ಗುರುವಾರ, ಜುಲೈ 23, 2009

ಶ್ರೇಷ್ಠ ಕಲಿಸಿಕೊಟ್ಟ ಹೊಸ, ಕನ್ನಡ ಚುಟುಕು ಪದ್ಯ

ಶ್ರೇಷ್ಠ ಗೊತ್ತಲ್ಲವೇ? ಹಿಂದೆ ಎರಡು ಬಾರಿ ನಿಮಗೆ ಪರಿಚಯ ಮಾಡಿಕೊಟ್ಟಿದ್ದೆ, ಹಾಳು ಮರೆವು ಎನ್ನುತ್ತೀರ, ಕೆಳಗಿನ ಕೊಂಡಿಗಳನ್ನು ಒತ್ತಿ ಒಮ್ಮೆ ಕಣ್ಣಾಡಿಸಿ.
ಆಂಗ್ಲ ಭಾಷೆಯ ಒಂದಕ್ಷರದ ’ಹೆಸರು’
ಶ್ರೇಷ್ಠ ಹನುಮಂತನಾಗಿದ್ದು!

ಇಷ್ಟೆಲ್ಲಾ ಆಗಲ್ಲಪ್ಪ ಅಂತೀರ?, ಶ್ರೇಷ್ಠ ನನ್ನ ಸೋದರಳಿಯ .ಯು ಕೆ ಜಿ ಯಲ್ಲಿ ಓದುತ್ತಾ ಇದ್ದಾನೆ. ಹೋದ ವಾರ ಇವರ ಶಾಲೆಯಲ್ಲಿ ಅದೇನೋ ’Rhymes Day' ಅಂತ ಮಾಡಿದ್ರು. ಅದಕ್ಕೆ ಎಲ್ಲರೂ ಮನೆಯಲ್ಲಿ ಯಾವುದಾದರೂ ಒಂದು ರೈಮ್ ಕಲಿತುಕೊಂಡು ಬರಲು ಹೇಳಿದ್ದರು. ಅವರು ಹೇಳಿಕಳಿಸ್ಸಿದ್ದಷ್ಟೆ. ನಾನು ಜಾಸ್ತಿ ವಿಚಾರ ಮಾಡದೆ ಹೆಡ್ಡನಂತೆ, ಅವನ ಪಠ್ಯದಲ್ಲೇ ಇರುವ, ಅವರ ಶಾಲೆಯಲ್ಲಿ ಆಗಲೇ ಹೇಳಿಕೊಟ್ಟಿರುವ ಒಂದು ಆಂಗ್ಲ ಪದ್ಯವನ್ನು ಅವನ ಬಾಯಲ್ಲೇ ಹೇಳಿಸಿ, ಕಲಿಸಿಕೊಟ್ಟೆನೆಂದು ಸಂತೋಷಗೊಂಡು ಸುಮ್ಮನಾದೆ. ಅವ ಮುಂದಿನ ದಿನ ಬಂದು ಅಯ್ಯೋ, ಬೇರೆ ರೈಮ್ ಕಲಿತುಕೊಂಡು ಬರಬೇಕಂತೆ ಎಂದಾಗಲೇ ನನಗೆ ಗೊಂದಲ ಶುರು ಆಗಿದ್ದು. ಆಯ್ಯೋ ಬಿಡಿ ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ಬೇಡಿ.

ಅವನ ಶಾಲೆಯಲ್ಲಿ ಅವನ ಗೆಳತಿ ತನ್ವಿ, ಒಂದು ಕನ್ನಡ ರೈಮ್ (ಚುಟುಕು ಪದ್ಯವನ್ನು) ಕಲಿತು, ಎಲ್ಲಾ ಮಕ್ಕಳಿಗೂ ಕಲಿಸಿ ಕೊಟ್ಟಿದ್ದಾಳೆ. ಬಹಳ ಸುಂದರವಾಗಿದೆ, ಇನ್ನು ಮಕ್ಕಳು ಅದನ್ನು ನಾಟಕೀಯವಾಗಿ ಹಾಡಿದರಂತೂ ಹೊಗಳಲು ಪದಗಳಿಲ್ಲ. ಇಲ್ಲಿಯವರೆಗೂ ಈ ಚುಟುಕು ಪದ್ಯ ನನ್ನ ಗಮನಕ್ಕೆ ಬಂದಿರಲಿಲ್ಲ,

ಈ ರೀತಿ ಇದೆ ಆ ಪದ್ಯ,

ಪೆನ್ಸಿಲ್ ಗೊಂದು ಮೊದಲನೆ ಶತ್ರು, ಅಳಿಸೋ ರಬ್ಬರ್ರು,
ತಪ್ಪು ಬರೆದರೆ ಒಪ್ಪೋದಿಲ್ಲ, ಎಷ್ಟೇ ಹೇಳಿದ್ರೂ..

