ಬುಧವಾರ, ಏಪ್ರಿಲ್ 08, 2009

ಶೇಷಾದ್ರಿಪುರಂ ರಾಮೋತ್ಸವದಲ್ಲಿ ವಿದ್ಯಾಭೂಷಣ ಸ್ವಾಮಿಗಳು

ವಿದ್ಯಾಭೂಷಣರ ಕಛೇರಿಯನ್ನು ಪ್ರತ್ಯಕ್ಷವಾಗಿ ನೋಡಬೇಕೆಂದ ಬಹು ದಿನದ ಆಸೆ ನೆನ್ನೆ ನೆರವೇರಿತು. ಶೇಷಾದ್ರಿಪುರಂ ಕಾಲೇಜಿನ ರಾಮಸೇವಾ ಸಮಿತಿಯವರು ಆಯೋಜಿಸುತ್ತಿರುವ ೬೧ ನೇ ರಾಮೋತ್ಸವದ ಕಾರ್ಯಕ್ರಮದಲ್ಲಿ ವಿದ್ಯಾಭೂಷಣರ ವಿದ್ವತ್ ಪೂರ್ಣ ಗಾಯನಕ್ಕೆ, ಶೇಷಗಿರಿ ರಾಯರು ಪಿಟೀಲಿನಲ್ಲಿ, ಗಣೇಶ್ ರಾವ್ ರವರು ಮೃದಂಗದಲ್ಲಿ, ಶ್ರೀಶೈಲ ರವರು ಘಟಂ ನಲ್ಲಿ ಅದ್ಭುತ ಸಾಥ್ ನೀಡಿದರು. ಶೇಷಗಿರಿ ರಾಯರ ಪಿಟೀಲಿನಲ್ಲಿ ಹೊಮ್ಮುತ್ತಿದ್ದುದು, ಬರೀ ಪಿಟೀಲಿನ ನಾದವಾಗದೆ, ವಿದ್ಯಾಭೂಷಣರ ಪ್ರತಿದ್ವನಿಯೇನೋ ಎನ್ನುವ ಹಾಗಿತ್ತು. ಗಣೇಶ್ ರಾವ್ ಮತ್ತು ಶ್ರೀಶೈಲ ರವರು ಕೂಡ ಕ್ರಮವಾಗಿ ಮೃದಂಗ ಮತ್ತು ಘಟಂ ಗಳ ಜೊತೆ ತಮ್ಮ ಅದ್ಭುತ ಕೈಚಳಕವನ್ನು ತೋರಿದರು.



ವಿದ್ಯಾಭೂಷಣರವರು ತಮ್ಮ ವಿದ್ವತ್ ಪೂರ್ಣ ಗಾಯನಕ್ಕಲ್ಲದೆ, ಇಷ್ಟವಾಗುವುದು ಮತ್ತೊಂದು ಅತಿ ಪ್ರಮುಖವಾದ ವಿಷಯಕ್ಕೆ. ಅವರ ಯಾವುದೇ ಕಚೇರಿಯಲ್ಲಾದರೂ, ಹೆಚ್ಚು ದಾಸರ ಉಗಾಭೋಗಗಳನ್ನೂ, ಕೀರ್ತನೆಗಳನ್ನು ಹಾಡಿ ಪ್ರಚುರ ಪಡಿಸುತ್ತಾರೆ. ಬಹಳಷ್ಟು ಸಾಮಾನ್ಯ ಜನರಿಗೆ, ಕನ್ನಡದ್ದಲ್ಲದ ಕೀರ್ತನೆಗಳನ್ನು ಅಸ್ವಾದಿಸುವುದು ಕಷ್ಟ. ಏಕೆಂದರೆ ಆ ಸಾಹಿತ್ಯ ನಮ್ಮ ತಲೆಗೆ ಹೊಕ್ಕುವುದಿಲ್ಲ. ನಾವು ಸಂಗೀತವನ್ನು ಎಷ್ಟೇ ಆಹ್ವಾದಿಸಿದರೂ, ಅದಕ್ಕೆ ಸರಳ ಅರ್ಥವಾಗುವ ಸಾಹಿತ್ಯದ ಜೊತೆ ಸಿಕ್ಕಾಗ, ಗಾಯನದ ಇಂಪು ಹೆಚ್ಚಾಗುತ್ತದೆ. ಅದಕ್ಕೆ ನನ್ನ ಪ್ರತಿಪಾದನೆಯೆಂದರೆ, ಕರ್ನಾಟಕದಲ್ಲಿ ಹಾಡುವಾಗ, ಹೆಚ್ಚು ಹೆಚ್ಚು ಕನ್ನಡದ ಕೃತಿಗಳನ್ನು ಹಾಡುವುದು ಎಲ್ಲ ಸಂಗೀತಕಾರರಿಗೂ, ಸಂಗೀತಾಸಕ್ತ ಕೇಳುಗರಿಗೂ ಒಳಿತು. ಹೌದು ಸಂಗೀತಕ್ಕೆ ಭಾಷೆಯಿಲ್ಲ! ತ್ಯಾಗರಾಜರದೂ ಇರಲಿ, ಮುತ್ತು ಸ್ವಾಮಿ ದೀಕ್ಷಿತರದೂ ಇರಲಿ, ಆದರೆ ಪ್ರಾದೇಶಿಕ / ಸಾಮಾನ್ಯ ಜನಕ್ಕೆ ಹೆಚ್ಚು ಅರ್ಥವಾಗುವ ಭಾಷೆಯ ಕೃತಿಗಳು ಹೆಚ್ಚಿರಲಿ!

