ಬುಧವಾರ, ಮಾರ್ಚ್ 04, 2009

ಗುಲಾಬಿ ಟಾಕೀಸ್

ಮೊದಲ ಬಾರಿ ಕೇಳಿದಾಗ ಈ ಚಿತ್ರದ ಹೆಸರು ನನಗೆ ಅಷ್ಟು ಹಿಡಿಸಿರಲಿಲ್ಲ. ಯಾವುದೋ ತೊಂದರೆಯಿಂದ ಪಿ ವಿ ಆರ್ ಚಿತ್ರಮಂದಿರದಲ್ಲಿ ಈ ಚಲನ ಚಿತ್ರ ಬಿಡುಗಡೆಯಾದಗ ನೋಡುವ ಸೌಭಾಗ್ಯ ಸಿಕ್ಕಿರಲಿಲ್ಲ. ಹೋದ ಭಾನುವಾರ ಅವಿರತ ತಂಡದವರು ಮಲ್ಲೇಶ್ವರಂ ೧೮ ನೇ ತಿರುವಿನಲ್ಲಿರುವ ಶ್ರೀಗಂಧ ಎಂಬ ಸಣ್ಣ ಚಿತ್ರಮಂದಿರದಲ್ಲಿ ಈ ಚಲನ ಚಿತ್ರ ಪ್ರದರ್ಶನ ಮತ್ತು ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರ ಜೊತೆ ಸಂವಾದವನ್ನು ಏರ್ಪಡಿಸಿದ್ದರು. ಗೆಳೆಯ ರವೀಶನ ಸಹಾಯದಿಂದ ನನಗೆ ಆ ಚಲನಚಿತ್ರ ನೋಡುವ ಅವಕಾಶ ದೊರೆಯಿತು.

ಕುಂದಾಪುರದ ಸನಿಹ ಕೆಲವೊಂದದು ದ್ವೀಪಗಳಲ್ಲಿ ಚಿತ್ರೀಕರಿಸಿರುವ ಈ ಚಲನಚಿತ್ರ, ದಕ್ಷಿಣ ಕನ್ನಡದ ಮೀನು ಮಾರುಕಟ್ಟೆಯಲ್ಲಿ ಚಿತ್ರದ ನಾಯಕಿ ಉಮಾಶ್ರೀ ಮೀನು ಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ಕುಂದಾಪುರದ ಆಡು ಮಾತಿನ ಸಂಭಾಷಣೆಯ ಸೊಡಗಿನಿಂದ ಕೂಡಿ, ದಕ್ಷಿಣ ಕನ್ನಡದ ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಕೋನದಲ್ಲಿ ಚಿತ್ರ ಮುಂದುವರೆಯುತ್ತಾ ಹೋಗುತ್ತದೆ. ಹಲವು ಕೋಮುಗಳಿಗೆ ಸೂಕ್ಷ್ಮವೆನಿಸಬಲ್ಲ ಸಂಗತಿಯನ್ನು ಕಾಸರವಳ್ಳಿಯವರು, ಯಾರಿಗೂ ನೋವಾಗದಂತೆ, ಪ್ರೇಕ್ಷಕರಿಗೆ ಕೊಡಬೇಕಾದ ಸಂದೇಶವನ್ನು ಪರಿಣಾಮಕಾರಿಯಾಗಿ ಕೊಟ್ಟಿದ್ದಾರೆ. ಇಷ್ಟು ಚಲನಚಿತ್ರದ ಸಂಕ್ಷಿಪ್ತ ವಿವರ.

