನಿ ರಾಗದ ವಾತಾಪಿ ಗಣಪತಿ ಯಿಂದ. ಇದನ್ನು ಕದ್ರಿ ನುಡಿಸಿದಾಗ ಪ್ರತಿ ಶ್ರೋತೃಗಳೂ ತಲೆ ದೂಗುವುದರಲ್ಲಿ ಅನುಮಾನವಿಲ್ಲ.
ನಂತರ ನುಡಿಸಿದ ಕೃತಿಗಳ ಪಟ್ಟಿ,
೨) ರಾಮ ಭಕ್ತಿ ಸಾಮ್ರಾಜ್ಯ, ತ್ಯಾಗರಾಜರು
೩) ಸಾರಮತಿ ರಾಗದಲ್ಲಿ ಮೋಕ್ಷಮು ಗಲದಾ, ತ್ಯಾಗರಾಜರು (ಇದು ನನಗೆ ಅತ್ಯಂತ ಪ್ರಿಯವಾದ ಕೃತಿ)
೪) ಪೂರ್ವಿ ಕಲ್ಯಾಣಿ ರಾಗದಲ್ಲಿ ಙ್ನಾನಮು ಸಗರಾದ
೫) ನಿರವಧಿ ಸುಖಮಾ, ತ್ಯಾಗರಾಜರು
೬) ಅಖಿಲಾಂಡೇಶ್ವರಿ ರಕ್ಷಿತಾಂ, ಮುತ್ತು ಸ್ವಾಮಿ ದೀಕ್ಷಿತರ್
೭ ) ರಘುವಂಶಸುಧಾ, ಪಟ್ನಮ್ ಸುಬ್ರಮಣ್ಯ ಅಯ್ಯರ್
೮) ಮೋಹನ ರಾಗದ ವಿಸ್ತೃತ ಆಲಾಪನೆ, ಮೋಹನ ರಾಮ ಕೃತಿ , ತ್ಯಾಗರಾಜರು , ಇದನ್ನು ನುಡಿಸಿದ ರೀತಿ ಕಿಕ್ಕಿರಿದು ತುಂಬಿದ್ದ ಕೇಳುಗರ ಮನ ಮೋಹಕಗೊಳಿಸಿತು
ನಾನು ದಾಸರ ಕೀರ್ತನೆಗಳಿಗಾಗಿ ಕಾಯುತ್ತಲೇ ಇದ್ದೆ,
೯) ತಿರುಪತಿ ವೆಂಕಟ ರಮಣ, ಪುರಂದರ ದಾಸರು
೧೦) ವೈಷ್ಣವ ಜನತೊ (ಇದರ ಕರ್ತೃ ಯಾರೆಂದು ದಯವಿಟ್ಟು ತಿಳಿಸಿ!)
೧೧) ರಘುಪತಿ ರಾಘವ ರಾಜಾ ರಾಮ್, ವಿಷ್ಣು ದಿಗಂಬರ್ ಪಲುಸ್ಕಾರ್ (ಮೇಲಿನ ಎರಡೂ ಮಹಾತ್ಮ ಗಾಂಧಿ ಯವರಿಗೆ ಪ್ರಿಯವಾಗಿದ್ದವುವು)
೧೨) ಈ ಕೃತಿಯನ್ನು ನಾನು ಗುರಿತಿಸಲಾಗಲಿಲ್ಲ, ಕದ್ರಿಯವರು ತಾವು ನುಡಿಸಿದ್ದು ಯಾವುದೆಂದು ಪ್ರಕಟಿಸಲೂ ಇಲ್ಲ!
೧೩) ಇನ್ನು ದಯಬಾರದೆ , ಪುರಂದರ ದಾಸರು
೧೪) ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ, ಶ್ರೀ ಪಾದರು
೧೫) ಭಾಗ್ಯದಾ ಲಕ್ಷ್ಮಿ ಬಾರಮ್ಮ, ಪುರಂದರ ದಾಸರು
ಹೀಗೆ ಸುಮಾರು ೩ ಘಂಟೆಗಳ ಕಾಲ ಕೇಳುಗರನ್ನು ಸಂಗೀತದ ಅಮೃತ ಸುಧೆಯಲ್ಲಿ ಮುಳಿಗಿಸಿದ ಎಲ್ಲಾ ವಾದ್ಯಗಾರರಿಗೂ, ಆಯೋಜಿಸಿದ ರಾಮ ಸೇವಾ ಮಂಡಲಿಗೂ, ಪ್ರಾಯೋಜಿಸಿದ ದಿ ಪ್ರಿಂಟರ್ಸ್ (ಮೈಸೂರ್) ಪ್ರೈವೇಟ್ ಲಿಮಿಟೆದ್ ಮತ್ತು ಙ್ನಾನ ಮಂದಿರ ಟ್ರಸ್ಟ್ ನವರಿಗೂ ಅನಂತ ಧನ್ಯವಾದಗಳು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಗುರುಪ್ರಸಾದ್....
ಪ್ರತ್ಯುತ್ತರಅಳಿಸಿನಾವೂ ಬರಬೇಕಿತ್ತು...
ಬರಲಾಗಲಿಲ್ಲ....
ನೀವು ಕೊಟ್ಟ ವಿವರಗಳಿಂದ ಹೊಟ್ಟೆಕಿಚ್ಚಾಯಿತು...
ಗಾನಸುಧೆ, ಭಕ್ತಿಯಲ್ಲಿ ತೇಲಿ ಹೋದ ನಿಮ್ಮ ಅನಿಭವ
ಚೆನ್ನಾಗಿ ಬಂದಿದೆ....
ಫೋಟೊ ಕೂಡ ಚೆನ್ನಾಗಿದೆ...
ವಂದನೆಗಳು....
ಪ್ರಕಾಶ್,
ಪ್ರತ್ಯುತ್ತರಅಳಿಸಿನೀವು ಬರಬೇಕಿತ್ತು. ಕದ್ರಿಯವರ ಕಾರ್ಯಕ್ರಮ ಎಂದಿನತೆ ಬಹಳ ಅಮೋಘವಾಗಿತ್ತು.
ಫೋಟೋ ಗೆಳೆಯ ಶಿವಾನಂದ ಗಾವಲ್ಕರ್ ರವರ ಕೃಪೆ.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.