ಇನ್ನು ಕಛೇರಿ ಪ್ರಾರಂಭವಾಗಿದ್ದು ೧) ವಿಜಯ ವಿಠಲ ದಾಸರ , ಗಜವಧನ ಪಾಲಿಸೋ ಕೃತಿಯಿಂದ
೨) ಭಜನ..
೩) ಮನಸುಲೋನಿ ಮರ್ಮಮು - ತ್ಯಾಗರಾಜರು
೪) ಪೊರೆಯಮ್ಮ ಸ್ವಾಮಿ, ಜಗದಂತರ್ಯಾಮಿ, ಗೋಪಾಲ ದಾಸರು
೫) ಪ್ರಾಣಪತೇ ನೀ ಸಲಹೋ
೬) ಚಿಂತೆ ಯಾಕೆ ಮಾಡುತಿದ್ದಿ, ಚಿನ್ಮಯನಿದ್ದಾನೆ , ಪುರಂದರ ದಾಸರು
೭) ನಾರಾಯಣ ನಿನ್ನ ನಾಮದ, ಪುರಂದರ ದಾಸರು

ಈ ಪುರಂದರ ದಾಸರ ಈ ಕೃತಿಯ ಹಿಂದೆ ಡಿ ವಿ ಜಿ ಯವರು ಹೇಳುವ ಒಂದು ಕಥೆಯಿದೆ. ಹಿಂದೆ ದಾಸರ / ಕನ್ನಡ ಕೃತಿಗಳನ್ನು ಸಂಗೀತ ಕಛೇರಿಗಳಲ್ಲಿ, ವೇದಿಕೆಗಳಲ್ಲಿ ಹಾಡುತ್ತಿರಲಿಲ್ಲವಂತೆ. ದಾಸರ ಕೃತಿಗಳನ್ನು ಮೊದಲ ಬಾರಿಗೆ ಕಛೇರಿಗಳಲ್ಲಿ ಹಾಡಲು ಪ್ರಾರಂಬಿಸಿದವರು ’ಬಿಡಾರಂ ಕೃಷ್ಣಪ್ಪ’ ನವರು. ದ್ವನಿವರ್ಧಕಗಳಿಲ್ಲದ ಆಗಿನ ಕಾಲದಲ್ಲಿ, ಗಾಯಕರಿಗೆ ಬೇಕಾದ ಉತ್ತಮ ಶಾರೀರ ಇವರಲ್ಲಿತ್ತಂತೆ. ಎಷ್ಟೇ ಜನ ಕಿಕ್ಕಿರದು ತುಂಬಿದ್ದರೂ, ಎಲ್ಲರಿಗೂ ಕೇಳಿಸುವ ಹಾಗೆ ಗಟ್ಟಿಯಾಗಿ, ಮಾಧುರ್ಯವಾಗಿ, ಶಾಸ್ತ್ರೀಯವಾಗಿ ಹಾಡುವ ವಿದ್ವತ್ತು ಇತ್ತಂತೆ. ಹೀಗೆ ಒಮ್ಮೆ ಬೆಂಗಳೂರಿನಲ್ಲಿ ನಡೆದ ಒಂದು ಕಛೇರಿಯಲ್ಲಿ ದಾಸರ "ನಾರಾಯಣ ನಿನ್ನ ನಾಮದ ಸ್ಮರಣೆಯ" ಕೃತಿಯನ್ನು ಹಾಡಿದಾಗ ಸಭೆಯಲ್ಲಿ ಕರಾಡತನ. ಮುಂದೆ ಬೆಂಗಳೂರಿನಲ್ಲಿ ನಡೆದ ಎಲ್ಲಾ ಶಾಸ್ತ್ರೀಯ ಸಂಗೀತ ಸಭೆಗಳಲ್ಲೂ ಅವರನ್ನು ಅನುಕರಿಸಿದ್ದೇ ಅನುಕರಿಸಿದ್ದು!