ಗುಲಾಬಿ ಊರಿನಲ್ಲಿ ಅಲ್ಪಸಂಖ್ಯಾತ ಕೋಮಿಗೆ ಸೇರಿದವಳು. ಹೆರಿಗೆ ಮಾಡುವುದರಲ್ಲಿ ನುರಿತ ಕೈ. ಗಂಡ ’ಮೂಸ ಕಾಕ’ ಇನ್ನೊಬ್ಬಳ ಜೊತೆ ವಾಸಿಸುತ್ತಿರುತ್ತಾನೆ. ಸಂಜೆ ೬ ಘಂಟೆಯಾದ ನಂತರ ಗುಲಾಬಿಗೆ ಪೇಟೆಯಲ್ಲಿ ಚಲನ ಚಿತ್ರ ನೋಡುವ ಹುಚ್ಚು. ಹೀಗೊಮ್ಮೆ ಗುಲಾಬಿ ಸಿನಿಮಾ ನೋಡುತ್ತಿರುವಾಗ, ಊರಿನ ಒಬ್ಬ ಸಾಹುಕಾರ ಹೆಂಗಸಿನ ಮಗಳಗಿ ಹೆರಿಗೆ ಬೇನೆಯುಂಟಾಗುತ್ತದೆ. ಗುಲಾಬಿ ತಾನು ಸಿನೆಮಾ ನೋಡುವಾಗ ಹೆರಿಗೆ ಮಾಡುವುದಿಲ್ಲವೆಂದು ನಿರಾಕರಿಸುತ್ತಾಳೆ.ಗುಲಾಬಿಯನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ, ಬಣ್ಣದ ಟಿ ವಿ ಕೊಡಿಸುವ ಆಮಿಷವೊಡ್ಡಿ ಹೆರಿಗೆಯನ್ನು ಮಾಡಿಸುತ್ತಾರೆ.ಅಂದಿನಿಂದ ಗುಲಾಬಿಗೆ ಮನೆಯಲ್ಲೇ ಚಲನಚಿತ್ರಗಳನ್ನು ನೋಡುವ ಖುಷಿ! ಆ ದ್ವೀಪದ ಜನರಿಗೆಲ್ಲಾ ಮೊದಲಿಗೆ ಗುಲಾಬಿ ಮನೆಯಲ್ಲಿ ಟಿ ವಿ ನೋಡಲು ಮುಜುಗರವಾದರೂ, ಕ್ರಮೇಣ ಮನೆಯೊಳಗೆ ಹೊಕ್ಕು ಟಿ ವಿ ನೋಡಲು ಪ್ರಾರಂಭಿಸುತ್ತಾರೆ.ಹೀಗೆ ಗುಲಾಬಿ ತನ್ನೂರಿನ ಜನರ ಜೊತೆ ಒಬ್ಬಳಾಗಿ ಸಹಬಾಳ್ವೆಯನ್ನು ನಡೆಸುತ್ತಿರುತ್ತಾಳೆ.

ಪರ ಊರಿನ ಸುಲೈಮಾನ್ ಸಾಹುಕಾರ, ದುಬೈನಿಂದ ಹರಿದು ಬರುವ ಹಣದಿಂದ, ಯಾಂತ್ರೀಕೃತ ಮೀನುಗಾರಿಕೆಯನ್ನು ನಡೆಸುತ್ತಿರುತ್ತಾನೆ. ಮೂಸಾ ಕಾಕ ಸುಲೈಮಾನ್ ಸಾಹುಕಾರನ ಭಂಟ. ಇದರಿಂದ ಮೀನುಗಾರಿಕೆಯನ್ನೇ ನಂಬಿದ ನೆರೆ ಹೊರೆಯ ಸ್ಥಳೀಯ ಜನರಿಗೆ ತೊಂದರೆ, ಅವರ ಹತ್ತಿರ ಸಾಹುಕಾರನಲ್ಲಿರುವ ಯಂತ್ರಗಳಿಲ್ಲ. ಇದರಿಂದ ಸ್ಥಳೀಯರಿಗೂ, ಸುಲೈಮಾನ್ ಕಡೆಯವರಿಗೂ ಸಣ್ಣ ಸಣ್ಣ ತಿಕ್ಕಾಟಗಳು ನಡೆಯುತ್ತಲೇ ಇರುತ್ತವೆ.

ಹೀಗಿರುವಾಗ, ಗುಲಾಬಿಯ ಮನೆಯಲ್ಲಿ ಧಾರಾವಾಹಿಯ ಪ್ರಭಾವಕ್ಕೊಳಗಾಗಿ ಊರಿನ ಸ್ಥಳೀಯ ಕೋಮಿನ ಯುವತಿಯೊಬ್ಬಳು ಕನಸುಗಳನ್ನು ಕಟ್ಟಿ ಊರಿನಿಂದ ಪರಾರಿಯಾಯಾಗುತ್ತಾಳೆ. ಅದೇ ಸಮಯದಲ್ಲಿ ಮೂಸ ಕಾಕ ಕೂಡ ಕಾಣೆಯಾಗುತ್ತಾನೆ. ಮುಂದೆ ಏನಾಗುತ್ತದೆ, ಚಲನ ಚಿತ್ರ ನೋಡಿ ಸವಿದರೇ ಚಂದ.