ಪೆನ್ಸಿಲ್ ಗೊಂದು ಎರಡನೆ ಶತ್ರು, ಎರೆಯೋ ಮೆಂಡರ್ರು,
ಮೆಂಡ್ ಆಗಿರದು, ಬಿಡೋದೆ ಇಲ್ಲ ಎಷ್ಟೇ ಬಡ್ಕೊಂಡ್ರು..


ಇಷ್ಟು ಶ್ರೇಷ್ಟ ಹೇಳಿದರೆ, ಈ ಮೂರನೆ ಪಂಕ್ತಿ ಹೀಗಿರಬಹುದೆಂದು ನಾನು ಊಹೆ ಮಾಡ್ತಾ ಇದ್ದೆ..

ಪೆನ್ಸಿಲ್ ಗೊಂದು ಮೂರನೆ ಶತ್ರು, ಬರೆಯೋ ಪೇಪರ್ರು
ಪೂರ್ತಿ ಬರೆಯದೆ ಬಿಡೋದೆ ಇಲ್ಲ, ಎಷ್ಟೇ ಸುಸ್ತಾದ್ರು.. ಉಫ್...


ಈ ಪದ್ಯನಾ ಮಕ್ಕಳು ಎಷ್ಟು ಖುಷಿ ಖುಷಿ ಇಂದ ಹೇಳ್ತವೇ ಅಂತೀರಾ.. ನಿಮ್ಮ ಮನೆಯ ಮಕ್ಕಳಿಗೂ ಗೊತ್ತಿಲ್ಲದಿದ್ದರೆ ಕಲಿಸಿಕೊಡಿ..

ಇನ್ನು ನಮ್ಮ ಶ್ರೇಷ್ಠ, ಅವನಿಗೂ ಒಂದು ಹೊಸ ಕನ್ನಡ ಪದ್ಯ ಕಲಿಸಿ ಕೊಡುವುದಕ್ಕೆ ನನಗೆ ದುಂಬಾಲು ಬಿದ್ದಿದಾನೆ. ಆಗಲೆ, ’ನಾಯಿ ಮರಿ ನಾಯಿ ಮರ”, ’ಒಂದು ಎರಡು ಬಾಳೆಲೆ ಹರಡ”, ಇನ್ನೂ ಕೆಲವು ಪದ್ಯಗಳನ್ನು ಆಗಲೇ ಕೆಲವು ಮಕ್ಕಳು ಹೇಳಿ ಆಗಿದೆಯಂತೆ. ಬಣ್ಣದ ತಗಡಿನ ತುತ್ತೂರಿ, ಹುಲಿ ಬೇಟೆ ಇವು ಯಾವುವೂ ಬೇಡವಂತೆ. ಏಕೆಂದರೆ ಅವನ ಷರತ್ತು, ಪದ್ಯ ಚಿಕ್ಕದಾಗಿರಬೇಕಂತೆ.

ಕೊನೆಗೆ ಜಿ ಪಿ ರಾಜರತ್ನಂ ರವರದ್ದೇ ಆದ,

ಝಣ! ಝಣ! ಝಣ!
ಜೇಬು ತುಂಬ ಹಣ!
ಮೇಲಕೆತ್ತಿ
ಬಿಡಲು ಸದ್ದು
ಠಣ್ ! ಠಣ! ಠಣ!

ನದಿಯಲೊಂದು ಬಕ
ಮುದುರಿಕೊಂಡು ಮೊಕ
ಕಾಲನೆತ್ತಿ
ಕುಣಿಯುತಿತ್ತು
ತಕಾ! ತಕ್ಕ! ತಕ!

ಸುತ್ತ ಹಸುರು ವನ!
ನಡುವೆ ಮೇವ ದನ!
ಮರದ ಬಳಿ!
ಗೊಲ್ಲನುಲಿ!
ತಾನ ! ನಾನ! ನನ!

ಪದ್ಯವನ್ನು ಹೇಳಿಕೊಡಲು ಪ್ರಯತ್ನಿಸುತ್ತಿದ್ದೇನೆ.

ನಿಮ್ಮ ಬಳಿ ಯಾವುದಾದರೂ ಇನ್ನೂ ಸರಳವಾದ, ಸಣ್ಣದಾದ, ಹೆಚ್ಚು ಆಸಕ್ತಿ ಮೂಡಿಸುವ ಪದ್ಯ ಇದ್ರೆ ಹೇಳ್ರೀ!

2 ಕಾಮೆಂಟ್‌ಗಳು:

  1. ಗುರುಪ್ರಸಾದ್,

    ಪೆನ್ಸಿಲ್ ಪದ್ಯ, ಮತ್ತು ರಾಜರತ್ನಂ ಪದ್ಯಗಳು ತುಂಬಾ ಚೆನ್ನಾಗಿವೆ...ಮಗುವಿನಂತೆ ಹಾಡಿದರೇ ಬಲು ಮಜಾ ಬರುತ್ತೇ...ಖುಷಿಯಾಯ್ತು..

    ಪ್ರತ್ಯುತ್ತರಅಳಿಸಿ
  2. ಶಿವುರವರೆ,

    ಮೆಚ್ಚು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