೮) ಕಂಡೆ ನಾ ಗೋವಿಂದನಾ , ಪುರಂದರ ದಾಸರು
೯) ಹರಿಹರಿಯೆಂದು ಕರೆಯುವುದೇ ತಡ , ಪುರಂದರ ದಾಸರು (ಉಗಾಭೋಗ)
೧೦) ದಾಸನ ಮಾಡಿಕೊ ಎನ್ನ, ಪುರಂದರ ದಾಸರು
೧೧) ಯಮನ್ ಕಲ್ಯಾಣಿಯಲ್ಲಿ, ಕೃಷ್ಣಾ ನೀ ಬೇಗನೆ ಬಾರೋ, ವ್ಯಾಸರಾಯ ತೀರ್ಥರು
೧೧) ನೀ ತಂದೆ ನಾ ಬಂದೆ.. ಹಿಂದಿನ ಜನ್ಮ .. (ಉಗಾಭೋಗ) ಪುರಂದರ ದಾಸರು
೧೨) ಹಲವು ಜೀವನವ ಒಂದೆಲೆ ನುಂಗಿತು, ಕನಕ ದಾಸರು
೧೩) ತೂಗಿರೆ ರಾಯರ
೧೪) ಕಮಲಾಂಬಿಕೆ
೧೫) ಶುಭವಿದು ,ಪುರಂದರ ದಾಸರು ..

ಎಂಬ ಮಂಗಳ ದೊಂದಿಗೆ ಕಾರ್ಯಕ್ರಮ ಮಂಗಳವಾಯಿತು.

4 ಕಾಮೆಂಟ್‌ಗಳು:

  1. ಗುರುಪ್ರಸಾದ್,

    ವಿದ್ಯಾಭೂಷಣರ ಗಾಯನ ನನಗೆ ಅಚ್ಚುಮೆಚ್ಚು...ಅವರ ಎಲ್ಲಾ ಹಾಡುಗಳನ್ನು ಕೇಳುತ್ತಿದ್ದರೆ ಮೈಮರೆಯುವಂತಾಗುತ್ತದೆ...
    ನಾನು ಓದಿದ್ದು ಅದೇ ಶೇಷಾದ್ರಿಪುರಂ ಕಾಲೇಜು...
    ನಿಮ್ಮ ಲೇಖನ ಎಲ್ಲಾ ನೆನಪುಗಳನ್ನು ಮರುಕಳಿಸಿತು...
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  2. ಶಿವು,

    ವಿದ್ಯಾಭೂಷಣರು ಕರ್ನಾಟಕದ ಬಹಳಷ್ಟು ಜನಕ್ಕೆ ಅಚ್ಚು ಮೆಚ್ಚು. ಲೆಖನ ಓದಿ, ಶೇಷಾದ್ರಿಪುರಂ ನೆನಪುಗಳು ಮರುಕಳಿಸಿದವು ಎಂದಿರಿ..

    ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  3. ಗುರು ಅವರೆ,
    ಕ್ಷಮಿಸಿ. ಇತ್ತೀಚೆಗೆ comment ಬರೆಯಲಾಗಿಲ್ಲ. Half Century ದಾಟಿ ಮುಂದುವರೆಯುತ್ತಿರುವ ನಿಮ್ಮ ಪೋಸ್ಟಿಂಗ್ಸ್ ಸದಾ ಇಂಟರೆಸ್ಟಿಂಗ್. ನಿಮ್ಮ ಶ್ರೇಷ್ಠನಿಗೆ 'Y'ಮಿಸ್ -cennAgide. ವಿದ್ಯಾಭೂಷಣರ ಕಛೇರಿ ನೋಡಿದ ಅದೃಷ್ಟವಂತರು ನೀವು. ನಾನಿದುವರೆಗೂ ನೋಡಿಲ್ಲ.

    ಪ್ರತ್ಯುತ್ತರಅಳಿಸಿ
  4. ಮಲ್ಲಿಕಾರ್ಜುನ್ ರವರೆ,

    ಕ್ಷಮಿಸಿ ಎಂಬ ದೊಡ್ಡ ಮಾತು ದಯವಿಟ್ಟು ಬೇಡ. ನೀವು ಸಮಯ ಸಿಕ್ಕಾಗ ಓದಿ ಪ್ರತಿಕ್ರಿಯಿಸಿ. ಪ್ರತಿಕ್ರಿಯಿಸುವುದಕ್ಕಿಂತಾ, ನಿಮ್ಮ ಬ್ಳಾಗ್ ನಲ್ಲಿ ಹೆಚ್ಚು ಹೆಚ್ಚಿ ಬರೆಯುತ್ತಿರಿ. ಅಷ್ಟೇ ಸಾಕು . ನಿಮ್ಮ ಬ್ಳಾಗ್ ಓದುವುದೇ ನಮಗೆ ಖುಷಿ.

    ಮೆಚ್ಚಿದ್ದಕ್ಕೆ ಧನ್ಯವಾದಗಳು.

    ವಿದ್ಯಾಭೂಶಣ್ ರವರು ಕಾರ್ಯಕ್ರಮ ಕೊಡುತ್ತಲೇ ಇರುತ್ತಾರೆ. ಅವಕಾಶ ಸಿಕ್ಕಾಗ ತಪ್ಪದೆ ಕೇಳಿ.

    ಪ್ರತ್ಯುತ್ತರಅಳಿಸಿ