ಹೀಗೆ ಧಾರವಾಹಿಗಳು, ಕಾರ್ಗಿಲ್ ಯುದ್ಧದ ಸುದ್ದಿಗಳು ಜನರನ್ನು ಹೇಗೆ ಪ್ರಭಾವಿಸುತ್ತವೆ? ಜನ ತಮಗೆ ಸಂಬಂಧವಿಲ್ಲದ ತೊಂದರೆಗಳಲ್ಲಿ ಹೇಗೆ ಸಿಕ್ಕಿಕೊಳ್ಳುತ್ತಾರೆ. ಇಂತಹ ಪ್ರಭಾವಗಳಿಂದ ಜನರಲ್ಲಿ ಮತ್ತೊಬ್ಬರ ಮೇಲೆ ಹೇಗೆ ಸಂಶಯ ಹುಟ್ಟುತ್ತದೆ? ಇಂತಹ ಸಂಧರ್ಭಗಳನ್ನು ಕೆಲವರು ತಮ್ಮ ಹಿತಾಸಕ್ತಿಗೆ ಹೇಗೆ ಬಳಸಿಕೊಳ್ಳುತ್ತಾರೆ? ಇವುಗಳನ್ನೆಲ್ಲಾ ಕಾಸರವಳ್ಳಿಯವರು ಅಚ್ಚುಕಟ್ಟಾಗಿ, ಮನಸ್ಸಿಗೆ ಹತ್ತಿರವಾಗಿ ತೋರಿಸಿದ್ದಾರೆ.

ವೈದೇಹಿಯವರ ಒಂದು ಕಥೆಯಿಂದ ಪ್ರಭಾವಿತಗೊಂಡು, ಕಾಸರವಳ್ಳಿಯವರು ಚಿತ್ರಕ್ಕೆ ಕಥೆಯನ್ನು ಚಲನಚಿತ್ರಕ್ಕೆ ಮಾರ್ಪಡಿಸಿದ್ದಾರೆ. ಒಬ್ಬಬ್ಬರೂ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದೆ. ಎಲ್ಲರೂ ಅನುಭವಿಸಿ ಅಭಿನಯಿಸಿದ್ದಾರೆ. ಉಮಾಶ್ರೀಯವರದಂತೂ ಜೀವನ ಶ್ರೇಷ್ಠ ಅಭಿನಯ ಎನ್ನಬಹುದು.

ಸಂಭಾಷಣೆ ಅದ್ಭುತ, ಚಿತ್ರೀಕರಣಕ್ಕೆ ಆಯ್ದುಕೊಂದ ಪ್ರದೇಶ ಚಿತ್ರಕ್ಕೆ ಬಹಳ ಪೂರಕವಾದದ್ದು. ಛಾಯಾಗ್ರಹಣ ಕೂಡ ಚೊಕ್ಕಟವಾಗಿದೆ. ಸಂವಾದದಲ್ಲಿ ಇವನ್ನೆಲ್ಲ ಹೊಗಳಿಕೆಯಂತೆ ಗಿರೀಶ್ ಕಾಸರವಳ್ಳಿಯವರಿಗೆ ಹೇಳಿದರೆ, ಅವರು ನಿರಾಕರಿಸುತ್ತಾರೆ. ಅವರ ಪ್ರಕಾರ ಈ ಅಂಶಗಳು (ಉತ್ತಮ ಸಂಭಾಷಣೆ, ಚಿತ್ರೀಕರಣ ಪ್ರದೇಶದ ಆಯ್ಕೆ ಇತ್ಯಾದಿ) ಯಾವುದೇ ಚಲನ ಚಿತ್ರದ ಮೂಲ ಅವಶ್ಯಕತೆಗಳು. ಇವೆಲ್ಲಾ ವಿಶೇಷವಾಗಿ ಹೊಗಳಿಸಿಕೊಳ್ಳುವ ಅಂಶಗಳಲ್ಲವೆನ್ನುತ್ತಾರೆ. ಚಿತ್ರದ ನಿರೂಪಣೆ, ಸಂಕಲನ, ಹಿನ್ನಲೆಯಲ್ಲಿ ಬರುವ ಸಂಗೀತ ಎಲ್ಲವೂ ಚಂದ. ಚಲನಚಿತ್ರದ ಹೆಸರೂ ಕೂಡ ಸುಂದರವಾಗಿದೆ.ಚಿತ್ರದ ಎಲ್ಲಾ ವಿಭಾಗಗಳಲ್ಲೂ ಅತ್ಯಂತ ಆಸಕ್ತಿಯಿಂದ ಮಾಡಿದ ಚಿತ್ರವಿದು.

ಗಿರೀಶ್ ಕಾಸರವಳ್ಳಿಯವರೇ ಹೇಳಿದಂತೆ, ಅಷ್ಟು ಸೌಂದರ್ಯಭರಿತ ಪ್ರದೇಶದಲ್ಲಿ ಚಿತ್ರೀಕರಿಸಿದರೂ, ಆ ಸೌಂದರ್ಯವನ್ನು ಆದೊಷ್ಟು ಮರೆ ಮಾಚಲು ಪ್ರಯತ್ನಿಸಿದ್ದಾರಂತೆ, ಕಾರಣ ತಾವು ಹೇಳಬೇಕಾದ ಸಂದೇಶಕ್ಕೆ ಆ ಸೌಂದರ್ಯ ಅಡ್ಡಿ ಬರಬಾರದೆಂದು. ಚಿತ್ರದ ಸಂದೇಶ ಮುಖ್ಯವಾಗಬೇಕು, ಸೂರ್ಯಾಸ್ತ ಅಥವಾ ಸೂರ್ಯೋದಯದಲ್ಲಿ ಪ್ರೇಕ್ಷಕ ಗಮನ ಬದಲಾಗಬಾರದಂತೆ.

ಕೊನೆಯದಾಗಿ, ಇದು ಬಹಳ ಅತ್ಯುತ್ತಮ ಚಿತ್ರ. ೫ ಕ್ಕೆ ೫ ಅಂಕ ಕೊಟ್ಟೆ ನಾನು. ಅವಕಾಶ ಸಿಕ್ಕರೆ ತಪ್ಪದೆ ನೋಡಿ. ನಿಮ್ಮ ಅಭಿಪ್ರಾಯವನ್ನು ನಿಷ್ಠುರವಾಗಿ ತಿಳಿಸಿ. ಅವಕಾಶ ಸಿಕ್ಕರೆ ನಾನು ಮತ್ತೊಮ್ಮೆ ನೋಡುತ್ತೇನೆ.

9 ಕಾಮೆಂಟ್‌ಗಳು:

  1. ಗುರು ಅವರೆ ನೀವು ಬರೆದಿರುವುದನ್ನು ನೋಡಿದ ಮೇಲೆ ಗುಲಾಬಿ ಟಾಕೀಸ್ ನೋಡಲು ಕಾತರನಾಗಿದ್ದೇನೆ. ಖಂಡಿತ ನೋಡುವೆ.
    ಈ ರೀತಿ ಒಳ್ಳೊಳ್ಳೆಯ ಸಂಗತಿಗಳನ್ನು ಹಂಚಿಕೊಳ್ಳುವುದು ಎಷೊಂದು ಚಂದ ಅಲ್ಲವೇ? ಥ್ಯಾಂಕ್ಸ್.

    ಪ್ರತ್ಯುತ್ತರಅಳಿಸಿ
  2. ಮಲ್ಲಿಕಾರ್ಜುನ ರವರೆ, ಧನ್ಯವಾದಗಳು. ಹೌದು, ಚಲನಚಿತ್ರ ವೀಕ್ಷಿಸಿ, ನಿಮಗೂ ಬಹುತೇಕ ಇಷ್ಟವಾಗಬಹುದು!

    ಪ್ರತ್ಯುತ್ತರಅಳಿಸಿ
  3. ಫಿಲ್ಮಿನ ಹೆಸ್ರು ಕೇಳಿದ್ದೆ, ಪರಿಚಯಮಾಡಿಕೊಟ್ಟಿದ್ದಕ್ಕೆ ತುಂಬಾ ವಂದನೆಗಳು... ಅದೂ ನಮ್ಮ ಊರಿನ ಭಾಷೆಯಲ್ಲಿನ ಚಿತ್ರ!! ಖಂಡಿತಾ ನೋಡ್ಬೇಕು.. ಸಿ.ಡಿ. ಏನೂ ಬಿಡೋಲ್ವಂತ?

    ಪ್ರತ್ಯುತ್ತರಅಳಿಸಿ
  4. ಫಾಲ ರವರೆ,

    ಚಲನಚಿತ್ರ ನೋಡಿ, ಆಗಾಗ, ಅಲ್ಲಲ್ಲಿ ಪ್ರದರ್ಶನ ನಡೆಯುತ್ತಿರುತ್ತೆ. ಸಂವಾದದಲ್ಲಿ ಯಾರೋ ನೀವು ಕೇಳಿದ ಪ್ರಶ್ನೆಯನ್ನೇ ಕಾಸರವಳ್ಳಿಯವರಿಗೆ ಕೇಳಿದರು, C D ಬಗ್ಗೆ. ಅವರು ೩೦ ವರ್ಷಗಳ ಹಿಂದೆ ಮಾಡಿದ ಚಿತ್ರವೇ ಇನ್ನೂ C D ಆಗಿಲ್ಲವಂತೆ. ಎಲ್ಲಾ ನಿರ್ಮಾಪಕರಿಗೆ ಬಿಟ್ಟ ವಿಷಯ ಎಂದರು. ಸದ್ಯದಲ್ಲಿ ಆಗುವುದಿಲ್ಲ ಬಹುಷಃ.

    ನಾನು ಕೆಲವು ವಿಶಿಷ್ಟ ಪದಗಳನ್ನು ಗಮನಿಸಿದೆ. (ಕುಂದಾಪುರದ ಭಾಷೆಯೇ ಇರಬೇಕು!). ದ್ವೀಪವನ್ನು ’ಕುದುರು’ ಎನ್ನುವುದು. ಸೀಗಡಿಯನ್ನು (prawn) ಚಕ್ಕಲಿ ಮೀನು ಎನ್ನುವುದು!

    ಪ್ರತ್ಯುತ್ತರಅಳಿಸಿ
  5. ಗುರು,

    >>ಅವರು ೩೦ ವರ್ಷಗಳ ಹಿಂದೆ ಮಾಡಿದ ಚಿತ್ರವೇ ಇನ್ನೂ C D ಆಗಿಲ್ಲವಂತೆ
    :)
    ಕುದುರು ಅಂದ್ರೆ ಪರ್ಯಾಯ ದ್ವೀಪ, ಒಂದು ಕಡೆ ನೆಲ, ಉಳಿದ ಮೂರು ಕಡೆ ನೀರು.. ಉದಾ: ಉಪ್ಪಿನ ಕುದ್ರು, ಹೇರಿ ಕುದ್ರು..

    --
    ಪಾಲ

    ಪ್ರತ್ಯುತ್ತರಅಳಿಸಿ
  6. ಫಾಲ ರವರೆ,
    ಕುದುರು ಎಂದರೆ ದ್ವೀಪವೆಂದು ತಪ್ಪಾಗಿ ತಿಳಿದಿದ್ದೆ. ತಿಳಿಸಿದ್ದಕ್ಕೆ ಧನ್ಯವಾದಗಳು. ಭಾರತವೂ ಒಂದು ಕುದ್ರು. :)

    ಪ್ರತ್ಯುತ್ತರಅಳಿಸಿ
  7. "ಅವಕಾಶ ಸಿಕ್ಕರೆ ನಾನು ಮತ್ತೊಮ್ಮೆ ನೋಡುತ್ತೇನೆ" ಇದೊ೦ದೇ ಸಾಲು ಚಿತ್ರದ ಬಗೆಗಿನ ನಿನ್ನ ಒಟ್ಟು ಅಭಿಪ್ರಾಯವನ್ನು ತಿಳಿಸುತ್ತದೆ!

    ಪ್ರತ್ಯುತ್ತರಅಳಿಸಿ
  8. ರವೀಶ,
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  9. ಸಾಹಿತ್ಯ ಸಿನಿಮಾಗಳ ವಿಮರ್ಶೆ ಹೀಗೆ ಮುಂದುವರಿಯಲಿ.ಧನ್ಯವಾದಗಳು

    ಪ್ರತ್ಯುತ್ತರಅಳಿಸಿ